ಕಠೋರತೆಯನ್ನು ಕುಗ್ಗಿಸುವ ಪಯಣ ರಾಮಾ ರಾಮಾ ರೇ

ನೇಣಿಗೆ ಬಳಸುವ ಹಗ್ಗವನ್ನು ಮಗು ಮಲಗಿಸುವುದಕ್ಕೆ ಕಟ್ಟುವ ಜೋಲಿಗೆ ಬಳಸುವ ದೃಶ್ಯಕ್ಕೆ ವಿಭಿನ್ನ ಮಾನವೀಯ ಕಥೆಯೊಂದನ್ನು ಹೇಳುವ ಶಕ್ತಿಯಿದೆ.
ರಾಮಾ ರಾಮಾ ರೇ ಸಿನೆಮಾ ವಿಮರ್ಶೆ
ರಾಮಾ ರಾಮಾ ರೇ ಸಿನೆಮಾ ವಿಮರ್ಶೆ
ತಾಜಾ ಪ್ರತಿಭೆ, ಗಮನ ಸೆಳೆದ 'ಜಯನಗರ 4th ಬ್ಲಾಕ್' ಕಿರುಚಿತ್ರದ ನಿರ್ದೇಶಕ, ಆಪ್ತವಾದ ಟ್ರೇಲರ್, ಅದರಲ್ಲಿ ಅತಿ ಹೆಚ್ಚು ಗಮನ ಸೆಳೆದು ಚರ್ಚಿತವಾದ ಹಿನ್ನಲೆ ಸಂಗೀತ ಮತ್ತು ಹಾಡುಗಳು ಹೀಗೆ ಹಲವು ಕುತೂಹಲಭರಿತ ನಿರೀಕ್ಷೆಗಳನ್ನು ಹುಟ್ಟಿಸಿದ್ದ 'ರಾಮ ರಾಮ ರೇ' ಟ್ರೇಲರ್ ಇದೊಂದು 'ರೋಡ್ ಮೂವಿ' ಎಂಬ ಸುಳಿವು ಕೂಡ ಬಿಟ್ಟುಕೊಟ್ಟಿತ್ತು. ಈ ರೋಡ್ ಮೂವಿಯ ಘಟನೆಗಳಿಗೆ ಪ್ರೇಕ್ಷಕನನ್ನು ಆವರಿಸಿಕೊಳ್ಳುವ ಶಕ್ತಿ ಇದೆಯೇ? 
ಪೊಲೀಸರನ್ನು ಕೊಂದಿರುವುದಕ್ಕೆ ಗಲ್ಲುಶಿಕ್ಷೆಗೆ ಒಳಗಾಗಿರುವ ಸ್ಯಾಂಡಲ್ ರಾಜ (ನಟರಾಜ್) ರಾತ್ರೋರಾತ್ರಿ ಜೈಲಿನಿಂದ ಪರಾರಿಯಾಗುತ್ತಾನೆ. ಅವನ ಸುಳಿವು ನೀಡಿ, ಪತ್ತೆ ಹಚ್ಚಿಕೊಟ್ಟವರಿಗೆ 10 ಲಕ್ಷ ಬಹುಮಾನ ಘೋಷಣೆಯಾಗಿ ಪತ್ರಿಕೆಗಳಲ್ಲಿ ಜಗಜ್ಜಾಹೀರಾಗುತ್ತದೆ. ನಿವೃತ್ತಗೊಂಡಿರುವ ಗಲ್ಲು ನಿರ್ವಾಹಕ ರಾಮಣ್ಣ (ಕೆ ಜಯರಾಮ್) ಕಿರಿಯ ಸಿಬ್ಬಂದಿಗಳಿಗೆ ತಪ್ಪಿತಸ್ಥರನ್ನು ನೇಣುಗಂಬಕ್ಕೇರಿಸುವ ವೃತ್ತಿಯ ತರಬೇತಿ ನೀಡಲು, ತನ್ನ ಹಳೆಯ ಜೀಪಿನ ಧೂಳು ಕೊಡವಿ ಖಾರಾಗೃಹದತ್ತ ತೆರಳಲು ಹೊರಟಾಗ ಮಾರ್ಗಮಧ್ಯದಲ್ಲಿ ಆಕಸ್ಮಿಕವಾಗಿ ಸ್ಯಾಂಡಲ್ ರಾಜ ಕೂಡ ಇವರ ಜೊತೆಯಾಗುತ್ತಾನೆ. ಇತ್ತ ಗ್ರಾಮವೊಂದರಿಂದ ಓಡಿಬಂದ ಅಂತರ್ಜಾತೀಯ ಜೋಡಿ ಧರ್ಮ(ಧರ್ಮಣ್ಣ ಕಡೂರ್) ಮತ್ತು ಸುಬ್ಬಿ (ಬಿಂಬಶ್ರೀ ನೀನಾಸಂ) ಕೂಡ ಅದೇ ವಾಹನದಲ್ಲಿ ಸೇರಿಕೊಳ್ಳುತ್ತಾರೆ. ರಾಜಣ್ಣ ಯಾವುದನ್ನೋ ಒರೆಸಿ ಬಿಸಾಕಿದ್ದ ಪತ್ರಿಕೆಯ ಚೂರಿನಲ್ಲಿ ಸ್ಯಾಂಡಲ್ ರಾಜನ ಫೋಟೋ ನೋಡಿ ಅವನ ಸಂಗತಿ ತಿಳಿದರೆ, ಇತ್ತ ತಾಳಿ ಮಡಿಚಿಟ್ಟಿಕೊಂಡಿದ್ದ ಪೇಪರ್ ಮೂಲಕ ಧರ್ಮನಿಗೂ ಸ್ಯಾಂಡಲ್ ರಾಜನ ವಿಷಯ ತಿಳಿಯುತ್ತದೆ. ಈ ಪಯಣದಲ್ಲಿ ಇವರ ಒಡನಾಟ, ಕಾದಾಟ, ದುರಾಸೆ, ಕರ್ತವ್ಯ, ಮಾನವೀಯತೆ ಇವುಗಳ ಅನಾವರಣ ಹೇಗಾಗುತ್ತದೆ ಎಂಬುದೇ ಕಥೆ!
ಇಂತಹ ಒಂದು ಸರ್ರಿಯಲಿಸ್ಟಿಕ್ ಕಥಾ ಹಂದರವನ್ನು ರಚಿಸಿರುವ ನಿರ್ದೇಶಕ ಅದನ್ನು ರಸ್ತೆ ಪ್ರಯಾಣದ ಮೂಲಕ ಹೇಳುವ ನಿರೂಪಣೆ, ಚಿತ್ರ ಮುಂದುವರಿದಂತೆ ಹಲವು ಘಟನೆಗಳ ಮೂಲಕ ಕುತೂಹಲಭರಿತವೂ, ಹೆಚ್ಚೆಚ್ಚು ಆಪ್ತವೂ ಆಗುತ್ತದೆ. ಸಿನೆಮಾದ ಆರಂಭಕ್ಕೆ ಪಾತ್ರಗಳ ನಡುವೆ ಯಾವುದೇ ಸಂಘರ್ಷಗಳು ಕಾಣದೆ ಅವು ಪ್ರಯಾಣದ ಜೊತೆಗೆ ಅನಾವರಣಗೊಳ್ಳುವ ರೀತಿ ಪರಿಣಾಮಕಾರಿಯಾಗಿ ಮತ್ತು ವಿಭಿನ್ನವಾಗಿ ಚಿತ್ರಿತವಾಗಿದೆ. ಯಾವುದೇ ಹಣದ ಆಸೆಯಿಲ್ಲದೆ, ತಪ್ಪಿಸಿಕೊಂಡವನನ್ನು ಹಿಡಿದು ಕೊಡುವ ಕರ್ತವ್ಯವೂ ತನ್ನದಾಗಿಲ್ಲದೆ ಹೋದರು, ನಿವೃತ್ತ ಗಲ್ಲು ಶಿಕ್ಷೆಯ ನಿರ್ವಾಹಕನಾಗಿ, ಸ್ಯಾಂಡಲ್ ರಾಜನನ್ನು ಪೊಲೀಸರಿಗೆ ಒಪ್ಪಿಸುವತ್ತ ರಾಜಣ್ಣ ಚಿತ್ತ ಹರಿಸಿದರೆ, ಪ್ರಿಯತಮೆಯ ಜೊತೆ ಓಡಿ ಬಂದಿರುವ ಧರ್ಮನಿಗೆ ತಾನು ಮಾಡಬೇಕಾದ ಕರ್ತವ್ಯ ಮರೆತುಹೋಗಿ, ಹಣದ ಆಸೆಗಾಗಿ ಸ್ಯಾಂಡಲ್ ರಾಜನನ್ನು ಹಿಡಿದೊಪ್ಪಿಸಲು ಅವನ ಜೊತೆಗೆ ಕಾದಾಟಕ್ಕೆ ಇಳಿಯುತ್ತಾನೆ. ಇದಕ್ಕೆ ಸುಬ್ಬಿ ವ್ಯಕ್ತಪಡಿಸುವ ವಿರೋಧ, ಈ ಜೋಡಿಯನ್ನು ಬೇರ್ಪಡಿಸಲು ಹುಡುಕಿ ಬರುವ ಹಲವು ಪಡೆಗಳು, ಅವರಿಂದ ತಪ್ಪಿಸಿಕೊಳ್ಳಲು ನಡೆಸುವ ಪ್ರಯತ್ನಗಳು ಹೀಗೆ ಹಲವು ಘಟನೆಗಳಿಂದ ಸಿನೆಮಾ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುತ್ತದೆ. 
ಈ ನಡುವೆ ಇಡೀ ಚಿತ್ರಕ್ಕೆ, ಎಲ್ಲ ಪಾತ್ರಗಳ ಮನಸ್ಥಿತಿಗೆ ಗಂಭೀರ ತಿರುವು ನೀಡುವಂತಹ ಘಟನೆ ನಡೆಯುತ್ತದೆ. ಹೆರಿಗೆ ಬೇನೆಯಿಂದ ನರಳುತ್ತಿರುವ ಮಹಿಳೆಯೊಬ್ಬಳು ತೆರಳುತ್ತಿರುವ ಆಟೋ ಕೆಟ್ಟು ನಿಲ್ಲುತ್ತದೆ. ಅನಿವಾರ್ಯವಾಗಿ ಸ್ಯಾಂಡಲ್ ರಾಜ ಮತ್ತು ರಾಜಣ್ಣ ಆ ಮಹಿಳೆಯನ್ನು ಜೀಪಿಗೆ ಸಾಗಿಸಿದಾಗ, ಆ ಮಹಿಳೆ ಅಲ್ಲಿಯೇ ಮಗುವಿಗೆ ಜನ್ಮ ನೀಡುತ್ತಾಳೆ. ಮಹಿಳೆಯ ಜೊತೆಗಿದ್ದ ಅವಳ ಅತ್ತೆ (ರಾಧಾ ರಾಮಚಂದ್ರ), ಇವರನ್ನೆಲ್ಲಾ ಒಂದು ರಾತ್ರಿ ಮನೆಯಲ್ಲಿಟ್ಟುಕೊಂಡು ಸತ್ಕರಿಸಿ, ಇವರ ಉಪಕಾರವನ್ನು ಸ್ಮರಿಸುತ್ತಾಳೆ. ತದನಂತರ ಪಾತ್ರಗಳಲ್ಲಿ ಯಾವ ರೀತಿಯ ಬದಲಾವಣೆಗಳಾಗುತ್ತವೆ ಎಂಬುದು ಸಿನೆಮಾದ ಅಂತ್ಯ!
ಈ ಪ್ರಯಾಣ ಮಾನವ ಸಂಬಂಧ ಮತ್ತು ಪ್ರೀತಿಯ ಬಗೆಗೆ ಪ್ರತಿ ಪಾತ್ರಗಳ ಅಂತಃಕರಣವನ್ನು ಕಲಕುತ್ತದೆ. ಕಠೋರತೆಯನ್ನು ತುಸುವಾದರೂ ಕುಗ್ಗಿಸುತ್ತದೆ. ಆತ್ಮ ಪರಿವರ್ತನೆಗೂ ಕಾರಣವಾಗುತ್ತದೆ.  ಇದನ್ನೆಲ್ಲಾ ಪ್ರೇಕ್ಷನಿಗೆ ಖಚಿತವಾಗಿ ಮತ್ತು ಸರಳವಾಗಿ ದಾಟಿಸುವುದು ನಿರ್ದೇಶಕನ ಮತ್ತು ಸಿನೆಮಾದ ಹೆಚ್ಚುಗಾರಿಕೆ. ಒಂದು ಪರಿಣಾಮಕಾರಿ ರೋಡ್ ಸಿನೆಮಾದ ಮುಖ್ಯ ಗುರಿ ತಾನು ಚಿತ್ರಿಸುವ ಪ್ರಯಾಣದ ಮೂಲಕ ಪಾತ್ರಗಳ ಸ್ವ ಅರಿವನ್ನು ಚಿತ್ರಿಸುವುದಲ್ಲವೇ?
ಬಹುತೇಕ ಹೊಸಬರ ತಂಡ ಕಟ್ಟಿಕೊಂಡು ತಾಂತ್ರಿಕವಾಗಿಯೂ ಸಿನೆಮಾವನ್ನು ಉತ್ತಮವಾಗಿ ಕಟ್ಟಿಕೊಟ್ಟಿರುವುದು ಈ ಸಿನೆಮಾದ ಹೆಗ್ಗಳಿಕೆ. ಚಿತ್ರೀಕರಣಕ್ಕಾಗಿ ಆಯ್ಕೆ ಮಾಡಿರುವ ಆ ಹೊರಾಂಗಣ ಪ್ರದೇಶಕ್ಕೇ ಪ್ರೇಕ್ಷಕನನ್ನು ಹಿಡಿದಿಡುವ ಶಕ್ತಿ ಇದೆ. ಲವಿತ್ ಅವರ ಛಾಯಾಗ್ರಹಣದಲ್ಲಿ ಮೂಡಿರುವ ಲಾಂಗ್ ಮತ್ತು ವೈಡ್ ಶಾಟ್ ಗಳು ಮತ್ತು ಆ ಪರಿಸರ ಮಾನವ ಸಂಬಂಧಗಳ ಜರ್ಜರಿತತೆಯನ್ನು ಮತ್ತು ಅನನ್ಯತೆಯನ್ನು ವಿವಿಧ ಘಟ್ಟಗಳಲ್ಲಿ ಗಟ್ಟಿಯಾಗಿ ಹಿಡಿದಿಡುತ್ತವೆ. ವಾಸುಕಿ ವೈಭವ್ ಅವರ ಸಂಗೀತ ಮತ್ತು ಮೂಡಿರುವ ಹಾಡುಗಳು ಸಂದರ್ಭೋಚಿತವಾಗಿದ್ದು, ಕಥೆಯ ಜೊತೆ ಮೇಳೈಸಿವೆ. ಕಲಾ ನಿರ್ದೇಶನ ಮತ್ತು ಸಂಕಲನ ಕೂಡ ಚಿತ್ರಕ್ಕೆ ಎಲ್ಲ ರೀತಿಯಲ್ಲಿ ಸಹಕರಿಸಿದೆ. ಧರ್ಮಣ್ಣ ಕಡೂರ್ ನಟನೆಯಲ್ಲಿ ಉಳಿದವರಿಗಿಂತಲೂ ಮಿಂಚಿದರು, ಕೃಶವಾದ ಖೈದಿಯ ಪಾತ್ರದಲ್ಲಿ ನಟರಾಜ್, ಗಲ್ಲಿಗೇರಿಸುವವನ ಪಾತ್ರದಲ್ಲಿ ಜಯರಾಮ್ ಅವರದ್ದು ಕೂಡ ಗಮನಾರ್ಹ ನಟನೆ. ಉಳಿದ ಪಾತ್ರವರ್ಗ ಕೂಡ ಅಚ್ಚುಕಟ್ಟಾಗಿ ನಟಿಸಿದೆ. 
ಈ ಪ್ರಯೋಗದಲ್ಲಿ ಸಣ್ಣಪುಟ್ಟ ತಪ್ಪುಗಳು ಸುಳಿದಿದ್ದರು, ಅವುಗಳನ್ನು ಕಡೆಗಣಿಸುವಂತೆ ಪ್ರೇಕ್ಷಕನನ್ನು ಪ್ರಚೋದಿಸುವ ಶಕ್ತಿ ಈ ಸಿನೆಮಾಗಿರುವುದು ವಿಶೇಷ. ಬಹುಷಃ ಆಕಸ್ಮಿಕಗಳ ಸರಮಾಲೆ ಪ್ರೇಕ್ಷಕನನ್ನು ಒಂಚೂರು ವಿಚಲಿತಗೊಳಿಸಿದರು, ನಿರ್ದೇಶಕ ಹೇಳಬೇಕೆನ್ನುವ ಈ ಸರ್ರಿಯಲ್ ಕಥೆಗೆ ಆ ಆಕಸ್ಮಿಕಗಳ ಅವಶ್ಯಕತೆ ಇದೆ ಎಂದು ಮನಗಾಣದೆ ಇರನು. ಪ್ರದೇಶ, ದಿಕ್ಕು ಮತ್ತು ಸಮಯದ ಅರಿವು ಪ್ರೇಕ್ಷಕನಲ್ಲಿ ಮೂಡಿಸದೆ ಇರುವುದು ಜೆನೆರಿಕ್ ಆಗಿ ಕಥೆ ಹೇಳಲು ಪೂರಕವಾಗಿದ್ದರು, ಏನೋ ದಕ್ಕುತ್ತಿಲ್ಲ ಎಂಬ ಖಾಲಿತನ ಪ್ರೇಕ್ಷಕನದ್ದು. ಕೆಲವು ಸನ್ನಿವೇಶಗಳಲ್ಲಿ ವಿಪರೀತ ವಾಚಾಳಿ ಎನ್ನಿಸಿ ಭಾವನೆಗಳನ್ನು ಮರೆಮಾಚುತ್ತವೆ. ಸಂಭಾಷಣೆಯಲ್ಲಿಯೂ ಇನ್ನು ಹೆಚ್ಚಿನ ಪ್ರೌಢತೆ ಒಳಗೊಳ್ಳಬಹುದಿತ್ತು. 'ಮಾಂಸ ತಿನ್ನುವ ಹುಲಿಗಿಂತ ಹುಲ್ಲು ತಿನ್ನುವ ಹಸು ಶ್ರೇಷ್ಠ' ಎಂಬಂತಹ ಅಜ್ಜಿಯ ಬೋಧನೆ ಮಾತುಗಳಿಗೆ ಕಡಿವಾಣ ಹಾಕಬಹುದಿತ್ತೇನೋ! ಆದರೆ ಅದೇ ಸಂದರ್ಭದಲ್ಲಿ ಮೂಡುವ ಸೈನಿಕನ ಪಾತ್ರ ಮನಸೂರೆಗೊಳ್ಳುತ್ತದೆ. ಸಾಮಾನ್ಯವಾಗಿ ಸೈನಿಕ ಕಠೋರ, ಯಾವಾಗಲೂ ಪೌರುಷವನ್ನು ತೋರಿಸುವುವನು ಎಂಬ ಮಾಮೂಲಿ ಕಟ್ಟುವಿಕೆಯನ್ನು ಮುರಿದಿರುವ ನಿರ್ದೇಶಕ 'ದಿನವೂ ಗುಂಡಿನ ಶಬ್ದ ಮತ್ತು ಸಾವಿನ ಭಯದಲ್ಲಿ ಬದುಕುತ್ತೇವೆ' ಎಂದು ಹೇಳುವಾಗಲೋ ಅಥವಾ ಹೆರಿಗೆ ಸಮಯದಲ್ಲಿ ಜೊತೆಗೆ ಇರಲಾಗಲಿಲ್ಲ ಎಂದು ತನ್ನ ಪತ್ನಿಯ ಬಳಿ ಕ್ಷಮೆ ಕೇಳುವ ಮಾತುಗಳೋ ವಿಭಿನ್ನವಾಗಿಯೂ-ಶಕ್ತಿಯುತವಾಗಿಯು ಮೂಡಿವೆ. ನೇಣಿಗೆ ಬಳಸುವ ಹಗ್ಗವನ್ನು ಮಗು ಮಲಗಿಸುವುದಕ್ಕೆ ಕಟ್ಟುವ ಜೋಲಿಗೆ ಬಳಸುವ ದೃಶ್ಯಕ್ಕೆ ವಿಭಿನ್ನ ಮಾನವೀಯ ಕಥೆಯೊಂದನ್ನು ಹೇಳುವ ಶಕ್ತಿಯಿದೆ. 
ತಮ್ಮ ಚೊಚ್ಚಲ ನಿರ್ದೇಶನದಲ್ಲೇ, ಮಾನವೀಯ ಅಂತಃಕರಣವನ್ನು ಕಲಕುವ, ಕಠೋರತೆಯನ್ನು ಕುಗ್ಗಿಸುವ ಕಥೆಯನ್ನು, ರೋಡ್ ಸಿನೆಮಾ ಪ್ರಕಾರದಲ್ಲಿ ಆಪ್ತವಾಗಿಯೂ, ತಾಂತ್ರಿಕವಾಗಿಯೂ ಉತ್ತಮವಾಗಿ ಕಟ್ಟಿಕೊಟ್ಟಿರುವ ನಿರ್ದೇಶಕ ಡಿ ಸತ್ಯಪ್ರಕಾಶ್ ಅವರ ಈ ಪ್ರಯತ್ನ ವಿಭಿನ್ನ ಮತ್ತು ಗಮನಾರ್ಹ. ಸಿನಿರಸಿಕರು ನೋಡಿ, ಸಂಭ್ರಮಿಸಿ, ಚಿಂತನೆಗೂ ಒಡ್ಡಿಕೊಳ್ಳಬಹುದಾದ ಸಿನೆಮಾ ರಾಮಾ ರಾಮಾ ರೇ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com