'ದೊಡ್ಮನೆ ಸೂರ್ಯ' ಮತ್ತು ಸೂರಿ ಕಟ್ಟಿದ ಸೌಧ!

ಶೀರ್ಷಿಕೆಯಿಂದಲೇ ಕುತೂಹಲ-ನಿರೀಕ್ಷೆಗಳನ್ನು ಮೂಡಿಸಿದ ಸಿನೆಮಾಗಳ ಪೈಕಿ 'ದೊಡ್ಮನೆ ಹುಡುಗ'ನಿಗೆ ಅಗ್ರ ಸ್ಥಾನವೇ ಸಿಗಬೇಕು! ಹಳ್ಳಿಗಳ, ನಗರಗಳ (ಆಂಟಿಲ ಇಲ್ಲಿ ನೆನಪಿಗೆ ಬಂದರು ಸಾಕು) ದೊಡ್ಮನೆಗಳು
ದೊಡ್ಮನೆ ಹುಡುಗ ಸಿನೆಮಾ ವಿಮರ್ಶೆ
ದೊಡ್ಮನೆ ಹುಡುಗ ಸಿನೆಮಾ ವಿಮರ್ಶೆ
ಶೀರ್ಷಿಕೆಯಿಂದಲೇ ಕುತೂಹಲ-ನಿರೀಕ್ಷೆಗಳನ್ನು ಮೂಡಿಸಿದ ಸಿನೆಮಾಗಳ ಪೈಕಿ 'ದೊಡ್ಮನೆ ಹುಡುಗ'ನಿಗೆ ಅಗ್ರ ಸ್ಥಾನವೇ ಸಿಗಬೇಕು! ಹಳ್ಳಿಗಳ, ನಗರಗಳ (ಆಂಟಿಲ ಇಲ್ಲಿ ನೆನಪಿಗೆ ಬಂದರು ಸಾಕು) ದೊಡ್ಮನೆಗಳು ಸಾಮಾನ್ಯವಾಗಿ ಸುತ್ತಲಿನ ಜನರಿಗೆ ಕುತೂಹಲದ ಕಟ್ಟಡಗಳೇ. ಭೌತಿಕ ಕಟ್ಟಡಗಳಷ್ಟೇ ಕುತೂಹಲಕ್ಕೆ ಕಾರಣವಾಗದೆ ಅಲ್ಲಿ ನಡೆಯುವ ಚಟುವಟಿಕೆಗಳು, ಉಳಿದೆವರೆಡೆಗೆ ಆ ಮನೆಯವರ ರೀತಿ ರಿವಾಜುಗಳು ಕೆಲವೊಮ್ಮೆ ಸಂಭ್ರಮಕ್ಕೆ ಗುರಿಯಾದರು, ಹದ್ದಿನ ಕಣ್ಣಿನಲ್ಲಿ ನೋಡಿ ಟೀಕೆಗೆ ಗುರಿಯಾಗುವ ಸಂದರ್ಭಗಳಿಗೂ ಕಡಿಮೆಯೇನಿಲ್ಲ. ಈ ಸಿನೆಮಾದಲ್ಲಿ ದೊಡ್ಡ ತಾರಾಗಣವನ್ನು ಗಮನಿಸಿದ್ದ ಪ್ರೇಕ್ಷಕನಿಗೆ, ಇಂತಹ ಒಂದು ಕಥೆ ನಿರ್ದೇಶಕ ಸೂರಿ ಅವರಿಗೆ ಬಂದಿರಬಹುದೇ ಎಂಬ ಕುತೂಹಲವು ಇರಬಹುದು. ಒಟ್ಟಿನಲ್ಲಿ ಸೂರಿ ಪ್ರೇಕ್ಷಕರಿಗೆ ಕಟ್ಟಿರುವ ಈ ದೊಡ್ಮನೆ ಪ್ರೇಕ್ಷಕರನ್ನು ತನ್ನೊಳಗೆ ಬಿಟ್ಟುಕೊಳ್ಳುತ್ತದೆಯೇ?
ಶುಷ್ಕ ಕಮರ್ಷಿಲ್ ಮಾದರಿಯ ಸೂತ್ರಗಳಲ್ಲೂ, ಸೂರಿ ಸ್ವಾದ ಪ್ರೇಕ್ಷಕನಿಗೆ ಅವರ ನಿರ್ದೇಶನದ ಸಿನೆಮಾಗಳಲ್ಲಿ ಹೇರಳವಾಗಿ ದೊರೆಯುತ್ತದೆ. ಪ್ರಸಕ್ತ ಸಿನಿಮಾದಲ್ಲಿಯೂ ಮಾಮೂಲಿಯಂತೆ, ಒಂದು ಫೈಟ್, ಕೂಡಲೇ ಒಂದು ಹಾಡಿನ ಮೂಲಕ ಸಿನೆಮಾಗೆ ಪ್ರವೇಶ ಸಿಕ್ಕರೂ, ಯಾವುದೋ ಅದ್ದೂರಿ ಸೆಟ್ ನಲ್ಲಿ ನಡೆಯುವ, ಕೃತಕ ಎನಿಸುವ ಫೈಟ್ ಆಗದೆ ಹುಬ್ಬಳ್ಳಿ ಜನನಿಬಿಡ ರಸ್ತೆಯಲ್ಲಿ ಫೈಟ್ ಚಿತ್ರೀಕರಿಸುವ ಬದ್ಧತೆ, ಮತ್ತು ನಾಯಕ ನಟ ಸೂರ್ಯ (ಪುನೀತ್ ರಾಜಕುಮಾರ್) ರಸ್ತೆಯಲ್ಲಿ ಬಿರಿಯಾನಿ ಮಾರುವ ಯುವಕ, ಕೋಪಿಷ್ಠ ಮತ್ತು ಜನಪ್ರಿಯ ಲೋಕಲ್ ಡ್ಯಾನ್ಸರ್ ಎಂದು ಒಂದು ಸಣ್ಣ ತರ್ಕವನ್ನು ಆರೋಪಿಸುವ ರೀತಿ ಕೂಡ ಉಳಿದ ಕಮರ್ಷಿಯಲ್ ಸಿನೆಮಾಗಳಿಗೆ ಹೋಲಿಸಿದರೆ ಒಂದು ಮಟ್ಟದ ಅಂತಃಸತ್ವವನ್ನು ಉಳಿಸಿಕೊಂಡಿರುವ ಪ್ರವೇಶಿಕೆ ಇದು. ಫೈಟ್ ಮಾಡುವಾಗ ಸೂರ್ಯ ಮುದುಕರೊಬ್ಬರ 'ಊರುಗೋಲು' ಕಸಿದು ಹೊಡೆದಾಡುವುದು, ಸಾರ್ವಜನಿಕ ದೌರ್ಜನ್ಯಗಳಲ್ಲಿ ಸಂತ್ರಸ್ತರನ್ನು ರಕ್ಷಿಸುವ ಪ್ರತ್ಯಕ್ಷದರ್ಶಿಗಳ ಹೊಣೆಯನ್ನು, ಅದ್ದೂರಿತನದ ನಡುವೆಯೂ ಸಾಂಕೇತಿಕವಾಗಿ ಒಳಗೊಳ್ಳುವ ಜಾಣ್ಮೆ ತೋರುತ್ತಾರೆ!
ನಾಯಕನಟಿಯನ್ನು ಪರಿಚಯಿಸುವ ರೀತಿಯೂ ಜನಪ್ರಿಯ ಮಾದರಿಯೇ ಆಗಿದ್ದರು, ಅಲ್ಲಿಯೂ ಒಂದು ಹಿತವೆನ್ನಿಸುವ ಕಥೆಯನ್ನು-ಘಟನೆಯನ್ನು ಕಟ್ಟಿಕೊಟ್ಟು-ಎಲ್ಲೋ ಒಂದು ಮಟ್ಟದಲ್ಲಿ ಆಳವಾಗಿ ತಳವೂರಿರುವ ಪೂರ್ವಗ್ರಹವನ್ನು ಒಡೆಯಲು ಪ್ರಯತ್ನಿಸುವ ಸೂರಿ ಧಾಟಿ ಕಾಣಿಸುತ್ತದೆ. ನಾಟಕ ತರಬೇತಿಗಾಗಿ ಪರವೂರಿಗೆ ಬಂದಿರುವ ಸಿರಿವಂತೆ ನಿಶಾ(ರಾಧಿಕಾ ಪಂಡಿತ್) ನಾಟಕದ ಸಂಭಾಷಣೆ ಕಲಿಯಲಾಗದೆ ಆಗಾಗ ಮದ್ಯದ ಮೊರೆ ಹೋಗುತ್ತಾಳೆ. ಬಾರ್ ಒಂದರಲ್ಲಿ ಕಿಡಿಗೇಡಿಗಳಿಂದ ತಪ್ಪಿಸಿಕೊಂಡು ಓಡುವಾಗ ಸೂರ್ಯ ರಕ್ಷಿಸುತ್ತಾನೆ. ಅವನ ಜೊತೆಗೆ ಕಳೆದ ಸಣ್ಣ ಸಮಯದಲ್ಲಿ ಅವಳಲ್ಲಿ ವಿನಮ್ರವಾದ ಬದಲಾವಣೆಗಳಾಗುತ್ತವೆ. ಹೀಗೆ ಮಹಿಳೆ ಕುಡಿಯುವುದು ಮಹಾಪರಾಧ ಅದು ಪುರುಷರ ಸವಲತ್ತು ಅಷ್ಟೇ ಎಂಬುವಂತಹ ಕೆಟ್ಟ ಪೂರ್ವಗ್ರಹವನ್ನು ಜನಪ್ರಿಯ ಮಾದರಿಯಲ್ಲೇ ಮುರಿಯುತ್ತಾರೆ ಸೂರಿ. ಸೂರ್ಯ ಮತ್ತು ನಿಶಾ ನಡುವೆ ಪ್ರೀತಿ ಹುಟ್ಟಿ, ಅವರ ನಡುವೆ ರೋಮ್ಯಾನ್ಸ್ ಮುಂದುವರೆಯುತ್ತದೆ. 
ಇತ್ತ ಒಂದು ಹಳ್ಳಿಯಲ್ಲಿ ಜನ ಬಹಳ ಗೌರವದಿಂದ ಕಾಣುವ ದೊಡ್ಮನೆ ರಾಜೀವಯ್ಯನನ್ನು (ಅಂಬರೀಷ್), ಅವನ ಸೋದರಳಿಯ ಕೃಷ್ಣನ (ಕೃಷ್ಣ) ಸಹಾಯದಿಂದ ಮೋಸ ಮಾಡಿ ಕೇಬಲ್ ಬಾಬು (ರವಿಶಂಕರ್) ಜೈಲಿಗೆ ಕಳುಹಿಸುತ್ತಾನೆ. ಇವನಿಗೆ ಇದಕ್ಕೆ ಸಾಥ್ ನೀಡುವುದು ಕ್ರಿಮಿನಲ್ ಲಾಯರ್ ಸುಬ್ಬು (ಅವಿನಾಶ್). ರಾಜೀವಯ್ಯನನ್ನು ಖಾರಾಗೃಹದಲ್ಲೇ ಕೊಲೆ ಮಾಡಿಸಲು ಹುಬ್ಬಳ್ಳಿಯ ಪಟೇಲನಿಗೆ ಸುಫಾರಿ ಹೋಗುತ್ತದೆ. ಈ ಕೆಲಸವನ್ನು ಒಪ್ಪಿಕೊಳ್ಳುವ ಸೂರ್ಯ ಜೈಲನ್ನು ಹೊಕ್ಕುತ್ತಾನೆ. ಮುಂದೇನಾಗುತ್ತದೆ?
ಮಧ್ಯಂತರಕ್ಕೆ ತಿರುವೊಂದನ್ನು ನೀಡುವ ನಿರ್ದೇಶಕ ಗಟ್ಟಿ ಸಂಘರ್ಷವೊಂದನ್ನು ತಂದೊಡ್ಡುತ್ತಾರೆ. ಚಿಕ್ಕವಯಸ್ಸಿನಲ್ಲೇ ದೊಡ್ಮನೆ ಬಿಟ್ಟು ಹೋಗಿದ್ದ, ತಂದೆಯನ್ನು ಅಪ್ಪನೆಂದು ಕರೆಯದೆ ವಜ್ರುಮನಿ ಎನ್ನುವ ಮಗ ಅಪ್ಪನ ರಕ್ಷಣೆಗೆ ನಿಲ್ಲಬೇಕಾದ ಸಂದರ್ಭ ಒದಗುತ್ತದೆ. ಅಪ್ಪ-ಮಗನ ಸಂಘರ್ಷ ಬಹಳ ಪರಿಣಾಮಕಾರಿಯಾಗಿ ಮೂಡಿದ್ದರು, ಅದಕ್ಕೆ ಆರೋಪಿಸಿರುವ ಮೂಲ ಕಾರಣಗಳು ಎಲ್ಲೋ ಜಾಳು ಜಾಳು ಎಂದೆನಿಸುತ್ತವೆ. ಈ ಸಂಘರ್ಷವೊಂದನ್ನು ಹೊರತುಪಡಿಸಿದರೆ, ಕಪ್ಪು-ಬಿಳುಪು ಆಯಾಮಾದ ಸಿನೆಮಾ ಆಗಿ, ಧೀಶಕ್ತಿಯೊಂದು ಕೆಡುಕನ್ನು ಸಂಹರಿಸುವ ಸಾಧಾರಾಣ ಕಥೆಯಾಗಿ ಅಂತ್ಯವಾಗುತ್ತದೆ. ಹಲವು ವರ್ಷಗಳ ನಂತರ ಮೊದಲ ಬಾರಿಗೆ ಜೈಲಿನಲ್ಲಿ ತನ್ನ ತಂದೆಯನ್ನು ಭೇಟಿ ಮಾಡಿದ ಸನ್ನಿವೇಶಕ್ಕೆ ಪ್ರೇಕ್ಷಕನನ್ನು ಕಾಡುವಂತಹ ಶಕ್ತಿಯಿದೆ. 
ಅತಿ ವೇಗವಾಗಿ ಓಡುವ ಕಥಾ ನಿರೂಪಣೆ ಮತ್ತೆ ಸೂರಿ ಮಾದರಿಯದ್ದು. ಇದಕ್ಕೆ ಒಂದಷ್ಟು ಅಗತ್ಯವಿದ್ದ ವಿವರಗಳನ್ನು ಅಲಕ್ಷಿಸುವಂತೆ ಶಕ್ತಿಯಿದೆ. ಸೂರ್ಯ ಜೈಲು ಸೇರುವುದು ಅಷ್ಟು ಸುಲಭವೇ? ದೊಡ್ಮನೆ ರಾಜೀವಯ್ಯನ ಅಷ್ಟೊಂದು ವೈಭವೀಕರಣದ ಅಗತ್ಯತೆ ಏನು ಇಂತಹ ಪ್ರಶ್ನೆಗಳು ಮೂಡಿದರೂ ಮತ್ಯಾವುದೋ ಒಂದು ಘಟನೆ ತಟ್ಟನೆ ಮೂಡಿ, ಅವುಗಳನ್ನು ಮರೆಸಿ ಮುಂದುವರೆದುಬಿಡುತ್ತದೆ. ಪುನೀತ್ ರಾಜಕುಮಾರ್ ತಮ್ಮ ಎಂದಿನ ನಾಜೂಕಿನ ನಟನೆಯಿಂದ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ರಾಧಿಕಾ ಪಂಡಿತ್ ಕೂಡ ಒಳ್ಳೆಯ ನಟನೆ ನೀಡಿದ್ದು, ಇಬ್ಬರೂ ಪೈಪೋಟಿಯಲ್ಲಿ ನೃತ್ಯ ಮಾಡಿ ಪ್ರೇಕ್ಷಕರನ್ನು ರಂಜಿಸುತ್ತಾರೆ. ರವಿಶಂಕರ್ ಅಬ್ಬರವನ್ನು ಇಲ್ಲಿಯೂ ಪ್ರೇಕ್ಷಕ ಸಹಿಸಿಕೊಳ್ಳಬೇಕು. ಅಂಬರೀಷ್ ಸೇರಿದಂತೆ ಉಳಿದ ತಾರಾಗಣ ಕೂಡ ಒಳ್ಳೆಯ ನಟನೆ ನೀಡಿದೆ. ಸತ್ಯ ಹೆಗಡೆ ಅವರ ಛಾಯಾಗ್ರಹಣ ಸಿನೆಮಾಗೆ ಬೇಕಾದ ಪೂರಕ ಪರಿಸರವನ್ನು ಪರಿಣಾಮಕಾರಿಯಾಗಿ ಸೆರೆ ಹಿಡಿದರೆ, ಸೂರಿಯವರ ವೇಗದ ನಿರೂಪಣೆಗೆ ದೀಪು ಸಂಕಲನ ಸಹಕರಿಸಿದೆ. ಹರಿಕೃಷ್ಣ ಅವರ ಸಂಗೀತದಲ್ಲಿ ಮೂಡಿರುವ ಹಾಡುಗಳು ಕಥೆಯ ವೇಗಕ್ಕೆ ಅಲ್ಲಲ್ಲಿ ಬ್ರೇಕ್ ನೀಡಿ, ಪ್ರೇಕ್ಷಕರಿಗೆ ವಿರಾಮ ನೀಡಿ ರಂಜಿಸುತ್ತವೆ. 
ದೊಡ್ಡ ಸಿರಿವಂತ ಮನೆತನದ ಬಾಲಕನೊಬ್ಬ ಅಪ್ಪನ ಕ್ರೌರ್ಯವನ್ನು ಧಿಕ್ಕರಿಸಿ ಮನೆಯಿಂದ ದೂರ ಉಳಿದು ಸಾಮಾನ್ಯನಾಗಿ ಬದುಕಿರುವಾಗ, ಮನೆಗೆ-ಕುಟುಂಬಕ್ಕೆ ಹಿಂದಿರುಗುವ ಅನಿವಾರ್ಯತೆ ಒದಗಿದಾಗ ಏನು ಮಾಡುತ್ತಾನೆ ಎಂಬ ಒಳ್ಳೆಯ ಸಂಘರ್ಷದ ಕಥೆಯ ಎಳೆ ಹಿಡಿದು ಸಿನೆಮಾ ನಿರ್ದೇಶಿಸಿರುವ ಸೂರಿ ಕೆಲವೊಮ್ಮೆ ಉತ್ತಮ ದೃಶ್ಯಗಳನ್ನು-ಸನ್ನಿವೇಶಗಳನ್ನು ಕಟ್ಟಿಕೊಡುತ್ತಾ, ಮತ್ತೆ ಕೆಲವೊಮ್ಮೆ ಅತಿ ಸಾಧಾರಣ ಎನಿಸುವ ಕೆಡುಕನ್ನು ಪುಡಿಗುಟ್ಟಿ ಸಂಹರಿಸುವ ಹಿರೋಯಿಕ್ ಒಳಿತಿನ ಟ್ರ್ಯಾಕ್ ಗೆ ಹೊರಳುತ್ತಾ, ದೊಡ್ಮನೆ ಮತ್ತು ಅದರ ಒಡೆಯನ ಸುತ್ತ ಅನವಶ್ಯಕವಾಕ-ಅತಿರೇಕದ ವೈಭವೀಕರಣದ ಜನಪ್ರಿಯತೆಗೂ ಕಟ್ಟಿಬಿದ್ದು ಗಂಭೀರ ಪ್ರೇಕ್ಷಕನ ಮಿಶ್ರ ಪ್ರತಿಕ್ರಿಯೆಗೆ ಪಾತ್ರವಾಗುವ ಸಿನೆಮಾವನ್ನು ನಿರ್ದೇಶಿಸಿದ್ದಾರೆ. ಜನಪ್ರಿಯ ಮಾದರಿಯಲ್ಲು ಒಂದಷ್ಟು ಅರಿವು ತರುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ ಎನ್ನಬಹುದು!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com