

ಹಾರರ್ ಸಿನೆಮಾಗಳ ನಿರೂಪಣೆಯಲ್ಲಿ ಸಾಮಾನ್ಯವಾಗಿ ಮುಖ್ಯ ಪಾತ್ರಧಾರಿ ಆಕಸ್ಮಿಕವಾಗಿ ಆ ಹಾರರ್ ಸುಳಿಯಲ್ಲಿ ಸಿಕ್ಕಿ ಅದರಿಂದ ಬಿಡಿಸಿಕೊಳ್ಳಬೇಕಿರುತ್ತದೆ. ಹಾರರ್ ಸಿನೆಮಾಗಳ ಈ ಆಯಾಮವನ್ನು ಒಂದು ಮಟ್ಟಕ್ಕೆ ಮುರಿದು ಕಟ್ಟಲು ಯಶಸ್ವಿಯಾಗಿರುವ ಪವನ್ ಕುಮಾರ್ ನಿರ್ದೇಶನದ 'ಯು-ಟರ್ನ್' ಮುಖ್ಯ ಪಾತ್ರಧಾರಿಗೆ, ನಡೆದಿರುವ ಸರಣಿ ಸಾವುಗಳಿಂದ ತನಗೆ ಸಂಬಂಧವಿರದಂತೆ ದೂರವುಳಿಯುವ ಎಲ್ಲ ಅವಕಾಶಗಳಿದ್ದರೂ, ಅದನ್ನು ಬೇಧಿಸಲು ಹೋಗಿ ಸುಳಿಯೊಳಗೆ ಸಿಕ್ಕಿಹಾಕೊಳ್ಳುತ್ತಾಳೆ. ಹಾರರ್ ಹೆದ್ದಾರಿಯಿಂದ ತೆಗೆದುಕೊಂಡಿರುವ ಈ ಬಳಸು ದಾರಿ ನಿಜಕ್ಕೂ ಪರಿಣಾಮಕಾರಿಯಾಗಿ ಮೂಡಿಬಂದಿದೆಯೇ?
ರಚನ(ಶ್ರದ್ಧ ಶ್ರೀನಾಥ್) ತೀವ್ರ ಆಸಕ್ತಿಯಿಂದ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ನಲ್ಲಿ ಇಂಟರ್ನ್. ಡಬಲ್ ರೋಡ್ ಮೇಲು ಸೇತುವೆಯ ರಸ್ತೆ ಸೀಳಿನಲ್ಲಿ ಅಡ್ಡವಿಟ್ಟ ಕಲ್ಲುಗಳನ್ನು ಸರಿಸಿ ಯು-ಟರ್ನ್ ತೆಗೆದುಕೊಳ್ಳುವವರನ್ನು ಸಂದರ್ಶಿಸಿ ವರದಿ ಸಿದ್ಧಪಡಿಸಬೇಕೆಂದಿದ್ದ ಈಕೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳುತ್ತಾರೆ. ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯೊಬ್ಬನ ಮನೆಗೆ ಭೇಟಿ ನೀಡಲು ತೆರಳಿದ್ದ ಆರೋಪದ ಮೇರೆಗೆ ವಿಚಾರಣೆಗೆ ಒಳಪಡುವ ರಚನಾಳಿಗೆ ಹಾರರ್ ಕಾದಿರುತ್ತದೆ. ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಡಬಲ್ ರಸ್ತೆಯ ಮೇಲೆ ಯು-ಟರ್ನ್ ತೆಗೆದುಕೊಂಡಿರುವುದಲ್ಲದೆ, ಅವನ ವಾಹನದ ದಾಖಲೆಗಳೂ ಸೇರಿದಂತೆ ಅಲ್ಲಿ ಯು-ಟರ್ನ್ ತೆಗೆದುಕೊಂಡಿರುವ ಇನ್ನೂ ಹತ್ತು ವ್ಯಕ್ತಿಗಳ ಬಗ್ಗೆಯೂ ರಚನಾ ತನ್ನ ನೋಟ್ ಪುಸ್ತಕದಲ್ಲಿ ದಾಖಲಿಸಿರುತ್ತಾಳೆ. ಮತ್ತೆ ಇವರೆಲ್ಲರೂ ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವವರೇ! ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ಹಿರಿಯ ಪೊಲೀಸ್ ಅಧಿಕಾರಿ ರಚನಾಳಿಗೆ ಮುಕ್ತಿ ನೀಡಿ ಈ ಪ್ರಕರಣಕ್ಕೆ ಅಂತ್ಯ ಹಾಡಲು ಸೂಚಿಸಿದರೂ, ಇನ್ನೂ ಹೆಚ್ಚಿನ ಅನಾಹುತಗಳನ್ನು ನಿರೀಕ್ಷಿಸುವ ರಚನಾ, ಪೊಲೀಸ್ ಇನ್ಸ್ಪೆಕ್ಟರ್ ನಾಯಕ್ (ರೋಜರ್ ನಾರಾಯಣ್) ಅವರ ಸಹಾಯ ಪಡೆದು ಇದನ್ನು ಬಗೆಹರಿಸಲು ಪ್ರಯತ್ನಿಸುತ್ತಾಳೆ. ಆದರೆ ನಿಜ ಪತ್ತೆಗೆ ಕೊನೆಗೆ ತಾನೇ ಹಾರರ್ ಸುಳಿಗೆ ಸಿಕ್ಕಿಹಾಕಿಕೊಳ್ಳಬೇಕಾಗುತ್ತದೆ. ಇದನ್ನು ರಚನ ಬಗೆಹರಿಸುತ್ತಾಳೆಯೇ?
ಪ್ರೇಕ್ಷಕನಿಗೆ ಅಪ್ರಾಮುಖ್ಯ ಎನ್ನಿಸಬಹುದಾದ ಡಬಲ್ ರಸ್ತೆಯಲ್ಲಿ ಯು-ಟರ್ನ್ ತೆಗೆದುಕೊಳ್ಳುವವರ ಸಂದರ್ಶನಾ ವರದಿ ಮಾಡಲಿಚ್ಚಿಸಿರುವ ಉತ್ಸಾಹಿ ಇಂಟರ್ನ್ ವರದಿಗಾರ್ತಿಯ ಸುತ್ತ ಒಂದು ರೋಚಕ ಕಥೆ ಹೆಣೆಯಲು ಮೊದಲಾರ್ಧದಲ್ಲಿ ನಿರ್ದೇಶಕ ಸಫಲರಾಗಿದ್ದಾರೆ. ಯುವತಿಯ ಮುಖ್ಯ ಪಾತ್ರದ ಮೂಲಕ ಕಥೆ ಕಟ್ಟಿಕೊಡುವ ಪ್ರಯತ್ನವೂ ಸಹಜವಾಗಿ ಮೂಡಿ ಬಂದಿದ್ದು, ಸಂದಿಗ್ಧ ಅಥವಾ ಡೆಡ್ ಎಂಡ್ ಸನ್ನಿವೇಶಗಳಲ್ಲಿ ಅಸಹಜವನ್ನು ಹೋರಾಟದ ಮನೋಭಾವದ ಯುವತಿ ಸುಮ್ಮನೆ ಒಪ್ಪಿ ಕಡೆಗಣಿಸುವುದಿಲ್ಲ ಎಂಬ ಅಂಶವಾಗಲಿ- ಕ್ಲೀಶೆ ಎನ್ನಬಹುದಾದರೂ ಪೊಲೀಸ್ ವ್ಯವಸ್ಥೆಯಲ್ಲಿ ತಾರ್ಕಿಕವಲ್ಲದಿದ್ದರೂ ಪ್ರಕರಣಗಳು ಅಂತ್ಯ ಕಂಡರೆ ಸಾಕು ಎನ್ನುವ ಹಿರಿಯ ಅಧಿಕಾರಿ, ಅದನ್ನು ಪ್ರತಿರೋಧಿಸಿ (ವ್ಯವಸ್ಥೆಯಲ್ಲಲ್ಲ-ಬದಲಾಗಿ ತನ್ನೊಳಗೇ) ರಚನಾಳಿಗೆ ಸಹಾಯ ಮಾಡುವ ಇನ್ಸ್ಪೆಕ್ಟರ್ ನಾಯಕ್- ಇಂತಹ ಸಂಘರ್ಷ ಸನ್ನಿವೇಶಗಳನ್ನು ಕೂಡ ಆಪ್ತವಾಗಿ ಕಟ್ಟಿಕೊಡುತ್ತಾರೆ ನಿರ್ದೇಶಕ. ಸರಳ ಲೀನಿಯರ್ ನಿರೂಪಣೆಯಿದ್ದರು ಯಾವುದೋ ಕ್ರೈಮ್ ಕಥೆಯನ್ನು ನಿರ್ದೇಶಕ ಕಟ್ಟಿಕೊಡುತ್ತಿರಬಹುದು ಎಂಬ ಪ್ರೇಕ್ಷಕನ ಊಹೆಯನ್ನು ಧೊಪ್ಪನೆ ಧ್ವಂಸ ಮಾಡುವುದು ಕೊನೆಯ ೩೦-೪೦ ನಿಮಿಷಗಳು.
ಸಂದೇಶ ನೀಡುವ ಹಠಕ್ಕೆ ಬಿದ್ದಿರುವುದರಿಂದಲೋ, ಅಥವಾ ಕಟ್ಟಿದ ಕಥೆಗೆ ತೀರ್ಮಾನ ಕಟ್ಟಿಕೊಡಲು ಸಾಧ್ಯವಾಗದಷ್ಟು ಕಥೆಯನ್ನು ಬೆಳೆಸಿದ್ದರಿಂದಲೋ ಏನೋ ಅಲೌಕಿಕ ಶಕ್ತಿಯ ಆಯಾಮ ತಂದು ಏರು ರಸ್ತೆಯಲ್ಲಿ ಚಾಲನೆಯ ಥ್ರಿಲ್ ಸವಿಯುತ್ತಿರುವ ಪ್ರೇಕ್ಷಕರಿಗೆ ಬ್ರೇಕ್ ಫೇಲ್ ಅನುಭವ ನೀಡುತ್ತಾರೆ. ರೋಚಕ ಅನುಭವ ಬರಬರುತ್ತಾ ಸಂದೇಶಾತ್ಮಕ, ಮೆಲೋಡ್ರಾಮಾ ಆಗಿ ಅತಾರ್ಕಿಕವಾಗಿ ಬೆಳೆದು ಕೊನೆಗೆ ಪ್ರೇಕ್ಷಕನ ಅನಿರೀಕ್ಷತೆಯ ನಿರೀಕ್ಷೆಯ-ಅನುಭವದ ಧ್ವಂಸವಾಗುತ್ತದೆ.
ನೈಜ ತಾಣಗಳಲ್ಲಿ (ಪತ್ರಿಕಾ ಕಚೇರಿ - ವಾಹನ ದಟ್ಟನೆ ವೀಕ್ಷಣಾ ಕೇಂದ್ರ- ಡಬಲ್ ರಸ್ತೆ ಮೇಲುಸೇತುವೆ) ನಡೆಸಿರುವ ಚಿತ್ರೀಕರಣ ಚಿತ್ರದ ಅಥೆಂಟಿಸಿಟಿಯನ್ನು ಅಲ್ಲಲ್ಲಿ ಹೆಚ್ಚಿಸಿದೆ. ಅಲ್ಲದೆ ಪೊಲೀಸ್ ಸ್ಟೇಶನ್ ಗಾಗಿ ಹಾಕಿರುವ ಸೆಟ್- ಅಲ್ಲಿ ನಡೆಸಿರುವ ಚಿತ್ರೀಕರಣ, ಲೀನಿಯರ್ ನಿರೂಪಣೆಯಾದರೂ ಚುರುಕಾಗುವಂತೆ ಮಾಡಿರುವ ಸಂಕಲನ ಚಿತ್ರದ ಕೆಲವು ದೋಷಗಳನ್ನು ಮುಚ್ಚುತ್ತದೆ. ನಾಯಕನಟಿಯನ್ನೊಳಗೊಂಡ ಕೆಲವು ದೃಶ್ಯಗಳು ವಿಪರೀತ ಮಾತಿನಿಂದ ಬಳಲಿದರೆ, ಕನ್ನಡ ಭಾಷೆಯನ್ನು ತುಸು ಕಷ್ಟ ಪಟ್ಟು ಮಾತಾಡುವಂತೆ ಕಾಣುವ ನಾಯಕ ನಟಿ ಅಲ್ಲಲ್ಲಿ ಇರುಸು ಮುರುಸು ತರುತ್ತಾರೆ. ಅವರಿಗೆ ಕನ್ನಡ ನಿರರ್ಗಳವಾಗಿ ಮಾತನಾಡಲು ಬರುವುದಿಲ್ಲ ಎಂಬ ಸಂಗತಿ ಕಥೆಗೆ ಯಾವ ರೀತಿಯಲ್ಲೂ ಪೂರಕವಾಗಿಲ್ಲ. ಸಾಮಾನ್ಯವಾಗಿ ಯು-ಟರ್ನ್ ತೆಗೆದುಕೊಳ್ಳುವವರು ಒಂದಲ್ಲ ಒಂದು ರೀತಿಯಲ್ಲಿ ತಮ್ಮ ವ್ಯಯಕ್ತಿಕ ಜೀವನದಲ್ಲಿ ಖಿನ್ನತೆಗಳಿಂದ ಬಳಲುತ್ತಿರುವವರು ಎಂಬ ಎಸ್ಟಾಬ್ಲಿಶ್ ಮೆಂಟ್ ಕೂಡ ಅನಗತ್ಯವಾಗಿತ್ತೇನೋ! ಈ ಅಂಶಕ್ಕೂ ಹಾಗೂ ಅಲೌಖಿಕ ಶಕ್ತಿಯ ಕಥೆಗೂ ಎಲ್ಲೂ ಬೆಸುಗೆಯಿಲ್ಲ. ನಟನೆಯಲ್ಲಿ ಶ್ರದ್ಧ ಶ್ರೀನಾಥ್ ಚೊಚ್ಚಲ ಪ್ರಯತ್ನದಲ್ಲೇ ಗಮನ ಸೆಳೆಯುತ್ತಾರೆ. ಅವರ ಸಹದ್ಯೋಗಿ-ಗೆಳೆಯನ ಪಾತ್ರದಲ್ಲಿ ದಿಲೀಪ್ ರಾಜ್, ಇನ್ಸ್ಪೆಕ್ಟರ್ ನಾಯಕ್ ಪಾತ್ರದಲ್ಲಿ ರೋಜರ್ ನಾರಾಯಣ್ ಮತ್ತು ಕಡಿಮೆ ಅವಧಿಯ ಪಾತ್ರಗಳಲ್ಲಿ ನಟಿಸಿರುವ ಇನ್ನುಳಿದ ನಟರೂ ಉತ್ತಮವಾಗಿ ನಟಿಸಿದ್ದಾರೆ. ರಸ್ತೆಯ ತಲೆಕೆಳಕಾದ ಚಿತ್ರೀಕರಣದ ದೃಶ್ಯದೊಂದಿಗೆ, ಪೂರ್ಣಚಂದ್ರ ತೇಜಸ್ವಿಯವರ ಗಮನ ಸೆಳೆವ ಹಿನ್ನಲೆ ಸಂಗೀತದೊಂದಿಗೆ ಸಿನೆಮಾ ಪ್ರಾರಂಭವಾಗುವ ದೃಶ್ಯ ಪ್ರೇಕ್ಷಕನ ಮೂಡ್ ಸೆಟ್ ಮಾಡುತ್ತದೆ ಆದರೆ ಟ್ರಾಫಿಕ್ ಬಗೆಗಿನ ಚಿತ್ರದಲ್ಲಿ ಬೆಚ್ಚಿ ಬೀಳಿಸುವ ನಗರದ ಟ್ರಾಫಿಕ್ ದೃಶ್ಯಗಳನ್ನು ಸೆರೆಹಿಡಿದು ಹೇರಳವಾಗಿ ಬಳಸಬಹುದಿತ್ತೇನೋ ಎಂದೆನಿಸದೆ ಇರದು!
ಪ್ರತಿ ಸಿನೆಮಾಗೆ ಅಂತ್ಯ-ತೀರ್ಮಾನ (ಕ್ಲೈಮ್ಯಾಕ್ಸ್ ಅನ್ನುವುದಕ್ಕಿಂತಲು ಕನ್ ಕ್ಲೂಶನ್) ನೋಡುಗನಿಗೆ ಮುಖ್ಯವಾಗುತ್ತದೆ. ಬಹಶಃ ಚಿತ್ರಮಂದಿರದಿಂದ ಹೊರಬಂದಾಗ ಪ್ರೇಕ್ಷಕನನ್ನು ಆವರಿಸಿಕೊಳ್ಳುವ ಪ್ರಮುಖ ಘಟ್ಟ ಅದು! ಪ್ರೇಕ್ಷಕನಿಗೆ ಏನನ್ನೋ ಮಹತ್ವವಾದದ್ದನ್ನು ಹೇಳಲು ಕಟಿಬಿದ್ದು, ಕಥೆ ಹೆಣೆಯುವಾಗ ಅದು ಎಗ್ಗಿಲ್ಲದೆ ಬೆಳೆದು ಅಂತ್ಯ-ತೀರ್ಮಾನ ಕಟ್ಟಿಕೊಡುವುದರಲ್ಲಿ ಎಡವುವುದು ಎಲ್ಲ ಕಥೆಗಾರರೂ ಎದುರಿಸುವ ಸಂದಿಗ್ಧ ಸ್ಥಿತಿ. ಇತರ ತಾಂತ್ರಿಕ ಆಯಾಮಗಳು, ನಟನೆ, ಸರಳತೆ ಇವೆಲ್ಲವನ್ನೂ ಈ ಸಿನೆಮಾದಲ್ಲಿ ಸಿದ್ಧಿಸಿಕೊಂಡಿರುವ ನಿರ್ದೇಶಕ ಪವನ್ ಕುಮಾರ್ ಪ್ರೇಕ್ಷಕನ ಊಹೆಗಳನ್ನು ಅಲ್ಲಾಡಿಸಿ, ಇನ್ನೂ ಚೊಕ್ಕನಾದ ಅಥವಾ ಅಸಾಮಾನ್ಯ ಎನ್ನುಬಹುದಾದ ರೋಚಕ ಕೋನದಲ್ಲಿ ಕಥೆ ಮುಗಿಸಿದ್ದರೆ ಸಿನೆಮಾ ಹೆಚ್ಚು ಆಪ್ತವಾಗುತ್ತಿತ್ತೇನೋ!
-ಗುರುಪ್ರಸಾದ್
guruprasad.n@kannadaprabha.com
Advertisement