ಇನ್ನು ಮುನ್ನಲೆಯಲ್ಲಿ ಹೇಳ ಹೊರಟಿರುವ ಕಥೆ ಕೂಡ ವಿಭಿನ್ನವಾದ್ದು ಅಥವಾ ಅದರಲ್ಲಿನ ಸಂಘರ್ಷ ಹೊಸದು, ತಾಜಾತನದಿಂದ ಕೂಡಿದೆ ಎಂತಲೂ ಇಲ್ಲ. ಹಿರಿಯ ಅಧಿಕಾರಿಯಾಗಿರುವ ವರುಣ್, ಲೀಲಾಳನ್ನು ತೀವ್ರವಾಗಿ ಪ್ರೀತಿಸಿದರೂ, ಪುರುಷ ಅಹಂಕಾರ ಮಾತ್ರ ಇವನನ್ನು ಬಿಡಲೊಲ್ಲದು. ಇದರಿಂದ ಲೀಲಾಳಿಗೆ ದೈಹಿಕವಾಗಿ ಹಾಗು ಮಾನಸಿಕವಾಗಿ ಹಿಂಸೆ ನೀಡುವುದು, ಅವಮಾನಿಸುವುದು ನಡೆಯುತ್ತಲೇ ಇರುತ್ತದೆ. ಇಬ್ಬರು ಆಗಾಗ ದೂರವಾಗಿ ಮತ್ತೆ ಒಂದಾಗುತ್ತಿರುತ್ತಾರೆ. ಪ್ರೇಮ ಎಂಬುದು ತರ್ಕಕ್ಕೆ ಸಿಲುಕದ ಉದಾತ್ತ ಭಾವನೆ ಎಂಬುದನ್ನು ಹಿಡಿಯಲು ನಿರ್ದೇಶಕ ಇಲ್ಲಿ ಬಯಸಿದ್ದರೂ, ವರುಣ್ ಪಾತ್ರಪೋಷಣೆ ಅಥವಾ ಅವನ ಸುತ್ತ ಕಟ್ಟಿಕೊಡುವ ಘಟನೆಗಳು ಅವನನ್ನು ನ್ಯುರಾಟಿಕ್ (ಮನೋರೋಗಿ) ರೀತಿಯಲ್ಲಿ ಕಾಣಿಸುವಂತೆ ಮಾಡುತ್ತಾರೆ. ಅವನು ಬೆಳೆದು ಬಂದ ಕುಟುಂಬದ ದರ್ಶನವನ್ನು ಕೆಲವು ನಿಮಿಷಗಳವರೆಗೆ ಒಂದು ಅಸಹಜ ಹಾಡಿನ ಮೂಲಕ ಕಟ್ಟಿಕೊಡುತ್ತಾರೆ. ಬೆಳೆದು ಬಂದ ವಾತಾವರಣ, ಅಥವಾ ನಾಯಕ ನಟ ವಾಸಿಸುತ್ತಿರುವ ಯುದ್ಧದ ವಾತಾವರಣ ಅವನ ಈ ಮಾನಸಿಕ ಸ್ಥಿತಿಗೆ ಕಾರಣವಿರಬಹುದೇ ಎಂಬ ಪ್ರಶೆಗಳನ್ನು ಕೇಳಿಕೊಳ್ಳುವಂತೆ ಪ್ರೇಕ್ಷಕನಿಗೆ ಉತ್ತೇಜಿಸಿದರು, ಕಥೆಗಾರ-ನಿರ್ದೇಶಕ ನಾಯಕನಟನ ಅಂತಹ ವರ್ತನೆಗೆ ವಿರೋಧವಾಗಿ ಅಭಿಪ್ರಾಯಗಳನ್ನು, ಸನ್ನಿವೇಶಗಳನ್ನು ಗಟ್ಟಿಯಾಗಿ ಕಟ್ಟಿಕೊಡದೆ, ಅಥವಾ ಯುದ್ಧದ ಹಿನ್ನಲೆಯಲ್ಲಿ ವರುಣ್ ನನ್ನು ಹಿರೋಯಿಕ್ ಆಗಿ ತೋರಿಸುವದರಿಂದಲೋ ಏನೋ, ಪಾತ್ರಕ್ಕೆ ಖಚಿತವಾದ ಆಯಾಮವನ್ನು ಒದಗಿಸಲು ಸಾಧ್ಯವಾಗಿಲ್ಲ. ಯಾವುದೇ ವ್ಯಕ್ತಿ ಅಷ್ಟು ಸುಲಭಕ್ಕೆ ಬಿಡಿಸಲಾಗದ ವಿಭಿನ್ನ ಮನಸ್ಥಿತಿಗಳ ಆಗರವಾದರೂ ಕಥೆಗಾರನಾಗಿ ಇನ್ನಷ್ಟು ಸಂಕೀರ್ಣವಾಗಿ-ಗಹನವಾಗಿ ಪಾತ್ರಗಳನ್ನೂ ಕಡೆದು ನಿಲ್ಲಿಸಬಹುದಾಗಿದ್ದ ಸಾಧ್ಯತೆಯನ್ನು ನಿರ್ದೇಶಕ ಕೈಚೆಲ್ಲುತ್ತಾರೆ.