ಆರಾಧನಾ ಭಾವದಲ್ಲಿ 'ಚಕ್ರವರ್ತಿ'ಯ ಪಾರುಪತ್ಯ

ವಿಶಿಷ್ಟ ಶೈಲಿ, ಜನ ಜೀವನವನ್ನು ಮೀರಿದ ಪಾತ್ರಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ಕನ್ನಡದ ಸದ್ಯದ ಜನಪ್ರಿಯ ನಟರಲ್ಲಿ ದರ್ಶನ್ ಕೂಡ ಒಬ್ಬರು. ಚೊಚ್ಚಲ ಬಾರಿಗೆ
ಚಕ್ರವರ್ತಿ ಸಿನೆಮಾ ವಿಮರ್ಶೆ
ಚಕ್ರವರ್ತಿ ಸಿನೆಮಾ ವಿಮರ್ಶೆ
ವಿಶಿಷ್ಟ ಶೈಲಿ, ಜನ ಜೀವನವನ್ನು ಮೀರಿದ ಪಾತ್ರಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ಕನ್ನಡದ ಸದ್ಯದ ಜನಪ್ರಿಯ ನಟರಲ್ಲಿ ದರ್ಶನ್ ಕೂಡ ಒಬ್ಬರು. ಚೊಚ್ಚಲ ಬಾರಿಗೆ ನಿರ್ದೇಶನಕ್ಕೆ ಇಳಿದಿರುವ ಚಿಂತನ್, ತಮ್ಮ ನೆಚ್ಚಿನ ನಟನ ಆರಾಧನೆಗಾಗಿಯೇ ಕಥೆಯೊಂದನ್ನು ಬರೆದು ನಿರ್ದೇಶನ ಮಾಡಿದ್ದಾರೆ. (ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಕೂಡ). ಜನಪ್ರಿಯ ಸಿನೆಮಾಗಳು ಕಥೆಗೆ ಆಯ್ಕೆ ಮಾಡಿಕೊಳ್ಳುವ ವಿಷಯಗಳ ಬಗ್ಗೆ ಗಹನವಾಗಿ ಅಥವಾ ನಿಖರವಾಗಿ ಚರ್ಚಿಸಬೇಕೆಂದಿಲ್ಲ. ಸಾಮಾನ್ಯವಾಗಿ ಸುಲಭಕ್ಕೆ ಅರ್ಥವಾದ/ಅರ್ಥವಾಗದ ಸಂಗತಿಗಳನ್ನು, ಹೆಚ್ಚು ಸರಳಗೊಳಿಸಿ ಎಲ್ಲ ರೀತಿಯ ಪ್ರೇಕ್ಷಕರಿಗೂ ಗೊಂದಲವಾಗದಂತೆ ಜನಪ್ರಿಯ ಮಾದರಿಯಲ್ಲಿ ಕಟ್ಟಿಕೊಡುವವೇ ಈ ಕಮರ್ಷಿಯಲ್ ಅಥವಾ ಜನಪ್ರಿಯ ಸಿನೆಮಾಗಳು. ಆದರೆ ಜನಪ್ರಿಯ ಸಿನಿಮಾಗಳೆಂದರೆ ಕಥೆ ಹೇಳುವ ರೀತಿ ಸೊರಗಬೇಕೇ? ರೋಚಕತೆ-ಕುತೂಹಲ ಕಾಣೆಯಾಗಬೇಕೇ? ಹೀರೊ ವಿಜೃಂಭಣೆಯಷ್ಟೇ ಸಾಕೆ ಎಂಬ ಪ್ರಶ್ನೆಗಳನ್ನು ಪ್ರಸಕ್ತ 'ಚಕ್ರವರ್ತಿ' ಕೂಡ ಎತ್ತುತ್ತದೆ. ಈ ಪ್ರಶ್ನೆಗಳ ನಡುವೆ ಪ್ರೇಕ್ಷಕರನ್ನು ರಂಜಿಸಲು ಈ ಸಿನೆಮಾಗೆ ಸಾಧ್ಯವಾಗಿದೆಯೇ? 
ಹಿರಿಯ ರಾಜಕಾರಣಿಯ ಬೆಂಬಲದಿಂದ 'ಮಹಾರಾಜ' (ದಿನಕರ್ ತೂಗುದೀಪ) ಎಂಬ ಭೂಗತ ದೊರೆಗೆ ಬೆಂಗಳೂರೇ ನಲುಗಿ ಹೋಗಿದೆ. ಇಡೀ ಪೊಲೀಸ್ ವ್ಯವಸ್ಥೆಗೆ ದುಃಸ್ವಪ್ನವಾಗಿರುವ ಈ ವ್ಯಕ್ತಿಯನ್ನು ಮಟ್ಟ ಹಾಕಲು ಸಾಧ್ಯವಾಗದೆ ಆಡಳಿತ ಕೈಚೆಲ್ಲಿ ಕುಳುತಿರುವಾಗ, ಕೊಡಗಿನಿಂದ ಶಂಕರ್ (ದರ್ಶನ್) ತನ್ನ ಪ್ರಿಯತಮೆ ಶಾಂತಿಯನ್ನು (ದೀಪಾ ಸನ್ನಿಧಿ) ಓಡಿಸಿಕೊಂಡು ಬೆಂಗಳೂರಿಗೆ ಬರುತ್ತಾನೆ. ತನ್ನ ಗೆಳೆಯ (ಸೃಜನ್ ಲೋಕೇಶ್) ಮನೆಯಲ್ಲಿ ಆಶ್ರಯ ಪಡೆಯುವ ಶಂಕರ್, ನಗರದಲ್ಲಿ ನಡೆಯುತ್ತಿರುವ ಅನ್ಯಾಯಗಳನ್ನು ಸಹಿಸಿಕೊಳ್ಳುವುದಕ್ಕೆ ನಿರಾಕರಿಸುತ್ತಾನೆ. ಗೆಳೆಯ ನಡೆಸುತ್ತಿರುವ ಬಾರ್ ಮತ್ತು ತನ್ನ ಕುಟುಂಬದ ರಕ್ಷಣೆಗಾಗಿ ಎದ್ದು ನಿಲ್ಲುವ ಶಂಕರ್ ನನ್ನು, ಪೊಲೀಸರು ಭೂಗತ ಲೋಕವನ್ನು ಮಟ್ಟ ಹಾಕಲು ಬಳಸಿಕೊಳ್ಳುತ್ತಾರೆ. ನಂತರ ಅನಿವಾರ್ಯವಾಗಿ ಭೂಗತ ಲೋಕದ ದೊಡ್ಡ ದೊರೆಯಾಗಿ ಬೆಳೆಯುವ ಶಂಕರ್, ಚಕ್ರವರ್ತಿ ಆಗುವುದು ಹೇಗೆ? ನಂತರದ ಹಾದಿ ಸುಗಮವಾಗಿದೆಯೇ? 
ಭೂಗತ ಲೋಕ, ಅದರ ಜೊತೆಗಿನ ರಾಜಕೀಯ ನಂಟು, ಮುಗ್ಧನೊಬ್ಬ ಭೂಗತ ಲೋಕಕ್ಕೆ ಪ್ರವೇಶ ಪಡೆಯುವುದು, ಕೊನೆಗೆ ಅದರಲ್ಲಿ ಅವನೇ ರಾರಾಜಿಸುವುದು, ಭೂಗತ ಲೋಕದ ಜೊತೆಗಿನ ಭಯೋತ್ಪಾದಕರ ನಂಟು ಹೀಗೆ ಹಲವು ವಿಷಯಗಳನ್ನು ಸಿನೆಮಾ ಒಳಗೊಂಡಿದ್ದರು, ಇಡೀ ಕಥೆ ಅಥವಾ ಸನ್ನಿವೇಶಗಳು ಈಗಾಗಲೇ ನೂರಾರು ಭಾರತೀಯ-ಕನ್ನಡ ಸಿನೆಮಾಗಳಲ್ಲಿ ಕಂಡಿರುವವೇ. ಇಲ್ಲಿ ನಾಯಕ ನಟ ಸ್ವ-ಇಚ್ಛೆಯಿಂದ, ವ್ಯವಸ್ಥೆಗೆ ಹೆದರಿ ಕೂರದೆ ಹೋರಾಟದ ಮನೋಭಾವದಿಂದ, ತನ್ನ ಸೌಕರ್ಯಗಳನ್ನು ತೊರೆದು, ಕುಟುಂಬದ ಕಳವಳಕ್ಕೆ ಸಮಾಧಾನ ಹೇಳಿ ಭೂಗತ ಲೋಕವನ್ನು ಎದುರಿ ಹಾಕಿಕೊಳ್ಳುತ್ತಾನೆ ಎಂಬ ಅಂಶ ಆಪ್ತವಾಗಿದ್ದರು, ಕಥಾ ಹಂದರ, ಜರುಗುವ ಘಟನೆಗಳು ತುಂಬಾ ಪ್ರೆಡಿಕ್ಟೇಬಲ್ ಎಂದೆನಿಸಿ ನಿರಾಸೆ ಹುಟ್ಟಿಸುತ್ತದೆ. ಅಲ್ಲದೆ ಸಿನೆಮಾದ ಕೆಲವು ಸಂಗತಿಗಳನ್ನು ಮಾತಿನಿಂದಲೇ ಆಡಿಸಿ, ಅದಕ್ಕೆ ತಕ್ಕಂತಹ ಸಂದರ್ಭಗಳನ್ನು, ಘಟನೆಗಳನ್ನು ಸೃಷ್ಟಿಸದೆ ಬರವಣಿಗೆಯಲ್ಲಿ ವಿಫಲವಾಗಿರುವುದನ್ನು ಗೋಚರಿಸುತ್ತದೆ. (ಮಹಾರಾಜ ಎಂಬ ರೌಡಿ ನಗರಕ್ಕೆ ಭೀಕರ, ದುಃಸ್ವಪ್ನ ಎಂದೆಲ್ಲ ಮಾತಿನಲ್ಲೇ ಹೇಳಿಸುವ ನಿರ್ದೇಶಕ ಅವನನ್ನು ಹಿಡಿಯಲು ಪೊಲೀಸರು/ ವ್ಯವಸ್ಥೆ ಪ್ರಯತ್ನಿಸಿದ ಅಥವಾ ವಿಫಲವಾದ ಸಂದರ್ಭಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವುದಿಲ್ಲ)
ಎಂಭತ್ತರ ಅಂಚಿನಲ್ಲಿ ನಡೆಯುವ ಕಥೆ ಎಂದು ಹೇಳಿಕೊಳ್ಳುವ ಈ ಸಿನೆಮಾದ ಪಾತ್ರಗಳು ಆ ದಿನಗಳ ಭೂಗತ ಲೋಕದ ಕುಖ್ಯಾತರ ಹೆಸರುಗಳನ್ನು (ಜಯರಾಜ್, ಕುಮಾರ್ ಇತ್ಯಾದಿ) ನೆನಪಿಸಿದರೂ, ಅಂದಿನ ಘಟನೆಗಳಿಗೇನು ನಿಷ್ಠವಾಗಿಲ್ಲ. ಇತ್ತ ಪೂರ್ಣ ಕಾಲ್ಪನಿಕ ಎಂದು ಬಗೆದರೂ, ಒಂದು ಭೂಗತ ಲೋಕದ ಕಥೆಯಲ್ಲಿ ಇರಬೇಕಾದ ರೋಚಕತೆ, ಮುಂದೇನಾಗಬಹುದು ಎಂದು ಕುತೂಹಲ ಹುಟ್ಟಿಸಬೇಕಾದ ಸಂಗತಿಗಳು ಕೂಡ ಕಾಣದಾಗಿ, ಕೆಡುಕನ್ನು ಸಂಹರಿಸುವ ಒಳ್ಳೆಯ ಕಥಾನಾಯಕನ ಕಥೆಯಾಗಿಯಷ್ಟೇ ಕಂಡು ಬೇಸರ ಮೂಡಿಸುತ್ತದೆ. ಭೂಗತ ಲೋಕದೊಳಕ್ಕೆ ಹೊಕ್ಕಿದ ಮೇಲೆ ಅಲ್ಲಿಂದ ವಾಪಸಾಗಬೇಕು ಎಂಬ ಭಾವನೆಯ ಸಂಘರ್ಷವಾಗಲಿ, ಅಥವಾ ಕುಟುಂಬದ ಜೊತೆಗಿನ ಸಂಘರ್ಷ ಕೂಡ ಯಾವುವು ಆಳವಾಗಿ ಮೂಡಿಬಂದಿಲ್ಲ. ಪ್ರತಿಯೊಂದು ಘಟನೆಯನ್ನು ಸಂಭಾಷಣೆ/ಮಾತಿನ ಮೂಲಕ ಎಲ್ಲವನ್ನು ಅರ್ಥೈಸುವ ನಿರ್ದೇಶಕನ ರೀತಿ ಭೂಗತ ಲೋಕದ ಸಿನೆಮಾಗೆ ಪೂರಕವಾಗಿಲ್ಲ. ಹೀರೊ ವಿಜೃಂಭಣೆಗಾಗಿಯೇ ಕುದುರೆ ರೇಸ್, ಬಾಂಬೆ-ಮಲೇಷಿಯಾ ಭೂಗತ ಲೋಕ, ಭಯೋತ್ಪಾದನೆ ಇತ್ಯಾದಿಯಾಗಿ ಒಂದರ ನಂತರ ಒಂದು ವಿಷಯಗಳನ್ನು ತುರುಕುತ್ತಾ ಹೋಗುವ ಸಿನೆಮಾ ಸುದೀರ್ಘವಾಗಿ ಎಳೆದಂತೆ ಭಾಸವಾಗುತ್ತದೆ. 
ತಾಂತ್ರಿಕವಾಗಿಯೂ ಸಿನೆಮಾ ಉತ್ಕೃಷ್ಟತೆಯನ್ನು ಸಾಧಿಸಲು ಸಾಧ್ಯವಾಗಿಲ್ಲ. ಪ್ರತಿಯೊಂದು ದೃಶ್ಯವೂ ತುಂಬಾ ಬ್ರೈಟ್ ಆಗಿ ಚಿತ್ರೀಕರಣಗೊಂಡಿದ್ದು, ಉಡುಗೆ ತೊಡುಗೆಯನ್ನು ಹೊರತುಪಡಿಸಿದರೆ ೮೦ ರ ದಶಕಕ್ಕೆ ಪ್ರೇಕ್ಷಕನನ್ನು ಕೊಡೊಯ್ಯಲೂ ಸಿನೆಮಾಗೆ ಸಾಧ್ಯವಾಗಿಲ್ಲ. ಗ್ರಾಫಿಕ್ಸ್ ನ ಅತೀವ ಬಳಕೆ (ಹಡಗು ಸುಡುವುದು- ಹುಲಿ ಬೇಟೆ) ಕೂಡ ನೈಜವಾಗಿ ಮೂಡಿಬಂದಿಲ್ಲ. ಅರ್ಜುನ್ ಜನ್ಯ ಅವರ ಸಂಗೀತದಲ್ಲಿ ಮೂಡಿಬಂದಿರುವ ಒಂದೆರಡು ಹಾಡುಗಳು ಮನಸ್ಸಿಗೆ ಮುದ ನೀಡಿದರೂ, ಕಥೆಗೆ ಅಷ್ಟೇನೂ ಪೂರಕವಾಗದೆ ಸಿನೆಮಾವನ್ನು ಇನ್ನಷ್ಟು ಲಂಬಿಸಿವೆ. ನಟನೆಯಲ್ಲಿ ದರ್ಶನ್ ತಮ್ಮ ಅಭಿಮಾನಿಗಳನ್ನು ರಂಜಿಸಿದರೆ, ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಆದಿತ್ಯ ಚೊಕ್ಕವಾಗಿ ನಟಿಸಿದ್ದಾರೆ. ದೀಪ ಸನ್ನಿಧಿ, ಸೃಜನ್ ಲೋಕೇಶ್ ಇತ್ಯಾದಿ ನಟರು ಕೂಡ ಸಣ್ಣ ಪಾತ್ರಗಳಲ್ಲಿ ಚೊಕ್ಕ ನಟನೆ ನೀಡಿದ್ದಾರೆ. ನಟನೆಗೆ ಪಾದಾರ್ಪಣೆ ಮಾಡಿರುವ ದಿನಕರ್ ಅವರು ಇನ್ನಷ್ಟು ಮಾಗಬೇಕಿದೆ. 
ನಿರ್ದೇಶಕ ಚಿಂತನ್ ತಾವೇ ಹೇಳಿಕೊಂಡಿದ್ದಂತೆ ನಾಯಕನಟನ ಆರಾಧನೆಯನ್ನು ತೆರೆಯ ಮೇಲೆ ಭರ್ಜರಿಯಾಗಿ ಮಾಡಿದ್ದರೂ, ಹೇಳುತ್ತಿರುವ ಕಥೆಯಲ್ಲಿ, ಹೆಣೆದ ಘಟನೆಗಳಲ್ಲಿ, ಪೋಣಿಸಿದ ರೀತಿಯಲ್ಲಿ (ನಿರೂಪಣೆಯಲ್ಲಿ) ಒಂದಷ್ಟು ತಾಜಾತನವನ್ನೋ, ಒಂದಷ್ಟು ರೋಚಕತೆಯನ್ನೋ, ಒಂದಷ್ಟು ಕುತೂಹಲಭರಿತ ತಿರುವುಗಳನ್ನೋ ಕಟ್ಟಿಕೊಡಲು ಸಾಧ್ಯವಾಗಿದ್ದರೆ ಸಿನೆಮಾ ಅಭಿಮಾನಿಗಳಿಗಷ್ಟೇ ಅಲ್ಲದೆ ಇತರ ಪ್ರೇಕ್ಷಕರಿಗೂ ಆಪ್ತವಾಗುತ್ತಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com