ಅತಿ ಒಳ್ಳೆತನದ ಉಪದೇಶಗಳ 'ರಾಗ'ಲಾಪನೆಯಲ್ಲಿ ನೈಜತೆಯ ಕೊರತೆ

ಅಂಧವ್ಯಕ್ತಿಗಳ ಪ್ರೇಮಕಥೆ ಇದು ಎಂಬ ಗುಟ್ಟು ಬಿಟ್ಟುಕೊಟ್ಟಿತ್ತು ಪಿ ಸಿ ಶೇಖರ್ ನಿರ್ದೇಶನದ 'ರಾಗ' ಸಿನೆಮಾದ ಟ್ರೇಲರ್. ಸಂಗೀತಮಯ ಎಂದು ಕೂಡ ಬಣ್ಣಿಸಲಾಗಿದ್ದ ಈ ಸಿನೆಮಾ ಬಗ್ಗೆ ಸಹಜ
ರಾಗ ಸಿನೆಮಾ ವಿಮರ್ಶೆ
ರಾಗ ಸಿನೆಮಾ ವಿಮರ್ಶೆ
ಅಂಧವ್ಯಕ್ತಿಗಳ ಪ್ರೇಮಕಥೆ ಇದು ಎಂಬ ಗುಟ್ಟು ಬಿಟ್ಟುಕೊಟ್ಟಿತ್ತು ಪಿ ಸಿ ಶೇಖರ್ ನಿರ್ದೇಶನದ 'ರಾಗ' ಸಿನೆಮಾದ ಟ್ರೇಲರ್. ಸಂಗೀತಮಯ ಎಂದು ಕೂಡ ಬಣ್ಣಿಸಲಾಗಿದ್ದ ಈ ಸಿನೆಮಾ ಬಗ್ಗೆ ಸಹಜ ಕುತೂಹಲಗಳು ಇದ್ದವು. ದೃಷ್ಟಿ ದೋಷವುಳ್ಳ ವ್ಯಕ್ತಿಗಳ ಸಮಾಜದ ಅನಾವರಣ ಆಗಬಹುದೇನೋ, ಅವರ ಒಳತುಡಿತಗಳ, ಮಾನಸಿಕ ತಲ್ಲಣಗಳ ಬಗ್ಗೆ ಸಿನೆಮಾ ಕನ್ನಡಿ ಹಿಡಿಯಬಹುದೇನೋ ಎಂಬ ನಿರೀಕ್ಷೆಗಳು ಕೂಡ ಇದ್ದವು. ಕನಿಷ್ಠ ಒಂದು ಉತ್ತಮ ತಾಜಾ ಪ್ರೇಮಕಥೆಯಾಗಿಯಾದರು ಹೊರಹೊಮ್ಮಿರಬಹುದೆಯೆಂಬ ಕುತೂಹಲವು ಇತ್ತು. ಕೊನೆಗೆ ಪ್ರೇಕ್ಷಕರಿಗೆ ದಕ್ಕಿದು ಏನು? 
"ದೃಷ್ಟಿ ಇರದೇ ಇರುವವರು ಕುರುಡರಲ್ಲ, ಬದಲಾಗಿ ದೂರದೃಷ್ಟಿ ಇರದೇ ಇರುವವರು ಕುರುಡರು" ಎಂದು ಸಿನೆಮಾದ ಸನ್ನಿವೇಶವೊಂದರಲ್ಲಿ ಸಂಭಾಷಣೆ ಉಲಿಯುವ ನಾಯಕಪಾತ್ರ ಮಿತ್ರ (ಮಿತ್ರ), ಅಂತಹ ದೂರದೃಷ್ಟಿಯುನ್ನು ಸ್ವತಃ ಉಳ್ಳವನು. ಜನರ ಚಲನವಲನಗಳಲ್ಲೇ, ವಾಸನೆಗಳಲ್ಲಿಯೇ ಅವರ ಮನಸ್ಸಿನ ಭಾವನೆಗಳನ್ನು, ಕೃತ್ರಿಮತೆಗಳನ್ನು, ದುಗಡಗಳನ್ನು ಅರಿತು ಅವರಿಗೆ ಸರ್ವ ರೀತಿಯಲ್ಲಿಯೂ ಉಪದೇಶಗಳನ್ನು ನೀಡುವ ಮಿತ್ರನಿಗೆ ದೃಷ್ಟಿಯ ಕೊರತೆಯೊಂದನ್ನು ಹೊರತುಪಡಿಸಿದರೆ, ಸಂಪೂರ್ಣ ಒಳ್ಳೆಯತನವನ್ನು ಮೈಗೂಡಿಸಿಕೊಂಡಿರುವ ಆದರ್ಶ ವ್ಯಕ್ತಿತ್ವ. ಈ ವ್ಯಕ್ತಿ ಅನು (ಭಾಮಾ) ಎಂಬ ಅಂಧ ಯುವತಿ, ಜೀವನದಲ್ಲಿ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಆಸ್ಪತ್ರೆಯೊಂದರಲ್ಲಿ ಬೆದರಿಕೆ ಹಾಕುವಾಗ, ಅಲ್ಲಿ ಪ್ರತ್ಯಕ್ಷವಾಗಿ ಹಿರೋಯಿಕ್ ಶೈಲಿಯಲ್ಲಿ ಅವಳನ್ನು ಉಳಿಸುತ್ತಾನೆ. ನಂತರ ಇಬ್ಬರಲ್ಲೂ ಅನುರಾಗ ಬೆಳೆಯುತ್ತದೆ. ಆದರೆ ಇದಕ್ಕೆ ಅಡ್ಡಿಗಳಿಲ್ಲವೇ? 
ಮೇಲ್ನೋಟಕ್ಕೆ ಅಂಧ ವ್ಯಕ್ತಿಗಳ ರೋಚಕ ಪ್ರೇಮಕಥೆಯಂತೆ ಕಂಡರೂ, ಪ್ರತಿ ಪಾತ್ರ, ಪ್ರತಿ ಘಟನೆ ಎಲ್ಲವುಗಳ ರಾಗ-ದ್ವೇಷಗಳು ಪ್ಲಾಸ್ಟಿಕ್ ಭಾವನೆಗಳಂತೆ ಮೂಡಿರುವುದು ನಿರಾಸೆ ಮೂಡಿಸುತ್ತದೆ. ದೃಷ್ಟಿ ದೋಷವುಳ್ಳ ಒಬ್ಬ ವ್ಯಕ್ತಿಯ ಜೀವನದಲ್ಲಿ ಇರುವ ಸವಾಲುಗಳನ್ನು ಹಿಡಿಯುವಂತಹ ಪಾತ್ರವನ್ನು ಸೃಷ್ಟಿಸಲು ನಿರ್ದೇಶಕ ಇಲ್ಲಿ ವಿಫಲರಾಗಿ, ಒಂದು ರೋಮಾಂಟಿಸೈಸ್ಡ್ ನೋಟವನ್ನಷ್ಟೇ ಕಟ್ಟಿಕೊಟ್ಟಿದ್ದಾರೆ. ಅಂಧ ವ್ಯಕ್ತಿಯ ಸುತ್ತ ಸೃಷ್ಟಿಸುವ ಪರಿಸರ, ಎರಡು ಮೂರೂ ದಶಕಗಳ ಹಿಂದಿನದ್ದು ಎಂಬಂತೆ ಬಿಂಬಿಸುವ (ಉಡುಗೆ ತೊಡುಗೆ, ಉಪಕರಣಗಳು) ನಿರ್ದೇಶಕ, ಎಲ್ಲವನ್ನು ಪೇಂಟಿಂಗ್ ರೀತಿಯಲ್ಲಿ ಸುಂದರವಾಗಿಸುವುದಕ್ಕೆ ನಿಷ್ಠರಾಗಿದ್ದಾರೆ. ಮಿತ್ರನ ಮನೆ ಕೂಡ ಅಚ್ಚುಕಟ್ಟಾಗಿ, ಸ್ವಲ್ಪವೂ ತೊಂದರೆಗಳಿಲ್ಲದೆ, ಗಿಡಗಳು ಹೂವುಗಳಿಂದ ತುಂಬಿನ ನಂದನವನದನಂತೆ ಕಾಣುವ ಜಾಗ. ಅವನ ಸುತ್ತಮುತ್ತಲಿನ ಪರಿಸರವು ಅಷ್ಟೇ. ಒಬ್ಬ ದೃಷ್ಟಿದೋಷವುಳ್ಳ ವ್ಯಕ್ತಿ ಸಹಜವಾಗಿ ಅನುಭವಿಸುವ ತೊಂದರೆಗಳು, ಕಷ್ಟ ಕಾರ್ಪಣ್ಯಗಳಿಗೆ ಅನಗತ್ಯವಾಗಿ ಕಣ್ಣುಮುಚ್ಚಿಕೊಂಡು ಇಂತಹ ಪಾತ್ರ ಸೃಷ್ಟಿಸುವ ಇರಾದೆ ಪ್ರೇಕ್ಷಕನಿಗೆ ಅರ್ಥವಾಗುವುದೇ ಇಲ್ಲ. ಪ್ರತಿ ಸಮಯದಲ್ಲಿಯೂ ಮಿತ್ರ ಎಲ್ಲರಿಗು ಒಳ್ಳೆಯದನ್ನೇ ಭೋದಿಸುವ ದೃಶ್ಯಗಳು ತೀವ್ರ ವಾಚಾಳಿಯೆಂದೆನಿಸಿ ಬೇಸರಿಸುತ್ತವೆ. ಇವುಗಳ ನಡುವೆ "ಮೂರೂ ಜಡೆಗಳನ್ನು ಒಟ್ಟಿಗೆ ಸೇರಿಸಲು ಸಾಧ್ಯವಿಲ್ಲ" ಎಂಬ ಕೆಟ್ಟ ಸಂಭಾಷಣೆಯನ್ನು ಕೇಳಿಸಿಕೊಳ್ಳುವ ದೌರ್ಭಾಗ್ಯ ಪ್ರೇಕ್ಷಕನದ್ದು.
ಇನ್ನುಳಿದ ಪಾತ್ರಗಳು ಕೂಡ ಇಂತಹದ್ದೇ ತೊಂದರೆಗಳಿಂದ ಕೂಡಿವೆ. ಶಸ್ತ್ರಚಿಕಿತ್ಸೆಯಿಂದ ದೃಷ್ಟಿಪಡೆಯುವ ಅನು, ನಂತರವೂ ಮಿತ್ರನನ್ನು ಪ್ರೀತಿಸಿದರೆ, ಇದಕ್ಕೆ ಅಡ್ಡಿ ಬರುವುದು ಅವಳ ಸ್ಥಿತಿವಂತ ತಂದೆ (ಅವಿನಾಶ್). ಈ ಸಂಘರ್ಷ ಕೂಡ ಪ್ರೇಕ್ಷಕನ ಮನಸ್ಸನ್ನು ನಾಟುವುದಿಲ್ಲ. "ಮಿತ್ರ ನೋಡುವುದಕ್ಕೆ ಚೆನ್ನಾಗಿಲ್ಲದಿದ್ದರೆ, ಪಾರ್ಲರ್ ಗೆ ಕರೆದೊಯ್ದು ಸರಿ ಮಾಡುತ್ತೇನೆ" ಎಂದು ಅನು ತಂದೆಗೆ ಹೇಳುವ ಮಾತುಗಳು ಹಾಸ್ಯಾಸ್ಪದಕ್ಕೂ ತುಸು ಕೆಳಗೆ ನಿಲ್ಲುತ್ತವೆ. ಹೀಗೆ ಮಿತ್ರನ ಒಳ್ಳೆಯತನದ ಮೈಲೇಜಿನಲ್ಲೇ ಕಥೆ ಮುಂದುವರೆದು ಅಂತ್ಯ ಕಾಣುವ ಹೊತ್ತಿಗೆ ಪ್ರೇಕ್ಷಕನ ನಿರೀಕ್ಷೆಗಳೆಲ್ಲ ಕುಸಿದು ನೆಲಕಚ್ಚಿರುತ್ತವೆ. 
ಎಲ್ಲ ನಟರು ಅತಿ ಭಾವುಕತೆಯಲ್ಲಿ ತಮ್ಮ ಕೈಲಾದ್ದನ್ನು ನಟಿಸಿದ್ದಾರೆ. ಮಿತ್ರ, ಭಾಮಾ ಅಂಧರ ಪಾತ್ರದಲ್ಲಿ ಇನ್ನಷ್ಟು ಸಹಜವಾಗಿ ನಟಿಸಬಹುದಿತ್ತು ಎಂದೆನಿಸದೆ ಇರದು. ತಂದೆಯ ಪಾತ್ರದಲ್ಲಿ ಅವಿನಾಶ್, ಚಾಲಕನ ಪಾತರದಲ್ಲಿ ರಮೇಶ್ ಭಟ್ ಅವರದ್ದು ಕೂಡ ಅತಿಭಾವುಕ ನಟನೆ. ತಾಂತ್ರಿಕವಾಗಿ ಸಿನೆಮಾ ಯಾವುದೇ ಮೋಡಿ ಮಾಡುವುದಿಲ್ಲ. ಎಲ್ಲವನ್ನು ಸುಂದರವಾಗಿ ಕಾಣಿಸಲು ಪ್ರಯತ್ನಿಸಿರುವ ಕಲಾ ನಿರ್ದೇಶಕ- ಛಾಯಾಗ್ರಾಹಕ ಜೋಡಿ, ಒಂದು ಮಟ್ಟಕ್ಕೆ ೨-೩ ದಶಕಗಳ ಹಿಂದಿನ ವಾತಾರವಣವನ್ನು ಸೃಷ್ಟಿಸಲು ಪ್ರಯತ್ನಿಸಿದ್ದರೂ, ಇಡೀ ಸಿನೆಮಾಗೆ ಆ ಸೌಂದರ್ಯವೇ ಭಾರವಾಗಿ ಕಾಣಿಸುತ್ತದೆ. ಸಂಗೀತಮಯ ಎಂದು ಹೇಳಿಕೊಂಡಿದ್ದರು, ಅರ್ಜುನ್ ಜನ್ಯ ಸಂಗೀತದಲ್ಲಿ ಮೂಡಿ ಬಂದಿರುವ ಹಾಡುಗಳು ಸಿನೆಮಾ ಕಥೆಗೆ ಅಷ್ಟೇನೂ ಸಹಕರಿಸದೆ, ಮೂಡಿ ಮಾಯವಾಗುತ್ತವೆ. 
ಕಥೆಯ ರಚನೆಯಲ್ಲಿ ಅಷ್ಟೇನೂ ತಾಜಾತನವಿರದೆ, ಅಂಧರ ಲೋಕವನ್ನು ಕಟ್ಟಿಕೊಡುವ ತೀವ್ರತೆ/ಬದ್ಧತೆ ಇರದೆ, ಬಲವಂತದ ಭಾವುಕತೆಯಲ್ಲಿ, ಒಳ್ಳೆತನದ ಉಪದೇಶಗಳನ್ನು ಮೆರೆಸಲೆಂದೇ, ಎಲ್ಲವನ್ನು ಸುಂದರವಾಗಿ ಕಾಣಿಸುವ ಕೃತಕ ಪರಿಸರದಲ್ಲಿ ಸಿನೆಮಾ ಮೂಡಿಸಿರುವ ನಿರ್ದೇಶಕ ಪಿ ಸಿ ಶೇಖರ್ ಅವರ ಈ ಸೃಷ್ಟಿ ಪ್ರೇಕ್ಷಕನ ಆಳಕ್ಕೆ ಇಳಿಯದೆ ಮೇಲ್ಮಟ್ಟದಲ್ಲೇ ಮಾಯವಾಗುತ್ತದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com