ಮಹತ್ವಕಾಂಕ್ಷೆಯ ಯಾನ; ವಿಮಾನದಲ್ಲಿ ತಾಂತ್ರಿಕ ದೋಷ

ಮಾಡದ ತಪ್ಪಿಗೆ ಜೈಲು ಸೇರುವ ಮುಗ್ಧ ವ್ಯಕ್ತಿ ಅನಂತರಾಮಯ್ಯನ(ರಮೇಶ್) ಬಗ್ಗೆ ಕಾನೂನು ಮತ್ತು ನ್ಯಾಯಾಲಯ ಕುರುಡಾಗುತ್ತದೆ. ಮಾನಸಿಕ ಬೆಳವಣಿಗೆಯಿಲ್ಲದ ಈ ವ್ಯಕ್ತಿಯ ಬಗ್ಗೆ ಹೊರಜಗತ್ತು ತಾತ್ಸಾರ
ಪುಷ್ಪಕ ವಿಮಾನ ಸಿನೆಮಾ ವಿಮರ್ಶೆ
ಪುಷ್ಪಕ ವಿಮಾನ ಸಿನೆಮಾ ವಿಮರ್ಶೆ
ಮಾಡದ ತಪ್ಪಿಗೆ ಜೈಲು ಸೇರುವ ಮುಗ್ಧ ವ್ಯಕ್ತಿ ಅನಂತರಾಮಯ್ಯನ(ರಮೇಶ್) ಬಗ್ಗೆ ಕಾನೂನು ಮತ್ತು ನ್ಯಾಯಾಲಯ ಕುರುಡಾಗುತ್ತದೆ. ಮಾನಸಿಕ ಬೆಳವಣಿಗೆಯಿಲ್ಲದ ಈ ವ್ಯಕ್ತಿಯ ಬಗ್ಗೆ ಹೊರಜಗತ್ತು ತಾತ್ಸಾರ ತಳೆಯುತ್ತದೆ ಮತ್ತು ಮಾನಸಿಕ ಅಸ್ವಸ್ಥತೆಯಿಂದ ಹುಟ್ಟುವ ಭಯ ಅವನ ವಿರುದ್ಧ ಪಿತೂರಿ ಮಾಡುತ್ತದೆ. ಮುದ್ದಿನ ಮಗಳು ಪುಟ್ಟು (ಬಾಲನಟಿ ಯುವಿನ ಪಾರ್ಥವಿ) ಜೊತೆಗಿನ ತೀವ್ರ ಪ್ರೀತಿ, ಮತ್ತು ಮುಗ್ಧ-ಜಾಗೃತ-ಒಳ್ಳೆಯ ಮನಸ್ಸು ಜೈಲಿನಲ್ಲಿ ಪವಾಡ ಸೃಷ್ಟಿಸುತ್ತದೆ. ಜೈಲಿನಲ್ಲಿ ತನ್ನ ಸುತ್ತಲಿರುವ ತಪ್ಪಿತಸ್ಥರು, ವಾರ್ಡನ್ ಗಳಿಗೆ ಅನುಕಂಪ ಮೂಡುವ ರೀತಿಯಲ್ಲಿ ಒಂದರ ನಂತರ ಮತ್ತೊಂದು ಘಟನೆಗಳು ಸಂಭವಿಸುತ್ತವೆ. ಈ ಪವಾಡದಿಂದ ತನ್ನ ಮಗಳ ಜೊತೆಗೆ ಸಮಯ ಕಳೆಯಲು ಸಾಧ್ಯವಾದರೂ, ವಿಧಿ ವಿಪರೀತ ತನ್ನ ಆಟವನ್ನು ಬದಲಾಯಿಸುವುದೇ?
ಕೊರಿಯಾ ಭಾಷೆಯ 'ಮಿರಾಕಲ್ ಇನ್ ಸೆಲ್ ನಂ ೭' ಎಂಬ ಸಿನೆಮಾವನ್ನು ಹೆಚ್ಚು ಕಡಿಮೆ ಯಾವುದೇ ಬದಲಾವಣೆಗಳಿಲ್ಲದೆ ಕನ್ನಡಕ್ಕೆ ತಂದಿರುವ ನಿರ್ದೇಶಕ ಎಸ್ ರವೀಂದ್ರನಾಥ್ ಮತ್ತು ನಟ ರಮೇಶ್ ಅರವಿಂದ್ ಅವರ ಮಹತ್ವಕಾಂಕ್ಷೆ ದೊಡ್ಡದಾದರೂ, ಅದರ ನಿರ್ವಹಣೆ ಮಾಡಿರುವ ರೀತಿ ಮಾತ್ರ ನಿರಾಸೆ ಮೂಡಿಸುತ್ತದೆ. 
ಮಾನಸಿಕ ಅಸ್ವಸ್ಥರು ಎದುರಿಸಬೇಕಾದ ಸಮಾಜದ ತಾರತಮ್ಯ, ವಿಷಣ್ಣ ಮನೋಭಾವದ ಬಗ್ಗೆ ಮಹತ್ವದ ಪ್ರಶ್ನೆ ಎತ್ತುವ ಸಿನೆಮಾ, ಅದನ್ನು ಪರಿಣಾಮಕಾರಿಯಾಗಿ ದಾಟಿಸುವಲ್ಲಿ ವಿಫಲವಾಗಿದೆ. ಅಪ್ಪ ಅಂತಾರಾಮಯ್ಯ ಮತ್ತು ಪುತ್ರಿ ಪುಟ್ಟುವಿನ ಭಾವುಕತೆಯ ಸಂಬಂಧ ಮತ್ತು ಅದಕ್ಕೆ ಇತರರು ಸಹಕರಿಸುವ ಸಂಗತಿಗಳ ನಡುವೆಯೂ ಸುತ್ತುವ ಸಿನೆಮಾ, ಆ ಸಂಬಂಧವನ್ನು ಮತ್ತು ಅದರ ಸುತ್ತಮುತ್ತಲಿನ ಪರಿಸರವನ್ನು ಇನ್ನಷ್ಟು ಆಪ್ತವಾಗಿ ಎಸ್ಟಾಬ್ಲಿಶ್ ಮಾಡಿದ್ದರೆ, ಇದು ಒತ್ತಾಯಪೂರ್ವಕವಾಗಿ ಕಾಣುವುದರಿಂದ ತಪ್ಪಿಸಿಕೊಳ್ಳಬಹುದಿತ್ತೇನೋ! ಎಲ್ಲವು ಅವಸರವಾಗಿ ಮುನ್ನುಗ್ಗುವಂತೆ ಭಾಸವಾಗುವ ನಿರೂಪಣೆ, ಕೆಲವು ನಿರ್ಣಾಯಕ ಸನ್ನಿವೇಶಗಳನ್ನು ತೇಲಿಸಿ ಮುಂದುವರೆದುಬಿಡುತ್ತದೆ. ಉದಾಹರಣೆಗೆ, ಸಹಜೈಲುವಾಸಿಗಳ ಸಹಾಯದಿಂದ ಪುಟ್ಟುವನ್ನು ಜೈಲಿನೊಳಗೆ ಕರೆತರುವ ಸನ್ನಿವೇಶದಲ್ಲಿ ಕಾಣಬೇಕಿದ್ದ ಉದ್ವೇಗ ಇಲ್ಲವಾಗಿಬಿಡುತ್ತದೆ. ಜೈಲರ್, ಪುಟ್ಟುವನ್ನು ದತ್ತು ಸ್ವೀಕರಿಸಿ ಸಾಕುವ ಪ್ರಸಂಗ ಕೂಡ ಬಹಳ ತೆಳುವಾಗಿ ಹೆಣೆಯಲಾಗಿದ್ದು, ಅದಕ್ಕೆ ಅಗತ್ಯವಾಗಿದ್ದ ಗಂಭೀರತೆ ಮಾಯವಾಗಿಬಿಡುತ್ತದೆ. ಅಥವಾ ಇಂತಹ ಪ್ರಶ್ನೆಗಳು ಪ್ರೇಕ್ಷಕರ ಮನದಲ್ಲಿ ಮೂಡದಂತೆ, ಅವುಗಳನ್ನು ಮರೆಸುವಂತೆ, ಕಥೆಯನ್ನು ನಿರೂಪಿಸುವಲ್ಲಿ ನಿರ್ದೇಶಕನಿಗೆ ಸಾಧ್ಯವಾಗಿಲ್ಲ. ಕೊರಿಯಾ ಭಾಷೆಯ ಸಿನೆಮಾದಿಂದ ಎಲ್ಲ ಫ್ರೇಮ್ ಗಳನ್ನು ಹಾಗೆಯೇ ಭಟ್ಟಿ ಇಳಿಸುವ ಇರಾದೆ ಕೂಡ ಇದಕ್ಕೆ ಅಡ್ಡಿಪಡಿಸಿರಲಿಕ್ಕೂ ಸಾಕು. 
ಸಿನೆಮಾದ ಸಂಭಾಷಣೆಯಲ್ಲಿ ಬಹುತೇಕ ಕಡೆ ಮೂಲವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದರು, ಜೈಲು ಪರಿಸರದಲ್ಲೂ ಮೂಡುವ ಸಂಭಾಷಣೆ ಕೆಲವೊಮ್ಮೆ ಅತಿರೇಕ ಎಂದೆನಿಸಿ ಗಂಭೀರತೆಗೆ ಅನಗತ್ಯವಾಗಿ ತೊಡಕಾಗುತ್ತದೆ. ಮುಗ್ಧರ, ಹಕ್ಕು-ಅನುಕೂಲ ವಂಚಿತ ಸಂತ್ರಸ್ತರ ಬಗ್ಗೆ ಇತರರಿಗೆ ಮಾನವೀಯತೆ, ಅನುಕಂಪ ಮೂಡಬೇಕು ಎಂಬ ಉದಾತ್ತವಾದಕ್ಕೆ ಕಥೆ ಕಟಿಬಿದ್ದಿದ್ದರು, ಅದಕ್ಕಾಗಿ ಇನ್ನಷ್ಟು ಆಪ್ತತೆಯ ಘಟನೆಗಳನ್ನು ಸೃಷ್ಟಿಸಬಹುದಿತ್ತೇನೋ. ತನ್ನ ಅನುಕೂಲಕ್ಕೆ ಒದಗಿದಾಗ ಮಾತ್ರವೇ ಮನುಷ್ಯನಲ್ಲಿ ಅನುಕಂಪ-ಮಾನವೀಯತೆ ಮೂಡುತ್ತದೆ ಎಂದು ಸೂಚಿಸುವ ದೃಷ್ಟಾಂತಗಳಿಗೆ ನಿರ್ದೇಶಕ ಮೊರೆ ಹೋಗಿದ್ದಾರೆ. 
ಮನೋರೋಗದಿಂದ ಬಳಲುವ ವ್ಯಕ್ತಿ ಮತ್ತು ಅವನನ್ನು ಸಮಾನವಾಗಿ ಸ್ವೀಕರಿಸದ ಸಮಾಜ-ಪರಿಸರವನ್ನು ಸೃಷ್ಟಿಸುವಾಗ, ಸುತ್ತಲಿನ ಪರಿಕರಗಳನ್ನು ಉಪಯೋಗಿಸುಕೊಳ್ಳುವ ರೀತಿ ಬಹು ಮುಖ್ಯ ಪಾತ್ರವಹಿಸುತ್ತದೆ. ಇಲ್ಲಿ ನಿರ್ದೇಶಕರಿಗೆ ಎಲ್ಲವನ್ನು ಆಕರ್ಷಕವಾಗಿ-ಮನಮೋಹಿಸುವಂತೆ ತೋರಿಸುವ ತವಕ. ಆಟದ ವಿಮಾನವನ್ನು ಕೊಂಡುಕೊಳ್ಳಲು ಪೈಸೆ ಪೈಸೆ ಕೂಡಿಡುವ ಅಪ್ಪ-ಮಗಳು ಮಲಗುವ ಹಾಸಿಗೆ ಮಾತ್ರ ಸುಸಜ್ಜಿತವಾಗಿದೆ, ದೊಡ್ಡದಾಗಿ ಆಕರ್ಷಕವಾಗಿದೆ. ಜೈಲು ಕೊಠಡಿಯಲ್ಲಿ ಸೆರೆವಾಸಿಗಳು ಗಟ್ಟಿಮುಟ್ಟಾದ ಟೇಬಲ್ ಸುತ್ತ ಕುಳಿತು ಊಟ ಮಾಡುತ್ತಾರೆ. ಸಣ್ಣಪುಟ್ಟವಾದರೂ ಇಂತಹ ವಿವರಗಳ ಬಗ್ಗೆ ಹೆಚ್ಚು ಗಮನಹರಿಸದೆ, ಪೂರಕ ಪರಿಸರವನ್ನು ಆದಷ್ಟು ನೈಜವಾಗಿ ಕಟ್ಟಿಕೊಡಲು ಸಾಧ್ಯವಾಗದೆ ಹೋಗಿರುವುದು ಕೂಡ  ಕಥೆಗೆ ವಿರುದ್ಧವಾಗಿ ಕೆಲಸ ಮಾಡಿದೆ. 
ನಟನೆ ಇಲ್ಲಿ ಮಿಶ್ರ ಪ್ರತಿಕ್ರಿಯೆ ಮೂಡಿಸುತ್ತದೆ. ಬುದ್ಧಿಮಾಂಧ್ಯನ ಪಾತ್ರದಲ್ಲಿ ನಟಿಸಲು ಜನಪ್ರಿಯ ನಟ ರಮೇಶ್ ಅರವಿಂದ್ ಮುಂದಾಗಿರುವುದು ಪ್ರಶಂಸನೀಯ. ಆದರೆ ಎಲ್ಲೋ ಮತ್ತೆ ಒತ್ತಾಯಪೂರ್ವಕವಾಗಿ ನಟಿಸಿದ್ದಾರೇನೋ ಎಂಬ ಸಂದೇಹ ಉಳಿದುಬಿಡುತ್ತದೆ. ಬಾಲ ನಟಿ ಯುವಿನಾ ಪಾರ್ಥವಿ ಪಾತ್ರವನ್ನು ಇನ್ನಷ್ಟು ಪಕ್ವಗೊಳಿಸಿ, ತುಸು ತುಂಟತನ, ಇನ್ನು ಹೆಚ್ಚು ಮುಗ್ಧತೆಯನ್ನು ಆರೋಪಿಸಬಹುದಿತ್ತೇನೋ! ಜೈಲರ್ ಪಾತ್ರದಲ್ಲಿ ರವಿ ಕಾಳೆ ಮೌಲ್ಯ ತುಂಬಿದ್ದಾರೆ. ಚರಣ್ ರಾಜ್ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಸಂದರ್ಭೋಚಿತವಾಗಿ ಮೂಡಿವೆ. ಜೂಹಿ ಚಾವ್ಲಾ ಕಾಣಿಸಿಕೊಂಡಿರುವ 'ಜಿಲ್ಕಾ ಜಿಲ್ಕಾ' ಹಾಡಿನ ಹಿಂದಿ ಮಿಶ್ರಿತ ಸಾಹಿತ್ಯ ಅನಗತ್ಯವಾಗಿತ್ತೇನೋ! ರಚಿತಾ ರಾಮ್ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಾರೆ. 
ಉದಾತ್ತ ವಿಷಯವೊಂದನ್ನು, ಭಾವನಾತ್ಮಕ ಸಂಬಂಧವನ್ನು ತೆರೆಗೆ ತರುವ ವಿಚಾರದಿಂದ, ಕೊರಿಯನ್ ಸಿನೆಮಾವನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕ ಎಸ್ ರವೀಂದ್ರನಾಥ್, ಮೂಲಕ್ಕೆ ನಿಷ್ಠನಾಗಿರುವ ಹಠದಿಂದಲೋ ಏನೋ, ಇಲ್ಲಿನ ಸಮಯಕ್ಕೆ, ಸಂದರ್ಭಕ್ಕೆ, ಇಲ್ಲಿನ ಸಮಾಜಕ್ಕೆ ಅದನ್ನು ಪರಿಣಾಮಕಾರಿಯಾಗಿ ಒಗ್ಗಿಸಿಕೊಳ್ಳಲು ಸಾಧ್ಯವಾಗದೆ, ನಟನೆಯಲ್ಲಿ ಅತ್ಯುತ್ತಮವಾದದ್ದನ್ನು ಹೊರತೆಗೆಯಲು ಸಾಧ್ಯವಾಗದೆ, ತೀವ್ರ ಭಾವನೆಗಳನ್ನು ಕೆರಳಿಸುವ ಒಂದೇ ಉದ್ದೇಶದಿಂದ ಎಲ್ಲೋ ಪ್ರೇಕ್ಷಕರಲ್ಲಿ ಪ್ರಶ್ನಾರ್ಥಕ ಮತ್ತು ನಿರಾಶೆಯ ಭಾವವನ್ನು ಉಳಿಸಿಬಿಡುತ್ತಾರೆ. 
-ಗುರುಪ್ರಸಾದ್
guruprasad.n@kannadaprabha.com

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com