ಬಯಲು ಬಯಲಾಗಿ ಸಿನೆಮಾವಾಗಿ..

೧೨ನೆ ಶತಮಾನದ ಕನ್ನಡನಾಡಿನ ಅನುಭಾವಿ-ಸಂತ-ವಚನಕಾರ ಅಲ್ಲಮ ಕನ್ನಡ ಸಾಹಿತ್ಯಕ್ಕೆ, ಭಕ್ತಿ ಪಂಥದ ಚಳುವಳಿಗೆ ನೀಡಿರುವ ಕೊಡುಗೆ ಅತಿ ವಿಶಿಷ್ಟವಾದದ್ದು ಮತ್ತು ಒಂದು ರೀತಿ ಒಗಟಿದ್ದಂತೆ ಕೂಡ.
ಅಲ್ಲಮ ಸಿನೆಮಾ ವಿಮರ್ಶೆ
ಅಲ್ಲಮ ಸಿನೆಮಾ ವಿಮರ್ಶೆ
೧೨ನೆ ಶತಮಾನದ ಕನ್ನಡನಾಡಿನ ಅನುಭಾವಿ-ಸಂತ-ವಚನಕಾರ ಅಲ್ಲಮ ಕನ್ನಡ ಸಾಹಿತ್ಯಕ್ಕೆ, ಭಕ್ತಿ ಪಂಥದ ಚಳುವಳಿಗೆ ನೀಡಿರುವ ಕೊಡುಗೆ ಅತಿ ವಿಶಿಷ್ಟವಾದದ್ದು ಮತ್ತು ಒಂದು ರೀತಿ ಒಗಟಿದ್ದಂತೆ ಕೂಡ. ಅಂದಿನ ಇತರ ವಚನಕಾರರಿಗೆ ಹೋಲಿಸಿದಾಗಲೂ, ಅಲ್ಲಮನ ಜೀವನ ಮತ್ತು ಕೃತಿಗಳು ಒಂದು ಸ್ಥರದಲ್ಲಿ ನಿಗೂಢವಾಗಿರುವವೇ ಮತ್ತು ವಿವಿಧ ಓದುಗಳಲ್ಲಿ ವಿವಿಧ ಅರ್ಥವನ್ನು ಮೂಡಿಸುವಂತವು. ಆದುದರಿಂದ ಅಲ್ಲಮನ ಆಧ್ಯಾತ್ಮದ ಅರಿವನ್ನು ಪಡೆಯಲು, ಇಂದಿನ ದಿನಕ್ಕೆ ಅವನ ವಚನಗಳನ್ನು ಅರ್ಥೈಸಿಕೊಳ್ಳಲು ಕನ್ನಡ ನಾಡಿನ ಜನ ಶ್ರಮಿಸುತ್ತಲೇ, ನಿರ್ವಚಿಸುತ್ತಲೇ ಬಂದಿದ್ದಾರೆ. ಈಗ ಈ ಸರದಿಯಲ್ಲಿ ಖ್ಯಾತ ಚಿತ್ರನಿರ್ದೇಶಕ ಟಿ ಎಸ್ ನಾಗಾಭರಣ ಕೂಡ ಸೇರಿದ್ದು, ಅಲ್ಲಮನ ಜೀವನವನ್ನು-ಅಧ್ಯಾತ್ಮವನ್ನು ದೃಶ್ಯಮಾಧ್ಯಮದಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ನಟ ಧನಂಜಯ್ ಅನುಭಾವಿ ಸಂತನ ಪಾತ್ರದಲ್ಲಿ ನಟಿಸಿರುವ 'ಅಲ್ಲಮ - ಅರಿವಿನ ಬೆಡಗು' ಈಗ ಚಿತ್ರರಸಿಕರ ಮುಂದಿದೆ. 
ಅಲ್ಲಮಪ್ರಭು (ಧನಂಜಯ್) ಕಲ್ಯಾಣದ ಅನುಭವ ಮಂಟಪಕ್ಕೆ ಆಗಮಿಸಿ, ಬಸವಣ್ಣ (ಸಂಚಾರಿ ವಿಜಯ್), ಸಿದ್ಧರಾಮ, ಚನ್ನಬಸವಣ್ಣ, ಅಪ್ಪಣ್ಣ ಇತ್ಯಾದಿ ಅನುಭವ ಮಂಟಪದ ಸಮಕಾಲೀನ ವಚನಕಾರರನ್ನು ಭೇಟಿ ಮಾಡಿ, ಶೂನ್ಯಪೀಠವನ್ನು ಅಲಂಕರಿಸುವ ಮೂಲಕ ಪ್ರಾರಂಭವಾಗುವ ಸಿನೆಮಾ, (ಅಲ್ಲಮನ ನೆನಪಿನಲ್ಲಿ) ನಂತರ ಅಲ್ಲಯ್ಯನ ಬಾಲ್ಯ, ಯವ್ವನದ ತಳಮಳ, ಆಧ್ಯಾತ್ಮ ಸಿದ್ಧಿ, ಮುಂದಿನ ಜೀವನ ಪಯಣ ಇವೆಲ್ಲ ಕಥೆಗಾರ-ನಿರ್ದೇಶಕರ ಕಲ್ಪನೆಯಲ್ಲಿ ಚಿತ್ರಿತವಾಗುತ್ತಾ ಮುಂದುವರೆಯುತ್ತದೆ. 
ಕನ್ನಡ ನಾಡಿನಲ್ಲಿಯೇ ವಿಶಿಷ್ಟವಾಗಿ ಮೂಡಿದ, ವೈದಿಕ ಸಂಪ್ರದಾಯಕ್ಕೆ ಕೆಲವೊಮ್ಮೆ ವಿರೋಧವಾಗಿಯೂ, ಮತ್ತೆ ಕೆಲವೊಮ್ಮೆ ಸಮಾನಾನಂತರವಾಗಿಯೂ ಬೆಳೆದ ಭಕ್ತಿ ಚಳುವಳಿಯ ಪ್ರಮುಖನಾದ ಅಲ್ಲಮನ ಜೀವನವನ್ನು ಇಂದಿನ ಪೀಳಿಗೆಗೆ ಕಟ್ಟಿಕೊಡುವ, ನೆನಪಿಸುವ ನಿರ್ದೇಶಕರ ಪ್ರಯತ್ನ, ಬದ್ಧತೆ ಶ್ಲಾಘನೀಯವಾಗಿದ್ದರು ಅದನ್ನು ನಿರೂಪಿಸಿರುವ, ಕಲ್ಪಿಸಿರುವ, ಮೂಡಿಸಿರುವ ರೀತಿ ಅಷ್ಟು ಪರಿಣಾಮಕಾರಿಯಾಗಲ್ಲ ಎಂಬ ಭಾವನೆ ಮೂಡುತ್ತದೆ. ಅಲ್ಲಮನ ಬಾಲ್ಯ, ಮದ್ದಳೆ ನುಡಿಸುವ ಬಗ್ಗೆ ಅವನ ತೀವ್ರ ಆಸಕ್ತಿ, ಇವೆಲ್ಲವೂ ಆಪ್ತವಾಗಿ ಮೂಡಿವೆ. ತಾಯಿಯನ್ನು (ಅವಳಿಗೆ ತಿಳಿಯದಂತೆ) ತೊರೆದು ನಂದಿಮಯ್ಯನ ಜೊತೆಗೆ ಗೌತಮಾರ್ಯರ ಗುರುಕುಲ ಸೇರುವುದು-ಅಲ್ಲಿ ತಾಯಿಯ ಚಿಂತೆಯನ್ನೇ ಮರೆತು ಪ್ರಾವೀಣ್ಯತೆ ಪಡೆಯುವುದು, ಹೀಗೆ ನಿರ್ದೇಶಕರ-ಕಥೆಗಾರರ ಕಲ್ಪನೆಯಲ್ಲಿ (ಅಲ್ಲಮ ಪ್ರಭುವಿನ ಬಾಲ್ಯದ ಬಗ್ಗೆ ಇರುವ ಹಲವಾರು ಕಥೆಗಳಲ್ಲಿ ಇದು ಒಂದು) ಸಾಗುವ ಕಥೆ, ಇನ್ನಷ್ಟು ವಿವರಗಳು ಬೇಕಿತ್ತು ಎಂದು ಬೇಡುತ್ತದೆ. ಅಲ್ಲಿ ನಡೆಯುವ ಕೆಲವು ಘಟನೆಗಳು ಕೂಡ ಅಲ್ಲಮನ ಒಟ್ಟಾರೆ ವ್ಯಕ್ತಿತ್ವನ್ನು ರೂಪಿಸುವುದಕ್ಕೆ ಸಹಕರಿಸಿದವು ಎಂದು ಹೇಳಲು ಶಕ್ತಿಯುತವಾದವೇನಲ್ಲ. 
ಬನವಾಸಿಯಲ್ಲಿ ನೃತ್ಯಗಾರ್ತಿ ಮಾಯಾದೇವಿಯೊಂದಿಗೆ(ಮೇಘನಾ ರಾಜ್) ನಡೆಯುವ ಪ್ರಕರಣ ಕೂಡ ಅಷ್ಟು ನಾಜೂಕಾಗಿ ಮೂಡಿಬರದೆ ನಿರಾಸೆ ಮೂಡುತ್ತದೆ. ರೂಪ ಬದಲಿಸುವ ಬಹುರೂಪಿ ಶಿವಯ್ಯನ ಪಾತ್ರ ಎಲ್ಲಿಯೂ ನಂಬಿಕೆ ಹುಟ್ಟಿಸುವುದಿಲ್ಲ. ಅತಿಯಾದ ಗ್ರಾಫಿಕ್ಸ್ ಬಳಸಿ ಅಲ್ಲಮನ ಆಧ್ಯಾತ್ಮ ಸಿದ್ಧಿ ಒಂದು ಪವಾಡದಂತೆ ತೋರಿಸಿರುವುದು ಕೂಡ, ಒಳ ಬೇಗುದಿಯ ಮಂಥನದ ಸಾಧನೆಯೊಂದಿಗೆ ಮೂಡಿರಬಹುದಾದ ಆಧ್ಯಾತ್ಮಸಿದ್ಧಿಯನ್ನು ಪವಾಡದ ಮಟ್ಟಕ್ಕೆ ಇಳಿಸುವ ಅಗತ್ಯವಿತ್ತೇ ಎಂಬ ಪ್ರಶ್ನೆ ಮೂಡುತ್ತದೆ. ಅಲ್ಲಮನ ಪ್ರೌಢಸ್ಥಿತಿಯಲ್ಲಿ ಸಿದ್ಧರಾಮ, ಬಸವಣ್ಣ ಮುಂತಾದವರನ್ನು ಭೇಟಿ ಮಾಡುವ ಅಧ್ಯಾಯಗಳು ಇದ್ದುದರಲ್ಲಿ ತುಸು ಉತ್ತಮವಾಗಿ ಮೂಡಿಬಂದಿವೆ. ಅಲ್ಲಮನ ಆಧ್ಯಾತ್ಮ ಸಾಧನೆಯೇ ಮುಖ್ಯ ಎಂಬ ಕಾರಣಕ್ಕೋ ಏನೋ ೧೨ ನೇ ಶತಮಾನದ ಜನ ಜೀವನ, ಸಾಮಾಜಿಕ ಪರಿಸ್ಥಿತಿಯ ಕೆಲವೇ ಕೆಲವು ಸಂಗತಿಗಳನ್ನು ಮೂಡಿಸಿ ಮುಗಿಸಿ, ಅಪೂರ್ಣ ಭಾವನೆಯನ್ನು ಉಳಿಸಿಬಿಡುತ್ತಾರೆ. 
ಸಿನೆಮಾ ತಾಂತ್ರಿಕವಾಗಿ ಇನ್ನು ಸಾಕಷ್ಟು ಉತ್ತಮಗೊಳ್ಳಬಹುದಿತ್ತು. ಅನುಭವ ಮಂಟಪದ ಕಲ್ಲು ಗೋಡೆಗಳು ಇತ್ತೀಚಿನ ದಿನಗಳಲ್ಲಿ ಕೆತ್ತಿರುವ ಕಲ್ಲಿನ ಸ್ಥಂಭಗಳಂತೆ ಕಾಣುತ್ತವೆ. ಪ್ರೇಕ್ಷಕರಿಗೆ ೧೨ ಶತಮಾನಕ್ಕೆ ಹೊರಳಿದ ಭಾವನೆಯೇ ಮೂಡುವುದಿಲ್ಲ. ಸಿನೆಮಾದಲ್ಲಿ ಮೂಡುವ ಅಲ್ಲಮನ ಹುಟ್ಟೂರು ಬಳ್ಳಿಗಾವಿ ಅಥವಾ ಅಲ್ಲಮ ಹೆಚ್ಚು ಕಾಲ ಕಳೆಯುವ ಬನವಾಸಿಯಾಗಲಿ, ಅಥವಾ ಕಲ್ಯಾಣವಾಗಲಿ ನಮ್ಮನ್ನು ೧೨ ನೇ ಶತಮಾನಕ್ಕೆ ಕೊಂಡೊಯ್ಯುವ ಶಕ್ತಿ ಹೊಂದಿಲ್ಲ. ಇದ್ದುದರಲ್ಲಿ ವಸ್ತ್ರ ವಿನ್ಯಾಸ ಪರವಾಗಿಲ್ಲ. ಇನ್ನಷ್ಟು ವಚನಗಳನ್ನು-ಸಂಗೀತವನ್ನು ಹೇರಳವಾಗಿ ಬಳಸಿ ಸಿನೆಮಾವನ್ನು ಸಂಗೀತಮಯವಾಗಿಸಿದ್ದಾರೆ ಹೆಚ್ಚು ಆಪ್ತವಾಗುತ್ತಿತ್ತೇನೋ ಎಂಬ ಭಾವನೆ ಬರುತ್ತದೆ. ಇವೆಲ್ಲ ಕೊರತೆಗಳ ಹೊರತಾಗಿ ಹಲವು ಅಲ್ಲಮನ ವಚನಗಳನ್ನು ಕೇಳುವ ಅವಕಾಶ ಪ್ರೇಕ್ಷಕರಿಗೆ ಒದಗುವದು ಸಿನೆಮಾದ ಮುಖ್ಯ ಅಂಶಗಳಲ್ಲಿ ಒಂದು. ನಟನೆಯಲ್ಲಿ ಧನಂಜಯ್ ಪ್ರೌಢ ಅಲ್ಲಮನ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಬಾಲ್ಯ ಅಲ್ಲಮನ ಪಾತ್ರದ ನಟನೆಯನ್ನು ಇನ್ನು ಪಕ್ವಗೊಳಿಸಬಹುದಿತ್ತು. ಉಳಿದಂತೆ ಪೋಷಕವರ್ಗ ನಟನೆಯಲ್ಲಿ ಸಹಕರಿಸಿದೆ. 
ಅಲ್ಲಮನ ಜೀವನದ ಕಲ್ಪನೆಯನ್ನು, ಅವನ ಭಾವ ತೀವ್ರತೆಯನ್ನು, ಅವನ ಆಧ್ಯಾತ್ಮದ ಕವಿತ್ವಕ್ಕೆ ಕಾರಣವಾದ ಒಳಬೇಗುದಿಯನ್ನು ಇನ್ನಷ್ಟು ಒಳನೋಟಗಳಿರುವ, ತೀವ್ರತಮದ ಘಟನೆಗಳ ಮೂಲಕ, ತಾಂತ್ರಿಕ ಆಯಾಮಗಳನ್ನು ಉತ್ತಮಗೊಳಿಸಿ ನಿರ್ದೇಶಕ ಕಟ್ಟಿಕೊಡಬಹುದಾಗಿತ್ತು. ಇವೆಲ್ಲ ಕೊರತೆಗಳ ಹೊರತಾಗಿಯೂ, ಕನ್ನಡಿಗರಲ್ಲಿ  ಮತ್ತೆ ಅಲ್ಲಮನ ಬಗ್ಗೆ ಕುತೂಹಲ ಕೆರಳಿಸಬಲ್ಲ, ಅವನ ಬಗ್ಗೆ ಮತ್ತು ಅವನ ಆಧ್ಯಾತ್ಮ ಅರಿವನ್ನು ತಿಳಿದುಕೊಳ್ಳಲು ಪ್ರೇರೇಪಿಸಬಲ್ಲ ಸಿನೆಮಾವೊಂದನ್ನು ಕಟ್ಟಿಕೊಟ್ಟಿರುವ ನಾಗಾಭರಣ ಅವರ ಈ ಪ್ರಯತ್ನ ಮುಂದೆ ಇಂತಹ ವಿಷಯಗಳನ್ನು ಚಿತ್ರವಾಗಿಸುವವರಿಗೆ ಅಧ್ಯಯನದ ವಸ್ತುವಾಗಬಹುದು. ಅಲ್ಲಮನ ಮೇಲಿನ ಪ್ರೀತಿಗೆ, ಆಧ್ಯಾತ್ಮದ ತುಡಿತಕ್ಕಾಗಿ ಒಮ್ಮೆ ನೋಡಬಹುದು.  
-ಗುರುಪ್ರಸಾದ್ 
guruprasad.n@kannadaprabha.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com