ಪೇಪರ್ ಮೋಹನ್ (ತುಷಾರ್), ಮರಕೋತಿ ಸೀನ (ಮಹೇಂದ್ರ), ಮೆಕ್ಯಾನಿಕ್ ಉಸ್ತಾದ್ (ಸೂರಜ್), ಕಂಬರ್ಕಟ್ ಸ್ವಾಮಿ (ನಿಹಾಲ್), ತಿಂಡಿಪೋತಿ ಪದ್ಮ (ತೇಜಸ್ವಿನಿ), ಹಕ್ಕಿಪಿಕ್ಕಿ ರಾಮ (ಪುಟ್ಟರಾಜು), ಹೀರೊ ರಾಜ (ಅಚಿಂತ್ಯ), ಹಲ್ಕಿರಿ ವಜ್ರಪ್ಪ (ಅಭಿಷೇಕ್), ಗೊರಕೆ ಶಂಕರ (ಅಮೋಘ್) ಹಳ್ಳಿಯೊಂದರಲ್ಲಿ ವಾಸಿಸುವ ಗೆಳೆಯರು. ಒಬ್ಬೊಬ್ಬರಿಗೂ ಒಂದೊಂದು ವಿಶೇಷ ಪ್ರತಿಭೆ ಇರುವ ಇವರು ಗೆಳೆಯರ ಕಟ್ಟೆ ಕಟ್ಟಿಕೊಂಡು ತಮ್ಮ ತುಂಟ ಚೇಷ್ಟೆಗಳ ಮೂಲಕ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವವರು. ಬಹಿರ್ದೆಸೆಗೆ ಹೋಗುವವ ಹಿರಿಯರ ಕುಂಡಿಗೆ ಕ್ಯಾಟರ್ ಪಿಲ್ಲರ್ ಮೂಲಕ ಕಲ್ಲು ಬೀಸುತ್ತಾರೆ. ಗ್ರಂಥಾಲಯದಲ್ಲಿ ಹಿರಿಯ ವ್ಯಕ್ತಿಗಳಿಂದ ಪೇಪರ್ ಕಸಿದು ಓದಲು ಪಟಾಕಿ ಹಚ್ಚಿ ಬೆದರಿಸುತ್ತಾರೆ. ವಿದ್ಯಾರ್ಥಿಗಳಿಲ್ಲ ಎಂಬ ಕಾರಣಕ್ಕೆ ತಮ ಹಳ್ಳಿಯಲ್ಲಿ ಮುಚ್ಚಿದ ಸರ್ಕಾರಿ ಶಾಲೆಯನ್ನು ನೆನದು ಮರುಗುತ್ತಾರೆ ಅದಕ್ಕೆ ನಮಸ್ಕರಿಸುತ್ತಾರೆ. ಮುಂದಿನ ದಿನ ಶಾಲೆಗೆ ಪಕ್ಕದ ಊರಿಗೆ ಹೋಗಬೇಕೆಂದು, ಕಾಡಿಗೆ ಪ್ರವಾಸ ಬೆಳೆಸಿ ಹರಟೆ ಹೊಡೆಯುತ್ತಾರೆ. ಹೀಗೆ ಮೊದಲಾರ್ಧ ಯಾವುದೇ ಕಥೆ ಹೇಳಲು ಮುಂದಾಗದ ಸಿನೆಮಾ ಇಂತಹ ಸಣ್ಣಪುಟ್ಟ ಘಟನೆಗಳ ಸುತ್ತ ಸುತ್ತುತ್ತದೆ. ಆದರೆ ಈ ಘಟನೆಗಳು ಮಕ್ಕಳ ಮುಗ್ಧತೆಯಿಂದ, ತುಂಟಾಟದಿಂದ ಮೂಡಿ ಬಂದಿವೆ ಎಂದೆನಿಸದೆ, ನಿರ್ದೇಶಕರ ಕಲ್ಪನೆಯ ಸಾಮಾಜಿಕ ಸಮಸ್ಯೆಗಳನ್ನು, ಸಂದೇಶಗಳನ್ನು ಮಕ್ಕಳ ಮೂಲಕ ಕೃತಕವಾಗಿ ಹೇಳಿಸುತ್ತಿದ್ದಾರೇನೋ ಎಂದೆನಿಸಿ ಬಹುತೇಕ ಬೇಸರಿಸುವಂತೆ ಮಾಡುತ್ತದೆ.