ನೆನಪುಗಳ ದುನಿಯಾಗೆ ನೂರೊಂದು ದಾರಿ

ಮರಾಠಿ ಲೇಖಕ ಸುಹಾಸ್ ಶಿರವಲ್ಕರ್ ಅವರ ಕಾದಂಬರಿ 'ದುನಿಯಾದಾರಿ' ಆಧಾರಿತ ಅದೇ ಹೆಸರಿನ ಸಿನೆಮಾ ೨೦೧೩ರಲ್ಲಿ ಮರಾಠಿ ಚಿತ್ರರಂಗದಲ್ಲಿ ಮೂಡಿಬಂದಿತ್ತು. ಬಹಳ ಜನಪ್ರಿಯವಾಗಿದ್ದ ಸಿನೆಮಾವನ್ನು
'ನೂರೊಂದು ನೆನಪು' ಸಿನೆಮಾ ವಿಮರ್ಶೆ
'ನೂರೊಂದು ನೆನಪು' ಸಿನೆಮಾ ವಿಮರ್ಶೆ
ಮರಾಠಿ ಲೇಖಕ ಸುಹಾಸ್ ಶಿರವಲ್ಕರ್ ಅವರ ಕಾದಂಬರಿ 'ದುನಿಯಾದಾರಿ' ಆಧಾರಿತ ಅದೇ ಹೆಸರಿನ ಸಿನೆಮಾ ೨೦೧೩ರಲ್ಲಿ ಮರಾಠಿ ಚಿತ್ರರಂಗದಲ್ಲಿ ಮೂಡಿಬಂದಿತ್ತು. ಬಹಳ ಜನಪ್ರಿಯವಾಗಿದ್ದ ಸಿನೆಮಾವನ್ನು ಈಗ ಕನ್ನಡದಲ್ಲಿ ಅಧಿಕೃತವಾಗಿ ರಿಮೇಕ್ ಮಾಡಿದ್ದಾರೆ ನಿರ್ದೇಶಕ ಕುಮಾರೇಶ್ ಎಂ. ೮೦ರ ದಶಕದ ಕಾಲೇಜು ಕಥೆಯನ್ನು ಹೊಂದಿರುವ 'ನೂರೊಂದು ನೆನಪು' ಪ್ರೇಕ್ಷಕರ ನೆನಪುಗಳನ್ನು ಉದ್ದೀಪಿಸುವ ಶಕ್ತಿ ಇದೆಯೇ? ೮೦ರ ದಶಕದ ಕಾಲೇಜು ಜೀವನವನ್ನು ಸಶಕ್ತವಾಗಿ ಸೆರೆ ಹಿಡಿದಿದೆಯೇ? 
ವ್ಯಾಸಂಗಕ್ಕೆ ಕಾಲೇಜಿಗೆ ಸೇರುವ ಶ್ರೇಯಸ್ ಬಹದ್ದೂರ್ (ಚೇತನ್), ಕಾಲೇಜು ರೌಡಿ ದಯಾನಂದ್ ಶಂಕರ್ ಪಾಟೀಲ್ (ರಾಜ ವರ್ಧನ್) ಜೊತೆಗೆ ಗೆಳೆತನ ಬೆಳೆಸುತ್ತಾನೆ. ಇದರಿಂದ ರಾಜಕಾರಿಣಿ ಪುತ್ರ-ವಿದ್ಯಾರ್ಥಿ ಸಾಯಿಯ ದ್ವೇಷ ಕಟ್ಟಿಕೊಳ್ಳುತ್ತಾನೆ. ಗೆಳೆತನ, ಕೀಟಲೆ, ಪ್ರೀತಿ, ತೊಳಲಾಟ ಹೀಗೆ ಹಲವು ವಿಷಯಗಳನ್ನು ಒಳಗೊಂಡ ಚಿತ್ರ ಪುರುಷಪ್ರಧಾನ ಸಮಾಜದಲ್ಲಿ ವಿದ್ಯಾರ್ಥಿಗಳ ಮುಕ್ತ ಪ್ರೀತಿಗೆ ಉಂಟಾಗುವ ಸಮಸ್ಯೆಯನ್ನು ಪ್ರಧಾನವಾಗಿ ಹಿಡಿದಿಡುತ್ತಿದೆಯೋ ಎಂಬಂತೆ ಭಾಸವಾಗುತ್ತದೆ. 
ನಟರ ಉಡುಗೆತೊಡುಗೆಗಳಲ್ಲಿ ೮೦ರ ದಶಕದ ವಿದ್ಯಾರ್ಥಿಗಳ ನಮೂನೆಯನ್ನು ಸೆರೆಹಿಡಿದಿದ್ದರೂ, ಆ ಕಾಲವನ್ನು  ಸೂಚಿಸುವ ಸೆಟ್ ಗಳನ್ನು ಸೃಷ್ಟಿಸಲು, ಘಟನೆಗಳನ್ನು ಹೆಣೆಯಲು ನಿರ್ದೇಶಕ ತಿಣುಕಿದ್ದಾರೆ. ಜನಗಳೇ ಇಲ್ಲದ ಸಿನೆಮಾ ಮಂದಿರದ ಮುಂದೆ ಬ್ಲ್ಯಾಕ್ ಟಿಕೆಟ್ ಮಾರುವ ದೃಶ್ಯ, ಬಹಳ ನಿಧಾನಕ್ಕೆ ಚಲಿಸುವ ಹೊಡೆದಾಟದ ದೃಶ್ಯಗಳು ಹೀಗೆ ಹಿನ್ನಲೆ ಅಷ್ಟು ಸಾವಯವವಾಗಿ ಮೂಡದೆ ನಿರಾಶೆ ಮೂಡುತ್ತದೆ. ಕೀಟಲೆಗಳ ದೃಶ್ಯಗಳು ಕೂಡ ತೀರಾ ತುರುಕಿದಂತೆ ಭಾಸವಾಗಿ, ಕಾಲೇಜು ಲವಲವಿಕೆಯನ್ನು ಪರಿಣಾಮಕಾರಿಯಾಗಿ, ಸ್ವಾಭಾವಿಕವಾಗಿ ಚಿತ್ರಿಸಲು ನಿರ್ದೇಶಕನಿಗೆ ಸಾಧ್ಯವಾಗಿಲ್ಲ. 
ಕಥೆಯಲ್ಲಿ ಭಾರಿ ಸಂಘರ್ಷದಂತಹ ಸಂಗತಿ ಕಾಣದೆ ಇದ್ದರೂ, ಪಾತ್ರಗಳ ಪರಿಕಲ್ಪನೆ ಪ್ರೇಕ್ಷಕರಿಗೆ ಒಂದಷ್ಟು ಆಪ್ತತೆಯನ್ನು ತಂದುಕೊಡುತ್ತದೆ. ಅಂತರ್ಮುಖಿಯಾದ ಶ್ರೇಯಸ್, ತನ್ನ ಪ್ರಿಯತಮೆ ಶ್ರುತಿ (ಮೇಘನಾ ರಾಜ್) ಬಳಿ ಮುಕ್ತವಾಗಿ ಪ್ರೇಮ ನಿವೇದನೆ ಮಾಡಿಕೊಳ್ಳಲಾಗದ, ಗೆಳೆಯರ ಕೀಟಲೆಯಿಂದ ತನ್ನನ್ನು ಪ್ರೀತಿಸುತ್ತಿರುವ ಮೀನಾಕ್ಷಿಯನ್ನು (ಸುಶ್ಮಿತಾ ಜೋಶಿ) ತಿರಸ್ಕರಿಸಲಾಗದ ತೊಳಲಾಟದ ಮನಸ್ಥಿತಿಯಲ್ಲಿ ಒದ್ದಾಡುವ ಪಾತ್ರವನ್ನು ಸಾಕಷ್ಟು ಸಂಯಮದಿಂದ ಕಟ್ಟಿಕೊಡಲಾಗಿದೆ. ಆದರೆ ಹಲವು ಉಪಕಥೆಗಳನ್ನು ಒಳಗೊಂಡಿರುವುದರಿಂದಲೋ, ಪಾತ್ರಗಳು ಹೆಚ್ಚಿರುವುದರಿಂದಲೋ ಶ್ರೇಯಸ್ ಮತ್ತು ಶ್ರುತಿ ಪ್ರೇಮ ಕಥೆಯಾಗಲಿ, ಅವರ ರೋಮ್ಯಾನ್ಸ್ ನ ಬೆಳವಣಿಗೆಯನ್ನಾಗಲಿ ಸರಿಯಾಗಿ ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಗೆಳೆತನದ ಘಟನೆಗಳು ಮತ್ತು ದೃಶ್ಯಗಳು ಕೂಡ ಅತಿ ಸಾಮಾನ್ಯ ಎಂಬಂತೆ ಮೂಡಿವೆ. 
ಪುರುಷಪ್ರಧಾನ ಸಮಾಜದಲ್ಲಿ ಹೆಣ್ಣುಮಕ್ಕಳು ತಂದೆಯರ ಬಿಗಿಮುಷ್ಟಿಯಲ್ಲಿ, ಸಂಪ್ರದಾಯದ ಸಂಕುಚಿಯತೆಯಲ್ಲಿ ಬಂಧಿತರಾಗುವ ಎಳೆಗಳನ್ನು ಅಲ್ಲಲ್ಲಿ ಸೋಂಕಿಸುವ ನಿರ್ದೇಶಕ, ಅಲ್ಲಿಯೂ ಹೆಚ್ಚು ದೃಶ್ಯ-ಘಟನೆಗಳ ವಿವರಗಳನ್ನು ತರದೆ ಮಾತಿನ ಮೂಲಕವೇ ಎಲ್ಲವನ್ನು ಮುಗಿಸುವತ್ತ ಸಾಗುತ್ತಾರೆ. ಇಂತಹ ದಬ್ಬಾಳಿಕೆಯ ವಿರುದ್ಧ ಯಾರು ಕೂಡ ಸ್ವಲ್ಪವೂ ಪ್ರತಿರೋಧ ತೋರದೆ ಇರುವಂತೆ ಚಿತ್ರಿಸಿರುವುದು ತುಸು ಸೋಜಿಗ ಮೂಡಿಸುತ್ತದೆ.
ತಾಂತ್ರಿಕವಾಗಿ ಸಿನೆಮಾ ಒಂದಷ್ಟು ಭರವಸೆ ಮೂಡಿಸುತ್ತದೆ. ೮೦ರ ದಶಕದ ಭಾವನೆ ಮೂಡಿಸಲು ಬಳಸಿರುವ ಕಲರ್ ಕೋಡಿಂಗ್ ಚಿತ್ರದುದ್ದಕ್ಕೂ ಮೂಡಿದ್ದು, ಚಿತ್ರೀಕರಣ ಕೂಡ ಇದಕ್ಕೆ ಸಹಕರಿಸಿದೆ. ಗಗನ್ ಬಡೇರಿಯ ಅವರ ಸಂಗೀತದಲ್ಲಿ ಮೂಡಿರುವ ಹಾಡುಗಳಲ್ಲಿ ಕೆಲವು ಮನಸ್ಸಿನಲ್ಲಿ ಉಳಿಯುವಂತವು. ಪಾತ್ರ ಪೋಷಣೆ ಮತ್ತು ನಟನೆಯಲ್ಲಿ ಚೇತನ್ ಮತ್ತು ಮೇಘನಾ ರಾಜ್ ಮಿಂಚಿದ್ದರೆ, ಚೊಚ್ಚಲ ಬಾರಿಗೆ ನಟಿಸಿರುವ ರಾಜವರ್ಧನ್ ಕೂಡ ಗಮನಸೆಳೆಯುತ್ತಾರೆ. ಸಾಯಿ ಪಾತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿರುವ ಯಶ್ ಶೆಟ್ಟಿ ತಮ್ಮ ವಿಚಿತ್ರ ಅತಿರೇಕದ ಮ್ಯಾನರಿಸಂನಿಂದ ನಟ ರವಿಶಂಕರ್ ಅವರಿಗೆ ಸವಾಲೊಡ್ಡಿದ್ದಾರೆ. 
ಕೆಲವೊಮ್ಮೆ ಸಂಭಾಷಣೆ ತೀವ್ರ ಬೋಧನೆಯ ಸ್ವರೂಪ ತಳೆಯುವುದು, ಆ ಬೋಧನೆಗಳಿಗೆ ಮನಃ ಪರಿವರ್ತನೆ ಆಗುವ ದೃಶ್ಯಗಳು, ಬಹಳ ನಿಧಾನವಾಗಿ ಚಲಿಸುವ ಆಕ್ಷನ್ ದೃಶ್ಯಗಳು, ಕೆಲವೊಮ್ಮೆ ಸರಾಗತನ ಇಲ್ಲದ ಸಂಕಲನ ಹೀಗೆ ಇನ್ನೊಂದಷ್ಟು ಅಡಚಣೆಗಳು ಕೂಡ ಸಿನೆಮಾದಲ್ಲಿ ಸೇರಿವೆ.
ಇನ್ನಷ್ಟು ವಿವರಗಳಿಂದ, ಕಾಲೇಜಿನಲ್ಲಿ ಮೂಡಬಹುದಾದ ಲವಲವಿಕೆಯ ಘಟನೆಗಳಿಂದ, ನಂಬಲಾರ್ಹ ಕೀಟಲೆಗಳನ್ನು ಸೃಷ್ಟಿಸಿ ತೋರಿಸುವುದರಿಂದ, ಮುಖ್ಯ ಪ್ರೇಮ ಕಥೆಯ ಎಳೆಯನ್ನು ಇನ್ನಷ್ಟು ಪರಿಣಾಮಕಾರಿಗಿ ಸಾಬೀತು ಪಡಿಸುವುದರಿಂದ ಕಥೆ ಹೆಣೆದು, ನಿರೂಪಿಸಿದ್ದರೆ ಬಹಳ ಆಪ್ತವಾದ ರಿಮೇಕ್ ಸಿನೆಮಾ ಇದಾಗುವುದರಲ್ಲಿ ಸಂಶಯವಿರಲಿಲ್ಲ. ಸದ್ಯಕ್ಕೆ ಮರಾಠಿ ಚಿತ್ರದ ಮತ್ತೊಂದು ರಿಮೇಕ್ ಬಂದಿದೆ ಎನ್ನಬಹುದಷ್ಟೆ! 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com