ಅಪರಾಧಗಳ-ಆಸೆಗಳ ಲೋಕದಲಿ ಕಥೆಗಳ ಬರೆವಂತ!

ನಗರಗಳಲ್ಲಿ ನಡೆಯುವ ಅಪರಾಧಗಳ ನಿಗೂಢತೆ ಜನಪ್ರಿಯ ಸಿನೆಮಾ ನಿರ್ದೇಶಕರನ್ನು ಎಂದಿಗೂ ಕಾಡಿದ ವಸ್ತು. ಅಪರಾಧಗಳನ್ನು ಬೇಧಿಸುವ, ಅಪರಾಧಗಳ ಜಾಲದಲ್ಲಿ ಯುವಕರು ಹೇಗೆ ಮತ್ತು ಏಕೆ ಸಿಲುಕುತ್ತಾರೆ,
ಸಿಲಿಕಾನ್ ಸಿಟಿ ಸಿನೆಮಾ ವಿಮರ್ಶೆ
ಸಿಲಿಕಾನ್ ಸಿಟಿ ಸಿನೆಮಾ ವಿಮರ್ಶೆ
ನಗರಗಳಲ್ಲಿ ನಡೆಯುವ ಅಪರಾಧಗಳ ನಿಗೂಢತೆ ಜನಪ್ರಿಯ ಸಿನೆಮಾ ನಿರ್ದೇಶಕರನ್ನು ಎಂದಿಗೂ ಕಾಡಿದ ವಸ್ತು. ಅಪರಾಧಗಳನ್ನು ಬೇಧಿಸುವ, ಅಪರಾಧಗಳ ಜಾಲದಲ್ಲಿ ಯುವಕರು ಹೇಗೆ ಮತ್ತು ಏಕೆ ಸಿಲುಕುತ್ತಾರೆ, ಇದು ಬೀರುವ ಪರಿಣಾಮಗಳೇನು ಎಂಬ ವಿಷಯಗಳನ್ನು ಸಾಕಷ್ಟು ಸಿನೆಮಾಗಳು ಚರ್ಚಿಸುತ್ತಲೇ ಬಂದಿವೆ. ಈಗ ಬಿಡುಗಡೆಯಾಗಿರುವ 'ಸಿಲಿಕಾನ್ ಸಿಟಿ' ಇಂತಹ ಅಪರಾಧಗಳಲ್ಲಿ ಒಂದಾದ, ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ಭಾರಿ ಚರ್ಚಿತವಾದ, ಜನರ ಆಡುಮಾತಿನಲ್ಲಿ ಮಿಳಿತು ಹೋಗಿರುವ ಸರಗಳ್ಳ ಅಪರಾಧವನ್ನು ಕೇಂದ್ರವಾಗಿರಿಸಿಕೊಂಡು ಹೇಳಿರುವ ಕಥೆಯಾಗಿದೆ. ತಮಿಳಿನ 'ಮೆಟ್ರೋ' ಸಿನೆಮಾವನ್ನು ಕನ್ನಡಕ್ಕೆ ರಿಮೇಕ್ ಮಾಡಿದ್ದಾರೆ ಮುರಳಿ ಗುರಪ್ಪ. ನಗರದಲ್ಲಿ ಸಧೃಢವಾಗಿರುವ ಈ ಅಪರಾಧಿ ಸರ್ಕ್ಯೂಟ್ ಅನ್ನು ಭೇದಿಸಿರುವ, ದೃಶ್ಯ ನಿಪುಣತೆ ಆಪ್ತವಾಗಿದೆಯೇ? 
ಒಂದು ಸುಂದರ, ಪ್ರೀತಿ ತುಂಬಿದ ಆದರ್ಶಪ್ರಾಯ ಕುಟುಂಬ. ಸಂಜು (ಶ್ರೀನಗರ ಕಿಟ್ಟಿ), ಅವನ ಕಿರಿಯ ಸಹೋದರ ಕಾರ್ತಿಕ್ (ಸೂರಜ್ ಗೌಡ), ತಂದೆ ಮಾಜಿ ಪೊಲೀಸ್ ಪೇದೆ ರಾಮಸ್ವಾಮಿ (ಅಶೋಕ್) ಮತ್ತು ತಾಯಿ. ಬೃಹತ್ ಬಂಗಲೆಯಲ್ಲಿ ವಾಸಿಸುತ್ತಿರುವ ಮಧ್ಯಮವರ್ಗದ ಕುಟುಂಬಕ್ಕೆ, ಕಿರಿಮಗ ಸಂಜುವಿನ ಒಂದೂವರೆ ಲಕ್ಷದ ಬೈಕ್ ಕೊಳ್ಳುವ ಬಯಕೆಯನ್ನು ಪೂರೈಸುವ ಶಕ್ತಿ ಇಲ್ಲ. ಬೈಕ್ ಇಲ್ಲ, ಆಧುನಿಕ ಮೊಬೈಲ್ ಫೋನ್ ಇಲ್ಲ ಎಂಬಿತ್ಯಾದಿ ಮೂದಲಿಕೆಗಳನ್ನು ಪ್ರೇಯಸಿಯಿಂದ ಕೇಳಿ ಸಹಿಸಲಾರದೆ ಕಾರ್ತಿಕ್ ಅಡ್ಡದಾರಿ ಹಿಡಿಯುತ್ತಾನೆ. ಈ ಅಡ್ಡದಾರಿ, ಬೆಂಗಳೂರಿನ  ಅಪರಾಧಿ ವ್ಯೂಹಕ್ಕೆ ಅವನನ್ನು ಕರೆತರುತ್ತದೆ. ಅಪರಾಧಿ ಲೋಕ ಕಾರ್ತಿಕ್ ವ್ಯಕ್ತಿತ್ವವನ್ನು ಅವನ ಸುತ್ತಲಿನ ಜಗತ್ತನ್ನು, ಬದುಕನ್ನು ಬದಲಿಸಿದಾಗ ಆಗುವ ಅನಾಹುತಗಳೇನು? 
ಆಸೆಗಳಿಗೆ ಬಲಿಯಾಗಿ ಕೌಟುಂಬಿಕ ಅವನತಿಗೆ ಕಾರಣವಾಗುವ ಮತ್ತು ಅಪರಾಧಿ ಲೋಕದಲ್ಲಿ ವಿಜೃಂಭಿಸಿ ತನ್ನ ಆಸೆಗಳನ್ನು ಪೂರೈಸಿಕೊಂಡು ವೈಯಕ್ತಿಕ ಅವನತಿಗೆ ಕಾರಣವಾಗುವ ಎರಡು ಹಳಿಯಲ್ಲಿ ಚಲಿಸುವ ಸಿನೆಮಾ ಕಥೆ ಮಿಶ್ರ ಭಾವನೆಗಳನ್ನು ಮೂಡಿಸುತ್ತದೆ. ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಜನಸಾಮಾನ್ಯರು ಸುಲಭವಾಗಿ ತುತ್ತಾಗುವ ಸರಗಳ್ಳತನದ ಅಪರಾಧವನ್ನು ಕಥೆಯ ಕೇಂದ್ರವಾಗಿರಿಸಿಕೊಂಡಿದ್ದು, ಅದರ ಜಾಲ, ವ್ಯವಹಾರ, ಇದನ್ನು ನಿಖರತೆಯಿಂದ ಯೋಜಿಸುವ ಬಗೆ ಇವುಗಳನ್ನೆಲ್ಲ ಕಥೆಯಲ್ಲಿ ಆಪ್ತವಾಗಿ, ತಾಜಾ ರೀತಿಯಲ್ಲಿ ಹೆಣೆದಿದ್ದು ಪ್ರೇಕ್ಷಕರಿಗೆ ಒಳ್ಳೆಯ ಅನುಭವ ನೀಡಿದರೆ, ಕಥೆಗೆ ಹಿನ್ನಲೆಯಾಗುವ ಕಥಾ ನಾಯಕರ ಕುಟುಂಬದ ಕಥೆಯನ್ನು ಅಷ್ಟೇ ತಾಜಾತನದಿಂದ ಮೂಡಿಸಲು ವಿಫಲರಾಗುತ್ತಾರೆ. 
ಸಂಜು ಮತ್ತು ಕಾರ್ತಿಕ್ ಅವರ ಕುಟುಂಬವನ್ನು ಮಧ್ಯಮ ವರ್ಗದ ಕುಟುಂಬ ಎಂದು ಪರಿಣಾಮಕಾರಿಯಾಗಿ ಸ್ಥಾಪಿಸಲು ಸಾಧ್ಯವಾಗಿಲ್ಲ. ಈ ಮಧ್ಯಮವರ್ಗ ಅತಿ ದೊಡ್ಡ ಭವ್ಯ ಬಂಗಲೆಯಲ್ಲಿ ವಾಸಿಯುವಂತೆ ತೋರಿಸುವುದು ಆದರೆ ಮಗನ ಆಸೆಗಳನ್ನು ಪೂರೈಸಲು ಆಗದೆ ಇರುವುದು ಇಂತಹ ವೈರುಧ್ಯಗಳನ್ನು ಸರಿದೂಗಿಸಲು ಸಾಧ್ಯವಾಗಿಲ್ಲ. ಮಧ್ಯಮವರ್ಗದ ಕುಟುಂಬವನ್ನು ಆದರ್ಶಪ್ರಾಯ, ಪ್ರೀತಿ ತುಂಬಿತುಳುಕುತ್ತಿರುವ ಕುಟುಂಬವಾಗಿ ಚಿತ್ರಿಸಲು ಹೋಗಿ ಅತಿ ಭಾವುಕವಾಗಿಸಿ ಅಸಹಜ ಎನ್ನುವಂತೆ ನಿರೂಪಿಸಿಬಿಡುತ್ತಾರೆ. ಮಧ್ಯಮವರ್ಗದ ಕುಟುಂಬದಲ್ಲಿ ಇರಬಹುದಾದ ತೊಂದರೆಗಳು, ಕಲಹಗಳನ್ನು ಮರೆಮಾಚಿ ರೂಪಿಸಿರುವ ಇಂತಹ ಅಸಹಜ ಸಂಯೋಜನೆ ತುಸು ಬೇಸರ ಮೂಡಿಸುತ್ತದೆ. ಇನ್ನು ಕಾರ್ತಿಕ್ ತನ್ನ ಪ್ರೇಯಸಿಯ ಬೇಡಿಕೆಗಳಿಗಾಗಿಯೇ ದುರಾಸೆಗೆ ತುತ್ತಾಗುತ್ತಾನೆ ಮತ್ತು ಅಡ್ಡದಾರಿ ಹಿಡಿಯುತ್ತಾನೆ ಎಂದು ರೂಪಿಸಿರುವುದು ಕೂಡ ಅಷ್ಟು ಕನ್ವಿನ್ಸ್ ಆಗಿ ಮೂಡಿಬಂದಿಲ್ಲ. 
ಸಿನೆಮಾದ ನಿಜವಾದ ಹೈಲೈಟ್, ಸರಗಳ್ಳತನ ಹೇಗೆ ನಡೆಯಬಹುದು ಮತ್ತು ಅದರ ವ್ಯವಹಾರ ಹೇಗಿರಬಹುದು, ಅದಕ್ಕೆ ಯುವಕರು ಯಾವ ರೀತಿ ಒಳಹೊಕ್ಕಬಹುದು ಎಂಬುದರ ಬಗ್ಗೆ ನಿರ್ದೇಶಕ ಕಟ್ಟಿಕೊಟ್ಟಿರುವ ಕಥೆ. ಸರಗಳ್ಳತನ ಮಾಡಿ ತಪ್ಪಿಸಿಕೊಳ್ಳುವ, ರಾತ್ರಿ ಸಮಯದಲ್ಲಿ ಪೊಲೀಸರು ಅವರನ್ನು ಅಟ್ಟಿಸಿಕೊಂಡು ಹೋಗಿ ಪೊಲೀಸರೇ ಪೆಟ್ಟು ತಿನ್ನುವ ಇತ್ಯಾದಿ ದೃಶ್ಯಗಳು ಪ್ರೇಕ್ಷಕನಿಗೆ ಮೈನವಿರೇಳಿಸುವ ಶಕ್ತಿ ಹೊಂದಿವೆ. 
ಇನ್ನು ಈ ಅಪರಾಧಿಗಳ ವಿರುದ್ಧ ತಿರುಗಿ ಬೀಳುವ ಕಾರ್ತಿಕ್, ಸೇಡು ತೀರಿಸಿಕೊಳ್ಳಲು, ಕೆಡುಕನ್ನು ನಿವಾರಿಸಲು, ಮತ್ತಷ್ಟು ಕೊಲೆಗಳನ್ನು ಮಾಡುವ ಹಿರೋಯಿಕ್ ದೃಶ್ಯಗಳು ಕೂಡ ಮಾಮೂಲಿ ಜಾಡನ್ನು ಹಿಡಿಯುತ್ತವೆ. ಅಪರಾಧಕ್ಕೆ ಅಪರಾಧವೇ ಮದ್ದು ಎಂಬ ಸಂದೇಶ ಅಷ್ಟೇನೂ ಗಹನವಾದ, ಗಂಭೀರವಾದ, ಚಿಂತನಪರವಾದ ಸಂಗತಿಯಲ್ಲ. 
ತಾಂತ್ರಿಕವಾಗಿ ಸಿನೆಮಾ ಸಾಕಷ್ಟು ಗಮನ ಸೆಳೆಯುತ್ತದೆ. ರಾತ್ರಿಯ ವೇಳೆಯಲ್ಲಿ ನಡೆಸಿರುವ ಚಿತ್ರೀಕರಣ ಬಹಳ ನೈಜವಾಗಿ ಮೂಡಿಬಂದಿದ್ದು ಅಪರಾಧಿ ಲೋಕದ ಸಿನೆಮಾಗೆ ಪೂರಕವಾಗಿ ಸಹಕರಿಸಿದೆ. ತಲ್ಲಣಗೊಳಿಸುವ ನಗರ ಜೀವನದ ಇನ್ನಷ್ಟು ವಿವಿಧ ಆಯಾಮಗಳನ್ನು ದೃಶ್ಯಗಳ ಮೂಲಕ ಪರಿಣಾಮಕಾರಿಯಾಗಿ ಕಟ್ಟಿಕೊಡಬಹುದಾದ ಅವಕಾಶವಿತ್ತು. ಅನೂಪ್ ಸೀಳಿನ್ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಸಂದರ್ಭಕ್ಕೆ ಉಚಿತವಾಗಿವೆ. ಶ್ರೀನಗರ ಕಿಟ್ಟಿ, ಸೂರಜ್, ಅಶೋಕ್, ಸಿದ್ಧು, ಗಿರಿ ಮುಂತಾದ ನಟರು ನಟನೆಯಲ್ಲಿ ತಮ್ಮ ಕೈಲಾದಷ್ಟು ಕೊಡುಗೆ ನೀಡಿದ್ದಾರೆ. ಚಿಕ್ಕಣ್ಣ ಮತ್ತು ನಟಿ ಕಾವ್ಯ ಶೆಟ್ಟಿ ಅವರ ಭಾಗಕ್ಕೆ ಹೆಚ್ಚೇನೂ ಮಹತ್ವವಿಲ್ಲದೆ, ಅತಿಥಿ ನಟರಂತೆ ಅವರೂ ಸೇರಿಕೊಂಡಿದ್ದಾರೆ. 
ಮಧ್ಯಮ ವರ್ಗದ ಕುಟುಂಬದ ತಲ್ಲಣಗಳನ್ನು ಇನ್ನಷ್ಟು ನೈಜತೆಯಿಂದ ಕಟ್ಟಿಕೊಟ್ಟು, ಅಪರಾಧ ಲೋಕಕ್ಕೆ ದೂಡುವ ಆಸೆಗಳು ತಳೆಯುವ, ಅವುಗಳು ಹೆಬ್ಬಯಕೆಯಾಗುವ, ಮತ್ತು ಅವುಗಳ ಪೂರೈಕೆಗೆ ಎಲ್ಲ ರೀತಿಯ ಭಯ, ಮೌಲ್ಯಗಳನ್ನು ತೊರೆಯುವ ವಿವರಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮೂಡಿಸಿ ಕಥೆ ಹೆಣೆದು ನಿರೂಪಿಸಿದ್ದರೆ ಈ ರಿಮೇಕ್ ಚಿತ್ರ ನಗರದ ಬಗೆಗಿನ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗುವ ಸಾಧ್ಯತೆ ಇತ್ತೇನೋ! ಮುರಳಿ ಗುರಪ್ಪ ನಿರ್ದೇಶನದ 'ಸಿಲಿಕಾನ್ ಸಿಟಿ' ಈಗ ನೋಡಬಹುದಾದ ಒಂದು ರಿಮೇಕ್ ಆಗಿಯಷ್ಟೇ ಮೂಡಿಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com