ಸುಲಭವಾಗಿ ದಕ್ಕದ ಸಮಾಜದ ಬಗ್ಗೆ ಸಹಜ ಕುತೂಹಲ ಇದ್ದದ್ದೇ. ಇದು ಭೂಗತಲೋಕಕ್ಕೂ ಅನ್ವಯ. ನಿಜ ಘಟನೆಗಳಿಂದ ಕೂಡಿದ್ದೇ ಆಗಲಿ, ಕಾಲ್ಪನಿಕ ಕಥೆಯೇ ಆಗಲಿ ಕನ್ನಡ ಚಿತ್ರರಂಗದಲ್ಲಿ ಮೂಡಿರುವ ಭೂಗತಲೋಕದ ಬಗೆಗಿನ ಹಲವು ಸಿನೆಮಾಗಳು ಪ್ರೇಕ್ಷಕರನ್ನು ರಂಜಿಸಿವೆ. 'ಆ ದಿನಗಳು' ದಂತಹ ಸಿನೆಮಾ ಮೂಲಕ ಬೆಂಗಳೂರಿನ ಭೂಗತ ಲೋಕದ ಬಗ್ಗೆ ಪರಿಚಯ ಸಿಕ್ಕಿದು ನಿಜ. ಆದರೆ ರೌಡಿಸಮ್, ಭೂಗತಲೋಕ, ಮಚ್ಚು-ಕೊಚ್ಚು ರೀತಿಯ ಕಥೆಗಳು ಹೇರಳವಾದಾಗ, 'ಬಂತು ಮತ್ತೊಂದು ಮಚ್ಚಿನ ಕಥೆ' ಎಂದು ಪ್ರೇಕ್ಷಕರು ಲೇವಡಿ ಮಾಡಿ, ಸುಮ್ಮನಾದದ್ದು ಸುಳ್ಳಲ್ಲ. ಕಾಲ್ಪನಿಕ ಕಥೆ ಎಂದೇ ಹೇಳಿಕೊಂಡಿರುವ, ಈಗಾಗಲೇ ಹಲವಾರು ಅಂಡರ್ ವರ್ಲ್ಡ್ ಸಿನೆಮಾಗಳನ್ನು ನೀಡಿರುವ ಪಿ ಎನ್ ಸತ್ಯ ನಿರ್ದೇಶನದ 'ಬೆಂಗಳೂರು ಅಂಡರ್ ವರ್ಲ್ಡ್' ಇಂದು ತೆರೆಕಂಡಿದೆ. 'ಡೆಡ್ಲಿ ಸೋಮ', 'ಎದೆಗಾರಿಕೆ' ಖ್ಯಾತಿಯ ಆದಿತ್ಯ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನೆಮಾದಲ್ಲಿ ತುಸು ಹೊಸತನದ ನಿರೀಕ್ಷೆ ಹೊತ್ತು ಹೋಗುವ ಪ್ರೇಕ್ಷಕನಿಗೆ ದಕ್ಕಿದ್ದು ಏನು?