ವ್ಯವಸ್ಥೆಯ-ರಾಜಕೀಯ 'ಶುದ್ಧಿ'ಗಾಗಿ ಪ್ರತೀಕಾರದ ಪಯಣ

ಸಿನೆಮಾ ವರ್ತಮಾನದ ಸಮಸ್ಯೆಗಳಿಗೆ ಕನ್ನಡಿ ಹಿಡಿಯಬೇಕು ಎಂಬುದು ಬಹುಶ್ರುತ ಸಿನಿರಸಿಕರ ಕೂಗು. ಹಿಂದಿನ ಒಂದು ಕಾಲಘಟ್ಟದಲ್ಲಿ ನಿರ್ಮಾಣವಾಗುತ್ತಿದ್ದ (ಸಿನೆಮಾ ನಿರ್ಮಿಸಲು ಆರ್ಥಿಕವಾಗಿ
ಶುದ್ಧಿ ಸಿನೆಮಾ ವಿಮರ್ಶೆ
ಶುದ್ಧಿ ಸಿನೆಮಾ ವಿಮರ್ಶೆ
ಸಿನೆಮಾ ವರ್ತಮಾನದ ಸಮಸ್ಯೆಗಳಿಗೆ ಕನ್ನಡಿ ಹಿಡಿಯಬೇಕು ಎಂಬುದು ಬಹುಶ್ರುತ ಸಿನಿರಸಿಕರ ಕೂಗು. ಹಿಂದಿನ ಒಂದು ಕಾಲಘಟ್ಟದಲ್ಲಿ ನಿರ್ಮಾಣವಾಗುತ್ತಿದ್ದ (ಸಿನೆಮಾ ನಿರ್ಮಿಸಲು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸವಾಲಾಗಿದ್ದ ದಿನಗಳಲ್ಲಿ) ಹೆಚ್ಚಿನ ಸಿನೆಮಾಗಳು ಅದರತ್ತ ಚಿತ್ತ ಹರಿಸಿ, ಜನಪ್ರಿಯ ಮಾದರಿಯಲ್ಲಾದರೂ ಸಾಮಾಜಿಕ ಸಮಸ್ಯೆಗಳನ್ನು ಒಳಗೊಳ್ಳುವುದೋ ಅಥವಾ ಅವುಗಳಿಗೆ ಪರಿಹಾರ ಕಂಡುಹಿಡಿದು ಸೂಚಿಸುವುದೋ-ಬೋಧಿಸುವುದೋ ಮಾಡುತ್ತಿದ್ದದುಂಟು. ಇಂದಿನ ಕಾಲಘಟ್ಟದಲ್ಲಿ ಮಾರುಕಟ್ಟೆ ವಿಸ್ತೃತವಾಗಿ, ಹಿಂದಿನ ದಿನಗಳಿಗೆ ಹೋಲಿಸಿದರೆ ಸಿನೆಮಾ ನಿರ್ಮಾಣ ಸುಲಭವಾಗಿರುವ ದಿನಗಳಲ್ಲಿ ಆ ಜಾಗೃತ ಮಾದರಿಯಿಂದ ಸಾಕಷ್ಟು ದೂರ ಸರಿದು ವ್ಯವಹಾರ ಮಾಡಿದರಷ್ಟೇ ಸಾಕು ಎಂಬ ಸಿದ್ಧ ಮಾದರಿಗಳತ್ತ ಬಂದು ನಿಂತಿರುವುದು ನಿಜ. ವೈಭವತೆ, ಅತಿರಂಜಿತ ಹಿರೋಯಿಸಂ ನೆಚ್ಚಿಕೊಂಡ ಶೋ ಉದ್ದಿಮೆಯಲ್ಲಿ, ಕಂಟೆಂಟ್-ವಸ್ತು-ವಿಷಯಕ್ಕೆ ಇದ್ದ ಪ್ರಾಮುಖ್ಯತೆ ಕ್ಷೀಣಿಸಿರುವುದು, ಕನ್ನಡ ಚಿತ್ರರಂಗ ಮತ್ತೆ ತನ್ನನ್ನು ಶೋಧಿಸಿಕೊಳ್ಳಬೇಕೆ ಎಂಬ ಪ್ರಶ್ನೆ ಏಳುವಂತೆ ಮಾಡಿದೆ. ಇಂತಹ ಸಮಯದಲ್ಲಿ ಆಶಾವಾದ ಹುಟ್ಟಿಸುವ ಕೆಲವೇ ಟ್ರೇಲರ್ ಗಳು ಕೂಡ ಹೆಚ್ಚಿನ ಚರ್ಚೆಗೆ ಗ್ರಾಸವಾಗುತ್ತವೆ. ಅಂತಹ ಭರವಸೆ ಹುಟ್ಟಿಸಿದ್ದ ಆದರ್ಶ್ ಎಚ್ ಈಶ್ವರಪ್ಪ ನಿರ್ದೇಶನದ 'ಶುದ್ಧಿ' ಈ ವಾರ ಬಿಡುಗಡೆ ಕಂಡಿದೆ. 
ದೆಹಲಿಯಲ್ಲಿ ನಡೆದ ರೇಪ್ ಪ್ರಕರಣದ ಆರೋಪಿಯೊಬ್ಬ ಅಪ್ರಾಪ್ತ ಎಂಬ ಕಾರಣಕ್ಕೆ ಶಿಕ್ಷೆಯ ಪ್ರಮಾಣ ಕಡಿಮೆಯಾಗುವುದರ ವಿರುದ್ಧ ತಿರುಗಿಬಿದ್ದು, ಜನರಲ್ಲಿ ಅರಿವು ಮೂಡಿಸಲು ಬೀದಿ ನಾಟಕದ ಮೊರೆ ಹೋಗುವ ಇಬ್ಬರು ಪತ್ರಕರ್ತೆಯರು (ನಿವೇದಿತಾ ಮತ್ತು ಅಮೃತ ಕರಗದ). ರೇಪ್ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳಲು ವಿದೇಶದಿಂದ ಹಿಂದಿರುಗುವ ಯುವತಿ ಕ್ಯಾರೊಲಿನ್ ಸ್ಮಿತ್ (ಲಾರೆನ್ಸ್ ಸ್ಪಾರ್ಟಾನೋ). ಎಟಿಎಂನಲ್ಲಿ ಮಹಿಳೆಯ ಮೇಲೆ ದಾಳಿ ಮಾಡುವ ವ್ಯಕ್ತಿ. ಈ ಪ್ರಕರಣಗಳನ್ನು ಭೇಧಿಸಲು ಹೈರಾಣಾಗುವ ಕೈಂ ಬ್ರಾಂಚ್ ಪೊಲೀಸರು. ಹೀಗೆ ಕಳೆದ ಐದಾರು ವರ್ಷಗಳಲ್ಲಿ ನಮ್ಮ ಕಣ್ಮುಂದೆ ಸರಿದು ಹೋದ ನಿಜ ಅಪರಾಧಗಳನ್ನು ಪೋಣಿಸುತ್ತಾ, ಕಾಲ್ಪನಿಕ ರಾಜಕೀಯ-ಕ್ರೈಮ್ ಥ್ರಿಲ್ಲರ್ ಕಥೆ ಹೆಣೆದಿರುವ ನಿರ್ದೇಶಕ ಕೊನೆಯವರೆಗೂ ಪ್ರೇಕ್ಷಕನ ಕುತೂಹಲವನ್ನು ಕಾಯ್ದುಕೊಳ್ಳುತ್ತಾರೆ. 
ಕ್ಯಾರೊಲಿನ್ ಎಂಬ ದಿಟ್ಟ ಮನಸ್ಸಿನ ಯುವತಿ, ಸಮಾಜದ ಕೆಲವು ಕೆಡುಕು ವ್ಯಕ್ತಿಗಳ ನಿರ್ಮೂಲನೆಗಾಗಿ ಹೋರಾಡುವ ಮಾಮೂಲಿ ಪ್ರತೀಕಾರದ ಕಥೆ ಮುನ್ನಲೆಯಲ್ಲಿ, ಅಷ್ಟೇನೂ ವಿವರಗಳಿಂದ ಕೂಡಿರದೆ, ಲೀನಿಯರ್ ಆಗಿ (ಕಥೆಯ ಈ ಎಳೆ ಮಾತ್ರ) ಮುಂದುವರೆದರು, ಜೊತೆಗೆ ಹೆಣೆದ ಇತರ ಉಪಕಥೆಗಳು-ಘಟನೆಗಳು ಮತ್ತು ಅವುಗಳಲ್ಲಿ ಅಡಕವಾದ ಸೂಕ್ಷ್ಮತೆಯ ರಾಜಕೀಯ ಧೋರಣೆಗಳು ಹೆಚ್ಚು ಆಪ್ತವಾಗುತ್ತವೆ. ಸಮಾಜದ ಕೆಡುಕಿಗೆ ಸ್ಪಂದಿಸಿ ಕಲೆಯ (ಬೀದಿ ನಾಟಕಗಳ) ಮೂಲಕ ಜನರಲ್ಲಿ ಅರಿವು ಮೂಡಿಸಲು ಹೊರಡುವ ಇಬ್ಬರು ಯುವ ಪತ್ರಕರ್ತೆಯರ ಪಾತ್ರಗಳು ತುಸು ರೊಮ್ಯಾಂಟಿಸೈಸ್ ಮಾಡಲಾಗಿದೆ ಎನ್ನಿಸಿದರೂ, ಹೇಯ ಅಪರಾಧದ ಕಥೆಗೆ ಅಂತಹ ಆದರ್ಶ ಅವಶ್ಯಕ ಎಂಬ ಭಾವನೆಯನ್ನು ಮೂಡಿಸಲು ಒಟ್ಟಾರೆ ಸಿನೆಮಾಗೆ ಸಾಧ್ಯವಾಗಿದೆ. 
ಜನಪ್ರಿಯ ಮಾದರಿಯಲ್ಲಿ ಕೇಳುವ ಕೆಲವೊಂದು ಪ್ರಶ್ನೆಗಳು, ನೀಡುವ ಅಂಕಿಅಂಶಗಳು ಪ್ರೇಕ್ಷಕನಿಗೆ ಚಿಂತನೆಗೆ ಒಡ್ಡಬಲ್ಲವಾಗಿವೆ. ರೇಪ್ ಪ್ರಕರಣಗಳಲ್ಲಿ ಭಾಗಿಯಾದ ಬಾಲಾಪರಾಧಿಗಳ ಶಿಕ್ಷೆಯನ್ನು ತಗ್ಗಿಸುವ ಕ್ರಮ ಸರಿಯಲ್ಲ, ಬಾಲಾಪರಾಧಿ ಕಾಯ್ದೆಯಲ್ಲಿ ತಿದ್ದುಪಡಿಯ ಅವಶ್ಯಕೆತೆ ಇದೆ ಎಂದು ದೆಹಲಿ ನಿರ್ಭಯ ರೇಪ್ ಪ್ರಕರಣದಲ್ಲಿ ಎದ್ದಿದ್ದ ಚಳುವಳಿ ರೀತಿಯ ಕೂಗನ್ನು ಸಿನೆಮಾ ಅಡಕಗೊಂಡಿರುವುದಲ್ಲದೆ ಅದನ್ನು ಪ್ರತಿಧ್ವನಿಸಿ-ಪ್ರತಿಪಾದಿಸುತ್ತದೆ. ಆದರೆ ಅಂತ್ಯದಲ್ಲಿ, (ಸಿನೆಮಾ ಕಥೆಯ) ರೇಪ್ ನಡೆಸಿದವರು ಅಪ್ರಾಪ್ತರಲ್ಲದೆ, ಪ್ರಭಾವಿ ಪೋಷಕರ ಸಹಾಯದಿಂದ ತಮ್ಮ ಜನ್ಮ ದಿನಾಂಕದ ನಕಲಿ ಪ್ರಮಾಣ ಪತ್ರ ಪಡೆದು ಶಿಕ್ಷೆಯಿಂದ ತಪ್ಪಿಸಿಕೊಂಡವರು ಎಂಬ ನಿರ್ಣಯದಲ್ಲಿ, ಚಿಕಿತ್ಸೆ ಬೇಕಾಗಿರುವುದು ನೈತಿಕವಾಗಿ ಅಧಃಪತನವಾಗಿರುವ ಸಾಮಾಜಿಕ-ರಾಜಕೀಯ ವ್ಯವಸ್ಥೆಗೋ? ಅಥವಾ ನಿಜಕ್ಕೂ ಬಾಲಾಪರಾಧಿ ಕಾಯ್ದೆಗೂ? ಎಂಬ ದ್ವಂದ್ವವನ್ನು ಚರ್ಚಿಸಲಾಗದೆ ಸಿನೆಮಾ ಅಡಗಿಸಿಕೊಂಡಿದೆ. ಇಂತಹ ಪ್ರಶ್ನೆಗಳನ್ನು ಎತ್ತುವುದು ಕೂಡ ಪರಿಣಾಮಕಾರಿ ದೃಶ್ಯ ಕಲಾ ಮಾಧ್ಯಮದ ಕೆಲಸವಲ್ಲವೇ? 
ಸಿನೆಮಾದಲ್ಲಿ ಬಹಳ ದಿಟ್ಟತನದಿಂದ ಮೂಡಿರುವ ಮತ್ತೊಂದು ಸಮಸ್ಯೆ (ಘಟನೆ) ಹಾಗು ಅದನ್ನು ವ್ಯವಹರಿಸಿರುವ ರೀತಿಗೆ ಈ ಸಿನೆಮಾ ಕರ್ತೃ ಆದರ್ಶ್ ಬಹಳವಾಗಿ ಕಾಡುತ್ತಾರೆ. ಮಂಗಳೂರಿನಲ್ಲಿ ನಡೆದ ಪಬ್ ಗಳ ಮೇಲೆ ದಾಳಿ, ಧರ್ಮದ ಹೆಸರಿನಲ್ಲಿ ನೈತಿಕ ಪೊಲೀಸ್ ಗಿರಿ ಇವುಗಳನ್ನು ಸಿನೆಮಾಕಥೆಯೊಳಗೆ ಪೋಣಿಸಿ, ಎಲ್ಲಿಯೂ ಬೋಧನೆಯಂತೆ ಕಾಣದೆ ಅವುಗಳ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತುತ್ತಾರೆ. ಈ ದಾಳಿ ಮಾಡುವವರ ಭೋಳೆತನವನ್ನು ಬಯಲು ಮಾಡಿ ಪ್ರತಿಕಾರ ತೀರಿಸಿಕೊಳ್ಳುವ ವಿದೇಶಿ ಯುವತಿ ಕೂಡ ಇಲ್ಲಿನ ಧರ್ಮದಿಂದ ಸ್ಫೂರ್ತಿ ಪಡೆದವಳೇ. ನಕಲಿ ಧರ್ಮರಕ್ಷಕರು, ಕೋಮುವಾದಿಗಳು ಹಿಡಿತದಲ್ಲಿ ಇಟ್ಟುಕೊಂಡಿರುವ 'ಧರ್ಮ ಸಂಸ್ಥಾಪನೆ'ಯ ಕಾರ್ಯವನ್ನು ಕಸಿದುಕೊಂಡು, ಧರ್ಮ ಗ್ರಂಥಗಳ ಬೋಧನೆಗಳನ್ನು ಉದಾತ್ತ ಚಿಂತನೆಗಳಿಂದ ಮತ್ತೆ ಕಟ್ಟಬೇಕಿದೆ ಎಂಬುದನ್ನು ಸಿನೆಮಾ ಧೈರ್ಯವಾಗಿ ಹೇಳುತ್ತದೆ. 
ಹಲವು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ 'ಶುದ್ಧಿ' ಅಂತರ್ಗತವಾಗಿ ಕೆಲವು ಸಮಸ್ಯೆಗಳನ್ನು ಪೋಷಿಸಿಕೊಳ್ಳುತ್ತದೆ. ಅವೆಲ್ಲವೂ ಸಿನೆಮಾ ವಸ್ತುವಿನ ಕುರಿತಾದವೆ! ನಾಗರಿಕ ಸಮಾಜದಲ್ಲಿ ಸೇಡಿನ ಪ್ರಾಮುಖ್ಯತೆ ಎಷ್ಟು? ಸಮಸ್ಯೆಗಳಿಗೆ ಸೇಡು ಪರಿಹಾರವೇ? ಪ್ರತಿಕಾರಕ್ಕೆ ಇಳಿದರೆ ವ್ಯವಸ್ಥೆಯ ಬದಲಾವಣೆ ಸಾಧ್ಯವೇ ಅಥವಾ ಸಮಸ್ಯೆಗಳ ಉಲ್ಬಣಕ್ಕೆ ಕಾರಣವಾಗುತ್ತದೆಯೇ? ಎಂಬಿತ್ಯಾದಿ ಪ್ರಶ್ನೆಗಳ ಜೊತೆಗೆ ಕೆಲವೊಮ್ಮೆ ಘೋಷಣಾ ಮಾದರಿಗೆ ಇಳಿದುಬಿಡುವ ಸಿನೆಮಾ, ಇನ್ನಷ್ಟು ಆಯಾಮಗಳನ್ನು ಸೂಕ್ಷ್ಮವಾಗಿ ಪರಿಗಣಿಸಿದ್ದರೆ ಹೆಚ್ಚು ಪರಿಣಾಮಕಾರಿಯಾಗುತ್ತಿತ್ತೇನೋ. ಪ್ರತಿಕಾರಕ್ಕೆ ರೂಪಿಸುವ ತಂತ್ರ, ಅದಕ್ಕೆ ಆಗುವ ಅಡೆತಡೆಗಳು, ಇವುಗಳ ವಿವರಗಳನ್ನು ಇನ್ನಷ್ಟು ಥ್ರಿಲ್ಲಿಂಗ್ ಆಗಿ ರೂಪಿಸಬಹುದಾಗಿತ್ತು ಕೂಡ. ಹಾಗೆಯೇ ಕ್ರೈಮ್ ಸೀನ್ ಗಳನ್ನು ಪೊಲೀಸರು ಪರಿಶೀಲಿಸುವ ದೃಶ್ಯಗಳಲ್ಲಿ ಹೆಚ್ಚಿನ ನಾಟಕೀಯತೆಯೂ ಬೇಕಿತ್ತು ಎಂದೆನಿಸದೆ ಇರದು. 
ತಾಂತ್ರಿಕವಾಗಿ ಈ ಹೊಸ ತಂಡ ಹಲವು ಅಚ್ಚರಿಗಳನ್ನು ಮೂಡಿಸುತ್ತದೆ. ಶಬ್ದ ವಿನ್ಯಾಸ ಅದ್ಭುತವಾಗಿ ಮೂಡಿಬಂದಿದ್ದು, ಇಡೀ ಸಿನೆಮಾದ ಟೋನ್ ಅನ್ನು ಗಟ್ಟಿಯಾಗಿ ಹಿಡಿದಿಡುತ್ತದೆ. ರಾತ್ರಿ ಸಮಯದಲ್ಲಿ ನಡೆಯುವ ಅಪರಾಧಿ ದೃಶ್ಯಗಳನ್ನು ಚಿತ್ರೀಕರಿಸಿರುವ ರೀತಿಯಾಗಲಿ, ಕೆಲವೊಂದು ಚೇಸಿಂಗ್ ದೃಶ್ಯಗಳಾಗಲಿ ಬಹಳ ನೈಜತೆಯಿಂದ ಕೂಡಿದ್ದು, ಪ್ರೇಕ್ಷಕನನ್ನು ಆಸನದ ತುದಿಗೆ ತಂದು ಕೂಡಿಸುತ್ತವೆ. ಎರಡು ಕಾಲಘಟ್ಟಗಳಲ್ಲಿ ನಡೆಯುವ ಕಥೆಗಳನ್ನು ಬಹಳ ಜಾಣ್ಮೆಯಿಂದ ಒಗ್ಗೂಡಿಸಿರುವ ನಿರ್ದೇಶಕ, ಕೊನೆಗೆ ನೀಡುವ ತೀರ್ಮಾನದಿಂದ ತುಸು ಗೊಂದಲವನ್ನು ನಿರ್ಮಿಸಿ, 'ಆಹಾ ಈಗ ತಿಳಿಯಿತು' ಎಂದು ಪ್ರೇಕ್ಷಕ ಉದ್ಘಾರ ಎಳೆಯುವಂತೆ ಮಾಡಿ, ಚರ್ಚೆಗೆ ಅನುವುಮಾಡಿಕೊಡುತ್ತಾರೆ. ಈ ಜಾಣ್ಮೆಯ ನಿರೂಪಣೆ ಮತ್ತೆ ಕಥೆಗೆ ಸಾಕಷ್ಟು ಸಹಕರಿಸಿದೆ. ನಟನೆಯಲ್ಲಿ ನಿವೇದಿತಾ, ಅಮೃತಾ ಮತ್ತು ಸ್ಪಾರ್ಟಾನೋ ಅಚ್ಚುಕಟ್ಟು. ಉಳಿದ ತಾರಾಗಣದ ನಟನೆ ಕೂಡ ಪೂರಕವಾಗಿದೆ. 
ಒಂದಷ್ಟು ಕಡೆ ಎಡವಿದಂತೆ ಕಂಡರೂ, ಒಟ್ಟಾರೆ ಸಿನೆಮಾ ತಾಳುವ ನಿಲುವು, ಕಟ್ಟಿಕೊಡುವ ಸಮಸ್ಯೆಗಳು, ಅಂತ್ಯಕ್ಕೆ ಮೂಡಿಸುವ ಭಾವನೆಗಳಿಂದ ಆದರ್ಶ್ ಈಶ್ವರಪ್ಪ ನಿರ್ದೇಶನದ ಈ ಸಿನೆಮಾ ಮನಸ್ಸಿನಲ್ಲುಳಿಯುತ್ತದೆ. ತಾಂತ್ರಿಕವಾಗಿಯೂ ಉತ್ತಮವಾಗಿರುವ, ಈ ಹೊಸ ತಂಡ ಕಟ್ಟಿಕೊಟ್ಟಿರುವ 'ಶುದ್ಧಿ' ಒಂದು ಪ್ರತೀಕಾರದ ಥ್ರಿಲ್ಲರ್ ಆಗಿಯೂ, ನಮ್ಮೆಲ್ಲರಿಗೂ ಪ್ರಶ್ನೆಗಳನ್ನು ಕೇಳುವಂತೆ-ಚರ್ಚಿಸುವಂತೆ ಚಿತಾವಣೆ ಮಾಡುತ್ತದೆ ಎಂಬುದಕ್ಕಾದರು, ಕನ್ನಡ ಕಲಾರಸಿಕರು ಸಿನೆಮಾ ನೋಡಿ ಬೆನ್ನುತಟ್ಟಿಯೋ ಅಥವಾ ತಿದ್ದಿ ತೀಡುವ ಮಾತುಗಳಿಂದಲೋ ಪ್ರೋತ್ಸಾಹಿಸುವ ಅವಶ್ಯಕತೆಯಿದೆ. 
ವಿ ಸೂ: 'ಶುದ್ದಿ' ನಾಳೆ (ಶುಕ್ರವಾರ) ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com