ಮನೋರೋಗ ಸಾಪೇಕ್ಷ ಸಿದ್ಧಾಂತದ 'ರೋಗ್'

ಹಲವು ಹೊಸ ನಟರನ್ನು ಬೆಳ್ಳಿತೆರೆಗೆ ಪರಿಚಯಿಸಿರುವ ಖ್ಯಾತಿಯ, ತೆಲುಗಿನ ಜನಪ್ರಿಯ ನಿರ್ದೇಶಕ ಪೂರಿ ಜಗನ್ನಾಥ್ ಈಗ ಕನ್ನಡ ಮತ್ತು ತೆಲುಗಿನಲ್ಲಿ ನಿರ್ದೇಶಿಸಿರುವ 'ರೋಗ್'ನಲ್ಲಿ ಪಾದಾರ್ಪಣೆ ಮಾಡಿರುವ ನಟ
ರೋಗ್ ಸಿನೆಮಾ ವಿಮರ್ಶೆ
ರೋಗ್ ಸಿನೆಮಾ ವಿಮರ್ಶೆ
ಹಲವು ಹೊಸ ನಟರನ್ನು ಬೆಳ್ಳಿತೆರೆಗೆ ಪರಿಚಯಿಸಿರುವ ಖ್ಯಾತಿಯ, ತೆಲುಗಿನ ಜನಪ್ರಿಯ ನಿರ್ದೇಶಕ ಪೂರಿ ಜಗನ್ನಾಥ್ ಈಗ ಕನ್ನಡ ಮತ್ತು ತೆಲುಗಿನಲ್ಲಿ ನಿರ್ದೇಶಿಸಿರುವ 'ರೋಗ್'ನಲ್ಲಿ ಪಾದಾರ್ಪಣೆ ಮಾಡಿರುವ ನಟ ಇಶಾನ್. ಒರಟ-ಫಟಿಂಗ-ಪುಂಡ ಎಂಬಂತಹ ಅರ್ಥ ಬರುವ ಶೀರ್ಷಿಕೆ ಹೊತ್ತ ಸಿನೆಮಾ, ಇಶಾನ್ ಅವರ ಉಡಾಯನಕ್ಕೆ ಗಟ್ಟಿ ನೆಲೆ ಒದಗಿಸಿದೆಯೇ? ಹಲವು ವರ್ಷಗಳ ನಂತರ ಕಾಣಿಸಿಕೊಂಡಿರುವ ಪೂರಿ ಮ್ಯಾಜಿಕ್ ಉಳಿದುಕೊಂಡಿದೆಯೇ? 
ಕೋಲ್ಕತ್ತಾ ಕಮಿಷನರ್ ಮಗಳು ಅಂಜಲಿ (ಏಂಜೆಲಾ ಕ್ರಿಸ್ಲಿನ್ಸ್ಕಿ) ಜೊತೆಗೆ ಎರಾಟಿಕ್ ಪ್ರೇಮದಲ್ಲಿರುವ ಜಯ್ ಅಲಿಯಾಸ್ ರೋಗ್ (ಇಶಾನ್)ಗೆ, ತನ್ನ ಪ್ರಿಯತಮೆ ಮತ್ತೊಬ್ಬನ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡ ವಿಷಯ ತಿಳಿದು, ಇದಕ್ಕಾಗಿ ಹೊಡೆದಾಡಿ, ಪೊಲೀಸರಿಂದ ಗುಂಡೇಟು ತಿಂದು ಜೈಲು ಸೇರುತ್ತಾನೆ. ಅಂಜಲಿಯ ಪ್ರೀತಿ ಅವಕಾಶವಾದದ್ದು ಎಂದು ತಿಳಿದು ಭ್ರಮನಿರಸವಾಗುವ ಜಯ್ ಮನುಕುಲದ ಎಲ್ಲ ಯುವತಿಯರ ಬಗ್ಗೆ ಅಸಹ್ಯ ತಳೆದುಬಿಡುತ್ತಾನೆ. ಜೈಲಿಗೆ ಹೋಗುವ ಮುಂಚೆ ತಾನು ಹೊಡೆದಿದ್ದಕ್ಕೆ ಪೊಲೀಸ್ ಪೇದೆಯೊಬ್ಬ ಸ್ವಾದೀನ ಕಳೆದುಕೊಂಡಿರುವ ವಿಷಯ ತಿಳಿದು ಅವರ ಕುಟುಂಬದ ಸೇವೆಗೆ ನಿಲ್ಲುತ್ತಾನೆ. ಮುಂದೆ ಏನಾಗುತ್ತದೆ? 
ಪ್ರೇಮವೈಫಲ್ಯದಿಂದ ಮಾನಸಿಕ ಅಸ್ವಸ್ಥನಾಗುವ ಯುವಕನ ಕಥೆ ಮೇಲ್ನೋಟಕ್ಕೆ ಅಪ್ಯಾಯಮಾನ ಎನ್ನಿಸಿದರೂ, ಅದರ ನಿರ್ವಹಣೆಯಲ್ಲಿ ಸಿನೆಮಾ ಸೋಲುತ್ತದೆ. ಅವಕಾಶವಾದಿ ಪ್ರೇಮದಿಂದ ನೊಂದು ಇಡೀ ಯುವ ಸ್ತ್ರೀಕುಲದ ಬಗ್ಗೆಯೇ ಕೋಪ ತಾಳುವ ಯುವಕನಲ್ಲಿ ಒಳ್ಳೆಯ ಗುಣಗಳು ಕೂಡ ಮನೆಮಾಡಿವೆ ಎಂಬ ಸಂಕೀರ್ಣತೆಯಲ್ಲಿ ತುಸು ಯೋಚಾನಲಹರಿ ಕೆಲಸ ಮಾಡಿದ್ದರೂ, ಆ ವ್ಯಕ್ತಿಯ ಮನೋವೈಕಲ್ಯತೆಯನ್ನು ವಿಜೃಂಭಿಸುವ ದೃಶ್ಯಗಳು ಹೇರಳವಾಗಿದ್ದು, ಸಿನೆಮಾ ದಾರಿ ತಪ್ಪುತ್ತದೆ. ಅಂಜಲಿ ಎಂಬ ಯುವತಿಯಿಂದ ಮೋಸ ಹೋದ ಈ ನಾಯಕನಟನಿಗೆ, ಅಂಜಲಿ ಎಂಬ ಹೆಸರಿರುವ ಯಾವ ಯುವತಿಯನ್ನು ಕಂಡರೂ ಕೋಪ. ಇದೆ ಹುಚ್ಚುತನದಲ್ಲಿ ಅಂಜಲಿ ಎಂಬ ಒಬ್ಬ ಮಹಿಳೆಗೆ ಕಪಾಳಕ್ಕೆ ಭಾರಿಸುವ ದೃಶ್ಯ ಬಹಳ ಜಾಳಾಗಿದ್ದು, ಒಳ್ಳೆಯ ಅಭಿರುಚಿಯಿಂದ ಕೂಡಿಲ್ಲ. ಈ ಮನೋರೋಗಿ ಒಳ್ಳೆಯ ರೀತಿಯಲ್ಲಿ ಬದಲಾಗುವ ಅಥವಾ ಸುಧಾರಿಸುವತ್ತ ಸಿನೆಮಾ ಮುಂದುವರೆದಿದ್ದರೆ ಸಿನೆಮಾಗೆ ಗಟ್ಟಿತನದ ಅಧಿಕೃತತೆ ಸಾಧ್ಯವಾಗುತ್ತಿತ್ತು. 
ಸಿನೆಮಾದಲ್ಲಿ ಧುತ್ತೆಂದು ಗೋಚರವಾಗುವ ಪಾತ್ರಗಳಿಗೆ ಸರಿಯಾದ ಎಸ್ಟಾಬ್ಲಿಶ್ಮೆಂಟ್ ಕೂಡ ಇಲ್ಲದೆ ಇರುವುದು ಬರವಣಿಗೆಯಲ್ಲಿನ ಅಶಕ್ತತೆಯನ್ನು ತೋರಿಸುತ್ತದೆ. ಪ್ರೀತಿಯ ತಾಯಿ ಮತ್ತು ತಂದೆಯ ಜೊತೆಗೆ ಬೆಳೆದ ನಾಯಕನಟನ ವಿಚಿತ್ರ ವರ್ತನೆ ಪ್ರೇಕ್ಷಕನಿಗೆ ಕಗ್ಗಂಟಾಗಿಯೇ ಉಳಿಯುತ್ತದೆ. ದ್ವಿತೀಯಾರ್ಧದಲ್ಲಿ ನಾಯಕನಟ ಸ್ವಲ್ಪ ಸುಧಾರಿಸಿದವನಂತೆ ಕಂಡುಬರಲು ನಿರ್ದೇಶಕ ಒಡ್ಡುವ ಸಂಘರ್ಷ ಇನ್ನು ಭೀಕರ. ನಾಯಕನಟನಿಗಿಂತಲೂ ಹೆಚ್ಚು ಮಾನಸಿಕ ಅಸ್ವಸ್ಥನೊಬ್ಬ ಜೈಲಿನಿಂದ ಹೊರಬಂದು, ಜಯ್ ಗೆ ಗೆಳೆಯನಾಗುತ್ತಾನೆ. ನಂತರ ಒಂದಷ್ಟು ಘಟನೆಗಳು ಇವರಿಬ್ಬರನ್ನು ಸ್ಪರ್ಧಿ-ವಿರೋಧಿಗಳನ್ನಾಗಿಸುತ್ತದೆ. ಜಯ್ ಕಾಪಾಡುತ್ತಿರುವ ಸ್ವಾದೀನ ಕಳೆದುಕೊಂಡ ಪೊಲೀಸ್ ಪೇದೆಯ ಸಹೋದರಿ ಅಂಜಲಿಯ (ಮನ್ನಾರ್ ಚೋಪ್ರಾ) ಹುಚ್ಚು ಪ್ರೇಮಿಯಾಗಿ ಕಾಣಿಸಿಕೊಳ್ಳುವ 'ಸೈಕೋ' ಮತ್ತು 'ರೋಗ್' ನಡುವೆ ಫೈಟ್ ಗಳು, ವಾಗ್ವಾದಗಳು ಯಥೇಚ್ಛವಾಗಿ ಆಗುತ್ತವೆ. ಇವುಗಳ ನಡುವೆ ಬಸವಳಿಯುವುದು ಮಾತ್ರ ಪ್ರೇಕ್ಷಕ ಮಹಾಪ್ರಭು. ಈ ಹಂತದಲ್ಲಿ ಸೃಷ್ಟಿಸಿರುವ ಯಾವ ಘಟನೆಗಳು ಕೂಡ ಆಪ್ತವಾಗಿ ಮೂಡಿಬರದೆ, ಬೇಸರ ಮೂಡಿಸುತ್ತವೆ. ಸೈಕೋ ಪಾತ್ರವಾಗಲಿ, ಎನಕೌಂಟರ್ ಪೋಲಿಸ್ ಪಾತ್ರವಾಗಲಿ, ಕನ್ವಿನ್ಸಿಂಗ್ ಎನ್ನುವಂತೆ ಮೂಡಿಬಂದಿಲ್ಲ. ಸಾಕಷ್ಟು ಜಟಾಪಟಿಗಳ ನಂತರ ಸಿನೆಮಾ ಅಂತ್ಯಗೊಂಡಾಗಲೇ ಪ್ರೇಕ್ಷಕನಿಗೆ ಸಮಾಧಾನದ ನಿಟ್ಟುಸಿರು. 
ಈ ಕಥೆ ಕೋಲ್ಕತ್ತಾದಲ್ಲಿ ಏಕೆ ನಡೆಯುತ್ತಿದೆ ಎಂಬುದನ್ನು ಕೂಡ ಸಿನೆಮಾದಲ್ಲಿ ಸರಿಯಾಗಿ ಪ್ರತಿಷ್ಠಾಪಿಸಿಲ್ಲ. ಕೋಲ್ಕತ್ತಾದಲ್ಲಿ ಭಾಷೆಯ-ಮಾತಿನ ತೊಡಕಿನ ಬಗೆಗೆ ಬರಹಗಾರನಿಗೆ-ನಿರ್ದೇಶಕನಿಗೆ ಚಿಂತೆಯೇ ಇಲ್ಲ. ನಾಯಕ ನಟಿಯ ಮನೆಯಾಗಲೀ, ಅದರ ಎದುರು ಬೀದಿಯಲ್ಲಿ ವಾಸಿಸುವ ನಾಯಕನಟನಾಗಲಿ ಎಲ್ಲವು ಕೃತಕ ಸೆಟ್ ಗಳಂತೆ ಕಂಡು ವಿವರಗಳ ವಿವೇಚನೆಯನ್ನೇ ಬದಿಗಿಟ್ಟು ಮಾಡಿರುವ ಸಿನೆಮಾದಲ್ಲಿ ಮುಖ್ಯವಾದುದು ಏನೆಂಬುದು ಯಾರಿಗೂ ತಿಳಿಯುವುದಿಲ್ಲ. ನಾಯಕನಟ ಮತ್ತು ವಿಕ್ಷಿಪ್ತತೆಯ ವಿಜೃಂಭಣೆಯನ್ನೇ ಮುನ್ನೆಲೆಯಲ್ಲಿ ತೋರಿಸಲು ಹೆಣೆದಿರುವ ಈ ಕಥೆಗೆ ಒಂದೆರಡು ಹಾಡುಗಳಲ್ಲಿ ಕಾಣಬಹುದಾದ ಎರಾಟಿಕ್ ಪ್ರೇಮದ ದೃಶ್ಯಗಳನ್ನು ಹೊರತುಪಡಿಸಿದರೆ, ರೋಮ್ಯಾಂಟಿಕ್ ದೃಶ್ಯಗಳು ಕೂಡ ನಗಣ್ಯ.
ತಾಂತ್ರಿಕವಾಗಿ ವೈಬೋಗತೆಯನ್ನು ತೆರೆಯಲ್ಲಿ ತರಲು ಕೆಲವೊಮ್ಮೆ ಪ್ರಯತ್ನಿಸಿದ್ದರು, ಅವುಗಳು ಕೃತಕತೆಯನ್ನು ಜೋಡಿಸಿಕೊಂಡಿರುವುದರಿಂದ ಈ ಅಂಶ ಅಷ್ಟೇನೂ ಮೋಡಿ ಮಾಡುವುದಿಲ್ಲ. ಸುನಿಲ್ ಕಶ್ಯಪ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಒಂದೆರಡು ಹಾಡುಗಳು ಪರವಾಗಿಲ್ಲ. ಬಹುತೇಕ ಪರಭಾಷೆಯ ನಟರೇ ಹೆಚ್ಚಿರುವ ಸಿನೆಮಾದಲ್ಲಿ ಪರಿಣಾಮಕಾರಿಯಾಗಿ ಆಗದ ಡಬ್ಬಿಂಗ್ ನಿಂದ ಲಿಪ್ ಸಿಂಕ್ ಕೊರತೆ ಎದ್ದು ಕಾಣುತ್ತದೆ. ಸಂಭಾಷಣೆಯಲ್ಲಿಯೂ ಗಟ್ಟಿತನವಿಲ್ಲ. ಇನ್ನು ನಟನೆಯಲ್ಲಿ ಪಾದಾರ್ಪಣೆ ಮಾಡಿರುವ ಇಶಾನ್, ಸಾಕಷ್ಟು ಸುಧಾರಿಸಿಕೊಳ್ಳಬೇಕಿದೆ. ಉಳಿದಂತೆ ಮನ್ನಾರ ಚೋಪ್ರಾ, ಏಂಜೆಲಾ ಕ್ರಿಸ್ಲಿನ್ಸ್ಕಿ ಮತ್ತು ಇತರ ನಟರು ಪರವಾಗಿಲ್ಲ. ಸಾಧುಕೋಕಿಲಾ ಅವರ ಹಾಸ್ಯ ಸಿನೆಮಾಗೆ ಯಾವ ರೀತಿಯಲ್ಲೂ ಸಹಕರಿಸದೆ ಪ್ರತ್ಯೇಕ ಟ್ರ್ಯಾಕ್ ಆಗಿ ಮೂಡಿಬಂದಿದೆ. 
ಕಥೆಯೊಂದನ್ನು ಹೇಳಲು ಮತ್ತು ಆ ಕಥೆಯ ಪಾತ್ರಕ್ಕೆ ನಟನೊಬ್ಬನ ಆಯ್ಕೆ ಮಾಡಿಕೊಂಡು ಸಿನೆಮಾ ಮಾಡಬೇಕೋ ಅಥವಾ ನಟನೊಬ್ಬನಿಗೆ ಸ್ಟಾರ್ ಗಿರಿ ತಂದುಕೊಡಲು ಕಥೆಯೊಂದನ್ನು ಹೆಣೆದು, ಹಿರೋಯಿಸಂನನ್ನ ವಿಜೃಂಭಿಸಿ ಸಿನೆಮಾ ಮಾಡಿ ಮುಗಿಸಬೇಕೋ ಎಂಬ ಆಯ್ಕೆಗಳಲ್ಲಿ ಎರಡನೆಯದನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕ ಪೂರಿ ಜಗನ್ನಾಥ್, ಬರವಣಿಗೆಯಲ್ಲಿ ಸ್ಪಷ್ಟತೆ ಇಲ್ಲದೆ, ಅವಸರದಲ್ಲಿ ಕಟ್ಟಿಕೊಟ್ಟಂತೆ ಕಾಣುವ ಈ ಚಿತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವುದು ಕಷ್ಟ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com