ಹೊಸ ಬಾಟಲಿಯಲ್ಲಿ ಹಳೆ ಮದ್ಯ ಎಂಬ ಪುರಾತನ ಮಾತಿನಂತೆ!

ಡ್ಯಾನಿ (ಧನಂಜಯ್) ಎಂಬ ಜನಮೆಚ್ಚಿದ ರೇಡಿಯೋ ಜಾಕಿ, ತನ್ನ ಮಾತಿನ ಮೋಡಿಯಿಂದ ಅಸಂಖ್ಯಾತ ಜನರ ಖುಷಿಗೆ ಕಾರಣವಾಗಿದ್ದರೂ, ತನ್ನ ಮಡಿಲಿನಲ್ಲೇ ದುಃಖವನ್ನು ತುಂಬಿಸಿಕೊಂಡಿದ್ದಾನೆ.
ಹ್ಯಾಪಿ ನ್ಯೂ ಇಯರ್ ಸಿನೆಮಾ ವಿಮರ್ಶೆ
ಹ್ಯಾಪಿ ನ್ಯೂ ಇಯರ್ ಸಿನೆಮಾ ವಿಮರ್ಶೆ
ಡ್ಯಾನಿ (ಧನಂಜಯ್) ಎಂಬ ಜನಮೆಚ್ಚಿದ ರೇಡಿಯೋ ಜಾಕಿ, ತನ್ನ ಮಾತಿನ ಮೋಡಿಯಿಂದ ಅಸಂಖ್ಯಾತ ಜನರ ಖುಷಿಗೆ ಕಾರಣವಾಗಿದ್ದರೂ, ತನ್ನ ಮಡಿಲಿನಲ್ಲೇ ದುಃಖವನ್ನು ತುಂಬಿಸಿಕೊಂಡಿದ್ದಾನೆ. ಶ್ವಾಸಕೋಶ ತೊಂದರೆಯ ಮಾರಣಾಂತಿಕ ಖಾಯಿಲೆಯಿಂದ ನರಳುತ್ತಿರುವ ತನ್ನ ಪ್ರೀತಿಯ ಗೆಳತಿ ಚಾರ್ವಿ (ಶ್ರುತಿ ಹರಿಹರನ್) ಆರು ತಿಂಗಳಿನಿಂದ ಆಸ್ಪತೆಯಲ್ಲಿ ಕಾಲ ದೂಡುತ್ತಿದ್ದು, ಕಾಶ್ಮೀರ ನೋಡುವ ಅವಳ ಕೊನೆಯ ಆಸೆಯನ್ನು ಪೂರೈಸಲಾಗದೆ, ಆಸ್ಪತ್ರೆಯ ಖರ್ಚು ಭರಿಸಲು ನಾನಾ ಕೆಲಸಗಳನ್ನು ಮಾಡುತ್ತಿದ್ದಾನೆ. ಪೊಲೀಸ್ ಹಿರಿಯ ಅಧಿಕಾರಿಯ ಕಾರ್ ಚಾಲಕನಾಗಿರುವ ಕಾನ್ಸ್ಟೆಬಲ್ ಗೆ (ವಿಜಯ್ ರಾಘವೇಂದ್ರ) ಕೆಲಸದ ಒತ್ತಡದಲ್ಲಿ ಮಡದಿ-ಮಗಳ ಜೊತೆಗೆ ಹೆಚ್ಚು ಕಾಲ ಕಳೆಯಲು ಸಮಯವಿಲ್ಲದೆ ಕೊರಗುತ್ತಿದ್ದರೆ, ಹೊಸವರ್ಷದ ಆರಂಭದ ರಾತ್ರಿ ನಡೆಯಲಿರುವ ಮಗಳ ನೃತ್ಯಕ್ಕೆ ಹೋಗುವ ಸಾಧ್ಯತೆ ಬಗ್ಗೆ ಕಾರ್ಮೋಡ ಕವಿದಿದೆ. ಹರ್ಷ (ದಿಗಂತ್) ಕೆಲಸ ಜಂಜಾಟದಲ್ಲಿ ಬದುಕುತ್ತಿರುವ ಮತೊಬ್ಬ ಯುವಕ, ಗೆಳೆಯರಿಂದ ಹಣ ಪಡೆದು ಪಟ್ಟಾಯದಲ್ಲಿ ಮೋಜು ಮಸ್ತಿಗೆ ಹಾರಿದಾಗ, ಪಯಣಿಗಳೊಬ್ಬನನ್ನ ಭೇಟಿ ಮಾಡುತ್ತಾನೆ. ವಿಸ್ಮಯಳ ನಂಬಿಕೆಗೆ ವಿರುದ್ಧವಾಗಿ ಅವಳನ್ನು ಅವಮಾನಿಸುವುದರಿಂದ ಗೆಳತಿಯನ್ನು ಕಳೆದುಕೊಳ್ಳುವ ಆತಂಕ ಅವನದ್ದು. ಕಾರ್ ಮಾರಾಟ ಸಂಸ್ಥೆಯ ವ್ಯವಸ್ಥಾಪಕ (ಸಾಯಿಕುಮಾರ್) ಮಡದಿಯ (ಸುಧಾರಾಣಿ) ವಿಪರೀತ ಮಡಿಗೆ ಬೇಸತ್ತು, ತನ್ನ ಕಚೇರಿಯ ಸೇಲ್ಸ್ ಮ್ಯಾನೇಜರ್ ಮೇಲೆ ಜೊಲ್ಲು ಸುರಿಸುತ್ತಾನೆ. ಪತ್ನಿಗೆ ಗುಟ್ಟು ತಿಳಿದಾಗ ನಡೆಯುವುದೇನು? ಜೈಲಿನಿಂದ ಬಿಡುಗಡೆಯಾದ ಕುಖ್ಯಾತ ರೌಡಿ ಕೌರವ (ಬಿ ಸಿ ಪಾಟೀಲ್), ವಿದೇಶಿ ಯುವತಿಯ ಬೆಡಗಿಗಿ ಮನಸೋತು ತನ್ನ ಬೆದರಿಕೆ-ರೌಡಿ ವೃತ್ತಿಯನ್ನು ತೊರೆದರು, ಇಂಗ್ಲಿಷ್ ಭಾಷೆ ತಿಳಿಯದೆ ಅವಳನ್ನು ಒಲಿಸಿಕೊಳ್ಳುವುದು ಹೇಗೆ? ಹೀಗೆ ಈ ಐದು ಜನರು ತಮ್ಮ ತೊಂದರೆಗಳಿಂದ ವಿಮೋಚನೆ ಪಡೆಯುವರೇ? ಇವರ ಬಾಳಲ್ಲಿ ಹೊಸ ವರ್ಷದ ನವಗಾಳಿ ಬೀಸುವುದೇ? 
ಬದುಕಿನ ಜಂಜಾಟದಲ್ಲಿರುವ ಈ ಐವರು ಪುರುಷರ ಬಾಳಲ್ಲಿ ಹೊಸವರ್ಷದ ದಿನ ಘಟಿಸಲಿರುವ 'ಜೀವನ ಬದಲಿಸುವ ಆಶಾದಾಯಕ ಕಥೆ'ಯನ್ನು ನಿರ್ದೇಶಕ ಮೂಡಿಸಿದ್ದರೂ, ಯಾವ ಕಥೆಗಳಲ್ಲೂ ತಾಜಾತನ ಇರದಿರುವುದು ಬೇಸರ ಮೂಡಿಸುತ್ತದೆ. ಈ ಹಿಂದೆ ಹಲವು ಸಿನೆಮಾಗಳಲ್ಲಿ ಕಂಡಿರುವ ಕಥೆಗಳನ್ನೇ ಇಲ್ಲಿ ಮತ್ತೆ ಮೂಡಿಸುವ ಈ ಪ್ರಯತ್ನದಲ್ಲಿ, ಪಾತ್ರಗಳ ಸೃಷ್ಟಿಗೆ ಕೂಡ ಕಾಡುವ ಶಕ್ತಿ ಇಲ್ಲ. ಇವುಗಳು ಎಲ್ಲರ ಸಾಮಾನ್ಯ ಕಥೆಗಳೇ ಆಗಿದ್ದರೂ ಬಹುಷಃ ದೃಶ್ಯ ಮಾಧ್ಯಮದಲ್ಲಿ ಮತ್ತೆ ಮತ್ತೆ ಹಲವಾರು ಬಾರಿ ಮೂಡಿಬಂದಿರುವುದರಿಂದಲೋ, ಐದು ಕಥೆಗಳನ್ನು ತುರುಕಿರುವುದರಿಂದ ಯಾವುದರಲ್ಲಿಯು  ಆಳ-ವಿಸ್ತಾರ ಇಲ್ಲ ಎಂಬ ಅನಿಸಿಕೆಯಿಂದಲೋ, ವಿಪರೀತ ಮಾತುಗಾರಿಕೆ-ಬೋಧನೆಯಿಂದ ತುಂಬಿರುವುದರಿಂದಲೋ ಪ್ರೇಕ್ಷಕನ ಮನಮಿಡಿಯುವಲ್ಲಿ ವಿಫಲವಾಗುತ್ತವೆ. ಉದಾಹರಣೆಗೆ ತಂದೆ ಕೆಲಸದ ಒತ್ತಡಗಳಿಂದಾಗಿ ತನ್ನ ಮಗಳ ನೃತ್ಯವನ್ನು ನೋಡಲಾಗಲಿಲ್ಲ ಎಂಬ ಸಂಘರ್ಷ ಅತಿ ತೆಳುವಾದದ್ದು ಮತ್ತು ಅನೇಕ ಸಿನೆಮಾಗಳಲ್ಲಿ ವಿಪರೀತವಾಗಿ ಬಳಕೆಯಾಗಿರುವಂತದ್ದು. ರೌಡಿಯೊಬ್ಬ ಯುವತಿಯ ರೂಪಕ್ಕೆ ಮನಸೋತು ಒಳ್ಳೆಯವನಾಗುವುದಾಗಲಿ, ಕಚೇರಿಯಲ್ಲಿ ಎರಡನೇ ಸಂಬಂಧ ಬೆಳೆಸಲು ಹವಣಿಸುವ ಮಧ್ಯವಯಸ್ಕನ ಕಥೆಯೋ, ಈ ಯಾವುವು ಗಟ್ಟಿ ಸಂಘರ್ಷಗಳಂತೆ ಕಾಣುವುದಿಲ್ಲ ಮತ್ತು ತಾಜಾತನದಲ್ಲಿ ಮೂಡಿಸಲು ಸಾಧ್ಯವಾಗಿಲ್ಲ. 
ಇನ್ನು ಎಲ್ಲ ಕಥೆಗಳ ಅಂತ್ಯ-ತೀರ್ಮಾನ ಕೂಡ ಬೋಧನಾರೂಪ ತಳೆದು, ಪ್ರೇಕ್ಷಕರಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬ ಸಂದೇಶವನ್ನು ಬಿಡಿಸಿ ಹೇಳುವುದಕ್ಕಾಗಿಯೇ ಮಾಡಿರುವಂತಿದ್ದು, ಪ್ರೇಕ್ಷಕ ಊಹಿಸಿದಂತೆಯೇ ಎಲ್ಲ ಕಥೆಗಳು ಅಂತ್ಯ ಕಾಣುತ್ತವೆ. ರೌಡಿಗೆ ಬಾಲವಾಗಿ ಇರುವ ಒಬ್ಬ ಬಾಲಕ, ಅವನ ವಿಪರೀತ ಮಾತು, ಇಂಗ್ಲಿಷ್ ಅರ್ಥ ಮಾಡಿಕೊಳ್ಳುವುದಕ್ಕೆ ಒಬ್ಬನನ್ನು ಸೆರೆ ಹಿಡಿಯುವುದು ಹೀಗೆ ಅತಿರೇಕಗಳು ಕೂಡ ಕ್ಲೀಷೆಯಾಗಿಯೇ ಮೂಡಿವೆ.  ಟ್ರಾಫಿಕ್ ಜಾಮ್, ಅಪಘಾತ, ಅನಾರೋಗ್ಯ ಪ್ರೇಯಸಿಯ ಜೊತೆಗೆ ಮಾತುಕತೆ ಹೀಗೆ ಈ ಐದು ಕಥೆಗಳಲ್ಲಿ ನಡೆಯುವ ಘಟನೆಗಳು ಕೂಡ ಅತಿ ಸಾಧಾರಣವಾಗಿ ಮೂಡಿದ್ದು, ಊಹೆಯಂತೆಯೇ ಮುಂದುವರೆದು, ಯಾವದಕ್ಕೂ ಪುಳಕದ ಭಾವನೆಗೆ ಕೊಂಡೊಯ್ಯಲು ಸಾಧ್ಯವಾಗಿಲ್ಲ. 
ತಾಂತ್ರಿಕವಾಗಿ ಸಿನೆಮಾ ಗುಣಮಟ್ಟವನ್ನು ಕಾಯ್ದುಕೊಂಡಿರುವುದು ತುಸುಮಟ್ಟಿಗೆ ಪ್ರೇಕ್ಷಕರಿಗೆ ಸಹಕರಿಸಿದೆ. ಛಾಯಾಗ್ರಹಣ ಬೆಂಗಳೂರಿನ ವೇಗದ ಜೀವನದ ಜಂಜಾಟವನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದರೆ, ಒಂದು ಕಥೆಯಿಂದ ಮತ್ತೊಂದು ಕಥೆಗೆ ಹೆಚ್ಚು ಶ್ರಮವಿಲ್ಲದೆ ಸರಾಗವಾಗಿ ಜಾರುವುದಕ್ಕೆ, ಲೀನಿಯರ್ ಅಲ್ಲದ ಒಡಕು ಕಥೆಯ ನಿರೂಪಣೆಗೆ ಸಂಕಲನ ಸಹಕರಿಸಿದೆ. ನಟರೆಲ್ಲರೂ ತಮ್ಮ ಎಂದಿನ ಶೈಲಿಯಲ್ಲಿ ನಟಿಸಿ, ಪೋಷಿಸಿರುವ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ವಿಪರೀತ ಮಾತುಗಳಿಗೆ-ಬೋಧನೆಗೆ ಒಂದಷ್ಟು ಬ್ರೇಕ್ ಹಾಕಿ, ಭಾವನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕಟ್ಟಿಕೊಡಬಹುದಿತ್ತು ಎಂದೆನಿಸದೆ ಇರದು.
ಚೊಚ್ಚಲ ಬಾರಿಗೆ ನಿರ್ದೇಶನಕ್ಕೆ ಇಳಿದಿರುವ ಖ್ಯಾತ ನಿರ್ದೇಶಕ ನಾಗಾಭರಣ ಅವರ ಪುತ್ರ ಪನ್ನಗ ಭರಣ (ನಾಗಾಭರಣ ಅವರ ಅಲ್ಲಮ ಸಿನೆಮಾಗೆ ಸಹ ನಿರ್ದೇಶಕರಾಗಿ ಕೂಡ ದುಡಿದಿದ್ದರು- ಮತ್ತು ಪ್ರಸಕ್ತ ಸಿನೆಮಾವನ್ನು ನಿರ್ದೇಶಕ ತಂದೆಗೆ ಅರ್ಪಿಸಿದ್ದಾರೆ) ಬಹಳ ಸುಲಭವಾದ ಕಥೆಗಳನ್ನು ಆಯ್ಕೆ ಮಾಡಿಕೊಂಡು, ಸುಲಭ ಸಂಘರ್ಷಗಳನ್ನು ಮೂಡಿಸಿ, ಯಾವುದನ್ನು ಆಳಕ್ಕೆ ಕೊಂಡೊಯ್ಯದೆ, ಮಾತಿನ ಭಾರದಲ್ಲಿ ಸಿನೆಮಾ ಬೆಳೆಸಿ, ತಾಂತ್ರಿಕವಾಗಿ ಗುಣಮಟ್ಟ ಕಾಯ್ದುಕೊಂಡು ಕಟ್ಟಿಕೊಟ್ಟಿರುವ ಈ ಸಿನೆಮಾ ಮಿಶ್ರ ಭಾವನೆ ಮೂಡಿಸುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com