ವನ್ಯಜೀವಿ ಆಸ್ತಿ ನಾಶಪಡಿಸುವವರಿಗೆ ಉರುಳಾಗಿ ಮಾಸ್ತಿ

ಕಳಕಳಿಯುಳ್ಳ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದರೂ, ಮತ್ತೆ ಕಮರ್ಷಿಯಲ್ ಸಿನೆಮಾದ ಉರುಳಿಗೆ ಬಿದ್ದಿರುವ ನಿರ್ದೇಶಕ ಮತ್ತು ಕಥೆಗಾರ, ತುಸು ಸಾವಧಾನದಿಂದ ಒಂದಷ್ಟು ಆಳಕ್ಕೆ ಇಳಿದು ವನ್ಯಜೀವಿ
ಮಾಸ್ತಿ ಗುಡಿ ಸಿನೆಮಾ ವಿಮರ್ಶೆ
ಮಾಸ್ತಿ ಗುಡಿ ಸಿನೆಮಾ ವಿಮರ್ಶೆ
ಅರಣ್ಯ ಅಧಿಕಾರಿಯೊಬ್ಬರು (ಸುಹಾಸಿನಿ) ತಮ್ಮ ಕೆಳಗಿನ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಹುಲಿ ಸಂರಕ್ಷಣೆಗೂ ನಾವು ಕುಡಿಯುವ ನೀರಿಗೂ ಇರುವ ಸಂಬಂಧದ ವೈಜ್ಞಾನಿಕ ತರ್ಕವನ್ನು ಮಂಡಿಸುತ್ತಾರೆ. ಹುಲಿ ಸಂತತಿ ನಾಶ ಆದರೆ, ಜಿಂಕೆಗಳಂತಹ ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆ ಹೆಚ್ಚಿ, ಕಾಡುಗಳನ್ನು ತಿಂದು ಮುಗಿಸುತ್ತವೆ. ಇದು ಭೂಸವೆತಕ್ಕೆ ಕಾರಣವಾಗಿ, ಅಣೆಕಟ್ಟುಗಳಲ್ಲಿ ಹೆಚ್ಚೆಚ್ಚು ಹೂಳು ಶೇಖರವಾಗಿ ನೀರನ ಮಟ್ಟ ಕುಸಿಯುತ್ತದೆ. ಇದು ಕುಡಿಯುವ ನೀರಿಗೆ ಸಂಚಕಾರ ತರುತ್ತದೆ ಎಂಬ ಕಥೆ. ಪರಿಸರ ವಿಜ್ಞಾನ ಮತ್ತು ಸರಕ್ಷಣೆಯನ್ನು ಇಷ್ಟು ಸುಲಭವಾಗಿ ನೋಡಲು ಸಾಧ್ಯವಿಲ್ಲವಾದರೂ, ಇದೊಂದು ಜನಪ್ರಿಯ ನಂಬಿಕೆ. ಇಂತಹ ಜನಪ್ರಿಯ ನಂಬಿಕೆಗಳು, ಹಲವು ಆಚರಣೆಗಳು, ಹುಲಿ ಸಂರಕ್ಷಣೆ ಇತ್ಯಾದಿ ವಿಷಯಗಳನ್ನು ಒಳಗೊಂಡಿರುವ ಜನಪ್ರಿಯ ಸಿನೆಮಾ 'ಮಾಸ್ತಿ ಗುಡಿ' ಇಂದು ಬಿಡುಗಡೆ ಕಂಡಿದೆ. 
ಮಾಸ್ತಮ್ಮ ಕುಲದೇವತೆಯನ್ನು ಭಯಭಕ್ತಿಯಿಂದ ಕಾಣುತ್ತ ಕಾಡಿನಲ್ಲಿ ವನ್ಯಜೀವಿಗಳ ಜೊತೆಗೆ ಸಹಬಾಳ್ವೆ ನಡೆಸುವ ಅಲ್ಲಿನ ಜನ. ಇವರ ಭಾವನೆಗಳಿಗೆ ಪೂರಕ ರೀತಿಯಲ್ಲಿ ಸ್ಪಂದಿಸದ ಅರಣ್ಯ ಅಧಿಕಾರಿಗಳು. ಕೆಲವು ಅರಣ್ಯ ಅಧಿಕಾರಿಗಳನ್ನು ಶಾಮೀಲು ಮಾಡಿಕೊಂಡು ಹುಲಿ ಚರ್ಮ, ಮೂಳೆ ಇತ್ಯಾದಿಗಳ ಮಾರಾಟದ ಜಾಲ ನಡೆಸಿ ಹುಲಿ ಸಂತತಿಯ ನಾಶಕ್ಕೆ ಕಾರಣವಾಗಿರುವ ಗುಂಪು. ಈ ಮೂರೂ ಪ್ರಧಾನ ಎಳೆಗಳನ್ನಿಟ್ಟುಕೊಂಡು ಸಂರಕ್ಷಣೆ ವಿಷಯ ಚರ್ಚಿಸುವ ಸಿನೆಮಾ ಒಂದು ಮಟ್ಟಕ್ಕೆ ಆಪ್ತವಾದರೂ, ಸಿನೆಮಾ ಇತ್ತ ಹುಲಿ ಕೆಡವುವ ವಿಷಜಾಲದ ಆಳಕ್ಕೂ ಇಳಿಯದೆ, ಸಂರಕ್ಷಣೆಯ ಸವಾಲುಗಳ ಬಗ್ಗೆಯೂ ವಿಸ್ತಾರವಾದ ನೋಟ ಇರದೆ ಕೆಡುಕನ್ನು ಸಂಹರಿಸುವ ಒಳಿತಿನ ಸಿನೆಮಾವಾಗಿ, ಅಲ್ಲಲ್ಲಿ ಹೀರೊ ವಿಜೃಂಭಣೆಯ ಮೊರೆ ಹೋಗಿ ಬೇಸರಿಸುತ್ತದೆ. 
ಮಾವುತ ಮಾದಯ್ಯನ (ರಂಗಾಯಣ ರಘು) ಆಶ್ರಯದಲ್ಲಿ ಬೆಳೆಯುವ ಅನಾಥ ಮಾಸ್ತಿಗೆ (ದುನಿಯಾ ವಿಜಯ್) ಕಾಡು ಮತ್ತು ಕಾಡು ಜೀವಿಗಳ ಮೇಲೆ ಅಪಾರ ಪ್ರೀತಿ. ಹುಲಿಯನ್ನು ಕೊಲ್ಲುವವರ ಬಗ್ಗೆ ಮಾಹಿತಿ ಸಿಕ್ಕರೆ ಅವರನ್ನು ಪುಡಿಗುಟ್ಟುವ, ಸಂಹರಿಸುವ ಶಕ್ತಿ ಇವನದ್ದು. ಎಂದಿನ ಕಮರ್ಷಿಯಲ್ ಸಿನೆಮಾದ ನಾಯಕನಟರಂತೆ 'ಮಾಸ್ತಿ' ಕೂಡ ಅಬ್ಬರದ ಪಾತ್ರವಾದರೂ, ಅದಕ್ಕೊಂದು ಸಾಮಾಜಿಕ ಪ್ರಸ್ತುತತೆಯನ್ನು ಒದಗಿಸಿರುವುದು ವಿಶೇಷ. ಚಿರತೆಯೊಂದು ಮಾನವರ ವಾಸಸ್ಥಾನಕ್ಕೆ ಹೊಕ್ಕಾಗ, ಅದನ್ನು ಉಳಿಸಲು ಮಾಸ್ತಿ ಕಾರ್ಯತಂತ್ರ ರೂಪಿಸಿದರೂ, ಅರಣ್ಯ ಅಧಿಕಾರಿ ಅದಕ್ಕೆ ಗುಂಡು ಹಾರಿಸಿ ಕೊಲ್ಲುತ್ತಾನೆ.  ಆಗಾಗ ನಡೆಯುವ ಮಾನವ-ವನ್ಯಜೀವಿಗಳ ಸಂಘರ್ಷವನ್ನು ಹೀಗೆ ಜನಪ್ರಿಯ ಮಾದರಿಯಲ್ಲಿ ಅಳವಡಿಕೊಂಡಿರುವುದು ಕೂಡ ವಿಶೇಷವೆನಿಸುತ್ತದೆ. 
ಊರ ದೇವತೆಯ ಮಾತು ಕೇಳಲು ಅಂಜನ ಹಚ್ಚಿ, ಅದು ಸಿಡಿದು (ದೇವತೆಯ ಕೋಪ ಸೂಚಿಸುವ) ಭೀಮಜ್ಜಿಯ (ಜಯಶ್ರೀ) ಮುಖಕ್ಕೆ ಬಡಿಯುವ ಸಂಗತಿಗಳು ಅಡಗೂಲಜ್ಜಿ ಕಥೆಗಳಂತೆ ಕಂಡರೂ, ಇವುಗಳನ್ನು ಇನ್ನಷ್ಟು ಸೂಕ್ಷ್ಮವಾಗಿ- ಉತ್ಪ್ರೇಕ್ಷೆಗಳಿಲ್ಲದಂತೆ ಕಟ್ಟಿಕೊಟ್ಟಿದ್ದರೆ, ಜನರ ನಂಬಿಕೆಗಳು ತಲತಲಾಂತರದಿಂದ ಸಂರಕ್ಷಣೆಗೆ ಹೇಗೆ ಸಹಕರಿಸಿವೆ ಎಂಬುದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ದಾಟಿಸಬಹುದಿತ್ತೇನೋ! 
ಇವೆಲ್ಲವುಗಳ ಜೊತೆಗೆ ಹಲವು ದೃಶ್ಯಗಳ ಹಿಂದೆ ಇನ್ನಷ್ಟು ಉತ್ಪ್ರೇಕ್ಷಗಳು ಉಳಿದಿಕೊಂಡಿರುವುದು, ಅವುಗಳು ದ್ವಿತೀಯಾರ್ಧದಲ್ಲಿ ಹೆಚ್ಚಾಗುವುದು ವೀಕ್ಷಕರಿಗೆ ಬೇಸರ ಹೆಚ್ಚಿಸುತ್ತವೆ. ಸಾವಿರಾರು ಪ್ರತಿಗಳು ಮಾರಾಟವಾಗಿರುವ ಪುಸ್ತಕದ ಬಗ್ಗೆ ಟಿವಿ ವಾಹಿನಿಯಲ್ಲಿ ನಡೆಯುವ ಚರ್ಚೆಯಲ್ಲಿ ಅದರ ಲೇಖಕಿ ರಾಣಿ, ಮಾಸ್ತಿಯ ಕಥೆಯನ್ನು ಹೇಳುವುದರಿಂದ ಪ್ರಾರಂಭವಾಗುವ ಸಿನೆಮಾ, ಒಂದು ಫೈಟ್ ನಂತರ ಕೂಡಲೇ ಒಂದು ಹಾಡಿನ ಪ್ರಾರಂಭ ಮಾದರಿಯನ್ನು ಚಾಚುತಪ್ಪದೆ ಅನುಸರಿಸಿದೆ. ಇಂಗ್ಲೆಂಡಿನಲ್ಲಿ ಪಿ ಎಚ್ ಡಿ ಮುಗಿಸಿ ಬಂದಿರುವ ಪುತ್ರಿ ರಾಣಿಗೆ (ಕೃತಿ ಕರಬಂಧ), ಮಾಸ್ತಿ ಜೊತೆಗೆ ಓಡಾಡಿದರೆ ಕೊಲ್ಲುವುದಾಗಿ ತಂದೆ ಬೆದರಿಸುವುದು, ತನ್ನ ತಂದೆಯನ್ನು ಮಾಸ್ತಿ ಕೊಂದದ್ದನ್ನು ಕಂಡರೂ ಅದನ್ನು ತನ್ನೊಳಗೆ ಅಡಗಿಸಿಕೊಂಡು ಪೊಲೀಸರಿಂದ ರಾಣಿ ಮುಚ್ಚಿಡುವುದು. ಹೀಗೆ ಒಂದಷ್ಟು ಸನ್ನಿವೇಶಗಳು ಸಿನೆಮಾದಲ್ಲಿ ಸಾವಯವವಾಗಿ ಮೂಡದೆ, ಒತ್ತಾಯಪೂರ್ವಕವಾಗಿ ತುರುಕಿದಂತಿವೆ. 
ಇನ್ನು ಭವ್ಯ (ಅಮೂಲ್ಯ) ಮಾಸ್ತಿ ಪ್ರೇಮಕಥೆಯೂ ಒತ್ತಾಯಪೂರ್ವಕವಾಗಿ ಸೇರ್ಪಡೆಯಾದಂತಿದ್ದು, ಅನಾಥನನ್ನು ಪ್ರೀತಿಸಿದ್ದಾನೆ ಎಂದು ಭವ್ಯಳನ್ನು ಕೊಲ್ಲುವ ಅವಳ ದೊಡ್ಡಪ್ಪ, ಅದನ್ನು ಅನುಮೋದಿಸುವ ಅವರಪ್ಪ, ಕೊನೆಗೆ ಊರ ದೇವತೆಗೆ ಪೂಜೆ ನೆರವೇರಿಸಲೆಂದು ಇವರ ಕ್ಷಮೆ ಕೋರುವ ಮಾಸ್ತಿ, ಹೀಗೆ ಓತಪ್ರೇತವಾಗಿ ಬೆಸೆದಿರುವ ಕಥೆಯಲ್ಲಿ ತುಸು ಸಮಾಧಾನ ನೀಡುವುದು ಭವ್ಯಳ ದೆವ್ವ ಎಂಬ ಸಂಗತಿಯನ್ನು ಸಿನೆಮಾದಲ್ಲಿ ಬಳಸಿರುವ ಬಗೆಗೆ. ಇಲ್ಲೂ ಹಾದಿ ತಪ್ಪಿತೆ ಎನ್ನುವ ವೇಳೆಗೆ, ಜಾಣ್ಮೆಯಿಂದ ದೆವ್ವದ ಪ್ರಭಾವವನ್ನು ನಿರ್ದೇಶಕ ನಿವಾರಿಸುತ್ತಾರೆ. 
ತಾಂತ್ರಿಕವಾಗಿ ಸಿನೆಮಾ ಗಮನ ಸೆಳೆಯುವುದು ಸತ್ಯ ಹೆಗಡೆ ಅವರ ಛಾಯಾಗ್ರಹಣಕ್ಕೆ. ಅಚ್ಚ ಹಸಿರು ಕಾಡಿನ ದೃಶ್ಯಗಳ ನಡುವೆ ನಡೆಯುವ ಕಥೆಯನ್ನು ಪರಿಣಾಮಕಾರಿಗೆ ಚಿತ್ರಿಸಿದ್ದಾರೆ. ಸಾಧು ಕೋಕಿಲಾ ಅವರ ಸಂಗೀತವು ಸಿನೆಮಾಗೆ ಸಹಕರಿಸಿದ್ದು, 'ಚಿಪ್ಪಿನೊಳಗೆ' ಹಾಡು ಗಮನ ಸೆಳೆಯುತ್ತದೆ. ಹಿನ್ನಲೆ ಸಂಗೀತವು ಸಿನೆಮಾಗೆ ಪೂರಕವಾಗಿದೆ. ಚಿತ್ರೀಕರಣದ ವೇಳೆಯಲ್ಲೇ ನಡೆದ ದುರಂತದಿಂದ ಈ ಸಿನೆಮಾದ ನಟರಾದ ಅನಿಲ್ ಮತ್ತು ಉದಯ್ ದುರ್ಮರಣ ಹೊಂದಿದ್ದರಿಂದಲೋ ಏನೋ, ದ್ವಿತೀಯಾರ್ಧದ ಸಂಕಲನ ಕಾರ್ಯದಲ್ಲಿ, ದೃಶ್ಯದಿಂದ ದೃಶ್ಯಕ್ಕೆ ಜಿಗಿಯುವಾಗ ಸರಾಗತೆ ಕಾಣೆಯಾಗಿದೆ. ಕೆಲವು ದೃಶ್ಯಗಳು ಮಧ್ಯದಲ್ಲಿ ಸುಮ್ಮನೆ ಸಿಕ್ಕಿಹಾಕಿಕೊಂಡಂತೆ ಭಾಸವಾಗುತ್ತವೆ. ಇದು ಹಲವು ವರ್ಷಗಳ ಹಿಂದಿನ ಕಥೆಯಾಗಿದ್ದರೂ, ಅದನ್ನು ಪರಿಣಾಮಕಾರಿಯಾಗಿ ಸೃಷ್ಟಿಸಲು ನಿರ್ದೇಶಕ ಸೋಲುತ್ತಾರೆ. ೭೦ ರ ದಶಕದ ಉಡುಗೆತೊಡುಗೆಗಳಲ್ಲಿ ನಿರಂತರತೆ ಇಲ್ಲ. ಎಲ್ಲೋ ಒಂದು ದೃಶ್ಯದಲ್ಲಿ ಡಿಸೈನರ್ ಗಡಿಯಾರ ಕಟ್ಟಿಕೊಂಡು, ಆಧುನಿಕ ಉಡುಗೆ ತೊಟ್ಟ ಮಾಸ್ತಿ ಇದ್ದಕ್ಕಿದ್ದಂತೆ ಸಾದೃಶರಾಗುತ್ತಾರೆ! ಸಾಧು ಕೋಕಿಲಾ-ಬುಲೆಟ್ ಪ್ರಕಾಶ್ ಹಾಸ್ಯ ದೃಶ್ಯಗಳು ಕೂಡ ತುರುಕಿದಂತಿದ್ದು ಅನಾವಶ್ಯಕವಾಗಿ ಸಿನೆಮಾವನ್ನು ಲಂಬಿಸುತ್ತವೆ. 
ಕಳಕಳಿಯುಳ್ಳ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದರೂ, ಮತ್ತೆ ಕಮರ್ಷಿಯಲ್ ಸಿನೆಮಾದ ಉರುಳಿಗೆ ಬಿದ್ದಿರುವ ನಿರ್ದೇಶಕ ನಾಗಶೇಖರ್, ತುಸು ಸಾವಧಾನದಿಂದ ಒಂದಷ್ಟು ಆಳಕ್ಕೆ ಇಳಿದು ವನ್ಯಜೀವಿ ನಾಶ ಮಾಡುವ ಜಾಲದ ಬಗ್ಗೆ ಇನ್ನಷ್ಟು ವಿಸ್ತೃತವಾಗಿ ಕಥೆ ಹೆಣೆದು ಅದನ್ನು ರೋಚಕವಾಗಿ ಕಟ್ಟಿಕೊಟ್ಟಿದ್ದರೆ, ಬಹುಷಃ ಕನ್ನಡದ ಒಳ್ಳೆಯ ಸಿನೆಮಾಗಳ ಸಾಲಿನಲ್ಲಿ ಇದೂ ನಿಲ್ಲಬಹುದಿತ್ತೇನೋ! 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com