ರೈತರಿಗೆ ಸಮಸ್ಯೆಗಳಿಲ್ಲದ ಆದರ್ಶಲೋಕ ಸೃಷ್ಟಿಸಲು ಕುಸುರಿಯಿಲ್ಲದ ಕಸರತ್ತು

ಇಡೀ ಕರ್ನಾಟಕ ರಾಜ್ಯದ ರೈತರು ತಮ್ಮ ಇಳುವರಿಯನ್ನು ಮಧ್ಯವರ್ತಿಗಳಿಗೆ ಮಾರಾಟ ಮಾಡಲು ನಿರಾಕರಿಸುತ್ತಾರೆ. ಇಡೀ ರಾಜ್ಯದ ಜನ ಆಹಾರ ಇಲ್ಲದೆ ತೊಂದರೆಗೆ ಸಿಲುಕುತ್ತಾರೆ. ಹಾಹಾಕಾರ ಏಳುತ್ತದೆ.
ಬಂಗಾರ S/O ಬಂಗಾರದ ಮನುಷ್ಯ ಸಿನೆಮಾ ವಿಮರ್ಶೆ
ಬಂಗಾರ S/O ಬಂಗಾರದ ಮನುಷ್ಯ ಸಿನೆಮಾ ವಿಮರ್ಶೆ
ಇಡೀ ಕರ್ನಾಟಕ ರಾಜ್ಯದ ರೈತರು ತಮ್ಮ ಇಳುವರಿಯನ್ನು ಮಧ್ಯವರ್ತಿಗಳಿಗೆ ಮಾರಾಟ ಮಾಡಲು ನಿರಾಕರಿಸುತ್ತಾರೆ. ಇಡೀ ರಾಜ್ಯದ ಜನ ಆಹಾರ ಇಲ್ಲದೆ ತೊಂದರೆಗೆ ಸಿಲುಕುತ್ತಾರೆ. ಹಾಹಾಕಾರ ಏಳುತ್ತದೆ. ಸರ್ಕಾರಕ್ಕೆ ದಿಕ್ಕೇ ತೋಚದಂತಾಗುತ್ತದೆ. ಈ ಹೋರಾಟ ಪಕ್ಕದ ರಾಜ್ಯಗಳಿಗೂ ಹಬ್ಬಿ, ಎಲ್ಲೆಲ್ಲೂ ಆಹಾರ-ತರಕಾರಿ ಅಭಾವವಾಗಿ, ಸಮಸ್ಯೆ ಬಗೆಹರಿಸಿಕೊಳ್ಳಲು ಸರ್ಕಾರವೇ ರೈತರಲ್ಲಿಗೆ - ಈ ಹೋರಾಟ ಪ್ರಾರಂಭವಾದ ಸ್ಥಳಕ್ಕೆ ಆಗಮಿಸುತ್ತದೆ. ರೈತರ ಎಲ್ಲ ಬೇಡಿಕೆಗಳಿಗೆ ಮಣಿದು ಒಪ್ಪಿಗೆ ನೀಡುತ್ತದೆ. ಇದಕ್ಕೆಲ್ಲ ಕಾರಣಕರ್ತನಾದ, ವಿದೇಶದ ಮಿಲನ್ ನಲ್ಲಿ ದೊಡ್ಡ ಉದ್ದಿಮೆಯನ್ನು ತೊರೆದುಬಂದು ರೈತರಲ್ಲಿ ಆತ್ಮವಿಶ್ವಾಸ-ಛಲ ಮೂಡಿಸಿ, ಆರ್ಥಿಕ ನೆರವು ನೀಡಿರುವ ಶಿವು (ಶಿವರಾಜ್ ಕುಮಾರ್) ನಿಟ್ಟುಸಿರು ಬಿಡುತ್ತಾನೆ. ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ಕಳಕಳಿಯಿಂದ ಇಂತಹ ಒಂದು ಆದರ್ಶಲೋಕವನ್ನು ಸೃಷ್ಟಿಸಲು ನಿರ್ದೇಶಕ ಪ್ರಯತ್ನಿಸಿದ್ದರೂ, ಅದು ಪ್ರೇಕ್ಷಕನಿಗೆ ಮನದಟ್ಟಾಗುವ ರೀತಿಯಲ್ಲಿ ಪರಿಣಾಮಕಾರಿಯಾಗಿ ಮೂಡಿದೆಯೇ?
ಕನ್ನಡದ ಮೇರುನಟ ಡಾ. ರಾಜಕುಮಾರ್ ಅವರ 'ಬಂಗಾರದ ಮನುಷ್ಯ' ಸಿನೆಮಾದ ಮೂಲ ಎಳೆಯನ್ನೇ ಇಟ್ಟುಕೊಂಡು ಕಥೆ ಹೆಣೆದಿದ್ದರೂ, ಕಥೆಯ ತರ್ಕ, ಸೂತ್ರ-ಸಂಬಂಧಗಳನ್ನು ಗಾಳಿಗೆ ತೂರಿ, ಒತ್ತಾಯಪೂರ್ವಕವಾಗಿ ನಿರೂಪಿಸಿರುವಂತೆ ಕಾಣುವ ಈ ಸಿನೆಮಾದ ಆಶಯ ಎಷ್ಟೇ ಉತ್ತಮವಾಗಿದ್ದರೂ, ಅದನ್ನು ದೃಶ್ಯ ಮಾಧ್ಯಮದಲ್ಲಿ ಮೂಡಿಸಿರುವ ಬಗೆಗೆ ಅದೇ ಮಟ್ಟದ ಪರಿಶ್ರಮವಿಲ್ಲದೆ ಬಂಗಾರದ ಸೂಜಿಯಂತೆ ಚುಚ್ಚುತ್ತದೆ. 
ಪಶ್ಚಿಮ ದೇಶದ ಮಿಲನ್ ನಲ್ಲಿ ಸಂಭವಿಸುವ ಕಥೆಯ ಮೊದಲಾರ್ಧದಲ್ಲಿ ಉದ್ದಿಮೆದಾರ ಶಿವು ಗರ್ವದ, ಮನುಷ್ಯ ಪ್ರೀತಿಯಿಲ್ಲದ, ನೆನ್ನೆ ನಾಳೆಗಳ ಹಂಗಿಲ್ಲದೆ ವರ್ತಮಾನದಲ್ಲಿ ಥ್ರಿಲ್ ಅನುಭವಿಸುತ್ತಾ ಬದುಕುವ ವ್ಯಕ್ತಿ. ಅದೇ ದೇಶದಲ್ಲಿ ಒಬ್ಬ ಆಧುನಿಕ ಜ್ಯೋತಿಷಿಯ ಮಾತು ಕೇಳಿ, ಅದರಂತೆಯೇ ಶಿವುಗೆ ಆಕಸ್ಮಿಕವಾಗಿ ಢಿಕ್ಕಿ ಹೊಡೆದು, ಪ್ರೀತಿಯಲ್ಲಿ ಬೀಳುವ ನಯನ (ವಿದ್ಯಾ ಪ್ರದೀಪ್) ಶಿವುವಿನ ನಡತೆಯನ್ನು, ವ್ಯಕ್ತಿತ್ವವನ್ನು ಬದಲಿಸಲು ಬಹಳ ಪ್ರಯತ್ನ ಮಾಡುತ್ತಾಳೆ. ಕುಡಿದು ವಾಹನ ಚಲಾಯಿಸಿ ಮತ್ತಿನಲ್ಲಿ ಐ ಲವ್ ಯು ಎಂದು ನಯನಳಿಗೆ ಹೇಳಿ, ಮುಂದಿನ ದಿನ ಅಲ್ಲಗೆಳೆಯುವ, ಅದಕ್ಕೆ ನಯನ ಸವಾಲೆಸೆದು ಮತ್ತೆ ನಿನ್ನಿಂದ ಐ ಲವ್ ಯು ಹೇಳಿಸುವುದಾಗಿ ಚಾಲೆಂಜ್ ಮಾಡುವಂತಹ ಬಾಲಿಶ ಘಟನೆಗಳೇ ತುಂಬಿದ್ದು, ಪ್ರೇಕ್ಷಕನನ್ನು ಇನ್ನಿಲ್ಲದಂತೆ ಬೇಸರಿಸುತ್ತವೆ. ವಿದೇಶ ತೊರೆದು ಬೇಗ ಹಳ್ಳಿ ಕಡೆ ಬರಲಿ, ನಂತರವಾದರೂ ಸಿನೆಮಾದಲ್ಲಿ ಒಂದಷ್ಟು ಆಹ್ಲಾದಕರ ಬದಲಾವಣೆಗಳಾಗಬಹುದು ಎಂದು ಕಾದು ಕೂರುವಂತಾಗುತ್ತದೆ ಪ್ರೇಕ್ಷಕನಿಗೆ!
ದಿವಂಗತ ಡಾ. ರಾಜಕುಮಾರ್ (ಫೋಟೋ ಮತ್ತು ಹಳೆಯ ಸಿನೆಮಾ ದೃಶ್ಯಗಳಿಂದಷ್ಟೇ ಪ್ರೇಕ್ಷಕರಿಗೆ ತಿಳಿಯುವುದು) ಬಂಗಾರದ ಮನುಷ್ಯ-ರೈತ. ರಾಂಪುರ ಗ್ರಾಮದಲ್ಲಿ ಹೋರಾಟ ಮಾಡಿ, ಅಲ್ಲಿನ ಗ್ರಾಮಸ್ಥರಿಗೆ ಭೂಮಿ ಕೊಡಿಸಿ ಜನರ ಆರಾಧ್ಯದೈವವಾಗಿರುತ್ತಾರೆ. ಇವರು ಸಿನಿಮಾದಲ್ಲಿಯೂ ಶಿವುವಿನ ತಂದೆ ಎಂದು ಕಟ್ಟಿಕೊಟ್ಟು ನಿರ್ದೇಶಕ ಗೊಂದಲ ಮೂಡಿಸುತ್ತಾರೆ. ಶಿವು ತನ್ನ ನಾಲ್ಕನೇ ವಯಸ್ಸಿನಿಂದಲೇ ತಂದೆಯನ್ನು ಕಾಣದಿದ್ದು ಏಕೆ? ವಿದೇಶಕ್ಕೆ ಬಂದದ್ದು ಏಕೆ? ತಂದೆಯ ಬಗ್ಗೆ ಸ್ವಲ್ಪವೂ ಅರಿವಿಲ್ಲದೆ ಬೆಳೆದದ್ದು ಏಕೆ ಎಂಬ ಪ್ರಶ್ನೆಗಳಿಗೆ ಸಿನೆಮಾದಲ್ಲಿ ಯಾವುದೇ ಉತ್ತರ ನೀಡದೆ ಅತಿ ಉಡಾಫೆತನದಿಂದ ಕಥೆ ಕಟ್ಟಿದ್ದಾರೆ ಕಥೆಗಾರ-ನಿರ್ದೇಶಕ ಜೋಡಿ!
ತನ್ನ ಸಂಸ್ಥೆಯ ವ್ಯವಸ್ಥಾಪಕ ಮೂರ್ತಿ (ಶ್ರೀನಿವಾಸ ಮೂರ್ತಿ) ನೀಡುವ ತನ್ನ ತಂದೆಯ ಪುಸ್ತಕ ಓದಿ ತನ್ನ ಗ್ರಾಮ ರಾಂಪುರಕ್ಕೆ ಅಜ್ಞಾತನಾಗಿ ಮರಳುವ ಶಿವು, ಅಲ್ಲಿನ ಸಾಹುಕಾರ ಗೌಡನನ್ನು ಎದುರು ಹಾಕಿಕೊಂಡು ರೈತರ ಪರವಾಗಿ ನಿಲ್ಲುತ್ತಾನೆ. ಸರ್ಕಾರ ಮತ್ತು ರೈತರ ಬಗ್ಗೆ ಕಾಳಜಿ ಇಲ್ಲದವರಿಗೆ ಬಿಸಿ ಮುಟ್ಟಿಸುತ್ತಾನೆ ಮತ್ತು ಆದರ್ಶಸಮಾಜವನ್ನು ನಿರ್ಮಿಸುತ್ತಾನೆ.
ಒಂದು ಗ್ರಾಮಕ್ಕೆ ಹಿಂತಿರುಗಿದಾಗ, ಆ ಗ್ರಾಮದ ಪರಿಸರವನ್ನು, ಸಮಸ್ಯೆಗಳನ್ನು ದೃಶ್ಯದ ಮೂಲಕ ಪೂರಕವಾಗಿ ಕಟ್ಟಿಕೊಡದೆ ಹೋಗಿರುವುದು ಕೂಡ ಅಚ್ಚರಿ ಮೂಡಿಸುತ್ತದೆ. ಗ್ರಾಮ ಪರಿಸರದಲ್ಲಿ ಇರಬಹುದಾದ ಜಾನುವಾರುಗಳು, ಹೊಲ ಗದ್ದೆಗಳು, ಅಲ್ಲಿನ ಭೂಪರಿಸರ ಯಾವುವನ್ನು ದೃಶ್ಯದಲ್ಲಿ ಕಟ್ಟಿಕೊಡುವ ಅವಶ್ಯಕತೆಯೇ ನಿರ್ದೇಶಕನಿಗೆ ಕಂಡಿಲ್ಲ! ಕೇವಲ ಮಾತಿನಿಂದಲೇ ರೈತರ ಸಮಸ್ಯೆಗಳನ್ನು ಚರ್ಚಿಸುವ ನಿರ್ದೇಶಕ, ನಡುವೆ ಸುದೀರ್ಘವಾದ ತರಲೆ ಹಾಸ್ಯ ದೃಶ್ಯಗಳನ್ನೂ ಸೇರಿಸಿ ಅನಾವಶ್ಯವಾಗಿ ಬೇಸರಿಸುತ್ತಾರೆ. ಅಂತಹ ಒಂದು ತರಲೆ ಪಾತ್ರದಿಂದಲೇ ಬಂಗಾರದ ಮನುಷ್ಯ ಸಿನೆಮಾದ 'ನಗು ನಗುತಾ ನಲಿ ನಲಿ' ಹಾಡನ್ನು ಹಾಡಿಸಿ ಮುಗಿಸುತ್ತಾರೆ! 
ಸಾಲಬಾಧೆ, ಅದರ ಬಗ್ಗೆ ಜನರ-ಸರ್ಕಾರದ ದಿವ್ಯ ನಿರ್ಲಕ್ಷ್ಯ, ಗ್ರಾಮಗಳಿಗೆ ವಿದ್ಯುಚ್ಛಕ್ತಿಯ ಕೊರತೆ, ನೀರಾವರಿ ಸಮಸ್ಯೆ, ಮಧ್ಯವರ್ತಿಗಳ ಕಿರುಕುಳ ಹೀಗೆ ರೈತರ ಹಲವು ಸಮಸ್ಯೆಗಳನ್ನು ಕಾಳಜಿಯಿಂದ ಬಾಯಿಮಾತಿನಲ್ಲಿಯೇ ಮೇಲ್ಪದರದಲ್ಲಿ ಕಟ್ಟಿಕೊಡಲು ನಿರ್ದೇಶಕ ಪ್ರಯತ್ನಿಸಿದ್ದರೂ, ಅವುಗಳ ಆಳಕ್ಕೆ ಇಳಿಯಲು ಸೋತಿದ್ದಾರೆ. ಇದರ ಜೊತೆಗೆ ಬಡವರಿಗೆ ಒಂದು ರುಪಾಯಿಯ ಅಕ್ಕಿ ಕೊಡುವ ಮತ್ತು ಇತರ 'ಭಾಗ್ಯ' ಯೋಜನೆಗಳನ್ನು ಸರ್ಕಾರ ತೊಲಗಿಸಬೇಕು ಎಂದು ನಾಯಕನಟನ ಕೈಲಿ ಧೀರೋಧಾತ್ತವಾಗಿ ಹೇಳಿಸುವ ಮೂಲಕ, ನಿಜವಾದ ಸಮಸ್ಯೆಯ ಬಗ್ಗೆ ತಮ್ಮ ಅಲ್ಪ ಅರಿವವನ್ನು ಗಟ್ಟಿಯಾಗಿ ಪ್ರದರ್ಶಿಸುತ್ತಾರೆ. ಈ ದೇಶದಲ್ಲಿ ಕೃಷಿ ಮಾಡಲು ಒಂದಂಗುಲ ಭೂಮಿಯೂ ಇಲ್ಲದ ಬಡಬಗ್ಗರು ಇದ್ದಾರೆ ಮತ್ತು ಅವರಿಗೆ ನೆರವಾಗುವ ಯೋಜನೆಗಳು ಅವು ಎಂದು ನಿಜವಾದ ಕಾಳಜಿಯುಳ್ಳವರಿಗೆ ತಿಳಿಯಲು ಕಷ್ಟವೇನಲ್ಲ!
ಇನ್ನು ಕಾರ್ಪೊರೇಟ್ ಸಂಸ್ಥೆಗಳು ರೈತರ ಜಮೀನನ್ನು ಕಬಳಿಸುವುದು, ಇದಕ್ಕೆ ಸರ್ಕಾರದ ಮಂತ್ರಿಗಳು ಸಹಾಯ ಮಾಡುವುದು, ಊರ ಗೌಡ ಲೇವಾದೇವಿ ನೀಡಿ ರೈತರಿಗೆ ಕಿರುಕುಳ ನೀಡುವುದು, ಇದನ್ನೆಲ್ಲೆ ಒಬ್ಬಂಟಿಯಾಗಿ ಹೋರಾಡಿ ನಾಯಕ ನಟ ಗೆಲ್ಲುವದು ಹೀಗೆ ಜನಪ್ರಿಯ ಘಟನೆಗಳು ಅಭಿಮಾನಿಗಳಿಗೆ ಸಂತಸ ತರಬಲ್ಲವಾಗಿವೆ. 
ತಾಂತ್ರಿಕವಾಗಿಯೂ ಸಿನೆಮಾದಲ್ಲಿ ಹೇಳಿಕೊಳ್ಳುವಂತಹ ಮಾಂತ್ರಿಕತೆ ಏನಿಲ್ಲ. ಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ ಬಂದಿರುವ ಒಂದೆರಡು ಹಾಡುಗಳು ಗುನುಗುವ ರೀತಿಯಲ್ಲಿದ್ದರೂ, ನೃತ್ಯಕ್ಕಾಗಿಯೇ ಇರುವ ಹಾಡುಗಳು ಸಿನೆಮಾವನ್ನು ಮತ್ತಷ್ಟು ಲಂಬಿಸಿವೆಯಷ್ಟೇ. ಚಿಕ್ಕಣ್ಣ ಸಾಧುಕೋಕಿಲಾ ಯಥಾ ಪ್ರಕಾರ ಅರ್ಥವಿಲ್ಲದ ಪಾತ್ರಗಳಲ್ಲಿ ವಿಜೃಂಭಿಸುತ್ತಾರೆ! ನಟನೆಯಲ್ಲಿ ಎಲ್ಲರೂ ಎಂದಿನಂತೆ ತಮ್ಮ ಶ್ರಮವಹಿಸಿದ್ದಾರೆ. 
ಕಥೆಯ ಎಲ್ಲ ಸೂತ್ರಗಳನ್ನು ಸರಿಯಾಗಿ ಬೆಸೆದು, ಅನಗತ್ಯವಾದ ಹಾಸ್ಯ ಎಳೆಗಳನ್ನು ತೊಡೆದುಹಾಕಿ, ರೈತರ ಸಮಸ್ಯೆಗಳನ್ನು -ಭಾವನೆಗಳನ್ನು ಇನ್ನಷ್ಟು ಸೂಕ್ಷ್ಮವಾಗಿ, ದೃಶ್ಯಗಳ ಮೂಲಕ ಪರಿಣಾಮಕಾರಿಯಾಗಿ, ಭಾವನಾತ್ಮಕವಾಗಿ ಕಟ್ಟಿಕೊಟ್ಟು, ಕೇವಲ ಪ್ರಣಾಳಿಕೆಯಂತೆ ಕಾಣದೆ, ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ ಎಂಬ ಭರವಸೆ ಮೂಡಿಸುವ ಯುಟೋಪಿಯಾವನ್ನು ನಿರ್ದೇಶಕ ಯೋಗಿ ಜಿ ರಾಜ್ ಕಟ್ಟಿಕೊಟ್ಟಿದ್ದರೆ ಸಿನೆಮಾ ಹೆಚ್ಚು ಆಪ್ತವಾಗುತ್ತಿತ್ತೇನೋ!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com