ಪೊಲೀಸ್ ಮತ್ತು ಜನಪ್ರಿಯ ಸಿನೆಮಾಗಳಿಗೆ ಅವಿನಾಭಾವ ಸಂಬಂಧ. ಪೊಲೀಸ್ ವ್ಯವಸ್ಥೆಯ ಬಗ್ಗೆ, ಅದರ ಕಾರ್ಯಚಟುವಟಿಕೆಗಳ ಬಗ್ಗೆ, ಪೋಲೀಸರ ಖಾಸಗಿ ಮತ್ತು ವೃತ್ತಿಪರ ಬದುಕುಗಳ ಬಗ್ಗೆ ಇರುವ ಅಪರಿಮಿತ ಕತೆಗಳು ಜನರಿಗೆ ಎಂದಿಗೂ ಕುತೂಹಲ ಹುಟ್ಟಿಸುತ್ತವೆ. ಇನ್ನು ಪೊಲೀಸರು ಪ್ರತಿದಿನ ನಿಭಾಯಿಸುವ ಅಪರಾಧ ಜಗತ್ತು ಕೂಡ ಸಾಮಾನ್ಯರ ಕಲ್ಪನೆಗೆ ಸುಲಭವಾಗಿ ದಕ್ಕುವುದಲ್ಲ. ಈ ಅಂಶವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ ಜನಪ್ರಿಯ ಸಿನೆಮಾ ಮಾಧ್ಯಮ, ಬಹಳಷ್ಟು ಹಿಂದಿನಿಂದಲೂ ಪೋಲೀಸರ ಕಥೆಗಳನ್ನು, ಅಥವಾ ಬೇರೆ ಕಥೆಗಳನ್ನು ಪೊಲೀಸ್ ಪಾತ್ರಗಳ ಮೂಲಕ ಹೇಳುವ ವಿಧಾನವನ್ನು ಬಳಸುತ್ತಲೇ, ಪ್ರೇಕ್ಷಕರನ್ನು ರಂಜಿಸುತ್ತಲೋ, ಆ ಲೋಕವನ್ನು ಜನರಿಗೆ ತೆರದಿಡುತ್ತಲೋ ಬಂದಿದೆ. ಈಗ ಮತ್ತೊಂದು ಪೊಲೀಸ್ ಕಥಾನಕ ತೆಲುಗಿನಿಂದ ಆಮದಾಗಿದೆ. ೨೦೧೫ರ 'ಪಟಾಸ್' ಸಿನೆಮಾ ಈಗ ಗಣೇಶ್ ಅಭಿನಯದಲ್ಲಿ 'ಪಟಾಕಿ'ಯಾಗಿ ಮೂಡಿಬಂದಿದ್ದು, ನಿಜವಾಗಿಯೂ ಪಟಾಕಿ ಹೊಡೆದು ಸಂಭ್ರಮಿಸಿ ಸ್ವಾಗತಿಸುವಂತಿದೆಯೇ?