ತಲೈವಿ ಸಿನಿಮಾದಲ್ಲಿ ಎಂಜಿಆರ್ ದೇ ಹವಾ; ಮನಗೆಲ್ಲುವ ಕಂಗನಾ- ಅರವಿಂದ್ ಸ್ವಾಮಿ ಮ್ಯಾಜಿಕ್: ಚಿತ್ರವಿಮರ್ಶೆ

ನಾಯಕ ನಾಯಕಿಯ ಪಾತ್ರಗಳಲ್ಲಿ ಯಾವುದೇ ದೋಷಗಳನ್ನು ತೋರ್ಪಡಿಸಲಾಗಿಲ್ಲ. ಅದು ಪ್ರಯತ್ನಪೂರ್ವಕ ಅನ್ನಿಸಿದರೆ ಅದರಲ್ಲಿ ಅಚ್ಚರಿಯೇನಿಲ್ಲ. ಅದೊಂದೇ ಕಾರಣದಿಂದ ಸಿನಿಮಾ ಕೃತಕ ಎನ್ನಿಸಬಹುದಾದ ಅಪಾಯವೂ ಇದೆ. ಆದರೆ ತಮಿಳುನಾಡಿನಲ್ಲಿ ಎಂಜಿಆರ್, ಜಯಾ ಇಬ್ಬರನ್ನೂ ದೇವರು ಎಂದು ಆರಾಧಿಸುವುದರಿಂದ, ದೇವರಲ್ಲಿ ದೋಷ ಇರುವುದಿಲ್ಲ ಎನ್ನುವ ರಿಯಾಯ್ತಿಯನ್ನೂ ನೀಡಬಹುದು!
ಸಿನಿಮಾದ ದೃಶ್ಯ
ಸಿನಿಮಾದ ದೃಶ್ಯ

- ಹರ್ಷವರ್ಧನ್ ಸುಳ್ಯ

ದಕ್ಷಿಣ ಭಾರತದ ಪ್ರಭಾವಿ ನಾಯಕಿ, ಗಟ್ಟಿಗಿತ್ತಿ ಎಂದೇ ಹೆಸರಾದ ತಮಿಳುನಾಡು ಮುಖ್ಯಮಂತ್ರಿ ದಿ. ಜಯಲಲಿತ ಅವರ ಜೀವನಾಧಾರಿತ ''ತಲೈವಿ'' ಸಿನಿಮಾ ಹಲವು ಅಡ್ಡಿ ಆತಂಕಗಳನ್ನು ಮೀರಿ ಬಿಡುಗಡೆಗೊಂಡಿತ್ತು. ಸಿನಿಮಾದಲ್ಲಿ ಜಯಲಲಿತಾ ಪಾತ್ರದಲ್ಲಿ ನಟಿಸಿದಾಕೆಯೂ ಗಟ್ಟಿ ಗಿತ್ತಿ ಎನ್ನುವುದು ವಿಶೇಷ. ಇಟ್ಸ್ ನನ್ ಅದರ್ ದ್ಯಾನ್ ಕಂಗನಾ ರಣಾವತ್. ಕಾಲ ಕಾಲಕ್ಕೆ ಸ್ಟಾರ್ ನಟರ ಕಾಲೆಳೆಯುತ್ತಾ, ಬಾಲಿವುಡ್ ಬಣ್ಣದ ಜಗತ್ತಿನ ಮಂದಿಗೆ ಇರಿಸುಮುರಿಸು ಉಂಟು ಮಾಡುತ್ತಾ ಸುದ್ದಿಯಲ್ಲಿರುವಾಕೆ ಕಂಗನಾ.

ತಲೈವಿ ಸಿನಿಮಾದಲ್ಲಿ ಬಹುದೊಡ್ಡ ತಾರಾಗಣವಿದೆ. ಬಹಳ ವರ್ಷಗಳ ನಂತರ ರೋಜಾ ಜೋಡಿ ಅರವಿಂದ್ ಸ್ವಾಮಿ ಮತ್ತು ಮಧು ಈ ಸಿನಿಮಾದಲ್ಲಿ ಒಂದಾಗಿದ್ದಾರೆ. ಅರವಿಂದ್ ಎಂಜಿಆರ್ ಮತ್ತು ಮಧು ಅವರು ಎಂಜಿಆರ್ ಪತ್ನಿ ಜಾನಕಿ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಂ.ಕರುಣಾನಿಧಿಯಾಗಿ ಹಿರಿಯ ನಟ ನಾಸರ್, ಜಯಲಲಿತಾ ತಾಯಿ ಪಾತ್ರದಲ್ಲಿ ಭಾಗ್ಯಶ್ರೀ, ಸಮುಥಿರಕನಿ, ರಾಜ್ ಅರ್ಜುನ್, ರಾಧಾ ರವಿ, ರೆಜಿನಾ ಕಸಾಂಡ್ರ, ಇಂದಿರಾ ಗಾಂಧಿ ಪಾತ್ರದಲ್ಲಿ ಫ್ಲೋರಾ, ರಾಜೀವ್ ಗಾಂಧಿ ಪಾತ್ರದಲ್ಲಿ ರಾಜೀವ್ ಕುಮಾರ್ ಮತ್ತಿತರರು ನಟಿಸಿದ್ದಾರೆ. 

ದೊಡ್ಡ ತಾರಾಗಣದ ಹೊರತಾಗಿಯೂ ಕಡೆಗೆ ಪ್ರೇಕ್ಷಕರ ಮನದಲ್ಲಿ ಉಳಿಯುವುದು ಮೂರು ಪಾತ್ರಗಳು. ಎಂಜಿಆರ್, ಜಯಲಲಿತಾ ಮತ್ತು ಎಂಜಿಆರ್ ಆಪ್ತ ಆರ್.ಎಂ ವೀರಪ್ಪನ್ ಪಾತ್ರಗಳು. ತಲೈವಿ ಸಿನಿಮಾ ಜಯಲಲಿತಾ ಅವರ ಬಯೋಪಿಕ್ ಎಂದು ಕರೆಸಿಕೊಂಡಿದ್ದರೂ ತೆರೆಮೇಲೆ ಎಂ.ಜಿ.ಆರ್ ಆಗಿ ಅರವಿಂದ್ ಸ್ವಾಮಿ ಹೆಚ್ಚುಕಾಲ ಕಾಣಿಸಿಕೊಂಡಿದ್ದಾರೆ. ಅರವಿಂದ್ ಸ್ವಾಮಿ ಎಂಜಿಆರ್ ಪಾತ್ರದಲ್ಲಿ ಬಹುಬೇಗನೆ ಪ್ರೇಕ್ಷಕರಿಗೆ ಇಷ್ಟವಾಗಿಬಿಡುತ್ತಾರೆ. ಅವರ ಉಡುಗೆ, ಮ್ಯಾನರಿಸಂ, ಮಾತನಾಡುವ ಶೈಲಿ, ಗಾಂಭೀರ್ಯ ಎಲ್ಲಕ್ಕಿಂತ ಹೆಚ್ಚಾಗಿ ಅವರ ಗಡಸು ದನಿ ಪ್ರೇಕ್ಷಕರಿಗೆ ಇಷ್ತವಾಗುವುದರಲ್ಲಿ ಸಂಶಯವಿಲ್ಲ. ಅಭಿಮಾನಿಗಳೊಂದಿಗೆ ಅವರಿಗಿದ್ದ ಬಾಂಧವ್ಯ ನಂಟನ್ನು ಈ ಚಿತ್ರದಲ್ಲಿ ಸೊಗಸಾಗಿ ಚಿತ್ರಿಸಲಾಗಿದೆ. 

ಜಯಲಲಿತಾ ಪಾತ್ರದಲ್ಲಿ ಕಂಗನಾ ಅಭಿನಯ ಮನಗೆಲ್ಲುತ್ತದೆ. ಚಿತ್ರರಂಗಕ್ಕೆ ಪಾದಾರ್ಪಣೆಗೈಯ್ಯುವ ಸಂದರ್ಭದ ಇನೋಸೆನ್ಸ್ ಆಗಲಿ, ಸ್ಟಾರ್ ನಟ ಆದರೆ ತನಗೇನೂ ಎಂದು ಕ್ಯಾರೇ ಎನ್ನದ ಸಂದರ್ಭವಾಗಲಿ, ನಂತರ ಎಂಜಿಆರ್ ಅವರ ವ್ಯಕ್ತಿತ್ವಕ್ಕೆ ಮನಸೋಲುವ ಸಂದರ್ಭವಾಗಲಿ, ನಂತರ ಎಂಜಿಆರ್ ಆಪ್ತೆಯಾಗಿ ಪಕ್ಷದ ಇತರೆ ನಾಯಕರ ವಿರೋಧ ಕಟ್ಟಿಕೊಳ್ಳುವ ಸಂದರ್ಭದಲ್ಲೇ ಆಗಲಿ ಕಂಗನಾ ಅಭಿನಯ ಅವರ ವ್ಯಕ್ತಿತ್ವಕ್ಕೆ ತಕ್ಕನಾಗಿದೆ ಎನ್ನಬಹುದು. 

ಸಿನಿಮಾದ ಹಲವು ದೃಶ್ಯಗಳು ನಿಜಘಟನೆಯ ವಿಡಿಯೊ ಕ್ಲಿಪ್ಪಿನಿಂದ ಪ್ರೇರಿತಗೊಂಡು ಯಥಾವತ್ತಾಗಿ ಚಿತ್ರಿಸಲಾಗಿದೆ. ಎಂಜಿಆರ್ ಸತ್ತಾಗ ಅವರ ತಲೆಯ ಬಳಿ ಜಯಲಲಿತಾ ದುಃಖತಪ್ತೆಯಾಗಿ ನಿಂತಿರುವ ವಿಡಿಯೊ ಕ್ಲಿಪ್ ಈಗಲೂ ಅಂತರ್ಜಾಲದಲ್ಲಿ ಸಿಗುತ್ತದೆ. ಅಂತೆಯೇ ಅವರ ಬದುಕಿನ ವಿವಿಧ ಘಟ್ಟಗಳ ವಿಡಿಯೊಗಳು ಕೂಡಾ ಸಿಗುತ್ತವೆ. ಚಿತ್ರದ ಕೆಲ ಸೀನುಗಳು ಆ ಕ್ಲಿಪ್ಪುಗಳನ್ನು ನೆನಪಿಸುತ್ತದೆ. ಅಲ್ಲದೆ ಜಯಲಲಿತಾ ಉಡುತ್ತಿದ್ದ ದಿರಿಸುಗಳನ್ನು ಅವರ ಹಳೆಯ ಭಾವಚಿತ್ರಗಳಿಂದ ತಿಳಿದುಕೊಂಡು ಅದರಂತೆಯೇ ರೂಪಿಸಲಾಗಿದೆ. ಒಟ್ಟಿನಲ್ಲಿ ಅಂದಿನ ಕಾಲಘಟ್ಟ ಮತ್ತು ಜಯಲಲಿತಾ ಅವರನ್ನು ಜನರು ಕಂಡಂತೆಯೇ ಚಿತ್ರಿಸಲು ನಿರ್ದೇಶಕ ಎಲ್ ವಿಜಯ್ ಪ್ರಯತ್ನ ಪಟ್ಟಿರುವುದು ಗೋಚರಿಸುತ್ತದೆ. 

ಚಿತ್ರದಲ್ಲಿ ಕಂಡುಬರುವ ಇನ್ನೊಂದು ಅಂಶವೆಂದರೆ ಚಿತ್ರ ವಿವಾದಾತ್ಮಕ ಸಂಗತಿಗಳನ್ನು ಮುಟ್ಟಲು ಹೋಗದೇ ಇರುವುದು. ಜಯ- ಎಂಜಿಆರ್, ಜಯಾ- ಶಶಿಕಲಾ  ನಡುವಿನ ಸಂಬಂಧ, ಜಯ ಮತ್ತು ಎಂಜಿಆರ್ ಪತ್ನಿ ಮಧು ನಡುವಿನ ಸಂಬಂಧ ಮುಂತಾದ ವಿಚಾರಗಳನ್ನು ಹೆಚ್ಚು ಕೆದಕಲಾಗಿಲ್ಲ. ಆ ಮಟ್ಟಿಗೆ ನಿರ್ದೇಶಕ ವಿಜಯ್ ಮತ್ತು ಕತೆಗಾರ ಬಾಹುಬಲಿ ಖ್ಯಾತಿಯ ವಿಜಯೇಂದ್ರ ಪ್ರಸಾದ್ ಯಶಸ್ವಿಯಾಗಿದ್ದಾರೆ. 

ಸಿನಿಮಾದಲ್ಲಿ ಮೂರು ಪಾತ್ರಗಳು ಕಾಡುತ್ತದೆ ಎಂದು ಈ ಹಿಂದೆ ಬರೆದಿದ್ದೆನಷ್ಟೆ. ಪ್ರೇಕ್ಷಕರನ್ನು ಕಾಡುವ ಆ ಮೂರನೆಯ ಪಾತ್ರ ವೀರಪ್ಪನ್. ಎಂಜಿಆರ್ ಆಪ್ತನಾಗಿ, ಸಹಾಯಕನಾಗಿ ಚಿತ್ರರಂಗದ ಬದುಕಿನಿಂದ ಶುರುವಾಗಿ ಅವರ ರಾಜಕೀಯ ಪಯಣದಲ್ಲೂ ವೀರಪ್ಪನ್ ಅವರು ಪ್ರಮುಖ ಪಾತ್ರ ವಹಿಸಿದ್ದರು. ಕಡೆಯವರೆಗೂ ಅವರು ಎಂಜಿಆರ್ ಜೊತೆಗಿದ್ದರು. ಅವರ ಪಾತ್ರದಲ್ಲಿ ರಾಜ್ ಅರುಣ್ ಅಮೋಘ ಅಭಿನಯ ನೀಡಿದ್ದಾರೆ. ತಲೈವಿ ಸಿನಿಮಾದ ಹಿಂದಿ ಅವತರಣಿಕೆಯಲ್ಲಿ ರಾಜ್ ಅರುಣ್ ವೀರಪ್ಪನ್ ಆಗಿ ಕಾಣಿಸಿಕೊಂಡಿದ್ದರೆ, ತಮಿಳು ಮತ್ತು ತೆಲುಗು ಅವತರಣಿಕೆಯಲ್ಲಿ ಸಮುತಿರಖಣಿವರು ವೀರಪ್ಪನ್ ಪಾತ್ರದಲ್ಲಿ ನಟಿಸಿದ್ದಾರೆ. 

ಜಯಲಲಿತಾ ಅವರಿಂದ ಎಂಜಿಆರ್ ರಾಜಕೀಯ ಭವಿಷ್ಯ ಹಾಳಾಗುತ್ತಿದೆ ಎನ್ನುವುದು ವೀರಪ್ಪನ್ ಕೊರಗು. ಅದೇ ಕಾರಣಕ್ಕೆ ಜಯ ಮತ್ತು ವೀರಪ್ಪನ್ ನಡುವಣ ವೈಮನಸ್ಯ ಬೆಳೆದಿರುತ್ತದೆ. ಆದರೆ ಎಂಜಿಆರ್ ಸತ್ತನಂತರ ನಾನಾರೀತಿಯಲ್ಲಿ ಅವಮಾನಕ್ಕೊಳಗಾಗುವ ಜಯಾ ತಾನು ಸಿ.ಎಂ ಆಗುವ ಕನಸು ನೆರವೇರಿಸಿಕೊಳ್ಳಲು ವೀರಪ್ಪನ್ ಸಹಾಯ ಕೋರುತ್ತಾಳೆ. ಅವರಿಬ್ಬರ ನಡುವಿನ ಸಂಬಂಧವನ್ನು ನಿರ್ದೇಶಕರು ಬಹಳ ಸೂಕ್ಷ್ಮವಾಗಿ ಸೆರೆಹಿಡಿದಿದ್ದಾರೆ. 

ತಪ್ಪು ಮಾಡುವುದು ಮನುಷ್ಯ ಸಹಜ ಗುಣ. ನಾಯಕ ನಾಯಕಿಯ ಪಾತ್ರಗಳಲ್ಲಿ ಯಾವುದೇ ದೋಷಗಳನ್ನು ತೋರ್ಪಡಿಸಲಾಗಿಲ್ಲ. ಅದು ಪ್ರಯತ್ನಪೂರ್ವಕ ಅನ್ನಿಸಿದರೆ ಅದರಲ್ಲಿ ಅಚ್ಚರಿಯೇನಿಲ್ಲ. ಅದೊಂದೇ ಕಾರಣದಿಂದ ಸಿನಿಮಾ ಕೃತಕ ಎನ್ನಿಸಬಹುದಾದ ಅಪಾಯವೂ ಇದೆ. ಆದರೆ ತಮಿಳುನಾಡಿನಲ್ಲಿ ಎಂಜಿಆರ್, ಜಯಾ ಇಬ್ಬರನ್ನೂ ದೇವರು ಎಂದು ಆರಾಧಿಸುವುದರಿಂದ, ದೇವರಲ್ಲಿ ದೋಷ ಇರುವುದಿಲ್ಲ ಎನ್ನುವ ರಿಯಾಯ್ತಿಯೂ ಇದೆ!

ಬಹಳ ಹಿಂದೆ ಸಂದರ್ಶನವೊಂದರಲ್ಲಿ ನಿಮ್ಮ ಜೀವನವನ್ನು ಆಧರಿಸಿ ಸಿನಿಮಾ ಮಾಡಿದರೆ ನಾಯಕಿ ಯಾರಾಗಬೇಕು ಎಂಬ ಪ್ರಶ್ನೆಯನ್ನು ಜಯಾರಿಗೆ ಕೇಳಲಾಗಿತ್ತು. ಆಗ ಆಕೆ ನನ್ನ ಬದುಕು ಸಿನಿಮಾ ಆಗಲಿ ಎಂದು ಇಚ್ಛಿಸುವುದಿಲ್ಲ ಎನ್ನುತ್ತಾರೆ. ಆದ್ರೆ ಸಂದರ್ಶಕಿ ಉತ್ತರಿಸುವಂತೆ ಒತ್ತಾಯಿಸಿದಾಗ ಜಯಲಲಿತಾ ತಮ್ಮ ಪಾತ್ರವನ್ನು ಐಶ್ವರ್ಯಾ ರೈ ನಿರ್ವಹಿಸಿದರೆ ಚೆನ್ನ ಎಂದು ಆಶಿಸಿದ್ದರು. ಅವರು ಸಂದರ್ಶನ ನೀಡಿದ ಸಂದರ್ಭದಲ್ಲಿ ಕಂಗನಾ ಇನ್ನೂ ಬಾಲಿವುಡ್ ನಲ್ಲಿ ಬೇರೂರಿರಲಿಲ್ಲ ಎನ್ನುವುದು ಒಂದು ಮಾತಾದರೆ, ಒಂದು ವೇಳೆ ಐಶ್ವರ್ಯಾ ರೈ ಈ ಪಾತ್ರವನ್ನು ಮಾಡಿದ್ದರೆ ಹೇಗಿದ್ದಿರಬಹುದು ಎನ್ನುವ ಯೋಚನೆ ಜಯಾ ಅಭಿಮಾನಿಗಳಿಗೆ ಮೂಡದೇ ಇರದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com