ಭೀಮ ಸಿನಿಮಾ ಸ್ಟಿಲ್
ಭೀಮ ಸಿನಿಮಾ ಸ್ಟಿಲ್

'ಭೀಮ' ಸಿನಿಮಾ ವಿಮರ್ಶೆ: ಲೋಕಲ್ 'ಭೀಮ'ನಿಗೆ ಬೈಗುಳವೇ ಜೀವಾಳ: ಎಣ್ಣೆ ಏಟು- ಗಾಂಜಾ ಘಾಟು, ಯಥೇಚ್ಛ ರಕ್ತಪಾತ; ಪ್ರೇಕ್ಷಕ ಮಹಾಪ್ರಭು ಸೈಕ್- ಸೈಕ್!

Published on
Rating(3 / 5)
Summary

ದುನಿಯಾ ವಿಜಯ್ ನಿರ್ದೇಶನದ 'ಭೀಮ' ಚಿತ್ರವು ಬೆಂಗಳೂರಿನ ಕೊಳಗೇರಿ ಹುಡುಗರ ಡ್ರಗ್ಸ್ ಜಾಲದ ಕಥೆಯನ್ನು ವಿವರಿಸುತ್ತದೆ. ಚಿತ್ರದಲ್ಲಿ ರಕ್ತಪಾತ, ಕ್ರೌರ್ಯ, ಮತ್ತು ಅನಾವಶ್ಯಕ ಶಬ್ದಗಳ ಬಳಕೆ ಹೆಚ್ಚಾಗಿದೆ. ಪ್ರೇಕ್ಷಕರಿಗೆ 'ಸೈಕ್ ಸೈಕ್' ಅನುಭವ ನೀಡುವ ಈ ಚಿತ್ರ, ಡ್ರಗ್ಸ್ ವಿರುದ್ಧ ಹೋರಾಡುವಂತೆ ಸಮಾಜಕ್ಕೆ ಸಂದೇಶ ನೀಡಲು ಪ್ರಯತ್ನಿಸುತ್ತದೆ.

ದುನಿಯಾ ವಿಜಯ್ ನಟಿಸಿ ನಿರ್ದೇಶಿರುವ ಎರಡನೇ ಸಿನಿಮಾ 'ಭೀಮ' ರಿಲೀಸ್ ಆಗಿದೆ. ಚಿತ್ರದಲ್ಲಿ ವಿಜಯ್ ಕೊಳಗೇರಿ ಹುಡುಗರು ಡ್ರಗ್ಸ್ ಜಾಲಕ್ಕೆ ಹೇಗೆ ಬಳಕೆಯಾಗುತ್ತಾರೆ ಎಂಬುದನ್ನು ತೋರಿಸಿದ್ದಾರೆ. ಬೆಂಗಳೂರಿನ ಮತ್ತೊಂದು ಕರಾಳ ಮುಖ ಹೇಗಿರುತ್ತದೆ? ಡ್ರಗ್ಸ್ ಸರಬರಾಜು ಯಾವ ರೀತಿ ನಡೆಯುತ್ತಿದೆ? ಯುವ ಜನಾಂಗ ಹೇಗೆ ಹಾಳಾಗುತ್ತಿದೆ ಎಂಬುದನ್ನು ಸ್ವಲ್ಪ ಜಾಸ್ತಿಯೇ ಡಿಟೇಲ್‌ ಆಗಿಯೇ ತೆರೆದಿಟ್ಟಿದ್ದಾರೆ. ಸಮಾಜಕ್ಕೆ ಸಂದೇಶ ಕೊಡಲು ಹೊರಟ ಭೀಮ ತನ್ನ ಹೋರಾಟದ ಹಾದಿಯಲ್ಲಿ ಯಶಸ್ಸು ಪಡೆಯುತ್ತಾನೆಯೇ, ಆತನ ದಾರಿಯಲ್ಲಿ ಎದುರಾಗುವ ಅಡೆತಡೆಗಳೇನು ಎಂಬುದೇ ಸಿನಿಮಾ ಕಥೆ.

ಭೀಮ ಪಕ್ಕಾ ಲೋಕಲ್‌ ಸೊಗಡಿನ ಸಿನಿಮಾ. ಬೆಂಗಳೂರಿನ ಹೊರಗಿನ ಸೌಂದರ್ಯ ನೋಡಿದವರಿಗೆ ನಗರದ ಕತ್ತಲೆ ಜಗತ್ತಿನ ಇನ್ನೊಂದು ಕರಾಳತೆಯನ್ನು ಭೀಮ ಬಿಚ್ಚಿಡುತ್ತಾನೆ, ಕೊಳಗೇರಿಯಲ್ಲಿರುವ ಜನ, ಗಾಂಜಾ ಅಮಲು, ರೌಡಿಸಂ , ಹೊಡಿ ಬಡಿ ಕಥೆ ಭೀಮ ಸಿನಿಮಾದಲ್ಲಿದೆ ಅಗತ್ಯಕ್ಕಿಂತ ಹೆಚ್ಚಿನ ರಕ್ತಪಾತವಿದೆ.

ಸಿನಿಮಾ ಕಥೆಯು ರಾಮಣ್ಣನ (ಅಚ್ಯುತ್ ಕುಮಾರ್) ಮೂಲಕ ಆರಂಭವಾಗುತ್ತದೆ. ಆತನ ಮಗ ಮಾದಕವಸ್ತು ಕಳ್ಳಸಾಗಣೆಗೆ ಬಲಿಯಾದಾಗ ಆತನಿಗೆ ಪ್ರಪಂಚವೇ ಕುಸಿದಂತಾಗುತ್ತದೆ. ರಾಮಣ್ಣನ ಛಾವಣಿಯಡಿಯಲ್ಲಿ, ಮೆಕ್ಯಾನಿಕ್ ಅಂಗಡಿಯಲ್ಲಿ ಕೆಲಸ ಮಾಡುವ ಅನಾಥ ಭೀಮ (ವಿಜಯ್ ಕುಮಾರ್) ಮಾದಕವಸ್ತು ವಿರೋಧಿ ಹೋರಾಟಗಾರನಾಗಿ ಬೆಳೆಯುತ್ತಾನೆ. ಭೀಮನು ನಿರ್ಭೀತ ನಾಯಕನಾಗಿ ಬೆಳೆಯುತ್ತಿದ್ದಂತೆ ತನ್ನ ಸಮುದಾಯದಿಂದ ಡ್ರಗ್ಸ್ ವ್ಯಸನವನ್ನು ತೊಡೆದುಹಾಕಲು ಡ್ರಗ್ಸ್ ವ್ಯಾಪಾರದ ಕಿಂಗ್ ಡ್ರ್ಯಾಗನ್ ಮಂಜು ವಿರೋಧ ಕಟ್ಟಿಕೊಳ್ಳುತ್ತಾನೆ.

ಬೆಂಗಳೂರಿನಂತ ಮಹಾನಗರಕ್ಕೆ ಗಾಂಜಾ ಹೇಗೆ ಎಂಟ್ರಿಯಾಗುತ್ತದೆ, ಡ್ರಗ್ಸ್ ಪೂರೈಕೆ ಮಾಡಲು ಕೊಳಗೇರಿ ಯುವಕರನ್ನು ಬಲವಂತವಾಗಿ ಬಳಸಿಕೊಳ್ಳುವ ಬಗ್ಗೆ ಚಿತ್ರಣ ನೀಡಲಾಗಿದೆ. ಶ್ರೀಮಂತ ಮತ್ತು ಬಡ ಯುವಕರು ಗಾಂಜಾ ಅಮಲಿಗೆ ಬಲಿಯಾಗುತ್ತಿರುವುದು, ಅದನ್ನು ತಡೆಗಟ್ಟಲು ನಾಯಕನ ಹೋರಾಟ. ನಾಯಕನ ಈ ಹೋರಾಟದಲ್ಲಿ ರಕ್ತಪಾತ ಯಥೇಚ್ಚವಾಗಿದೆ, ಕೆಲವೊಮ್ಮೆ ಚಿತ್ರ ಪರದೆಯ ಮೇಲೆ ರಕ್ತ ಚಿಮ್ಮುವಂತೆ ಭಾಸವಾಗುತ್ತದೆ. ಇನ್ನೂ ಅವ್ಯಾಚ್ಯ ಶಬ್ದಗಳ ಬಳಕೆಯಂತೂ ನಿರರ್ಗಳವಾಗಿದೆ. ಎಲ್ಲಾ ಪಾತ್ರಗಳು ಅದನ್ನೂ ಮ್ಯಾಂಡೇಟ್ ಎನ್ನುವಂತೆ ಸಿನಿಮಾದಲ್ಲಿ 'ಸಂಸ್ಕೃತ' ಬೈಗುಳಗಳನ್ನು ಬಳಸಿದ್ದು ಕೇಳುವವರಿಗೆ ಕರ್ಣ ಕಠೋರವಾಗಿದೆ.

ಇನ್ನು ಕೆಲವೆಡೆ ಅನಗತ್ಯ ಹೊಡೆದಾಟ ಬಡಿದಾಟದ ದೃಶ್ಯಗಳಿವೆ, ಪೈಟಿಂಗ್ ಸೀನ್ ನಲ್ಲಿ ಶಾಲೆ- ಕಾಲೇಜು ಯುವಕರು ಕತ್ತಿ ಹಿಡಿವ ದೃಶ್ಯ ನೋಡುವಾಗ ಸಿನಿಮಾದಲ್ಲಿ ಕ್ರೌರ್ಯ ತುಂಬಿ ತುಳುಕುತ್ತಿದೆ ಎನ್ನಿಸುತ್ತದೆ. ಸಮಾಜದಲ್ಲಿ ನಡೆಯುತ್ತಿರುವ ಕೆಲವು ನೈಜ ಘಟನೆಗಳ ಬಗ್ಗೆ ಸಿನಿಮಾದಲ್ಲಿ ತೋರಿಸಲಾಗಿದೆ, ನಾಗರಿಕ ಸಮಾಜದಲ್ಲಿ ಬದುಕುತ್ತಿರುವ ನಾವು ಈ ಪ್ರವೃತ್ತಿಗಳ ಬಗ್ಗೆ ಯೋಚನೆ ಮಾಡುವಂತಾಗುತ್ತದೆ.

ಅತಿರೇಕದ ರೌಡಿಸಂ ಮತ್ತು ಮಾದಕವಸ್ತು ಕಳ್ಳಸಾಗಣೆಯನ್ನು ನಿಗ್ರಹಿಸಲು ದೃಢಸಂಕಲ್ಪದೊಂದಿಗೆ ಜವಾಬ್ದಾರಿ ವಹಿಸಿಕೊಳ್ಳುವ ಗಿರಿಜಾ( ಪ್ರಿಯಾ ಶತಮರ್ಶನ್ ) ಪಾತ್ರ ಗಮನ ಸೆಳೆಯುತ್ತದೆ. ಸ್ಥಳೀಯ ರೌಡಿಗಳ ಅಟ್ಟಹಾಸವನ್ನು ಮಟ್ಟ ಹಾಕುವ ಆಕೆಯ ದಿಟ್ಟ ನಡೆ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ತಮ್ಮ ನಟನೆಯಿಂದ ಪ್ರಿಯಾ ಕನ್ನಡ ಚಿತ್ರರಂಗದಲ್ಲಿ ಉತ್ತಮ ನಟಿಯಾಗುವ ಭರವಸೆ ಮೂಡಿಸಿದ್ದಾರೆ.

ದುನಿಯಾ' ವಿಜಯ್ 'ಸಲಗ' ಮೂಲಕ ನಿರ್ದೇಶಕನಾಗಿ ಸಕ್ಸಸ್ ಪಡೆದುಕೊಂಡಿದ್ದರು. ಅದೇ ಥರದ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಬಹುದು ಎಂಬ ಉದ್ದೇಶದಿಂದಲೇ 'ಭೀಮ' ಸಿನಿಮಾವನ್ನೂ ಕೂಡ ಅದೇ ರೀತಿಯಲ್ಲಿಯೇ ನಿರ್ದೇಶನ ಮಾಡಿದ್ದಾರೆ ಎನಿಸುತ್ತದೆ. ನೈಜತೆಗೆ ಹೆಚ್ಚು ಮನ್ನಣೆ ನೀಡುವ ವಿಜಯ್, 'ಭೀಮ' ಸಿನಿಮಾದಲ್ಲೂ ಅದನ್ನೇ ಮುಂದುವರಿಸಿದ್ದಾರೆ. ಅವರು ಪಾತ್ರಗಳನ್ನು ಬರೆದಿರುವ ರೀತಿ ಮತ್ತು ಚಿತ್ರೀಕರಣ ಮಾಡಿರುವ ರೀತಿ ಸಲಗ ಸಿನಿಮಾದಂತೆಯೇ ಇದೆ ಎಂದೆನಿಸುತ್ತದೆ. ಸಿನಿಮಾ ಕಚ್ಚಾಶೈಲಿಯಲ್ಲಿದೆ.

ಇನ್ನೂ ನಾಯಕಿ ಅಶ್ವಿನಿ ಅಂಬರೀಷ್ ಪಾತ್ರ ಪರದೆಯ ಸಮಯದಲ್ಲಿ ಸೀಮಿತವಾಗಿದ್ದರೂ ಮನಸ್ಸಿನಲ್ಲಿ ನಿಲ್ಲುತ್ತಾರೆ, ಉಳಿದಂತೆ ಭೀಮಾ ಸಿನಿಮಾದಲ್ಲಿ ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಹಾಡು, ಫೈಟ್ ಇದೆ. ಜೊತೆಗೆ ತಾಯಿಯ ಸೆಂಟಿಮೆಂಟ್ ಕೂಡ ಸಿನಿಮಾದಲ್ಲಿದೆ. ಭೀಮನ ತಾಯಿಯಾಗಿ ಬೇಬಿ ಅಮ್ಮ ಪಾತ್ರ ನಿರ್ವಹಿಸಿರುವ ಕಲ್ಯಾಣಿ ಹಾಗೂ ಡಿ ಅಡಿಕ್ಷನ್ ಸೆಂಟರ್ ನಡೆಸುವ ರಂಗಾಯಣ ರಘು, ಪೊಲೀಸ್ ಅಧಿಕಾರಿಯಾಗಿ ರಘು ಶಿವಮೊಗ್ಗ ತಮ್ಮ ಪಾತ್ರಗಳಲ್ಲಿ ಗಮನ ಸೆಳೆಯುತ್ತಾರೆ. ಎಂದಿನಂತೆ ಗೋಪಾಲ್ ದೇಶಪಾಂಡೆ ತಮ್ಮ ಸಹಜಾಭಿನಯದ ಮೂಲಕ ಎಲ್ಲರಿಗೂ ಇಷ್ಟವಾಗುತ್ತಾರೆ.

ಚರಣ್ ರಾಜ್ ಸಂಗೀತದಲ್ಲಿ ಒಂದೆರಡು ಹಾಡುಗಳು ಉತ್ತಮವಾಗಿ ಮೂಡಿ ಬಂದಿವೆ. ವಿಲನ್ ಪಾತ್ರದಲ್ಲಿ ಅಬ್ಬರಿಸಿರುವ ಡ್ರ್ಯಾಗನ್ ಮಂಜು ನಟನೆಯಲ್ಲಿ ಇನ್ನಷ್ಟು ಪಳಗಿದರೆ, ಮುಂದಿನ ದಿನಗಳಲ್ಲಿ ಉತ್ತಮ ಖಳನಟ ಎನಿಸಿಕೊಳ್ಳಬಹುದು. ಸಮಾಜಕ್ಕೆ ಸಂದೇಶ ನೀಡುವ ಭರದಲ್ಲಿ ವಿಜಯ್ ಕೆಲವೆಡೆ ಅಗನತ್ಯ ಹೊಡೆದಾಟ, ಅನಾವಶ್ಯಕ ಒರಟು ಭಾಷೆ- ಅವಾಚ್ಯ ಶಬ್ದಗಳ ಬಳಕೆ ಮಾಡಿದ್ದಾರೆ. ಹೀಗಾಗಿ ಸಿನಿಮಾಗೆ ಎ ಸರ್ಟಿಫಿಕೇಟ್ ಸಿಕ್ಕಿದೆ. ಒಟ್ಟಿನಲ್ಲಿ 'ಭೀಮ' ಹೊಡಿ-ಬಡಿ-ಕಡಿ ರೀತಿಯ ಚಿತ್ರ ಇಷ್ಟ ಪಡುವ ದುನಿಯಾ ವಿಜಯ್ ಮಾಸ್ ಅಭಿಮಾನಿಗಳಿಗೆ ಇಷ್ಟವಾಗುತ್ತದೆ. ಸಾಮಾನ್ಯ ಪ್ರೇಕ್ಷಕನ ಸ್ಥಿತಿ 'ಸೈಕ್ ಸೈಕ್'...

ಚಿತ್ರ: ಭೀಮಾ

ನಿರ್ದೇಶಕ: ವಿಜಯ್ ಕುಮಾರ್

ತಾರಾಗಣ: ವಿಜಯ್ ಕುಮಾರ್, ಅಶ್ವಿನಿ ಅಂಬರೀಶ್, ಪ್ರಿಯಾ ಶತಮರ್ಷನ್, ಡ್ರ್ಯಾಗನ್ ಮಂಜು, ಅಚ್ಯುತ್ ಕುಮಾರ್, ಗೋಪಾಲ ಕೃಷ್ಣ ದೇಶಪಾಂಡೆ, ಮತ್ತು ಶುದ್ಧಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com