ಪೌಡರ್ ಸಿನಿಮಾ ಸ್ಟಿಲ್
ಪೌಡರ್ ಸಿನಿಮಾ ಸ್ಟಿಲ್

Powder Movie Review: ತಿಳಿ ಹಾಸ್ಯದ ಘಮ ಘಮ, ಟಾಲ್ಕಂ ಪೌಡರ್ ಅಲ್ಲಾ; ಲಾಜಿಕ್-ಮೆಸೇಜ್ ಇಲ್ಲವೇ ಇಲ್ಲಾ, ಮನರಂಜನೆಗಾಗಿಯೇ ಎಲ್ಲಾ!

Published on
Rating(3 / 5)
Summary

ಪೌಡರ್ ಸಿನಿಮಾ ಜನಾರ್ದನ ಚಿಕ್ಕಣ ನಿರ್ದೇಶನದಲ್ಲಿ ತೆರೆ ಕಂಡಿದ್ದು, ದಿಗಂತ್, ಧನ್ಯಾ ರಾಮ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಾದಕ ದ್ರವ್ಯದ ವ್ಯವಹಾರದ ಬಗ್ಗೆ ಹಾಸ್ಯ ರೂಪದಲ್ಲಿ ಕಥೆ ಸಾಗುತ್ತದೆ. ಚೀನಾದಿಂದ ಬರುವ ಪೌಡರ್ ಮೈಸೂರಿನಲ್ಲಿ ಕಳೆದುಹೋಗಿ, ಅದರ ಹುಡುಕಾಟ ಹಾಸ್ಯಾತ್ಮಕವಾಗಿ ತೋರಿಸಲಾಗಿದೆ. ಲಾಜಿಕ್ ಮತ್ತು ಸಂದೇಶವಿಲ್ಲದ ಈ ಚಿತ್ರ purely ಮನರಂಜನೆಗಾಗಿ.

ಗುಲ್ಟೂ ನಿರ್ದೇಶಕ ಜನಾರ್ದನ ಚಿಕ್ಕಣ ಡೈರೆಕ್ಷನ್ ಮಾಡಿರುವ ಹಾಸ್ಯ ಪ್ರದಾನ ಸಿನಿಮಾ ಪೌಡರ್ ತೆರೆ ಕಂಡಿದೆ, ಚಿತ್ರದಲ್ಲಿ ದಿಗಂತ್, ಧನ್ಯಾ ರಾಮ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪೌಡರ್ ಎಂಬ ಟೈಟಲ್ ಕೇಳಿದ ತಕ್ಷಣ ಇದು ಯಾವುದೋ ಟಾಲ್ಕಂ ಪೌಡರ್ ಬಗ್ಗೆ ಇರುವ ಸಿನಿಮಾ ಎಂದುಕೊಳ್ಳುವಂತಿಲ್ಲ. ಪೌಡರ್​ ಕಥೆ ಇರುವುದು ಮಾದಕ ದ್ರವ್ಯದ ವ್ಯವಹಾರದ ಬಗ್ಗೆ. ಜನಾರ್ದನ್​ ಚಿಕ್ಕಣ್ಣ ಅವರು ಕಾಮಿಡಿ ರೂಪದ ಕಥೆಯಲ್ಲಿ ಸಿನಿಮಾ ಮಾಡಿದ್ದಾರೆ.

ಚೀನಾದಿಂದ ಬರುವ ನೂರಾರು ಕೋಟಿ ರೂಪಾಯಿ ಬೆಲೆಬಾಳುವ ಪೌಡರ್​ (ಮಾದಕ ವಸ್ತು) ಮೈಸೂರಿನಲ್ಲಿ ಕಳೆದುಹೋಗುತ್ತದೆ. ಮುಖಕ್ಕೆ ಹಚ್ಚುವ ಪೌಡರ್​ ಹಾಗೂ ನಶೆ ತರಿಸುವ ಪೌಡರ್​ ಅದಲು ಬದಲಾಗುತ್ತವೆ. ಅದನ್ನು ಪತ್ತೆ ಹಚ್ಚಲು ಈ ಸಿನಿಮಾದಲ್ಲಿನ ಎಲ್ಲ ಪಾತ್ರಗಳೂ ಪ್ರಯತ್ನಿಸುತ್ತವೆ. ಆಗ ಎದುರಾಗುವ ಸಂಗತಿಗಳನ್ನೇ ಕಾಮಿಡಿ ರೂಪದಲ್ಲಿ ತೋರಿಸಲು ನಿರ್ದೇಶಕರು ಪ್ರಯತ್ನಿಸಿದ್ದಾರೆ.

ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ಮೊದಲ ಬಾರಿಗೆ ಹಾಸ್ಯ ಪ್ರಧಾನ ಸಿನಿಮಾಗೆ ಕೈ ಹಾಕಿದ್ದಾರೆ. KRG ಸ್ಟುಡಿಯೋಸ್ ಮತ್ತು ಟಿವಿಎಫ್ (ದಿ ವೈರಲ್ ಫೀವರ್) ನಿರ್ಮಾಣ ಸಂಸ್ಥೆ ಹಳೇಯ ಕಂಟೆಂಟ್ ಅನ್ನು ಹೊಸದಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಸಾಂಪ್ರಾದಾಯಿಕ ಹಾಸ್ಯಕ್ಕೆ ಮಣೆ ಹಾಕದ ನಿರ್ದೇಶಕರು ಪ್ರೇಕ್ಷಕರನ್ನು ಹೊಸ ರೀತಿಯಲ್ಲಿ ಮನ ರಂಜಿಸಲು ಪ್ರಯತ್ನಿಸಿದ್ದಾರೆ. ಸಿನಿಮಾದಲ್ಲಿ ನೀವು ಲಾಜಿಕ್ ಹುಡುಕುವಂತಿಲ್ಲ, ಅಂತೇಯೆ ಕಥೆಯಲ್ಲೂ ನಿಮಗೆ ಯಾವುದೇ ಸಂದೇಶ ಇಲ್ಲ. ಮನರಂಜನೆಗಾಗಿ ಮಾತ್ರ ನೀವು ಸಿನಿಮಾ ನೋಡಬೇಕು. ಕಥೆ ಆರಂಭಾಗುವುದು ಮೈಸೂರಿನ ಸೂಪರ್‌ ಮಾರ್ಕೆಟ್‌ನಲ್ಲಿ. ಸೂರ್ಯ(ದಿಂಗತ್) ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ಮಾಡುವ ಬೇಜಾವಬ್ದಾರಿ ಯುವಕ. ಆತನ ರೂಮ್‌ಮೇಟ್‌ ಕರಣ್‌(ಅನಿರುದ್ಧ). ಸೂರ್ಯನ ಲವರ್ ನಿತ್ಯಾ (ಧನ್ಯಾ ರಾಮ್‌ಕುಮಾರ್‌) ನರ್ಸ್‌. ನಿತ್ಯಾ ಜೊತೆಗೆ ನೆಮ್ಮದಿಯಾಗಿ ಬದುಕಬೇಕು ಎಂಬುದು ಸೂರ್ಯನ ಕನಸು. ಏನಾದರೂ ಆಗಲಿ, ಲೈಫ್ ಅಲ್ಲಿ ಸಖತ್ ದುಡ್ಡು ಗಳಿಸಬೇಕು ಎಂಬುದು ನಿತ್ಯಾಗೆ ಇರುವ ಆಸೆ.

ಚೀನಾದಲ್ಲಿರುವ ಬ್ರೂಸ್‌ಲಿ ಎಂಬಾತ ಮಾದಕವಸ್ತುಗಳ ಮಾರಾಟ ಜಾಲದ ಮುಖ್ಯಸ್ಥ. ಆತ ಪೌಡರ್‌ ರೂಪದಲ್ಲಿರುವ ವಿಶೇಷ ಮಾದಕವಸ್ತುವೊಂದನ್ನು ತಯಾರಿಸುತ್ತಾನೆ. ಭಾರತಕ್ಕೆ ಘಮ ಘಮ ಎಂಬ ಬ್ರ್ಯಾಂಡ್‌ನ ಟಾಲ್ಕಮ್‌ ಪೌಡರ್‌ ಡಬ್ಬಿಯಲ್ಲಿ ಹಾಕಿ ಕಳ್ಳದಾರಿಯ ಮೂಲಕ ರವಾನಿಸುತ್ತಾನೆ. ಇದರ ವಿತರಣೆಯ ಜವಾಬ್ದಾರಿ ಅಣ್ಣಾಚಿಗೆ(ರಂಗಾಯಣ ರಘು) ಸಿಗುತ್ತದೆ. ಆದರೆ ಅಲ್ಲಿಂದ ಹಲವು ವ್ಯಕ್ತಿಗಳಿಗೆ ಇದು ಮಾರಾಟವಾಗುತ್ತದೆ. ಚೀನಾದಿಂದ ಬರುವ ನೂರಾರು ಕೋಟಿ ರೂಪಾಯಿ ಬೆಲೆಬಾಳುವ ಪೌಡರ್​ (ಮಾದಕ ವಸ್ತು) ಮೈಸೂರಿನಲ್ಲಿ ಕಳೆದುಹೋಗುತ್ತದೆ. ಆ ಡಬ್ಬಿಗಳು ಅಪ್ಪಿತಪ್ಪಿ ಸೂರ್ಯ ಕೆಲಸ ಮಾಡುವ ಸೂಪರ್‌ ಮಾರ್ಕೆಟ್‌ ಸೇರುತ್ತವೆ.ಇದು ಟಾಲ್ಕಮ್‌ ಪೌಡರ್‌ ಅಲ್ಲ, ಬೇರೆ ‘ಪೌಡರ್‌’ ಎಂಬ ವಿಷಯ ಸೂರ್ಯ, ನಿತ್ಯಾ ಹಾಗೂ ಕರಣ್‌ಗೆ ತಿಳಿದ ನಂತರ ಕಥೆ ಮುಂದೆ ಸಾಗುತ್ತದೆ. ಅದನ್ನು ಪತ್ತೆ ಹಚ್ಚಲು ಈ ಸಿನಿಮಾದಲ್ಲಿನ ಎಲ್ಲ ಪಾತ್ರಗಳೂ ಪ್ರಯತ್ನಿಸುತ್ತವೆ. ಪೌಡರ್ ಅಣ್ಣಾಚಿ ಕೈ ಸೇರುತ್ತದೆಯೇ ಎಂಬುದನ್ನು ತಿಳಿದುಕೊಳ್ಳಲು ಸಿನಿಮಾ ನೋಡಬೇಕು.

ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ ಖಡಕ್​ ಪಾತ್ರ ನಿಭಾಯಿಸಿದ್ದಾರೆ. ರಂಗಾಯಣ ರಘು ಅವರು ಎಂದಿನಂತೆ ಪ್ರೇಕ್ಷಕರನ್ನು ನಗಿಸುವ ಪ್ರಯತ್ನ ಮಾಡಿದ್ದಾರೆ. ಬೇರೆ ಸಿನಿಮಾಗಳಲ್ಲಿ ಗಂಭೀರ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡ ಗೋಪಾಲಕೃಷ್ಣ ದೇಶಪಾಂಡೆ ಸುಲೈಮಾನ್ ಪಾತ್ರದಲ್ಲಿ ನಗಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ನಾಗಭೂಷಣ್ ಇಡೀ ಸಿನಿಮಾಕ್ಕೆ ಟ್ವಿಸ್ಟ್ ಕೊಡುತ್ತಾರೆ. ಜಗ್ಗೇಶ್‌ ಅವರ ಧ್ವನಿ ಸಿನಿಮಾಗೆ ವೇದಿಕೆ ಹಾಕಿಕೊಟ್ಟಿದೆ. ಆಂಗಿಕ ಹಾವಭಾವಗಳ ಮೂಲಕವೇ ಎಲ್ಲರೂ ನಗಿಸುತ್ತಾರೆ. ಸಿನಿಮಾದ ಮೊದಲಾರ್ಧದಲ್ಲಿ ಪಾತ್ರಗಳ ಪರಿಚಯಕ್ಕೆ ಮೀಸಲಾಗಿದೆ. ದ್ವಿತೀಯಾರ್ಧದ ನಂತರ ಚಿತ್ರಕಥೆ ಬಿಗಿಯಾಗುತ್ತದೆ. ಸಿನಿಮಾದ ವಿಎಫ್‌ಎಕ್ಸ್‌ ಉತ್ತಮವಾಗಿದೆ, ಕ್ಲೈಮ್ಯಾಕ್ಸ್‌ನಲ್ಲಿನ 10–15 ನಿಮಿಷದ ದೃಶ್ಯಗಳು ಕನ್ನಡ ಸಿನಿಮಾದಲ್ಲಿ ಹೊಸ ಪ್ರಯೋಗವಾಗಿದೆ. ಹಿನ್ನೆಲೆ ಸಂಗೀತಕ್ಕಾಗಿ ವಾಸುಕಿ ವೈಭವ್ ಮತ್ತು ಛಾಯಾಗ್ರಹಣಕ್ಕಾಗಿ ಅದ್ವೈತ ಗುರುಮೂರ್ತಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ.

ಒಟ್ಟಾರೆ ಸಿನಿಮಾದಲ್ಲಿ ಯಾವುದೇ ಲಾಜಿಕ್ ಇಲ್ಲ, ಸಮಾಜಕ್ಕೆ ಸಂದೇಶವಿಲ್ಲ, ಮಾದಕ ದ್ರವ್ಯ ಸೇವನೆ ಯಂತ ಸನ್ನಿವೇಶ ತೋರಿಸಿಲ್ಲ, ಈ ಚಲನಚಿತ್ರವು ಡ್ರಗ್ ಮಾಫಿಯಾಗಳು, ಅಂತರರಾಷ್ಟ್ರೀಯ ವಿತರಕರು, ಸ್ಥಳೀಯ ದರೋಡೆಕೋರರುಹಾಗೂ ಅಮಾಯಕರ ಗಲಭೆಯ ಮಿಶ್ರಣವಾಗಿದೆ. ಕಾಮಿಡಿ ಸಿನಿಮಾ ಪ್ರೇಕ್ಷಕರಿಗೆ ಪೌಡರ್ ಸಿನಿಮಾ ಮನರಂಜನೆ ನೀಡುವುದಂತೂ ಸತ್ಯ.

ಸಿನಿಮಾ: ಪೌಡರ್

ನಿರ್ದೇಶಕ: ಜನಾರ್ದನ್ ಚಿಕ್ಕಣ್ಣ

ಕಲಾವಿದರು: ದಿಗಂತ್, ರಂಗಾಯಣ ರಘು, ಶರ್ಮಿಳಾ ಮಾಂಡ್ರೆ, ಧನ್ಯ ರಾಮ್‌ಕುಮಾರ್, ಅನಿರುದ್ಧ್ ಆಚಾರ್ಯ, ರವಿಶಂಕರ್ ಗೌಡ, ಮತ್ತು ನಾಗಭೂಷಣ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com