PEPE Cinema review: ಹೊಸ ಬಾಟಲಿಯಲ್ಲಿ ಹಳೆ ವೈನ್; ಜಾತಿಗಳ ನಡುವಿನ ಸಂಘರ್ಷವೇ ಕಥೆಯ ಎಳೆ, ಚಿತ್ರದಲ್ಲಿ ಎಗ್ಗಿಲ್ಲದೆ ಹರಿದಿದೆ ರಕ್ತದ ಹೊಳೆ!
Rating(3 / 5)
ಪೆಪೆ ಚಿತ್ರದಲ್ಲಿ ಕೊಡಗಿನ ಕಾಲ್ಪನಿಕ ಗ್ರಾಮದಲ್ಲಿ ಜಾತಿಗಳ ನಡುವೆ ನೀರಿಗಾಗಿ ನಡೆಯುವ ಸಂಘರ್ಷವನ್ನು ತೋರಿಸಲಾಗಿದೆ. ವಿನಯ್ ರಾಜ್‌ಕುಮಾರ್ ಮಾಸ್ ಹೀರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಾಂತ್ರಿಕ ತಂಡ ಅದ್ಭುತವಾಗಿದೆ. ಛಾಯಾಗ್ರಹಣ ಮತ್ತು ಎಡಿಟಿಂಗ್ ಚಿತ್ರಕ್ಕೆ ಶಕ್ತಿಯನ್ನು ನೀಡುತ್ತದೆ. ಒಂದು ಹೊಸ ಪ್ರಯೋಗಾತ್ಮಕ ಚಿತ್ರವಾಗಿದೆ. ಸಿನಮಾ ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸುತ್ತದೆಯಾದರೂ, ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತದೆ.
ಶ್ರೀಲೇಶ್ ನಾಯರ್ ನಿರ್ದೇಶಿಸಿದ ಪೆಪೆ ಸಿನಿಮಾ ರಿಲೀಸ್ ಆಗಿದೆ. ಸಾಂಪ್ರದಾಯಿಕ ಮುಖ್ಯವಾಹಿನಿಯ ಮಸಾಲಾ ಚಲನಚಿತ್ರಗಳಿಂದ ವಿಭಿನ್ನವಾಗಿ ಸಿನಿಮಾ ತೋರಿಸುವುದು ನಿರ್ದೇಶಕರ ಗುರಿಯಾಗಿದೆ. ವಿನಯ್ ರಾಜ್‌ಕುಮಾರ್ ಮಾಸ್ ಹೀರೋ ಆಗಿ ಗಮನಾರ್ಹವಾಗಿ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವಾಗಿ ಟ್ರೇಲರ್ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಕೋಮುವಾದ, ಅಸ್ಪೃಶ್ಯತೆ ಮತ್ತು ಸಾಮಾಜಿಕ ಸವಾಲುಗಳಂತಹ ವಿಷಯಗಳ ಬಗ್ಗೆ ಇರುವ ಈ ಕಥೆಯನ್ನು ಕನ್ನಡ ಪ್ರೇಕ್ಷಕರು ಸ್ವೀಕರಿಸಲು ಸಿದ್ಧರಿದ್ದಾರೆಯೇ ಎಂಬುದು ಈಗ ಪ್ರಶ್ನೆಯಾಗಿದೆ.
ಸಿನಿಮಾ ಕಥೆ ಬಗ್ಗೆ ಬರೆಯುವ ಮೊದಲು ಚಿತ್ರದ ತಾಂತ್ರಿಕ ತಂಡದ ಕೊಡುಗೆಗಳ ಬಗ್ಗೆ ಗಮನ ಹರಿಸಬೇಕಾಗಿದೆ. ಪೂರ್ಣಚಂದ್ರ ತೇಜಸ್ವಿ ಸಂಯೋಜಿಸಿದ ಹಿನ್ನೆಲೆ ಸಂಗೀತ ಮತ್ತು ಹಾಡು ಮನಸ್ಸಿಗೆ ಆಪ್ತವಾಗಿದೆ. ಸಿನಿಮಾದ ಹಿನ್ನೆಲೆ ಸಂಗೀತ ಮನಸ್ಸಿಗೆ ಥ್ರಿಲ್ ನೀಡುತದೆ. ಅಂತೆಯೇ, ಅಭಿಷೇಕ್ ಕಾಸರಗೋಡು ಅವರ ಛಾಯಾಗ್ರಹಣವು ಕಥೆಯ ನಿರೂಪಣೆಯನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತದೆ. ಕಂಟೆಂಟ್‌ಗಿಂತಲೂ ನಿರ್ದೇಶಕ ಶ್ರೀಲೇಶ್ ನಾಯರ್ ಮೇಕಿಂಗ್ ಮತ್ತು ಕ್ವಾಲಿಟಿ ಕಡೆಗೆ ಹೆಚ್ಚು ಗಮನ ನೀಡಿದ್ದಾರೆ. ಮನು ಶೆಡ್ಗಾರ್ ಅವರ ಎಡಿಟಿಂಗ್ ಅತ್ಯದ್ಭುತವಾಗಿದೆ. ವಿವಿಧ ಟೈಮ್‌ಲೈನ್‌ಗಳು ಮತ್ತು ಪಾತ್ರಗಳ ನಡುವೆ ವ್ಯತ್ಯಾಸವನ್ನು ತೋರಿಸಲು ವಿಭಿನ್ನ ಬಣ್ಣದ ಟೋನ್‌ಗಳನ್ನು ಬಳಸಿರುವುದು ಗಮನಾರ್ಹವಾಗಿದೆ. ಕನ್ನಡ ಸಿನಿಮಾದಲ್ಲಿ ಈ ತಂತ್ರವು ಹೊಸತಾಗಿದೆ. ಸಾಹಸ ನಿರ್ದೇಶಕರ ಸೃಜನಾತ್ಮಕ ಆಕ್ಷನ್ ಸೀಕ್ವೆನ್ಸ್‌ಗಳು ಚಿತ್ರದ ದೃಶ್ಯ ಆಕರ್ಷಣೆಯನ್ನು ಹೆಚ್ಚಿಸುತ್ತವೆ. ಈ ಎಲ್ಲಾ ಅಂಶಗಳು ಸುಸಂಬದ್ಧವಾದ ಕಥಾವಸ್ತುವನ್ನು ಒಟ್ಟಿಗೆ ಸೇರಿಸಲು ಸಹಾಯ ಮಾಡುತ್ತದೆ? ಎಂಬುದೇ ಪ್ರಶ್ನೆ.
ಕೊಡಗಿನ ಗ್ರಾಮವೊಂದರಲ್ಲಿ ನಡೆಯುವ ಈ ಕಾಲ್ಪನಿಕ ಕಥೆಯಲ್ಲಿ ಬೇರೆ ಬೇರೆ ಜಾತಿಗಳ ನಡುವೆ ನೀರಿಗಾಗಿ ನಡೆಯುವ ಸಂಘರ್ಷವಿದೆ. ಚಿತ್ರವು ಬದನವಾಳು ಎಂಬ ಗ್ರಾಮದಲ್ಲಿ ನಡೆಯುವ ಮೇಲ್ಜಾತಿ ಮತ್ತು ಕೆಳಜಾತಿಗಳ ನಡುವಿನ ಸಂಘರ್ಷದ ಕಥೆ ಹೊಂದಿದೆ. ಕೊಡಗಿನ ಕಾಲ್ಪನಿಕ ಬದನಾಳು ಗ್ರಾಮದಲ್ಲಿನ ಬೇರೆ, ಬೇರೆ ಜಾತಿಗಳ ನಡುವೆ ನೀರಿನ ತೊರೆಗಾಗಿ ನಡೆಯುವ ಸಂಘರ್ಷವೇ ಮುಖ್ಯ ಕಥಾವಸ್ತು. ಚಿತ್ರದ ನಾಯಕ ‘ಪೆಪೆ’ ಕೆಳಜಾತಿಯವರ ಪ್ರತಿನಿಧಿ. ಮಲಬಾರಿ ಮತ್ತು ರಾಯಪ್ಪ ಕುಟುಂಬಗಳ ಮಧ್ಯೆ ಕಾಲ ಕಾಲದಿಂದಲೂ ದ್ವೇಷ ಮುಂದವರಿದುಕೊಂಡು ಬಂದಿರುತ್ತದೆ. ರಕ್ತಕ್ಕೆ ರಕ್ತ ಎಂಬಂತೆ ಎರಡೂ ಕುಟುಂಬಗಳಲ್ಲೂ ಹೆಣಗಳು ಉರುಳಿವೆ. ರಾಯಪ್ಪನ ಮೊಮ್ಮಗ ಪೆಪೆ (ವಿನಯ್ ರಾಜ್‌ಕುಮಾರ್) ಕೈಗೆ ರಕ್ತ ಮೆತ್ತಿಕೊಳ್ಳಬಾರದು ಎಂಬುದು ಆತನ ತಾಯಿಯ ಸುನೀತಾ (ಅರುಣಾ ಬಾಲರಾಜ್) ಆಸೆ.ಹಾಗಾದ್ರೆ, ನಡೆಯುವುದೇನು? ಅನಾದಿ ಕಾಲದಿಂದಲೂ ನಡೆದುಕೊಂಡ ರಕ್ತಪಾತವನ್ನು ಪೆಪೆ ಹಾಗೇ ಮುಂದುವರಿಸುತ್ತಾನೆಯೇ ಅಥವಾ ರಕ್ತಪಾತ ಶಾಶ್ವತವಾಗಿ ನಿಲ್ಲುತ್ತದೆಯೇ ಎಂಬುದನ್ನು ತಿಳಿದುಕೊಳ್ಳಲು ಸಿನಿಮಾ ನೋಡಬೇಕು.
ಜಾತಿ ತಾರತಮ್ಯದಂತಹ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲವ ಪೆಪೆ ಸಿನಿಮಾದಲ್ಲಿ ಸಾಂಪ್ರದಾಯಿಕ ಆಚರಣೆಗಳ ನೈಜ ಚಿತ್ರಣಗಳ ಮೇಲೆ ಕೇಂದ್ರೀಕರಿಸಲಾಗಿದೆ. ಜಾತಿ ಸಮಸ್ಯೆ, ಮಹಿಳೆಯರ ಮೇಲಿನ ದೌರ್ಜನ್ಯಗಳು, ಅಂತಾರ್ಜಾತಿ ವಿವಾಹ, ಬಡವರ ಮೇಲಿನ ದಬ್ಬಾಳಿಕೆ ಮುಂತಾದ ವಿಚಾರಗಳನ್ನು ಸೇರಿಸಲಾಗಿದೆ. ಕೆಲವಂತೂ ಕಥೆಗೆ ಪೂರಕವಾಗಿರದೇ ಇರುವುದರಿಂದ ಸಿನಿಮಾದ ಜೊತೆಗೆ ಕನೆಕ್ಟ್ ಆಗುವುದಿಲ್ಲ. ತೊರೆಯಲ್ಲಿ ಮರಳು ಸಾಗಾಣಿಕೆ ಕುರಿತು ಇಲ್ಲಿ ಹೇಳಲಾಗಿದೆ. ರಕ್ತಪಾತಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಾಯಕನನ್ನು ರಕ್ತದೋಕುಳಿಯಲ್ಲಿ ಮಿಂದೆದ್ದವನಂತೆ ಮಾಸ್ ಆಗಿ ತೋರಿಸಬೇಕು ಎಂದು ನಿರ್ಧರಿಸಿದಂತೆ ಕಾಣುತ್ತೆ. ಇಲ್ಲಿವರೆಗೂ ಸಾಪ್ಟ್ ಪಾತ್ರಗಳಲ್ಲಿ ಕಂಡಿದ್ದ ವಿನಯ್‌ಗೆ ಮಾಸ್ ಅವತಾರ ಕೂಡ ಸೂಟ್ ಆಗುತ್ತೆ. ರಗಡ್ ಲುಕ್‌ನಲ್ಲಿ ಬಡಿದಾಡುವ ದೃಶ್ಯಗಳೇ ಇದಕ್ಕೆ ಸಾಕ್ಷಿ. ವಿಶಿಷ್ಟವಾದ ಡೈಲಾಗ್ ಡೆಲಿವರಿ ಪ್ರತಿ ದೃಶ್ಯದಲ್ಲೂ ಕಾಣುತ್ತದೆ.
ಮಯೂರ್ ಪಟೇಲ್ ಈ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ಕಾಜಲ್ ಕುಂದರ್, ಮೇದಿನಿ ಕೆಳಮನಿ, ಅರುಣಾ ಬಾಲ್‌ರಾಜ್, ಸಂಧ್ಯಾ ಅರಕೆರೆ ಪಾತ್ರಗಳು ಕೂಡ ಅಷ್ಟೇ ಪವರ್‌ಫುಲ್ ಆಗಿವೆ. ಮನಸ್ಸಿನಲ್ಲಿ ಕಾಡುತ್ತವೆ. ಬಹುತೇಕ ಎಲ್ಲ ಕಲಾವಿದರು ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ನಿರ್ದೇಶಕರು ಬಹಳ ತಾಳ್ಮೆಯಿಂದ ಕಥೆಯನ್ನು ಹೇಳಿರುವುದರಿಂದ ಸಾಕಷ್ಟು ಕಡೆ ಪ್ರೇಕ್ಷಕನ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಒಂದು ಸನ್ನಿವೇಶವನ್ನು ಅರ್ಥಮಾಡಿಕೊಳ್ಳುವಷ್ಚರಲ್ಲೇ ದಿಢೀರನೆ ಕಥೆ ಬದಲಾಗುತ್ತದೆ. ಕೆಲವೊಂದು ಸನ್ನಿವೇಶಗಳನ್ನು ಬಲವಂತವಾಗಿ ಸೇರಿಸಲಾಗಿದೆ, ಜೊತೆಗೆ ಅನಗತ್ಯ ರಕ್ತಪಾತಕ್ಕೆ ಹೆಚ್ಚು ಅವಕಾಶ ಮಾಡಿಕೊಡಲಾಗಿದೆ.
ಚಿತ್ರ: ಪೆಪೆ
ನಿರ್ದೇಶಕ: ಶ್ರೀಲೇಶ್ ನಾಯರ್
ಕಲಾವಿದರು: ವಿನಯ್ ರಾಜ್‌ಕುಮಾರ್, ಕಾಜಲ್ ಕುಂದರ್, ಮೇಧಿನಿ ಕಲ್ಮನೆ, ಅರುಣಾ ಬಾಲರಾಜ್ ಮತ್ತು ಮಯೂರ್ ಪಟೇಲ್