'ಸಪ್ಲೈಯರ್ ಶಂಕರ' ಸಿನಿಮಾ ವಿಮರ್ಶೆ: ಸಾಧಾರಣ ಕಥಾ ಹಂದರ, ಜಾಳು ಜಾಳಾದ ನಿರೂಪಣೆ; ಅನಪೇಕ್ಷಿತ ಕ್ರೌರ್ಯ!
Rating(2.5 / 5)
ಸಪ್ಲೈಯರ್ ಶಂಕರ, ಹೆಸರು ಹೇಳಿದ ಕೂಡಲೇ ಮನಸ್ಸಿಗೆ ಬರುವುದು ಬಾರ್ ನ ಕಥೆ ಎಂದು, ಹೌದು, ಈ ಸಿನಿಮಾ ಕಥೆ ಬಾರ್ ನಲ್ಲಿ ಕೆಲಸ ಮಾಡುವ ಸಪ್ಲೈಯರ್ ಶಂಕರ್ ಎಂಬಾತನದ್ದು.
ಕಥೆಯ ಆರಂಭದಲ್ಲಿದ್ದ ನಾಯಕ, ಸಮಯ ಕಳೆದಂತೆ ಖಳನಾಯಕನಾಗಿ ಬದಲಾಗುತ್ತಾನೆ. ಹೀಗಾಗಿ ಆರಂಭದಲ್ಲಿ ನಾಯಕನ ಬಗ್ಗೆ ಇದ್ದ ಅಭಿಪ್ರಾಯ ನಂತರ ಸಂಪೂರ್ಣ ಬದಲಾಗುತ್ತದೆ. ಇದೊಂದು ಸೇಡಿನ ಕಥೆಯಾಗಿ ಪರಿವರ್ತನೆಯಾಗುತ್ತದೆ.
ಶಂಕರ(ನಿಶ್ಚಿತ್ ಕೊರೋಡಿ) ಬಾಲ್ಯದಲ್ಲಿ ತಾನು ಕಳೆದುಕೊಂಡಿದ್ದನ್ನು ಹುಡುಕಾಡುತ್ತಾ ಹಳ್ಳಿಯಿಂದ ಪಟ್ಟಣಕ್ಕೆ ಬರುತ್ತಾನೆ. ನಂತರ ಬಾರ್ ನಲ್ಲಿ ಸಪ್ಲೈಯರ್ ಕೆಲಸಕ್ಕೆ ಸೇರಿಕೊಳ್ಳುತ್ತಾನೆ, ಅ ನಂತರ ನಡೆಯುವ ಹಲವು ಘಟನೆಗಳು ಚಿತ್ರದ ಜೀವಾಳ, ಆದರೆ ಎಲ್ಲಿಯೂ ಬಿಗಿಯಾದ ಚಿತ್ರಕಥೆ ನಿರೂಪಣೆಯಿಲ್ಲ.
15 ವರ್ಷ ಬಾರ್ ನಲ್ಲಿ ಕೆಲಸ ಮಾಡುವ ಶಂಕರನಿಗೆ ತನ್ನ ತಾಯಿಯ ಫೋಟೋ ಮಾತ್ರವೇ ಆತನಿಗೆ ಎನರ್ಜಿ ಬೂಸ್ಟರ್. ಸ್ಥಳೀಯ ಬಾರ್ ಒಂದು ಹಲವು ಘಟನೆಗಳಿಗೆ ಸಾಕ್ಷಿಯಾಗುತ್ತದೆ. ಬಾರ್ ಗೆ ಬಂದ ಅಪರಿಚಿತರು ಸಹೋದರಾಗುತ್ತಾರೆ, ಮಕ್ಕಳ ಅಪಹರಣ ನಡೆಯುತ್ತದೆ, ಇದು ನಗರದಲ್ಲಿ ನಡೆಯುವ ಕಿಡ್ನಾಪ್ ಪ್ರಕರಣಗಳ ವಾಸ್ತವತೆಗೆ ಸಂಪೂರ್ಣ ದೂರ.
ಶಂಕರನ ಬಾಳಿನಲ್ಲಿ ಸ್ಕೂಲ್ ಟೀಚರ್ ಪುಣ್ಯ(ದೀಪಿಕಾ ಆರಾಧ್ಯ) ಬಂದ ಮೇಲೆ ಬದುಕು ಬಹಳ ಸುಂದರವೆನಿಸುತ್ತದೆ. ಇಬ್ಬರು ಮದುವೆಯಾಗಬೇಕು ಎಂದು ಪ್ಲಾನ್ ಮಾಡುತ್ತಿರುವಾಗಲೇ ನಡೆದ ಅನಿರೀಕ್ಷಿತ ಕೊಲೆಯೊಂದು ಶಂಕರನ ಜೀವನದ ದಿಕ್ಕನ್ನೇ ಬದಲಿಸುತ್ತದೆ.
ಸಿನಿಮಾದ ಮೊದಲರ್ಧ ನೀರಸವಾದ ಕಥೆಯಿಂದ ನಿರಾಶಾದಾಯಕವೆನಿಸಿದರೂ ಎರಡನೇ ಭಾಗ ಆಸಕ್ತಿಯಿಂದ ಚಿತ್ರ ನೋಡಿಸಿಕೊಂಡು ಹೋಗುತ್ತದೆ. ಚಿತ್ರದ ಎರಡನೇ ಭಾಗದಲ್ಲಿ ಕಥೆ ಗಂಭೀರವೆನಿಸಿಕೊಳ್ಳುತ್ತದೆ. ಮಕ್ಕಳ ಅಪಹರಣ ಬೇಧಿಸುವುದು ಆಸಕ್ತಿ ಮೂಡಿಸುತ್ತದೆ. ಆದರೆ ಪೊಲೀಸ್ ಠಾಣೆಯಲ್ಲಿ ನಡೆಯುವ ಕೆಲವು ಅನಗತ್ಯ ಸನ್ನಿವೇಶ, ಅನಪೇಕ್ಷಿತ ಕ್ರೌರ್ಯ ಬೇಸರ ತರಿಸುತ್ತದೆ, ಚಿತ್ರಕ್ಕೆ ನಿಜಕ್ಕೂ ಈ ದೃಶ್ಯಗಳು ಅಗತ್ಯವಿತ್ತೇ ಎನಿಸುತ್ತದೆ. ಸೂಕ್ಷ್ಮತೆ ಮತ್ತು ಸಮತೋಲನ ಸಾಧಿಸಲು ಸಿನಿಮಾ ವಿಫಲವಾಗಿರುವುದು ಎದ್ದು ತೋರುತ್ತದೆ.
ತೆರೆಯ ಮೇಲೆ ನಡೆಯುವ ಘಟನೆಗಳಿಗೂ ಮತ್ತು ಹಿನ್ನೆಲೆ ಸಂಗೀತಕ್ಕೂ ಹೊಂದಿಕೆಯಾಗುವುದಿಲ್ಲ, ಎಲ್ಲಾ ಅಡೆತಡೆಗಳ ನಡುವೆಯೂ ಸಪ್ಲೈಯರ್ ಶಂಕರ್ ಮೂಲಕ ನಿಶ್ಚಿತ್ ಕೊರೋಡಿ ಕಮರ್ಷಿಯಲ್ ಹೀರೋ ಆಗಿ ಹೊರಹೊಮ್ಮಿದ್ದಾರೆ. ಆದರೆ ನಟನೆಯಲ್ಲಿ ಮತ್ತಷ್ಟು ಸುಧಾರಿಸುವ ಅಗತ್ಯವಿದೆ. ಪೊಲೀಸ್ ಪೇದೆ ಪಾತ್ರದಲ್ಲಿ ನಟಿಸಿರುವ ಗೋಪಾಲ್ ಕೃಷ್ಣ ದೇಶಪಾಂಡೆ ಬಹಳಷ್ಟು ಗಮನ ಸೆಳೆಯುತ್ತಾರೆ. ಸಿನಿಮಾವೊಂದಕ್ಕೆ ಶಕ್ತಿ ತುಂಬುವ ಪಾತ್ರ ಅವರದ್ದಾಗಿದೆ. ಆದರೆ ಈ ಎಲ್ಲಾ ಅಂಶಗಳು ಸಿನಿಮಾ ಗೆಲ್ಲಿಸುತ್ತವೆಯೇ? ಮತ್ತಷ್ಟು ಬಿಗಿ ನಿರೂಪಣೆ, ಚಿಂತನಾಶೀಲತೆಯೊಂದಿಗೆ ಸಪ್ಲೈಯರ್ ಶಂಕರ್ ನನ್ನು ಉತ್ತಮವಾಗಿ ತರಬಹುದಿತ್ತು.
ಸಿನಿಮಾ: ಸಪ್ಲೈಯರ್ ಶಂಕರ
ನಿರ್ದೇಶಕ: ರಂಜಿತ್ ಸಿಂಗ್ ರಜಪೂತ್
ಕಲಾವಿದರು: ನಿಶ್ಚಿತ್ ಕೊರೋಡಿ, ದೀಪಿಕಾ ಆರಾಧ್ಯ, ಗೋಪಾಲಕೃಷ್ಣ ದೇಶಪಾಂಡೆ