ಕ್ಲಿಕ್ ಸಿನಿಮಾ ಸ್ಟಿಲ್
ಕ್ಲಿಕ್ ಸಿನಿಮಾ ಸ್ಟಿಲ್

'ಕ್ಲಿಕ್' ಸಿನಿಮಾ ವಿಮರ್ಶೆ: ಹೆತ್ತವರ ಹೆಬ್ಬಯಕೆ ಮತ್ತು ಮಕ್ಕಳ ಮನಸ್ಸಿನ ಕನವರಿಕೆಗಳ ಸಂಘರ್ಷ!

ಚಿತ್ರ ನಿರೂಪಣಾ ಶೈಲಿ ಸಮಾಜದ ಇಂದಿನ ಪರಿಸ್ಥಿತಿಯ ಕೈಗನ್ನಡಿಯಂತಿದೆ. ಮಕ್ಕಳ ವಯಕ್ತಿಕ ಆಸೆ ಅಭಿಲಾಷೆಗಳಿಗೆ ಪೋಷಕರು ತೋರುವ ವಿರೋಧ, ನಿರ್ಲಕ್ಷ್ಯ, ಮುಂದೆ ಅದರಿಂದ ಅನುಭವಿಸಬೇಕಾದ ಪರಿಣಾಮಗಳ ಬಗ್ಗೆ ಸಿನಿಮಾ ಉತ್ತಮ ಸಂದೇಶ ನೀಡುತ್ತದೆ.  
Rating(3 / 5)

ಮಕ್ಕಳನ್ನು ಭವಿಷ್ಯದಲ್ಲಿ ತಮ್ಮ ಆಸೆಯಂತೆ ಬೆಳೆಸಬೇಕು. ಅವರನ್ನು ಡಾಕ್ಟರ್‌, ಎಂಜಿನಿಯರ್‌, ಅಥವಾ ದೊಡ್ಡ ಅಧಿಕಾರಿಯನ್ನಾಗಿ ಮಾಡಬೇಕು ಎಂಬುದು ಬಹುತೇಕ ಪೋಷಕರ ಹೆಬ್ಬಯಕೆಯಾಗಿರುತ್ತದೆ. ಆದರೆ ಮುಗ್ಧ ಮಕ್ಕಳ ಮನದಲ್ಲೇನಿದೆ, ಅವರ ಇಷ್ಟ-ಕಷ್ಟಗಳೇನು, ಅವರ ಆಸೆ-ಆಕಾಂಕ್ಷೆಗಳೇನು ಎಂಬುದನ್ನು ಅರಿಯುವ ವ್ಯವಧಾನ ಬಹುತೇಕ ಹೆತ್ತವರಿಗೆ ಇರುವುದಿಲ್ಲ. ಮಕ್ಕಳ ವಿಷಯದಲ್ಲಿ ದೊಡ್ಡವರು ಮಾಡುವ ಈ ತಪ್ಪು ಅವರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಿರ್ದೇಶಕ ಶಶಿಕುಮಾರ್ ತಮ್ಮ 'ಕ್ಲಿಕ್' ಸಿನಿಮಾ ಮೂಲಕ ಹೇಳಲು ಹೊರಟಿದ್ದಾರೆ. ಈ ಸಿನಿಮಾ ಪೋಷಕರ ನಿರೀಕ್ಷೆಗಳು ಮತ್ತು ಮಗುವಿನ ಆಸೆಗಳ ನಡುವಿನ ಹೋಯ್ದಾಟವನ್ನು ಚಿತ್ರಿಸಿದೆ.

ಚಿತ್ರವು ಸಮರ್ಥ್ (ಪವನ್ ಬಸ್ರೂರ್) ಎಂಬ ಬಾಲಕನ ಜೀವನದೊಂದಿಗೆ ಆರಂಭವಾಗುತ್ತದೆ. ಸಮರ್ಥ್ ಗೆ ವಿದ್ಯಾಭ್ಯಾಸಕ್ಕಿಂತ ಹೊರ ಜಗತ್ತಿನ ಮೇಲೆ ಹೆಚ್ಚು ಒಲವು. ಪಠ್ಯಕ್ಕಿಂತ ಸಮರ್ಥನಿಗೆ ಫೋಟೋಗ್ರಫಿಯ ಮೇಲೆ ಹೆಚ್ಚು ಪ್ರೀತಿ. ಆದರೆ ಪೋಷಕರಾದ ಸಂಕೇತ್ ಮತ್ತು ಸುಮನಾಗೆ ತಮ್ಮ ಮಗನ ಭವಿಷ್ಯ ತಮ್ಮ ಆಸೆಯಂತೆ ರೂಪಿಸಬೇಕು  ಎಂಬ ಹೆಬ್ಬಯಕೆ. ತಮ್ಮ ನಿರಿಕ್ಷೆಯಂತೆ ಮಗ ಇಲ್ಲ ಎಂಬ ವಿಚಾರ ಹೆತ್ತವರಿಗೆ ಆಘಾತ ತರುತ್ತದೆ. ಪೋಷಕರ ಆಸೆಯಂತೆ ಇರುವುದೋ ಅಥವಾ ತನ್ನ ಹೃದಯದ ಕನಸಿನಂತೆ ತನ್ನ ಬದುಕು ರೂಪಿಸಿಕೊಳ್ಳುವುದೋ ಎಂಬ ಸಂಘರ್ಷದಲ್ಲಿ ಸಮರ್ಥ್ ಪಾತ್ರವಿದೆ. ಆದರೆ ಕೊನೆಗೂ ಆತ ಕೇಳುವುದು ತನ್ನ ಮನಸ್ಸಿನ ಮಾತು.

ಬೆಳೆಯುವ ಮಕ್ಕಳ ಬಗ್ಗೆ ಪೋಷಕರ ಆಸೆ - ಆಕಾಂಕ್ಷೆ  ಹಾಗೂ ತಮ್ಮ ತಮ್ಮ ಮಗ/ಮಗಳು ತಾವು ಹೇಳಿದ ಹಾಗೆ ಕೇಳಿದರ ಅದರ ಭವಿಷ್ಯ ಉತ್ತಮವಾಗಿರುತ್ತದೆ ಎಂದು ಭ್ರಮೆಯಲ್ಲಿ ಬದುಕುವ ಪೋಷಕರಾಗಿ ಶಶಿಕುಮಾರ್ ಸೊಗಸಾಗಿ ಅಭಿನಯಿಸಿದ್ದಾರೆ.

ಚಿತ್ರ ನಿರೂಪಣಾ ಶೈಲಿ ಸಮಾಜದ ಇಂದಿನ ಪರಿಸ್ಥಿತಿಯ ಕೈಗನ್ನಡಿಯಂತಿದೆ. ಮಕ್ಕಳ ವೈಯಕ್ತಿಕ ಆಸೆ ಅಭಿಲಾಷೆಗಳಿಗೆ ಪೋಷಕರು ತೋರುವ ವಿರೋಧ, ನಿರ್ಲಕ್ಷ್ಯ, ಮುಂದೆ ಅದರಿಂದ ಅನುಭವಿಸಬೇಕಾದ ಪರಿಣಾಮಗಳ ಬಗ್ಗೆ ಸಿನಿಮಾ ಉತ್ತಮ ಸಂದೇಶ ನೀಡುತ್ತದೆ.  

ಪ್ರಸಿದ್ದ ಸಂಗೀತ ನಿರ್ದೇಶಕ ರವಿ ಬಸ್ರೂರು ಪುತ್ರ ಪವನ್ ಬಸ್ರೂರ್ ಕ್ಲಿಕ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ್ದಾರೆ, ಮೊದಲ ಸಿನಿಮಾದಲ್ಲೇ ಉತ್ತಮವಾಗಿ ಅಭಿನಯಿಸುವ ಮೂಲಕ ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಸಮರ್ಥ್ ಪಾತ್ರಕ್ಕೆ ಪವನ್ ಜೀವ ತುಂಬಿದ್ದಾರೆ. ಸುಮನಾ ಶಶಿ, ರಚನಾ ದಶರಥ್‌, ಚಂದ್ರಕಲಾ ಮೋಹನ್‌ ಮತ್ತಿತರರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕಥೆಯ ನಿರೂಪಣೆ,  ಜೀವನ್ ಗೌಡ ಛಾಯಾಗ್ರಹಣ ಮನಮೋಹಕವಾಗಿದೆ. ವಿಶ್ವಾಸ್ ಕೌಶಿಕ್ ಅವರ ಸಂಗೀತ ಸಂಯೋಜನೆ ಮತ್ತು ಆಕಾಶ್ ಪರ್ವ ಅವರ ಹಿನ್ನೆಲೆ ಸಂಗೀತ ಕಥೆಯ ನಿರೂಪಣೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸುತ್ತದೆ.

ಕ್ಲಿಕ್ ಸಾಮಾನ್ಯ ಕಥೆ ಹೇಳುವ ಸಂಪ್ರದಾಯ ಅನುಸರಿಸದಿರಬಹುದು, ಆದರೆ ಇದು ಈ ಕಾಲಕ್ಕೆ ಬಹಳ ಪ್ರಸ್ತುತವಾಗಿರುವ  ಸಮಾಜಕ್ಕೆ ಸಂಬಂಧಿತ ಕಥೆಯಾಗಿದೆ. ಬಿಗಿಯಾದ ನಿರೂಪಣೆಯಿದೆ. ಪೋಷಕರು ಮತ್ತು ಮಕ್ಕಳ ನಡುವಿನ ಸೂಕ್ಷ್ಮ ಸಂಬಂಧಗಳ ಬಗ್ಗೆ, ಮೌಲ್ಯಗಳ ಅರಿವು ನೀಡುತ್ತದೆ. ಕತೆ ಮುಂದಕ್ಕೆ ಸಾಗುತ್ತಿದ್ದಂತೆಯೇ ತಮ್ಮ ಇಷ್ಟದ ದಾರಿಯಲ್ಲಿ ಸಾಗುವುದು ಎಲ್ಲರಿಗೂ ಸಾಧ್ಯವೇ, ಒಂದು ವೇಳೆ ಇಷ್ಟದ ದಾರಿಯಲ್ಲಿ ಹೋದರೂ ಅದರಿಂದ ಗೆಲುವು ಪಡೆಯುವುದು ಸಾಧ್ಯವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಅದಕ್ಕೆ ತಕ್ಕಂತೆ ಕಡೆಗೆ ಉತ್ತರವೂ ಸಿಗುತ್ತದೆ.

ಸಿನಿಮಾ: ಕ್ಲಿಕ್
ನಿರ್ದೇಶನ: ಶಶಿಕುಮಾರ್
ಕಲಾವಿದರು: ಪವನ್ ಬಸ್ರೂರ್, ಕಾರ್ತಿಕ್, ಚಂದ್ರಕಲಾ ಮೋಹನ್

Related Stories

No stories found.

Advertisement

X
Kannada Prabha
www.kannadaprabha.com