Hejjaru cinema still
ಹೆಜ್ಜಾರು ಸಿನಿಮಾ ಸ್ಟಿಲ್

'ಹೆಜ್ಜಾರು' ಸಿನಿಮಾ ವಿಮರ್ಶೆ: ಕೌತುಕ ಲೋಕದಲ್ಲೊಂದು ಪಯಣ; ಸಸ್ಪೆನ್ಸ್-ಥ್ರಿಲ್ಲರ್ ಮನರಂಜನೆಯ ರಸದೌತಣ!

Published on
Rating(3 / 5)
Summary

ಹೆಜ್ಜಾರು, ಹರ್ಷಪ್ರಿಯಾ ನಿರ್ದೇಶನದ ಸಸ್ಪೆನ್ಸ್-ಥ್ರಿಲ್ಲರ್, ಸಮಾನಾಂತರ ಜೀವನದ ಪರಿಕಲ್ಪನೆಯಲ್ಲಿ ಮೂಡಿದ ಕಥೆ. 1965, 1995 ಮತ್ತು 2020ರ ಮೂರು ಕಾಲಘಟ್ಟಗಳಲ್ಲಿ ನಡೆಯುವ ಈ ಚಿತ್ರವು, ಪ್ರೇಮಕಥೆ ಮತ್ತು ಭೀಕರ ಘಟನಾವಳಿಗಳೊಂದಿಗೆ ಪ್ರೇಕ್ಷಕರನ್ನು ಸೆಳೆಯುತ್ತದೆ. ಭಗತ್ ಆಳ್ವ ಮತ್ತು ಶ್ವೇತಾ ಡಿಸೋಜಾ ಭಾವಪೂರ್ಣ ಅಭಿನಯ, ನಕುಲ್ ಅಭ್ಯಂಕರ್ ಅವರ ಸಂಗೀತ, ಮತ್ತು ಅಮರ್ ಗೌಡ ಅವರ ಛಾಯಾಗ್ರಹಣ ಚಿತ್ರದ ಹೈಲೈಟ್.

ಟಿವಿ ಧಾರಾವಾಹಿಗಳ ಹಿನ್ನೆಲೆಯಿಂದ ಬಂದ ಹರ್ಷಪ್ರಿಯಾ, ಹೆಜ್ಜಾರು ಚಿತ್ರದ ಮೂಲಕ ಚಲನಚಿತ್ರ ನಿರ್ದೇಶನಕ್ಕೆ ಪ್ರವೇಶ ಮಾಡಿದ್ದಾರೆ. ಸಾಂಪ್ರದಾಯಿಕ ಸಿನಿಮಾ ಟ್ರೋಪ್‌ಗಳನ್ನು ಬಿಟ್ಟು, ಅವರು ಧೈರ್ಯದಿಂದ ಸಮಾನಾಂತರ ಜೀವನದ ಜಗತ್ತಿನಲ್ಲಿ ತೊಡಗಿದ್ದಾರೆ.

ಭಾರತೀಯ ಸಿನಿಮಾದಲ್ಲಿ ಅಪರೂಪದ ಮತ್ತು ಪ್ರಬಲವಾದ ವಿಷಯ ಅಡಗಿದೆ, ಇದನ್ನು ಹೆಜ್ಜಾರು ಸಿನಿಮಾ ಮೂಲಕ ತೋರಿಸಲು ಮುಂದಾಗಿದ್ದಾರೆ. ಸಮಾನಾಂತರ ಜೀವನದ ಅನ್ವೇಷಣೆಯ ಬಗ್ಗೆ ಕೌತುಕ ಮೂಡಿಸುತ್ತದೆ. ಭಾವನಾತ್ಮಕ ಬಂಧಗಳ ಬಗ್ಗೆ ಒಂದಕ್ಕೊಂದು ಸಂಬಂಧ ಕಲ್ಪಿಸಲು ನಿಟ್ಟಿನಲ್ಲಿ ಕತೆ ಸಾಗುತ್ತದೆ. ಹೆಜ್ಜಾರು ಸಮಾನಾಂತರ ಜೀವನದ ಪರಿಕಲ್ಪನೆಯಲ್ಲಿ ಬೇರೂರಿದೆ, ಅಲ್ಲಿ ಇದೇ ರೀತಿಯ ಘಟನೆಗಳು ವಿವಿಧ ಯುಗಗಳಲ್ಲಿ ತೆರೆದುಕೊಳ್ಳುತ್ತವೆ. ಸಿನಿಮಾದ ಕಥೆ ಮೂರು ಕಾಲಘಟ್ಟದಲ್ಲಿ ನಡೆಯುತ್ತದೆ. ಇಸವಿ 1965. ಹೆಜ್ಜಾರು ಪೊಲೀಸ್‌ ಠಾಣೆಯಲ್ಲಿ ಸತ್ಯಮೂರ್ತಿ ಎಂಬಾತ ಕಾನ್‌ಸ್ಟೆಬಲ್ ಆಗಿ ಕಾರ್ಯನಿರ್ವಹಿಸುತ್ತಿರುತ್ತಾನೆ. ಕಳ್ಳನೊಬ್ಬನನ್ನು ಹಿಡಿಯಲು ಓಡುತ್ತಿರುವಾಗ ಸತ್ಯಮೂರ್ತಿ, ಅದೇ ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ ಹಾಗೂ ಕಳ್ಳ ಊರಿನ ಆಲದಮರದ ಕೆಳಗೆ ಲಾರಿ ಅಪಘಾತವಾಗಿ ಸಾಯುತ್ತಾರೆ.

ಸತ್ಯಮೂರ್ತಿಯ ಪತ್ನಿ, ಮಗ ಅನಾಥರಾಗುತ್ತಾರೆ. 1995ರಲ್ಲಿ ಇದೇ ರೀತಿಯ ಮತ್ತೊಂದು ಘಟನೆ ಅದೇ ಆಲದಮರದ ಕೆಳಗೆ ನಡೆಯುತ್ತದೆ. ಆ ಅಪಘಾತದಲ್ಲಿ ಕಾನ್‌ಸ್ಟೆಬಲ್‌ ಆಗಿದ್ದ ಕೃಷ್ಣಮೂರ್ತಿ ಸಾಯುತ್ತಾನೆ. ಕೃಷ್ಣಮೂರ್ತಿಯ ಪತ್ನಿ, ಮಗ ಅನಾಥರಾಗುತ್ತಾರೆ. ಒಂದೇ ರೀತಿಯಲ್ಲಿ ನಡೆದ ಈ ಎರಡೂ ಘಟನೆಗಳು ಸತ್ಯಮೂರ್ತಿಯ ಮಗ ರಾಜಾರಾಮನ(ಗೋಪಾಲಕೃಷ್ಣ ದೇಶಪಾಂಡೆ) ಗಮನಕ್ಕೆ ಬರುತ್ತದೆ. ಆ ವೇಳೆಗಾಗಲೇ ರಾಜಾರಾಮನ ಪ್ರೇಯಸಿಯ ಕೊಲೆಯಾಗಿರುತ್ತದೆ. ಕೊಲೆಗಾರನ ಹುಡುಕಾಟದಲ್ಲಿ ಆತನಿರುತ್ತಾನೆ.

2020ರ ವೇಳೆಗೆ ಕೃಷ್ಣಮೂರ್ತಿಯ ಮಗ ಭಗತ್‌(ಭಗತ್‌ ಆಳ್ವ) ಯುವಕನಾಗಿದ್ದಾನೆ. ಆತ ಜಾನಕಿ(ಶ್ವೇತಾ ಡಿಸೋಜ) ಎಂಬಾಕೆಯನ್ನು ಪ್ರೀತಿಸುತ್ತಿದ್ದಾನೆ. ಹೀಗಿರುವಾಗ ಒಂದು ದಿನ ರಾಜಾರಾಮ ತನ್ನನ್ನೇ ಹಿಂಬಾಲಿಸುತ್ತಿರುವ ವಿಷಯ ಭಗತ್‌ಗೆ ತಿಳಿಯುತ್ತದೆ. ಇಲ್ಲಿಂದ ಕಥೆ ತಿರುವು ಪಡೆಯುತ್ತಾ ಹೋಗುತ್ತದೆ. ಭಗತ್ ಮತ್ತು ಜಾನಕಿ ಪ್ರೀತಿಗೆ ಭೂಪತಿ(ವಿನೋದ್ ಭಾರತಿ) ಅಡ್ಡಿ ಪಡಿಸುತ್ತಾನೆ.

ಇದರ ನಡುವೆ ಭ್ರಷ್ಟ ಪೊಲೀಸ್ ಅಧಿಕಾರಿ ಧರ್ಮ (ಮುನಿರಾಜು) ಮತ್ತು ಹಳ್ಳಿಯ ಕೊಲೆಗಡುಕ ದೇವಿ (ನವೀನ್ ಕೃಷ್ಣ)ಯಿಂದ ಭಗತ್‌ನ ಪ್ರೀತಿಯ ಪ್ರಯಣಕ್ಕೆ ಮತ್ತಷ್ಟು ತೊಂದರೆ ಎದುರಾಗುತ್ತದೆ. ಈ ಎಲ್ಲಾ ಅಡೆ-ತಡೆಗಳನ್ನು ಮೀರಿ ಭಗತ್ ತನ್ನ ಪ್ರೀತಿ ಪಡೆಯುತ್ತಾನೆಯೇ ಪ್ಯಾರಲಲ್ ಲೈಫ್ ನಲ್ಲಿ ಆತ ಅನುಭವಿಸುವ ಸಮಸ್ಯೆಗಳೇನು ಎಂಬ ಬಗ್ಗೆ ತಿಳಿಯಲು ಸಿನಿಮಾ ನೋಡಬೇಕಿದೆ. ಒಂದು ಕಡೆ ಪ್ರೇಮಕಥೆ ಮತ್ತೂಂದು ಕಡೆ ನಡೆಯುವ ಭೀಕರ ಘಟನೆ ಹೀಗೆ ಸಾಗುವ ಕಥೆಯಲ್ಲಿ ಒಂದಷ್ಟು ತಿರುವುಗಳಿವೆ. ಎರಡು ಕಾಲಘಟ್ಟದ ಎರಡು ಪಾತ್ರಗಳು ಮುಖಾಮುಖೀಯಾಗುವ ಸನ್ನಿವೇಶಗಳು ಕುತೂಹಲಭರಿತವಾಗಿವೆ. ಅದು ಈ ಸಿನಿಮಾದ ಪ್ಲಸ್‌ ಕೂಡಾ. ಇಲ್ಲಿ ಸಸ್ಪೆನ್ಸ್‌, ಥ್ರಿಲ್ಲರ್‌ ಅಂಶಗಳು ಕಥೆಯ ಓಘ ಹೆಚ್ಚಿಸಿವೆ. ಸಿನಿಮಾದ ಹೈಲೈಟ್‌ ಗಳಲ್ಲಿ ಚಿತ್ರದ ಕ್ಲೈಮ್ಯಾಕ್ಸ್‌ ಕೂಡಾ ಒಂದು.

ಹೆಜ್ಜಾರು ಶೂಟಿಂಗ್ ಗಾಗಿ ಉಜಿರೆಯಲ್ಲಿ ಸೆಟ್ ಹಾಕಲಾಗಿತ್ತು. ಅದರ ಜೊತೆಗೆ ಪ್ರಮುಖ ಸ್ಥಳಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ, ಪ್ರಕೃತಿ ಸೊಬಗಿನ ನಡುವೆ ಚಿತ್ರೀಕರಿಸಿರುವ ಹಲವು ಸನ್ನಿವೇಶಗು ದೃಶ್ಯಕಾವ್ಯದಂತಿದೆ. ಛಾಯಾಗ್ರಾಹಕ ಅಮರ್ ಗೌಡ ಮಾರ್ಗದರ್ಶನದ ದೃಶ್ಯಗಳು, ಚಿತ್ರಿಸಲಾದ ಪ್ರತಿಯೊಂದು ಯುಗದ ಸಾರವನ್ನು ಸೆರೆಹಿಡಿಯುತ್ತದೆ. 1960 ರ ದಶಕದ ವಾತಾವರಣದಿಂದ 1990 ರ ಮತ್ತು ನಂತರ 2020 ರವರೆಗೆ ಅದ್ಭುತ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದಾರೆ,

Hejjaru cinema still
'ಹೆಜ್ಜಾರು' ಸಿನಿಮಾ ಟೀಸರ್ ನೋಡಿ ಕಿಚ್ಚ ಸುದೀಪ್ ಇಂಪ್ರೆಸ್: ತಂಡದ ಪ್ರಯತ್ನಕ್ಕೆ ಶ್ಲಾಘನೆ

ನಕುಲ್ ಅಭ್ಯಂಕರ್ ಅವರ ಸಂಗೀತವು ಹೆಜ್ಜಾರು ಸಿನಿಮಾದ ಮತ್ತೊಂದು ಪ್ಲಸ್ ಪಾಯಿಂಟ್. ಹಿನ್ನೆಲೆ ಸಂಗೀತ ಪ್ರೇಕ್ಷಕರಿಗೆ ಕರ್ಣಾನಂದ ನೀಡುತ್ತದೆ. ಎಂದಿನಂತೆ ಗೋಪಾಲ್ ಕೃಷ್ಣ ದೇಶಪಾಂಡೆ ತಮಗೆ ನೀಡಿದ್ದ ರಾಜಾರಾಂ ಪಾತ್ರಕ್ಕೆ ಜೀವಕಳೆ ತುಂಬಿದ್ದಾರೆ. ಭಗತ್ ಆಳ್ವ ಮತ್ತ ಶ್ವೇತಾ ಡಿಸೋಜಾ ಭಾವಪೂರ್ಣ ಪಾತ್ರಗಳನ್ನು ನಿರ್ವಹಿಸಿದ್ದಾರೆ. ನವೀನ್ ಕೃಷ್ಣ, ಮುನಿರಾಜು ಮತ್ತು ವಿನೋದ್ ಭಾರತಿ ಪೋಷಕ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಒಟ್ಟಾರೆ, ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಪ್ರಿಯರಿಗೆ ಹೆಜ್ಜಾರು ಹೇಳಿ ಮಾಡಿಸಿದ ಸಿನಿಮಾವಾಗಿದೆ.

ಸಿನಿಮಾ: ಹೆಜ್ಜಾರು

ನಿರ್ದೇಶನ: ಹರ್ಷಪ್ರಿಯಾ

ಪಾತ್ರವರ್ಗ: ಗೋಪಾಲ ಕೃಷ್ಣ ದೇಶಪಾಂಡೆ, ಭಗತ್ ಆಳ್ವ, ಶ್ವೇತಾ ಡಿಸೋಜಾ, ಮುನಿರಾಜು ಮತ್ತು ನವೀನ್ ಕೃಷ್ಣ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com