'ರೂಪಾಂತರ' ಸಿನಿಮಾ ವಿಮರ್ಶೆ: ನಾಲ್ಕು ಕಥೆಗಳ ಸಮ್ಮಿಲನ; ಮನೋಜ್ಞ ನಿರೂಪಣೆಯಿಂದ ಪ್ರೇಕ್ಷಕರ ಮನ ಗೆದ್ದ ಮಿಥಿಲೇಶ್
Rating(3.5 / 5)
ರೂಪಾಂತರ ಸಿನಿಮಾದಲ್ಲಿ ನಾಲ್ಕು ವಿಭಿನ್ನ ಕಥೆಗಳ ಸಮ್ಮಿಲನವಿದೆ. ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಕ್ಲೈಮ್ಯಾಕ್ಸ್ ಮತ್ತು ಮನೋಜ್ಞ ನಿರೂಪಣೆಯು ಚಿತ್ರದ ಹೈಲೈಟ್. ರಾಜ್ ಬಿ ಶೆಟ್ಟಿ, ಅಂಜನ್ ಭಾರದ್ವಾಜ್, ಲೇಖಾ ನಾಯ್ಡು, ಸೋಮಶೇಖರ್ ಬೋಳೆಗಾಂವ್ ಮತ್ತು ಹನುಮಕ್ಕ ಅವರ ಅಭಿನಯಗಳು ಗಮನಾರ್ಹ. ಪ್ರೀತಿ, ನ್ಯಾಯ ಮತ್ತು ವಿಮೋಚನೆಗಾಗಿ ಹೋರಾಟದ ಕಥೆಗಳು ಪ್ರೇಕ್ಷಕರನ್ನು ಆಕರ್ಷಿಸುತ್ತವೆ. ಪ್ರಾರಂಭದಲ್ಲಿ ನಿಧಾನಗತಿಯಲ್ಲಿ ಸಾಗಿದರೂ, ಚಿತ್ರದ ಛಾಯಾಗ್ರಹಣ ಮತ್ತು ಸಂಗೀತ ಮೆಚ್ಚುಗೆಯನ್ನು ಪಡೆದಿವೆ.
ಮಿಥಿಲೇಶ್ ಎಡವಲತ್ ನಿರ್ದೇಶನದ ರೂಪಾಂತರ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ರೂಪಾಂತರ ಸಿನಿಮಾ ಹೆಸರೇ ಹೇಳುವಂತೆ ಕಥೆಯಲ್ಲಿ ಹಲವು ಬದಲಾವಣೆಗಳಿವೆ. ಗೂಡಿನಲ್ಲಿರುವ ಕ್ಯಾಟರ್ ಪಿಲ್ಲರ್ ಒಂದು ಚಿಟ್ಟೆಯಾಗಿ ಬದಲಾಗುತ್ತದೋ ಅಥವಾ ಗೂಡಿನಲ್ಲೇ ಕೊಳೆತು ಹೋಗುತ್ತದೋ ಎಂಬ ವಿಷಯವನ್ನು ಉದಾಹರಣೆ ತೆಗೆದುಕೊಂಡು ಸಿನಿಮಾ ಆರಂಭಿಸಲಾಗಿದೆ.
ರೂಪಾಂತರ ನಾಲ್ಕು ಕಥೆಗಳ ಸಂಕಲನ. ಈ ಹಿಂದೆಯೂ ಕೂಡ ಒಂದೇ ಸಿನಿಮಾದಲ್ಲಿ ವಿಭಿನ್ನ ಕಥೆಗಳಿರುವ ಸಿನಿಮಾ ಬಂದಿದೆ, ಆದರೆ ಇದು ಸ್ವಲ್ಪ ಭಿನ್ನವಾಗಿದೆ. ನಾಲ್ಕು ಕಥೆಗಳನ್ನೂ ಸೇರಿಸಿ ಅಂತ್ಯದಲ್ಲಿ ಕ್ಲೈಮ್ಯಾಕ್ಸ್ ಕೊಟ್ಟಿದ್ದಾರೆ, ಹೀಗಾಗಿ ಇದೊಂದು ವಿಭಿನ್ನ ರೀತಿಯ ಸಿನಿಮಾವಾಗಿದೆ. ಕ್ಲೈಮ್ಯಾಕ್ಸ್ ಗಾಗಿ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುತ್ತದೆ. ಸಿನಿಮಾ ಆರಂಭವಾಗುವುದು ವಯೋವೃದ್ಧರೊಬ್ಬರು ಕಥೆ ಹೇಳುವ ಮೂಲಕ. ಗತ ಕಾಲದ ಅವಶೇಷಗಳ ನಡುವೆ ಅಲೆದಾಡುವ ವೃದ್ಧ ಕಥೆ ಹೇಳುವ ಮೂಲಕ ಸಾಂತ್ವನ ಕಂಡುಕೊಳ್ಳುತ್ತಿರುತ್ತಾನೆ.
ನರಕಸದೃಶವಾದ ಒಂದು ಸಮಾಜ. ಭವಿಷ್ಯದ ಅಂತಹ ಲೋಕದಿಂದ ಸಿನಿಮಾ ಕಥೆ ಆರಂಭವಾಗುತ್ತದೆ. ಅಲ್ಲಿ ನೀರು, ಗಾಳಿ ಮಾರಾಟದ ವಸ್ತುವಾಗಿರುತ್ತದೆ. ಜನರ ಮಾರಣಹೋಮ ನಡೆಯುತ್ತಿದೆ. ಇಂತಹ ಸ್ಥಿತಿಯಲ್ಲಿ ಆ ಲೋಕವನ್ನಾಳುತ್ತಿರುವ ದುರುಳರ ಕೈಗೆ ಅಜ್ಜನೊಬ್ಬ ಸಿಕ್ಕಿಬೀಳುತ್ತಾನೆ. ಆತನ ಕೈಯಲ್ಲೊಂದು ಸಣ್ಣ ಪೆಟ್ಟಿಗೆ. ಆ ಪೆಟ್ಟಿಗೆಯೊಳಗೆ ಚಿಟ್ಟೆಯ ಕ್ಯಾಟರ್ ಪಿಲ್ಲರ್. ತನ್ನ ಜೀವ ರಕ್ಷಿಸಿಕೊಳ್ಳಲು ಆತ ಹೇಳುವ ಕಥೆಯೇ ‘ರೂಪಾಂತರ’.
ಮುದುಕ ಹೇಳುವ ಕತೆಗಳಲ್ಲಿ ಮೊದಲಿಗೆ ಬಾಗಲಕೋಟೆಯಿಂದ ನಗರಕ್ಕೆ ಪ್ರಯಾಣ ಬೆಳೆಸುವ ದಂಪತಿ ಕಥೆ. ಈ ಪಾತ್ರಗಳಲ್ಲಿ ಸೋಮಶೇಖರ್ ಬೋಳೆಗಾಂವ್ ಮತ್ತು ಹನುಮಕ್ಕ ನಟಿಸಿದ್ದಾರೆ. ಅವರ ನಿಷ್ಕಲ್ಮಶ ಪ್ರೀತಿ, ಕಾಳಜಿ ಅನಂತರ ಅನುಭವಿಸುವ ನೋವಿನ ಸುತ್ತ ಕಥೆ ಸುತ್ತುತ್ತದೆ. ಆದಾದ ನಂತರ ಓರ್ವ ಭಿಕ್ಷುಕಿಯ ವೇದನೆ, ಅಗುವಿನ ಅಪಹರಣ ಆರೋಪ, ಆಕೆ ಅನುಭವಿಸುವ ಮಾನಸಿಕ ಯಾತನೆ ಹಾಗೂ ಸಮಾಜದಲ್ಲಿ ಬೇರೂರಿರುವ ಸಾಮಾಜಿಕ ಪೂರ್ವಾಗ್ರಹಗಳ ಬಗ್ಗೆ ಕಥೆಯಿದೆ, ಭಿಕ್ಷುಕಿಯ ಪಾತ್ರದಲ್ಲಿ ಲೇಖಾ ನಾಯ್ಡು ಮನೋಜ್ಞವಾಗಿ ಅಭಿನಯಿಸಿದ್ದಾರೆ.
ಇನ್ನೊಂದು ಕಥೆಯಲ್ಲಿ ರೌಡಿ(ರಾಜ್ ಬಿ ಶೆಟ್ಟಿ)ಯ ಅನಾವರಣಗೊಳ್ಳುತ್ತದೆ .ಅವನ ಹಿಂಸಾತ್ಮಕ ಜೀವನಶೈಲಿಯಿಂದ ಎದುರಾಗುವ ದುರಂತದ ಬಗ್ಗೆ ಕಥೆ ಸಾಗುತ್ತದೆ. ಮತ್ತೊಂದರಲ್ಲಿ ಮಾದಕವ್ಯಸನಿಯಾದ ಓರ್ವ ಯುವಕನ (ಅಂಜನ್ ಭರಾದ್ವಾಜ್ )ಜೀವನದ ಕ್ಷಣಗಳಿವೆ. ಆಟವಾಡುತ್ತಾ ಬಾಲ್ಯ ಕಳೆಯಬೇಕಿದ್ದ ಬಾಲಕ ತನಗೆ ಉಂಟಾದ ಆಘಾತದಿಂದ ಹೇಗೆ ಮಾದಕ ವ್ಯಸನಿಯಾಗುತ್ತಾನೆ ಮತ್ತು ಜೀವನದ ಜೊತೆ ಸೆಣಸಾಡುತ್ತಾನೆ ಎಂಬುದು ಮತ್ತೊಂದು ಕಥೆ. ಈ ನಾಲ್ಕು ಕಥೆಗಳ ಅಂತ್ಯ ಹೇಗಾಗುತ್ತದೆ ಎಂಬುದಕ್ಕೆ ಸಿನಿಮಾ ನೋಡಲೇಬೇಕು.
ರೂಪಾಂತರ ತನ್ನನ್ನು ಒಂದು ಸಂಕಲನವಾಗಿ ಪ್ರಸ್ತುತಪಡಿಸಿದರೂ, ಕಥೆಗಳು ಸಾಮಾನ್ಯ ವಿಷಯದ ಸುತ್ತ ಹೆಣೆದುಕೊಂಡಿವೆ. ಪ್ರತಿಕೂಲತೆಯ ನಡುವೆ ವಿಮೋಚನೆ, ನ್ಯಾಯ ಮತ್ತು ಪ್ರೀತಿಗಾಗಿ ಮಾನವ ಹೋರಾಟದ ವಸ್ತುವನ್ನು ನಿರೂಪಣೆಯನ್ನು ಆಶ್ರಯವಾಗಿಟ್ಟುಕೊಂಡು ಧ್ವಂಸಗೊಂಡ ಪ್ರಪಂಚದ ಮೂಲಕ ಮುದುಕನ ಪ್ರಯಾಣವು ನಿರೂಪಣೆಗಳ ಕಾಲಾತೀತ ಶಕ್ತಿಯನ್ನು ಎತ್ತಿ ತೋರಿಸುತ್ತದೆ. ರೂಪಾಂತರ ಸಿನಿಮಾ ಆಳವಾಗಿ ಪರಿಣಾಮ ಬೀರುವ ಕಥೆಯನ್ನು ಹೊಂದಿದೆ.
ಕಥೆ ಎಷ್ಟೇ ಗಟ್ಟಿಯಾಗಿದ್ದರೂ ರೂಪಾಂತರ ಸಿನಿಮಾ ಕೂಡ ಕೊರತೆಗಳಿಂದ ಹೊರತಾಗಿಲ್ಲ, ಆರಂಭದಲ್ಲಿ ಸಿನಿಮಾ ನಿಧಾನಗತಿ ಎನಿಸುತ್ತದೆ. ಸಿನಿಮಾದ ಕೆಲವು ಕಡೆ ಕಥೆ ಪ್ರೇಕ್ಷಕನ ತಾಳ್ಮೆ ಬೇಡುತ್ತದೆ. ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ ಮೋಡಿ ಮಾಡುತ್ತದೆ. ಉಳಿದಂತೆ ಹಿನ್ನೆಲೆ ಸಂಗೀತ ಉತ್ತಮವಾಗಿದೆ.
ಚಿತ್ರದಲ್ಲಿನ ಪ್ರತಿಯೊಬ್ಬ ನಟರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಮಿಥಿಲೇಶ್ ಮತ್ತು ರಾಜ್ ಬಿ ಶೆಟ್ಟಿ ಅವರ ಸಂಯೋಜಿತ ಪ್ರಯತ್ನಗಳು ಕಥೆಗೆ ಜೀವ ತುಂಬಿ ರೂಪಾಂತರವನ್ನು ಆಕರ್ಷಕ ಪ್ರಯಾಣವಾಗಿ ರೂಪಿಸಿವೆ. ಈ ಸಂಕೀರ್ಣವಾದ ನಿರೂಪಣೆಗಳ ಮಧ್ಯೆ, ನಿಗೂಢವಾದ ಕಥೆಗಾರನು ಎದ್ದು ಕಾಣುತ್ತಾನೆ, ಆಶ್ಚರ್ಯಕರ ತಿರುವು ನೀಡುತ್ತಾನೆ.ಯಾವುದೇ ಕಥೆಗೂ ನಿರ್ದಿಷ್ಟ ಅಂತ್ಯವಿಲ್ಲ, ರೂಪಾಂತರ ಆಗುವ ಘಳಿಗೆಯಲ್ಲಿ ಕಥೆ ಅಂತ್ಯವಾಗುತ್ತದೆ.
ಸಿನಿಮಾ: ರೂಪಾಂತರ
ನಿರ್ದೇಶಕ: ಮಿಥಿಲೇಶ್ ಎಡವಲತ್
ಕಲಾವಿದರು: ರಾಜ್ ಬಿ ಶೆಟ್ಟಿ, ಅಂಜನ್ ಭಾರದ್ವಾಜ್, ಲೇಖಾ ನಾಯ್ಡು, ಸೋಮಶೇಖರ್ ಬೋಳೆಗಾಂವ್ ಮತ್ತು ಹನುಮಕ್ಕ, ಭರತ್ ಬಿಜಿ ಮತ್ತು ಗಿರೀಶ್ ಜತ್ತಿ