ಯುವ ಸಿನಿಮಾ ವಿಮರ್ಶೆ: ಮೊದಲಾರ್ಧ ವೀಕು; ಡೈಲಾಗ್ ಗಳ ಅಬ್ಬರ, ಅತಿಯಾದ ಹೊಡೆದಾಟದ ನಡುವೆ ಹಳಿತಪ್ಪಿದ ಕಥೆ!
Rating(3 / 5)
ಆ್ಯಕ್ಷನ್ ಪ್ಯಾಕ್ಡ್ ಸಿನಿಮಾದಲ್ಲಿ ನಟ ಯುವರಾಜ ಕುಮಾರ್ ಡೈಲಾಗ್ ಗಳದ್ದೇ ಅಬ್ಬರ, ಹೊಡೆದಾಟ ಬಡಿದಾಟದ ಜೊತೆಗೆ ಫ್ಯಾಮಿಲಿ ಎಮೋಷನಲ್ ಕಥೆ. ಸಿನಿಮಾ ಮಧ್ಯಂತರದ ಬಳಿಕ ವೇಗ ಪಡೆದುಕೊಳ್ಳುತ್ತದೆ. ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದ ಯುವಕನಲ್ಲಿರುವ ವಿವಿಧ ಪಾತ್ರಗಳನ್ನು ನಮ್ಮ ಮುಂದೆ ಅನಾವರಣಗೊಳಿಸುತ್ತದೆ.
ಪ್ರತಿಯೊಬ್ಬ ನಟನ ಚೊಚ್ಚಲ ಸಿನಿಮಾ ಆತನ ಪಾಲಿಗೆ ಅಗ್ನಿ ಪರೀಕ್ಷೆಯಾಗಿರುತ್ತದೆ, ದೊಡ್ಮನೆ ಕುಟುಂಬದಿಂದ ಬಂದಿರುವ ರಾಘವೇಂದ್ರ ರಾಜಕುಮಾರ್ ಪುತ್ರ ಯುವ ರಾಜ್ ಕುಮಾರ್ ಗೂ ಕೂಡ ಇದು ಹೊರತಲ್ಲ. ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಸಂತೋಷ್ ಆನಂದ್ ರಾಮ್ ನಿರ್ದೇಶಿಸಿರುವ ಯುವ ಸಿನಿಮಾ ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರನ್ನು ಸೆಳೆಯಲು ಪ್ರಯತ್ನಿಸಿದ್ದಾರೆ.
ಕಾಲೇಜು ಕ್ಯಾಂಪಸ್ ನಲ್ಲಿ ಸಿನಿಮಾ ಕಥೆ ಆರಂಭವಾಗುತ್ತದೆ. ಮಂಗಳೂರು ಕಾಲೇಜಿನಲ್ಲಿ ಲೋಕಲ್ ಮತ್ತು ಹಾಸ್ಟೆಲ್ ಹುಡುಗರ ನಡುವಿನ ಜಗಳ, ಈತನ ಪವರ್ ಹಿಂದಿರುವ ರಹಸ್ಯ, ಅಲ್ಲಿಯ ಲೋಕಲ್ ಡಾನ್‌ಗಳ ಜತೆ ನಾಯಕನ ಹೊಡೆದಾಟ, ಸಿನಿಮಾದ ಮೊದಲಾರ್ಧ ಇದರಲ್ಲೇ ಕಳೆದು ಹೋಗುತ್ತದೆ.
ನಮ್ಮ ಸಿನಿಮಾ ನಾಯಕ ‘ಯುವ’(ಯುವ ರಾಜ್‌ಕುಮಾರ್) ಮಧ್ಯಮ ವರ್ಗದ ಯುವಕ. ಮಂಗಳೂರಿನ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿ. ಆತನ ಪ್ರೇಯಸಿ ‘ಸಿರಿ’(ಸಪ್ತಮಿ ಗೌಡ). ಅಲ್ಲಿ ಸ್ಥಳೀಯ ಹುಡುಗರಿಗೂ, ಹಾಸ್ಟೆಲ್‌ನಲ್ಲಿರುವ ಹೊರಜಿಲ್ಲೆಯ ಹುಡುಗರ ನಡುವೆ ಜಗಳ. ಐಷಾರಾಮಿ ಬೈಕ್ ಹಾನಿಗೊಳಿಸಿದ ಸ್ಥಳೀಯ ವಿದ್ಯಾರ್ಥಿಗಳ ಮೇಲೆ ಮುಗಿಬೀಳುತ್ತಾನೆ. ಸಿಗರೇಟು, ಕುಡಿತದ ದೃಶ್ಯಗಳು ಅಪರಿಮಿತವಾಗಿವೆ. ಹೊಡೆದಾಟ ಗ್ಯಾಂಗ್ ವಾರ್ ಗೆ ಕಡಿವಾಣವಿಲ್ಲ. ಆದರೆ ಆ್ಯಕ್ಷನ್ ಪ್ರಿಯರಿಗೆ ಅರ್ಜುನ್ ರಾಜ್ ಕೊರಿಯೊಗ್ರಫಿ ಇಷ್ಟವಾಗುತ್ತದೆ.
ಸಿನಿಮಾ ಮಧ್ಯಂತರದ ಬಳಿಕ ಮಧ್ಯಮ ವರ್ಗದ ಕಥೆ ಆರಂಭವಾಗುತ್ತದೆ. ಓದು ಮುಗಿಸಿ ಬೆಂಗಳೂರಿಗೆ ಬಂದಾಗ ನಾಯಕನಿಗೆ ಎದುರಾಗುವ ಸಂಸಾರದ ಬೃಹತ್ ಸವಾಲುನಿರುದ್ಯೋಗ. ನಿರೀಕ್ಷೆಗೆ ತಕ್ಕಂತೆ ಮಗ ಇಲ್ಲ ಎಂಬ ಎಲ್ಲಾ ಮಧ್ಯಮ ವರ್ಗದ ತಂದೆಯಂತೆ ಕೊರಗುವ ಅಚ್ಯುತ್ ಕುಮಾರ್ ತಮ್ಮ ಪಾತ್ರದಲ್ಲಿ ಜೀವಿಸಿದ್ದಾರೆ. ಎಲ್ಲಾ ಪಾತ್ರಗಳಲ್ಲೂ ನಿರರ್ಗಳವಾಗಿ ಅಭಿನಯಿಸುವ ಅಚ್ಯುತ ಕುಮಾರ್ ಅವರಿಗೆ ಇದು ಹೊಸದಲ್ಲ, ಆದರೂ ಯುವ ಸಿನಿಮಾದಲ್ಲಿ ಅವರ ಪಾತ್ರ ಅದ್ಭುತವಾಗಿ ಮೂಡಿಬಂದಿದೆ.
ಸಿನಿಮಾದ ದ್ವಿತೀಯಾರ್ಧದಲ್ಲಿ ಕತೆ ಸ್ವಲ್ಪ ವೇಗ ಪಡೆದುಕೊಳ್ಳುತ್ತದೆ. ದೊಡ್ಮನೆ ಕುಟುಂಬಕ್ಕೆಂದೆ ಡೈಲಾಗ್ ಬರೆಯುವ ಸಂತೋಷ್ ಆನಂದರಾಮ್ ಯುವ ಸಿನಿಮಾದಲ್ಲಿ ಸಂಭಾಷಣೆ ಬರೆಯುವಲ್ಲಿ ಹಿಂದೆ ಬಿದ್ದಿಲ್ಲ. ಮಾಸ್ ಡೈಲಾಗ್ ಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತವೆ. ಯುವ ತನ್ನ ಇಂಜಿನಿಯರಿಂಗ್ ಪದವಿಮುಗಿಸಿ ಮನೆಗೆ ಹಿಂದಿರುಗುತ್ತಿದ್ದಂತೆ, ತನ್ನ ತಂದೆಯ ನಾಪತ್ತೆಯಾಗಿರುತ್ತಾರೆ. ಅನಂತರ ಆತನಿಗೆ ವಾಸ್ತವದ ಅರಿವಾಗುತ್ತದೆ. ಹೆಚ್ಚಿದ ಸಾಲದಿಂದಾಗಿ ತನ್ನ ತಂದೆ ಭೂಗತರಾಗಿದ್ದಾರೆ ಎಂಬುದು ತಿಳಿಯುತ್ತದೆ. ಅದಾದ ನಂತರ ಕೌಟುಂಬಿಕ ಜವಾಬ್ದಾರಿಯನ್ನು ಹೆಗಲೇರಿಸಿಕೊಳ್ಳುವ ಮಗನಾಗಿ ಯುವ ಪಾತ್ರ ಇಷ್ಟವಾಗುತ್ತದೆ.
ತಂದೆ ಮಾಡಿದ ಸಾಲವನ್ನು ತೀರಿಸುವಂತೆ ಸಾಲಗಾರರು ಕಿರುಕುಳ, ಅದಕ್ಕಾಗಿ ಆತ ಮಾಡುವ ಫುಡ್ ಡೆಲಿವರಿ ಬಾಯ್ ಕೆಲಸ, ಅದರಲ್ಲಿ ಫುಡ್ ಡೆಲಿವರಿ ಬಾಯ್ ಗಳ ಕಷ್ಟ ಎದುರಿಸುವ ಅವಮಾನಗಳನ್ನು ಹತ್ತಿರದಿಂದ ತೋರಿಸಿದ್ದಾರೆ. ನಾಪತ್ತೆಯಾದ ತಂದೆ ಮತ್ತು ತಂಗಿಯನ್ನು ಹುಡುಕಲು ಮಾಡುವ ಪ್ರಯತ್ನಗಳು ನೋಡುಗರ ಕಣ್ಣನ್ನು ತೇವಗೊಳಿಸುತ್ತವೆ. ಯುವ ತನ್ನ ಕುಟುಂಬವನ್ನು ಸೇರುತ್ತಾನಾ, ತನ್ನ ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗುತ್ತಾನಾ ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು.
ಮೊದಲ ಸಿನಿಮಾದಲ್ಲಿ ಯುವರಾಜ್ ಕುಮಾರ್ ನನ್ನು ಮಾಸ್ ಹೀರೋ ನಂತೆ ತೋರಿಸಲು ಸಂತೋಷ್ ಆನಂದರಾಮ್ ತುಂಬಾ ಎಫರ್ಟ್ ಹಾಕಿದ್ದಾರೆ. ಮಾತು ಮಾತಿಗೂ ಸಿಡುಕುವ ಕಾಲೇಜು ಹುಡುಗ, ಪ್ರೇಮಿ,ಕುಟುಂಬದ ಜವಾಬ್ದಾರಿ ಹೊತ್ತ ಮಧ್ಯಮ ವರ್ಗದ ಯುವಕ ಎಲ್ಲಾ ಸೇಡ್ ಗಳಲ್ಲೂ ಅದ್ಭುತವಾಗಿ ಅಭಿನಯಿಸಿದ್ದಾರೆ. ಡ್ಯಾನ್ಸ್ಗಳಲ್ಲಿ ಅವರು ಸಖತ್ ಸ್ಟೆಪ್ ಹಾಕಿದ್ದಾರೆ. ಅವರು ಭರವಸೆಯ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ನಾಯಕ ಕುಸ್ತಿಪಟು ಆಗಿದ್ದರೂ ಅದನ್ನು ಸೂಕ್ತವಾಗಿ ತೋರ್ಪಡಿಸುವ ದೃಶ್ಯಗಳು ಸಿನಿಮಾದಲಿಲ್ಲ. ಸಿನಿಮಾದಲ್ಲಿ ಹಾಸ್ಯದ ಕೊರತೆ ಎದ್ದು ಕಾಣುತ್ತದೆ. ಅಪ್ಪು ಅವರ ಸಿಗ್ನೇಚರ್ ಫೈಟ್ಸ್ ಹಾಗೂ ಆ್ಯಕ್ಷನ್‌ಗಳನ್ನು ಇಲ್ಲಿ ಕಾಣಬಹುದು. ಹೆಚ್ಚು ಆಕ್ಷನ್, ಡೈಲಾಗ್‌ಗಳು ಈ ಸಿನಿಮಾಕ್ಕೆ ತುಸು ಭಾರ ಎನಿಸಿದರೂ ಸಿನಿಮಾಟೋಗ್ರಫಿ ಉತ್ತಮವಾಗಿ ಮೂಡಿ ಬಂದಿದೆ. ಕೆಲವು ದೃಶ್ಯಗಳಲ್ಲಿ ಲಾಜಿಕ್ ಇಲ್ಲ, ಅಪೂರ್ಣ ಎನಿಸುತ್ತವೆ.
ನಾಯಕಿಯಾಗಿ ಸಪ್ತಮಿ ಗೌಡ ತಮಗೆ ಸಿಕ್ಕ ಸಂದರ್ಭಗಳಲ್ಲಿ ಉತ್ತಮವಾಗಿ ಅಭಿನಯಿಸಿದ್ದಾರೆ. ಅವರ ಪಾತ್ರಕ್ಕೆ ಚಿತ್ರದಲ್ಲಿ ಹೆಚ್ಚಿನ ಜಾಗವಿಲ್ಲ. ಉಳಿದಂತೆ, ಸುಧಾರಾಣಿ, ಹಿತ ಚಂದ್ರಶೇಖರ್, ಗೋಪಾಲ್ ದೇಶಪಾಂಡೆ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಒಟ್ಟಾರೆ ಯುವ ಸಿನಿಮಾ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದ ಯುವಕನಲ್ಲಿರುವ ವಿವಿಧ ಪಾತ್ರಗಳನ್ನು ನಮ್ಮ ಮುಂದೆ ಅನಾವರಣಗೊಳಿಸುತ್ತದೆ.
ಸಿನಿಮಾ: ಯುವ
ಕಲಾವಿದರು: ಯುವ ರಾಜಕುಮಾರ್, ಸಪ್ತಮಿಗೌಡ, ಅಚ್ಯುತ್ ಕುಮಾರ್, ಸುಧಾರಾಣಿ
ನಿರ್ದೇಶನ: ಸಂತೋಷ್ ಆನಂದರಾಮ್
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ