Bagheera cinema still
ಬಘೀರ ಸಿನಿಮಾ ಸ್ಟಿಲ್

'Bagheera' Movie Review: ಆರ್ಗನ್ ಟ್ರೇಡಿಂಗ್ ಮಾಫಿಯಾ; ಸೂಪರ್ ಹೀರೋ 'ಬಘೀರ’ನ ಕತ್ತಲಿನ ಅಧ್ಯಾಯ; ಆ್ಯಕ್ಷನ್ ಅಬ್ಬರದಲ್ಲಿ ರೋಮಾನ್ಸ್ ಮಾಯ!

Published on
Rating(3.5 / 5)
Summary

ಡಾ.ಸೂರಿ ನಿರ್ದೇಶನದ 'ಬಘೀರ' ಚಿತ್ರವು ಶ್ರೀ ಮುರುಳಿ ಅಭಿನಯದ ಆ್ಯಕ್ಷನ್ ಪ್ಯಾಕ್ ಸಿನಿಮಾ. ಭ್ರಷ್ಟ ಆಡಳಿತ ವ್ಯವಸ್ಥೆಯ ವಿರುದ್ಧ ಹೋರಾಡುವ ಸೂಪರ್ ಹೀರೋ ಬಘೀರನ ಕಥೆ. ಶ್ರೀ ಮುರುಳಿ, ರುಕ್ಮಿಣಿ ವಸಂತ್, ರಂಗಾಯಣ ರಘು, ಪ್ರಕಾಶ್ ರಾಜ್, ಅಚ್ಯುತ್ ಕುಮಾರ್, ಸುಧಾರಾಣಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕಥೆ ಶೈಲಿ, ಛಾಯಾಗ್ರಹಣ, ಸಂಗೀತ, ಸಾಹಸ ದೃಶ್ಯಗಳು ಗಮನ ಸೆಳೆಯುತ್ತವೆ.

ಡಾ.ಸೂರಿ ನಿರ್ದೇಶನದ ಶ್ರೀ ಮುರುಳಿ ನಟಿಸಿರುವ ಬಹು ನಿರೀಕ್ಷಿತ ಚಿತ್ರ ಬಘೀರ ತೆರೆಕಂಡಿದೆ. ಟೈಟಲ್ ಸೂಚಿಸುವಂತೆ ಇದೊಂದು ಆ್ಯಕ್ಷನ್ ಸಿನಿಮಾವಾಗಿದೆ, ಪ್ರಶಾಂತ್ ನೀಲ್ ಕಥೆ ಬರೆದಿದ್ದು, ಹೊಂಬಾಳೆ ಸಿನಮಾ ನಿರ್ಮಾಣ ಮಾಡಿದೆ. ಸಮಾಜದ ಭ್ರಷ್ಟ ಆಡಳಿತ ವ್ಯವಸ್ಥೆಯ ವಿರುದ್ಧ ಹೋರಾಡುವುದೇ ಬಘೀರ ಸಿನಿಮಾ ಕಥೆಯಾಗಿದೆ.

2001ರ ಪ್ಲ್ಯಾಶ್‌ಬ್ಯಾಕ್ ಮೂಲಕ ತೆರೆದುಕೊಳ್ಳುತ್ತದೆ ಬಘೀರ ಸಿನಿಮಾ. ಸೂಪರ್ ಹೀರೋ ಆಗಬೇಕು ಎಂಬ ಆಸೆ ಇಟ್ಟುಕೊಂಡ ಬಾಲಕನ ಕಥೆ. ಹೀರೋ ವೇದಾಂತ್‌ (ಶ್ರೀಮುರುಳಿ)ಗೆ ಚಿಕ್ಕವನಿದ್ದಾನಿಂದಲೂ ಸೂಪರ್ ಹೀರೋ ಆಗಬೇಕು ಅನ್ನೋ ಆಸೆ. ಸೂಪರ್‌ಹೀರೋಗಳ ಕಥೆಗಳಿಂದ ಸ್ಫೂರ್ತಿ ಪಡೆದ ಹುಡುಗನು ಸೂಪರ್‌ಮ್ಯಾನ್ ಕೇಪ್‌ನಲ್ಲಿ ಮೇಲ್ಛಾವಣಿಯಿಂದ ಜಿಗಿಯುವುದನ್ನು ಕಲ್ಪಿಸಿಕೊಳ್ಳುತ್ತಾನೆ, ಆದರೆ ಆತನ ಅಮ್ಮ (ಸುಧಾರಾಣಿ) ಮಗನಿಗೆ ಸೂಪರ್‌ ಹೀರೋ ಅಂದರೆ ಯಾರು ಅನ್ನೋದನ್ನು ಅರ್ಥ ಮಾಡಿಸುತ್ತಾರೆ. ಬಳಿಕ ಬೆಳೆದು ಪೊಲೀಸ್ ಅಧಿಕಾರಿಯಾಗುತ್ತಾನೆ. ಪೊಲೀಸ್ ಆಗಿ ವೇದಾಂತ್ ಇರುವಾಗ 'ಬಘೀರ' ಯಾರು? ಅವನು ಜನರ ಸಮಸ್ಯೆಗಳಿಗೆ ಹೇಗೆಲ್ಲ ಸ್ಪಂದಿಸುತ್ತಾನೆ? ಎಂಬುದೇ ಸಿನಿಮಾದ ಸಸ್ಪೆನ್ಸ್.

ತಂದೆಯಂತೆ ತಾನು ಪೊಲೀಸ್ ಇಲಾಖೆಗೆ ಸೇರಿ ದಕ್ಷ ಅಧಿಕಾರಿ ಆಗುವ ನಿಟ್ಟಿನಲ್ಲಿ ಐಪಿಎಸ್ ಅಧಿಕಾರಿ ಆಗುವ ವೇದಾಂತ್ ತನ್ನ ಕರ್ತವ್ಯವನ್ನು ಕರಾವಳಿಯ ಪೊಲೀಸ್ ಸ್ಟೇಷನ್ ನಲ್ಲಿ ಪ್ರಾರಂಭಿಸುತ್ತಾನೆ. ತನ್ನ ಸಿಬ್ಬಂದಿ ವರ್ಗದವರ ವರ್ತನೆಗಳನ್ನ ಗಮನಿಸುತ್ತಲೇ ಕರಾವಳಿಯಲ್ಲಿ ನಡೆಯುವ ಒಂದಷ್ಟು ದಂಧೆಕೋರರ ಹಾವಳಿಯನ್ನ ಮಟ್ಟ ಹಾಕಲು ಪ್ರಾಮಾಣಿಕವಾಗಿ ಮುಂದಾಗುತ್ತಾನೆ. ಆದರೆ ದೊಡ್ಡ ರಾಜಕಾರಣಿಗಳ ಕೈಕೆಳಗಿನ ರೌಡಿಗಳನ್ನು ಬೇಟೆಯಾಡಲು ಪ್ರಾರಂಭಿಸಿದಾಗ ವೇದಾಂತ್‌ಗೆ ತನ್ನ ಇಲಾಖೆಯ ಉನ್ನತಾಧಿಕಾರಿಗಳಿಂದಲೇ ಸಂಕಷ್ಟ ಎದುರಾಗುತ್ತದೆ. ಜೊತೆಗೆ ಇಲಾಖೆಯಲ್ಲಿಯೇ ಕೆಲಸ ಮಾಡುತ್ತಿರುವ ತನ್ನ ತಂದೆ ಕೂಡ ಭ್ರಷ್ಟ ಎಂದು ತಿಳಿದು ಆಘಾತವಾಗುತ್ತದೆ. ಇದರ ನಡುವೆ ತಂದೆಯ ಆಸೆಯಂತೆ ಇಷ್ಟವಿಲ್ಲದಿದ್ದರೂ ಮದುವೆಗೆ ಒಪ್ಪುವ ವೇದಾಂತಗೆ ಡಾಕ್ಟರ್ ವೃತ್ತಿಯ ಸ್ನೇಹ (ರುಕ್ಮಿಣಿ ವಂಸತ್)ಸಿಗುತ್ತಾಳೆ. ರುಕ್ಮಿಣಿ ವಸಂತ್ ಸಿನಿಮಾದಲ್ಲಿ ಚೆನ್ನಾಗಿ ಕಾಣುತ್ತಾರೆ. ಕೇವಲ ಗ್ಲಾಮರ್‌ಗಾಗಿ ಅಷ್ಟೇ ಇವರ ಪಾತ್ರವಿರದೆ ಕಥೆಯಲ್ಲಿ ಇವರ ಪಾತ್ರವೂ ಮುಖ್ಯ ಅನಿಸುತ್ತೆ. ಕೆಲಸ ಸಮಯದ ನಂತರ ಪೊಲೀಸ್‌ ಇಲಾಖೆ ಕುರಿತಾಗಿ ವೇದಾಂತ್ ದೃಷ್ಟಿಕೋನ ಬದಲಾಗಿ ಹೊಸ ಅಧ್ಯಾಯ ಆರಂಭವಾಗುತ್ತದೆ. ಅಂದರೆ ಕಾಣದ ಒಬ್ಬ ಸೂಪರ್ ಹೀರೋ ಬಘೀರ ಎಂಟ್ರಿ ಆಗಿ ಕ್ರೂರಿಗಳಿಗೆ ಶಿಕ್ಷೆ ನೀಡುತ್ತಾ ಹೋಗುತ್ತಾನೆ. ಇದು ಪೊಲೀಸ್ ಇಲಾಖೆಗೂ ತಲೆ ನೋವಾಗಿ ಸಿಬಿಐ ಅಧಿಕಾರಿಗಳು ಎಂಟ್ರಿ ಕೊಡುತ್ತಾರೆ. ಇದರ ನಡುವೆ ರಾಣಾ ನ ಬೇಟೆಗೆ ಬಘೀರ ಪ್ಲಾನ್ ಮಾಡುತ್ತಾನೆ. ಕತ್ತಲ ಸಾಮ್ರಾಜ್ಯದ ದೊರೆ ರಾಣಾ (ರಾಮಚಂದ್ರ ರಾಜು) ದೇಶಾದ್ಯಂತ ತನ್ನ ಕದಂಬ ಬಾಹುವನ್ನು ಚಾಚಿಕೊಂಡು ಅಮಾಯಕರನ್ನು ಅಪಹರಿಸಿ ಅವರ ಅಂಗಾಂಗವನ್ನು ತೆಗೆದು ವಿದೇಶಗಳಿಗೆ ರವಾನಿಸುವ ಕ್ರೂರಿ. ಮುಂದೆ ಎದುರಾಗುವ ರೋಚಕ ತಿರುವುಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ಸಿನಿಮಾ ನೋಡಬೇಕು.'ಬಘೀರ' ಸೂಪರ್ ಹೀರೋ ಆಗಿದ್ದರೂ, ಆತನ ಬಳಿ ವಿಶೇಷ ಶಕ್ತಿಗಳೇನೂ ಇರುವುದಿಲ್ಲ. ತನ್ನ ಬಲ ಮತ್ತು ಬುದ್ಧಿವಂತಿಕೆಯನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು, ಎದುರಾಳಿಗಳನ್ನು ಮಟ್ಟ ಹಾಕುತ್ತಾನೆ.

ಡಾ. ಸೂರಿ ಹೀರೋ ಪಾತ್ರವನ್ನು ತೆರೆಮೇಲೆ ಚೆನ್ನಾಗಿ ತಂದಿದ್ದಾರೆ. ಎರಡು ಶೇಡ್‌ಗಳಲ್ಲೂ ಶ್ರೀಮುರಳಿ ಚೆನ್ನಾಗಿ ಕಾಣಿಸುತ್ತಾರೆ. ಇಡೀ ಸಿನಿಮಾವನ್ನು ಶ್ರೀಮುರುಳಿ ಆವರಿಸಿಕೊಂಡಿದ್ದಾರೆ. ಶ್ರೀಮುರುಳಿ ಪೊಲೀಸ್ ಅಧಿಕಾರಿ ಹಾಗೂ ಸೂಪರ್ ಹೀರೋ ಪಾತ್ರದಲ್ಲೂ ಇಷ್ಟ ಆಗುತ್ತಾರೆ. ಆ ಪಾತ್ರಗಳಿಗೆ ಬೇಕಿರೋ ಫಿಸಿಕ್ ಹಾಗೂ ಬಾಡಿ ಲ್ಯಾಂಗ್ವೇಜ್ ಶ್ರೀಮುರಳಿಯಲ್ಲಿ ನೋಡಬಹುದು. ಸೂಪರ್‌ ಹೀರೋಗೆ ಟಕ್ಕರ್ ಕೊಡುವ ಪಾತ್ರದಲ್ಲಿ ಗರುಡ ರಾಮ್ ಖಡಕ್ ಅಭಿನಯ ಕೊಟ್ಟಿದ್ದಾರೆ. ಬಘೀರ ಯಾರೆಂದು ಪತ್ತೆ ಮಾಡಲು ಬರುವ ಅಧಿಕಾರಿ ಪ್ರಕಾಶ್‌ ರಾಜ್‌ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹೊಡೆದಾಟಗಳ ಅಬ್ಬರದಲ್ಲಿ ರೊಮ್ಯಾನ್ಸ್‌ಗೆ ಜಾಗವಿರಲೆಂದು ಬಲವಂತವಾಗಿ ಈ ಪಾತ್ರ ಸೇರಿಸಿದ್ದಾರೆ ಎನಿಸುತ್ತದೆ. ಆದರೆ ತೆರೆಯ ಮೇಲೆ ಇರುವಷ್ಟು ಸಮಯ ರುಕ್ಷ್ಮಿಣಿ ಅಚ್ಚು ಕಟ್ಟಾಗಿ ನಿರ್ವಹಿಸುತ್ತಾರೆ. ಇನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥೆಯಲ್ಲಿ ಹೊಸತನವಿಲ್ಲದಿದ್ದರೂ ಚಿತ್ರಕಥೆ ಶೈಲಿ ಗಮನ ಸೆಳೆಯುವಂತಿದೆ. ತಂದೆಯಾಗಿ ಅಚ್ಯುತ್ ಕುಮಾರ್, ತಾಯಿಯಾಗಿ ಸುಧಾರಾಣಿ, ಪೊಲೀಸ್ ಕಾನ್ ಸ್ಟೇಬಲ್ ಆಗಿ ರಂಗಾಯಣ ರಘು, ಪ್ರಮೋದ್ ಶೆಟ್ಟಿ ಸೇರಿದಂತೆ ಬಹುತೇಕರು ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಕೆಲವು ದೃಶ್ಯಗಳು ಫ್ಯಾಂಟಸಿ ಫೀಲ್ ನೀಡಿದಂತಿದೆ. ಛಾಯಾಗ್ರಾಹಕರ ಕೈಚಳಕ ಉತ್ತಮವಾಗಿದೆ. ಅದೇ ರೀತಿ ಹಾಡುಗಳು ಪೂರಕವಾಗಿದ್ದು, ಅಜನೀಶ್ ಲೋಕನಾಥ್ ಮ್ಯೂಸಿಕ್ ಸಿನಿಮಾ ಹೈಲೈಟ್. ಸಾಹಸ ದೃಶ್ಯಗಳು ಅದ್ಭುತವಾಗಿ ಮೂಡಿ ಬಂದಿದೆ. ವಿಎಫ್‌ಎಕ್ಸ್ ಕೆಲಸ ಚೆನ್ನಾಗಿದೆ. ಕ್ಲೈಮ್ಯಾಕ್ಸ್‌ನಲ್ಲಿ ಬರುವ ಟ್ರೇನ್ ಫೈಟ್‌ನ ಮೇಕಿಂಗ್ ಚೆನ್ನಾಗಿದೆ. ತಾಂತ್ರಿಕವಾಗಿ ಚಿತ್ರ ಗಮನ ಸೆಳೆಯುವಂತೆ ಮೂಡಿಬಂದಿದ್ದು, ಎಲ್ಲರೂ ಒಮ್ಮೆ ನೋಡುವಂತ ಚಿತ್ರ ಇದಾಗಿದೆ. ಚೇತನ್ ಡಿಸೋಜಾ ಅವರ ಆಕ್ಷನ್ ಸೀಕ್ವೆನ್ಸ್ ಮಜಾ ಕೊಡುತ್ತೆ. ಎ. ಜೆ. ಶೆಟ್ಟಿ ಕ್ಯಾಮರಾ ವರ್ಕ್ 'ಬಘೀರ'ನ ಮತ್ತೊಂದು ಹೈಲೈಟ್. ಹಾಗೆಂದ ಮಾತ್ರಕ್ಕೆ 'ಬಘೀರ' ಸಿನಿಮಾ ಮೈನಸ್ ಪಾಯಿಂಟ್ ಇಲ್ಲವೇ ಇಲ್ಲ ಅಂತಲ್ಲ. ಚಿತ್ರಕಥೆಯನ್ನು ಇನ್ನಷ್ಟು ಅದ್ಭುತವಾಗಿ ಬರೆಯಬಹುದಿತ್ತು ಎನಿಸುತ್ತದೆ. ಕೆಲವು ಪೊಲೀಸ್ ಸನ್ನಿವೇಶಗಳು ಮತ್ತಷ್ಟು ಖಡಕ್ ಆಗಿ ಇರಬೇಕಿತ್ತು. ಕೆಲವು ಸನ್ನಿವೇಶಗಳ ನಿರೂಪಣಾ ಶೈಲಿಯನ್ನು ಬದಲಿಸಬಹುದಿತ್ತು. ಕ್ಲೈಮ್ಯಾಕ್ಸ್ ದೃಶ್ಯ ನೋಡಲು ಗುಂಡಿಗೆ ಸ್ವಲ್ಪ ಗಟ್ಟಿಯಾಗಿಸಿಕೊಳ್ಳಬೇಕು ಎನಿಸುತ್ತಿದೆ. ಆದರೂ ಒಂದು ಬಾರಿ ನೋಡಬಹುದಾದಂತ ಸಿನಿಮಾ ಬಘೀರ.

ಚಿತ್ರ: ಬಘೀರಾ

ನಿರ್ದೇಶನ: ಡಾ. ಸೂರಿ

ತಾರಾಗಣ: ಶ್ರೀಮುರಳಿ, ರುಕ್ಮಿಣಿ ವಸಂತ್, ರಂಗಾಯಣ ರಘು, ಪ್ರಕಾಶ್ ರಾಜ್, ಅಚ್ಯುತ್ ಕುಮಾರ್, ಸುಧಾರಾಣಿ ಮುಂತಾದವರು.

X

Advertisement

X
Kannada Prabha
www.kannadaprabha.com