The Devil Movie Review: ಪೊಲಿಟಿಕಲ್ ಥ್ರಿಲ್ಲರ್ -ದಿ ಡೆವಿಲ್; ಪವರ್ ಪಾಲಿಟಿಕ್ಸ್ ನಲ್ಲಿ ದರ್ಶನ್ ಡಬ್ಬಲ್ ರೋಲ್; ಚಿತ್ರದ ಮೊದಲಾರ್ಧದಲ್ಲೇ ಪೂರ್ತಿ ಕಥೆ ರಿವೀಲ್!
The Devil Movie Review: ದಿ ಡೆವಿಲ್ ಸಿನಿಮಾ ವಿಮರ್ಶೆ(3 / 5)
ದಿ ಡೆವಿಲ್ ಚಿತ್ರದಲ್ಲಿ ದರ್ಶನ್ ಡಬ್ಬಲ್ ರೋಲ್ ನಲ್ಲಿ ನಟಿಸಿದ್ದಾರೆ, ಚಿತ್ರವು ಪೊಲಿಟಿಕಲ್ ಥ್ರಿಲ್ಲರ್ ಆಗಿದ್ದು ಮಾಸ್ ಎಂಟರ್ಟೈನ್ ಮೆಂಟ್ ಆಗಿದೆ. ದರ್ಶನ್ ಧನುಷ್ ಮತ್ತು ಕೃಷ್ಣನ ಪಾತ್ರಗಳಲ್ಲಿ ಮಿಂಚಿದ್ದಾರೆ. ರಾಜಕೀಯದ ಕತೆಯು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ, ಆದರೆ ಮಧ್ಯಂತರದಲ್ಲಿ ಸಿನಿಮಾದ ಪೂರ್ತಿ ಕಥೆಯು ಬಹಿರಂಗವಾಗುತ್ತದೆ. ಹೀಗಾಗಿ ಪ್ರೇಕ್ಷಕ ಮುಂದಿನದ್ದನ್ನು ಸಲೀಸಾಗಿ ಊಹಿಸಬಹುದಾಗಿದೆ.
ಕನ್ನಡ ಸೂಪರ್‌ಸ್ಟಾರ್ ದರ್ಶನ್ ಅವರ ಬಹಳ ದಿನಗಳಿಂದ ವಿಳಂಬವಾಗಿದ್ದ 'ದಿ ಡೆವಿಲ್' ಗುರುವಾರ ರಿಲೀಸ್ ಆಗಿದೆ. ವರ್ಷದ ಅತಿದೊಡ್ಡ ಬಿಡುಗಡೆಗಳಲ್ಲಿ ಒಂದಾಗಿದೆ. ನಟ ದರ್ಶನ್ ಜೈಲಿನಲ್ಲಿದ್ದರೂ, ಮೊದಲ ದಿನವೇ ಸಿನಿಮಾ ಭರ್ಜರಿ ಪ್ರದರ್ಶನ ಕಂಡಿದೆ.
ಡೆವಿಲ್ ಸಿನಿಮಾ ಅಪ್ಪಟ ಪೊಲಿಟಿಕಲ್ ಥ್ರಿಲ್ಲರ್ ವಿತ್ ಮಾಸ್ ಎಂಟರ್ಟೈನ್ ಮೆಂಟ್ ಆಗಿದೆ. ಕರುನಾಡ ಪ್ರಜಾ ಪಕ್ಷದ ನಾಯಕ ರಾಜಶೇಖರ್ ಮುಖ್ಯಮಂತ್ರಿ. ಭ್ರಷ್ಟಾಚಾರದ ಆರೋಪದ ಮೇಲೆ ರಾಜಶೇಖರ್ ಬಂಧನವಾಗುತ್ತೆ. ರಾಜಶೇಖರ್ ಜೈಲು ಸೇರುವ ಮೂಲಕ ಕಥೆ ಆರಂಭವಾಗುತ್ತದೆ. ಐಷಾರಾಮಿ ಜೈಲಿನಲ್ಲಿದ್ದುಕೊಂಡೇ ರಾಜಶೇಖರ್ ಚುನಾವಣೆ ಎದುರಿಸುತ್ತಾರೆ. ರಾಜಶೇಖರ್‌ಗೆ ಮಗ ಧನುಷ್ ಸಿಎಂ ಆಗಬೇಕು ಎಂಬ ಬಯಕೆ. ಹೀಗಾಗಿ ತನ್ನ ಮಗ ಧನುಷ್ ರಾಜಶೇಖರ್‌ನನ್ನು(ದರ್ಶನ್) ಸಿಎಂ ಕುರ್ಚಿಯಲ್ಲಿ ಕೂರಿಸುವಂತೆ ಆತನ ರಾಜಕೀಯ ಸಲಹೆಗಾರ ಅನಂತ್ ನಂಬಿಯಾರ್ (ಅಚ್ಯುತ್ ಕುಮಾರ್) ಗೆ ಆದೇಶಿಸುತ್ತಾನೆ. ‘ಡೆವಿಲ್’ಎಂದೇ ಕರೆಯಲ್ಪಡುವ ಧನುಷ್ ಆಸೆ ಪಟ್ಟಿದ್ದು ಸಿಗದೇ ಇದ್ದಾಗ ಕಿತ್ತುಕೊಳ್ಳುವ ವ್ಯಕ್ತಿತ್ವದವನು. ಈತನ ಭೇಟಿ ಬಳಿಕ ಗೊಂದಲದಲ್ಲೇ ದೇಶಕ್ಕೆ ಮರಳುವ ನಂಬಿಯಾರ್ ಕೃಷ್ಣ ಮೆಸ್ ನಡೆಸುವ ಬಾಣಸಿಗ ಕೃಷ್ಣನನ್ನು (ದರ್ಶನ್) ನೋಡುತ್ತಾನೆ.
ಧನುಷ್ ಹಾಗೂ ಕೃಷ್ಣ ಅವಳಿ - ಜವಳಿ ಅಲ್ಲ. ಆದರೆ ನೋಡೋಕೆ ಒಂದೇ ರೀತಿಯಿದ್ದು ಗುಣ ತದ್ವಿರುದ್ದವಾಗಿರುತ್ತೆ. ಧನುಷ್ ಜಾಗಕ್ಕೆ ಬರುವ ಕೃಷ್ಣ ಚುನಾವಣೆಗೆ ನಿಲ್ಲುತ್ತಾನೆ. ಕೃಷ್ಣನ ಪ್ರಾಮಾಣಿಕತೆ ನಂಬಿಯಾರ್ ಗೆ ಮುಳುವಾಗುತ್ತದೆ. ಧನುಷ್ ಹೆಸರಲ್ಲಿ ಕೃಷ್ಣ ಖ್ಯಾತಿ ಗಳಿಸುತ್ತಿದ್ದಂತೆಯೇ ಅಸಲಿ ಧನುಷ್ ಎಂಟ್ರಿಕೊಡುತ್ತಾನೆ. ಮುಂದೆ ಏನಾಗುತ್ತೆ ಎಂಬುದನ್ನು ತಿಳಿದುಕೊಳ್ಳಲು ನೀವು ದಿ ಡೆವಿಲ್ ಸಿನಿಮಾ ನೋಡಬೇಕು.
ನಟನಾಗುವ ಕನಸು ಹೊತ್ತ ಕೃಷ್ಣನಾಗಿ ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್‌ನಾಗ್ ಹಾಗೂ ಅಂಬರೀಷ್ ಅವರನ್ನು ದರ್ಶನ್ ಅನುಕರಣೆ ಮಾಡುವುದು ಬಹಳ ಸೊಗಸಗಿದೆ. ಎಲ್ಲರನ್ನೂ ಮನಸ್ಸೋ ಇಚ್ಛೆ ಶೂಟ್ ಮಾಡುವ ಧನುಷ್ ಕೃಷ್ಣ ನನ್ನೇಕೆ ಸುಡುವುದೇ ಇಲ್ಲ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿಯೇ ಉಳಿಯುತ್ತದೆ. ರಾಜಕೀಯ ವಿಷಯವನ್ನಿಟ್ಟುಕೊಂಡೇ ಸಿನಿಮಾ ಮಾಡಲಾಗಿದೆ. ಕೃಷ್ಣನ ಮೆಸ್ಸು.. ಫೇಮಸ್ ಡಿಶ್ಶು.. ಖಾರ ಉಪ್ಸಾರು - ಮುದ್ದೆ ಬಸ್ಸಾರು ಇದು ಮಧ್ಯಮ ವರ್ಗದ ಕುಟುಂಬದಿಂದ ಕೃಷ್ಣನ ಡೈಲಾಗ್. ಆಸೆಪಟ್ಟಿದ್ದನ್ನ ತಗೋಬೇಕು, ಸಿಗಲಿಲ್ಲ ಅಂದ್ರೆ ಕಿತ್ಕೋಬೇಕು ಎಂಬುದು ಧನುಷ್ ಡೈಲಾಗ್. ಎರಡು ರೋಲ್ ಗಳು ದರ್ಶನ್ ಅಭಿಮಾನಿಗಳಿಗೆ ರಸದೌತಣ ಉಣಬಡಿಸಿವೆ.
ಎರಡು ಪಾತ್ರಗಳಿಗೂ ದರ್ಶನ್ ಜೀವ ತುಂಬಿದ್ದಾರೆ. ಕೃಷ್ಣನ ಪಾತ್ರದಲ್ಲಿ ಕನಸು ಕಾಣುವ ಯುವಕನಾಗಿ ಹಾಗೂ ಡೆವಿಲ್ ಪಾತ್ರದಲ್ಲಿ ಭೀಭತ್ಸ ಅವತಾರದಲ್ಲಿ ದರ್ಶನ್ ರಂಜಿಸಿದ್ದಾರೆ. ನಿರ್ದೇಶಕ ಪ್ರಕಾಶ್ ತಮ್ಮ ಸಿನಿಮಾದಲ್ಲಿ ಎರಡು ಆಯಾಮ, ಎರಡು ಶೇಡ್ ತೆರೆದಿಟ್ಟಿದ್ದಾರೆ. ಅದಕ್ಕೆ ಹೊಂದಿಕೆಯಾಗುವ ಪರಿಸರವಿದೆ, ಒಂದು ಔಟ್ ಆ್ಯಂಡ್ ಔಟ್ ಮಾಸ್ ಕಮರ್ಷಿಯಲ್ ಸಿನಿಮಾದಲ್ಲಿ ಏನಿರಬೇಕೋ ಅವೆಲ್ಲವೂ ಈ ಸಿನಿಮಾದಲ್ಲಿ ಯಥೇಚ್ಚವಾಗಿದೆ.
ಮೇಕಿಂಗ್ ಕಡೆ ನಿರ್ದೇಶಕರು ಹೆಚ್ಚು ಗಮನಹರಿಸಿದ್ದಾರೆ. ಹಾಗಾಗಿ, ಇಲ್ಲಿ ಅನವಶ್ಯಕವಾಗಿ ಹಾಡು, ಫೈಟ್, ಸುಖಾಸುಮ್ಮನೆ ಕಾಮಿಡಿಗೆ ಜಾಗವಿಲ್ಲ. ಆದರೆ, ಅಭಿಮಾನಿಗಳನ್ನು ಹೆಚ್ಚು ಗಮನದಲ್ಲಿಟ್ಟು ಸಿನಿಮಾ ಮಾಡಿರೋದು ಎದ್ದು ಕಾಣುತ್ತದೆ. ಕೆಲವು ಸಂಭಾಷಣೆಗಳು ಮಾಸ್ ಅಭಿಮಾನಿಗಳಿಗಾಗಿ ಕೆಲವು ಡೈಲಾಗ್ಸ್ ಕ್ಲಾಸ್‌ಗಾಗಿಯೇ ರಚಿಸಲಾಗಿದೆ. ನೆಗೆಟಿವ್ ಶೇಡ್ ನಲ್ಲಿ ದರ್ಶನ್ ಸ್ಟೈಲಿಶ್ ಆಗಿ ಕಾಣುವ ಜೊತೆಗೆ ಕೃಷ್ಣನ ಪಾತ್ರದಲ್ಲಿ ತಮ್ಮ ಮ್ಯಾನರಿಸಂ ಮೂಲಕ ಇಷ್ಟವಾಗುತ್ತಾರೆ. ಉಳಿದಂತೆ ಇಡೀ ಸಿನಿಮಾದುದ್ದಕ್ಕೂ ಸಾಗಿ ಬರುವ ಪಾತ್ರ ಅಚ್ಯುತ್ ಕುಮಾರ್. ಇಡೀ ಕಥೆಯ ಚಾಣಾಕ್ಷನ ಪಾತ್ರ. ತುಂಬಾ ಗಂಭೀರವಾದ ಪಾತ್ರವನ್ನು ಅಷ್ಟೇ ಲೀಲಾಜಾಲವಾಗಿ ಮಾಡಿದ್ದಾರೆ ನಟಿಸಿದ್ದಾರೆ. ನಾಯಕಿ ರಚನಾ ರೈ ಸಿಕ್ಕ ಪಾತ್ರವನ್ನ ಉತ್ತಮವಾಗಿ ನಿಭಾಯಿಸಿದ್ದಾರೆ.
ಕಥೆಯಲ್ಲಿ ಕೆಲವು ಕಡೆ ಲಾಜಿಕ್ ಮಿಸ್ ಆಗಿದೆ. ದ್ವಿಪಾತ್ರಗಳನ್ನು ನಿಭಾಯಿಸಿದ ಸಿನಿಮಾಗಳಲ್ಲಿ ಒಂದು ಪಾತ್ರವನ್ನು ಗೌಪ್ಯವಾಗಿ ಇಡುವುದು ಮುಖ್ಯವಾಗುತ್ತದೆ, ಆದರೆ ಸಿನಿಮಾ ಮಧ್ಯಂತರ ತಲುಪುವ ಹೊತ್ತಿಗೆ ಎರಡು ಪಾತ್ರಗಳು ಬಹಿರಂಗವಾಗಿದೆ. ಹೀಗಾಗಿ ಮುಂದಿನ ಕಥೆಯನ್ನು ಪ್ರೇಕ್ಷಕ ಸರಾಗವಾಗಿ ಊಹಿಸಬಹುದಾಗಿದೆ. ಸುಧಾಕರ್ ಎಸ್ ರಾಜ್ ಅವರ ಕ್ಯಾಮರಾ ಕೈಚಳ ಅದ್ಭುತವಾಗಿದೆ. ಬಿ ಅಜನೀಶ್ ಲೋಕನಾಥ್ ಸಂಯೋಜಿಸಿರುವ ಹಾಡುಗಳು ಅಷ್ಟಕಷ್ಟೆ. ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಅಷ್ಟಾಗಿ ಇಷ್ಟವಾಗುವುದಿಲ್ಲ. ಇದ್ರೆ ನೆಮ್ದಿಯಾಗ್ ಇರ್ಬೇಕು ಹಾಡು ಚೆನ್ನಾಗಿದೆ. ಕೆಲವೆಡೆ ಅನಗತ್ಯ ಹಾಡು, ಫೈಟ್ ನಿಂದ ಸಿನಿಮಾದ ಒಟ್ಟು ಅವಧಿ ಹೆಚ್ಚಿಸಿದೆ.
ಉಳಿದಂತೆ ಮಹೇಶ್ ಮಂಜ್ರೇಕರ್, ಶೋಭರಾಜ್ ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ‘ಬಿಗ್ ಬಾಸ್’ ಖ್ಯಾತಿಯ ಗಿಲ್ಲಿ ನಟ ‘ಸಿಬಿಐ ಶಂಕರ್’ ಆಗಿ 3 ಕಾಮಿಡಿ ಸೀನ್‌ಗಳಿಗಷ್ಟೇ ಸೀಮಿತ. ನಟಿ ಶರ್ಮಿಳಾ ಮಾಂಡ್ರೆ ಅವರದ್ದು ಅತಿಥಿ ಪಾತ್ರ. ಇನ್ನೂ ವಿನೋದ್ ಗೊಬ್ರಗಾಲ, ರಾಘವೇಂದ್ರ, ಜಗಪ್ಪ ಒಂದು ಹಾಡಲ್ಲಿ ಮಾತ್ರ ಬಂದು ಹೋಗುತ್ತಾರೆ. ಹೆಚ್ಚಿನ ನಿರೀಕ್ಷೆಗಳಿಲ್ಲದೇ ಒಂದು ಮಾಸ್ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಬಯಸುವವರಿಗೆ ಡೆವಿಲ್ ಇಷ್ಟವಾಗಬಹುದು.
ಸಿನಿಮಾ-ದಿ ಡೆವಿಲ್
ನಿರ್ದೇಶಕ: ಪ್ರಕಾಶ್ ವೀರ್
ಕಲಾವಿದರು: ದರ್ಶನ್, ರಚನಾ ರೈ, ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ಶರ್ಮಿಳಾ ಮಾಂಡ್ರೆ, ಹುಲಿ ಕಾರ್ತಿಕ್


