Rudra Garuda Purana Movie Review: ಕರ್ಮ ಸಿದ್ಧಾಂತದ ಸೇಡಿನ ವ್ಯಥೆ; 17A ಕಾವೇರಿ ಎಕ್ಸ್‌ಪ್ರೆಸ್ ಬಸ್ ದುರಂತದ ಕಥೆ!
Rating(3 / 5)
ಪೌರಾಣಿಕ ಹಿನ್ನೆಲೆ, ಮಾಟ-ಮಂತ್ರ, ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಮಿಳಿತದ 'ರುದ್ರ ಗರುಡ ಪುರಾಣ' ಚಿತ್ರದಲ್ಲಿ ರಿಷಿ, ನಾಪತ್ತೆಯಾದ ಯುವಕನನ್ನು ಹುಡುಕುವಾಗ 25 ವರ್ಷಗಳ ಹಿಂದಿನ ಬಸ್ ದುರಂತದ ರಹಸ್ಯವನ್ನು ಬಿಚ್ಚಿಡುತ್ತಾರೆ. ಪ್ರೇಕ್ಷಕರನ್ನು ಹಿಡಿದಿಡುವ ಈ ಚಿತ್ರವು ಹಾಸ್ಯ, ಹಾರರ್, ಮತ್ತು ರೋಚಕತೆಯೊಂದಿಗೆ ಉತ್ತಮ ಮನರಂಜನೆ ನೀಡುತ್ತದೆ.
ನಂದೀಶ್ ನಿರ್ದೇಶನದ ರಿಷಿ ಅಭಿನಯದ ಪೌರಾಣಿಕ ಹಿನ್ನೆಲೆ ಕಥೆಯುಳ್ಳ ರುದ್ರ ಗರುಡ ಪುರಾಣ ಸಿನಿಮಾ ರಿಲೀಸ್ ಆಗಿದೆ. ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟ ರಿಷಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಪ್ರೇಕ್ಷಕರನ್ನು ಮಂತ್ರ ಮುಗ್ದರನ್ನಾಗಿಸಿದ್ದಾರೆ. ಮೇಲ್ನೋಟಕ್ಕೆ ಸಿನಿಮಾ ಪೊಲೀಸ್ ಕಥೆ ಎಂದಂತೆ ಕಂಡು ಬರುತ್ತದೆ, ಆದೆರೆ ಈ ಸಿನಿಮಾದಲ್ಲಿ ಮಾಟ-ಮಂತ್ರ, ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಹಾಸ್ಯ ಮಿಳಿತವಾಗಿದೆ.
ರುದ್ರ (ಋಷಿ), ಎಂಬ ಪೊಲೀಸ್ ಅಧಿಕಾರಿ ತನ್ನ ನೇರ ಹಾಗೂ ಪ್ರಾಮಾಣಿಕ ಕೆಲಸದಿಂದಾಗಿ ಹಲವು ಕಡೆ ವರ್ಗಾವಣೆಯಾಗುತ್ತಾನೆ. ತನ್ನ ದಿಟ್ಟ ಕರ್ತವ್ಯ ನಿರ್ವಹಣೆಯಿಂದಾಗಿ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ವೈಮನಸ್ಯ ಕೂಡ ಬೆಳೆಯುತ್ತದೆ. ಅಂತಿಮವಾಗಿ ರುದ್ರನನ್ನು ಬೆಂಗಳೂರಿನಿಂದ ಮೈಸೂರಿಗೆ ವರ್ಗಾಯಿಸಲಾಗುತ್ತದೆ. ಆದರೆ ತನ್ನ ವೃತ್ತಿಯಲ್ಲಿ ಹಿನ್ನಡೆಯಾಗಿದ್ದಕ್ಕೆ ರುದ್ರ ಬೇಸರಗೊಳ್ಳುವುದಿಲ್ಲ ತನ್ನ ಕರ್ತವ್ಯವನ್ನು ನಿಷ್ಠೆಯಿಂದಲೇ ಮಾಡುತ್ತಿರುತ್ತಾನೆ. ರೇಪಿಸ್ಟ್ ಒಬ್ಬನನ್ನು ಎನ್‍ಕೌಂಟರ್ ಮಾಡಿದ್ದಕ್ಕೆ ಶಿಕ್ಷೆಯಾಗಿ, ಪೊಲೀಸ್ ಬ್ಯಾಂಡ್‍ಗೆ ವರ್ಗಾವಣೆ ಮಾಡಲಾಗುತ್ತದೆ. ಮಾಡುವುದಕ್ಕೆ ಸೂಕ್ತವಾದ ಕೆಲಸವಿಲ್ಲದೆ ಒದ್ದಾಡುವ ರಿಷಿಗೆ, ಒಂದು ಜವಾಬ್ದಾರಿಯನ್ನು ವಹಿಸುತ್ತಾರೆ ಅವನ ಮೇಲಧಿಕಾರಿ. ಸಚಿವ ದೇವಿ ಶೆಟ್ಟಿಯ (ವಿನೋದ್ ಆಳ್ವ) ಮಗ ನಿಗೂಢವಾಗಿ ನಾಪತ್ತೆಯಾಗಿದ್ದು, ಆತನನ್ನು ಹುಡುಕುವ ಕೆಲಸವನ್ನು ಅವನ ಮೇಲೆ ಹೊರಿಸಲಾಗುತ್ತದೆ. ನಾಪತ್ತೆಯಾದ ಯುವಕ ಹೋಗಿದ್ದೆಲ್ಲಿಗೆ? ಈ ಕೇಸಿನಲ್ಲಿ ರಿಷಿ ಏನೆಲ್ಲಾ ಸವಾಲುಗಳನ್ನು ಎದುರಿಸುತ್ತಾನೆ ಎನ್ನುವುದು ಚಿತ್ರದ ಕಥೆ.
ಶಾಸಕ ದೇವಿ ಶೆಟ್ಟಿ (ವಿನೋದ್ ಆಳ್ವಾ) ಅವರ ಕಾಣೆಯಾದ ಮಗ ಮನು (ಆಕರ್ಷ್) ಅವರನ್ನು ಪತ್ತೆಹಚ್ಚಲು ರುದ್ರನನ್ನು ಅನಧಿಕೃತವಾಗಿ ನಿಯೋಜಿಸಿದಾಗ ಕಥೆಗೆ ಪ್ರಮುಖ ತಿರುವು ಸಿಗುತ್ತದೆ. ನಾಪತ್ತೆಯಾದ ವ್ಯಕ್ತಿಯನ್ನು ಹುಡುಕಲು ಹೋದ ರುದ್ರನ ತನಿಖೆಯಲ್ಲಿ 25 ವರ್ಷಗಳ ಹಿಂದಿನ 17A ಕಾವೇರಿ ಎಕ್ಸ್‌ಪ್ರೆಸ್ ಬಸ್‌ನ ನಿಗೂಢತೆಗೆ ಸಂಬಂಧಿಸಿದ ರಹಸ್ಯಗಳನ್ನು ಬಿಚ್ಚಿಡುತ್ತದೆ. ಈ ದೀರ್ಘಕಾಲ ಮರೆತುಹೋದ ದುರಂತದಲ್ಲಿ, ಚಾಲಕ ಸೇರಿದಂತೆ ಬಸ್ ನಲ್ಲಿದ್ದ ಎಲ್ಲರೂ ಅನುಮಾನಾಸ್ಪದವಾಗಿ ಸಾವನ್ನಪ್ಪಿರುತ್ತಾರೆ. ಅಲ್ಲಿಂದ ಕತೆಗೆ ಮತ್ತೊಂದು ಟ್ವಿಸ್ಟ್ ಸಿಗುತ್ತದೆ. 25 ವರ್ಷಗಳ ಹಿಂದೆ ನಡೆದ ಘಟನೆಗೂ, ಇದಕ್ಕೂ ಏನು ಸಂಬಂಧ? ಯಾವುದಾದರೂ ಅಗೋಚರ ಶಕ್ತಿ ಇದನ್ನೆಲ್ಲಾ ಮಾಡಿಸುತ್ತಿದೆಯಾ? ಉತ್ತರ ಗೊತ್ತಾಗಬೇಕಿದ್ದರೆ, ‘ರುದ್ರ ಗರುಡ ಪುರಾಣ’ ನೋಡಬೇಕು. ಆರಂಭದಲ್ಲಿ ತನಿಖೆಯಿಂದ ಶುರುವಾಗಿ ಕೊನೆ ಕೊನೆಗೆ ರಿವೇಂಜ್ ದಾರಿಯಲ್ಲಿ ಹೆಜ್ಜೆ ಇಟ್ಟು, ಆ ಪ್ರತೀಕಾರಕ್ಕಿರುವ ಪರಿಣಾಮಕಾರಿ ಫ್ಲ್ಯಾಷ್ ಬ್ಯಾಕ್ ಕತೆ ತೆರೆದುಕೊಳ್ಳುತ್ತದೆ.
ಒಂದೊಂದೆ ಗಂಟು ಬಿಡಿಸುತ್ತಾ ಹೋಗುವಾಗ, ಪ್ರೇಕ್ಷಕನಲ್ಲಿ ರೋಚಕ, ರೋಮಾಂಚಕ ಅನುಭವ ಆಗದೇ ಇರಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಚಿತ್ರಕಥೆಯನ್ನು ಬಲವಾಗಿ ಹೆಣೆಯಲಾಗಿದೆ. ಚಿತ್ರದಲ್ಲಿ ಬರುವ ಉಪಕಥೆಗಳು ಮುಖ್ಯ ಕಥೆಗೆ ವೇಗ ಒದಗಿಸುವುದಲ್ಲದೇ, ಹೊಸ ಹೊಸ ಕೌತುಕಗಳನ್ನೂ ಸೃಷ್ಟಿಸುತ್ತದೆ. ಒಮ್ಮೆ ಥ್ರಿಲ್ಲರ್ ಚಿತ್ರವೆಂದೆನಿಸಿದ್ದು, ಇನ್ನೊಮ್ಮೆ ಹಾರರ್ ಚಿತ್ರ ಎಂದೆನಿಸಬಹುದು. ಒಟ್ಟಾರೆ, ಹಲವು ವಿಷಯಗಳನ್ನು ಸೇರಿಸಿ ಪ್ರೇಕ್ಷಕರನ್ನು ಕೂರಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಪ್ರವಾಸದ ಸಮಯದಲ್ಲಿ ಚಾಲಕನ ನಿರ್ಲಕ್ಷ್ಯದಿಂದ ಬಸ್ ಅಪಘಾತವಾಯಿತೆಂದು ಹೇಳಲಾಗುತ್ತದೆ. ಅದರೆ ರುದ್ರ ಅದರ ಬೆನ್ನತ್ತಿ ಹೋದಾಗ ದುರಂತಕ್ಕೆ ರಾಜಕೀಯ ಪಿತೂರಿ ಕಾರಣ ಎಂಬುದು ಬಹಿರಂಗವಾಗುತ್ತದೆ. ಪೊಲೀಸ್ ಪಾತ್ರದಲ್ಲಿ ರಿಷಿ ಹೊಸದಾಗಿ ಕಾಣಿಸಿಕೊಂಡಿರುವುದು ಚಿತ್ರದ ಮತ್ತೊಂದು ಹೆಚ್ಚುಗಾರಿಕೆ. ನಾಯಕಿ ಪ್ರಿಯಾಂಕ ಕುಮಾರ್ ಈ ಥ್ರಿಲ್ಲರ್ ತನಿಖೆಯಲ್ಲಿ ಆಗಾಗ ಬಂದು ಹೋಗುತ್ತಾರೆ. ಸಿಕ್ಕಿರುವ ಸೀಮಿತ ಅವಧಿಯಲ್ಲಿ ಪರದೆಯ ಮೇಲೆ ರಂಜಿಸುತ್ತಾರೆ. ವಿನೋದ್ ಆಳ್ವಾ ಶಾಸಕನಾಗಿ ಮತ್ತು ಹಿರಿಯ ಅಧಿಕಾರಿಯಾಗಿ ಅವಿನಾಶ್ ಅವರ ಗೌರವಾನ್ವಿತ ಪಾತ್ರವು ಚಿತ್ರಕ್ಕೆ ಪ್ರಮುಖ ಶಕ್ತಿಯಾಗಿದೆ. ಹಿನ್ನೆಲೆ ಸಂಗೀತವು ಜಟಿಲವಾಗಿದೆ, ಚಿತ್ರದ ವಿಷಯಕ್ಕೆ ಹೊಂದಿಕೆಯಾಗುವುದಿಲ್ಲ. ಸಕಲೇಶಪುರದಲ್ಲಿ ನಡೆದ ಬಸ್ ಅಪಘಾತ ಭೂತ ಮತ್ತು ವರ್ತಮಾನಕ್ಕೆ ಕೊಂಡಿಯಾಗುತ್ತದೆ. ರುದ್ರನ ತಂದೆಯ ಆದರ್ಶಗಳು ಚಿತ್ರದ ಉದ್ದಕ್ಕೂ ಪ್ರತಿಧ್ವನಿಸುತ್ತವೆ, ಅವನ ಮಗನ ನೈತಿಕ ದಿಕ್ಸೂಚಿಯನ್ನು ರೂಪಿಸುತ್ತವೆ ಮತ್ತು ವ್ಯವಸ್ಥಿತ ಭ್ರಷ್ಟಾಚಾರವನ್ನು ಪ್ರಶ್ನಿಸುವ ಅವನ ಸಂಕಲ್ಪವನ್ನು ಉತ್ತೇಜಿಸುತ್ತವೆ. ಒಟ್ಟಾರೆ ರುದ್ರ ಗರುಡ ಪುರಾಣ ಹಾಸ್ಯ, ಹಾರರ್, ಸಸ್ಪೆನ್ಸ್ ಮತ್ತು ರೋಚಕತೆಯುಳ್ಳ ಕಥೆಯಾಗಿದ್ದು, ಫ್ಯಾಮಿಲಿ ಆಡಿಯೆನ್ಸ್ ಸೇರಿದಂತೆ ಎಲ್ಲಾ ವರ್ಗದ ಪ್ರೇಕ್ಷಕರಿಗೂ ಸಿನಿಮಾ ಇಷ್ಟವಾಗುತ್ತದೆ.
ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವು ಥ್ರಿಲ್ಲರ್ ಚಿತ್ರಗಳು ಬಂದಿವೆಯಾದರೂ, ಪ್ರೇಕ್ಷಕರನ್ನು ಹಿಡಿದಿಡುವ ಚಿತ್ರಗಳು ಕಡಿಮೆಯೇ. ‘ರುದ್ರ ಗರುಡ ಪುರಾಣ’ ಕಥೆ ಸೆಳೆದರೂ, ಇನ್ನಷ್ಟು ಬಿಗಿಯಾದ ನಿರೂಪಣೆ ಇದ್ದಿದ್ದರೆ, ಚಿತ್ರ ಇನ್ನಷ್ಟು ಪರಿಣಾಮಕಾರಿಗಿರುತ್ತಿತ್ತು.
ಚಿತ್ರ: ರುದ್ರ ಗರುಡ ಪುರಾಣ
ನಿರ್ದೇಶನ: ಕೆ.ಎಸ್.ನಂದೀಶ್
ಕಲಾವಿದರು: ರಿಷಿ, ಪ್ರಿಯಾಂಕ ಕುಮಾರ್, ಅವಿನಾಶ್, ಮುಂತಾದವರು