'ಸು ಫ್ರಮ್ ಸೋ' Movie Review: ಹಾಸ್ಯದೊಂದಿಗೆ ತುಸು ಹಾರರ್ ಮಿಶ್ರಣ; ಕರಾವಳಿ ಸೊಬಗಿನ ರಸದೌತಣ- ಮನರಂಜನೆಯ ಹೂರಣ- ಮಿಕ್ಕಿದ್ದೆಲ್ಲಾ ಗೌಣ!
Rating(4 / 5)
‘ಸು ಫ್ರಮ್ ಸೋ’ ಸಿನಿಮಾ ಪ್ರಚಾರವಿಲ್ಲದೆ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಸಾಧಿಸುತ್ತಿದೆ. ಕರಾವಳಿ ಸೊಬಗಿನ ಹಾಸ್ಯ, ಭಾವನಾತ್ಮಕ ಕಥಾವಸ್ತು, ಮತ್ತು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಪ್ರೇಕ್ಷಕರನ್ನು ಮನರಂಜಿಸುತ್ತಿದೆ.
ಕೆಲವು ಚಿತ್ರಗಳು ಯಾವುದೇ ಪ್ರಚಾರ ಅಥವಾ ಸ್ಟಾರ್ ಗಳಿಲ್ಲದಿದ್ದರೂ ಸದ್ದಿಲ್ಲದೆ ನಿಮ್ಮ ನೆನಪಿನಲ್ಲಿ ನೆಲೆಗೊಳ್ಳುತ್ತವೆ. 'ಸು ಫ್ರಮ್ ಸೋ' ಸಿನಿಮಾ ಕೂಡ ಅಂತಾ ಅಪರೂಪದ ಆವಿಷ್ಕಾರಗಳಲ್ಲಿ ಒಂದಾಗಿದೆ. ಈ ಸಿನಿಮಾ ಹೆಚ್ಚು ಗಮನವನ್ನು ಬೇಡುವುದಿಲ್ಲ. ಸದ್ದಿಲ್ಲದೆ ಸುದ್ದಿ ಮಾಡುತ್ತಿರುತ್ತದೆ. ನೀವು ಅರಿಯುವ ಮುನ್ನವೇ ಅದರ ವಿಲಕ್ಷಣ, ತಮಾಷೆ ಮತ್ತು ಭಾವನಾತ್ಮಕ ಜಗತ್ತಿನಲ್ಲಿ ಮುಳುಗಿರುತ್ತೀರಿ. ಟ್ರೇಲರ್ ಮೂಲಕ ಅಷ್ಟೇನು ಗಮನ ಸೆಳೆಯದಿದ್ದರೂ ಸು ಫ್ರಮ್ ಸೋ ಬಾಕ್ಸ್ ಆಫೀಸಿನಲ್ಲಿ ಧೂಳೆಬ್ಬಿಸುತ್ತಿದೆ. ಹೆಚ್ಚಿನ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಕಳೆದ ನಾಲ್ಕು ದಿನಗಳಿಂದ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.
ಹೌದು, ಜೆಪಿ ತುಮ್ಮಿನಾಡ ನಿರ್ದೇಶಿಸಿ ರಾಜ್ ಬಿ ಶೆಟ್ಟಿ ಸೇರಿದಂತೆ ಹಲವರು ನಟಿಸಿರುವ 'ಸು ಫ್ರಮ್ ಸೋ' ಸಿನಿಮಾ ಬಿಡುಗಡೆಯಾಗಿದೆ. ಇತ್ತೀಚೆಗೆ ಹಾಸ್ಯ ಕಥಾವಸ್ತುವುಳ್ಳ ಸಿನಿಮಾಗಳ ಸಂಖ್ಯೆ ಕಡಿಮೆಯಾಗಿದೆ. ಇಂತಹ ಸಮಯದಲ್ಲೇ ಸು ಫ್ರಮ್ ಸೋ' ರಿಲೀಸ್ ಆಗಿದ್ದು, ಪ್ರೇಕ್ಷಕರ ಮನರಂಜಿಸುತ್ತಿದೆ. ಪ್ರೇಕ್ಷಕರನ್ನು ನಗಿಸುವುದೊಂದೇ ನನ್ನ ಕೆಲಸ ಎಂದುಕೊಂಡಂತೆ ಕಥೆ ರಚಿಸಿದ್ದಾರೆ. ಹೀಗಾಗಿ ಸಿನಿಮಾ ಮಂದಿರದತ್ತ ಜನಸಾಗರ ನುಗ್ಗುತ್ತಿದೆ.
'ಸು ಫ್ರಮ್ ಸೋ’ ಒಂದು ಕಾಮಿಡಿ ಸಿನಿಮಾ. ಕೆಲವೊಮ್ಮೆ ಆರಂಭದಲ್ಲಿ ಕಾಮಿಡಿ ಹಾದಿಗೆ ಮುಖಮಾಡುವ ಸಿನಿಮಾಗಳು ಮುಂದೆ ದಾರಿ ತಪ್ಪುತ್ತವೆ. ಆದರೆ ಈ ಚಿತ್ರದಲ್ಲಿ ಅಂತಹ ಯಾವ ಗೊಂದಲಗಳನ್ನು ಮೈ ಮೇಲೆ ಎಳೆದುಕೊಳ್ಳದೇ ಸ್ಪಷ್ಟ ಹಾಗೂ ನಿಖರವಾಗಿ ತನ್ನ ಗುರಿಯತ್ತ ಸಿನಿಮಾ ಸಾಗಿದೆ.
ಸಂಪೂರ್ಣ ಪ್ರಮಾಣದಲ್ಲಿ ಕರಾವಳಿ ಹಿನ್ನೆಯಲ್ಲಿ ಮೂಡಿಬಂದಿರುವ ಸಿನಿಮಾ. ಮಂಗಳೂರು ಕನ್ನಡ, ಅಲ್ಲಿನ ಪರಿಸರ, ಅಲ್ಲಿನ ಲೆಕ್ಕಾಚಾರವನ್ನು ಎಷ್ಟು ಚೆಂದವಾಗಿ ಕಟ್ಟಿಕೊಡಬಹುದೋ ಅದನ್ನು ತಂಡ ಮಾಡಿದೆ. ಇಂತಹ ಒಂದು ಪ್ರಾದೇಶಿಕ ಹಿನ್ನೆಲೆಯೊಂದಿಗೆ ತಯಾರಾಗಿರುವ ಸಿನಿಮಾ ಎಲ್ಲರನ್ನು ನಕ್ಕು ನಗಿಸುತ್ತದೆ. ಕರಾವಳಿಯ ಗ್ರಾಮೀಣ ಪ್ರದೇಶದಲ್ಲಿ ಒಂಟಿ ಮಹಿಳೆಯರು ಎದುರಿಸುವ ಸಮಸ್ಯೆಗಳು, ಜನರ ಮೂಢನಂಬಿಕೆ, ಆಚರಣೆಗಳ ಜತೆಗೆ ಗೆಳೆತನ, ಸಾಹಸ, ಸಸ್ಪೆನ್ಸ್, ಪ್ರೀತಿ ಎಲ್ಲಕ್ಕೂ ಸಿನಿಮಾದಲ್ಲಿ ಜಾಗವಿದೆ.
ಕರಾವಳಿ ಭಾಗದಲ್ಲಿರುವ ಒಂದು ಗ್ರಾಮ ಮರ್ಲೂರು, ಅಲ್ಲಿನ ಒಂದಷ್ಟು ಮಂದಿ, ಅಲ್ಲೊಬ್ಬ ರವಿಯಣ್ಣ, ಏನೇ ಸಮಸ್ಯೆ ಬಂದರೂ ರವಿಯಣ್ಣ ಇದ್ದಾರೆ ಎಂಬ ಧೈರ್ಯ. ಊರಿನಲ್ಲಿ ಮೇಸ್ತ್ರಿಯಾಗಿರುವ ರವಿಯಣ್ಣ (ಶನೀಲ್ ಗೌತಮ್) ಎಲ್ಲರಿಗೂ ಅಚ್ಚುಮೆಚ್ಚು. ರವಿಯಣ್ಣನ ಮಾತೇ ವೇದವಾಕ್ಯ. ಅದೇ ಊರಿನಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿರುವ ಅಶೋಕನಿಗೆ (ಜೆ.ಪಿ.ತೂಮಿನಾಡು) ಊರಿನ ಹುಡುಗಿಯೊಬ್ಬಳ ಮೇಲೆ ಕಣ್ಣಿನಲ್ಲೇ ಪ್ರೀತಿಯಾಗುತ್ತದೆ. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡುವ ರವಿಯಣ್ಣನಿಗೆ ಒಂದು ತೊಂದರೆ ಎದುರಾಗುತ್ತದೆ. ಅಲ್ಲಿಂದಲೇ ಸಿನಿಮಾ ಕತೆ ಆರಂಭವಾಗುತ್ತದೆ.
ಸಿನಿಮಾದಲ್ಲಿ ಕೇವಲ ನಗು ಮಾತ್ರ ಇಲ್ಲ, ಎಲ್ಲರನ್ನು ನಗಿಸುತ್ತಲೇ ಒಂದು ಸಮಾಜವನ್ನು ಪೀಡಿಸುತ್ತಿರುವ ಎರಡು ಪ್ರಮುಖ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ ನಿರ್ದೇಶಕರು. ಮೂಢನಂಬಿಕೆಗಳು, ಊಹಾಪೋಹಗಳು, ಪೂರ್ವಾಗ್ರಹಗಳು ಹೇಗೆ ನಮ್ಮ ಸಮಾಜವನ್ನು ತಪ್ಪು ದಾರಿಗೆ ಎಳೆಯುತ್ತವೆ ಎಂಬುದನ್ನು ವಿಡಂಬನಾತ್ಮಕವಾಗಿ ತೆರೆಗಿಳಿಸಿದ್ದಾರೆ.
ಈ ಚಿತ್ರದಲ್ಲಿ ನಿರ್ದೇಶಕ ಜೆಪಿ ತುಮ್ಮಿನಾಡು ಸೇರಿದಂತೆ ಅನೇಕರು ನಟಿಸಿದ್ದಾರೆ. ಶನೀಲ್ ಗುರು, ಪ್ರಕಾಶ್ ತುಮ್ಮಿನಾಡ್. ದೀಪಕ್ ರೈ ಮೈಮ್ ರಾಮದಾಸ್ ಹೀಗೆ ಎಲ್ಲರಿಂದಲೂ ಭರ್ತಿ ಮನರಂಜನೆ. ಜೊತೆಗೆ ರಾಜ್ ಬಿ ಶೆಟ್ಟಿ ಕೂಡ ನಟಿಸಿದ್ದಾರೆ. ಯಾವುದೇ ಇಮೇಜ್‌ಗಳಿಗೆ ಕಟ್ಟುಬೀಳದೇ, ಇಲ್ಲೂ ಕೂಡ ಎಲ್ಲರೊಳಗೆ ಒಂದು ಎಂಬಂತಹ ಪಾತ್ರವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಕಾಮಿಡಿ ಜರ್ನಿಗೆ ಸಣ್ಣ ಎಮೋಷನಲ್ ಟಚ್ ನೀಡಿದ್ದಾರೆ ನಟಿ ಸಂಧ್ಯಾ ಅರಕೆರೆ. ಭಾವನಾಗಿ ಪುಷ್ಪರಾಜ್ ಬೋಳಾರ್, ಚಂದ್ರನಾಗಿ ಪ್ರಕಾಶ್ ತೂಮಿನಾಡು, ಸತೀಶನಾಗಿ ದೀಪಕ್ ರೈ ಪಾಣಾಜೆ ನಗಿಸುವ ಜವಾಬ್ದಾರಿ ಹೊತ್ತು ಅದನ್ನು ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
'ಸು ಫ್ರಮ್ ಸೋ' ಅಂದರೆ ಸುಲೋಚನ ಫ್ರಮ್ ಸೋಮೇಶ್ವರ ಎಂದು. ಅಷ್ಟಕ್ಕೂ ಯಾರು ಈ ಸುಲೋಚನ? ಸೋಮೇಶ್ವರಕ್ಕೂ ಈ ಸಿನಿಮಾಕ್ಕೂ ಏನು ಸಂಬಂಧ ಎಂಬುದನ್ನು ತಿಳಿದುಕೊಳ್ಳಲು ನೀವು ಥಿಯೇಟರ್ಗೆ ಹೋಗಿ ಸಿನಿಮಾ ನೋಡಬೇಕು.
ಈ ಸಿನಿಮಾದಲ್ಲಿ ಸ್ಟಾರ್‌ಗಳಿಲ್ಲ, ಅಬ್ಬರಿಸುವ ವಿಲನ್ ಗಳಿಲ್ಲ, ಕಲರ್‌ಫುಲ್ ಸೆಟ್, ಮಿಂಚುವ ಕಾಸ್ಟ್ಯೂಮ್‌ಗಳಿಲ್ಲ, ಹುಬ್ಬೇರಿಸುವ ಬಜೆಟ್ ಅಂತೂ ಇಲ್ಲವೇ ಇಲ್ಲ. ಆದರೆ, ಒಂದೊಳ್ಳೆಯ ಸಬ್ಜೆಕ್ಟ್ ಇದೆ. ಅದಕ್ಕೆ ತಕ್ಕ, ನಿರೂಪಣೆ, ಕಲಾವಿದರ ನಟನೆ ಇದೆ. ಯುವ ಸಂಗೀತ ನಿರ್ದೇಶಕ ಸುಮೇಧ್ ಕೆ. ಹಾಗೂ ಸಂದೀಪ್ ತುಳಸಿದಾಸ್ ಚಿತ್ರದ ದೃಶ್ಯಗಳಿಗೆ ಸಂಗೀತದ ಮೂಲಕ ಜೀವ ತುಂಬಿದ್ದಾರೆ. ಎಸ್. ಚಂದ್ರಶೇಖರನ್ ಛಾಯಾಗ್ರಹಣ ಸಹಜ ಮತ್ತು ಸುಂದರ. ಕರಾವಳಿಯ ಒಂದೂರಿನ ಚಿತ್ರಣವನ್ನು ಸೊಗಸಗಾಗಿ ಕಟ್ಟಿಕೊಡುವಲ್ಲಿ ಸಫಲರಾಗಿದ್ದಾರೆ. ಹಾಗೆಂದ ಮಾತ್ರಕ್ಕೆ ಚಿತ್ರದಲ್ಲಿ ನ್ಯೂನ್ಯತೆಗಳಿಲ್ಲ ಎಂದು ಹೇಳುವ ಆಗಿಲ್ಲ. ಸಿನಿಮಾದ ಮೊದಲಾರ್ದ ಸ್ವಲ್ಪ ಮಟ್ಟಿಗೆ ಎಳೆದಂತೆ ಅನಿಸುತ್ತದೆ. ಕುಡಿಯುವ ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು.
ಸಿನಿಮಾ: ಸು ಫ್ರಮ್ ಸೋ
ನಿರ್ದೇಶನ: ಜೆಪಿ ತುಮ್ಮಿನಾಡ್
ಕಲಾವಿದರು: ಜೆಪಿ ತುಮ್ಮಿನಾಡ್, ರಾಜ್ ಬಿ ಶೆಟ್ಟಿ, ಸಂಧ್ಯಾ ಅರಕೆರೆ, ಶನೀಲ್ ಗೌತಮ್ ಮುಂತಾದವರು..
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ