Edagaiye Apaghatakke Karana cinema still
ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ ಸ್ಟಿಲ್

Edagaiye Apaghatakke Karana Movie Review: ಎಡಚನ ಸಾಲು ಸಾಲು ಅಪಘಾತ; ಪ್ರೇಕ್ಷಕರ ಮನರಂಜಿಸುವಲ್ಲಿ ಮೇಲುಗೈ ಸಾಧಿಸಿದ 'ಲೊಡ್ಡೆ ಲೋಹಿತ'!

Published on
Rating(3.5 / 5)

ದಿಗಂತ್ ನಟನೆಯ 'ಎಡಗೈಯೇ ಅಪಘಾತಕ್ಕೆ ಕಾರಣ' ಸಿನಿಮಾ ಡಾರ್ಕ್‌ ಹ್ಯೂಮರ್‌ ಕ್ರೈಮ್‌ ಥ್ರಿಲ್ಲರ್‌ ಆಗಿದ್ದು, ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದೆ. ಲೋಹಿತನ ಎಡಗೈನಿಂದಾಗುವ ಅವಾಂತರಗಳು ಕಥೆಗೆ ತೀವ್ರತೆ ನೀಡುತ್ತವೆ. ಸಮರ್ಥ್ ಕಡಕೋಳ್ ನಿರ್ದೇಶನದಲ್ಲಿ, ದಿಗಂತ್ ತಮ್ಮ ತಮಾಷೆಯ ಟೈಮಿಂಗ್ ಮೂಲಕ ಪ್ರೇಕ್ಷಕರನ್ನು ನಗಿಸುತ್ತಾರೆ.

ದಿಗಂತ್ ನಟನೆಯ 'ಎಡಗೈಯೇ ಅಪಘಾತಕ್ಕೆ ಕಾರಣ' ಸಿನಿಮಾ ರಿಲೀಸ್ ಆಗಿದೆ. ಚಿತ್ರವನ್ನು ಸಮರ್ಥ್ ಕಡಕೋಳ್ ನಿರ್ದೇಶಿಸಿದ್ದಾರೆ. ಇದೊಂದು ಪಕ್ಕಾ ಡಾರ್ಕ್‌ ಹ್ಯೂಮರ್‌ ಕ್ರೈಮ್‌ ಥ್ರಿಲ್ಲರ್‌. ಆದರೆ ಈ ಕ್ರೈಮ್‌ ನಡೆಯೋದಕ್ಕೆ ಕಾರಣ ಮಾತ್ರ ಲೋಹಿತನ ಎಡಗೈ ಮಾಡಿದ ಅವಾಂತರ. ಟೈಟಲ್ ಮತ್ತು ಟ್ರೇಲರ್ ಗಳಿಂದಲೇ ಭಾರಿ ಗಮನ ಸೆಳೆದಿದ್ದ ಸಿನಿಮಾ ರಿಲೀಸ್ ಆಗಿದ್ದು. ಪ್ರೇಕ್ಷಕರನ್ನು ಮನರಂಜಿಸುವಲ್ಲಿ ದಿಗಂತ್ ಯಶಸ್ವಿಯಾಗಿದ್ದಾರೆ.

ಲೋಹಿತ್ ಅಲಿಯಾಸ್ ಲೊಡ್ಡೆ ಲೋಹಿತ್ (ದಿಗಂತ್) ಹುಟ್ಟಿನಿಂದಲೇ ಎಡಚ. ಅಂದರೆ ತನ್ನೆಲ್ಲಾ ಕೆಲಸಗಳಿಗೂ ಮೊದಲು ಎಡಗೈಯನ್ನೇ ಬಳಸುತ್ತಾನೆ. ಎಡಚನಾಗಿರುವುದಕ್ಕೆ ಹುಟ್ಟಿದಾಗಿನಿಂದಲೂ ಒಂದಲ್ಲಾ ಒಂದು ಸಮಸ್ಯೆಗೆ ಲೋಹಿತ್ ಸಿಲುಕಿಕೊಳ್ಳುತ್ತಾನೆ. ಬಾಲ್ಯದಿಂದಲೂ ಆತನನ್ನು ಶಾಲಾ ಶಿಕ್ಷಕರು ಸರಿಪಡಿಸಲು ಪ್ರಯತ್ನಿಸುತ್ತಾರೆ. ಅವನ ಬರೆಯುವ ಕೈಯನ್ನು ಬದಲಾಯಿಸಲು ಯತ್ನಿಸುತ್ತಾರೆ. ಸಂಬಂಧಿಕರು ಅವನನ್ನು ಜ್ಯೋತಿಷಿಗಳ ಬಳಿಗೆ ಕರೆದೊಯ್ಯುತ್ತಾರೆ. ಅವರು ದೋಷವೆಂದು ಭಾವಿಸಿದ್ದನ್ನು 'ಸರಿಪಡಿಸುವ' ಪ್ರಯತ್ನಿಸುತ್ತಾರೆ, ಆದರೆ ಲೋಹಿತ್ ಯಾವಾಗಲೂ ಎಲ್ಲವನ್ನೂ ವಿರೋಧಿಸುತ್ತಲೇ ಬರುತ್ತಾನೆ. ಎಡಚನಾಗಿರುವುದರಿಂದ ಶಾಂತ ಸ್ವಭಾವದವನಾಗಿರುತ್ತಾನೆ ಎಂದು ಹೇಳಲಾಗುತ್ತದೆ. ಆದರೆ ಎಲ್ಲಿಯವರೆಗೆ? ಎಡಗೈ ನಿಂದ ಒಬ್ಬನ ಪ್ರಾಣ ಹೋಗುವವರೆಗೆ.

ತನ್ನ ಎಡಗೈ ನಿಂದ ಉಂಟಾದ ಅನಾಹುತಗಳಿಂದ ಬೇಸತ್ತ ಲೋಹಿತ್ ಸಾಯಲು ಹೋದಾಗ ಅಪರಿಚಿತ ವ್ಯಕ್ತಿಯೊಬ್ಬ (ನಿರೂಪ್ ಭಂಡಾರಿ) ಆತನನ್ನು ಉಳಿಸುತ್ತಾನೆ. ನಂತರ ಸಾಯಲು ಕಾರಣ ಕೇಳುತ್ತಾನೆ, ಅಲ್ಲಿಂದ ಲೊಡ್ಡೆ ಲೋಹಿತನ ಕಥಾ ಪ್ರಸಂಗ ಆರಂಭವಾಗುತ್ತದೆ. ಎಡಗೈ ಬಳಸೋ ಲೋಹಿತ ಈ ಕಾಲದ ನತದೃಷ್ಟ ಪುರುಷ. ಹುಟ್ಟುತ್ತಲೇ ಎಡಗೈ ಮಾಡಿದ ಅವಾಂತರಕ್ಕೆ ತಾಯಿಯನ್ನೇ ಕಳೆದುಕೊಂಡವನು. ಬೆಳೆಯುತ್ತ ಬೇರೆ ಬೇರೆ ಬಗೆಯಲ್ಲಿ ಬವಣೆ ಪಟ್ಟವನು.

ಈ ಜಗತ್ತು ಬರೀ ಬಲಗೈ ಬಳುಸುವವರಿಗೆಂದೇ ರೂಪಿತವಾಗಿದೆ, ನಮ್ಮಂಥ ಎಡಚರು ಏನು ಮಾಡಬೇಕು ಎಂಬ ಕಿರಿಕಿರಿಯಲ್ಲೇ ಅವರು ಜೀವನ ತಳ್ಳುತ್ತಿರುತ್ತಾನೆ. ಇಂತಹ ಲೋಹಿತ್, ಒಂದು ಐಷಾರಾಮಿ ಫ್ಲಾಟ್‌ಗೆ ತನ್ನ ಗೆಳತಿಯನ್ನು (ನಿಧಿ ಸುಬ್ಬಯ್ಯ) ಭೇಟಿಯಾಗಲು ಹೋಗುತ್ತಾನೆ. ಅದೊಂದು ರೊಮ್ಯಾಂಟಿಕ್ ಡೇಟ್. ಆದರೆ ಆ ಫ್ಲಾಟ್‌ನಲ್ಲಿ ನಡೆಯುವುದೇ ಬೇರೆ. ವೈನ್ ಕುಡಿದ ಲೋಹಿತ್, ರಕ್ತವನ್ನು ಮೈಗಂಟಿಸಿಕೊಂಡು ಒದ್ದಾಡುತ್ತಾನೆ. ದೊಡ್ಡ ಸಂಕಷ್ಟದಲ್ಲಿ ಲೋಹಿತ್ ಲಾಕ್ ಆಗುತ್ತಾನೆ. ಅಷ್ಟಕ್ಕೂ ಆ ಫ್ಲಾಟ್‌ನಲ್ಲಿ ಏನಾಗುತ್ತದೆ? ಇದೆಲ್ಲದಕ್ಕೂ ಲೋಹಿತ್ ಎಡಗೈಗೆ ಹೇಗೆ ಕಾರಣವಾಗುತ್ತದೆ? ಇದರಿಂದ ಲೋಹಿತ್ ಹೊರಗೆ ಬರುತ್ತಾನಾ ಎಂಬುದಕ್ಕೆ ಸಿನಿಮಾ ನೋಡಬೇಕು.

ಲೋಹಿತ್ ಎಂಬ ಎಡಚನ ಪಾತ್ರವನ್ನು ಜೀವಿಸಿದ್ದಾರೆ ದಿಗಂತ್. ತಮ್ಮ ಕಾಮಿಡಿ ಟೈಮಿಂಗ್‌ನಿಂದ ನಗಿಸುತ್ತಾರೆ. ಜೊತೆಗೆ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಲೂ ಪ್ರೇಕ್ಷಕರನ್ನು ನಗಿಸುತ್ತಾರೆ. ನಿಧಿ ಸುಬ್ಬಯ್ಯ ಪಾತ್ರ ಚಿಕ್ಕದಾದರೂ ಇಂಪ್ಯಾಕ್ಟ್ ದೊಡ್ಡದು. ಚಿತ್ರದ ನಾಯಕಿ ಧನು ಹರ್ಷಗೆ ಇದು ಚೊಚ್ಚಲ ಪ್ರಯತ್ನವಾಗಿದ್ದು, ತೆರೆ ಮೇಲಿದ್ದಷ್ಟು ಸಮಯ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಾರೆ. 'ಭಜರಂಗಿ' ಲೋಕಿ, ಕೃಷ್ಣ ಹೆಬ್ಬಾಳೆ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ಕಾಣಿಸಿಕೊಂಡಿದ್ದಾರೆ. ನಿರೂಪ್ ಭಂಡಾರಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕ ಸಮರ್ಥ್ ಕಡಕೋಳ್ ಡಾರ್ಕ್ ಕಾಮಿಡಿ ಕಥೆಯನ್ನು ರಂಜನೀಯವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಈ ಪ್ರಯತ್ನದಲ್ಲಿ ಬಹುತೇಕ ಯಶಸ್ಸು ಕಂಡಿದ್ದಾರೆ ಎಂದೇ ಹೇಳಬುದು. ಒಂದೇ ರಾತ್ರಿ, ಬಹುತೇಕ ಒಂದೇ ಕಟ್ಟಡದಲ್ಲಿ ಕಥೆ ಸಾಗಿದರೂ ಎಲ್ಲಿಯೂ ಬೇಸರ ತರಿಸೋದಿಲ್ಲ.

ಕನ್ನಡದ ಮಟ್ಟಿಗೆ ಹೇಳುವುದಾದರೇ ಡಾರ್ಕ್ ಕಾಮಿಡಿ ಕಥೆಗಳು ಕಡಿಮೆ. ಅಭಿಮನ್ಯು ಸದಾನಂದನ್ ಛಾಯಾಗ್ರಹಣ ಮನ ಸೆಳೆಯುತ್ತದೆ. ಶ್ರೀಕಾಂತ್ ಗೌಡ - ಪ್ರವೀಣ್ ಸಂಕಲನ ಚೆನ್ನಾಗಿದೆ. ಎಷ್ಟು ಬೇಕೋ ಅಷ್ಟು ಟ್ರಿಮ್ ಮಾಡಿದ್ದಾರೆ, ಹೀಗಾಗಿ ಹೊಸ ರೀತಿಯ ಮೇಕಿಂಗ್ ನೋಡುಗರನ್ನು ಸೆಳೆಯುತ್ತದೆ.

ಎಲ್ಲವೂ ಚೆನ್ನಾಗಿದೆ ಎದ ಮಾತ್ರಕ್ಕೆ ಚಿತ್ರದಲ್ಲಿ ದೋಷವಿಲ್ಲ ಎಂದಲ್ಲ. ಪ್ರೇಕ್ಷಕರನ್ನು ನಗಿಸುವ ಭರಾಟೆಯಲ್ಲಿ ಲಾಜಿಕ್ ಮಾಯವಾಗಿದೆ. ಅಸಂಬದ್ಧ ಹಾಸ್ಯಗಳು ಕಾಣಬರುತ್ತವೆ. ಕಥೆಯಲ್ಲಿ ಮತ್ತಷ್ಟು ಹಿಡಿತವಿರಬೇಕಾಗಿತ್ತು. ಸಂಭಾಷಣೆಯಲ್ಲಿ ಮತ್ತಷ್ಟು ಬಿಗಿಯಾಗಿರಬೇಕಿತ್ತು ಎನ್ನಿಸುತ್ತದೆ. ಚಿತ್ರದ ಮೊದಲಾರ್ಧ ಸಲೀಸಾಗಿ ನೋಡಿಸಿಕೊಂಡು ಹೋಗುತ್ತದೆ. ಸಿನಿಮಾದ ದ್ವಿತೀಯಾರ್ದದಲ್ಲಿ ಕಥೆ ಮೊನಚು ಕಳೆದುಕೊಳ್ಳುತ್ತದೆ. ಕೆಲವು ಕಡೆ ಮಿಸ್ಸಿಂಗ್ ಲಿಂಕ್​ಗಳು ಕಾಣುತ್ತವೆ. ಇದರ ಬಗ್ಗೆ ನಿರ್ದೇಶಕರು ಗಮನ ಹರಿಸಬೇಕಿತ್ತು. ಎಡಗೈ ಇಂದಾಗಿ ತಾವು ಪೇಚಿಗೆ ಸಿಲುಕಿ ಸಂಕಷ್ಟದ ಸ್ಥಿತಿಯಲ್ಲಿದ್ದರೂ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ದಿಗಂತ್ ಮೇಲುಗೈ ಸಾಧಿಸಿದ್ದಾರೆ.

ಸಿನಿಮಾ: ಎಡಗೈಯೇ ಅಪಘಾತಕ್ಕೆ ಕಾರಣ

ನಿರ್ದೇಶನ: ಸಮರ್ಥ್ ಕಡಕೋಳ್

ಕಲಾವಿದರು: ದಿಗಂತ್, ನಿಧಿ ಸುಬ್ಬಯ್ಯ, ಧನು ಹರ್ಷ, ನಿರೂಪ್ ಭಂಡಾರಿ

Edagaiye Apaghatakke Karana cinema still
ಎಡಗೈಯೇ ಅಪಘಾತಕ್ಕೆ ಕಾರಣ ಚಿತ್ರದ ಟೀಸರ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com