ದೀಪಾವಳಿಯಂದು ಮನೆಯಿಂದ ಮನೆಗೆ ಬೆಳಕು ಹಂಚುವ ಹಸಲರು

ಕಾಡಿನಲ್ಲಿ ನೆಲೆಸಿದ್ದಾಗ ಈ ಸಮುದಾಯದವರು ಹಕ್ಕಿಗಳಂತೆ ಸ್ವಚ್ಛಂದವಾಗಿ ಬದುಕಿದವರು...
ದೀಪಾವಳಿಯಂದು ಮನೆಯಿಂದ ಮನೆಗೆ ಬೆಳಕು ಹಂಚುವ ಹಸಲರು

ಕಾಡಿನಲ್ಲಿ ನೆಲೆಸಿದ್ದಾಗ ಈ ಸಮುದಾಯದವರು ಹಕ್ಕಿಗಳಂತೆ ಸ್ವಚ್ಛಂದವಾಗಿ ಬದುಕಿದವರು ಮತ್ತು ನಿಸರ್ಗದ ಮಡಿಲಲ್ಲಿ ಹಾಯಾಗಿದ್ದವರು. ಜೀವನೋಪಾಯಕ್ಕೆ ಕುಲ ಕಸುಬು ನೆಚ್ಚಿಕೊಂಡು ಕಷ್ಟವೋ ಸುಖವೋ ದಟ್ಟಾರಣ್ಯದಲ್ಲಿ ಬದುಕು ಕಟ್ಟಿಕೊಂಡಿದ್ದವರು.
ಆದರೆ, ಕಾಡಿನಿಂದ ಹೊರಬಿದ್ದ ಬಳಿಕ ಅವರ ಜೀವನ ಶೈಲಿಯೇ ಬದಲಾಯಿತು. ಜೀವನೋಪಾಯಕ್ಕೆ ಅನ್ಯ ಮಾರ್ಗ ಇಲ್ಲದೆ ಉಳ್ಳವರ ಮನೆಗಳಲ್ಲಿ ದುಡಿಯುವಂಥ ಸನ್ನಿವೇಶ ನಿರ್ಮಾಣವಾಯಿತು. ಹಾಗೆಂದು ಅವರಲ್ಲಿ ಬೇಸರವೇನೂ ಇಲ್ಲ. ಇಂದಿಗೂ ಒಡೆಯರು ಹೇಳಿದ್ದನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬರುತ್ತಿದ್ದಾರೆ. ಇದು 'ಹಸಲರು' ಎಂಬ ಸಮುದಾಯದ ವಿಶೇಷ.
ಈ ಸಮುದಾಯದವರು ದುಡಿಮೆಯಿಂದ ಅವರು ಕೆಲಸ ಮಾಡುವ ಮನೆ ಮಾಲೀಕರ ಬಾಳು ಬೆಳಗುತ್ತಿದ್ದೆಯೇ ಹೊರತು ಮೈ ಮುರಿದು ದುಡಿಯುವ ಹಸಲರು ಮಾತ್ರ ಇದ್ದಲ್ಲೇ ಇದ್ದಾರೆ. ಆದರೂ ನಿಷ್ಠೆ ಮತ್ತು ಕಾಯಕದ ವಿಚಾರದಲ್ಲಿ ಅವರಲ್ಲಿ ಎರಡನೇ ಮಾತು ಇಲ್ಲವೇ ಇಲ್ಲ.
ಬುಡಕಟ್ಟು ಸಮುದಾಯಕ್ಕೆ ಸೇರಿದ ಹಸಲರ ಕುಟುಂಬಗಳು ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಜನಸಂಖ್ಯೆ 50 ಸಾವಿರದಷ್ಟು ಇರಬಹುದು. ಆದರೂ ಇವರೇನೂ ಸಂಘಟಿತರಲ್ಲ.
ಮಗುನಂಥ ಮನಸ್ಸಿನವರು: ಹಸಲ ಎಂದರೆ ಹಸುಳೆ, ಹಸಲರು ಎಂದರೆ ಮಗುವಿನಂಥ ಮನಸ್ಸಿನವರು, ಮುಗ್ಧರು ಎಂದರ್ಥ. ಇದು ನಿಜವೂ ಹೌದು. ಏಕೆಂದರೆ, ಈ ಸಮುದಾಯದ ಜನ ಯಾರಿಗೂ ಕೇಡು ಬಯಸುವವರಲ್ಲ. ತಾವಾಯಿತು, ತಮ್ಮ ಬದುಕಾಯಿತು ಎಂಬಂತೆ ಇರುವ ಜನ. ಕಾಡಿನಲ್ಲಿ ಇದ್ದಾಗ ಹಸಲರು ಬೇಟೆಯಾಡುತ್ತಾ, ಅಲ್ಲಿ ಸಿಗುವ ಗೆಡ್ಡೆ, ಗೆಣಸು ತಿನ್ನುತ್ತಾ ಜೀವನ ಸಾಗಿಸುತ್ತಿದ್ದರು.ಅಷ್ಟೇ ಅಲ್ಲ, ಭಗಿನಿ ಮರದ ತಿರುಳಿನಿಂದ ತಯಾರಿಸಿದ ಗಂಜಿಯನ್ನು ವಾರಗಟ್ಟಲೆ ಹಸಿವು ನಿವಾರಿಸಿಕೊಂಡಿದ್ದೂ ಇದೆ.
ಇವರಲ್ಲಿ 23ಕ್ಕೂ ಬೆಡಗುಗಳಿವೆ. ಶಿವಮೊಗ್ಗದಲ್ಲಿ ಇವರನ್ನು ಹಸಲರು ಎಂದು ಕರೆದರೆ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡದಲ್ಲಿ ಹಸಲರ್ ಎನ್ನುತ್ತಾರೆ. ಇನ್ನು ಉತ್ತರ ಕನ್ನಡದಲ್ಲಿ ಬಿಲ್ ಕ್ಷತ್ರಿಯ ಎಂಬ ಹೆಸರಿದೆ. ಏಕೆಂದರೆ, ಇವರು ಕಾಡಿನಲ್ಲಿದ್ದಾಗ ಬಿಲ್ಲು, ಬಾಣವನ್ನು ಹೆಗಲಿಗೇರಿಸಿಕೊಂಡೇ ಇರುತ್ತಿದ್ದರು. ಸಣ್ಣಪುಟ್ಟ ಪ್ರಾಣಿಗಳನ್ನು ಅದರಿಂದ ಬೇಟೆಯಾಡುತ್ತಿದ್ದರು. ಈಗಲು ಹಸಲರು ಬಿಲ್ಲು-ಬಾಣಕ್ಕೆ ಪೂಜೆ ಸಲ್ಲಿಸುತ್ತಾರೆ. ಬೇಟೆ ಇಲ್ಲವಾದರೂ ತೆಂಗಿನಕಾಯಿಯ ಕಣ್ಣಿಗೆ ಗುರಿ ಇಟ್ಟು ಹೊಡೆಯುತ್ತಾರೆ. ಅರಣ್ಯ ಕಾಯ್ದೆ ಜಾರಿಗೆ ಬಂದ ಬಳಿಕ ಕಾಡಿನಿಂದ ಹೊರಬಂದ ಹಸಲರು, ಜಮೀನುದಾರರ ಬಳಿ ದುಡಿಮೆಗೆ ಸೇರಿಕೊಂಡರು. ಕೆಲಸಕ್ಕೆ ಪ್ರತಿಯಾಗಿ ನಿಮಗೆ ಸಿಗುವುದೇನು? ಎಂದು ಕೇಳಿದರೆ, 'ಮಾಲೀಕ ಕೊಟ್ಟಷ್ಟು ನಾವು ತೆಗೆದುಕೊಂಡಷ್ಟು' ಎನ್ನುತ್ತಾರೆ ಹಸಲರು. ಇತಿಹಾಸಜ್ಞರ ಪ್ರಕಾರ ಹಸಲರು ದಷ್ಟಪುಷ್ಟವಾದ ದೇಹ ಹೊಂದಿದ್ದರು. ಗುಂಗುರು ಕೂದಲಿನವರು ಮತ್ತು ದಪ್ಪ ತಲೆಯುಳ್ಳವರಾಗಿದ್ದರು. ಬುದ್ಧಿಯಲ್ಲಿ ಚುರುಕಾದ ಅವರು ಮೃದ ಸ್ವಭಾವದವರು. ಜೊತೆಗೆ ಸೇವಾ ಮನೋಭಾವವನ್ನು ಹೊಂದಿದವರು.

ಕಾಡುಗಳಲ್ಲಿ ನೆಲೆಸಿದ್ದವರು: ಸಾಗರ, ಸೊರಬ, ಶಿಕಾರಿಪುರ, ಹೊಸನಗರ, ತೀರ್ಥಹಳ್ಳಿ, ಶಿರಸಿ, ಸಿದ್ಧಾಪುರ, ಹೊನ್ನಾವರ, ಶೃಂಗೇರಿ, ಮೂಡಿಗೆರೆ ಮತ್ತು ನರಸಿಂಹರಾಜಪುರಕ್ಕೆ ಹೊಂದಿಕೊಂಡಿರುವ ಕಾಡುಗಳಲ್ಲಿ ಹಸಲರು ನೆಲೆಸಿದ್ದರು. ಈ ಊರುಗಳಲ್ಲಿ ಈಗ ಹಸಲರ ಕೇರಿಗಳನ್ನು ಕಾಣಬಹುದು. ಆ ಕೇರಿಗಳು ಬೇರೆ ಸಮುದಾಯದವರ ಕೇರಿಗಳಿಗಿಂತ ಸ್ವಲ್ಪ ದೂರದಲ್ಲಿರುತ್ತವೆ. ಜೊತೆಗೆ ಇವರ ಮನೆಗಳು ತಾವು ಕೆಲಸ ಮಾಡುವ ಮಾಲೀಕರ ಜಮೀನುಗಳಿಗೆ ಹೊಂದಿಕೊಂಡೇ ಇರುತ್ತದೆ. ದ್ವೀಪದಂತಹ ಪ್ರದೇಶಗಳಲ್ಲಿಯೂ ಈ ಸಮುದಾಯದವರ ಮನೆಗಳನ್ನು ಕಾಣಬಹುದು. ಕೆಲವೆಡೆ ಒಂಟಿ ಮನೆಗಳೂ ಇವೆ. ಈ ಹಿಂದೆ ಮಣ್ಣಿನಿಂದ ಮನೆಗಳನ್ನು ಕಟ್ಟಿ ಹುಲ್ಲಿನ ಮೇಲ್ಛಾವಣಿಯನ್ನು ಹಸಲರು ಹಾಕಿಕೊಳ್ಳುತ್ತಿದ್ದರು.
ಹಸಲರ ಮನೆ ಬಹಳ ಅಚ್ಚುಕಟ್ಟಾಗಿರುತ್ತದೆ. ಅಡುಗೆ ಮನೆ, ಪ್ರತ್ಯೇಕವಾದ ದೇವರ ಕೋಣೆಯನ್ನು ಅವರು ಕಟ್ಟಿಕೊಳ್ಳುತ್ತಾರೆ. ಈ ಸಮುದಾಯದ ಮಹಿಳೆಯರು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ. ಮನೆಯ ಮುಂಭಾಗ ತುಳಸಿ ಕಟ್ಟೆ ಇರಲೇಬೇಕು. ಕಾಡಿನಲ್ಲಿದ್ದಾಗ ಸಮುದಾಯದ ಪುರುಷರು ಲಂಗೋಟಿ ಮತ್ತು ಅರ್ಧ ಪಂಚೆಯನ್ನು ಮಾತ್ರ ಧರಿಸುತ್ತಿದ್ದರು. ಹೆಗಲ ಮೇಲೆ ಕಂಬಳಿ ಇರುತ್ತಿತ್ತು.

ಮರದಿಂದ ಮರಕ್ಕೆ ಹಾರುವ ಕಲೆ: ಈಗ ಕೃಷಿ ಚಟುವಟಿಕೆಯಲ್ಲಿ ನಿರತರಾದವರು ಅಡಕೆ ಹಾಳೆಯ ಟೋಪಿ ಧರಿಸುತ್ತಾರೆ. ಸೊಂಟದಲ್ಲಿ ಕುಡಗೋಲು ಸಿಕ್ಕಿಸಿಕೊಂಡಿರುತ್ತಾರೆ. ಅಡಕೆ ತೋಟಗಳಲ್ಲಿ ಕೆಲಸ ಮಾಡುವ ಪುರುಷರು ಮರದಿಂದ ಮರಕ್ಕೆ ಜಿಗಿಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಅಡಕೆ ಸುಲಿಯುವ ಮತ್ತು ಅದನ್ನು ಒಣಗಿಸುವ ಕೆಲಸ ಮಹಿಳೆಯರದ್ದು. ಕೆಲವರು ಬತ್ತದ ಗದ್ದೆಗಳಲ್ಲಿ ಕೆಲಸ ಮಾಡಿದರೆ ಇನ್ನೂ ಕೆಲವರು ಕಾಫಿ ತೋಟಗಳಲ್ಲಿ ದುಡಿಯುತ್ತಾರೆ.
ಹಸಲರಿಗೆ ತಮ್ಮದೇ ಆದ ಆಚಾರ ವಿಚಾರಗಳಿವೆ. ಬೆಳಗ್ಗೆ ಸೂರ್ಯನನ್ನು ನೋಡಿ ನಮಸ್ಕರಿಸುವುದು ಇವರ ವಾಡಿಕೆ. ಅರಿದ್ರಾ ಮಳೆಯ ಆರಂಭ ಮತ್ತು ಅಂತ್ಯದಲ್ಲಿ ಪ್ರಾಣಿ ಬಲಿ ಕೊಟ್ಟು ಮಾಂಸದೂಟ ಮಾಡುವ ಪದ್ಧತಿ ಇದೆ. ಚೌಡಿ, ಭೂತ, ಯಕ್ಷಿ, ಮಾಸ್ತಿ ಮತ್ತು ಚಂದ್ರಗುತ್ತಿಯ ರೇಣುಕಾಂಬೆ ಇವರು ಪೂಜಿಸುವ ದೇವರುಗಳು. ದೈವ ಮತ್ತು ಭೂತದ ಬಗ್ಗೆ ಸಮುದಾಯದವರಲ್ಲಿ ಅಪಾರ ನಂಬಿಕೆ ಇದೆ. ದೈವ ಮತ್ತು ಭೂತಗಳು ನ್ಯಾಯ ಮತ್ತು ಧರ್ಮವನ್ನು ರಕ್ಷಿಸುತ್ತವೆ ಎನ್ನುತ್ತಾರೆ ಇವರು.

ಬಲೀಂದ್ರ ಹುಟ್ಟಿ ಬರುತ್ತಾನೆ:
ಎಲ್ಲ ಹಬ್ಬಗಳನ್ನು ಆಚರಿಸುವ ಹಸಲರು ಸಂಕ್ರಾಂತಿಯ ದಿನದಂದು ಮನೆಯ ಹೊಸಲಿನ ಪೂಜೆ ಮಾಡುತ್ತಾರೆ. ದೀಪಾವಳಿ ದಿನದಂದು ರಾತ್ರಿ ಗುಂಪಾಗಿ ಹಾಡುತ್ತಾ ಪಂಜು ಹಿಡಿದು ಮೆರವಣೆಗೆ ಹೊರಡುತ್ತಾರೆ. ಮನೆ ಮನೆಗೂ ಹೋಗುವ ಅವರು ಬೆಳಕನ್ನು ಹಂಚುತ್ತಾರೆ. ಹಸಲರು ಹೀಗೆ ಬೆಳಕು ಹಿಡಿದು ಹೊರಟಾಗ ಆಯಾ ಮನೆಯ ಮಂದಿ ಸ್ವಾಗತಿಸುತ್ತಾರೆ. ಆ ಬೆಳಕಿಗೆ ಎಣ್ಣೆ ಸುರಿಯುತ್ತಾರೆ. ತಾವು ತಂದ ದೀಪದಿಂದ ಹಸಲರು ಹೋದ ಮನೆಯಲ್ಲಿ ದೇವರ ದೀಪ ಹಚ್ಚುತ್ತಾರೆ. ಇನ್ನು ಪಾಡ್ಯದಂದು ಗೋವುಗಳ ಪೂಜೆ ವಿಜೃಂಭಣೆಯಿಂದ ನೆರವೇರುತ್ತದೆ. ಹಸರಲು ಹೀಗೆ ದೀಪಾವಳಿಯಂದು ಬೆಳಕು ಹಿಡಿದು ಹೋಗುವುದಕ್ಕೂ ಕಾರಣವಿದೆ. ವಾಮನನಿಗೆ ಬಲಿಯಾದ ಬಲೀಂದ್ರ ಮತ್ತೆ ಹುಟ್ಟಿ ಬರುತ್ತಾನೆ ಎಂಬ ನಂಬಿಕೆಯೇ ಇದಕ್ಕೆ ಕಾರಣ ಎಂದು ಸಮಾಜದ ಹಿರಿಯರು ಹೇಳುತ್ತಾರೆ.
ಹಸಲರ ಸಮುದಾಯದಲ್ಲಿ ವಧು ದಕ್ಷಿಣೆ ಪದ್ಧತಿ ಇದೆ. ಹುಡುಗ ಮತ್ತು ಹುಡಗಿ ಪರಸ್ಪರ ಒಪ್ಪಿದರೆ ಮಾತ್ರ ಮದುವೆ. ಬಳಿಕ ವರನ ಕಡೆಯವರು 201 ರೂ.ಗಳನ್ನು ಕನ್ಯಾ ಶುಲ್ಕವಾಗಿ ಕೊಡಬೇಕು. ವಿವಾಹ ವಿಚ್ಛೇದನ ಮತ್ತು ಮರು ವಿವಾಹಕ್ಕೂ ಇವರಲ್ಲಿ ಅವಕಾಶವಿದೆ. ಇತರೆ ಸಮುದಾಯಗಳಲ್ಲಿ ಇರುವಂತೆ ಹಸಲರಲ್ಲೂ ನ್ಯಾಯ ಪಂಚಾಯಿತಿ ವ್ಯವಸ್ಥೆ ಇದೆ. ಎಲ್ಲರೂ ಸೇರಿ ನೇಮಕ ಮಾಡಿದ ಅಥವಾ ಚುನಾಯಿತನಾದ ಹಿರಿಯ ತಂಟೆ ತಕರಾರುಗಳನ್ನು ಬಗೆಹರಿಸುತ್ತಾನೆ. ಇದಕ್ಕಾಗಿ ಕೇರಿಗೊಬ್ಬ ಹಿರಿಯ ಇರುತ್ತಾನೆ.

ನಾಟಿ ವೈದ್ಯದಲ್ಲೂ ಮುಂದು:
ಇನ್ನು ಹಸಲರು ನಾಟಿ ವೈದ್ಯದಲ್ಲೂ ಮುಂದಿದ್ದಾರೆ. ಕಾಡಿನಲ್ಲಿ ಸಿಗುವ ಗಿಡಮೂಲಿಕೆಗಳನ್ನು ತಂದು ಅದರಿಂದ ಔಷಧ ತಯಾರು ಮಾಡಿ ರೋಗ ರುಜಿನಗಳಿಗೆ ನೀಡುತ್ತಾರೆ. ಔಷಧೋಪಚಾರದಲ್ಲಿ ಕೆಲವರು ವೈದ್ಯರನ್ನೂ ಮೀರಿಸಿದವರಿದ್ದಾರೆ. ಮದ್ದಾಲೆ ಗಿಡದಿಂದ ಮಾಡಿದ ಔಷಧವನ್ನು ಅಮಾವಾಸ್ಯೆ ದಿನದಂದು ಸೇವಿಸಿದರೆ ವರ್ಷಪೂರ್ತಿ ಯಾವುದೇ ಕಾಯಿಲೆ ಬರುವುದಿಲ್ಲ ಎಂಬ ನಂಬಿಕೆ ಹಸಲರಲ್ಲಿದೆ.
ಇನ್ನು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಸಲರು ಇನ್ನೂ ಮುಂದುವರಿಯಬೇಕಿದೆ. ಸರ್ಕಾರದ ಸವಲತ್ತುಗಳೂ ಪೂರ್ಣ ಪ್ರಮಾಣದಲ್ಲಿ ಇವರಿಗೆ ಸಿಗುತ್ತಿಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ಮಾತ್ರ ಸೌಕರ್ಯಗಳನ್ನು ಪಡೆದುಕೊಂಡಿದ್ದಾರೆ. ಉಳಿದವರು ಉಳ್ಳವರ ಮನೆಯ ಕೆಲಸದಾಗಳುಗಳಾಗಿಯೇ ಜೀವನ ಸಾಗಿಸುತ್ತಿದ್ದಾರೆ. ರಾಜಕೀಯ ಪ್ರಾತಿನಿಧ್ಯವಂತೂ ಇವರ ಪಾಲಿಗೆ ಗಗನಕುಸುಮವೇ ಆಗಿದೆ. ಸಂಘಟನೆಯ ಕೊರತೆಯೂ ಇದಕ್ಕೆ ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು.

- ಕೆ.ವಿ. ಪ್ರಭಾಕರ
prabhukolar@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com