ಜೀವನ ಪೂರ್ತಿ ಜೀತದಾಳುಗಳಾಗಿಯೇ ದುಡಿದ ಪನಿಯನ್ನರು

ಜೀವನ ಪೂರ್ತಿ ಜೀತದಾಳುಗಳಾಗಿಯೇ ದುಡಿದ ಪನಿಯನ್ನರು

ರಾಜ್ಯದಲ್ಲಿ ಭೂ ಸುಧಾರಣೆ ಕಾಯಿದೆ ಜಾರಿಗೆ ಬಂದ ಬಳಿಕ ಜಮೀನುದಾರರ ಹಾವಳಿ...

ರಾಜ್ಯದಲ್ಲಿ ಭೂ ಸುಧಾರಣೆ ಕಾಯಿದೆ ಜಾರಿಗೆ ಬಂದ ಬಳಿಕ ಜಮೀನುದಾರರ ಹಾವಳಿಯೂ ತಣ್ಣಗಾಯಿತು. ಆದರೆ, ಅದಕ್ಕೂ ಮುಂಚೆ ಜಮೀನುದಾರರ ಪೈಕಿ ಕೆಲವರು ಜನರಿಗೆ ಕೊಡುತ್ತಿದ್ದ ತೊಂದರೆ ಅಷ್ಟಿಷ್ಟಲ್ಲ. ಆಂಧ್ರದಲ್ಲಿ ಈಗಲೂ ಅಂತಹ ಸನ್ನಿವೇಶ ಇದೆ.
ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ಜಮೀನುದಾರರ ಬಳಿ ದುಡಿಯುವ ಜೀತದಾಳುಗಳ ಕಷ್ಟ ನೋಡಲಾಗದೆ ಭೂ ಸುಧಾರಣಾ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರು. ಅದರ ಫಲವಾಗಿ ಉಳ್ಳವರ ಜಮೀನುಗಳಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದವರು, ಕೃಷಿ,ಕೂಲಿ ಕಾರ್ಮಿಕರು ಹೊಲ, ಗದ್ದೆಗಳಿಗೆ ಮಾಲೀಕರಾದರು. ಅದರೂ ಜೀತ ಪದ್ಧತಿ ಸಂಪೂರ್ಣವಾಗೇನೂ ಹೋಗಿಲ್ಲ. ಜೀತದ ಪ್ರಕರಣಗಳು ಅಲ್ಲಲ್ಲಿ ಆಗಾಗ ಬೆಳಕಿಗೆ ಬರುತ್ತಲೇ ಇರುತ್ತದೆ.
ಹೀಗೆ ಜೀತವನ್ನೇ ಕಾಯಕವಾಗಿ ಮಾಡಿಕೊಂಡಿದ್ದ ಸಮುದಾಯವೂ ಒಂದಿದೆ. ಅದೇ ಪನಿಯನ್. ಪನಿ ಎಂದರೆ ಕೆಲಸ. ಪನಿಯನ್ ಎಂದರೆ ಕೆಲಸ ಮಾಡುವವ ಅಂದರೆ ಜೀತದಾಳು ಎಂದರ್ಥ. ಬುಡಕಟ್ಟು ಸಮುದಾಯಕ್ಕೆ ಸೇರಿದ ಪನಿಯನ್ನರು ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳಲ್ಲಿದ್ದಾರೆ. ಕರ್ನಾಟಕದಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕು ಮತ್ತು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕುಗಳಲ್ಲಿ ಇವರನ್ನು ಕಾಣಬಹುದು. ಕೇರಳದ ವೈನಾಡು, ಕ್ಯಾಲಿಕಟ್, ಕುರಂಬ್ರನಾಡು, ಕೊಟ್ಟಾಯಂ, ತಮಿಳುನಾಡಿನ ನೀಲಗಿರಿ ಮತ್ತಿತರ ಪ್ರದೇಶಗಳಲ್ಲಿ ಪನಿಯನ್ನರು ನೆಲೆಸಿದ್ದಾರೆ.
ಕಾಡಿನ ತಪ್ಪಲೇ ಮನೆ: ಪನಿಯನ್ನರು ಮೊದಲು ಅರಣ್ಯ ವಾಸಿಗಳಾಗಿದ್ದವರು. ಕಾಡುಗಳ ತಪ್ಪಲು ಅವರ ಪಾಲಿಗೆ ಮನೆಯಾಗಿತ್ತು. ಅರಣ್ಯ ಕಾಯಿದೆ ಜಾರಿಗೆ ಬಂದ ಬಳಿಕ ಇವರಲ್ಲಿ ಅನೇಕ ಮಂದಿ ನಗರ, ಪಟ್ಟಣ ಪ್ರದೇಶಗಳನ್ನು ಸೇರಿಕೊಂಡಿದ್ದಾರೆ. ಜೀತ ಪದ್ಧತಿ ಇಲ್ಲಿದಿದ್ದರೂ ಜಮೀನುದಾರರ ಮನೆಗಳಲ್ಲಿ ಕೆಲವರು ಇಂದಿಗೂ ಕೃಷಿ, ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.
ಈ ಸಮುದಾಯದ ಜನ ನೋಡಲಿಕ್ಕೆ ಒರಟು. ಮೈಬಣ್ಣ ಕಪ್ಪು, ಸಾಧಾರಣ ಎತ್ತರ ಮತ್ತು ದಟ್ಟ ಮತ್ತು ಉದ್ದನೆಯ ಕೂದಲು. ಹಳೆಯ ತಲೆಮಾರಿನವರು ಮೊಂಡ ಮೂಗು ಮತ್ತು ದಪ್ಪವಾದ ತುಟಿಗಳನ್ನು ಹೊಂದಿದ್ದರು ಎಂದು ಡಾ. ಕೆ.ಎಂ.ಮೈತ್ರಿ ಅವರು ತಮ್ಮ ಅಧ್ಯಯನದಲ್ಲಿ ವಿವರಿಸುತ್ತಾರೆ. ಕರ್ನಾಟಕದಲ್ಲಿ ಪನಿಯನ್ನರ ಮೂರು ಪಂಗಡಗಳಿವೆ. ಪನಿಯ, ಪಂಜರಿ ಪನಿಯ ಮತ್ತು ಕಾಕೆ ಪನಿಯ. ಇದರಲ್ಲಿ ಪಂಜರಿ ಪನಿಯನ್ನರು ಪ್ರತಿಷ್ಠಿತರು. ಕನ್ನಡ, ಮಲೆಯಾಳಿ ಮತ್ತು ತಮಿಳು ಮಿಶ್ರಣವಾದ ಭಾಷೆ ಇವರಲ್ಲಿದೆ. ಈ ಸಮುದಾಯದಲ್ಲಿ ಬಳಿ, ಕುಲಗಳ ಹೆಸರುಗಳು ಮನೆತನದ ಹೆಸರುಗಳಾಗಿ ಬಳಕೆಯಾಗುತ್ತವೆ. ಇವರು ತಮ್ಮ ಜಾತಿ ಪಂಚಾಯಿತಿ ನಡೆಸಿ ಕೊಡುವ ಮುಖ್ಯಸ್ಥನನ್ನು ಜೆಮ್ಮಿ ಎಂದು ಕರೆಯುತ್ತಾರೆ. ಅತನ ಜವಾಬ್ದಾರಿ ಹೆಚ್ಚಿರುತ್ತದೆ ಎಂಬುದಾಗಿ ಮೈತ್ರಿ ಅವರು ಹೇಳುತ್ತಾರೆ.
ಹಳೆಯ ತಲೆಮಾರಿನ ಪನಿಯನ್ನರು ದೇಹದ ಆಕೃತಿಯಲ್ಲಿ ಆಫ್ರಿಕಾದವರನ್ನು ಹೋಲುತ್ತಿದ್ದರು. ನೋಡಲಿಕೆ ಒರಟರಂತೆ ಕಂಡು ಬಂದರೂ ಮೃದು ಸ್ವಭಾವದವರು. ಜೀತದಾಳುಗಳಾಗಿ ದುಡಿಯುತ್ತಾ, ಜಮೀನುದಾರ ಹೇಳಿದ್ದನ್ನು ಚಾಚೂತಪ್ಪದೆ ಮಾಡುವವರಾಗಿದ್ದರು ಎನ್ನುತ್ತಾರೆ ಸಮುದಾಯದ ಹಿರಿಯರು. ಸರ್ಕಾರ ಹೊಸ ಹೊಸ ಕಾನೂನು ಜಾರಿಗೆ ತರುವ ಮೂಲಕ ಜೀತಪದ್ಧತಿಗೆ ಕ್ರಮೇಣ ಕಡಿವಾಣ ಹಾಕಿತು. ಜಮೀನು ಮಾಲೀಕರ ಬಳಿ ದುಡಿಯುತ್ತಿದ್ದವರು ಸರ್ಕಾರದ ತೋಟಗಾರಿಕೆ ಕ್ಷೇತ್ರಗಳಲ್ಲಿ ಉದ್ಯೋಗ ಪಡೆದುಕೊಂಡರು.  ಎನ್ನುತ್ತಾರೆ ಅವರು.
ಬಾಲ್ಯ ವಿವಾಹ ಇತ್ತು: ಪನಿಯನ್ನರಲ್ಲಿ ಮೊದಲು ಬಾಲ್ಯ ವಿವಾಹ ಪದ್ಧತಿ ಜಾರಿಯಲ್ಲಿತ್ತು. ಇತರೆ ಬುಡಕಟ್ಟು ಸಮುದಾಯಗಳಂತೆ ಇವರಲ್ಲೂ ಸಮಕುಲಗಳಲ್ಲಿ ವಿವಾಹ ಚಟುವಟಿಕೆ ಇಲ್ಲ. ಬೆಸ ಕುಲಗಳಲ್ಲಿ ಮಾತ್ರ ಸಂಬಂಧ ಬೆಸೆದುಕೊಳ್ಳುವ ವಾಡಿಕೆ ಇದೆ. ಅಂಜಿಲಾತು, ಅಪ್ಪೆಮುತ್ತಿ, ಪಾಪಲಾತು, ಅಮ್ಮೆಮುತ್ತಿ, ಕಾಡು ಭಗವತಿ, ಕಾಳಿ, ಮಾದೇಶ್ವರ, ಮರಿಯಮ್ಮ, ಶಿವ ಮತ್ತು ಬಿಳಿರಂಗ ಪನಿಯನ್ನರ ಆರಾಧ್ಯ ದೈವಗಳು. ಎಲ್ಲ ಹಬ್ಬ ಹರಿದಿನಗಳನ್ನು ಆಚರಿಸುವ ಈ ಸಮುದಾಯದ ಜನಕ್ಕೆ ಕಾಡು ಎಂದರೆ ಈಗಲೂ ಪ್ರೀತಿ. ಕೆಲವರು ಅಲ್ಲಿ ಸಿಗುವ ಗಿಡಮೂಲಿಕೆಗಳನ್ನು ತಂದು ಔಷಧ ಸಿದ್ಧಪಡಿಸಿ ಚಿಕಿತ್ಸೆ ನೀಡುತ್ತಾರೆ. ಈ ಮೂಲಕ ನಾಟಿ ವೈದ್ಯರು ಎನಿಸಿಕೊಂಡಿದ್ದಾರೆ. ನಾಟಿ ವೈದ್ಯದಲ್ಲಿ ಇವರಿಗೆ ಹೆಚ್ಚು ನಂಬಿಕೆಯೂ ಇದೆ. ಜೀವನೋಪಾಯಕ್ಕಾಗಿ ಕೆಲವರು ಬುಟ್ಟಿ ಮತ್ತು ಬಲೆ ಹೆಣೆಯುವ ಕೆಲಸ ಮಾಡುತ್ತಿದ್ದಾರೆ. ಇನ್ನೂ ಕೆಲವರು ಎಸ್ಟೇಟ್ ಮಾಲೀಕರ ಬಳಿ ಕಾಯಂ ಕೂಲಿಯಾಳುಗಳಾಗಿದ್ದಾರೆ.
ತಮಿಳುನಾಡಿನಲ್ಲಿ ಪನಿಯನ್ನರು ಗುಡಿಸಲುಗಳನ್ನು ಕಟ್ಟಿಕೊಂಡು ಗುಂಪು ಗುಂಪಾಗಿ ವಾಸ ಮಾಡುತ್ತಿದ್ದರು. ಬಿದಿರು, ಬೊಂಬುಗಳಿಂದ ನಿರ್ಮಿಸಿದ ಗೋಡೆ ಮತ್ತು ಹುಲ್ಲಿನ ಮೇಲ್ಛಾವಣಿಯೇ ಇವರ ಮನೆ. ಇವರು ಮಾಂಸಹಾರಿಗಳು. ಅನ್ನ ಪ್ರಮುಖ ಆಹಾರ. ಕಾಡಿನಲ್ಲಿದ್ದಾಗ ಸಣ್ಣಪುಟ್ಟ ಪ್ರಾಣಿಗಳನ್ನು ಬೇಟೆಯಾಡುವುದು ಸಹ ಇವರ ಕಸುಬು ಆಗಿತ್ತು.  
ಆಫ್ರಿಕಾದಿಂದ ಬಂದವರು: ಪನಿಯನ್ನರು ಮೂಲತ: ಆಫ್ರಿಕಾದಿಂದ ವಲಸೆ ಬಂದಿರಬಹುದು ಎಂದು ಹೇಳಲಾಗುತ್ತದೆ. ಮೊದಲೇ ಹೇಳಿದಂತೆ ಅವರ ದೇಹಾಕೃತಿ ಅಫ್ರಿಕರನ್ನು ಹೋಲುತ್ತದೆ. ಜೊತೆಗೆ ವೇಷಭೂಷಣವೂ ಅದೇ ರೀತಿ ಇತ್ತು. ಆಫ್ರಿಕಾದ ದೇಶದ ಬುಡಕಟ್ಟು ಮಹಿಳೆಯರು ಮಣ್ಣು, ಮರ ಮತ್ತಿತರ ವಸ್ತುಗಳಿಂದ ಮಾಡಿದ ದೊಡ್ಡ ದೊಡ್ಡ ಆಭರಣಗಳನ್ನು ಧರಿಸುತ್ತಾರೆ. ಪನಿಯನ್ ಮಹಿಳೆಯರಲ್ಲೂ ಅದೇ ಸಂಸ್ಕೃತಿಯನ್ನು ಕಾಣಬಹುದಾಗಿತ್ತು ಎನ್ನುತ್ತಾರೆ ಇತಿಹಾಸ ತಜ್ಞರು.
ತಮಿಳುನಾಡಿನಲ್ಲಿ ಸಮುದಾಯದ ಹಿರಿಯರನ್ನು ಮುಪ್ಪನ್ಮಾರ್ಸ್ ಎಂದು ಕರೆಯುತ್ತಾರೆ. ಸಮುದಾಯದ ಹಾಗುಹೋಗುಗಳನ್ನು ಅವರೇ ನೋಡಿಕೊಳ್ಳುತ್ತಾರೆ. ನೀಲಗಿರಿ ಭಾಗದಲ್ಲಿ ನೆಲೆಸಿರುವ ಪನಿಯನ್ನರು ತಮ್ಮ ಹಾಡು, ನೃತ್ಯಗಳ ಮೂಲಕ ಮಲಬಾರ್ ಸಂಸ್ಕೃತಿಯನ್ನು ಇಂದಿಗೂ ಕಾಪಾಡುತ್ತಿದ್ದಾರೆ. ವಿಶೇಷ ಸಂದರ್ಭದಲ್ಲಿ ಈ ಸಮುದಾಯದ ಜನ ಒಂದಾಗಿ ಸೇರಿ ಸಂಭ್ರಮ ಆಚರಿಸುತ್ತಾರೆ. ಅಲ್ಲಿ ಅವರ ಸಾಂಸ್ಕೃತಿಕ ಚಟುವಟಿಕೆಗಳ ಅನಾವರಣ ಆಗುತ್ತದೆ.  ಬೆಂಕಿ ಹಾಕಿ, ದೀಪದ ಬೆಳಕಿನಲ್ಲಿ ಅದರ ಸುತ್ತ ಮಹಿಳೆಯರು, ಪುರುಷರು ಮತ್ತು ಮಕ್ಕಳು ತಾಳಕ್ಕೆ ತಕ್ಕಂತೆ ಹಾಡಿ, ಕುಣಿಯುವುದನ್ನು ನೋಡುವುದೇ ಚಂದ.
ಕಾಡಿನ ಸಹವಾಸ ಬಿಟ್ಟಿಲ್ಲ: ಯಾವುದೇ ಕಾಯಿದೆ ಜಾರಿಗೆ ಬಂದರೂ ಪನಿಯನ್ನರು ಮಾತ್ರ ಕಾಡಿನ ಸಹವಾಸ ಬಿಟ್ಟಿಲ್ಲ. ಕುಲ ಕಸುಬು ಬಿಡಲಾಗದೆ, ಅಧುನೀಕತೆಗೆ ಒಗ್ಗಿಕೊಳ್ಳಲು ಆಗದೆ ಪರದಾಡುತ್ತಿದ್ದಾರೆ.  ಹೀಗಾಗಿ ಅವರು ಅರಣ್ಯ ಇಲಾಖೆ ಅಧಿಕಾರಿಗಳು ಬೇಡ ಬೇಡವೆಂದರೂ ಆಗಾಗ ಅವರ ಕಣ್ಣು ತಪ್ಪಿಸಿ ಕಾಡಿನೊಳಗೆ ಹೋಗುತ್ತಾರೆ. ಕೂಲಿ ಕೆಲಸ ಸಿಗದಿದ್ದಾಗ ಅರಣ್ಯಕ್ಕೆ ಹೋಗಿ ಗೆಡ್ಡೆ ಗೆಣಸು ಆಗೆದು ತರುತ್ತಾರೆ. ನದಿ, ನಾಲೆಗಳಲ್ಲಿ ಮೀನುಗಳ ಬೇಟೆಯಾಡುತ್ತಾರೆ.
ತಮಿಳುನಾಡು, ಕೇರಳ ಮತ್ತು ಕರ್ನಾಟಕದ ಅರಣ್ಯ ಪ್ರದೇಶಗಳ ಬಳಿ ವಾಸವಾಗಿರುವ ಪನಿಯನ್ನರ ಅರ್ಥಿಕ, ಸಮಾಜಿಕ ಮತ್ತು ಶೈಕ್ಷಣಿಕ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಕೆಲವರ ಗುಡಿಸಲುಗಳಿಗೆ ಇನ್ನೂ ವಿದ್ಯುತ್ ಸೌಕರ್ಯ ಬಂದಿಲ್ಲ. ಅವರು ವಾಸ ಮಾಡುತ್ತಿರುವ ಪ್ರದೇಶಗಳಿಗೆ ಹೋಗಲು ಸರಿಯಾದ ರಸ್ತೆಗಳೇ ಇಲ್ಲ. ಕೆಲವರಂತೂ ಶಾಲೆಗಳ ಮುಖವನ್ನೇ ನೋಡಿದವರಲ್ಲ. ಶಾಲೆಗೆ ಹೋಗಿ ಮಕ್ಕಳು ಏನು ಮಾಡಬೇಕು. ಅದರ ಬದಲಿಗೆ ದನ ಕಾಯಲು ಹೋದರೆ ಕುಟುಂಬಕ್ಕೆ ಅನುಕೂಲವಾದರೂ ಆಗುತ್ತದೆ ಎಂಬುದು ಪೋಷಕರ ಅನಿಸಿಕೆ. ಅವರಲ್ಲಿ ಅರಿವು ಮೂಡಿಸುವ ಕೆಲಸವೂ ಕೆಲವೆಡೆಗಳಲ್ಲಿ ಆಗುತ್ತಿಲ್ಲ.
ತಲುಪದ ಯೋಜನೆಗಳು: ಕೇಂದ್ರ ಮತ್ತು ರಾಜ್ಯ ಸರ್ಕಾರ ಬುಡಕಟ್ಟು ಸಮುದಾಯಗಳಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಮೂರು ರಾಜ್ಯಗಳಲ್ಲಿ ನೆಲೆಸಿರುವ ಪನಿಯನ್ ಕುಟುಂಬಗಳಿಗೆ ಅವು ತಲುಪಿಯೇ ಇಲ್ಲ. ಹೀಗಾಗಿ ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಅವರಿಗೆ ಹಿನ್ನಡೆ ಆಗಿದೆ. ಸಂಘಟನೆಯ ಕೊರತೆಯೂ ಇದಕ್ಕೆ ಇನ್ನೊಂದು ಪ್ರಮುಖ ಕಾರಣ.
ಒಟ್ಟಿನಲ್ಲಿ ಪನಿಯನ್ ಎಂಬುದು ಒಂದು ವಿಶಿಷ್ಟವಾದ ಸಮುದಾಯ. ನವ ನಾಗರೀಕತೆಯ ನಡುವೆಯೂ ತನ್ನದೆ ಆದ ಸಾಂಸ್ಕೃತಿಕ ಜೀವನವನ್ನು ಮುಂದುವರಿಸಿಕೊಂಡು ಬಂದಿರುವ ಸಮಾಜ. ಈ ಸಮುದಾಯ ಕುರಿತು ಅಧ್ಯಯನದ ಅಗತ್ಯವಿದೆ.


-ಕೆ.ವಿ.ಪ್ರಭಾಕರ 
 prabhukolar@yahoo.com


Related Stories

No stories found.

Advertisement

X
Kannada Prabha
www.kannadaprabha.com