ಭಾರತೀಯ ಸಂದರ್ಭದಲ್ಲಿ ಜಾತ್ಯತೀತ ಎಂದರೇನು?

Updated on

ಭಾರತದಲ್ಲಿ ಈಗ ಜಾತ್ಯಾತೀತ ಎಂಬ ಪದ ವ್ಯಾಪಕ ಬಳಕೆಯಲ್ಲಿದೆ. ಜನ ಸಾಮಾನ್ಯರು ತಮ್ಮ ಹಕ್ಕನ್ನು ಪ್ರತಿಪಾದಿಸುವ ಅವಸರದಲ್ಲಿ ಈ ಪದವನ್ನು ಧಾರಾಳವಾಗಿ ಬಳಸುತ್ತಾರೆ. ರಾಜಕಾರಣಿಗಳು ಎದುರಿಸುವ ನುಡಿ ಮುತ್ತುಗಳ ನಡುವೆ ರಾರಾಜಿಸುವ ಪದವೇ ಇದು. ವಿದ್ಯಾವಂತರು, ಬುದ್ಧಿಜೀವಿಗಳು ಕೂಡ ಆಗಾಗ ಬಳಸುತ್ತಾರೆ. ಮಾಧ್ಯಮಗಳು, ಈ ಪದವನ್ನು ಬಳಸದಿದ್ದರೆ ಪತ್ರಿಕೆ ಸಾರ್ವಜನಿಕವಲ್ಲವೆಂತಾದೀತು ಎಂಬ ಪೂರ್ವಾಗ್ರಹದಲ್ಲಿ ಬಳಸಿದಂತೆ ಪ್ರಯೋಗಿಸುತ್ತವೆ. ಆದರೆ ಭಾರತೀಯ ಸಂದರ್ಭದಲ್ಲಿ ಜಾತ್ಯತೀತ ಎಂದರೇನು ಎಂಬ ಸ್ಪಷ್ಟ ಪರಿಕಲ್ಪನೆ ನಮಗಾಗಬೇಕಾದ ಅನಿವಾರ್ಯತೆ ಇದೆ. ಆ ಬಗ್ಗೆ ನಮ್ಮ ಸಂವಿಧಾನದ ಅವಲೋಕನವೇ ಹೆಚ್ಚು ಪ್ರಸ್ತುತ.
ಕಾನೂನಿನ ಮುಂದೆ ಎಲ್ಲರೂ ಸರಿಸಮಾನರು ಎನ್ನುತ್ತದೆ ಸಂವಿಧಾನದ ಪರಿಚ್ಛೇದ (14). ಹಾಗೆಯೇ ಪರಿಚ್ಛೇದ(19)ರಲ್ಲಿ ಅನೇಕ ತರಹದ ಸ್ವಾತಂತ್ರ್ಯ ನೀಡಲಾಗಿದೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಹದಿನೇಳನೆ ಶತಮಾನದ ಉತ್ತರಾರ್ಧದಲ್ಲಿ ಸಂಯುಕ್ತ ಅಮೇರಿಕದ ಘೋಷಣೆ ಹಾಗೂ ಫ್ರಾನ್ಸಿನ ವಿಪ್ಲವದಲ್ಲಿ ಅಡಕವಾದ ತತ್ವಗಳಾದ ಸಾಮಾನ್ಯ ಹಕ್ಕುಗಳು, ಸಮಾನತೆ ಹಾಗೂ ಭ್ರಾತೃತ್ವ. ಹಕ್ಕುಗಳಲ್ಲಿ ಮುಖ್ಯವಾಗಿ ಎರಡು ವಿಧ. ರಾಜಕೀಯ ಹಕ್ಕು ಮತ್ತು ನಾಗರಿಕ ಹಕ್ಕು. ನ್ಯಾಯ, ಕರತೆರಿಗೆ ಸಾರ್ವಜನಿಕ ನೇಮಕಾತಿಯಲ್ಲಿ ಸಮಾನ ಅವಕಾಶ ಇತ್ಯಾದಿ ಸ್ವಾತಂತ್ರ್ಯಗಳು ಸಮಾನತೆಯ ತತ್ವದಲ್ಲಿ ಅಡಕವಾಗಿವೆ. ಭ್ರಾತೃತ್ವ ಎಂಬ ತತ್ವ ಸಹಕಾರಿ ರೂಪದಲ್ಲಿದೆ. ಒಂದೇ ಮೂಲದಿಂದ ಬರುವ ಸೌಲಭ್ಯವನ್ನು ಸಮನಾಗಿ ಹಂಚಿಕೊಳ್ಳುವುದು(ಶಿಕ್ಷಣ, ಆರೋಗ್ಯ, ರಕ್ಷಣೆ ಇತ್ಯಾದಿ). ಮುಂದುವರಿದು ಈ ತತ್ವದಲ್ಲಿ ಭಾವನಾತ್ಮಕ ಬೆಸುಗೆ ಇದೆ. ಒಂದೇ ನೆಲ, ಜಲ, ವಾಯು ಬಳಸುವ ನಾವೆಲ್ಲರೂ ಒಂದೇ ಎಂಬ ಭಾವನೆಗೆ ಒತ್ತು ಹಾಗೂ ವೈಯಕ್ತಿಕ ಘನತೆ ಹಾಗೂ ದೇಶದ ಸಮಗ್ರತೆ ಈ ಭ್ರಾತೃತ್ವದಲ್ಲಿ ಒಳಗೊಂಡಿದೆ ಎಂಬ ಸೂಚನೆ ಸಂವಿಧಾನದ ಪ್ರಸ್ತಾವನೆಯಲ್ಲಿಯೇ ಉಲ್ಲೇಖಿಸಲ್ಪಟ್ಟಿದೆ.
ಪರಿಚ್ಛೇದ 25(1) ಸಾರ್ವಜನಿಕ ಆರೋಗ್ಯ, ನೈತಿಕತೆ ಹಾಗೂ ಸಾಮಾಜಿಕ ಶಿಸ್ತಿಗೆ ಧಕ್ಕೆಯಾಗದ ಹಾಗೆ ಪೌರನೋರ್ವ ತನ್ನ ಆತ್ಮಸಾಕ್ಷಿಗೆ ತಕ್ಕಂತೆ ಧರ್ಮಾವಲಂಬನೆ, ಆಚರಣೆ ಹಾಗೂ ಪ್ರಚಾರ ನಡೆಸಲು ಸ್ವಾತಂತ್ರ್ಯವುಳ್ಳವನಾಗಿದ್ದಾನೆ ಎಂದು ಹೇಳುತ್ತದೆ. ಅಂದರೆ ವಿವಿಧ ಜಾತಿ, ಮತ ಹಾಗೂ ಧರ್ಮಾಚರಣೆಗಳಿಗೆ ಅವಕಾಶವಿದೆ ಮತ್ತು ಸ್ವಧರ್ಮವನ್ನು ತ್ಯಜಿಸಿ ಪರಧರ್ಮವನ್ನು ಸ್ವೀಕರಿಸುವ ಸ್ವಾತಂತ್ರ್ಯವೂ ಇದೆ ಎಂದರ್ಥ. ಸಂವಿಧಾನದ ಪ್ರಸ್ತಾವನೆಯಲ್ಲಿ ಘೋಷಿಸಿದ ಈ ಸ್ವಾತಂತ್ರ್ಯಕ್ಕೆ ಆರ್ಟಿಕಲ್ 25(1)ರಲ್ಲಿ ಚಾಲನೆ ದೊರೆಯುತ್ತದೆ. ಹಾಗಾದರೆ ಈ ವಿಚಾರದಲ್ಲಿ ಸರ್ಕಾರದ ನಿಲುವೇನು ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ, ಸರ್ಕಾರ ಧರ್ಮ ನಿರಪೇಕ್ಷ-ತಟಸ್ಥ (Neutral). ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾದರೆ ಮಾತ್ರ ಸರ್ಕಾರ ಹಸ್ತಕ್ಷೇಪ ಮಾಡಬಹುದಷ್ಟೇ.
ನಮ್ಮ ಸಂವಿಧಾನದ ಮೂಲ ಪ್ರಸ್ತಾವನೆಯಲ್ಲಿ ಸೆಕ್ಯುಲರ್ ಎಂಬ ಪದ ಇಲ್ಲ. ಸೆಕ್ಯುಲರ್ ಮತ್ತು ಸೋಷಿಯಲಿಸ್ಟ್ ಎಂಬೀ ಪದ ಪುಂಜಗಳನ್ನು ತುರ್ತು ಪರಿಸ್ಥಿತಿಯ ಅವಧಿಯಲ್ಲಿ 42ನೇ ಸಂವಿಧಾನ ತಿದ್ದುಪಡಿಯ ಮೂಲಕ ಸೇರಿಸಲಾಯಿತು. ಇವುಗಳ ಸೇರ್ಪಡೆಯ ನಂತರವೂ ಪರಿಚ್ಛೇದ 14, 19, 21 ಹಾಗೂ 25(1)ರಲ್ಲಿ ದತ್ತವಾದ ಎಲ್ಲ ಸ್ವಾತಂತ್ರ್ಯವೂ ಅಬಾಧಿತವಾಗಿದೆ. ಬದಲಾವಣೆ ಏನೂ ಇರುವುದಿಲ್ಲ. ಅರ್ಥಾತ್, ಈ ಪದಗಳ ಸೇರ್ಪಡೆ ಇಲ್ಲದೆಯೂ ಸಕಲ ಸ್ವಾತಂತ್ರ್ಯವನ್ನು ಹಾಗೂ ಸಮಾನತೆಯನ್ನು ಅನುಭವಿಸಲು ಆತಂಕವಿದ್ದಿಲ್ಲ. ಹಾಗಾದರೆ ಯಾಕೆ ಈ ಪದಗಳನ್ನು ಸೇರ್ಪಡೆ ಮಾಡಿದರು? 1977ರಲ್ಲಿ ಅಧಿಕಾರಕ್ಕೆ ಬಂದ ಜನತಾ ಸರಕಾರ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ತರಲಾದ 42ನೇ ತಿದ್ದುಪಡಿಯ ಅಪಸವ್ಯಗಳನ್ನು ತೊಡೆದು ಹಾಕಲು ಒಂದು ಸಮಿತಿಯನ್ನು ರಚಿಸಿತ್ತು. ಸದ್ರಿ ಸಮಿತಿ ಸೆಕ್ಯುಲರ್ ಮತ್ತು ಸೋಷಿಯಲಿಸ್ಟ್ ಎಂಬ ಪದಗಳನ್ನು ಸಂವಿಧಾನದ ಪ್ರಸ್ತಾವನೆಯಿಂದ ಕೈ ಬಿಡಲು ಪ್ರಸ್ತಾಪಿಸಿತ್ತಾದರೂ ಆ ಶಬ್ದಗಳಿಗೆ ಅಂಟಿಕೊಂಡ ಭಾವನಾತ್ಮಕ ಅಂಶದಿಂದ ಹಾಗೆಯೇ ಬಿಡಲಾಯ್ತು. ಅವುಗಳು ಇಲ್ಲದೆಯೂ ಸಮಾನತೆಯನ್ನು ಪ್ರತಿಪಾದಿಸಲು ಸಾಕಷ್ಟು ಅಂಶಗಳನ್ನು ನಮ್ಮ ಸಂವಿಧಾನದಲ್ಲಿ ಆಗಲೇ ಪ್ರತಿಷ್ಠಾಪಿಸಲಾಗಿದೆ.
ಸಂವಿಧಾನದ 42ನೇ ತಿದ್ದುಪಡಿಯ ಮೂಲಕ ಚಾಲ್ತಿಗೆ ಬಂದ ಈ ಜಾತ್ಯತೀತ ಪದದ ಮೂಲ ಎಲ್ಲಿ ಎಂಬುದರ ಚರ್ಚೆ ಇಲ್ಲಿ ಅಪ್ರಸ್ತುತವಾಗಲಾರದು. ಇದು ನಮ್ಮಲ್ಲಿಗೆ ಐರೋಪ್ಯ ದೇಶಗಳಿಂದ ಆಮದಾದುದು. ಅಲ್ಲಿ ಪ್ರಜಾಡಳಿತವನ್ನು ಚರ್ಚ್‌ನಿಂದ ಬೇರ್ಪಡಿಸಲು ನಡೆಸಿದ ಧೀರ್ಘಕಾಲದ ರಕ್ತ ಸಿಕ್ತ ಹೋರಾಟದ ಬಳಿಕ ಫ್ರಾನ್ಸ್ ಪ್ರಪ್ರಥಮ ಬಾರಿಗೆ ಜಾತ್ಯತೀತವಾಯ್ತು. ಅಂದರೆ ಆಡಳಿತವನ್ನು ಧರ್ಮದಿಂದ ಬೇರ್ಪಡಿಸುವುದು ಮುಖ್ಯ ಗುರಿ. ಭಾರತದಲ್ಲಿಯೂ ಆಡಳಿತ, ಧರ್ಮದಿಂದ ವಿರಹಿತವಾಗಿರತಕ್ಕದ್ದೆಂಬುದು ಆಶಯ. ಭಾರತದಲ್ಲಿ ಪುರಾತನ ಕಾಲದಿಂದಲೂ, ಪೌರೋಹಿತ್ಯಶಾಹಿ ಆಡಳಿತವಿರಲೇ ಇಲ್ಲ. ಆ ಮಾತು ಬೇರೆ. ಹಾಗಾಗಿ ಈ ಜಾತ್ಯತೀತ ಅಥವಾ ಸೆಕ್ಯುಲರ್ ಎಂಬ ಪದ 'ಆಡಳಿತವು ಧರ್ಮ ನಿರಪೇಕ್ಷ' ಎಂಬುದನ್ನು ಮಾತ್ರ ಸೂಚಿಸುತ್ತದೆ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಅಂದರೆ ಆಡಳಿತ ಕ್ಷೇತ್ರದಲ್ಲಿ ಎಲ್ಲರೂ ಸಮಾನರು ಹಾಗೂ ಎಲ್ಲರಿಗೂ ಸಮಾನ ಅವಕಾಶ ಎಂಬುದನ್ನು ಹೇಳುತ್ತದೆ. ಈ ನೆಲೆಯಲ್ಲಿ ಒಂದು ದಿನ ತುರ್ತು ರಜೆ ಹಾಕಿ ವಿಮಾನದಲ್ಲಿ  ಪಿತೃಶ್ರಾದ್ಧ ಪೂರೈಸಿ ಹೋಗುವ ವಿಜ್ಞಾನಿ, ಮನೆಯೊಳಗೆ ಯಾರನ್ನು ಸೇರಿಸಿಕೊಳ್ಳದೆ ಮೂಗು ಮುಚ್ಚಿಕೊಂಡು ಕಡು ವ್ರತಾಚರಣೆಯಲ್ಲಿ ನಿರತನಿರುವ ಬ್ರಾಹ್ಮಣ ಹಾಗೂ ಶೆಟ್ಟಿ, ಯಕ್ಷಗಾನ ಬಳಗ ಎಂಬ ಖಾಸಗಿ ಸಂಘಟನೆ ರಚಿಸಿಕೊಳ್ಳುವವರೆಲ್ಲ ಸೆಕ್ಯುಲರ್ ಅಲ್ಲ ಅಂತಲ್ಲ.
ಇತ್ತೀಚೆಗೆ ಇಂಗ್ಲಿಷ್ ಚಾನಲ್ ಒಂದರಲ್ಲಿ ಮಿಂಚಿದ ಒಂದು ಸಾಲು ಹೀಗಿದೆ. Hindu Nationalist -an Oxymoron- ಹಿಂದು ರಾಷ್ಟೀಯತೆಯ ಪ್ರತಿಪಾದಕ ಒಂದು ವಿರೋಧಾಭಾಸ. ಓರ್ವ ವಿದ್ವಾಂಸ ಹೇಳುತ್ತಾನೆ  In India no Hindu Nationalist, but Indian. ಅಂದರೆ ಆತ ಕೇವಲ ಭಾರತೀಯ, ಹಾಗಾದರೆ ಭಾರತಕ್ಕೆ ಒಂದು ಸಾಂಸ್ಕೃತಿಕ ಗುರುತು ಇಲ್ಲವೇ? ಭಾರತೀಯರಲ್ಲಿ ಶೇಕಡಾ 80ರಷ್ಟು ಮಂದಿ ಹಿಂದುಗಳು. ಅವರಿಗೆ ಹಸು ಪೂಜ್ಯನೀಯ, ಪವಿತ್ರ ಪ್ರಾಣಿ. ಈ ಪೂಜೆ ಹಾಗೂ ಗೋಪಾಲನೆಗೆ ಸಂವಿಧಾನದಲ್ಲಿ ನಿರ್ಬಂಧವಿಲ್ಲ. ವಿಶ್ವವೇ ಒಪ್ಪಿಕೊಳ್ಳುತ್ತದೆ. ಅಂಥ ಒಬ್ಬ ಗೋಪಾಲಕ ತಾನು ಹಿಂದು ಆದರೆ, 'ರಾಷ್ಟ್ರೀಯವಾದಿ' ಎಂದರೆ ಸೆಕ್ಯುಲರ್ ತತ್ವಕ್ಕೆ ವಿರೋಧವಾದೀತೇ?
ಸಂಸ್ಕೃತ ಭಾರತಿ ಮತ್ತು ಬೊಮ್ಮಾಯಿ ಪ್ರಕರಣಗಳಲ್ಲಿ ಸೆಕ್ಯುಲರ್ ಪದಕ್ಕೆ ವಿಸ್ತ್ರತವಾದ ವ್ಯಾಖ್ಯಾನವನ್ನು ಸರ್ವೋಚ್ಚ ನ್ಯಾಯಾಲಯ ನೀಡಿದೆ. ಸಂಸ್ಕೃತ ಕಲಿಸುವುದು ಸೆಕ್ಯುಲರ್ ತತ್ವಕ್ಕೆ ವಿರೋಧವಾಗುತ್ತದೆ ಎಂಬ ಭಾರತ ಸರ್ಕಾರದ ವಾದವನ್ನು ಸ್ಪಷ್ಟ ಪದಗಳಲ್ಲಿ ತಳ್ಳಿ ಹಾಕಿದ ನ್ಯಾಯಾಲಯ ಭಾರತದ ಭವ್ಯ ಪರಂಪರೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಅಗತ್ಯವಾದ ಸಂಸ್ಕೃತ ಕಲಿಕೆ ಸೆಕ್ಯುಲರ್ ಸಿದ್ಧಾಂತಕ್ಕೆ ವಿರೋಧವಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದೆ. ಆದರೆ ಈಗ ಶಾಲೆಗಳಲ್ಲಿ ಗಾಯತ್ರಿ ಮಂತ್ರವನ್ನು ಇಚ್ಛೆಯುಳ್ಳವರು ಪಠಿಸಲಿ ಎಂತ ಹೇಳಿದರೂ ಕೇಸರಿಕರಣವಾಗುತ್ತದೆ! ಅದು ಜಾತ್ಯತೀತ ತತ್ವಕ್ಕೆ ವಿರೋಧ ಎಂದು ಬೊಬ್ಬೆ ಹೊಡೆಯುವವರು ಇದ್ದಾರೆ. ಹಾಗಾಗಿ ಈ ಪದ ಅದರ ಅಂತರ್ಗತ ಧ್ಯೇಯಕ್ಕೆ ತಕ್ಕುದಾಗಿ ಬಳಕೆಯಾಗುತ್ತಿಲ್ಲ ಎನ್ನದೆ ವಿಧಿಯಿಲ್ಲ.
ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ 42ನೇ ಸಂವಿಧಾನದ ತಿದ್ದುಪಡಿಯ ಮೂಲಕ ಸೇರ್ಪಡೆಗೊಳಿಸಿದ ಸೆಕ್ಯೂಲರ್ ಪದ ರಾಜಕೀಯ ಪಕ್ಷಗಳು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಲು ಅವಕಾಶ ಕಲ್ಪಿಸಿಕೊಟ್ಟಿತು. ಕೆಲವು ಪಕ್ಷಗಳು ಅಲ್ಪಸಂಖ್ಯಾತರ ಪಾಲಿಗೆ ವೆಟೋ (ಆಡಳಿತಾತ್ಮಕ ನಿರ್ದೇಶನವನ್ನು ತಿರಸ್ಕರಿಸಬಹುದಾದ ವಿಶೇಷ ಸಾಂವಿಧಾನಿಕ ಹಕ್ಕು) ಎಂದು ವ್ಯಾಖ್ಯಾನಿಸಿದರೆ ಕೆಲವು ಪಕ್ಷಗಳು ತಮಗೆ ಒಪ್ಪಿಗೆಯಾಗದ ವಿಚಾರಗಳಲ್ಲೆಲ್ಲಾ ಅದು ಸೆಕ್ಯುಲರ್ ತತ್ವಕ್ಕೆ ವಿರುದ್ಧವಾದದ್ದು ಎಂದು ವಾದಿಸಲಾರಂಭಿಸಿದವು. ಇನ್ನು ಕೆಲವು ಪಕ್ಷಗಳು ಇದು ಧರ್ಮಕ್ಕೆ ವಿರುದ್ಧವಾದ ತತ್ವ ಎಂದು ನಂಬಿವೆ. ಯಾವುದು ಸರಿ? ನಮ್ಮ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ, ಅಘ್ಘಾನಿಸ್ತಾನ, ಇರಾನ್, ಇರಾಕ್ ಇತ್ಯಾದಿ ದೇಶಗಳು ಇಸ್ಲಾಮಿಕ್ ರಿಪಬ್ಲಿಕ್ ಎಂದು ಘೋಷಿಸಲ್ಪಟ್ಟಿವೆ. ನಮ್ಮ ದೇಶದಲ್ಲಿ ಶೇಕಡಾ 80ರಷ್ಟು ಹಿಂದುಗಳಿದ್ದರೂ ನಮ್ಮದು ಹಿಂದು ರಾಷ್ಟ್ರವೆಂದು ಘೋಷಿಸಲ್ಪಟ್ಟಿಲ್ಲ. ಬದಲು ಸಮಾನತೆಯ ತತ್ವದಡಿಯಲ್ಲಿ ಸೋಷಿಯಲಿಸ್ಟ್, ಸೆಕ್ಯುಲರ್ ಡೆಮಾಕ್ರೆಟಿಕ್, ರಿಪಬ್ಲಿಕ್ ಎಂದು ಘೋಷಿಸಿಕೊಂಡಿದ್ದೇವೆ. ಅಂದ ಮಾತ್ರಕ್ಕೆ ಈ ಸೆಕ್ಯುಲರ್ ಪದ ಭಾರತದ ಸಹಸ್ರಾರು ವರ್ಷದ ಸಂಸ್ಕೃತಿಯನ್ನು ಅಳಿಸಬಲ್ಲದೇ? ಹಾಗಾದರೆ ಅದರ ಪ್ರಭಾವ, ವ್ಯಾಪ್ತಿ ಹಾಗೂ ಅನ್ವಯ ಹೇಗಿರಬೇಕೆಂಬುದರ ಸ್ಪಷ್ಟ ಪರಿಕಲ್ಪನೆ ನಮಗೀಗ ಅತೀ ಅಗತ್ಯವಾಗಿ ಬೇಕಾಗಿದೆ.

 ಬೇಳೂರು ರಾಘವ ಶೆಟ್ಟಿ
ಸಾಲಿಗ್ರಾಮ, ಉಡುಪಿ


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com