ಚುನಾವಣೆ ಅಥವಾ ಇನ್ನಿತರ ಯಾವುದೇ ವೇಳೆಯಲ್ಲಾಗಲಿ ಜಾತಿ ಅಥವಾ ಧರ್ಮವನ್ನೇ ತಮ್ಮ ನಡೆಯಲ್ಲಿ, ನುಡಿಯಲ್ಲಿ ಮತ್ತು ಆಚರಣೆಯಲ್ಲಿ ಪ್ರದರ್ಶಿಸುವ ಕಾಂಗ್ರೆಸ್ ಮತ್ತು ಇನ್ನಿತರ ಕೆಲವು ಪಕ್ಷಗಳು ಮೇಲ್ನೋಟಕ್ಕೇ ಕೋಮುವಾದಿಗಳೆಂದು ಸ್ಪಷ್ಟವಾಗಿ ಕಾಣಿಸಿದರೂ, ತಮ್ಮನ್ನು ತಾವು ಸೆಕ್ಯುಲರ್ ಎಂದು ಕರೆದುಕೊಳ್ಳುತ್ತವೆ. ಆದರೆ ತಮ್ಮ ನಡೆ, ನುಡಿಗಳಲ್ಲಿ ರಾಷ್ಟ್ರೀಯವಾದಿಗಳಾದ ಮತ್ತು 'ದೇಶವೇ ಮೊದಲು' ಎನ್ನುವ ಸಿದ್ಧಾಂತಕ್ಕೆ ಕಟಿಬದ್ಧರಾದ ವ್ಯಕ್ತಿಗಳಿಗೆ ಅಥವಾ (ಬಿಜೆಪಿಯಂಥ)ಪಕ್ಷಗಳಿಗೆ 'ಕೋಮುವಾದಿ' ಎಂಬ ಹಣೆಪಟ್ಟಿ ಕಟ್ಟುತ್ತವೆ. ಹೀಗೆ ಮಾಡುವುದರಿಂದ ರಾಜಕೀಯವಾಗಿ ತಮಗೆ ಲಾಭವಾಗುತ್ತದೆ ಎನ್ನುವುದು ಅವುಗಳಿಗೆ ಚೆನ್ನಾಗಿ ಗೊತ್ತು.
ನನ್ನ ಮಾತಿಗೆ ಪೂರಕವಾಗಿ ಎರಡು ನಿರ್ವಿವಾದ ಅಂಶಗಳನ್ನು ನಿಮ್ಮ ಮುಂದಿಡಲು ಬಯಸುತ್ತೇನೆ.
1)ನಿರ್ವಿವಾದವಾಗಿಯೂ ಜಾತ್ಯತೀತತೆ ಮತ್ತು ಸಮಾನತೆ ನಮ್ಮ ಸಂವಿಧಾನದ ಪ್ರಮುಖ ಆಧಾರ ಸ್ತಂಭಗಳು. ಸಂವಿಧಾನದ ಅನುಚ್ಛೇದ 14 ಮತ್ತು 15ರಲ್ಲಿ ಅವುಗಳನ್ನು ಅಳವಡಿಸಲಾಗಿದೆ. ಅನುಚ್ಛೇದ 14, ಎಲ್ಲರಿಗೂ ಸಮಾನ ಅವಕಾಶ, ಸಮಾನ ಭದ್ರತೆ ಸಿಗಬೇಕೆಂಬುದರ ಬಗ್ಗೆ ಹೇಳುತ್ತದೆ. ನಿರಾಕರಣೆ ಅಥವಾ ತಾರತಮ್ಯಕ್ಕೆ ಅವಕಾಶವನ್ನು ಅದು ಕಲ್ಪಿಸುವುದಿಲ್ಲ. ಇನ್ನು ಈ ಆದೇಶವನ್ನು ನಿರ್ದಿಷ್ಟವಾಗಿ ಉಲ್ಲೇಖಿಸುತ್ತದೆ ಅನುಚ್ಛೇದ 15. ಧರ್ಮ, ಜನಾಂಗ, ಜಾತಿ, ಲಿಂಗ, ಹುಟ್ಟಿದ ಸ್ಥಳ ಅಥವಾ ಇನ್ಯಾವುದೇ ರೀತಿಯ ತಾರತಮ್ಯವನ್ನು ಅದು ನಿಷೇಧಿಸುತ್ತದೆ.
ಇವೆರಡರ ಜೊತೆಗೆ ಅನುಚ್ಛೇದ 44ನ್ನು ಓದಿದಾಗ, ಜಾತ್ಯತೀತತೆಯ ಅಡಿಪಾಯದಲ್ಲಿ ಏಕರೂಪ ನಾಗರಿಕ ನೀತಿಸಂಹಿತೆಯನ್ನು ಜಾರಿಗೆ ತರಬೇಕು ಎಂದು ಅವು ಸರ್ಕಾರಕ್ಕೆ ಆದೇಶಿಸುತ್ತವೆ. ಶಹಬಾನು ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಸಮಿತಿ, 'ಅನುಚ್ಛೇದ 44ನ್ನು ಜಾರಿಗೊಳಿಸದ ಹೊರತು, ಸಂವಿಧಾನ ನಿಷ್ಕ್ರಿಯವಾಗೇ ಉಳಿಯಲಿದೆ' ಎಂದು ಹೇಳಿತ್ತು. ನ್ಯಾಯಾಲಯ ಹೀಗೆ ಹೇಳಲು, ಮುಸ್ಲಿಂ ಕಾನೂನೇ ಕಾರಣ. ಮುಸ್ಲಿಂ ಖಾಸಗಿ ಕಾನೂನು ಕಣ್ಣಿಗೆ ಕಾಣುವಷ್ಟು ನಿರ್ಭಿಡೆಯಿಂದ ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಸುತ್ತದೆ. ಆ ಕಾನೂನಿನ ಪ್ರಕಾರ ಮುಸ್ಲಿಂ ಪುರುಷನೊಬ್ಬ 4 ಪತ್ನಿಯರನ್ನು ಹೊಂದಬಹುದು. ಅಲ್ಲದೆ ತನಗಿಷ್ಟವಾದಾಗ ಆ ನಾಲ್ಕೂ ಪತ್ನಿಯರಿಗೆ ಆತ ವಿಚ್ಛೇದನ ನೀಡಬಹುದಾಗಿದೆ. ಆದರೂ ಕೂಡ, ಅನುಚ್ಛೇದ 44ರ ಅಡಿಯಲ್ಲಿ ಏಕರೂಪ ನಾಗರಿಕ ನೀತಿಸಂಹಿತೆಯನ್ನು ಜಾರಿಗೆ ತರಬೇಕು ಎನ್ನುವವರನ್ನು ಕೋಮುವಾದಿಯೆಂದೂ, ಜಾರಿಗೆ ತರಬಾರದು ಎನ್ನುವವರನ್ನು ಜಾತ್ಯತೀತರೆಂದೂ ಕರೆಯಲಾಗುತ್ತದೆ!
2)ಅನುಚ್ಛೇದ 15ರ ಆದೇಶದ ಹೊರತಾಗಿಯೂ, ಪ್ರತ್ಯೇಕ ಮುಸ್ಲಿಂ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಮುಂದಾಗುವ ಕೋಮುವಾದಿಗಳನ್ನು ಜಾತ್ಯತೀತರೆಂದೂ, ಅಂಥ ಧಾರ್ಮಿಕ ವಿ.ವಿ.ಗಳ ಸ್ಥಾಪನೆಯನ್ನು ವಿರೋಧಿಸುವವರನ್ನು 'ಜಾತ್ಯತೀತತೆಯ ವಿರೋಧಿ'ಗಳೆಂದು ಕರೆಯಲಾಗುತ್ತಿದೆ.
3)ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಮುಸಲ್ಮಾನರ ಶಿಕ್ಷಣ, ಸ್ಕಾಲರ್ಶಿಪ್ ಮತ್ತು ಬ್ಯಾಂಕಿಂಗ್ಗಾಗಿ ಪ್ರತ್ಯೇಕ ಬಜೆಟ್ ಮಂಡಿಸುವ ಮಾತನಾಡಿ ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಅನುಚ್ಛೇದ 14 ಮತ್ತು 15ರ ಪ್ರಕಾರ ಅದು ಜಾತ್ಯತೀತತೆ ವಿರೋಧಿ ನಡೆ.
4) ಕೇಂದ್ರದ ಅಲ್ಪಸಂಖ್ಯಾತ ಸಚಿವರು ತಾವು ಮಂತ್ರಿಯಾದ ದಿನದಂದೇ, 'ದೇಶದಲ್ಲಿ ಐದು ಮುಸ್ಲಿಂ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದಾಗಿ' ಘೋಷಣೆ ಮಾಡಿದರು. ಆದರೂ ಅವರನ್ನು ಸೆಕ್ಯುಲರ್ ಎಂದು ಕರೆಯಲಾಯಿತು. ಸುದೈವವಶಾತ್ ಸಾಂವಿಧಾನಿಕವಾಗಿ ಸಾಧ್ಯವಿಲ್ಲದ/ಸಾಧುವಲ್ಲದ ಇಂಥ ಯೋಜನೆಯನ್ನು ಥೋರಟ್ ಸಮಿತಿ ಸ್ಪಷ್ಟವಾಗಿ ತಳ್ಳಿಹಾಕಿದೆ. ಜಾತ್ಯತೀತತೆ ಎನ್ನುವುದು ಭಾರತದ ರಾಜಧರ್ಮದ ಅಂಗವಾಗಿತ್ತು. ಅನಾದಿಕಾಲದಿಂದಲೂ ಇದು ನಮ್ಮ ಮಾತೃಭೂಮಿಯಲ್ಲಿ ಅನುಷ್ಠಾನದಲ್ಲಿದೆ. ಸಂಸ್ಕೃತ ಶ್ಲೋಕವೊಂದರಲ್ಲಿ ಈ ಕುರಿತು ಹೀಗೆ ಹೇಳಲಾಗಿದೆ:
"ಶಂಡನೈಗಮಶ್ರೇಣೀಪೂಗವ್ರಾತಗಣಾಧಿಷು/ ಸಂರಕ್ಷೇತ್ಸಮಯಂ ರಾಜಾ ದುರ್ಗೇ ಜನಪದೇ ತಥಾ" (ಹೇಗೆ ರಾಜ ಅಥವಾ ಸರ್ಕಾರಕ್ಕೆ ತನ್ನ ಕೋಟೆಯನ್ನು ಅಥವಾ ಕ್ಷೇತ್ರವನ್ನು ರಕ್ಷಿಸುವ ಜವಾಬ್ದಾರಿಯಿರುತ್ತದೋ ಅದೇ ರೀತಿಯಲ್ಲಿ ವೇದಗಳಲ್ಲಿ ನಂಬಿಕೆಯಿರುವವರನ್ನು(ನೈಗಮಾ), ನಂಬಿಕೆಯಿಡದವರನ್ನು(ಪಾಶಂಡಿ) ಮತ್ತು ಇನ್ನಿತರರನ್ನೂ ರಕ್ಷಿಸುವ ಜವಾಬ್ದಾರಿಯೂ ಇರುತ್ತದೆ.)
ಈ ಅತಿ ಪುರಾತನ ಹೇಳಿಕೆ, ವೇದಗಳೇ ಸರ್ವೋತ್ತಮವೆಂದು ಭಾವಿಸಲಾಗುತ್ತಿದ್ದ ಸಮಯದಲ್ಲಿಯೂ ಕೂಡ 'ವೇದಗಳಲ್ಲಿ ನಂಬಿಕೆಯಿಲ್ಲದವರನ್ನೂ ಗೌರವಿಸಬೇಕು' ಎಂದು ಹೇಳಿದವು. ಹಾಗಾಗೇ ಧರ್ಮ ಅಥವಾ ಹಿಂದುತ್ವ ಎನ್ನುವುದು ಜಾತ್ಯತೀತತೆಯ ಸರ್ವಶ್ರೇಷ್ಠ ನೆಲೆಯಾಗಿದೆ.
'ಮೈ ಪಿಕ್ಚರ್ ಆಫ್ ಫ್ರೀ ಇಂಡಿಯಾ' ಎನ್ನುವ ಪುಸ್ತಕದಲ್ಲಿ ಮಹಾತ್ಮಾ ಗಾಂಧಿಯವರು,'ಸ್ವತಂತ್ರ ಭಾರತದಲ್ಲಿ ಅಲ್ಪಸಂಖ್ಯಾತರು ಎಂದು ಕೆಲವರನ್ನು ವಿಂಗಡಿಸುವುದು ಸಹ್ಯವಲ್ಲ, ಏಕೆಂದರೆ ಎಲ್ಲರೂ ಭಾರತ ಮಾತೆಯ ಮಕ್ಕಳೇ' ಎಂದು ಹೇಳುತ್ತಾರೆ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ಹೇಗೆ ನಮ್ಮ ಆಧುನಿಕ ಕಾನೂನಿನಲ್ಲಿ ಕ್ರಮರಾಹಿತ್ಯವನ್ನು ಶತ್ರುವೆಂದು ಪರಿಗಣಿಸಲಾಗುತ್ತದೆಯೋ ಅದೇ ರೀತಿಯಲ್ಲಿ ನಮ್ಮ ಪುರಾತನ ರಾಜಧರ್ಮದಲ್ಲಿ ಮೂಲಭೂತವಾದವನ್ನು ಶತ್ರುವೆಂಬಂತೆ ಪರಿಗಣಿಸಲಾಗುತ್ತಿತ್ತು. ಹೇಗೆ ಬೆಳಕಿದ್ದಲ್ಲಿ ಕತ್ತಲಿರುವುದಿಲ್ಲವೋ ಹಾಗೆಯೇ ಧರ್ಮ ಅಥವಾ ಹಿಂದುಧರ್ಮವಿರುವಲ್ಲಿ ಮೂಲಭೂತವಾದವೆಂಬ ಕತ್ತಲು ಇರುವುದಿಲ್ಲ. ಇದೇ ಕಾರಣಕ್ಕಾಗಿಯೇ ನಮ್ಮ ಸಂವಿಧಾನ, ಅನುಚ್ಛೇದ 25ರ ಮೂಲಕ ಎಲ್ಲರೂ ತಮಗೆ ಇಷ್ಟವಿರುವ ಧರ್ಮವನ್ನು ಆಚರಿಸುವುದಕ್ಕೆ ಅನುಕೂಲಮಾಡಿಕೊಟ್ಟಿದೆ. ಹಾಗಾಗೇ ಧರ್ಮವೆನ್ನುವುದು ಭಾರತದ ರಾಷ್ಟ್ರೀಯತೆ, ಜಾತ್ಯತೀತತೆಯ ಮತ್ತು ನಮ್ಮ ಸಂವಿಧಾನದ ಆತ್ಮ. ಅದನ್ನು ಅವುಗಳಿಂದ ದೂರಮಾಡುವುದಕ್ಕೆ ಸಾಧ್ಯವೇ ಇಲ್ಲ.
ಹಿಂದುಧರ್ಮವನ್ನು ಆಚರಿಸುವವರನ್ನು ಸೆಕ್ಯುಲರ್ ವಿರೋಧಿ ಎಂದು ಟೀಕಿಸುವುದು ನಿಜಕ್ಕೂ ಹಾದಿ ತಪ್ಪಿಸುವ ನಡೆ. ಅವರು ಇಂಥ ವಿಭಜನಕಾರಿ ಮತ್ತು ಅಪಾಯಕಾರಿ ಪ್ರಚಾರವನ್ನು ಈಗಲೇ ಬಿಡಬೇಕು. ಭಾರತದ ಭವಿಷ್ಯಕ್ಕೆ ಜಾತ್ಯತೀತ ರಾಷ್ಟ್ರೀಯತೆಯೇ ಆಧಾರ ಸ್ತಂಭವಾಗಬಲ್ಲದು.
-ನ್ಯಾ. ಎಂ. ರಾಮಾಜೋಯಿಸ್
ರಾಜ್ಯಸಭಾ ಸದಸ್ಯರು
Advertisement