ಅಡ್ಡ ಪಲ್ಲಕ್ಕಿ ಉತ್ಸವ: ಇತಿಹಾಸ ಮತ್ತು ವಿಶ್ಲೇಷಣೆ

"ಪಲ್ಲಕ್ಕಿ"ಯ (ಸಂಸ್ಕೃತಿ. ಪಲ್ಯಾಂಕ. ಇಂಗ್ಲೀಷ್. Palnquim) ಮೇಲೆ ದೇವತಾಮೂರ್ತಿಯನ್ನು ಇಟ್ಟು ಅಥವಾ ಗುರುಗಳನ್ನೋ, ರಾಜ ರಾಣಿಯರನ್ನೋ ಕೂರಿಸಿ ಶ್ರದ್ಧೆಯಿಂದ ಮನುಷ್ಯರೇ ಹೊತ್ತು ಮೆರವಣಿಗೆಯಲ್ಲಿ ಕೊಂಡೊಯ್ಯುವ ಪದ್ಧತಿ ಹಿಂದೆ ಇತ್ತು; ಈಗಲೂ ಇದೆ.
ಅಡ್ಡ ಪಲ್ಲಕ್ಕಿ ಉತ್ಸವ: ಇತಿಹಾಸ ಮತ್ತು ವಿಶ್ಲೇಷಣೆ
Updated on

ಭಕ್ತರಿಗೆ ತಿಳಿ ಹೇಳಿ, ತಮ್ಮ "ಅಡ್ಡ ಪಲ್ಲಕ್ಕಿ" ಉತ್ಸವವನ್ನು ಕೈ ಬಿಡುವಂತೆ ಸೂಚಿಸುವುದು ಒಳ್ಳೆಯದು. ಇದರಿಂದ ಘರ್ಷಣೆಗಳು ತಪ್ಪುತ್ತವೆ. ಭಕ್ತರೂ "ಅಡ್ಡ ಪಲ್ಲಕ್ಕಿ" ಉತ್ಸವದ ಬದಲು ಕುದುರೆ ಗಾಡಿಯಲ್ಲಿ ಮೆರವಣಿಗೆ ಮಾಡಿ "ದರ್ಬಾರ್‌" ಬದಲು ಧರ್ಮ ಬೋಧನೆಯ ಅನುಭವ ಮಂಟಪವನ್ನು ವ್ಯವಸ್ಥೆ ಮಾಡಬೇಕು.

"ಪಲ್ಲಕ್ಕಿ"ಯ (ಸಂಸ್ಕೃತಿ. ಪಲ್ಯಾಂಕ. ಇಂಗ್ಲೀಷ್. Palnquim) ಮೇಲೆ ದೇವತಾಮೂರ್ತಿಯನ್ನು ಇಟ್ಟು ಅಥವಾ ಗುರುಗಳನ್ನೋ, ರಾಜ ರಾಣಿಯರನ್ನೋ ಕೂರಿಸಿ ಶ್ರದ್ಧೆಯಿಂದ ಮನುಷ್ಯರೇ ಹೊತ್ತು ಮೆರವಣಿಗೆಯಲ್ಲಿ ಕೊಂಡೊಯ್ಯುವ ಪದ್ಧತಿ ಹಿಂದೆ ಇತ್ತು; ಈಗಲೂ ಇದೆ. ಉದಾಹರಣೆಗೆ ಕ್ರಿ.ಶ. 1310ರ ಶಾಸನದಲ್ಲಿ ಈ ಮಾತಿದೆ-'ಆ ಭೈರಾದೇವಿಯೆಂಬ ಕುಮಾರತಿಯ ಪಲ್ಲಕ್ಕಿ ಯೊಳಗೆ ಇರಿಸಿ ಪನ್ನಂಗನಂ ಮುಚಿಳೋಡು ದಳ್ಳಿಯ ಸುರಿತಾನರ ಮನೆಗೆ ಕೊಂಡು ಹೋಗಿ ಆ ಸುರಿತಾನ ಮಹಾರಾಜರ ಮುಂದೆ ಪಲ್ಲಂಗಮುಂ ತೆರೆದು ತೋರಲಾಗಿ'. ಕಾವ್ಯಗಳಲ್ಲಿಯೂ ಅಂತಹುದೇ ಮಾತಿದೆ- 'ಪಲ್ಲಕ್ಕಿ ಮೇಲೇರಿ ರಾಯರ ದೇವ ಮೆಲ್ಲ ಮೆಲ್ಲನೆ ಪೋಗುತಿರಲು' (ಕನ್ನಡ ನಿಘಂಟು.  ಪು.ಐ 541). ವಚನಕಾರರಲ್ಲೂ ಗುರುಗಳು ಪಲ್ಲಕ್ಕಿಯನೇರುವರೆಯ......ಅವರಾನಂದವೇ ಎನ್ನಾನಂದ ಕಾಣಾ" (ಚನ್ನ ಬಸವಣ್ಣ ವಚನ ಸಂಪುಟIII  ವಿ. 1293).  ಆದರೆ ಗಮನಿಸಬೇಕಾದ ಸಂಗತಿಯೆಂದರೆ ಹಿಂದೆ ಎಲ್ಲಿಯೂ "ಅಡ್ಡಪಲ್ಲಕ್ಕಿ" ಉಲ್ಲೇಖ ಬಂದಿಲ್ಲ. ಅದರ ಮೊದಲ ಉಲ್ಲೇಖ, ಕನ್ನಡ ನಿಘಂಟು ಪ್ರಕಾರ ವಿರೂಪಾಕ್ಷ ಶಾಸ್ತ್ರಿಗಳ (1888-1960) "ಶ್ರೀ ಜಗದ್ಗುರು ಪಂಚ ಪೀಠಗಳ ಪರಿಚಯ" (1953) ಎಂಬ ಕೃತಿಯಲ್ಲಿ : ಇದು ಕನ್ನಡ ನಿಘಂಟುವಿನಲ್ಲಿ ದಾಖಲಾಗಿರುವಂತೆ. ಆದರೆ 1900ರಿಂದ ಅದರ ಉಲ್ಲೇಖ ಆರಂಭವಾಗಿರುವುದಕ್ಕೆ ಸ್ಪಷ್ಟ ದಾಖಲೆಗಳಿವೆ (ಮುಂದೆ ನೋಡಿ).
 "ಪಲ್ಲಕ್ಕಿ" ಎಂಬುದು ಇಬ್ಬರು ಅಥವಾ ನಾಲ್ವರು ಹಿಂದೆ, ಮುಂದೆ ಹೊರುವ ಚೌಕಾಕಾರದ ಮರದ ಪೆಟ್ಟಿಗೆ- ಅದರ ಮೇಲೆ ಬೇಕಾದರೆ ಬಾಗಿರುವ ಒಂದು ಕಂಬಿ ಇರುತ್ತದೆ. ಅದನ್ನು ಊರಿನ ಬೀದಿಗಳಲ್ಲಿ ಹೊತ್ತು ಒಯ್ದರೆ ಅಕ್ಕಪಕ್ಕದಲ್ಲಿ ಜನಗಳು ಓಡಾಡಬಹುದು. ಅದನ್ನೇ ಅಡ್ಡಡ್ಡಲಾಗಿ ಹಿಡಿದರೆ, ಅಕ್ಕಪಕ್ಕದಲ್ಲಿ ಅಥವಾ ಎಡ ಬಲ ಭಾಗಗಳಲ್ಲಿ ಇಬ್ಬರು ಅದನ್ನು ಹೊತ್ತೊಯ್ದರೆ ಆ ಕಡೆ ಈ ಕಡೆ ದಾರಿ ಕಿರಿದಾಗುತ್ತದೆ. ಇದು "ಪಲ್ಲಕ್ಕಿ", "ಅಡ್ಡ ಪಲ್ಲಕ್ಕಿ"ಗಳಿಗೆ ಇರುವ ಸ್ಥೂಲ ವ್ಯತ್ಯಾಸ.
"ಅಡ್ಡ ಪಲ್ಲಕ್ಕಿ"ಗೆ ಮೆರವಣಿಗೆಯಲ್ಲಿ "ಪಲ್ಲಕ್ಕಿ"ಗಿಂತ ಹೆಚ್ಚಿನ ಸ್ಥಾನಮಾನ ಯಾವಾಗ, ಹೇಗೆ ದೊರೆಯಿತೆಂಬುದು ನಿಗೂಢವಾಗಿದೆ. ಆದರೆ ಅದು ಆಚರಣೆಗೆ ಬಂದುದು ಕ್ರಿ.ಶ. 1867ರಿಂದ ಈಚೆಗೆ ಎಂಬುದು ಸ್ಪಷ್ಟಾತಿ ಸ್ಪಷ್ಟ.
1868 ಜುಲೈ 27 (27.7.1868) ನ ಶೃಂಗೇರಿ ಮಠದ ದಾಖಲೆಯಲ್ಲಿ ಈ ಮಾತಿದೆ-"ಮೈಸೂರು ರಾಜ್ಯ ಭಾರ್ರ ದೇಶಗೆಲ್ಲಾ ಯಾ ವಂದು ಗುರುಗಳಿಗೆ ಮಾತ್ರ ಅಡ್ಡ ಪಾಲ್ಕಿಯನ್ನು ತೆಗೆದುಕೊಂಡು ಹೋಗುವುದಕ್ಕೆ ಅಪ್ಪಣೆಯಿರುತ್ತದೆ..." ಇದು ಮೈಸೂರು ರಾಜ್ಯದ ಬ್ರಿಟಿಷ್ ಕಮೀಷನರ್ ಆದೇಶ.
(Cd: A.K.Shastri; The Records of the Sringeri Dharmasamsthana. N0.299). 1867- 8 ರ ಅವಧಿಯಲ್ಲಿ ಮೈಸೂರು ರಾಜ್ಯದಲ್ಲಿ ಶೃಂಗೇರಿ ಮಠಕ್ಕೆ ಮಾತ್ರ "ಅಡ್ಡಪಲ್ಲಕ್ಕಿ" ಮೆರವಣಿಗೆಯ ಹಕ್ಕು ಇತ್ತು.
1900ರ ಸುಮಾರಿನಲ್ಲಿ ಕರ್ನಾಟಕದ ವೀರಶೈವರಿಗೆ ತಾವು ಬ್ರಾಹ್ಮಣರಿಗೆ ಸಮಾನರು ಎಂದು ಪ್ರತಿಪಾದಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಬ್ರಾಹ್ಮಣರು ವೀರಶೈವರನ್ನು ಶೂದ್ರರೆಂದು ಕರೆದದ್ದಕ್ಕೆ ವೀರಶೈವರು ತಾವು ಬ್ರಾಹ್ಮಣರಿಗಿಂತ ಶ್ರೇಷ್ಠ, ಬ್ರಾಹ್ಮಣರು 'ಅ ಲಿಂಗಿ ಬ್ರಾಹ್ಮಣ'ರಾದರೆ ನಾವು 'ಲಿಂಗಿ ಬ್ರಾಹ್ಮಣ'ರು ಎಂದು ಹೇಳಿಕೊಂಡರು. (ಬ್ರಾಹ್ಮಣರು ಜನಿವಾರ ಧರಿಸಿದರೆ, ಅಂತಹ ಜನಿವಾರಕ್ಕೆ ತಾವು 'ಲಿಂಗ'ವನ್ನು ಕಟ್ಟುತ್ತೇವೆ ಎಂದು ಅದರ ಅರ್ಥ). ತಮ್ಮನ್ನು "ವೀರಶೈವ ಬ್ರಾಹ್ಮಣ"ರೆಂದೂ "ವೀರಶೈವ ದ್ವಿಜ" ಎಂದೂ ಹೇಳಿಕೊಂಡರು. 1950ರ ಸುಮಾರಿನಲ್ಲಿ "ವೀರಶೈವ ಬ್ರಾಹ್ಮಣ ಕಾಫಿ ಕ್ಲಬ್‌" ಇದ್ದುವು. ಆಗ ಬ್ರಾಹ್ಮಣರಿಗೇ ಮೀಸಲಾಗಿದ್ದ ವೇದ, ಸಂಸ್ಕೃತ ಪಾಠಶಾಲೆಗಳಲ್ಲಿ ವೀರಶೈವ ವಿದ್ಯಾರ್ಥಿಗಳಿಗೆ ಅವಕಾಶವಿರಲಿಲ್ಲ-ಅಲ್ಲೂ ಹೋರಾಡಿ ಯಶಸ್ವಿಯಾದರು. ಹಿಂದೂ ಧರ್ಮದಲ್ಲಿ ತಾವು ಬ್ರಾಹ್ಮಣರಿಗಿಂತ ಕಡಮೆ ಸ್ಥಾನದವರಲ್ಲ ಎಂದು ಘೋಷಿಸಿಕೊಂಡರು.
     ಈ ಹಿನ್ನೆಲೆಯಲ್ಲಿ ನೋಡಿದರೆ, ವೀರಶೈವ ಮಠಗಳು "ಅಡ್ಡ ಪಲ್ಲಕ್ಕಿ" ಉತ್ಸವಕ್ಕಾಗಿ ಸರ್ಕಾರದ ಅನುಮತಿ ಪಡೆಯುವಲ್ಲಿ ಪ್ರಯತ್ನ ಮಾಡಿ ಯಶಸ್ವಿಯಾದುದು ಅರ್ಥಪೂರ್ಣವಾಗುತ್ತದೆ. 1867-8ರಲ್ಲಿ ಶೃಂಗೇರಿ ಮಠವು "ಅಡ್ಡಪಲ್ಲಕ್ಕಿ" ಉತ್ಸವಕ್ಕೆ ಒಪ್ಪಿಗೆ ಪಡೆದುದು ವೀರಶೈವರಿಗೆ ತಾವೂ ಅದನ್ನು ಪಡೆದುಕೊಳ್ಳುವ ಕುಮ್ಮಕ್ಕು ನೀಡಿತು. 1902ರಲ್ಲಿ ಶೃಂಗೇರಿ ಮಠದ ಅನುಯಾಯಿಗಳು ಅಡ್ಡಿಪಡಿಸಿದರೂಚಿತ್ರದುರ್ಗದ ಶ್ರೀ ಜಯದೇವ ಮುರುಗ ರಾಜೇಂದ್ರ ಸ್ವಾಮಿಗಳು ಧಾರವಾಡದ ಕಲೆಕ್ಟರ್ ಅವರಿಂದ ಅನುಮತಿ ಪಡೆದು ಧಾರವಾಡದಲ್ಲಿ "ಅಡ್ಡ ಪಲ್ಲಕ್ಕಿ" ಉತ್ಸವದಲ್ಲಿ ಪಾಲ್ಗೊಂಡರು. ರಾಜಾ ಲಖರ್ಮ ಗೌಡ, ವಂಬಮುರಿ ದೇಸಾಯಿ ಇತ್ಯಾದಿ ವೀರಶೈವ ಮುಖಂಡರು "ರಾಯಿಟ್ ಆನರಬಲ್ ಗವರ್ನರ್ ಇನ್ ಕೌನ್ಸಿಲ್, ಬಾಂಬೆ-ಇವರ ಸನ್ನಿಧಿಗೆ" ಪತ್ರ ಬರೆದು ಬ್ರಿಟಿಷ್ ಸರ್ಕಾರದಿಂದ ಗದಗಿನ ತೋಂಟದಾರ್ಯ ಮಠಕ್ಕೆ ಅನುಮತಿ ಪಡೆದು ಧಾರವಾಡದಲ್ಲಿ "ಅಡ್ಡ ಪಲ್ಲಕ್ಕಿ" ಉತ್ಸವ ನಡೆಸುವ ಹಕ್ಕನ್ನು ದೊರಕಿಸಿಕೊಟ್ಟರು. 1911ರ ಮೇ 29ರಂದು ಕೊಲ್ಲಾಪುರದಲ್ಲಿ, 1912 ನವೆಂಬರ್ 13ರಂದು ಪುಣೆಯಲ್ಲಿ ಚಿತ್ರದುರ್ಗದ ಪೂಜ್ಯರು ರಾಜನ ಮತ್ತು ಬ್ರಿಟಿಷ್ ಸರ್ಕಾರದ ಒಪ್ಪಿಗೆ ಪಡೆದು "ತಿರ್ಯಗಾಂದೋಲನ" (ಅಡ್ಡ ಪಲ್ಲಕ್ಕಿ) ದಲ್ಲಿ ಭಾಗಿಯಾದರು. ಆ ಎರಡೂ ಕಡೆ ವೇದ ಘೋಷದೊಡನೆ ನಡೆದ "ತಿರ್ಯಗಾಂದೋಲನ" ವು ಯಶಸ್ವಿಯಾಯಿತು. ಅದೇ ಪೂಜ್ಯರು 1911 ಸೆಪ್ಟೆಂಬರ್ 11ರಂದು ಬಾಗಲಕೋಟೆಯಲ್ಲಿ "ಅಡ್ಡ ಪಲ್ಲಕ್ಕಿ" ಉತ್ಸವದಲ್ಲಿ ಭಾಗವಹಿಸಿದಾಗ ಅಲ್ಲಿಯೂ ಬ್ರಾಹ್ಮಣರು ವಿರೋಧಿಸಿದರು. ಆ ಕಾಲದಲ್ಲಿ ವೀರಶೈವರು "ವ್ಯಾಸನ ತೋಳ"ವನ್ನು ಪ್ರದರ್ಶಿಸಿದ್ದು ಬ್ರಾಹ್ಮಣರಿಗೆ ಪ್ರಿಯವಾಗಲಿಲ್ಲ. ಅಂದಿನ ಪ್ರಚಲಿತ ಕತೆಯೊಂದರ ಪ್ರಕಾರ ವ್ಯಾಸನು (ಈತ ವಿಷ್ಣುಭಕ್ತ, ಮಹಾಭಾರತದ ಕತೃ) ಕಾಶಿಯ ಬೀದಿಯಲ್ಲಿ (ಕಾಶಿ ಶೈವರ ಪೂಜ್ಯ ಸ್ಥಳ) ನಿಂತು "ವಿಷ್ಣುವಿಗಿಂತ ಶಿವನು ಕೆಳಗಿನವನು" ಎಂದು ಕೈ ಎತ್ತಿ ಘೋಷಿಸಿದಾಗ ಅಲ್ಲಿನವರು ಅದನ್ನು ಸಹಿಸದೆ ಅವನ ತೋಳನ್ನೇ ಕತ್ತರಿಸಿದರು. "ವ್ಯಾಸನ ತೋಳು" ಶಿವನು ವಿಷ್ಣುವಿಗಿಂತ ಶ್ರೇಷ್ಠ ಎಂಬುದರ ಸಂಕೇತವಾಗಿ ಪರಿಣಮಿಸಿತ್ತು. 1900-20ರ ಸುಮಾರಿನಲ್ಲಿ ಕರ್ನಾಟಕದ ನೂರಾರು ಕಡೆ ಬ್ರಾಹ್ಮಣರ ಕೇರಿಗಳಲ್ಲಿ ವೀರಶೈವರು "ವ್ಯಾಸನ ತೋಳಿನ" ಮೆರವಣಿಗೆ ಮಾಡಿದಾಗ (ಉದ್ದನೆಯ ಕೋಲಿನ ತುದಿಗೆ ಕೈಯನ್ನು ಹೋಲುವ ಚಿಕ್ಕ ಕೋಲು ಕಟ್ಟಿದ್ದು 'ವ್ಯಾಸನ ತೋಳು') ಅದನ್ನು ಬ್ರಾಹ್ಮಣರು ವಿರೋಧಿಸಿದರು. ಹಲವೆಡೆ ಆ ಬಗ್ಗೆ ಬ್ರಾಹ್ಮಣರಿಗೂ ವೀರಶೈವರಿಗೂ ಘರ್ಷಣೆ ಆದುವು. "ವ್ಯಾಸನ ತೋಳು" ವೀರಶೈವರಿಗೆ ಬ್ರಾಹ್ಮಣರನ್ನು ಲೇವಡಿ ಮಾಡುವ ಸಾಧನವಾಗಿತ್ತು. ವಿವರಗಳಿಗೆ ನೋಡಿ -ನನ್ನ "ವೀರಶೈವ ಧರ್ಮ; ಭಾರತೀಯ ಸಂಸ್ಕೃತಿ೤ (ಹಿಂದೂ, ಲಿಂಗಾಯತ)."
"ಅಡ್ಡ ಪಲ್ಲಕ್ಕಿ" ಪದ್ಧತಿಯನ್ನು ಶೃಂಗೇರಿ ಮಠವು ಇಂದಿಗೂ ಉಳಿಸಿಕೊಂಡು ಬಂದಿದೆ. ಬಹುತೇಕ ವೀರಶೈವ ಮಠಗಳೂ ಕೈ ಬಿಟ್ಟಿವೆ-ಬಾಳೆಹೊನ್ನೂರಿನ ರಂಭಾಪುರಿ ಗುರು ಪೀಠವು 29.3.2000ರಲ್ಲಿ ನಡೆಸಿದ್ದರೆ, 27.6. 1966ರಂದು ಕೊಪ್ಪಳದ ವಿರಕ್ತ ಗವಿಮಠದ ಸ್ವಾಮಿಗಳ "ಅಡ್ಡ ಪಲ್ಲಕ್ಕಿ" ಉತ್ಸವ ನಡೆದಿದೆ. ಗುರು, ವಿರಕ್ತ ಪೀಠದವರು ಭಾಗಿಗಳಾಗಿದ್ದಾರೆ. 14.10.13ರಂದು ಶ್ರೀ ರಂಭಾಪುರಿ ಪೀಠಾಧ್ಯಕ್ಷರ ಅಡ್ಡಪಲ್ಲಕ್ಕಿ ಉತ್ಸವ ಜೇವರ್ಗಿಯಲ್ಲಿ ನಡೆದು ಹಲವು ವೀರಶೈವ ಪೀಠಾಧ್ಯಕ್ಷರು ಸಂಘಟನೆಗಳು ಅದನ್ನು ಪ್ರತಿಭಟಿಸಿವೆ; ಉಪವಾಸ ನಡೆಸಿವೆ. ಸುಮಾರು ಮೂವತ್ತು ವೀರಶೈವ ಸ್ವಾಮಿಗಳು ಈಚೆಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ "ಅಡ್ಡ ಪಲ್ಲಕ್ಕಿ" ಉತ್ಸವವನ್ನು ನಿಷೇಧಿಸಲು ಒತ್ತಾಯ ಹಾಕಿದ್ದಾರೆ.
ನನ್ನ ಸ್ಪಷ್ಟ ಆಲೋಚನೆ ಇದು- "ಅಡ್ಡ ಪಲ್ಲಕ್ಕಿ" ಉತ್ಸವ ಅಮಾನವೀಯವಲ್ಲ. (ಜಂಗಮರ ಪಾದೋದಕ ಸೇವೆ ಅಮಾನವೀಯ). ಆದರೆ ಆ ಉತ್ಸವಕ್ಕೆ ಹಲವರು ವಿರೋಧಿಸಿದ್ದರೂ ಅದನ್ನೇ ಮುಂದೆ ಮುಂದುವರಿಸಿದರೆ ವಿರೋಧ ತೀವ್ರಗೊಳ್ಳಬಹುದು. ಅದಕ್ಕೆ ಪ್ರತಿಯಾಗಿ ಬೆಂಬಲಿಸುವವರೂ ಹೆಚ್ಚಾಗಿ ಇಬ್ಬರ ಮಧ್ಯೆ ಘರ್ಷಣೆಗಳಾಗುವ ಸಾಧ್ಯತೆಗಳಿವೆ. ಇದಕ್ಕೆ ಸರ್ಕಾರ ಕೈ ಹಾಕಬೇಕಾಗಿಲ್ಲ. ನ್ಯಾಯಾಲಯದ ತೀರ್ಪು ಏನೇ ಬಂದರೂ ಆಗಲೂ ಘರ್ಷಣೆಗಳಾಗುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಪೂಜ್ಯ ಶ್ರೀ ರಂಭಾಪುರಿ ಸ್ವಾಮಿಗಳು ತಮ್ಮ ಭಕ್ತರಿಗೆ ತಿಳಿ ಹೇಳಿ, ತಮ್ಮ "ಅಡ್ಡ ಪಲ್ಲಕ್ಕಿ" ಉತ್ಸವವನ್ನು ಕೈ ಬಿಡುವಂತೆ ಸೂಚಿಸುವುದು ಒಳ್ಳೆಯದು. ಇದರಿಂದ ಘರ್ಷಣೆಗಳು ತಪ್ಪುತ್ತವೆ. ಈಗಾಗಲೇ ಗುರು, ವಿರಕ್ತ ಪೀಠಗಳು ಬೇರೆ ಬೇರೆ ಎಂದು, ಲಿಂಗಾಯತ,ವೀರಶೈವ ಧರ್ಮಗಳು ಬೇರೆ ಬೇರೆ ಎಂದು, ವೀರಶೈವರು ಹಿಂದೂಗಳು ಎಂದು, ಅಲ್ಲ ಎಂದು ಕೆಲವರು ವಾದಿಸಿ ವೀರಶೈವ (ಲಿಂಗಾಯತ)ಸಮಾಜವು ಸಿಡಿದು ಹೋಳಾಗುವ ಶೋಚನೀಯ ಸ್ಥಿತಿಯನ್ನು ತಂದಿಟ್ಟಿದ್ದಾರೆ. ಅದನ್ನು ತಡೆಯಲು ಶ್ರೀ ಪೂಜ್ಯರು ಮುಂದಾಗಬೇಕೆಂದು ನಾನು ವಿನಯದಿಂದ ಮನವಿ ಮಾಡಿಕೊಳ್ಳುತ್ತೇನೆ. ಭಕ್ತರೂ "ಅಡ್ಡ ಪಲ್ಲಕ್ಕಿ" ಉತ್ಸವದ ಬದಲು ಕುದುರೆ ಗಾಡಿಯಲ್ಲಿ ಮೆರವಣಿಗೆ ಮಾಡಿ "ದರ್ಬಾರ್‌" ಬದಲು ಧರ್ಮ ಬೋಧನೆಯ ಅನುಭವ ಮಂಟಪವನ್ನು ವ್ಯವಸ್ಥೆ ಮಾಡಬೇಕೆಂದು ಸೂಚಿಸುತ್ತೇನೆ. (ಶೃಂಗೇರಿ ಪೀಠಾಧ್ಯಕ್ಷರು ಈ ಬಗ್ಗೆ ಚಿಂತಿಸುವಂತೆ ಕೇಳಿಕೊಳ್ಳುತ್ತೇನೆ).

- ಡಾ. ಎಂ. ಚಿದಾನಂದಮೂರ್ತಿ
ಸಂಶೋಧಕರು, ಸಾಹಿತಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com