ಸಲಿಂಗ ಕಾಮ ಕೇವಲ ತರ್ಕದ ಚೌಕಟ್ಟಿನೊಳಗೆ ನೋಡಬೇಕಾದ ವಿಚಾರವೇ?

ಅಯ್ಯಯ್ಯೋ ಪರಿಸ್ಥಿತಿ ಎಲ್ಲಿಗೆ ಬಂತಪ್ಪಾ, ನಮ್ಮ ಜನರಿಗೆ ಏನಾಗುತ್ತಿದೆಯಪ್ಪಾ ಎಂದು...

Published: 21st December 2013 02:00 AM  |   Last Updated: 21st December 2013 11:46 AM   |  A+A-


ಅಯ್ಯಯ್ಯೋ ಪರಿಸ್ಥಿತಿ ಎಲ್ಲಿಗೆ ಬಂತಪ್ಪಾ, ನಮ್ಮ ಜನರಿಗೆ ಏನಾಗುತ್ತಿದೆಯಪ್ಪಾ ಎಂದು ತಲೆಕೆಡಿಸಿಕೊಳ್ಳಬೇಡಿ. ಇದೂ ಕೂಡ ಒಂದು Fad. Latest Fad ಅಥವಾ 'ಹೊಸ ತೆವಲು' ಎನ್ನಬಹುದು. ಒಂದು ಕಾಲದಲ್ಲಿ ಭಾರತದಲ್ಲಿ Leftism ಒಂದು Fad ಆಗಿತ್ತು. ದಿಲ್ಲಿಯ ಜವಾಹರಲಾಲ್ ನೆಹರು ವಿವಿ(ಜೆಎನ್‌ಯು), ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿಯ ಕ್ಲಾಸ್‌ರೂಮ್‌ಗಳಲ್ಲಿ, ಕಾರಿಡಾರ್‌ನಲ್ಲಿ ನಿಂತು ಎಡಪಂಥೀಯ ವಾದದ ಬಗ್ಗೆ ಮಾತನಾಡುವುದು, ದೇಶ-ವ್ಯವಸ್ಥೆಯನ್ನು ಟೀಕೆ ಮಾಡುವುದೇ ಒಂದು ತೆವಲು ಹಾಗೂ ಹೆಮ್ಮೆಯ ವಿಚಾರವಾಗಿತ್ತು. ಆನಂತರ Animal Rights ಎಂಬ ಹೊಸ ಫ್ಯಾಡ್ ಬಂತು. ಈ ಮೇನಕಾ ಗಾಂಧಿ ಮುಂತಾದವರು "ಅನಿಮಲ್ ರೈಟ್ಸ್‌" ಎಂದಂದುಕೊಂಡು ಕಂಡಕಂಡವರನ್ನೆಲ್ಲ ಕಚ್ಚುವ ಬೀದಿನಾಯಿಗಳ ಪರವಾಗಿ, ಅವುಗಳನ್ನು ಕೊಲ್ಲುವ ಮುನ್ಸಿಪಾಲಿಟಿಗಳ, ಕಾರ್ಪೊರೇಷನ್‌ಗಳ ವಿರುದ್ಧವಾಗಿ ಟೊಂಕಕಟ್ಟಿ ನಿಂತರು! ಅದರ ಬೆನ್ನಲ್ಲೇ ಹಾಗೂ ಅದಕ್ಕೇ ಸಂಬಂಧಿಸಿದ "ವೆಜಿಟೇರಿಯನಿಸಂ" ಆರಂಭವಾಯಿತು. ಪ್ರಾಣಿಹತ್ಯೆ ವಿರುದ್ಧ, ಲೆದರ್ ಬಳಸುವುದರ ವಿರುದ್ಧ ಕೂಗಾಟ ಆರಂಭವಾಯಿತು. ಆಮೇಲೆ Child Rights,  Tribal Rights, Tiger Conservation, Forest Preservation ಮುಂತಾದುವುಗಳು ಆರಂಭವಾದವು. ಎಲ್ಲವೂ ಮುಗಿದ ಮೇಲೆ  Trekkingನಂಥ ವಿಷಯವನ್ನೂ ಬಿಡಲಿಲ್ಲ. ಈ Gay Rights ಅಥವಾ ಸಲಿಂಗ ಸ್ವಾತಂತ್ರ್ಯ ಕೂಡ ಒಂದು ಫ್ಯಾಡೇ ಹೊರತು ಬೇರೇನೂ ಅಲ್ಲ. 1960ರ ದಶಕದಲ್ಲಿ ಯಾವ ವಿಷಯಕ್ಕಾಗಿ ಬ್ರಿಟನ್‌ನಲ್ಲಿ ದೊಡ್ಡ ಚರ್ಚೆಯಾಗಿತ್ತೋ ಅದೇ ವಿಷಯ 40 ವರ್ಷಗಳ ನಂತರ ಭಾರತದಲ್ಲಿ ಚರ್ಚೆಗೆ ಗ್ರಾಸವಾಯಿತು. 2009  ಜುಲೈ 2 ರಂದು ದಿಲ್ಲಿ ಹೈಕೋರ್ಟ್ ಸಲಿಂಗ ಕಾಮವೇನೂ ಶಿಕ್ಷಾರ್ಹ ಅಪರಾಧವಲ್ಲ ಎಂದು ತೀರ್ಪು ನೀಡುವ ಮೂಲಕ ಸಲಿಂಗರತಿ ಪರವಾಗಿ ಹೋರಾಡುತ್ತಿದ್ದವರಿಗೆ "ನೈತಿಕ"ಸ್ಥೈರ್ಯ ತುಂಬಿತು. ಆದರೆ ಈ ತೀರ್ಪಿನ ವಿರುದ್ಧದ ಮೇಲ್ಮನವಿಯನ್ನು ಆಲಿಸಿದ ಸುಪ್ರೀಂಕೋರ್ಟ್ ಕಳೆದ ವಾರ ನೀಡಿರುವ ತೀರ್ಪಿನಲ್ಲಿ ಸಲಿಂಗಕಾಮವನ್ನು ಕ್ರಿಮಿನಲ್ ಅಪರಾಧವೆಂದು ಕಾಣುವ ಭಾರತೀಯ ದಂಡಸಂಹಿತೆಯ ಸೆಕ್ಷನ್ 377ನ್ನು ಎತ್ತಿಹಿಡಿದಿದ್ದು ಅದರಿಂದ   ಒಂದಷ್ಟು ಜನರು ಕುಪಿತಗೊಂಡಿದ್ದಾರೆ. ಕಳೆದ ಒಂದು ವಾರದಿಂದ ಸುಪ್ರೀಂ ಕೋರ್ಟನ್ನೇ ನಿಂದಿಸುವ ಮಟ್ಟಿಗೆ ಪ್ರಚಾರಾಂದೋಲನ, ಬೊಬ್ಬೆ ನಡೆಯುತ್ತಿವೆ.
ಆದರೆ...
ಇದು ದೇಶವನ್ನು ಕಾಡುತ್ತಿರುವ ಗುರುತರ ಸಮಸ್ಯೆಯೇ? ಇದರಿಂದ ಮಾಧ್ಯಮಗಳಿಗೆ ಒಂದು ವಾರಕ್ಕಾಗುವಷ್ಟು  Fodde ಸಿಕ್ಕಿದ್ದು ಬಿಟ್ಟರೆ ಸಮಾಜಕ್ಕಾಗಲಿ, ಸಾಮಾನ್ಯ ಜನರಿಗಾಗಲಿ ಯಾವ ಲಾಭವಾಯಿತು ಹೇಳಿ?
ಈ Homosexuality ಎಂಬ ಪದ ಬಂದಿದ್ದು ಗ್ರೀಕ್ ಹಾಗೂ ಲ್ಯಾಟಿನ್ ಮೂಲದಿಂದ. Homos ಎಂದರೆ Same ಎಂದರ್ಥ. Homosexuality ಎಂದರೆ ಸಲಿಂಗಿಗಳ ನಡುವಿನ ರತಿಕ್ರೀಡೆ. ಸಾಮಾನ್ಯವಾಗಿ ಗಂಡಸರಿಬ್ಬರ ನಡುವಿನ ಕಾಮಕೇಳಿಯನ್ನು Gay ಎಂದು ಕರೆದರೆ, ಸ್ತ್ರೀಯರ ನಡುವಿನ ಸಲಿಂಗ ಕಾಮವನ್ನು Lesbianism ಎನ್ನುತ್ತಾರೆ. ಪುರುಷ ಹಾಗೂ ಸ್ತ್ರೀ ಇಬ್ಬರ ಜತೆಯೂ ಸರಸವಾಡುವವರನ್ನು Bisexual ಎಂದು ಕರೆಯಲಾಗುತ್ತದೆ. ಆದರೆ ಜಗತ್ತಿನ ಯಾವ ಸಮಾಜಗಳೂ ಸಲಿಂಗ ಕಾಮವನ್ನು ಒಪ್ಪಿಕೊಂಡಿರಲಿಲ್ಲ. ಅಮೆರಿಕದ ಕ್ಯಾಲಿಫೋರ್ನಿಯಾದಂತಹ ರಾಜ್ಯ ಸಲಿಂಗ ಕಾಮಿಗಳಿಬ್ಬರು ವಿವಾಹವಾಗುವುದಕ್ಕೆ ಕಾನೂನಿನ ಮಾನ್ಯತೆ ನೀಡಿದ್ದರೂ, ಕೆಲವು ದೇಶಗಳು ಸಲಿಂಗ ಕಾಮಕ್ಕೆ ಅವಕಾಶ ನೀಡಿದ್ದರೂ, ಇಂದಿಗೂ ಯಾವ ಸಮಾಜವೂ ಸಲಿಂಗ ಕಾಮವನ್ನು ಮುಕ್ತಮನಸ್ಸಿನಿಂದ ಮಾನ್ಯ ಮಾಡಿಲ್ಲ. 1967ರಲ್ಲಿ ಕಾನೂನು ತರುವ ಮೂಲಕ ಸಲಿಂಗ ರತಿಗೆ ಮಾನ್ಯತೆ ನೀಡಿದರೂ ಅದುವರೆಗೆ ಬ್ರಿಟನ್‌ನಲ್ಲೂ ಸಲಿಂಗ ಕಾಮ ಕಾನೂನಿನ ದೃಷ್ಟಿಯಿಂದ ಅಪರಾಧವಾಗಿತ್ತು. ಅದೊಂದು ಅಸ್ವಾಭಾವಿಕ, ಅಶುದ್ಧ ಕ್ರಿಯೆ ಎಂದು ಇಂದಿಗೂ ವ್ಯಾಟಿಕನ್ ಪ್ರತಿಪಾದಿಸುತ್ತದೆ ಹಾಗೂ ಖಡಾಖಂಡಿತವಾಗಿ ವಿರೋಧಿಸುತ್ತದೆ. ಖಜುರಾಹೋದಲ್ಲಿ ಹಾಗಿದೆ, ನಮ್ಮ ಪುರಾಣಗಳಲ್ಲಿ ಹೀಗೆ ಹೇಳಲಾಗಿದೆ ಎಂದು ಯಾರೆಷ್ಟೇ ಬೊಬ್ಬೆ ಹಾಕಿದರೂ, ಸಮಜಾಯಿಷಿ ಕೊಟ್ಟರೂ ಹಿಂದು ನೀತಿ-ನಿಯಮಾವಳಿಗಳ ಮನುಸ್ಮೃತಿ, ಸಲಿಂಗ ರತಿಯನ್ನು ಲೈಂಗಿಕ ಕ್ರಿಯೆಗಳಲ್ಲಿ ಒಂದು ವಿಧ ಎಂದು ಪಟ್ಟಿಮಾಡಿದ್ದರೂ ಅದಕ್ಕೆ ಶಿಕ್ಷೆಯನ್ನು ನಿಗದಿ ಮಾಡಿದೆ! ಸಲಿಂಗ ಕಾಮಿಗಳಿಗೆ ಸಲಹೆ, ಮಾರ್ಗದರ್ಶನ ನೀಡುವ ಮೂಲಕ ಸಹಜ ಸ್ಥಿತಿಗೆ ತರಬೇಕು ಎಂದು ಕ್ಯಾಥೋಲಿಕ್ ಚರ್ಚ್‌ಗಳು ಹೇಳಿದರೆ, ಇಸ್ಲಾಂನ ಷರಿಯತ್ ಕಾನೂನಿನಲ್ಲಂತೂ ಸಲಿಂಗ ಕಾಮ ಅಪರಾಧ ಹಾಗೂ ಅದು ನಿರ್ಬಂಧಿತ. ಯಾವುದೇ ಧರ್ಮಗಳನ್ನು ತೆಗೆದುಕೊಳ್ಳಿ, ಆ ಧರ್ಮಗಳು ಎಷ್ಟೇ ಉದಾರವಾಗಿರಲಿ. ಆದರೆ ಗಂಡಸು ಗಂಡಸಿನ, ಹೆಣ್ಣು-ಹೆಣ್ಣಿನ ನಡುವಿನ ಲೈಂಗಿಕತೆಯನ್ನು ಒಪ್ಪಿಕೊಂಡಿಲ್ಲ. ಜತೆಗೆ ಅದನ್ನು ಪಾಪ, ಅಪರಾಧವೆಂಬಂತೆ ಕಾಣುತ್ತಾ ಬಂದಿವೆ.
ಭಾರತೀಯ ದಂಡ ಸಂಹಿತೆ(IPC)ಯ 377ನೇ ಸೆಕ್ಷನ್ ಕೂಡ ಇಂತಹ ಅಂಶಗಳನ್ನೇ ಒಳಗೊಂಡಿದೆ!
ಅದು ಯಾವುದೇ ರೀತಿಯ ಅಸ್ವಾಭಾವಿಕ ಲೈಂಗಿಕತೆಯೂ ಅಪರಾಧವೆನ್ನುತ್ತದೆ. ಅಂದರೆ ಪರಸ್ಪರ ಒಪ್ಪಿಗೆ ಇದ್ದರೂ ಸಹಿತ ಅಸ್ವಾಭಾವಿಕವಾಗಿ ಒಬ್ಬ ಗಂಡಸು ಮತ್ತೊಬ್ಬ ಗಂಡಸಿನ ಜತೆ, ಹೆಣ್ಣು ಹೆಣ್ಣಿನ ಜತೆ ಅಥವಾ ಪ್ರಾಣಿಗಳ ಜತೆ ಕಾಮಕೇಳಿ ಅಥವಾ ರತಿಕ್ರೀಡೆಯಲ್ಲಿ ತೊಡಗುವುದು 377ನೇ ಸೆಕ್ಷನ್ ಪ್ರಕಾರ ಅಪರಾಧ. ಈ ಅಪರಾಧವೆಸಗಿರುವುದು ಸಾಬೀತಾದರೆ 10 ವರ್ಷಗಳವರೆಗೂ ಜೈಲು ಶಿಕ್ಷೆ ನೀಡಬಹುದು. 2001ರಲ್ಲಿ ಈ ಕಾಯಿದೆಯ ವಿರುದ್ಧ ದಿಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL)ಯನ್ನು ಹಾಕಿದ ನಾಝ್ ಎಂಬ ಸ್ವಯಂ ಸೇವಾ ಸಂಸ್ಥೆ, ಇಬ್ಬರು ಸಲಿಂಗಿಗಳು ಪರಸ್ಪರ ಒಪ್ಪಿಗೆಯಿಂದ ಕಾಮದಲ್ಲಿ ತೊಡಗಿದರೂ ಶಿಕ್ಷಿಸುವ ಭಾರತೀಯ ದಂಡ ಸಂಹಿತೆಯ 377ನೇ ಸೆಕ್ಷನ್ ಸಂವಿಧಾನದ 14, 15, 19(1)(ಎ-ಡಿ) ಹಾಗೂ 21ನೇ ವಿಧಿಗಳು ನೀಡಿರುವ ಹಕ್ಕಿನ ಮೇಲೆ ಪ್ರಹಾರ ಮಾಡುತ್ತಿದೆ ಎಂದು ದೂರಿತು. ಪೊಲೀಸರು ಕಾನೂನನ್ನು ಮುಂದಿಟ್ಟುಕೊಂಡು ಸಲಿಂಗ ಕಾಮಿಗಳನ್ನು ಬೆದರಿಸುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿಕೊಂಡಿತು. ಆದರೆ ಸಲಿಂಗ ಕಾಮವನ್ನು ಅಪರಾಧವೆಂದು ಕಾಣುವ ಕಾನೂನಿಗೆ ಕಡಿವಾಣ ಹಾಕಲೊಪ್ಪದ ದಿಲ್ಲಿ ಹೈಕೋರ್ಟ್ 2004ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೇ ವಜಾ ಮಾಡಿತು. ಆದರೇನಂತೆ ತನ್ನ ತೀರ್ಪನ್ನು ಮರು ಪರಾಮರ್ಶೆ ಮಾಡಬೇಕು ಎಂದು 2004, ಸೆಪ್ಟೆಂಬರ್ 3ರಂದು ಮತ್ತೆ ಮನವಿ ಮಾಡಿಕೊಳ್ಳಲಾಯಿತು. ಇಷ್ಟಾಗಿಯೂ ದಿಲ್ಲಿ ಹೈಕೋರ್ಟ್ ಮೇಲ್ಮನವಿಯನ್ನು ತಿರಸ್ಕರಿಸಿತು. ಕೊನೆಗೆ ಸಲಿಂಗ ಕಾಮಿಗಳ ಪರವಾಗಿ ಹೋರಾಡುತ್ತಿರುವವರು 2004, ಡಿಸೆಂಬರ್‌ನಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲು ತುಳಿದರು. 2006, ಏಪ್ರಿಲ್ 3ರಂದು ದಿಲ್ಲಿ ಹೈಕೋರ್ಟ್‌ಗೆ ಪ್ರಕರಣವನ್ನು ಹಿಂದಿರುಗಿಸಿದ ಸುಪ್ರೀಂಕೋರ್ಟ್, ಆದ್ಯತೆ ಮೇಲೆ ಮರು ಪರಾಮರ್ಶೆ ನಡೆಸುವಂತೆ ಸೂಚನೆ ನೀಡಿತು. ಇತ್ತ ಮಾಜಿ ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್, 2008, ಆಗಸ್ಟ್ 9ರಂದು "ಭಾರತೀಯ ದಂಡ ಸಂಹಿತೆಯ 377ನೇ ಸೆಕ್ಷನ್‌ಗೆ ತಿದ್ದುಪಡಿ ತಂದು ಸಲಿಂಗ ಕಾಮವನ್ನು ಕ್ರಿಮಿನಲ್ ಅಪರಾಧವೆಂಬಂತೆ ಕಾಣುವುದಕ್ಕೆ ಕಡಿವಾಣ ಹಾಕಬೇಕು" ಎಂದು ಹೇಳಿಕೆ ನೀಡುವ ಮೂಲಕ ಸಲಿಂಗ ಕಾಮಿಗಳ ಪರ ಹೋರಾಡುತ್ತಿರುವವರ ವಿಶ್ವಾಸವನ್ನು ಹೆಚ್ಚಿಸಿದರು. ಈ ಕುರಿತು ವಿವರಣೆ ನೀಡುವಂತೆ ದಿಲ್ಲಿ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸೂಕ್ತ ಹಾಗೂ ವೈಜ್ಞಾನಿಕ ಕಾರಣಗಳನ್ನು ನೀಡುವ ಬದಲು ಕೇಂದ್ರದ ಯುಪಿಎ ಸರಕಾರ, ಅದೊಂದು ಅನೈತಿಕ ಕಾರ್ಯ ಹಾಗೂ ಮಾನಸಿಕ ದೌರ್ಬಲ್ಯದ ಪ್ರತೀಕ. ಅದರಿಂದ ಸಮಾಜದ ಅಧಃಪತನಕ್ಕೆ ಕಾರಣವಾಗುತ್ತದೆ ಎಂಬ ಕಳಪೆ ಸಮಜಾಯಿಷಿ ನೀಡಿತು.
"ಹದಿನೆಂಟು ವರ್ಷ ತುಂಬಿರುವ ಇಬ್ಬರು ವಯಸ್ಕರು ಪರಸ್ಪರ ಇಚ್ಛಿಸಿ ಖಾಸಗಿಯಾಗಿ ಕಾಮಿಸುವುದನ್ನು ಕ್ರಿಮಿನಲ್ ಅಪರಾಧವೆಂದು ಕಾಣುವ ಭಾರತೀಯ ದಂಡ ಸಂಹಿತೆಯ 377ನೇ ಸೆಕ್ಷನ್ ಸಂವಿಧಾನದ 14, 21 ಹಾಗೂ 15ನೇ ವಿಧಿಗಳ ಉಲ್ಲಂಘನೆಯಾಗಿದೆ" ಎಂದು ನ್ಯಾಯಮೂರ್ತಿ ಎ.ಪಿ. ಶಾ ಹಾಗೂ ಎಸ್. ಮುರಳೀಧರ್ ತೀರ್ಪು ನೀಡಿಬಿಟ್ಟರು! ಅಲ್ಲಿಗೆ 18 ವರ್ಷ ದಾಟಿದ ಸಲಿಂಗ ಕಾಮಿಗಳಿಬ್ಬರು 'ಕೂಡು'ವುದಕ್ಕೆ ನ್ಯಾಯಾಲಯದ ಮಾನ್ಯತೆ, ಆ ಮೂಲಕ ಕಾನೂನಿನ ರಕ್ಷಣೆ ಸಿಕ್ಕಂತಾಗಿಬಿಟ್ಟಿತು. ಅದನ್ನು ಸಲಿಂಗ ಕಾಮದ ಪರವಾಗಿ ಹೋರಾಡುತ್ತಿರುವವರು "ನೈತಿಕ" ವಿಜಯ ಎಂದೇ ಬೀಗಿದರು. ಆದರೇನಂತೆ, ಬೇರೆಲ್ಲಾ ವಿಷಯಗಳಿಗೆ  ಪರಸ್ಪರ ಬಡಿದಾಡುವ ಹಿಂದು-ಮುಸ್ಲಿಂ-ಕ್ರಿಶ್ಚಿಯನ್ ಎಲ್ಲಾ ಧರ್ಮಗುರುಗಳು ಈ ವಿಷಯದಲ್ಲಿ ಏಕಮತ ವ್ಯಕ್ತಪಡಿಸಿದರು. ಸಮಸ್ಯೆ ಸುಪ್ರೀಂಕೋರ್ಟ್‌ನ ಮೆಟ್ಟಿಲೇರಿತು. ಇದರ ಬಗ್ಗೆ ಪರಾಮರ್ಶೆ ನಡೆಸಿದ ಸುಪ್ರೀಂಕೋರ್ಟ್ 2013 ಡಿಸೆಂಬರ್ 11ರಂದು ನೀಡಿದ ತೀರ್ಪಿನಲ್ಲಿ ಸಲಿಂಗ ಕಾಮವನ್ನು ಶಿಕ್ಷಾರ್ಹ ಅಪರಾಧವೆಂದು ಕಾಣುವ ಭಾರತೀಯ ದಂಡಸಂಹಿತೆಯ 377ನೇ ವಿಧಿ ಊರ್ಜಿತ ಎಂದಿತು. ಆನಂತರ ಕಳೆದ ಒಂದು ವಾರದಿಂದ ರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ತೀರ್ಪಿನ ವಿರುದ್ಧ ನಡೆಯುತ್ತಿರುವ ಪ್ರಚಾರಾಂದೋಲನವನ್ನು ಖಂಡಿತ ನೀವು ಗಮನಿಸಿರುತ್ತೀರಿ. ಸರ್ಕಾರ ಸದ್ಯದಲ್ಲೇ 377ನೇ ಸೆಕ್ಷನ್‌ಗೆ ತಿದ್ದುಪಡಿತಂದು ಸಲಿಂಗ ಕಾಮಕ್ಕೆ ಕಾನೂನಿನ ಅಮಾನ್ಯತೆ ನೀಡುವ ಎಲ್ಲಾ ಸಂಭವಗಳೂ ಇವೆ.
ಆದರೆ ಸಲಿಂಗಕಾಮವೆಂಬುದು ಕೇವಲ ಒಂದು ವೈಯಕ್ತಿಕ ಹಕ್ಕಿಗೆ ಸಂಬಂಧಪಟ್ಟ ವಿಚಾರವೇ?
ಯಾರೋ 18 ವರ್ಷ ಕಳೆದ ಗಂಡಸರು ಅಥವಾ ಹೆಂಗಸರಿಬ್ಬರು ತಮಗೆ ಬೇಕಾದುದನ್ನು ಮಾಡಿಕೊಳ್ಳಲು, ತಮಗಿಷ್ಟ ಬಂದಂತೆ ಬದುಕಲು ಅವಕಾಶ ಮಾಡಿಕೊಡುವುದಕ್ಕಷ್ಟೇ ಸೀಮಿತವಾದ ವಿಚಾರ ಖಂಡಿತ ಇದಾಗಿಲ್ಲ. ಹಾಗೇನಾದರೂ ಆಗಿದ್ದರೆ ಸುಮ್ಮನಾಗಬಹುದಿತ್ತು. ಸಲಿಂಗ ಕಾಮಕ್ಕೆ ವೈಜ್ಞಾನಿಕ, ದೈಹಿಕ ಕಾರಣಗಳಷ್ಟನ್ನೇ ನೀಡಿದರೂ ಸಮಾಜದಲ್ಲಿ ಅದರದ್ದೇ ನೀತಿ-ನಿಯಮಗಳು, ಕೆಲವೊಂದು ಸ್ಥಾಪಿತ ಹಾಗೂ ರೂಢಿಗತ ಮೌಲ್ಯಗಳಿರುತ್ತವೆ. ಅವುಗಳನ್ನು ನಾವು ಅಷ್ಟು ಸುಲಭಕ್ಕೆ ಧಿಕ್ಕರಿಸಲು ಸಾಧ್ಯವಿಲ್ಲ. ಒಂದು ವೇಳೆ, ಲೆಕ್ಕಿಸದೇ ಹೋದರೆ ಸಮಾಜವೇ ಅಲುಗಾಡುವ ಸಾಧ್ಯತೆ ಇರುತ್ತದೆ. ಸಲಿಂಗ ಕಾಮವನ್ನು ಇದೇ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ. ಇಷ್ಟಕ್ಕೂ ಸ್ವಚ್ಛಂದ ಕಾಮವನ್ನೇ ಒಪ್ಪಲು ಹಿಂದೆ-ಮುಂದೆ ನೋಡುವ ಸಮಾಜ ಸಲಿಂಗ ಕಾಮವನ್ನು ಹೇಗೆತಾನೇ ಒಪ್ಪಿಕೊಂಡೀತು? ಸಲಿಂಗ ಕಾಮವೆಂಬುದು ಯಾವುದೋ ಒಂದು ತೀರ್ಪಿನಿಂದ ಬಗೆಹರಿಸುವ ಸಮಸ್ಯೆಯಲ್ಲ.
ಉಮೇಶ್ ರೆಡ್ಡಿಗೆ ಮಹಿಳೆಯರ ಒಳ ಉಡುಪನ್ನು ಕದಿಯುವುದರಲ್ಲಿ, ಸಂಗ್ರಹಿಸುವುದರಲ್ಲಿ ಮಜಾ ಸಿಗುತ್ತದೆ ಎಂಬ ಕಾರಣಕ್ಕೆ ಅದು Individual Freedom ಎಂದು ಸುಮ್ಮನಾಗಲು ಸಾಧ್ಯವೆ? ಸಹಜ ಹಾಗೂ ಸಲಿಂಗ ಕಾಮಗಳು ಬಲ ಮತ್ತು ಎಡಗೈಗಳಿದ್ದಂತೆ. ಕೆಲವರು ಬಲಗೈಲಿ ಊಟ ಮಾಡುತ್ತಾರೆ, ಕೆಲವರು ಎಡಗೈಲಿ ಆ ಕೆಲಸ ಮಾಡುತ್ತಾರೆ ಎಂದು ಸಮಜಾಯಿಷಿ ಕೊಡುವಷ್ಟು ಸರಳ ವಿಚಾರವೇ ಈ ಸಲಿಂಗ ಕಾಮ? ಭಾರತದಲ್ಲಿ ಸುಮಾರು 25 ಲಕ್ಷ ಸಲಿಂಗ ಕಾಮಿಗಳಿದ್ದಾರೆ. ಅಂದರೆ ಶೇ. 0.3 ಜನರಿಗೋಸ್ಕರ ಕಾನೂನಿಗೇ ತಿದ್ದುಪಡಿ ತಂದು ಉಳಿದ 97.7 ಪರ್ಸೆಂಟ್ ಜನರಿಗೆ ಕಿರಿಕಿರಿಯುಂಟು ಮಾಡುವ ಅಗತ್ಯವೇನಿದೆ? ಭಾರತದಲ್ಲಿ ಭಾರೀ ಪ್ರಮಾಣದ ಎಚ್‌ಐವಿ ಸೋಂಕು ಹರಡುತ್ತಿರುವುದೇ ಸಲಿಂಗ ಕಾಮದ ಮೂಲಕ ಎಂಬ ವಾಸ್ತವ ಕಣ್ಣಮುಂದೆ ಇದ್ದರೂ ಅದಕ್ಕೆ ಕಾನೂನಿನ ಮಾನ್ಯತೆ ಕೊಡಿಸುವ ತೆವಲೇಕೆ? ಸಲಿಂಗ ಕಾಮವೆಂಬುದು ಭಾರತದಂತಹ ಒಂದು ಸಮಾಜದ ಸ್ವಾಸ್ಥ್ಯವನ್ನೇ ಹಾಳುಗೆಡವಬಲ್ಲದಲ್ಲವೆ? ಮದುವೆಯಾಗಿ 4 ವರ್ಷ ಆಯ್ತು. ಇನ್ನೂ ಮಕ್ಕಳಾಗಿಲ್ಲವಾ ಏನಾದರೂ ಸಮಸ್ಯೆಯಿದೆಯೇ ಎಂದು ಕೇಳುವ ಸಮಾಜ ನಮ್ಮದು. ಇಲ್ಲಿ ಸೆಕ್ಸ್ ಎಂಬುದು ಮಕ್ಕಳನ್ನು ತಯಾರಿಸುವ ಪ್ರಕ್ರಿಯೆ ಇಲ್ಲವೇ, ದೈಹಿಕ ತೃಷೆ ತೀರಿಸಿಕೊಳ್ಳುವ ಒಂದು ವಿಧಾನವೆಂಬಂತಿದೆ. ಪಾಶ್ಚಾತ್ಯ ರಾಷ್ಟ್ರಗಳಂತೆ ಸೆಕ್ಸ್‌ನಲ್ಲಿ Fulfillment ಕಂಡುಕೊಳ್ಳಲು ಪ್ರಯತ್ನಿಸುವವರ ಸಂಖ್ಯೆ ನಮ್ಮಲ್ಲಿ ತೀರಾ ಕಡಿಮೆ. ಇಂತಹ ಸಮಾಜ ಸಲಿಂಗ ಕಾಮವನ್ನು ಒಪ್ಪಿಕೊಳ್ಳಲು ಸಾಧ್ಯವಿದೆಯೇ? ಮಿಗಿಲಾಗಿ, ಪ್ರತಿಯೊಂದು ಸಮಾಜಕ್ಕೂ ಅದರದ್ದೇ Value System ಎಂಬುದು ಇರುತ್ತದೆ. ಈಗಾಗಲೇ ಉನ್ನತ ವರ್ಗದಲ್ಲಿ ಚಾಲ್ತಿಯಲ್ಲಿರುವ Wife swapping  ಅನ್ನೂ, ನನ್ನ ಹೆಂಡತಿಯನ್ನು ನಾನು ಯಾರ ಜತೆ ಬೇಕಾದರೂ ಹಂಚಿಕೊಳ್ಳುತ್ತೇನೆ ಎಂದು ಮುಂದೊಂದು ದಿನ ವಾದಿಸಿದರೆ ಅದನ್ನೂ ವೈಯಕ್ತಿಕ ಸ್ವಾತಂತ್ರ್ಯವೆಂದು ಸಮಾಜ ಒಪ್ಪಿಕೊಳ್ಳಲು ಸಾಧ್ಯವೆ?! ಸಲಿಂಗ ಕಾಮವೆಂಬುದು ನಮ್ಮ ಸಮಾಜಕ್ಕೆ ಖಂಡಿತ ಒಗ್ಗುವಂಥದ್ದಲ್ಲ. ಯಾರೋ ಸಲಿಂಗ ಕಾಮದಲ್ಲಿ ತೊಡಗಿದ್ದಾರೆಂದರೆ ಯಾರೂ ಅವರನ್ನು ಕೊಲೆಗೈಯ್ಯುವುದಿಲ್ಲ, ಹಿಡಿದು ಬಡಿಯುವುದೂ ಇಲ್ಲ. ಹೆಚ್ಚೆಂದರೆ ಛೀಥೂ ಗಲೀಜು ಅಂದುಕೊಂಡು ಮೂಗು ಮುರಿಯಬಹುದು. ಹಾಗಿರುವಾಗ ಸಲಿಂಗ ಕಾಮಕ್ಕೆ ಕಾನೂನಿನ ಮಾನ್ಯತೆ ಕೊಡುವುದೇ ಘನ ಕಾರ್ಯ ಎಂದೇಕೆ ಭಾವಿಸಬೇಕು? ಎಂಥೆಂಥಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ಈ ಕಾಲದಲ್ಲಿ ಸಲಿಂಗ ಕಾಮವೆಂಬ ವ್ಯಾಧಿಗೂ ಸಲಹೆ, ಮಾರ್ಗದರ್ಶನ ಅಥವಾ ಇನ್ನಿತರ ಪರಿಹಾರಗಳನ್ನು ಕಂಡುಕೊಳ್ಳಲು ಏಕೆ ಪ್ರಯತ್ನಿಸಬಾರದು?
ಅದಿರಲಿ, ಹೋರಾಡುವುದಕ್ಕೆ ಬೇರಾವ ವಿಚಾರ, ಸಮಸ್ಯೆಗಳಿಲ್ಲವೆ?
ಈ ಚಳವಳಿಕಾರರ ಮಾತಿಗೆ ತಲೆಯಾಡಿಸಿ ಸಲಿಂಗ ಕಾಮಕ್ಕೆ ಅವಕಾಶ ಮಾಡಿಕೊಟ್ಟರೆ ಅದರಿಂದ ಎದುರಾಗಲಿರುವ ಇತರ ಸಮಸ್ಯೆಗಳ ಬಗ್ಗೆಯೂ ಗಮನಹರಿಸಿ. ಈಗಾಗಲೇ ಫ್ಯಾಷನ್ ಜಗತ್ತಿನಲ್ಲಿ  ಗಂಡಸರು ಗಂಡರಿಂದಲೇ 'ಸೆಕ್ಷುವಲ್ ಫೇವರ್ಸ್‌' ಪಡೆದುಕೊಳ್ಳುವ ಕಾಸ್ಟಿಂಗ್ ಕೌಚ್ ಚಾಲ್ತಿಯಲ್ಲಿದೆ. ಅದು Gay prostitution ಆಗಿ ಪರಿವರ್ತನೆಯಾದರೆ ಗತಿಯೇನು? ಈ ಹಿನ್ನೆಲೆಯಲ್ಲಿ ಸಲಿಂಗ ಕಾಮಕ್ಕೆ ಅವಕಾಶ ನೀಡಿದ ಮಾತ್ರಕ್ಕೆ ಸಮಸ್ಯೆ ಬಗೆಹರಿಯುವುದಿಲ್ಲ. ಸಲಿಂಗ ಕಾಮಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋದರೆ "ಮ್ಯಾರೇಜ್‌" ಎಂಬ ಇನ್ಸ್‌ಸ್ಟಿಟ್ಯೂಷನ್ ಅನ್ನೇ ಬದಲಾಯಿಸಬೇಕಾಗಿ ಬರಬಹುದಲ್ಲವೆ? ಹಿಂದು, ಮುಸ್ಲಿಂ, ಕ್ರೈಸ್ತ, ಸಿಖ್ ಎಲ್ಲ ಧರ್ಮಗುರುಗಳೂ ಒಕ್ಕೊರಲಿನಿಂದ ಏಕೆ ಸಲಿಂಗ ಕಾಮವನ್ನು ವಿರೋಧಿಸುತ್ತಿದ್ದಾರೆ? ಅವರ ಮಾತಿನಲ್ಲಿ ಅರ್ಥವಿಲ್ಲದೇ ಇದೆಯೇ? ಅವರ ವಿರೋಧದ ಹಿಂದೆ ಇರುವುದೂ ಸಾಮಾಜಿಕ ಕಳಕಳಿಯೇ ಅಲ್ಲವೆ? ಪಾಶ್ಚಾತ್ಯ ರಾಷ್ಟ್ರಗಳಲ್ಲಿ LGBT rights (Lesbian, Gay, Bisexual and Transgender) ಎಂಬ ಹೋರಾಟ ನಡೆಯುತ್ತಿರುವುದು ನಿಜವಾದರೂ ಅಂತಹ ಹೋರಾಟವನ್ನು ಭಾರತದಲ್ಲೂ ಆರಂಭಿಸಬೇಕೆ? Western Virtueಗಳನ್ನು ನಮ್ಮ ಸಮಾಜಕ್ಕೆ ಅನ್ವಯಿಸಲು, ಜಾರಿಗೆ ತರಲು ಹೊರಡುವುದು ಎಷ್ಟು ಸರಿ? ಪ್ರಜಾಪ್ರಭುತ್ವ ಹಾಗೂ ಅದು ಕೊಟ್ಟಿರುವ ಮೂಲಭೂತ ಹಕ್ಕುಗಳೆಂಬ Big Umbrella ಕೆಳಗೆ ಎಲ್ಲವನ್ನೂ ಒಪ್ಪಿಕೊಳ್ಳುವುದು, ಸ್ವೀಕರಿಸುವುದು ಸುಲಭವೇ ಹಾಗೂ ಸಾಧುವೆ? ತಮ್ಮ ಮಗನೋ ಮಗಳೋ ಸಲಿಂಗ ರತಿಯಲ್ಲಿ ತೊಡಗಿದರೆ ಪೋಷಕರಿಗೆ ಆಗುವ ನೋವು, ಸಾಮಾಜಿಕ ಅವಮಾನ ಗಣನೆಗೆ ತೆಗೆದುಕೊಳ್ಳಬೇಕಾದ ವಿಚಾರವಲ್ಲವೆ? ಸಲಿಂಗ ಕಾಮವೆಂಬುದು ಬರೀ ತರ್ಕದ ಪರಿಧಿಯೊಳಗೆ ನೋಡಬೇಕಾದ ವಿಚಾರವೋ ಅಥವಾ ಸಾಮಾಜಿಕ ಮೌಲ್ಯಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕೋ?

- ಪ್ರತಾಪ್ ಸಿಂಹ
mepratap@gmail.com


Stay up to date on all the latest ಅಂಕಣಗಳು news
Poll
Priyanka Gandhi

ಪ್ರಿಯಾಂಕಾ ಗಾಂಧಿ ಚುನಾವಣೆಗೆ ಸ್ಪರ್ಧಿಸುವುದರಿಂದ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಭವಿಷ್ಯ ಸುಧಾರಿಸುತ್ತದೆ ಎಂದು ನೀವು ಭಾವಿಸುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp