ಭೂತದ ಆರಾಧನೆ, ಹಾಡು, ಕುಣಿತವೇ ನಲಿಕೆಯವರ ಕಸುಬು

ಭೂತದ ವೇಷ ಕಟ್ಟಿ, ಪಾಡ್ದನದೊಂದಿಗೆ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದರೆ...
ಭೂತದ ಆರಾಧನೆ, ಹಾಡು, ಕುಣಿತವೇ ನಲಿಕೆಯವರ ಕಸುಬು

ಭೂತದ ವೇಷ ಕಟ್ಟಿ, ಪಾಡ್ದನದೊಂದಿಗೆ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದರೆ ಆ ದೃಶ್ಯವನ್ನು ನೋಡುವುದೇ ಚಂದ. ಅಷ್ಟೇ, ಅಲ್ಲ. ಭಯ ಮತ್ತು ಭಕ್ತಿ ಒಮ್ಮೆಗೆ ಆವರಿಸುತ್ತದೆ. ಅದುವೇ ಭೂತಾರಾಧನೆ. ಅಂದರೆ, ಇಷ್ಟವಾದ ದೈವಗಳನ್ನು ಆಹ್ವಾನಿಸಿ ಪೂಜೆ ಸಲ್ಲಿಸುವುದು. ಆ ದೈವಗಳು ನೀಡುವ ಸಂದೇಶವನ್ನು ಆಲಿಸುವುದಾಗಿದೆ.  
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಭೂತಾರಾಧನೆಗೆ ಪ್ರಮುಖ ಸ್ಥಾನವಿದೆ. ಇದರ ಜೊತೆಗೆ ನಾಗಾರಾಧನೆ ಮತ್ತು ಯಕ್ಷಾರಾಧನೆ ಸಹ ಶತ ಶತಮಾನಗಳಿಂದ ನಡೆದುಕೊಂಡು ಬಂದಿದೆ. ಈ ಮೂರು ಪದ್ಧತಿಗಳು ತುಳು ನಾಡಿನ ಜನರ ಜೀವನದ ಅವಿಭಾಜ್ಯ ಅಂಗವೂ ಆಗಿಹೋಗಿದೆ. ಇದರ ಹಿಂದೆ ಸಮುದಾಯವೊಂದರ ಶ್ರಮವೂ ಅಡಗಿದೆ.
ಅವರೇ ನಲಿಕೆಯವರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾದ್ಯಂತ ನೆಲೆಸಿರುವ ಈ ಸಮುದಾಯದ ಜನರು ತುಳು ನಾಡಿನ ನೆಲದಲ್ಲಿ ಪಾಡ್ದನಗಳ ಮೂಲಕ ಭೂತಾರಾಧನೆಯನ್ನೂ ಇಂದಿಗೂ ಆಚರಣೆಯಲ್ಲಿಟ್ಟಿದ್ದಾರೆ. ಅದಕ್ಕೆ ಅವರ ಶ್ರಮ ಮತ್ತು ಬದ್ಧತೆಯೂ ಕಾರಣವಾಗಿದೆ.

ಕೇರಳದಿಂದ ವಲಸೆ ಬಂದರು: ಸುಮಾರು 5-6 ಶತಮಾನದಲ್ಲಿ ಕೇರಳದ ಪಾಣನ್ ಎಂಬ ಜಾತಿಯ ಜನರು ಪಾಲ್ಗಾಟ್ ಕಣಿವೆ ಮೂಲಕ ಕಣ್ಣಾನೂರು ಕಡೆಯಿಂದ ಬಂದು ಕಾಸರಗೋಡಿನಲ್ಲಿ ನೆಲೆಸಿದರು. ಬಳಿಕ ಇದೇ ಜನರು ತುಳುನಾಡಿಗೆ ಪ್ರವೇಶ ಪಡೆದರು. ಕೆಲವರು ಕಾಸರಗೋಡಿನಿಂದ ಕುಂದಾಪುರಕ್ಕೆ ಬಂದು ವಾಸ್ತವ್ಯ ಹೂಡಿದರು.
ಕಾಸರಗೋಡಿನಲ್ಲಿ ಇವರಿಗೆ ಕೋಪಾಲರು ಎಂಬ ಹೆಸರಿದ್ದರೆ, ಸುಳ್ಯ ಮತ್ತು ಪುತ್ತೂರು ಭಾಗದಲ್ಲಿ ಅಜಿಲ ಎಂದು ಕರೆಯುತ್ತಾರೆ. ಮಂಗಳೂರು, ಬಂಟ್ವಾಳ, ಬೆಳ್ತಂಗಡಿ ಮತ್ತಿತರ ಕಡೆಗಳಲ್ಲಿ ನಲಿಕೆಯವ ಎನ್ನುವ ಹೆಸರಿನಿಂದ ಕರೆಯುತ್ತಾರೆ. ಇನ್ನು ಉಡುಪಿ, ಕುಂದಾಪುರ ಕಡೆಗಳಲ್ಲಿ ಪಾಣನ್ ಎಂದಿದೆ. ಪಾಣ, ಪಾಣಾರ ಮತ್ತು ಪಾಂಡ್ರಾ ಎನ್ನುವ ಹೆಸರುಗಳೂ ನಲಿಕೆಯವರಿಗೆ ಇದೆ.

ಹಾಡು, ಕುಣಿತವೇ ಕಸುಬು: ದಕ್ಷಿಣ ಕನ್ನಡ ಮತ್ತು ಉಡುಪಿಯ ಹಲವೆಡೆಗಳಲ್ಲಿ ನೆಲೆಸಿರುವ ಈ ಪಾಣಾರ ಸಮುದಾಯದವರಿಗೆ ಹಾಡು ಮತ್ತು ಕುಣಿತವೇ ಮೂಲ ಕಸುಬು. ಪಾಣಾರ ಎಂಬುದೇ ಮುಂದೆ ವೃತ್ತಿ ಆಧಾರದ ಮೇಲೆ ನಲಿಕೆ, ನಲಿಕೆಯವ, ಕೋಪಾಲ, ಅಜಿಲ ಎಂದಾಯಿತು. ನಲಿಕೆಯವರ ಕುರಿತಾಗಿ ವಾರ್ತಾ ಇಲಾಖೆ ಅಧಿಕಾರಿ ಬಸವರಾಜು ಅವರ ನಿರ್ವಹಣೆಯಲ್ಲಿ ಸಾಕ್ಷ್ಯಚಿತ್ರ ಮೂಡಿ ಬಂದಿದೆ. ಈ ಸಾಕ್ಷ್ಯಚಿತ್ರವನ್ನು ಸಿರಿಗಂಧ ಶ್ರೀನಿವಾಸ್ ಅವರು ಸಾಹಿತ್ಯ ಬರೆದು ನಿರ್ದೇಶಿಸಿದ್ದಾರೆ. ಅದರಲ್ಲಿ ಈ ಎಲ್ಲ ವಿವರಗಳೂ ಇವೆ.
ನೆರೆಯ ಕೇರಳ ರಾಜ್ಯದಿಂದ ಬಂದರೂ ನಲಿಕೆಯವರು ಇಲ್ಲಿಯ ಭಾಷೆ ಮತ್ತು ಸಂಸ್ಕೃತಿಯನ್ನು ಸ್ವೀಕರಿಸಿ ತುಳು ನಾಡಿನ ಆಚಾರ ಮತ್ತು ವಿಚಾರಗಳಲ್ಲಿ ಬೆರೆತು ಹೋದರು. ಜೊತೆಗೆ ಆರಾಧನಾ ಪದ್ಧತಿಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಷ್ಟೇ ಅಲ್ಲ, ದೈವಶಕ್ತಿ ಮತ್ತು ಭೂತಗಳ ಬಗ್ಗೆ ಜನರಲ್ಲಿ ವಿಶೇಷ ಗೌರವ ಮತ್ತು ಭಕ್ತಿ ಮೂಡುವಂತೆ ನೋಡಿಕೊಂಡರು.
ಹಾಡು ಮತ್ತು ಕುಣಿತವೇ ತಮ್ಮ ಜೀವನ ಎಂದುಕೊಂಡ ಪರಿಣಾಮ ನಲಿಕೆಯವರು ಬೇರೆ ಉದ್ಯೋಗದ ಕಡೆ ಹೆಚ್ಚಾಗಿ ಆಸಕ್ತಿ ತೋರಿಸಲಿಲ್ಲ. ಹಾಗೆಂದು ವರ್ಷಪೂರ್ತಿ ಇದರಲ್ಲೇ ಕಳೆದುಹೋಗುವುದಿಲ್ಲ. ಆರು ತಿಂಗಳು ಹಾಡು, ಕುಣಿತವಾದರೆ ಇನ್ನು ಆರು ತಿಂಗಳು ಕರಕುಶಲಕರ್ಮಿಗಳಾಗುತ್ತಾರೆ. ಹೊಲ ಗದ್ದೆಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಾರೆ.

ಅಲಂಕಾರದಲ್ಲಿ ಪ್ರಾವೀಣ್ಯತೆ: ಭೂತದ ವೇಷಧಾರಿಗೆ ಅಲಂಕಾರ ಮಾಡುವುದರಲ್ಲಿ ನಲಿಕೆಯವರು ನಿಪುಣರು. ಅವರು ಬಣ್ಣಗಾರಿಕೆಯಲ್ಲಿ ಪ್ರಾವೀಣ್ಯತೆ ಪಡೆದುಕೊಂಡಿದ್ದಾರೆ. ಪಾಡ್ದನಗಳನ್ನು ಲಯಬದ್ಧವಾಗಿ ಹಾಡುವ ಮೂಲಕ ಭೂತಾರಾಧನೆಯಲ್ಲಿ ತೊಡಗಿಕೊಂಡಿದ್ದಾರೆ. ತಮ್ಮ ನೆಲದಲ್ಲಿ ಬದುಕಿ ಬಾಳಿದ ಮತ್ತು ಅವರ ಮನೆತನಗಳ ಏಳುಬೀಳು ಮತ್ತು ಸ್ಥಳೀಯ ದೈವ ಭೂತಗಳ ಕಥೆಗಳನ್ನು ಒಳಗೊಂಡಿರುವ ಮೌಖಿಕ ಗೀತ ಸಂಪ್ರದಾಯವನ್ನು ಪಾಡ್ದನ ಎಂದು ಕರೆಯುತ್ತಾರೆ.
ಭೂತ ನರ್ತಕರು ಸುಂದರ ಮೈಕಟ್ಟು ಹೊಂದಿರುತ್ತಾರೆ. ಕಿವಿಗೆ ಹಿತ್ತಾಳೆ ಅಥವಾ ಚಿನ್ನದ ವಂಕಿ, ಕೈಗೆ ಬಂಗಾರ ಅಥವಾ ಬೆಳ್ಳಿ ಕಡಗ ಹಾಕುತ್ತಾರೆ. ಹೆಗಲ ಮೇಲೆ ಸದಾ ಕೆಂಪು ಬಣ್ಣದ ಶಾಲು ಇದ್ದೇ ಇರುತ್ತದೆ. ತಲೆಗೂದಲು ಉದ್ದವಾಗಿ ಬಿಡುವುದು ಇವರ ಮತ್ತೊಂದು ಸಂಪ್ರದಾಯ. ಹಾಗೆಯೇ ಬಟ್ಟೆಗಳ ಸ್ವಚ್ಛತೆಗೆ ಪ್ರಾಮುಖ್ಯತೆ ಕೊಡುತ್ತಾರೆ. ಕೆಲವರು ಹಣೆಗೆ ಕುಂಕುಮ, ಭಸ್ಮ ಇಡುತ್ತಾರೆ. ಕೆಲವರು ಕೇವಲ ಪಂಚೆ ಧರಿಸುತ್ತಾರೆ. ಪಾದರಕ್ಷೆ ಹಾಕದೆ, ಗಡ್ಡ, ಮೀಸೆ ಬಿಡದೆ ಓಡಾಡುವವರೂ ಉಂಟು.
ಈ ಭೂತ ನರ್ತಕರ ಪೈಕಿ ಕೆಲವರಿಗೆ ಉಂಬಳಿಯಾಗಿ ಬಂದಿರುವ ಜಮೀನುಗಳಿವೆ. ಅವರು ಅದರಲ್ಲೇ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಇವರಿಗೆ ಸರ್ಕಾರದಿಂದ ಹೇಳಿಕೊಳ್ಳುವ ಸವಲತ್ತುಗಳೇನೂ ಸಿಕ್ಕಿಲ್ಲ. ನಲಿಕೆಯವರದ್ದು ಗುಂಪು ಮನೆಗಳು ಜಾಸ್ತಿ. ಎಲ್ಲಡೆ ದೈವದ ಗುಡಿ ಇರುತ್ತದೆ. ದೈವದ ಮುಖವಾಡ ಮತ್ತು ಖಡ್ಗಕ್ಕೆ ನಿತ್ಯವೂ ಪೂಜೆ ಸಲ್ಲಿಕೆಯಾಗುತ್ತದೆ. ಮನೆಗಳೂ ಒಂಟಿಯಾಗಿದ್ದರೂ ಪುಟ್ಟದಾದ ದೇವಸ್ಥಾನವಂತೂ ಇದ್ದೇ ಇರುತ್ತದೆ.

ತುಳು ಭಾಷೆ ಬಳಕೆ: ನಲಿಕೆಯವರು ತುಳು ಭಾಷೆಯನ್ನೇ ಹೆಚ್ಚಾಗಿ ಬಳಸುತ್ತಾರೆ. ಜನಾಂಗೀಯವಾಗಿಯೂ ಇವರಿಗೆ ಒಂದು ಭಾಷೆ ಇದೆ. ಅದನ್ನು ಪಗರ್ ಎನ್ನುತ್ತಾರೆ. ಉಡುಪಿ, ಕುಂದಾಪುರದ ಪಾಣಾರರು ಕನ್ನಡವನ್ನೇ ಬಳಕೆ ಮಾಡುತ್ತಾರೆ. ಹಳೆಯ ತಲೆಮಾರಿನವರು ಓದು ಬರಹ ಗೊತ್ತಿಲ್ಲದಿದ್ದರೂ ಆಶುಕವಿಗಳಾಗಿದ್ದರು. 20-25 ಧಾಟಿಯಲ್ಲಿ ಪಾಡ್ದಲ ಹಾಡುವ ಕಲೆಯನ್ನು ಅವರು ಕರಗತ ಮಾಡಿಕೊಂಡಿದ್ದರು. ಸಮಯ ಸ್ಫೂರ್ತಿಯಿಂದ ಕಥೆಯ ಚೌಕಟ್ಟಿನೊಳಗೆ ಪಾಡ್ದನ ಹೆಣೆಯುವುದು ಇವರ ಇನ್ನೊಂದು ವಿಶೇಷ.
ತುಳು ನಾಡಿನ ಜನರಿಗಂತೂ ಈ ಪಾಡ್ದನಗಳು ತೀರಾ ಪರಿಚಿತ. ಎಣ್ಣೆ ಬೂಳ್ಯ ಹಿಡಿಯುವಾಗ, ಭೂತಾರಾಧನೆಗೆ ಮುನ್ನ ಸ್ನಾನ ಮಾಡಿ ವೇಷ ಹಾಕಲು ಸಿದ್ಧತೆ ನಡೆಸುವಾಗ ಮತ್ತು ಮುಖವಾಡ ಮತ್ತು ಆಯುಧಗಳನ್ನು ಧರಿಸುವಾಗ ಪಾಡ್ದನಗಳನ್ನು ಹಾಡಲಾಗುತ್ತದೆ. ಭೂತ ಕಟ್ಟಿದ ವ್ಯಕ್ತಿ ಜನರ ನಡುವೆ ಮರದ ಪೀಠದ ಮೇಲೆ ಕುಳಿತೂ ಪಾಡ್ದನ ಹಾಡುತ್ತಾನೆ. ಹೀಗೆ ಹಾಡುತ್ತಾ ಕುಣಿಯುವವರೇ ಬರವ, ಪಂಬದ, ನಲಿಕೆಯವ ಮತ್ತು ಪಾಣರು. ಇನ್ನು ಕೃಷಿ ಚಟುವಟಿಕೆಗಳು ಅಂದರೆ ಗದ್ದೆಗಳಲ್ಲಿ ನಾಟಿ ಮಾಡುವಾಗ, ಕಳೆ ತೆಗೆಯುವಾಗ ಮತ್ತಿತರ ಸಂದರ್ಭದಲ್ಲಿ ಹೆಂಗಸರು ಪಾಡ್ದನ ಹಾಡುತ್ತಾರೆ.
ಕಥೆ, ಒಗಟು, ಸೋಬಾನೆ ಪದಗಳು, ಮದುವೆ ಹಾಡುಗಳು ಈ ನಲಿಕೆಯವರ ಸಾಹಿತ್ಯ ಕಣಜದಲ್ಲಿ ತುಂಬಿ ಹೋಗಿದೆ. ಭೂತ ಕಟ್ಟಿದ ವ್ಯಕ್ತಿಗೆ ಆವೇಶ ಬಂದಾಗ ನೀಡುವ ಸಂದೇಶವನ್ನು ನುಡಿಕಟ್ಟು ಎನ್ನುತ್ತಾರೆ. ಈ ಸಂದರ್ಭದಲ್ಲಿ ವೇಷ ಹಾಕಿದ ವ್ಯಕ್ತಿ ತನ್ನನ್ನು ತಾನೇ ಮರೆತು ಹೋಗುತ್ತಾನೆ. ತಾನು ದೈವ ಎಂದು ಭಾವಿಸಿ ಅಪ್ಪಣೆ ಕೊಡುತ್ತಾನೆ. ಇದಕ್ಕೆ ತಕ್ಕಂತೆ ಆ ವ್ಯಕ್ತಿಯ ಮೊಗದಲ್ಲೂ ದೈವಕಳೆ ಎದ್ದು ಕಾಣುತ್ತಿರುತ್ತದೆ.

ಹಲವಾರು ಕುಣಿತಗಳು: ಆಟಿ ಕಳಂಜೆ, ಬೂತಕೋಲ, ಗುರು ಉಳ್ಳಾಲ್ತಿ, ಪಾಣಾರಾಟ, ದೇಯಿ ನಲಿಕೆ, ಜಾಲಾಟ, ಮಾಂಕಾಳಿ, ಜೋಗಿ, ಮಾಯಿದೆ ಪುರುಷ, ಕನ್ಯಾಪು, ಎರುಕೋಲ, ಕುದುರೆ ಕೋಲ, ಮಾದಿರ, ಜೋಗಿಲ, ಸೋಣದ ಮದಿಮ್ಮಲ್, ಮದ್ಮಯ ಮದಿಮಲ್, ಕೊರಗ, ಕೀಲು ಕುದುರೆ, ಜೋಗಿ ಪುರುಷ, ಕಾವೇರಿ ಪುರುಷ ಇತ್ಯಾದಿ ಕುಣಿತಗಳನ್ನು ನಲಿಕೆಯವರು ಪ್ರದರ್ಶಿಸುತ್ತಾರೆ.
ಈ ನಲಿಕೆಯರಿಗೆ ಉಳ್ಳಾಲ್ತಿ, ಶೃಂಗೇರಿ ಶಾರದೆ ಕುಲದೈವಗಳು. ತಿರುಪತಿಯ ವೆಂಕಟರಮಣ, ಶ್ರೀಕ್ಷೇತ್ರ ಧಮಸ್ಥಳದ ಮಂಜುನಾಥನನ್ನೂ ಪೂಜಿಸುತ್ತಾರೆ. ಬಿಡುವಿನ ವೇಳೆಯಲ್ಲಿ ಸಮುದಾಯದ ಜನರು ಚಾಪೆ, ಚತ್ರಿ, ಅಡಿಕೆ ಪಟ್ಟಿಯಿಂದ ಟೋಪಿ ಮತ್ತಿತರ ವಸ್ತುಗಳನ್ನು ತಯಾರು ಮಾಡುತ್ತಾರೆ. ಕೆಲವರು ಮನೆ ನಿರ್ಮಾಣ ಕಾಮಗಾರಿಯಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಾರೆ. ಇನ್ನೂ ಕೆಲವರು ನಾಟಿ ವೈದ್ಯದ ಕಡೆ ಮುಖ ಮಾಡುತ್ತಾರೆ. ಅಂದರೆ, ಗಿಡ ಮೂಲಿಕೆಗಳ ಮೂಲಕ ಔಷಧ ತಯಾರಿಸಿ ಜನರಿಗೆ ಕೊಡುತ್ತಾರೆ. ಮಂತ್ರ ವೈದ್ಯರೂ ಇವರಲ್ಲಿ ಉಂಟು.
ತಿಳಿವಳಿಕೆ ಕೊರತೆ ಕಾರಣ ಈ ಸಮುದಾಯ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ. ಸಂಘಟನಾ ಕೊರತೆಯೂ ಮತ್ತೊಂದು ಕಾರಣ. ಆದರೆ, ನಲಿಕೆಯವರ ಸಂಘ ಸ್ಥಾಪನೆಯಾದ ಬಳಿಕ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ. ಮುಖಂಡರು ಆ ಕೆಲಸ ಮಾಡುತ್ತಿದ್ದಾರೆ. ಆದರೂ ದೈವದ ಪ್ರತಿನಿಧಿಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಲಿಕೆಯವರು ಸಂಕಷ್ಟದಲ್ಲೇ ಜೀವನ ನಡೆಸುತ್ತಿದ್ದಾರೆ.

- ಕೆ.ವಿ.ಪ್ರಭಾಕರ
prabhukolar@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com