ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸೇವೆಯ ಮಹತ್ವ

ಯಾವುದೇ ಫಲಾಪೇಕ್ಷೆ ಇಲ್ಲದೆ ಶಾಂತಿ, ಅಹಿಂಸೆಯಿಂದ ದೇಶದ ಸ್ವಾತಂತ್ರ್ಯ...
ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸೇವೆಯ ಮಹತ್ವ
Updated on

ಯಾವುದೇ ಫಲಾಪೇಕ್ಷೆ ಇಲ್ಲದೆ ಶಾಂತಿ, ಅಹಿಂಸೆಯಿಂದ ದೇಶದ ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿದ ಧೀಮಂತ ವ್ಯಕ್ತಿಯೆಂದರೆ ಮಹಾತ್ಮ ಗಾಂಧಿ. ಯುದ್ಧ, ಸಂಘರ್ಷ, ಭಯೋತ್ಪಾದನೆಯ ಜಾಗತಿಕ ಕಾಲಮಾನದಲ್ಲಿ ಮನುಷ್ಯನ ಮಾನಸಿಕ ಸ್ಥಿತ್ಯಂತರಗಳು ಭುಗಿಲೆದ್ದು, ತನ್ನ ಸ್ಥಿಮಿತವನ್ನು ಕಳೆದುಕೊಳ್ಳುತ್ತಿದ್ದಾನೆ. ಪ್ರಪಂಚದಲ್ಲಿ ದೇಶ- ದೇಶಗಳ ನಡುವೆ, ಮನುಷ್ಯನ ನಡುವೆ ಅನೇಕ ಸಂಘರ್ಷಗಳು ನಡೆಯುತ್ತಿವೆ. ಇಂತಹ ಸಂಕ್ರಮಣ ಕಾಲದಲ್ಲಿ ಗಾಂಧೀಜಿಯ ತತ್ವಾದರ್ಶಗಳು ಪ್ರಸಕ್ತ ಜಗತ್ತಿಗೆ ಬೇಕಾಗಿದೆ. ಎಲ್ಲ ದೇಶದ ಜನರು ಗಾಂಧಿಯನ್ನು ಭಾವನಾತ್ಮಕವಾಗಿ ಸ್ಮರಿಸುತ್ತಾರೆ. ಇಂಥ ಸಂಘರ್ಷಗಳ ನಿಯಂತ್ರಣಕ್ಕೆ ಗಾಂಧೀಜಿಯ ಶಾಂತಿ, ಅಹಿಂಸೆಯೇ ಮದ್ದಾಗಬಲ್ಲದು ಎಂಬ ಮನೋಭಾವನೆ ಇದೆ.
ಮಹಾತ್ಮ ಗಾಂಧೀಜಿ ಅವರ ಜನ್ಮಶತಮಾನೋತ್ಸವ ವರ್ಷದ ಪ್ರಯುಕ್ತ, 24 ಸೆಪ್ಟೆಂಬರ್ 1969ರಲ್ಲಿ ಆರ್ಥಿಕ ತಜ್ಞರೂ, ಕೇಂದ್ರದ ಮಾಜಿ ಶಿಕ್ಷಣ ಮಂತ್ರಿಗಳೂ ಆಗಿದ್ದ ಡಾ.ವಿ.ಕೆ.ಆರ್.ವಿ. ರಾವ್ ಅವರಿಂದ ರಾಷ್ಟ್ರೀಯ ಸೇವಾ ಯೋಜನೆಯು ಅಧಿಕೃತವಾಗಿ ಉದ್ಘಾಟನೆಯಾಯಿತು. ಈಗಾಗಲೇ ನಾಲ್ಕೂವರೆ ದಶಕಗಳನ್ನು ದಾಟಿರುವ ಯೋಜನೆಯು, ದೇಶದಾದ್ಯಂತ ಸಾವಿರಾರು ಸ್ವಯಂ ಸೇವಕರು ಸಮಾಜೋದ್ಧಾರಕ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಗಾಂಧೀಜಿಯ ಜೀವನ ಸಂದೇಶವೆಲ್ಲ ಸೇವೆಗೆ ಸಂಬಂಧಿಸಿದ್ದು. ಸೇವೆ ಇಲ್ಲದ ಜೀವನ ಅದು ಜೀವನವೇ ಅಲ್ಲ. ಬೇರೆಯವರಿಗಾಗಿ ಬದುಕಿರುವವರು ಮಾತ್ರ ಬದುಕಿದಂತೆ, ಉಳಿದವರು ಬದುಕಿದ್ದರೂ ಸತ್ತಂತೆ.
ಗಾಂಧೀಜಿಯ ಆಶಯದಂತೆ ಅನುಭವ ಮತ್ತು ಪರಿಶ್ರಮಕ್ಕೆ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಹೆಚ್ಚು ಗಮನ ಹರಿಸಲಾಗಿದೆ. ರಾಷ್ಟ್ರ ಪ್ರಗತಿಯಾಗಬೇಕಾದರೆ ನಮ್ಮ ಯುವಜನಾಂಗ, ಅದರಲ್ಲಿಯೂ ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಯನ್ನರಿತು ಬದುಕಿನೊಡನೆ ನೇರ ಸಂಪರ್ಕವಿಟ್ಟುಕೊಳ್ಳಬೇಕು ಎಂಬುದು ಗಾಂಧೀಜಿ ಅವರ ಕನಸಾಗಿತ್ತು. ಸೇವೆಯ ಮೂಲಕ ಸಮಾಜದ ಅರಿವು ಮೂಡಿಸುವುದು ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಉದ್ದೇಶ. ಇದರಿಂದ ಸ್ವಯಂಸೇವಕರ ವ್ಯಕ್ತಿತ್ವ ವಿಕಸನವಾಗುತ್ತದೆ. ಸಮಾಜಸೇವೆಯ ಪ್ರಜ್ಞೆ ಜಾಗೃತಗೊಳ್ಳುತ್ತದೆ.
ಸೇವೆ ಎನ್ನುವ ಪದ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಅತ್ಯಂತ ಮಹತ್ವವನ್ನು ಪಡೆದಿದೆ. ನಮ್ಮಲ್ಲಿರುವ ಶ್ರಮ, ವಿದ್ಯೆ, ಬುದ್ಧಿ, ಜ್ಞಾನ, ಕೌಶಲ್ಯ, ಆರ್ಥಿಕ ಸೌಲಭ್ಯ ಇತ್ಯಾದಿಗಳನ್ನು ಸಮಾಜದ, ದೇಶದ ಒಳಿತಿಗಾಗಿ ಫಲಾಪೇಕ್ಷೆ ಇಲ್ಲದೆ ಅರ್ಪಣಾಮನೋಭಾವದಿಂದ ನೀಡುವ ಸಹಾಯವೇ ಸೇವೆ. ಸೇವಾ ಚಟುವಟಿಕೆ ನಮ್ಮ ಜೀವನದ ಅವಿಭಾಜ್ಯ ಭಾಗ ಹಾಗೂ ಸ್ವಭಾವವಾಗಬೇಕು.
ರಾಷ್ಟ್ರದ ಅನೇಕ ಕಾಲೇಜಿನ ಸಾವಿರಾರು ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಈಗಾಗಲೇ ಸ್ವಯಂಸೇವಕರಾಗಿ ದೈನಂದಿನ ಮತ್ತು ವಿಶೇಷ ಶಿಬಿರಗಳಲ್ಲಿ ಪಾಲ್ಗೊಂಡು ತಮ್ಮ ಸೇವೆಯನ್ನು ಧಾರೆ ಎರೆಯುತ್ತಿದ್ದಾರೆ. ಸೇವೆಯ ಕಡೆಗೆ ವಿದ್ಯಾರ್ಥಿಗಳ ಮನಸ್ಸನ್ನು ಒಲಿಸುವುದು ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶವಾಗಿದೆ. ಶಿಕ್ಷಣದ ಉದ್ದೇಶವೂ ಇದೇ ಆಗಬೇಕು. ಸೇವೆ ಎನ್ನುವುದು ಜೀವನದ ಪ್ರಮುಖ ಉದ್ದೇಶವಾಗಬೇಕು. ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ನಂತರವೂ ಸೇವೆ, ಅನುಕಂಪನದ ಸಾರ್ಥಕ ಜೀವಿಯಾಗಬೇಕು. ಕಾಲೇಜುಗಳಲ್ಲಿ ಸಾಮಾನ್ಯವಾಗಿ ಎರಡು ವರ್ಗದ ಅಂದರೆ ಬಡ ಮತ್ತು ಶ್ರೀಮಂತ ವಿದ್ಯಾರ್ಥಿಗಳಿರುತ್ತಾರೆ. ಬಡ ವಿದ್ಯಾರ್ಥಿಗಳಿಗೆ ಶ್ರಮದ ಬದುಕಿನ ಅನುಭವವಿರುತ್ತದೆ, ಆದರೆ ಶ್ರೀಮಂತ ವಿದ್ಯಾರ್ಥಿಗಳಿಗೆ ಇರುವುದಿಲ್ಲ. ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಭಾಗವಹಿಸಿದಾಗ ಇವರಿಬ್ಬರ ಮಿಶ್ರಣದಿಂದ ಸಮಾನತಾ ಭಾವನೆ ಮೂಡುವುದಕ್ಕೆ ಸಾಧ್ಯವಾಗುತ್ತದೆ.
ಇಂದು ನಮ್ಮ ಸಮಾಜ ರಾಜಕೀಯ ಸಮಸ್ಯೆಗಳಿಗಿಂತ ಹೆಚ್ಚಾಗಿ ಸಾಮಾಜಿಕ ಸಮಸ್ಯೆಗಳಿಂದ ನಲುಗುತ್ತಿದೆ. ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಕಾನೂನು, ಸಂವಿಧಾನ, ನ್ಯಾಯಾಂಗ, ಕಾರ್ಯಾಂಗದಂಥ ಉಪಾಯಗಳಿಗಿಂತ ಗಾಂಧಿ ಹೇಳಿದಂತಹ ರಚನಾತ್ಮಕ ಕಾರ್ಯಗಳನ್ನು ದೇಶದ ಏಳು ಲಕ್ಷ ಹಳ್ಳಿಗಳಲ್ಲೂ ಏಕಕಾಲಕ್ಕೆ ಕೈಗೊಳ್ಳಬೇಕಾಗಿದೆ. ಆದ್ದರಿಂದಲೇ ಸ್ವಾತಂತ್ರ್ಯ ಬಂದ ಕೂಡಲೇ ಗಾಂಧೀ ದೇಶದ ಯುವ ಜನತೆಗೆ ಹಳ್ಳಿಗಳಿಗೆ ಹಿಂದಿರುಗಿ ಎಂದು ಕರೆಕೊಟ್ಟಿದ್ದು. ಈ ಹಿನ್ನೆಲೆಯಲ್ಲಿ ಹಳ್ಳಿಗಳ ಉದ್ಧಾರದ ನೆಲೆಯಲ್ಲಿ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು.
ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡ ವಿದ್ಯಾರ್ಥಿ ತನ್ನ ಜೀವನದಲ್ಲಿ ಒಬ್ಬ ಉತ್ತಮ ಆದರ್ಶ ವಿದ್ಯಾರ್ಥಿಯಾಗುತ್ತಾನೆ. ವಿಶೇಷ ಶಿಬಿರಗಳನ್ನು ಏರ್ಪಡಿಸಿದಂತಹ ಸಂದರ್ಭದಲ್ಲಿ ಗ್ರಾಮಾಂತರ ಪ್ರದೇಶದಲ್ಲಿನ ಜನಜೀವನದ ಬದುಕಿನ ಒಡನಾಟದ ಚಿತ್ರಣವನ್ನು ನೇರವಾಗಿ ಕಂಡರಿಯುತ್ತಾನೆ. ಮುಂದೊಂದು ದಿನ ಒಳ್ಳೆಯ ಸ್ಥಾನ ದೊರೆತ ಸಂದರ್ಭದಲ್ಲಿ ಸಾಮಾಜಿಕ ಬದ್ಧತೆಯಿಂದ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಸಾಮಾಜಿಕ ಸೇವೆ ಸಲ್ಲಿಸುವುದಕ್ಕೆ ಸಾಧ್ಯವಾಗುತ್ತದೆ.
ದೈನಂದಿನ ಮತ್ತು ವಿಶೇಷ ವಾರ್ಷಿಕ ಶಿಬಿರ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನೀಡುವುದರಿಂದ ಸ್ವಯಂಸೇವಕರ ವ್ಯಕ್ತಿತ್ವ ವಿಕಸನವಾಗುತ್ತದೆ. ಹಳ್ಳಿ ಜನರಿಗೆ ಆರೋಗ್ಯ, ಕಾನೂನು, ಪರಿಸರ ನೈರ್ಮಲ್ಯ, ಶಿಕ್ಷಣ, ಸಾಮಾಜಿಕ ಪಿಡುಗುಗಳು, ಭ್ರಷ್ಟಾಚಾರ ನಿರ್ಮೂಲನೆ, ಸ್ತ್ರೀಸಬಲೀಕರಣ ಇತ್ಯಾದಿ ವಿಷಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಾಗ ಜಾಗೃತಿ ಉಂಟಾಗುತ್ತದೆ. ಊರಿನ ಕೊಳೆಯನ್ನು ತೊಳೆಯುವುದಕ್ಕಿಂತ ಮಿಗಿಲಾಗಿ ಮನುಷ್ಯನ ಮನಸ್ಸಿನಲ್ಲಿರುವ ಕೊಳೆಯನ್ನು ನಾಶ ಮಾಡುವುದು ಪ್ರಮುಖವಾದುದು. ಪ್ರಸಕ್ತ ಜಾಗತಿಕ ಕಾಲಮಾನದಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವುದು ತುಂಬ ಕಷ್ಟ. ಜಾತಿಪದ್ಧತಿ, ಅರ್ಥವಿಲ್ಲದ ಸಂಪ್ರದಾಯಗಳು, ಮೌಢ್ಯತೆ, ಕಟ್ಟುಕಟ್ಟಳೆಗಳು ಮುಂತಾದವುಗಳನ್ನು ಹೋಗಲಾಡಿಸಬೇಕಾದರೆ ಜನರ ಭಾವನೆಗಳನ್ನು ಬದಲಾಯಿಸಲು ವ್ಯವಸ್ಥಿತವಾಗಿ ನಿರಂತರ ಪ್ರಯತ್ನಿಸಬೇಕು. ಪ್ರಸಕ್ತ ದಿನಮಾನದಲ್ಲಿ ಸಾಮಾಜಿಕ ಪರಿವರ್ತನೆ ಮಾಡುವುದು ತುಂಬಾ ಕಷ್ಟ. ಆದರೂ ನಿರಂತರ ಪ್ರಯತ್ನ ಮಾಡಬೇಕು. ಜಾತಿಪದ್ಧತಿ, ಮೇಲು-ಕೀಳು ಎಂಬ ಮನೋಭಾವ ಅಮಾನೀಯವಾದುದು. ಇದನ್ನು ತೊಡೆದು ಹಾಕುವ ಪ್ರಯತ್ನ ಮಾಡಬೇಕು. ಏನಾದರೂ ಆಗು ಮೊದಲು ಮಾನವನಾಗು ಎನ್ನುವಂತಾಗಬೇಕು. ವಿದ್ಯಾರ್ಥಿಗಳ ಮತ್ತು ಜನರಲ್ಲಿ ತಿಳಿವಳಿಕೆ ಉಂಟಾಗಬೇಕು. ರಾಷ್ಟ್ರೀಯ ಸೇವಾ ಯೋಜನೆ ಈ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಬೇಕು.
ಸೇವೆ ಎಂಬುದು ಸಂಸ್ಕೃತಿಯ ಒಂದು ಭಾಗವೇ ಆಗಿದೆ. ಸೇವೆಯೇ ಪರಮಧರ್ಮ, ಸೇವೆಯೇ ಅತಿ ಶ್ರೇಷ್ಠವಾದ ಧಾರ್ಮಿಕಭಾವ. ನಿಜವಾದ ಸೇವೆಯನ್ನು ನಾವು ಕಂಡು ಮೆಚ್ಚುತ್ತೇವೆ, ಕೆಲವು ಸಲ ಆಶ್ಚರ್ಯಪಡುತ್ತೇವೆ. ಈ ಅರ್ಥದಲ್ಲಿ ಸೇವೆಯು ತ್ಯಾಗದ ಒಂದು ಮುಖವಾಗಿ ಕಂಡುಬರುತ್ತದೆ. ನಿಜವಾಗಿಯೂ ಸೇವೆ ಎನ್ನುವುದು ನಿಸ್ವಾರ್ಥಭಾವದಿಂದಲೇ ಆಗಬೇಕು. ನಿಸ್ವಾರ್ಥ ಸೇವೆಯಲ್ಲಿ ಕರ್ಮಬಂಧನ ಇರುವುದಿಲ್ಲ. ಸಾಮಾನ್ಯವಾಗಿ ಕರ್ಮವು ಜೀವವನ್ನು ಬಂಧಿಸುತ್ತದೆ. ಆದರೆ ಸೇವೆಯು ಬಂಧನದಿಂದ ಬಿಡುಗಡೆ ಮಾಡುತ್ತದೆ.

  ಡಾ.ಎನ್.ಆರ್. ಚಂದ್ರೇಗೌಡಸಂಯೋಜನಾಧಿಕಾರಿ
ರಾ.ಸೇ.ಯೋ ಅಧಿಕಾರಿಗಳ ತರಬೇತಿ ಸಂಸ್ಥೆ
ಕರಾಮುವಿವಿ, ಮೈಸೂರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com