ಕರ್ನಾಟಕದಲ್ಲಿ ಜನಪದ ಕಲೆ ಹಾಗೂ ಜನಪದ ಕಲಾವಿದರ ಪುನರುತ್ಥಾನ

ಕೊನೆಗಾಲದಲ್ಲಿ ನೀಡುವ ಮಾಶಾಸನ, ಪ್ರಶಸ್ತಿಗಳು ಕಲಾವಿದರು ಮತ್ತು ಅವರು ಉಳಿಸಿಕೊಂಡು ಬಂದ ಜನಪದಕಲೆಯ ಉಳಿವಿಗೂ ಹೇಗೆ ಉತ್ತರವಾಗುತ್ತವೆ..
Updated on

ಕೊನೆಗಾಲದಲ್ಲಿ ನೀಡುವ ಮಾಶಾಸನ, ಪ್ರಶಸ್ತಿಗಳು ಕಲಾವಿದರು ಮತ್ತು ಅವರು ಉಳಿಸಿಕೊಂಡು ಬಂದ ಜನಪದಕಲೆಯ ಉಳಿವಿಗೂ ಹೇಗೆ ಉತ್ತರವಾಗುತ್ತವೆ ಎಂಬುದೇ ಜಿಜ್ಞಾಸೆ.

"ಕೊಟ್ಟಗಿರಿಪಟ್ಟಣವ ಬಿಟ್ಟು ಚೌಡನು ಹೊರಟ, ನಿಟ್ಟು ಕಲ್ಯಾಣ ಸೇರುದಕೆ/ ಶರಣರಿಗೆ ಗುಟ್ಟು ತಿಳಿಸುದಕೆ ಕಾಯಕದ ಬಾರಿಸುತ ಹಾಡುವನು ತೋರಿಸಲು ಕುಣಿಯುವನು/ ಸಾಮತಲಿ ಬಂದ ಹೊಸಮತವ ಚೌಡಯ್ಯ"
ಬೀದರ್ ಜಿಲ್ಲೆಯ ರೇಕಳಿಕೆಯಲ್ಲಿ ಹುಟ್ಟಿದ ಚೌಡಯ್ಯ ಮೂಲತಃ ವೇಷಗಾರ ಕಲೆಯ ಕಲಾವಿದ. ಬಸವೇಶ್ವರರ ಸಮಕಾಲೀನ. ಶಿವಶರಣರಲ್ಲಿ ಪ್ರಮುಖನಾದವನು. ವಚನಯುಗದ ಬಹುರೂಪಿ ಜನಪದ ಕಲಾವಿದ ಮೊದಲು ದಾಖಲಾಗಿರುವುದು ಹಂತಿಪದದಲ್ಲಿ. ಹಾಗೆಯೇ ಪ್ರೊ.ಹಿ.ಚಿ.ಬೋರಲಿಂಗಯ್ಯ ಅವರು ಸಂಪಾದಿಸಿರುವ ಕರ್ನಾಟಕ ಜನಪದ ಕಲೆಗಳ ಕೋಶದ 13 ಭಾಗಗಳಲ್ಲಿ 164 ಜನಪದ ಕಲೆಗಳನ್ನು ದಾಖಲಿಸಲಾಗಿದೆ. ಆದರೆ ಇದುವರೆಗೂ ಜನಪದ ಕಲೆಗಳನ್ನು ಪ್ರದರ್ಶಿಸುವ ಕಲಾವಿದರ ಬದುಕನ್ನು ಹೇಗೆ ಕಲಾ ಪ್ರದರ್ಶನದ ಮೂಲಕವೇ ಉಳಿಸಬೇಕು ಎಂಬ ಚಿಂತನೆ ನಡೆದಿರುವುದು ವಿರಳ.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಕರ್ನಾಟಕ ಜ್ಞಾನ ಆಯೋಗದ ಸಹಯೋಗದೊಂದಿಗೆ ಇತ್ತೀಚೆಗೆ ಹಾವೇರಿ ಜಿಲ್ಲಾ ಜಾನಪದ ಸರ್ವೇಕ್ಷಣೆ ಮತ್ತು ಬಹುಮುಖೀ ದಾಖಲೀಕರಣ ಯೋಜನೆಯ ಸಂಬಂಧ ಕೈಗೊಂಡ ಕ್ಷೇತ್ರ ಸಮೀಕ್ಷೆಯಲ್ಲಿ ಜನಪದ ಕಲೆ ಮತ್ತು ಕಲಾವಿದರ ಸಮೀಕ್ಷೆಯನ್ನು ನಡೆಸಲಾಗಿತ್ತು. ಹಾವೇರಿ ಜಿಲ್ಲೆಯ ಏಳು ತಾಲೂಕುಗಳಲ್ಲಿ ಸೋಬಾನೆ, ಹಂತಿಪದ, ರಿವಾಯತ್ ಪದ, ದೊಡ್ಡಾಟ, ಡೊಳ್ಳುಕುಣಿತ, ಪುರವಂತಿಕೆ, ಗೊಂದಲಿಗ ಮುಂತಾದ ಕಲೆಗಳು ಕಂಡುಬಂದಿವೆ. ಜನಪದ ಕಲೆಗಳಲ್ಲಿ ಪರಿಣತಿ ಹೊಂದಿದ 40 ವರ್ಷ ವಯೋವಾನ ದಾಟಿದ 735 ಜನಪದ ಕಲಾವಿದರ ಪ್ರಾಥಮಿಕ ಮಾಹಿತಿ ದಾಖಲು ಮಾಡಲಾಗಿದೆ. ಹಾವೇರಿ ಜಿಲ್ಲೆಯಲ್ಲೇ ಇಷ್ಟು ಸಂಖ್ಯೆಯಲ್ಲಿ ಕಲಾವಿದರು ದಾಖಲಾಗಿರುವಾಗ ಇನ್ನು ನಾಡಿನಾದ್ಯಂತ ಎಷ್ಟು ಕಲಾವಿದರಿರಬಹುದು?
ಕರ್ನಾಟಕದಲ್ಲಿ ಜನಪದ ಕಲೆಗಳು ಮತ್ತು ಪ್ರದರ್ಶನಕಾರರಿಗೆ ಕೊರತೆಯೇನಿಲ್ಲ. ಅದರ ನಿರ್ವಹಣೆಗಾಗಿ ಒಂದು ವೈಜ್ಞಾನಿಕ ರೂಪುರೇಷೆ ಸಿದ್ಧಪಡಿಸಬೇಕಿದೆ. ಪ್ರಸ್ತುತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕರ್ನಾಟಕ ಜಾನಪದ ಅಕಾಡೆಮಿಯ ಮೂಲಕ ಪ್ರತಿ ಜಿಲ್ಲೆಯಲ್ಲೂ ಕಲಾವಿದರ ಮುಖಾಮುಖಿ ನಡೆಸಿ 65ವರ್ಷಕ್ಕೆ ಮೇಲ್ಪಟ್ಟ ಜನಪದ ಕಲಾವಿದರಿಗೆ ಸರ್ಕಾರದ ವತಿಯಿಂದ ಒಂದು ಸಾವಿರ ರುಪಾಯಿಗಳ ಮಾಶಾಸನ ನೀಡುತ್ತಿದೆ. ಗೊ.ರು. ಚನ್ನಬಸಪ್ಪ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಜಾನಪದ ಕಲಾವಿದರ ಆರೋಗ್ಯದ ನಿರ್ವಹಣೆಗಾಗಿ ಒಂದು ಕೋಟಿಯ ಠೇವಣಿ ಹಣ ಸಂಗ್ರಹಿಸುವ ಯೋಜನೆ ಹೊಂದಿದ್ದರು. ಅದಕ್ಕೆ ಸರ್ಕಾರದ ಇಡುಗಂಟನ್ನು ಕೋರಿದ್ದರು. ತಮಗೆ ಅಕಾಡೆಮಿಯಿಂದ ದೊರೆತ ಮೂರು ಲಕ್ಷಕ್ಕೂ ಹೆಚ್ಚು ಭತ್ಯೆಯ ಹಣವನ್ನು ಆ ಸಂಬಂಧಿ ಖಾತೆಗೆ ಜಮಾ ಮಾಡಿದ್ದಾರೆ.
ಕರ್ನಾಟಕ ಸರ್ಕಾರ ಜಾನಪದ ಕ್ಷೇತ್ರದ ಶ್ರೇಷ್ಠ ಕಲಾವಿದರಿಗೆ ರಾಜ್ಯ ಮಟ್ಟದಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಶ್ರೀ ಪ್ರಶಸ್ತಿಗಳನ್ನು ನೀಡುತ್ತಿದೆ. ಕಲಾವಿದರ ಆಯ್ಕೆಯು ಆಯಾ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಸುಪರ್ದಿಯಲ್ಲೇ ನಡೆಯುತ್ತಿದೆ. ಪ್ರಶಸ್ತಿ ಪಡೆಯುವ ಇಳಿವಯಸ್ಸಿನ ವೃದ್ಧರು ತಮ್ಮ ಬದುಕನೆಲ್ಲಾ ಜನಪದ ಕಲೆಗಾಗಿ ತೇಯ್ದುಕೊಂಡಿರುತ್ತಾರೆ. ಹಣ, ಮನೆ, ಆಸ್ತಿಗಳನ್ನು ಕಳೆದುಕೊಂಡಿರುವ ಕಲಾವಿದರ ಉದಾಹರಣೆಗಳು ವಿಫುಲವಾಗಿವೆ. ಹಿರಿಯ ಕಲಾವಿದರಿಗೆ ಮಾಶಾಸನ, ಪ್ರಶಸ್ತಿ ಗೌರವ ಕೊಡುವ ಪರಂಪರೆ ಸ್ವಾಗತಾರ್ಹ. ಆದರೆ ಕೊನೆಗಾಲದಲ್ಲಿ ನೀಡುವ ಮಾಶಾಸನ, ಪ್ರಶಸ್ತಿಗಳು ಕಲಾವಿದರು ಮತ್ತು ಅವರು ಉಳಿಸಿಕೊಂಡು ಬಂದ ಜನಪದಕಲೆಯ ಉಳಿವಿಗೂ ಹೇಗೆ ಉತ್ತರವಾಗುತ್ತವೆ ಎಂಬುದೇ ಜಿಜ್ಞಾಸೆ. ಕರ್ನಾಟಕ ಜನಪದಕಲೆ ಮತ್ತು ಕಲಾವಿದರ ಉಳಿವಿನ ಸಂಬಂಧಿ ನಮ್ಮಲ್ಲೇ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾದುದು ಅನಿವಾರ್ಯ ಮತ್ತು ಅವಶ್ಯಕ. ಅದೆಂದರೆ-
-ಪ್ರಸ್ತುತ ಅಸ್ತಿತ್ವವಿರುವ ಮತ್ತು ಪ್ರದರ್ಶನ ನಡೆಸುತ್ತಿರುವ ಕಲೆಗಳು, ಕಲಾತಂಡಗಳು ಮತ್ತು ಕಲಾವಿದರ ಸಮಗ್ರ ಪಟ್ಟಿಯನ್ನು ಕನ್ನಡ ಸಂಸ್ಕೃತಿ ಇಲಾಖೆ ತಯಾರಿಸಬೇಕು.
-ಅಳಿವಿನಂಚಿನಲ್ಲಿರುವ ಕಲೆಗಳ ಪಟ್ಟಿ ತಯಾರಿಸಬೇಕು. ಅದರ ಪರಂಪರಾಗತ ವಾಹಕರು/ ಪ್ರದರ್ಶನಕಾರರು ಇದ್ದರೆ ಅವರಿಂದ ಆ ಕಲೆಗಳ ಬಗೆಗೆ ದಾಖಲು ಮಾಡಿಕೊಂಡು ಅದನ್ನು ಕಲಿಸುವ ವ್ಯವಸ್ಥೆ ಮಾಡಬೇಕು: ಮೂಡಲಪಾಯ ಯಕ್ಷಗಾನ, ತೊಗಲುಗೊಂಬೆಯಾಟ, ಸೂತ್ರದಗೊಂಬೆಯಾಟ, ದೊಡ್ಡಾಟ, ಸಣ್ಣಾಟ, ರಾಧನಾಟ, ಜೋಗತಿಕುಣಿತ, ಕಿನ್ನರಿ ಜೋಗಿ, ಕೋಲಾಟ ಇತ್ಯಾದಿ. ಇವುಗಳ ಪುನರುತ್ಥಾನ ಮಾಡಲು ಪ್ರತಿ ಮಾಹೆಯಲ್ಲೂ ಪ್ರದರ್ಶನ ಏರ್ಪಡಿಸಬೇಕು.
-ಪ್ರತಿ ಗ್ರಾಮ ಪಂಚಾಯ್ತಿಯ ಮಟ್ಟದಲ್ಲಿ ಬಯಲುರಂಗ ಮಂದಿರಗಳನ್ನು ನಿರ್ಮಿಸಿ, ಆಯಾ ಪಂಚಾಯ್ತಿ ವ್ಯಾಪ್ತಿಯ ಜನಪದ ಕಲೆಗಳನ್ನು ಪ್ರದರ್ಶಿಸಲು ಗ್ರಾಮಪಂಚಾಯ್ತಿಯ ಮೂಲಕ ಸಹಾಯಧನ ನೀಡಬೇಕು.
- ಕರ್ನಾಟಕದ ಎಲ್ಲಾ ಗ್ರಾಮಗಳಲ್ಲಿರುವ ಗ್ರಾಮಪಂಚಾಯ್ತಿ ವತಿಯಿಂದ ಮೂವತ್ತು ವರ್ಷ ಮೇಲ್ಪಟ್ಟ ಎಲ್ಲಾ ವರ್ಗದ ಜನಪದ ಕಲಾವಿದರು ಮತ್ತು ಜನಪದ ಕಲೆಗಳನ್ನು ಅವಲಂಬಿಸಿರುವ ವಾದ್ಯಗಾರರು, ಮುಖವರ್ಣಿಕೆ ಕಲಾವಿದರು, ಮತ್ತು ಇನ್ನಿತರೆ ಸಹ ಕಲಾವಿದರು ಕನ್ನಡ ಸಂಸ್ಕೃತಿಯಲ್ಲಿ ನೋಂದಣಿ ಆಗಬೇಕು. ನೋಂದಣಿ ಮಾಡಿಕೊಂಡ ಕಲಾವಿದನಿಗೆ ಆಯಾ ಕಲೆಯ ಸಂಪೂರ್ಣ ಅರಿವಿದೆಯೇ ಎಂಬುದನ್ನು ಆಯಾ ಕಲೆಯ ಹಿರಿಯ ಕಲಾವಿದರು, ಜಾನಪದ ವಿದ್ವಾಂಸರು ಮತ್ತು ಅಧಿಕಾರಿಗಳ ತಂಡ ನಿರ್ಧರಿಸಬೇಕು. ಸ್ಥಳೀಯವಾಗಿ ನೋಂದಣಿ ಮಾಡಿದ ಕಲಾವಿದನಿಗೆ ಗ್ರಾಮಮಟ್ಟದಲ್ಲಿ ವಾರ್ಷಿಕ ಆರು ಕಾರ್ಯಕ್ರಮಗಳನ್ನು ನೀಡಲು ಅವಕಾಶ ಕಲ್ಪಿಸಬೇಕು. ಒಂದು ಪ್ರದರ್ಶನಕ್ಕೆ ಕನಿಷ್ಠ ಒಂದು ಸಾವಿರ ರು. ಗಳ ಗೌರವಧನ ಕೊಡಬೇಕು. ಗ್ರಾಮಮಟ್ಟದಲ್ಲಿ ಐದು ವರ್ಷ ಪ್ರದರ್ಶನ ಮಾಡಿದ ಗ್ರಾಮ ಪಂಚಾಯ್ತಿ ಮಟ್ಟದ ಕಲಾವಿದನಿಗೆ ತಾಲೂಕು ಮಟ್ಟದಲ್ಲಿ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಬೇಕು. ಒಂದು ಪ್ರದರ್ಶನಕ್ಕೆ ಕನಿಷ್ಠ ಎರಡು ಸಾವಿರ ರು.ಗಳ ಗೌರವಧನ ಕೊಡಬೇಕು. ತಾಲೂಕು ಮಟ್ಟದಲ್ಲಿ ಮೂರು ವರ್ಷ ಪ್ರದರ್ಶನ ಮಾಡಿದ ಕಲಾವಿದನಿಗೆ ಜಿಲ್ಲಾ ಮಟ್ಟದಲ್ಲಿ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಬೇಕು. ಒಂದು ಪ್ರದರ್ಶನಕ್ಕೆ ಐದು ಸಾವಿರ ರು. ಗಳ ಗೌರವಧನ ಕೊಡಬೇಕು.  ಜಿಲ್ಲಾ ಮಟ್ಟದಲ್ಲಿ ಐದು ವರ್ಷ ಪ್ರದರ್ಶನ ಮಾಡಿದ ಕಲಾವಿದನಿಗೆ ರಾಜ್ಯ ಮಟ್ಟದಲ್ಲಿ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಬೇಕು. ಕನಿಷ್ಠ ಒಂದು ಪ್ರದರ್ಶನಕ್ಕೆ  ಹತ್ತು ಸಾವಿರ ರು. ಗಳ ಗೌರವಧನ ಕೊಡಬೇಕು.  ರಾಜ್ಯ ಮಟ್ಟದಲ್ಲಿ ಐದು ವರ್ಷ ಪ್ರದರ್ಶನ ಮಾಡಿದವರಿಗೆ ರಾಷ್ಟ್ರಮಟ್ಟದ ಕಾರ್ಯಕ್ರಮಗಳಿಗೆ  ಶಿಫಾರಸ್ಸು ಮಾಡಿ ಒಂದು ಪ್ರದರ್ಶನಕ್ಕೆ ಕನಿಷ್ಠ ಇಪ್ಪತೈದು ಸಾವಿರಗಳನ್ನು ನಿಗದಿಪಡಿಸಬೇಕು. ಅಂತೆಯೇ ರಾಷ್ಟ್ರಮಟ್ಟದಲ್ಲಿ ಐದು ಪ್ರದರ್ಶನ- ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಿಗೆ ಶಿಫಾರಸ್ಸು- ಒಂದು ಪ್ರದರ್ಶನಕ್ಕೆ ಕನಿಷ್ಟ ಒಂದು ಲಕ್ಷ ರುಪಾಯಿಗಳು.
-ಕರ್ನಾಟಕದ ಒಳಗಡೆ ಜರುಗುವ ರಾಜ್ಯ ಮತ್ತು ರಾಷ್ಟ್ರಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರದರ್ಶನ ನೀಡುವ ಜನಪದ ಕಲಾವಿದರಿಗೆ ಅವರ ಅರ್ಹತೆಗೆ ತಕ್ಕಂತೆ ಇತರ ಶಾಸ್ತ್ರೀಯ ಮತ್ತು ಜನಪ್ರಿಯ ಚಲನಚಿತ್ರ ಗೀತಗಾಯಕರಿಗೆ ನೀಡುವ ಗೌರವಧನವನ್ನೇ ನೀಡಬೇಕು.
-ತುಳು ಮತ್ತು ಕೊಡವ ಭಾಷೆಗಳಿಗೆ ಸಂಬಂಧಿಸಿದ ಜನಪದ ಕಲಾವಿದರನ್ನು ಪ್ರತಿವರ್ಷ ಸರ್ಕಾರದಿಂದ ನೀಡುವ ಪ್ರದರ್ಶನ, ಗೌರವ, ಪ್ರಶಸ್ತಿಗಳ ವಿಷಯದಲ್ಲಿ ವಿಶೇಷ ಅವಕಾಶ ಮತ್ತು ಮಾನ್ಯತೆ ಇರಬೇಕು. ಬುಡಕಟ್ಟು ಕಲೆಗಳನ್ನು ಕಲಿಯಲು ಪ್ರೋತ್ಸಾಹ ನೀಡಬೇಕು.
-ಪ್ರವಾಸಿ ತಾಣಗಳಲ್ಲಿ ಜನಪದ ಬಯಲು ರಂಗಮಂದಿರಗಳನ್ನು ನಿರ್ಮಿಸಬೇಕು. ನಾಡಹಬ್ಬ, ಸರ್ಕಾರಿ ಉತ್ಸವಗಳಲ್ಲಿ ಶೇ 50ರಷ್ಟು ಜನಪದ ಕಲೆಗಳ ಪ್ರದರ್ಶನವೇ ನಡೆಯಬೇಕು. ಜನಪದ ಕಲಾವಿದರನ್ನು ಕೇವಲ ಮೆರವಣಿಗೆಗೆ ಮಾತ್ರ ಬಳಸುವುದನ್ನು ನಿಷೇಧಿಸಬೇಕು. ಅವರ ಪ್ರಯಾಣಕ್ಕೆ ರಿಯಾಯಿತಿ ಪಾಸ್ ಒದಗಿಸಬೇಕು. ಜನಪದ ಕಲಾವಿದರ ಆರೋಗ್ಯ ಸಂಬಂಧೀ ವೆಚ್ಚವನ್ನು ಸರ್ಕಾರವೇ ನೀಡಬೇಕು.
-ಸರ್ಕಾರಿ ನೌಕರಿ ಮಾಡುವ ಜನಪದ ಕಲಾವಿದರಿದ್ದರೆ ವಿಶೇಷ ಸಾಂಸ್ಕೃತಿಕ ರಜೆಯ ಅವಕಾಶ ಕಲ್ಪಿಸಬೇಕು. ಈಗಾಗಲೇ ಸ್ಥಾಪಿಸಲಾಗಿರುವ ಸಮುದಾಯ ಭವನಗಳಲ್ಲಿ ಪ್ರತಿಮಾಸದಲ್ಲೂ  ಜನಪದ ಕಲೆಗಳನ್ನು ಪ್ರದರ್ಶಿಸಲು ಉಚಿತವಾಗಿ ಅವಕಾಶ ನೀಡಬೇಕು.
-ಶಾಲೆಗಳಲ್ಲಿ ದೈಹಿಕ ಶಿಕ್ಷಣದ ಅವಧಿ ಇರುವಂತೆ ಜನಪದ ಕಲೆಗಳನ್ನು ಕಲಿಸಲು ಒಂದು ಪ್ರತ್ಯೇಕ ವೇಳಾಪಟ್ಟಿಯನ್ನು ಸಿದ್ಧಪಡಿಸಬೇಕು.
-ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನದಿಂದ ಪ್ರಕಟವಾಗಿರುವ ಎಲ್ಲಾ ಜಾನಪದ ಮತ್ತು ಸಂಸ್ಕೃತಿ ಸಂಬಂಧಿ ಪ್ರಕಟಣೆಗಳನ್ನು ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಪದವಿ ಕಾಲೇಜುಗಳು ತಮ್ಮ ಗ್ರಂಥಾಲಯಗಳಿಗೆ ಖರೀದಿಸುವಂತೆ ಆದೇಶ ನೀಡಬೇಕು.

-ಜನಪದ ಕಲೆ ಮತ್ತು ಜನಪದ ಕಲಾವಿದರ ಏಳಿಗೆಗಾಗಿ 50ಕೋಟಿಯ ಶಾಶ್ವತ ನಿಧಿ ಸ್ಥಾಪಿಸಬೇಕು.  ಜನಪದ ಕಲಾವಿದರನ್ನು ಮೇಲ್ಮನೆ ಸದಸ್ಯರಾಗಿ ನೇಮಕ ಮಾಡಬೇಕು.
ಈ ಕುರಿತು ಜನಪ್ರತಿನಿಧಿಗಳು, ಸಾಂಸಕೃತಿಕ ತಜ್ಞರು ಚರ್ಚೆ ನಡೆಸಿ  ವೈಜ್ಞಾನಿಕ ರೂಪುರೇಷೆ ನಿರ್ಮಿಸಿ, ಅನುಷ್ಠಾನಕ್ಕೆ ತರುವ ಅಗತ್ಯವಿದೆ. ಈ ಸಾಧಕಗಳು ಜನಪದ ಕಲಾವಿದರ ಮತ್ತು ಜನಪದ ಕಲೆಗಳ ಪುನರುತ್ಥಾನ ಮಾಡುವುದರಲ್ಲಿ ಯಾವುದೇ ಸಂಶಯವಿರುವುದಿಲ್ಲ.

-ಡಾ.ವೃಷಭಕುಮಾರ್‌ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕ (ಜಾನಪದ)
ಕರ್ನಾಟಕ ಜಾನಪದ ವಿವಿ, ಗೊಟಗೋಡಿ, ಶಿಗ್ಗಾವಿ


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com