ಪಾಕಿಸ್ತಾನದ್ದು ಭಯೋತ್ಪಾದನೆ, ಬಾಂಗ್ಲಾದ್ದು ಜನೋತ್ಪಾದನೆ; ಭಾರತಕ್ಕೆ ತಪ್ಪದು ಬವಣೆ!

ಮೊನ್ನೆ ಮಂಗಳವಾರ ರಾಜಧಾನಿ ದಿಲ್ಲಿಯಲ್ಲಿ "Border and Naxal Management''..
ಪಾಕಿಸ್ತಾನದ್ದು ಭಯೋತ್ಪಾದನೆ, ಬಾಂಗ್ಲಾದ್ದು ಜನೋತ್ಪಾದನೆ; ಭಾರತಕ್ಕೆ ತಪ್ಪದು ಬವಣೆ!

ಮೊನ್ನೆ ಮಂಗಳವಾರ ರಾಜಧಾನಿ ದಿಲ್ಲಿಯಲ್ಲಿ "Border and Naxal Management'' (ಗಡಿ ಹಾಗೂ ನಕ್ಸಲ್ ನಿರ್ವಹಣೆ) ಎಂಬ ವಿಷಯದ ಮೇಲೆ ವಿಚಾರ ಸಂಕಿರಣವೊಂದು ಏರ್ಪಾಡಾಗಿತ್ತು. ರಕ್ಷಣಾ ವಿಷಯಗಳಿಗೆ ಸಂಬಂಧಿಸಿದ ಚಿಂತಕರ ಚಾವಡಿಯೊಂದು ಅದನ್ನು ಆಯೋಜನೆ ಮಾಡಿತ್ತು. ಅದನ್ನು ಉದ್ದೇಶಿಸಿ ಮಾತನಾಡಿದ ವ್ಯಕ್ತಿ ಯಾವುದೋ ಕೋಮುವಾದಿ ಪಕ್ಷದ ನಾಯಕನೂ ಆಗಿರಲಿಲ್ಲ, ವಕ್ತಾರನೂ ಅಲ್ಲ ಅಥವಾ ಬಲಪಂಥೀಯನಂತೂ ಅಲ್ಲವೇ ಅಲ್ಲ.
ಈ ದೇಶದ ಸೇನೆಯ ಮುಖ್ಯಸ್ಥ ಜನರಲ್ ವಿಕ್ರಮ್ ಸಿಂಗ್!
ಗಡಿ ವಿಷಯ ಪ್ರಸ್ತಾಪಿಸಿದ ಅವರು "ಬಾಂಗ್ಲಾದೇಶದಿಂದ ಆಗಮಿಸುತ್ತಿರುವ ಅಕ್ರಮ ವಲಸಿಗರ ವಿಚಾರ ಅತ್ಯಂತ ಗಂಭೀರ ಆತಂಕವಾಗಿದ್ದು ರಾಷ್ಟ್ರೀಯ ಭದ್ರತೆಗೇ ಅಪಾಯ ತಂದೊಡ್ಡುತ್ತಿದೆ" ಎಂದುಬಿಟ್ಟರು. ಮುಂದುವರಿದು, "ಬಾಂಗ್ಲಾದೇಶದಿಂದ ಬರುತ್ತಿರುವ ಅಕ್ರಮ ವಲಸೆ ನಮ್ಮ ಇಡೀ ಈಶಾನ್ಯ ಭಾರತದ (7 ರಾಜ್ಯಗಳು) ಭೌಗೋಳಿಕ ಲಕ್ಷಣವನ್ನೇ ಬದಲು ಮಾಡುತ್ತಿದೆ. ಅಷ್ಟೇ ಅಲ್ಲ, ನಮ್ಮ ಅಸ್ಸಾಂ ರಾಜ್ಯದ ಆಂತರಿಕ ಭದ್ರತೆಗೇ ಗಂಭೀರ ಸವಾಲೊಡ್ಡುತ್ತಿದೆ" ಎಂದರು! ನಮ್ಮ ದೇಶದ ಸೇನಾ ಮುಖ್ಯಸ್ಥರ ಬಾಯಿಂದ ಇಂಥ ಆತಂಕ ವ್ಯಕ್ತವಾಗುತ್ತಿದೆ ಎಂದರೆ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಿ.
ಹಾಗಾದರೆ....
"ಇತ್ತೀಚಿನ ವರ್ಷಗಳಲ್ಲಿ ಬಾಂಗ್ಲಾದಿಂದ ಭಾರೀ ಪ್ರಮಾಣದ ಅಕ್ರಮ ವಲಸೆಯಾಗುತ್ತಿಲ್ಲ" ಎನ್ನುತ್ತಾ ಬರುತ್ತಿದ್ದ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಹೇಳಿದ್ದು ಹಸಿ ಹಸಿ ಸುಳ್ಳೇ? ಅಥವಾ ಜನರಲ್ ವಿಕ್ರಮ್ ಸಿಂಗ್ ಅವರೇ ಸುಳ್ಳು ಹೇಳುತ್ತಿದ್ದಾರಾ?
ಆತ್ಮೀಯ ಆದರಣೀಯ ರಾಷ್ಟ್ರಪತಿಯವರೇ,
ನಮ್ಮ ನೆರೆಯ ಪೂರ್ವ ಪಾಕಿಸ್ತಾನ/ ಬಾಂಗ್ಲಾದೇಶದಿಂದ ಕಳೆದ 3 ದಶಕಗಳಿಂದ ಆಗಮಿಸುತ್ತಿರುವ ಆಗಾಧ ಪ್ರಮಾಣದ ಅಕ್ರಮ ವಲಸಿಗರು ಅಸ್ಸಾಮ್‌ನ ಜನಾಂಗೀಯ ವ್ಯವಸ್ಥೆಯ ಸ್ವರೂಪವನ್ನೇ ಬುಡಮೇಲು ಮಾಡುತ್ತಿದ್ದಾರೆ. ಇದು ಅಸ್ಸಾಮ್ ಜನರ ಐಡೆಂಟಿಟಿಗೆ ಮಾತ್ರವಲ್ಲ, ಭಾರತದ ಭದ್ರತೆಗೇ ಗಂಭೀರ ಅಪಾಯವನ್ನು ತಂದೊಡ್ಡಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಯಾವೊಂದು ಸರ್ಕಾರಗಳೂ ಈ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸಿಲ್ಲ.
ಅಸ್ಸಾಮ್‌ನ ರಾಜ್ಯಪಾಲನಾಗಿ, ಸದ್ದಿಲ್ಲದೆ ಸಾಗುತ್ತಿರುವ ಭೌಗೋಳಿಕ ನಿರ್ಮಾಣ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸುತ್ತಿರುವ ಬಾಂಗ್ಲಾದೇಶಿ ಮುಸ್ಲಿಂ ಅಕ್ರಮ ವಲಸೆ ಕುರಿತ ವರದಿಯನ್ನು ನನ್ನ ನಿಷ್ಠೆ ಹಾಗೂ ಕರ್ತವ್ಯದ ಅಂಗವಾಗಿ ನಿಮ್ಮ ಮುಂದಿಡುತ್ತಿದ್ದೇನೆ. ಅತ್ಯಂತ ಮಹತ್ವದ ಶಿಫಾರಸ್ಸುಗಳನ್ನು ವರದಿಯಲ್ಲಿ ಪಟ್ಟಿ ಮಾಡಿದ್ದೇನೆ. ಕಳೆದ ಕೆಲವು ಕಾಲದಿಂದ ನಿರ್ಮಾಣವಾಗುತ್ತಿರುವ ಭಾರೀ ಅಪಾಯವನ್ನು ನಿಯಂತ್ರಿಸಲು ಸೂಕ್ತ ಗಮನ ಕೊಡಲಾಗುತ್ತದೆ ಹಾಗೂ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ನಾನು ಆಶಿಸುತ್ತೇನೆ.
ನಿಮ್ಮ ವಿಧೇಯ,
-ಲೆಫ್ಟಿನೆಂಟ್ ಜನರಲ್ ಎಸ್.ಕೆ. ಸಿನ್ಹಾ
ರಾಜ್ಯಪಾಲರು, ಅಸ್ಸಾಂ

ಇಂಥದ್ದೊಂದು ಪತ್ರವನ್ನು 1998ರಲ್ಲೇ ಆಗಿನ ಅಸ್ಸಾಂ ರಾಜ್ಯಪಾಲರು ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರಿಗೆ ಬರೆದಿದ್ದರು. ಒಂದು ವೇಳೆ ಪ್ರಸ್ತುತ ಕಾಣುತ್ತಿರುವ ಬಾಂಗ್ಲಾದೇಶಿಗರ ಅಕ್ರಮ ವಲಸೆಯನ್ನು ತಡೆಗಟ್ಟದೇ ಹೋದರೆ ಅಸ್ಸಾಮಿಯರೇ ಅಲ್ಪಸಂಖ್ಯಾತರಾಗಿ, ಬಾಂಗ್ಲಾದೇಶಿ ಮುಸ್ಲಿಮರೇ ಬಹುಸಂಖ್ಯಾತರಾಗಬಹುದು. ಮುಸ್ಲಿಂ ಬಾಹುಳ್ಯದ ಜಿಲ್ಲೆಗಳನ್ನು ಬಾಂಗ್ಲಾದೇಶದೊಂದಿಗೆ ವಿಲೀನ ಮಾಡಬೇಕೆಂದು ಬೇಡಿಕೆ ಕೇಳಿಬರಬಹುದು ಎಂದು ಸಿನ್ಹಾ ಎಚ್ಚರಿಕೆ ನೀಡಿದ್ದರು!
ಈಗ ಹೇಳಿ, ಅಲ್ಪಸಂಖ್ಯಾತರ ಮತಗಳಿಗೆ ಕೈಹಾಕಲು ಯಾವ ಮಟ್ಟಕ್ಕೂ ಇಳಿಯುವ ಕಾಂಗ್ರೆಸ್‌ಗೆ ಸುಳ್ಳು ಹೇಳುವ ದರ್ದು ಇದೆಯೋ? ಅಥವಾ ದೇಶ ಕಾಯುವ ಸೇನೆಯ ಮುಖ್ಯಸ್ಥರಾದ ಜನರಲ್ ವಿಕ್ರಮ್ ಸಿಂಗ್‌ಗೆ ಅಂತಹ ಅನಿವಾರ್ಯತೆ ಇದೆಯೋ? ಸತತ ಮೂರು ಯುದ್ಧಗಳಲ್ಲಿ ಸೋತ ನಂತರ ಭಾರತವನ್ನು ರಣರಂಗದಲ್ಲಿ ಮಣಿಸಲು ಸಾಧ್ಯವಿಲ್ಲ ಎಂದರಿತ ಪಾಕಿಸ್ತಾನ ಭಯೋತ್ಪಾದನೆ ಮೂಲಕ ಭಾರತವನ್ನು ನಾಶ ಮಾಡಲು ಹೊರಟಿದ್ದರೆ, ಪುರುಸೊತ್ತಿಲ್ಲದೆ ಮಕ್ಕಳು ಮಾಡುವುದನ್ನೇ ದಂಧೆ ಮಾಡಿಕೊಂಡಿರುವ ಬಾಂಗ್ಲಾದೇಶ, "ಜನೋತ್ಪಾದನೆ" ಮೂಲಕ ಭಾರತೀಯರನ್ನೇ ನೆಲೆಹೀನರನ್ನಾಗಿ ಮಾಡಲು ಹೊರಟಿದೆ ಎಂದನಿಸುವುದಿಲ್ಲವೇ?  "ಬಾಂಗ್ಲಾದೇಶದ ಅಕ್ರಮ ವಲಸೆ ಅಸ್ಸಾಂನ ಆಂತರಿಕ ಭದ್ರತೆಗೇ ಗಂಭೀರ ಸವಾಲೊಡ್ಡುತ್ತಿದೆ" ಎಂಬ ವಿಕ್ರಮ್ ಸಿಂಗ್ ಮಾತಿನಲ್ಲಿ ಅಡಿಗಿರುವ ಸತ್ಯ ಇದೇ.
ಇಷ್ಟಕ್ಕೂ ಇವತ್ತು ಅಸ್ಸಾಂನಲ್ಲಿ ಯಾವ ಸ್ಥಿತಿ ನಿರ್ಮಾಣವಾಗಿದೆ ಹೇಳಿ? 2012, ಜುಲೈನಲ್ಲಿ ಅಸ್ಸಾಂನ ಕೋಕ್ರಾಜಾರ್, ಧುಬ್ರಿ ಹಾಗೂ ಚಿರಾಂಗ್ ಜಿಲ್ಲೆಗಳಲ್ಲಿ ನಡೆದಿದ್ದೇನು?
ಬಾಂಗ್ಲಾದೇಶಿ ಅಕ್ರಮ ವಲಸಿಗರು ಈ ಮೂರು ರಾಜ್ಯಗಳಲ್ಲಿ ಅಸ್ಸಾಮಿಯರನ್ನೇ ನಿರ್ವಸತಿಗರನ್ನಾಗಿ ಮಾಡಿದ್ದಾರೆ. ಅದರ ಪರಿಣಾಮವಾಗಿ 2012, ಜುಲೈನಲ್ಲಿ ಹಿಂದು ಬುಡಕಟ್ಟು ಜನಾಂಗದವರು ಹಾಗೂ ಅಕ್ರಮ ವಲಸಿಗರ ಮಧ್ಯೆ ಹಿಂಸಾಚಾರ ಆರಂಭವಾಗಿ 1.7 ಲಕ್ಷ ಜನ ಮನೆಮಠ ಕಳೆದುಕೊಂಡರು. 100ಕ್ಕೂ ಹೆಚ್ಚು ಹಳ್ಳಿಗಳನ್ನು ಸುಟ್ಟುಹಾಕಲಾಯಿತು. 58 ಹಿಂದು ಬುಡಕಟ್ಟು ಜನರು ಬಾಂಗ್ಲಾ ಮುಸ್ಲಿಂ ಅಕ್ರಮ ವಲಸಿಗರ ಕ್ರೌರ್ಯಕ್ಕೆ ತುತ್ತಾದರು. ಎರಡು ಭಾಗಗಳಲ್ಲಿ ಪಾಕಿಸ್ತಾನದ ಬಾವುಟ ಹಾರಿಸಲಾಯಿತು. ಇಷ್ಟಾಗಿಯೂ ಅಸ್ಸಾಂ ಕಾಂಗ್ರೆಸ್ ಮುಖ್ಯಮಂತ್ರಿ ತರುಣ್ ಗೋಗೊಯಿ "ಅಸ್ಸಾಂನಲ್ಲಿ ಅಕ್ರಮ ವಲಸಿಗರೇ ಇಲ್ಲ" ಎಂದು ಹೇಳಿಕೆ ಕೊಟ್ಟರು! ಅಂದರೆ ಮಾಜಿ ರಾಜ್ಯಪಾಲ ಜನರಲ್ ಎಸ್.ಕೆ. ಸಿನ್ಹಾ ಹೇಳಿದ್ದೂ ಸುಳ್ಳು, ಈಗ ಜನರಲ್ ವಿಕ್ರಮ್ ಸಿಂಗ್ ಹೇಳುತ್ತಿರುವುದೂ ಸುಳ್ಳೇ? ಅಥವಾ ವೋಟಿಗಾಗಿ ಅಕ್ರಮ ವಲಸಿಗರಿಗೂ ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ ನೀಡಿ ಅಕ್ರಮ ವಲಸಿಗರನ್ನು ಕಾಂಗ್ರೆಸ್ ಸಕ್ರಮ ಮಾಡಿಬಿಟ್ಟಿತಾ?
ಎಸ್.ಕೆ. ಸಿನ್ಹಾ ಕೂಡ ಕಾಂಗ್ರೆಸ್ ಬೆಂಬಲಿತ ಸರ್ಕಾರ ನೇಮಕ ಮಾಡಿದ್ದ ರಾಜ್ಯಪಾಲರೇ ಆಗಿದ್ದರು. ಹಾಗಾದರೆ  'ದಿನವೊಂದಕ್ಕೆ 6 ಸಾವಿರ ಬಾಂಗ್ಲಾದೇಶಿ ಮುಸ್ಲಿಮರು ಒಳನುಸುಳುತ್ತಿದ್ದಾರೆ' ಎಂದು ಅವರು ನೀಡಿದ್ದ ವರದಿಯೇ ಸುಳ್ಳೇ? ಅವರು ಮಾತ್ರವಲ್ಲ, ಕೆನಡಾದ ಟೊರಾಂಟೊ ವಿಶ್ವವಿದ್ಯಾಲಯದ ಕೆಲ ವಿದ್ವಾಂಸರು ಹಾಗೂ ಅಮೆರಿಕದ ಕಲೆ ಮತ್ತು ವಿಜ್ಞಾನ ಅಕಾಡೆಮಿ ನಡೆಸಿದ ಸಮೀಕ್ಷೆಯ ಪ್ರಕಾರ 1.5 ಕೋಟಿ ಬಾಂಗ್ಲಾದೇಶಿ ಮುಸ್ಲಿಮರು ಭಾರತಕ್ಕೆ ನುಸುಳಿದ್ದಾರೆ. ಈ ವಿಚಾರವೂ ಸತ್ಯಕ್ಕೆ ದೂರವಾದುದೇ The Silent Invasion" ಪುಸ್ತಕದಲ್ಲಿ ಅತಿಕ್ರಮಣಕಾರರ ಸಂಖ್ಯೆ 2 ಕೋಟಿ ಎಂದು ಪಟ್ಟಿ ಮಾಡಿರುವುದನ್ನೂ ನಿರಾಕರಿಸುತ್ತೀರಾ?
ಇವಿಷ್ಟೂ ಸುಳ್ಳು ಎನ್ನುವುದಾದರೆ ಅಸ್ಸಾಂ ಹೇಗೆ ಇಂದು ಭಾರತದಲ್ಲೇ ಅತಿ ಹೆಚ್ಚು ಮುಸ್ಲಿಮರಿರುವ ರಾಜ್ಯವಾಗಿದೆ ಹೇಳಿ ಕಾಂಗ್ರೆಸ್ಸಿಗರೇ? ಮತ್ತೊಂದು ನೆರೆಯ ರಾಜ್ಯವಾದ ಪಶ್ಚಿಮ ಬಂಗಾಳ ಎರಡನೇ ಅತಿ ಹೆಚ್ಚು ಮುಸ್ಲಿಮರಿರುವ(26 ಪರ್ಸೆಂಟ್) ರಾಜ್ಯ ಹೇಗಾಯಿತು?
1951ರಿಂದ 1991ರ ನಡುವೆ ಅಸ್ಸಾಮ್ ಮುಸ್ಲಿಂ ಜನಸಂಖ್ಯೆ ಪ್ರಮಾಣ 30 ಪರ್ಸೆಂಟ್ ಏರಿದರೆ, 1991 ರಿಂದ 2005ರ ವೇಳೆಗೆ ಹೆಚ್ಚುವರಿಯಾಗಿ 33 ಪರ್ಸೆಂಟ್ ಏರಿಕೆ ಕಂಡಿತು. ಅದರ ಪರಿಣಾಮವಾಗಿ ಧುಬ್ರಿ, ಗೋಲ್‌ಪರ, ಬಾರ್ಪೇಟ, ಹೈಲಕಂಡಿ ಈ 4 ಜಿಲ್ಲೆಗಳಲ್ಲಿ ಮುಸ್ಲಿಮರು ಸಂಪೂರ್ಣ ಹಿಡಿತ ಸಾಧಿಸಿದ್ದಾರೆ. ಬೊಂಗಾಯ್‌ಗಾಂವ್, ಮಾರಿಗಾಂವ್, ನಾಗಾಂವ್, ಕರೀಮ್‌ಗಂಜ್, ಕಾಚಾರ್ ಮುಂತಾದ 5 ಜಿಲ್ಲೆಗಳಲ್ಲಿ ಬಾಂಗ್ಲಾದೇಶಿ ಮುಸ್ಲಿಮರದ್ದೇ ಪ್ರಾಬಲ್ಯ!
ಇತ್ತ ಒಂದೆಡೆ ಎರಡು ಕೋಟಿ ಬಾಂಗ್ಲಾ ಮುಸ್ಲಿಮರಿಗೆ ನಾವು ಆಶ್ರಯ ನೀಡಬೇಕಾಗಿ ಬಂದಿದ್ದರೆ, 1947ರಲ್ಲಿ ಶೇ. 29.17ರಷ್ಟಿದ್ದ ಬಾಂಗ್ಲಾ ಹಿಂದೂಗಳ ಸಂಖ್ಯೆ ಈಗ 3 ಪರ್ಸೆಂಟ್‌ಗಿಳಿದಿದೆ! ಎಂತಹ ಕೃತಘ್ನತೆ ನೋಡಿ, ಹರ್ಕತ್ ಉಲ್ ಜಿಹಾದ್ ಉಲ್ ಇಸ್ಲಾಮಿ, ಜಮಾತೆ ಇಸ್ಲಾಮಿ, ಜಾಗ್ರತಾ ಮುಸ್ಲಿಂ ಜನತಾ ಬಾಂಗ್ಲಾದೇಶ್, ಜಮಾತ್ ಉಲ್ ಮುಜಾಹಿದ್ ಬಾಂಗ್ಲಾದೇಶ್ ಮುಂತಾದ ಭಯೋತ್ಪಾದಕ ಸಂಘಟನೆಗಳು ಬಾಂಗ್ಲಾದಲ್ಲಿರುವ ಹಿಂದೂಗಳನ್ನು ನಿರ್ನಾಮ ಮಾಡುತ್ತಿರುವ ಜತೆಗೆ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲೂ ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿವೆ. ಇಂದು ದಿಲ್ಲಿ, ವಾರಾಣಸಿ, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಮೇಲಿನ ಭಯೋತ್ಪಾದಕ ದಾಳಿಗಳಲ್ಲಿ ಬಾಂಗ್ಲಾದೇಶಿಯರ ಹೆಸರು ಕೇಳಿ ಬರುತ್ತಿದೆ. 2001ರ ಜನಗಣತಿಯ ಪ್ರಕಾರ ದೇಶದ 10 ಜನಭರಿತ ಜಿಲ್ಲೆಗಳಲ್ಲಿ 5 ಪಶ್ಚಿಮ ಬಂಗಾಳದಲ್ಲಿವೆ. ಅವುಗಳಲ್ಲಿ  24 ಪರಗಣ (ಉತ್ತರ) ,  24 ಪರಗಣ (ದಕ್ಷಿಣ) ಮತ್ತು ಮುರ್ಷಿದಾಬಾದ್‌ಗಳು ಬಾಂಗ್ಲಾ ಗಡಿಯಲ್ಲಿದ್ದು, ಇವು ಹೆಸರಿಗೆ ಭಾರತಕ್ಕೆ ಸೇರಿದ್ದರೂ ಇಲ್ಲಿ ವಾಸಿಸುತ್ತಿರುವವರಾರೂ ಭಾರತೀಯರಲ್ಲ, ಬಾಂಗ್ಲಾದೇಶಿ ಅಕ್ರಮ ವಲಸಿಗರು. ಅಸ್ಸಾಮ್‌ನ ಕೋಕ್ರಾಜಾರ್, ಧುಬ್ರಿ ಹಾಗೂ ಚಿರಾಂಗ್‌ಗಳಲ್ಲಿ ಬೋಡೋಗಳ ಅಸ್ತಿತ್ವಕ್ಕೇ ಧಕ್ಕೆ ತಂದಿರುವವರೂ ಇವರೇ.
ಇವರ ಉಪಟಳ ಇಷ್ಟಕ್ಕೇ ನಿಲ್ಲುತ್ತದೆ ಎಂದುಕೊಳ್ಳಬೇಡಿ!
"ಮುಘಲಿಸ್ತಾನ್‌" ಎಂಬ ಹೆಸರು ಕೇಳಿದ್ದೀರಾ? 1971ರಲ್ಲಿ ಪರಸ್ಪರ ಕಿತ್ತಾಡಿದ್ದ ಪಾಕ್ ಮತ್ತು ಬಾಂಗ್ಲಾಗಳು ಕೈಜೋಡಿಸಿ ಭಾರತವನ್ನು ಮತ್ತೆ ತುಂಡರಿಸಲು ಹೊರಟಿವೆ. ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ನೇಪಾಳ, ಭೂತಾನ್, ಮಾಲ್ಡೀವ್ಸ್‌ಗಳನ್ನು ಬಾಂಗ್ಲಾ ಜತೆ ಸೇರ್ಪಡೆ ಮಾಡಿ ರಚನೆ ಮಾಡಲು ಹೊರಟಿರುವುದೇ  "ಮುಘಲಿಸ್ತಾನ್‌"! ಇಲ್ಲಿ ಮತ್ತೊಂದು ಗಮನಾರ್ಹ ಅಂಶವೆಂದರೆ ಅಸ್ಸಾಮ್, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ತ್ರಿಪುರ, ಮಿಜೋರಾಮ್ ಹಾಗೂ ಅರುಣಾಚಲ ಪ್ರದೇಶಗಳನ್ನೊಳಗೊಂಡ ಈಶಾನ್ಯ ಭಾಗ ಹಾಗೂ ಭಾರತದ ಮುಖ್ಯ ಭಾಗದ ನಡುವೆ ಇರುವ ಏಕೈಕ ಕೊಂಡಿಯೆಂದರೆ ಪಶ್ಚಿಮ ಬಂಗಾಳದ ಸಿಲಿಗುರಿ ಮೂಲಕ ಹಾದು ಹೋಗುವ 22 ಕಿ.ಮೀ. ಜಾಗ. ಇದನ್ನೂ Chicken's Neck (ಕೋಳಿ ಕುತ್ತಿಗೆ) ಎನ್ನುತ್ತಾರೆ. ಇದು ಅತ್ಯಂತ ಆಯಕಟ್ಟಿನ ಸ್ಥಳ. ಇದನ್ನೇ ತುಂಡರಿಸುವ ಉದ್ದೇಶ "ಮುಘಲಿಸ್ತಾನ್‌" ಪ್ರತಿಪಾದಕರಿಗಿದೆ. ಬಾಂಗ್ಲಾ ಜತೆ ನಾವು 4097 ಕಿ.ಮೀ. ಉದ್ದ ಗಡಿಭಾಗವನ್ನು ಹೊಂದಿದ್ದು, ಅದು ಯಾವತ್ತಿದ್ದರೂ ಅಪಾಯಕಾರಿ ರಾಷ್ಟ್ರವೇ. ಈ ಬಾಂಗ್ಲಾದೇಶಿಯರ ಕೃತಘ್ನ ಮನಸ್ಥಿತಿಗೆ ಮತ್ತೊಂದು ಉದಾಹರಣೆ ಬೇಕಾ? ಬಾಂಗ್ಲಾದೇಶವನ್ನು ವಸ್ತುಶಃ ವೇಶ್ಯಾಗಾರವನ್ನಾಗಿಸಿದ್ದ ಪಾಕಿಸ್ತಾನವನ್ನು 1971ರಲ್ಲಿ ಹೊರದಬ್ಬಿ ಸ್ವತಂತ್ರಗೊಳಿಸಿದ್ದೇ ಭಾರತ. ಅಂದು ಪಾಕಿಸ್ತಾನದ ಜೊತೆ ಕೆಲ ಬಾಂಗ್ಲಾದೇಶಿಯರೇ ಕೈಜೋಡಿಸಿದ್ದರು. ಅಂತಹ ದೇಶದ್ರೋಹಿಗಳನ್ನು ಬಾಂಗ್ಲಾದ ಹಾಲಿ ಪ್ರಧಾನಿ ಶೇಖ್ ಹಸೀನಾ ಸರ್ಕಾರ ಕಳೆದೊಂದು ವರ್ಷದಿಂದ ವಿಚಾರಣೆಗೆ ಗುರಿಪಡಿಸಿ ಶಿಕ್ಷಿಸುವ ಕೆಲಸ ಮಾಡುತ್ತಿದೆ. ಹಾಗೆ ಒಬ್ಬೊಬ್ಬರಿಗೇ ಶಿಕ್ಷೆ ಘೋಷಣೆಯಾದಂತೆಲ್ಲ ಜಮಾತೆ ಇಸ್ಲಾಮಿ ಸಂಘಟನೆಯವರು ಬಾಂಗ್ಲಾದೇಶಿ ಹಿಂದುಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಶಿಕ್ಷೆಯ ವಿರುದ್ಧ ನಮ್ಮ ಪಶ್ಚಿಮ ಬಂಗಾಳದಲ್ಲೂ ಕಳೆದ ವರ್ಷ ದೊಡ್ಡ ಪ್ರತಿಭಟನೆ ನಡೆಯಿತು! ಇದೆಂಥ ಮನಸ್ಥಿತಿಯನ್ನು ತೋರುತ್ತದೆ? ಬರ್ಮಾ(ಮ್ಯಾನ್ಮಾರ್) ರೋಹಿಂಗ್ಯ ಮುಸ್ಲಿಮರನ್ನು ಹೊರದಬ್ಬಿದರೆ ಮುಂಬೈನ ಆಜಾದ್ ಮೈದಾನದಲ್ಲಿ ಮುಸಲ್ಮಾನರು ಪ್ರತಿಭಟನೆ ಮಾಡುತ್ತಾರೆ.
ಇದು ಏನನ್ನು ಸೂಚಿಸುತ್ತದೆ? ಒಮ್ಮೆಯಾದರೂ ಈ ಬಗ್ಗೆ ಯೋಚನೆ ಮಾಡಿದ್ದೀರಾ?
ಇನ್ನು ಉತ್ತರ ಪ್ರದೇಶದಲ್ಲಿ ಮುಸ್ಲಿಮರದ್ದೇ ಆದ "ಆಲ್ ಇಂಡಿಯಾ ಮುಸ್ಲಿಂ ಮಜಲಿಸ್‌" ಎಂಬ ರಾಜಕೀಯ ಪಕ್ಷ ಉದಯಿಸಿದೆ. ಕೇರಳದಲ್ಲಂತೂ ದೇಶ ವಿಭಜನೆ ಮಾಡಿದ "ಮುಸ್ಲಿಂ ಲೀಗ್‌" ಹೆಸರು ಹೊತ್ತ ಪಕ್ಷ ಕಾಂಗ್ರೆಸ್ ಜತೆ ಸೇರಿ ಅಧಿಕಾರ ನಡೆಸುತ್ತಿದೆ, ಆಂಧ್ರದಲ್ಲಿ ಎಂಐಎಂ (ಮಜಲೀಸ್ ಇತ್ತೆಹುದಾಲ್ ಮುಸಲ್ಮೀನ್)  ಎಂಬ ಪಕ್ಷವಿದ್ದರೆ, ಅಸ್ಸಾಂನಲ್ಲೂ "ಆಲ್ ಇಂಡಿಯಾ ಯುನೈಟೆಡ್ ಡೆಮೋಕ್ರಾಟಿಕ್ ಫ್ರಂಟ್‌"(AIUDF) ಎಂಬ ಪಕ್ಷ ತಲೆಯೆತ್ತಿದ್ದು, ಬಹಳ ಅಪಾಯಕಾರಿ ಅಂಶವೆಂದರೆ ಈ ಮುಸ್ಲಿಂ ಮೂಲಭೂತವಾದಿ ಪಕ್ಷ ಇಂದು ಅಸ್ಸಾಂನಲ್ಲಿ ಮುಖ್ಯ ವಿರೋಧ ಪಕ್ಷವಾಗಿದೆ. ಇನ್ನು ಹತ್ತು ವರ್ಷಗಳಲ್ಲಿ ಅಸ್ಸಾಂ ಒಂದು ಮುಸ್ಲಿಂ ಬಾಹುಳ್ಯದ ರಾಜ್ಯವಾಗುವುದು ಮಾತ್ರವಲ್ಲ, ಮುಸ್ಲಿಂ ಮುಖ್ಯಮಂತ್ರಿಯನ್ನೂ ಹೊಂದುವುದು ಖಂಡಿತ! ಇವರ ರಾಜಕೀಯ ಗುರಿ ಬರೀ ಅಸ್ಸಾಂನಲ್ಲಿ ಗದ್ದುಗೆ ಹಿಡಿಯುವುದು ಮಾತ್ರವಲ್ಲ, ಆಐ್ಖಉಋ 2009ರ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲೂ ಸ್ಪರ್ಧೆ ಮಾಡಿತ್ತು. ಈ ರೀತಿ ಪ್ರತ್ಯೇಕ ಪಕ್ಷಗಳನ್ನು ಕಟ್ಟಲು ಅವರಿಗೆ ಸಿಕ್ಕ ಪ್ರೋತ್ಸಾಹ ಎಲ್ಲಿಯದು?
ಈ ಎಲ್ಲಾ ಹಿನ್ನೆಲೆಯಲ್ಲಿ ಜನರಲ್ ವಿಕ್ರಮ್ ಸಿಂಗ್ ಅವರ ಆತಂಕವನ್ನು ಗಂಭೀರವಾಗಿ ಪರಿಗಣಿಸಬೇಕು. ನಮ್ಮ 7 ಈಶಾನ್ಯ ರಾಜ್ಯಗಳನ್ನು ಸಪ್ತ ಸಹೋದರಿಯರು ಎನ್ನುತ್ತಾರೆ. ಇವುಗಳಲ್ಲಿ ಒಂದಾಗಿರುವ ಅಸ್ಸಾಮ್ ಉಳಿದ ಆರೂ ರಾಜ್ಯಗಳಿಂದ ಸುತ್ತುವರಿದಿದೆ (ಮಣಿಪುರ, ಮೇಘಾಲಯ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ತ್ರಿಪುರ, ಮಿಝೋರಾವ್). ಹಾಗಿರುವಾಗ ಅಸ್ಸಾಮ್‌ಗೆ ಎದುರಾಗಿರುವ ಅಪಾಯ ಉಳಿದ ರಾಜ್ಯಗಳಿಗೆ ತಾಗದೆ ಇರುತ್ತದೆಯೇ? "ಬಾಂಗ್ಲಾದೇಶದಿಂದ ಬರುತ್ತಿರುವ ಅಕ್ರಮ ವಲಸೆ ನಮ್ಮ ಇಡೀ ಈಶಾನ್ಯ ಭಾರತದ ಭೌಗೋಳಿಕ ಲಕ್ಷಣವನ್ನೇ ಬದಲು ಮಾಡುತ್ತಿದೆ" ಎಂಬ ವಿಕ್ರಮ್ ಸಿಂಗ್ ಮಾತಿನ ಹಿಂದಿರುವ ಸತ್ಯ ಹಾಗೂ ಆತಂಕವನ್ನು ಅರ್ಥಮಾಡಿಕೊಳ್ಳಿ. ಇನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಅಭ್ಯರ್ಥಿಯಾಗಿರುವ ನಂದನ್ ನೀಲೆಕಣಿ ಮಹಾಶಯರು ಮಾಡಿರುವ ಘನ ಕೇಳಿ. ಈ ವ್ಯಕ್ತಿ ಕೊಚ್ಚಿಕೊಳ್ಳುತ್ತಿರುವ "ಆಧಾರ್‌" ಕಾರ್ಡ್ ಏನಿದೆಯಲ್ಲಾ, ಇದನ್ನು ಭಾರತದ ನಾಗರಿಕರಲ್ಲ, ಭಾರತದ "ನಿವಾಸಿ"ಗಳಿಗೆ ಕೊಡಮಾಡಲಾಗುತ್ತಿದೆ. ನಾಗರಿಕ ಎಂದರೆ ಈ ದೇಶದ ಪ್ರಜೆಯಾಗಿರಬೇಕು. ನಿವಾಸಿ ಯಾರೂ ಆಗಿರಬಹುದು. ನಿವಾಸಿಗಳಿಗೆಲ್ಲ ಆಧಾರ್ ಕಾರ್ಡ್ ಕೊಡುತ್ತೇವೆಂದರೆ ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನೂ ಈ ದೇಶದ ಶಾಶ್ವತ ನಿವಾಸಿಗಳನ್ನಾಗಿ ಮಾಡುವ, ವೋಟ್ ಬ್ಯಾಂಕ್ ಆಗಿ ಪರಿವರ್ತಿಸುವ ಹುನ್ನಾರ ಇದಲ್ಲದೆ ಮತ್ತೇನು? ಜತೆಗೆ ಲಾಲ್ ಕೃಷ್ಣ ಆಡ್ವಾಣಿಯವರು ಗೃಹ ಸಚಿವರಾಗಿದ್ದಾಗ ಆರಂಭಿಸಿದ ಬಾಂಗ್ಲಾದೇಶ ಗಡಿಯಲ್ಲಿ ಬೇಲಿ ನಿರ್ಮಾಣ ಕಾರ್ಯವನ್ನು ಕಾಂಗ್ರೆಸ್ ಕುಂಠಿತಗೊಳಿಸಿದ್ದೇಕೆ? ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿದ್ದರೂ ಒಂದು ಬೇಲಿ ನಿರ್ಮಾಣವನ್ನು ಪೂರ್ಣಗೊಳಿಸಲಾಗಿಲ್ಲವೆಂದರೆ ಅರ್ಥವೇನು? ಇವರು ಓಟಿಗಾಗಿ ದೇಶದ ಹಿತವನ್ನೇ ಬಲಿಕೊಡುತ್ತಾರೆ ಎಂದನಿಸುವುದಿಲ್ಲವೇ? ಇವರನ್ನು ಎಷ್ಟು ದಿನ ಅಂತ ಸಹಿಸಿಕೊಳ್ಳುತ್ತೀರಿ ಹೇಳಿ?

- ಪ್ರತಾಪ್ ಸಿಂಹ
mepratap@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com