ಎಲ್ಲಕ್ಕಿಂತ ಮಜಾ ಕೊಟ್ಟಿದ್ದು, ಕ್ರಿಯೇಟಿವ್ ಎನಿಸಿದ್ದು ಮಾತ್ರ ಕೇಜ್ರೀವಾಲ್ ಜೋಕ್ಸ್!

ಈ ಕೇಜ್ರೀವಾಲ್ ಏಕಾಗಿ ಹಾಸ್ಯದ, ಗೇಲಿಯ ವಸ್ತುವಾಗುತ್ತಿದ್ದಾರೆ? ಏಕೆ ಅವರ ಬಗ್ಗೆ...
ಎಲ್ಲಕ್ಕಿಂತ ಮಜಾ ಕೊಟ್ಟಿದ್ದು, ಕ್ರಿಯೇಟಿವ್ ಎನಿಸಿದ್ದು ಮಾತ್ರ ಕೇಜ್ರೀವಾಲ್ ಜೋಕ್ಸ್!

ಸಂತ ಬಂತ ಜೋಕ್ಸ್
ಸರ್ದಾರ್ಜಿ ಜೋಕ್ಸ್
ಮಿಲೇನಿಯಮ್ ಜೋಕ್ಸ್
ಜಾರ್ಜ್ ಬುಷ್ ಜೋಕ್ಸ್

ಜತೆಗೆ ಹಳೆಯ...

ಮಲ್ಲು ಜೋಕ್ಸ್
ಲೇಡಿಸ್ ಜೋಕ್ಸ್
ಅಡಲ್ಟ್ ಜೋಕ್ಸ್
ಫನ್ನಿ ಜೋಕ್ಸ್
ಬೀChiಯುವರ ತಿಂಮನ ಜೋಕ್ಸ್
ದಕ್ಷಿಣ ಕನ್ನಡದ ರಾಂಪಣ್ಣ ಜೋಕ್ಸ್
ರಜನೀಕಾಂತ್ ಜೋಕ್ಸ್....
ಇವೆಲ್ಲಕ್ಕಿಂತಲೂ ಅತಿ ಹೆಚ್ಚು ಮಜಾ ಕೊಟ್ಟಿದ್ದು, ತುಂಬಾ ಕ್ರಿಯೇಟಿವ್ ಎನಿಸಿದ್ದು ಇತ್ತೀಚಿನ ಕೇಜ್ರೀವಾಲ್ ಜೋಕ್ಸ್! ಎಲ್ಲರೂ ಭ್ರಷ್ಟರು, ತಾನೊಬ್ಬನೇ ಸುಭಗ, ಸಾಚಾ ಎಂದು ಬಿಂಬಿಸಿಕೊಂಡ ಸಾರ್ವಜನಿಕ ವ್ಯಕ್ತಿಯೊಬ್ಬನ ಮಾತು ಹಾಗೂ ನಡತೆ ನಡುವೆ ವ್ಯತ್ಯಾಸವುಂಟಾದರೆ ಜನ ಹೇಗೆಲ್ಲ ಗೇಲಿ ಮಾಡುತ್ತಾರೆ, ಮಾಡಬಲ್ಲರು, ಹೇಗೆ ಆ ವ್ಯಕ್ತಿ ಗೇಲಿಯ ವಸ್ತುವಾಗುತ್ತಾನೆ ಎಂಬುದಕ್ಕೆ ಇತ್ತೀಚೆಗೆ ಟ್ವಿಟ್ಟರ್‌ನಲ್ಲಿ ಸೃಷ್ಟಿಯಾದ ""Yo Kejriwal So Honest'', ""LiarKejriwal'' ಈ ಎರಡು ಹ್ಯಾಶ್‌ಟ್ಯಾಗ್‌ಗಳೇ (ವಿಷಯ) ಸಾಕ್ಷಿ. ಅವು ಎಷ್ಟು ಕ್ರಿಯಾಶೀಲವಾಗಿದ್ದವೆಂದರೆ ಮುಖ್ಯವಾಹಿನಿ ಮಾಧ್ಯಮಗಳೂ ಅವುಗಳನ್ನು ಹೆಕ್ಕಿ ಪ್ರಕಟಿಸಿದವು. "ನೀವು ತಪ್ಪದೆ ಓದಬೇಕಾದ ಅರವಿಂದ್ ಕೇಜ್ರೀವಾಲ್ ಜೋಕ್ಸ್‌"ಗಳೆಂಬ ಶೀರ್ಷಿಕೆ ಕೊಟ್ಟು ಓದುಗರ ಗಮನ ಸೆಳೆಯಲು ಪ್ರಯತ್ನಿಸಿದವು.
ಈ ಕೇಜ್ರೀವಾಲ್ ಏಕಾಗಿ ಹಾಸ್ಯದ, ಗೇಲಿಯ ವಸ್ತುವಾಗುತ್ತಿದ್ದಾರೆ? ಏಕೆ ಅವರ ಬಗ್ಗೆ ಜೋಕುಗಳು ಹುಟ್ಟಿಕೊಳ್ಳುತ್ತಿವೆ?
ಇತ್ತೀಚೆಗೊಬ್ಬರು "ಈ ಆಪ್ ಕನಿಷ್ಠ ಆರು ತಿಂಗಳಾದರೂ ಆಡಳಿತ ನಡೆಸಬೇಕು. ಏಕೆಂದರೆ ಏಪ್ರಿಲ್ ಮೇನಲ್ಲಾದರೂ(ವಿಪರೀತ ಸೆಖೆ) ಕೇಜ್ರೀವಾಲ್ ಸಾಹೇಬರು ಮಫ್ಲರ್ ತೆಗೆಯುತ್ತಾರಾ ನೋಡಬೇಕು" ಎಂದು ಟ್ವೀಟ್ ಮಾಡಿದ್ದರು, ಅವರೊಬ್ಬ ಸೋಗಲಾಡಿ ಎಂಬರ್ಥದಲ್ಲಿ! ಇವತ್ತು ಇನ್ನೊಬ್ಬರ ಅವಹೇಳನ ಮಾಡುವುದು, ಚಾರಿತ್ರ್ಯವಧೆ ಮಾಡುವುದು ಬಹಳ ಸುಲಭ. ಅವನೊಬ್ಬ ಭ್ರಷ್ಟ, ವುಮನೈಝರ್ ಎಂದರೆ ಎಲ್ಲರೂ ಸುಲಭಕ್ಕೆ ನಂಬಿ ಬಿಡುತ್ತಾರೆ. ಅದರಲ್ಲೂ ರಾಜಕಾರಣಿಗಳು, ಸ್ಥಾಪಿತ ಗಣ್ಯ ವ್ಯಕ್ತಿಗಳು, ಸೆಲೆಬ್ರಿಟಿಗಳನ್ನಂತೂ ಬಹಳ ಸುಲಭಕ್ಕೆ ಬಲಿಹಾಕಿಕೊಳ್ಳಬಹುದು. ವ್ಯವಸ್ಥೆಯನ್ನು ಸರಿಪಡಿಸುತ್ತೇನೆ, ಸ್ವಚ್ಛಗೊಳಿಸುತ್ತೇನೆ ಎಂದು ಹೊರಟ ಕೇಜ್ರೀವಾಲ್ ಮಾಡಿದ್ದೂ ಇದೆ. ಆದರೆ "ವಾಕ್ ದಿ ಟಾಕ್‌", ಅಂದರೆ ನುಡಿದಂತೆ ನಡೆ ಎಂಬುದನ್ನು ಡಿಸೆಂಬರ್ 26ರಂದು ಅಧಿಕಾರಕ್ಕೆ ಬರುವ ಸಂದರ್ಭದಲ್ಲೇ ಸಂಪೂರ್ಣವಾಗಿ ಮರೆತುಬಿಟ್ಟರು. "ನನ್ನ ಇಬ್ಬರು ಮಕ್ಕಳ ಮೇಲೆ ಆಣೆ ಮಾಡಿ ಹೇಳುತ್ತೇನೆ. ಈ ಬಿಜೆಪಿ, ಕಾಂಗ್ರೆಸ್‌ನವರಿಂದ ಸಪೋರ್ಟ್ ತೆಗೆದುಕೊಳ್ಳುವುದೂ ಇಲ್ಲ, ಕೊಡುವುದೂ ಇಲ್ಲ" ಎಂದು ಮತ ಎಣಿಕೆಯ ಹಿಂದಿನ ದಿನವಷ್ಟೇ ಹೇಳಿದ್ದರು. ಡಿಸೆಂಬರ್ 23ರಂದು ಉಪ ರಾಜ್ಯಪಾಲ ನಜೀಬ್ ಜಂಗ್ ಸರ್ಕಾರ ರಚಿಸುವಂತೆ ಕೊಟ್ಟ ಆಹ್ವಾನವನ್ನು ಒಪ್ಪಿಕೊಳ್ಳುವಾಗ ತಾವು ಸರ್ಕಾರ ರಚಿಸಲು ಮುಖ್ಯ ಕಾರಣವೇ ಕಾಂಗ್ರೆಸ್ ನೀಡಿರುವ ಬೇಷರತ್ ಬೆಂಬಲ ಎಂಬುದನ್ನು ಮರೆತುಬಿಟ್ಟರು. ಅದು ಹಾಗೂ ಕೇಜ್ರೀವಾಲರ ಒಟ್ಟಾರೆ ನಡತೆ ಬಗ್ಗೆ ಪ್ರತಿಕ್ರಿಯಿಸಿದ "ಹಿಂದುಸ್ಥಾನ್ ಟೈಮ್ಸ್‌" ಪತ್ರಿಕೆಯ ಸಂಪಾದಕ ಅಭಿಜಿತ್ ಮಜೂಂದಾರ್ ""Kejriwal said no to politics, joined. Abused corrupt Congress, joined hands. Criticised official perks, took them. Embraced irony, killed it'' ಎಂದು ಟೀಕಿಸಿದರು. "ನಾನು ಗಾಡಿ ತೆಗೆದುಕೊಳ್ಳುವುದಿಲ್ಲ, ಬಂಗ್ಲೆ ಬೇಡ" ಎಂದಿದ್ದರು. ಅವರ ಪೋಷಕರು 5 ಹಾಗೂ 3 ಬೆಡ್‌ರೂಮ್ ಹೊಂದಿರುವ 9 ಸಾವಿರ ಚದರಡಿ ಬಂಗಲೆಯನ್ನು ನೋಡಿಕೊಂಡು ಹೋಗುತ್ತಿರುವುದನ್ನು ಮಾಧ್ಯಮಗಳು ಪತ್ತೆ ಮಾಡಿದ ಕೂಡಲೇ 'ನಾನು ಕೇಳಿಯೇ ಇರಲಿಲ್ಲ' ಎಂದುಬಿಟ್ಟರು. ಆದರೆ ಬಂಗಲೆ ಕೇಳಿ ಅವರೇ ಬರೆದ ಪತ್ರ ಮಾಧ್ಯಮಗಳ ಕೈಗೆ ಸಿಕ್ಕಿಹೋಯಿತು.
ಆಗ ಹುಟ್ಟಿಕೊಂಡಿತು "ಕೇಜ್ರೀ ಟರ್ನ್‌"!
ರಾಜಧಾನಿ ದಿಲ್ಲಿಯ "ಯೂ" ಟರ್ನ್‌ಗಳಿಗೆ ಇನ್ನು ಮುಂದೆ "ಕೇಜ್ರೀ ಟರ್ನ್‌" ಎಂದು ಪುನರ್ನಾಮಕರಣ ಮಾಡಬೇಕೆಂದು ಜನ ಕಿಚಾಯಿಸಿದರು. ಈ ರಾಜಕಾರಣಿಗಳು ಚುನಾವಣೆಗೆ ಮೊದಲು ನಿಮ್ಮ ಕೈ ಕುಲುಕುತ್ತಾರೆ, ಗೆದ್ದ ನಂತರ ನಿಮ್ಮ ವಿಶ್ವಾಸವನ್ನೇ ಕುಲುಕುತ್ತಾರೆ ಎಂಬ ಮಾತಿದೆ. ದುರದೃಷ್ಟವಶಾತ್, ಕೇಜ್ರೀವಾಲ್ ಕೂಡ ಅದಕ್ಕೆ ಹೊರತೆನಿಸಲಿಲ್ಲ! ನನ್ನ ವಿರುದ್ಧದ ಆರೋಪಗಳ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಎಲ್ಲರಿಗೂ ಕೇಜ್ರೀವಾಲ್ ಸವಾಲು ಹಾಕಿದರು. ಆದರೆ ಜಂತರ್ ಮಂತರ್ ಬಳಿ ಚರ್ಚೆ ಆರಂಭವಾದಾಗ ಅಲ್ಲಿ ಕೇಜ್ರೀವಾಲರೂ ಇರಲಿಲ್ಲ, ಅವರ ಪ್ರಮುಖ ನಾಯಕರೂ ಕಾಣಲಿಲ್ಲ! ಯು ಟರ್ನ್‌ಗಳಿಗೆ ಕೇಜ್ರೀವಾಲ್ ಟರ್ನ್ ಎಂದು ಕರೆಯಲು ಮತ್ತೊಂದು ಕಾರಣವೂ ಇದೆ. "ದಿಲ್ಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಒಬ್ಬ ಭ್ರಷ್ಟೆ. ಕಾಮನ್ವೆಲ್ತ್ ಹಗರಣದಲ್ಲಿ ಭಾಗಿಯಾಗಿದ್ದಾರೆ. ನಾನು ಅಧಿಕಾರಕ್ಕೆ ಬಂದ ಕೂಡಲೇ ಆಕೆ ವಿರುದ್ಧ ತನಿಖೆ ನಡೆಸುತ್ತೇನೆ" ಎಂದು ಚುನಾವಣೆಗೂ ಮೊದಲು ಬೊಬ್ಬೆ ಹಾಕಿದ್ದರು. ಆದರೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಎರಡು ವಾರ ಕಳೆದರೂ ತನಿಖೆಯ ಮಾತೇ ಇಲ್ಲ! ಅದನ್ನು ಬಿಜೆಪಿ ಪ್ರಶ್ನಿಸಿದರೆ, "ಸಾಕ್ಷ್ಯ ಕೊಡಿ" ಎಂದುಬಿಟ್ಟರು!! ಚುನಾವಣೆಗೂ ಮೊದಲು "ನನ್ನ ಬಳಿ ಮೂರೂವರೆ ಸಾವಿರ ಪುಟಗಳ ಸಾಕ್ಷ್ಯವಿದೆ ಎಂದಿದ್ದಿರಲ್ಲಾ ಅದೇನಾಯಿತು?" ಎಂದು ಬಿಜೆಪಿ ಪ್ರಶ್ನಿಸಿದಾಗ ಮರುಮಾತಿಲ್ಲ. ಅದರ ಬಗ್ಗೆ ಕಾಮೆಂಟ್ ಮಾಡಿದ ಫೇಕಿಂಗ್ ನ್ಯೂಸ್ ಎಂಬ ಜಾಲತಾಣ, "ಕೇಜ್ರೀವಾಲ್ ಸಾಕ್ಷ್ಯ ಕೇಳಿದಾಗ ಚುನಾವಣೆಗೂ ಮೊದಲು ಅವರೇ ಮಾಡಿದ್ದ ಭಾಷಣದ ಸಿ.ಡಿ. ನೀಡಿತು ಬಿಜೆಪಿ" ಎಂದು ಚುಚ್ಚಿತು.
ಒಂದು ವೇಳೆ, ರಾಹುಲ್ ಗಾಂಧಿಯವರು ಟೈಮ್ಸ್ ನೌ ಚಾನೆಲ್‌ನ ಅರ್ನಾಬ್ ಗೋಸ್ವಾಮಿಯವರಿಗೆ ಪೆದ್ದು ಪೆದ್ದಾಗಿ ಸಂದರ್ಶನ ಕೊಟ್ಟು ನಗೆಪಾಟಲಿಗೀಡಾಗಿ ಡಿಸ್ಟ್ರ್ಯಾಕ್ ಮಾಡದೇ ಹೋಗಿದ್ದರೆ ಇನ್ನೂ ಮಜಭೂತಾದ ಜೋಕುಗಳನ್ನು ಟ್ವೀಟಿಗರು ಉಣಬಡಿಸುತ್ತಿದ್ದರು. ಇನ್ನು ಅವರು ಬೊಬ್ಬೆ ಹಾಕುತ್ತಿರುವ ಗ್ಯಾಸ್ ಬೆಲೆಯ ವಿಚಾರ ತೆಗೆದುಕೊಳ್ಳಿ. ಫೆಬ್ರವರಿ 12ರ ಸಂಚಿಕೆಯಲ್ಲಿ "ಟೈಮ್ಸ್ ಆಫ್ ಇಂಡಿಯಾ" ಪತ್ರಿಕೆ ಒಂದಿಡೀ ಪುಟವನ್ನು ವ್ಯಯಿಸಿ ಕೇಜ್ರೀವಾಲ್ ಮಾತಿನಲ್ಲಿ ಯಾವ ಹುರುಳೂ ಇಲ್ಲ, ರಿಲಯನ್ಸ್‌ನಲ್ಲಿ ಷೇರು ಹೊಂದಿರುವ ಕೆನಡಾದ ನಿಕೋ ರಿಸೋರ್ಸಸ್ ಕಂಪನಿ ಬಾಂಗ್ಲಾದೇಶದಲ್ಲಿ ಭಾರತದ ಅರ್ಧ ಬೆಲೆಗೆ ಗ್ಯಾಸ್ ನೀಡುತ್ತಿದೆ ಎಂಬುದೂ ಬೋಗಸ್ ಎಂಬುದನ್ನು ಪರಿಪರಿಯಾಗಿ ವಿವರಿಸಿದೆ. ಆದರೂ ಕೇಜ್ರೀವಾಲ್ ಬೊಬ್ಬೆ ಹಾಕುವುದನ್ನು ನಿಲ್ಲಿಸಿಲ್ಲ.
ಈ ಕೇಜ್ರೀವಾಲರಂಥ ವ್ಯಕ್ತಿಗಳು, ಮನಸ್ಥಿತಿಯವರು ಎಲ್ಲ ದೇಶಗಳಲ್ಲೂ ಇದ್ದಾರೆ.
2011, ಸೆಪ್ಟೆಂಬರ್ 17ರಂದು ಈ ಎನ್‌ಜಿಓಗಳು, ಆ್ಯಕ್ಟಿವಿಸ್ಟ್‌ಗಳು ಅಮೆರಿಕದ ನ್ಯೂಯಾರ್ಕ್‌ನಲ್ಲಿ ಆರಂಭ ಮಾಡಿದ್ದ  ""Occupy Wall Street'' ಚಳವಳಿ ನೆನಪಿದೆಯಲ್ಲವೇ? ಅದು ಕೆಲವೇ ದಿನಗಳಲ್ಲಿ ಇಡೀ ದೇಶವನ್ನೇ ವ್ಯಾಪಿಸಿತ್ತು. ಆದರೆ ಅವರದ್ದು ಬರೀ ಬೊಬ್ಬೆಯಷ್ಟೇ. ಈ ಕೇಜ್ರೀವಾಲ್ ಹಾಗೂ ಅವರ ಸುತ್ತ ಇರುವವರೂ ಎನ್‌ಜಿಓಗಳು, ಆ್ಯಕ್ಟಿವಿಸ್ಟ್‌ಗಳೇ. ಒಂದು ಕಾಲದಲ್ಲಿ "ಬ್ರೈನ್ ಡ್ರೈನ್‌" ಅಥವಾ "ಪ್ರತಿಭಾ ಪಲಾಯನ" ಎಂದು ಬೊಬ್ಬೆ ಹಾಕುತ್ತಿದ್ದರು. ನಾವು ದುಡ್ಡು ಖರ್ಚು ಮಾಡಿ ಇವರನ್ನು ಡಾಕ್ಟರ್, ಎಂಜಿನಿಯರ್ ಪದವೀಧರರನ್ನಾಗಿ ಮಾಡುತ್ತೇವೆ. ಕೊನೆಗೆ ಅಮೆರಿಕ, ಬ್ರಿಟನ್ ಹಾಗೂ ಯುರೋಪ್‌ಗೆ ಹಾರಿ ಅವರ ಚಾಕರಿ ಮಾಡುತ್ತಾರೆ ಎನ್ನುತ್ತಿದ್ದರು. ಇಂಥ ಮಾತಿಗೆ ಜನ ಮರುಳಾಗುತ್ತಿದ್ದರು. ಅದರ ಬೆನ್ನಲ್ಲೇ ಕಂಪ್ಯೂಟರ್ ಬಂದಾಗ ಅಯ್ಯೋ ನಮ್ಮ ಜನರ ಕೆಲಸ ಕಿತ್ತುಕೊಳ್ಳುತ್ತದೆ, 20 ಜನ ಮಾಡುವ ಕೆಲಸವನ್ನು ಒಂದೇ ಕಂಪ್ಯೂಟರ್ ಮಾಡುತ್ತದೆ. 20 ಜನರ ಬಾಯಿಗೆ ಬೀಳುತ್ತದೆ ಮಣ್ಣು ಎಂದು ಬೊಬ್ಬೆ ಹಾಕಿದರು. ಇದಕ್ಕೂ ಜನ ಮರುಳಾಗಿ ತಲೆದೂಗಿದರು. ಕೇಜ್ರೀವಾಲ್ ಕೂಡ ಇಂಥ ವರ್ಗಕ್ಕೇ ಸೇರಿದವರು. ಇವತ್ತು ನಮ್ಮ ದೇಶದ ಇಂಜಿನಿಯರ್‌ಗಳು ಅಮೆರಿಕದ ಸಿಲಿಕಾನ್ ವ್ಯಾಲಿಯನ್ನು ಆಳುತ್ತಿದ್ದಾರೆ, ಒಬಾಮಾ ಆಡಳಿತವನ್ನು ಸೇರುತ್ತಿದ್ದಾರೆ, ಮೈಕ್ರೋಸಾಫ್ಟ್‌ನಂಥ ಕಂಪನಿಯ ಮುಖ್ಯಸ್ಥರಾಗುತ್ತಿರುವುದನ್ನು ಕಂಡು ಹೆಮ್ಮೆಯಿಂದ ಬೀಗುತ್ತಿದ್ದೇವೆ. ಇವತ್ತು ನಗರಗಳಲ್ಲಿ ದೇವರ ಕೊಠಡಿಯಿಲ್ಲದ ಮನೆಗಳಿರಬಹುದು, ಕಂಪ್ಯೂಟರ್ ಇಲ್ಲದಿದ್ದರೆ ನಗುತ್ತಾರೆ. 1970, 80ರ ದಶಕದಲ್ಲಿ ಸಾಕ್ಷರತೆ ಪ್ರಮಾಣ, ವಿವೇಚನೆ ಇರುವವರ ಸಂಖ್ಯೆ ಕಡಿಮೆ ಇತ್ತು. ಆಗ ಇಂಥ ಮಾತುಗಳಿಗೆ ಮಾರುಹೋಗುತ್ತಿದ್ದುದು ಸಹಜ. ಆದರೆ ಇವತ್ತು ವಿದ್ಯಾವಂತ ದಡ್ಡರು, ದಪ್ಪ ಮಂಡೆಯವರು ಕೇಜ್ರೀವಾಲ್‌ಗೆ ಮಾರುಹೋಗುತ್ತಿದ್ದಾರೆ ಅಷ್ಟೇ.
ಏಕೆ ಹೀಗೆ ಹೇಳಬೇಕಾಗಿದೆಯೆಂದರೆ ಕೇಜ್ರೀವಾಲ್‌ರಲ್ಲಿ ಉದ್ದೇಶ ಶುದ್ಧಿ ಕಾಣುತ್ತಿಲ್ಲ!
ಸುಖಾಸುಮ್ಮನೆ ಆರೋಪ ಮಾಡುತ್ತಾರೆ. ಮಾತೆತ್ತಿದರೆ "ಏ ಬಿಜೆಪಿ, ಕಾಂಗ್ರೆಸ್‌ವಾಲೇ..." ಅಂತ ಸಂಭೋದಿಸುತ್ತಾರೆ. ಅಂದರೆ "ಇಬ್ಬರೂ ಕಳ್ಳರೇ", ತಾನೊಬ್ಬನೇ "ಸುಭಗ", ಸಾಚಾ ಎಂಬುದೇ ಇವರ ಮಾತಿನ ಅರ್ಥ. ಅಲ್ಲಾ ಈ ಮನುಷ್ಯ ಏಕಾಗಿ "ಏ ಬಿಜೆಪಿ, ಕಾಂಗ್ರೆಸ್‌ವಾಲೇ..." ಎನ್ನುತ್ತಾರೆ? ಕಳೆದ 10 ವರ್ಷದಿಂದ ಆಡಳಿತ ನಡೆಸುತ್ತಿರುವುದು ಯಾರು? ದೇಶವೇ ತಲೆತಗ್ಗಿಸುವಂತೆ ಮಾಡಿದ ಕಾಮನ್ವೆಲ್ತ್ ಹಗರಣ, 2ಜಿ, ಕಲ್ಲಿದ್ದಲು, ಥೋರಿಯಂ ಮುಂತಾದ ಇತಿಹಾಸವೇ ಕಂಡುಕೇಳರಿಯದಂಥ ಹಗರಣಗಳು ನಡೆದಿದ್ದು 1998-2004ರ ಮಧ್ಯೆಯೇ? ಅಥವಾ 2004-2014ರ ನಡುವೆಯೋ? 2004ರಿಂದ ಈ ಕ್ಷಣದವರೆಗೂ ಅಧಿಕಾರದಲ್ಲಿರುವವರಾರು? 1998-2004ರ ನಡುವೆ ಇಂಥ ದೊಡ್ಡ ಹಗರಣಗಳಾವುವೂ ನಡೆದಿಲ್ಲ. ವಾಜಪೇಯಿಯವರ ಕಾಲದಲ್ಲಾದ ಪ್ರಗತಿಯನ್ನು ಬಿಜೆಪಿಯ ಕಟ್ಟಾ ವಿರೋಧಿಗಳೇ ಒಪ್ಪುತ್ತಾರೆ. ಕಳೆದ 30 ವರ್ಷಗಳಲ್ಲಾದ ಒಟ್ಟು(47 ಸಾವಿರ ಕಿ.ಮೀ.) ಹೆದ್ದಾರಿ ನಿರ್ಮಾಣದಲ್ಲಿ ಅರ್ಧದಷ್ಟು (23,814 ಕಿ.ಮೀ) ಆಗಿದ್ದೇ ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ. ಕುರ್ಚಿ ಬಿಡುವಾಗ ಆರ್ಥಿಕ ಅಭಿವೃದ್ಧಿ ದರವನ್ನು ಶೇ.8.5ಕ್ಕೇರಿಸಿದ್ದರು. ಖಂಡಿತ 2008-2013ರವರೆಗೂ ಕರ್ನಾಟಕದಲ್ಲಿ ಬಿಜೆಪಿ ಕೊಟ್ಟ ಆಡಳಿತ ಕೇಂದ್ರ ಬಿಜೆಪಿ ನಾಯಕರ ಗಂಟಲಲ್ಲಿ ಕಡುಬು ಸಿಕ್ಕಿಕೊಂಡಂತಾಗಿದ್ದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಕಾಂಗ್ರೆಸ್ಸನ್ನು ಪೇಚಿಗೆ ಸಿಕ್ಕಿಸುವಂಥ ದೊಡ್ಡ ದೊಡ್ಡ ಅವಕಾಶಗಳು ಸಿಕ್ಕಿದಾಗಲೂ ಕೇಂದ್ರ ಬಿಜೆಪಿ ನಾಯಕರನ್ನು ಕರ್ನಾಟಕ ನೈತಿಕವಾಗಿ ಕುಗ್ಗಿಸಿದ್ದೂ ನಿಜ. ಸಂದರ್ಭದ ಆನಿವಾರ್ಯತೆಗೆ ಸಿಕ್ಕಿ ಯಡಿಯೂರಪ್ಪನವರನ್ನು ಬಿಜೆಪಿ ಕೆಳಗಿಳಿಸಿದ್ದೂ ಆಯಿತು. ಇಷ್ಟಾಗಿಯೂ ಈ ಕೇಜ್ರೀವಾಲ ಸಾಹೇಬರೇಕೆ, ಬಾಯಿ ತೆರೆದರೆ "ಏ ಬಿಜೆಪಿ, ಕಾಂಗ್ರೆಸ್‌ವಾಲೇ..." ಎನ್ನುತ್ತಾರೆ? ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ಶಿವರಾಜ್ ಹಾಗೂ ರಮಣ್ ಸಿಂಗ್‌ರನ್ನು ಭಾರೀ ಬಹುಮತದಿಂದ ಮೂರನೇ ಬಾರಿಗೆ ಮರು ಆಯ್ಕೆ ಮಾಡಿದ್ದಾರೆ. ಗೋವಾದಲ್ಲಿ ಕಳೆದ 20 ವರ್ಷಗಳಲ್ಲಿ ಮೊಟ್ಟಮೊದಲ ಬಾರಿಗೆ ಪಕ್ಷವೊಂದಕ್ಕೆ ನಿಚ್ಚಳ ಬಹುಮತಕೊಟ್ಟಿದ್ದು, ಬಿಜೆಪಿಯ ಮನೋಹರ್ ಪರಿಕ್ಕರ್ ಮುಖ್ಯಮಂತ್ರಿಯಾಗಿದ್ದಾರೆ. ಇಂಥ ಉದಾಹರಣೆಗಳು, ಜನಾದೇಶ ಕಣ್ಣಮುಂದಿದ್ದರೂ ಏಕೆ ಕೇಜ್ರೀವಾಲರು, "ಈ ಬಿಜೆಪಿ, ಕಾಂಗ್ರೆಸ್ಸಿಗರು..." ಎಂದೇ ಎರಡೂ ಪಕ್ಷಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ಸಂಭೋದಿಸುತ್ತಾರೆ?
ಇತ್ತೀಚೆಗೆ ಒಬ್ಬರು ಅರ್ಥಪೂರ್ಣ ಟ್ವೀಟೊಂದನ್ನು ಮಾಡಿದ್ದರು-"ನಿಮಗೆ ಸಾಚಾ ಸರ್ಟಿಫಿಕೆಟ್ ಬೇಕೆಂದರೆ ಹೆಚ್ಚು ಶ್ರಮವಿಲ್ಲ, 40 ರೂಪಾಯಿ ಖರ್ಚು ಮಾಡಿದರೆ ಸಾಕು. 10 ರುಪಾಯಿ ಆಮ್ ಆದ್ಮಿ ಪಕ್ಷದ ಸದಸ್ಯತ್ವ ಪಡೆಯಲು, 30 ರೂಪಾಯಿ ಟೋಪಿಗೆ"! ಈ ಮನುಷ್ಯನ ಎದೆಯಲ್ಲಿ ಆಸ್ತಮಾ ಇದ್ದರೂ, ಬಾಯಿಬಿಟ್ಟರೆ 'ವರ್ಬಲ್ ಡಯೇರಿಯಾ' ಶುರುವಾಗುತ್ತದೆ. ಅವನು ಕಳ್ಳ, ಇವನು ಕಳ್ಳ, ಶೀಲಾ ದೀಕ್ಷಿತ್ ಕಳ್ಳಿ, ಗಡ್ಕರಿ ಕಳ್ಳ, ಮೋದಿ ಭ್ರಷ್ಟ, ಅಂದರೆ ತನ್ನೊಬ್ಬನನ್ನು ಬಿಟ್ಟರೆ ಎಲ್ಲರೂ ಭ್ರಷ್ಟರು ಎನ್ನುತ್ತಾರೆ. ನೀವೇ ಅಧಿಕಾರ ನಡೆಸಿ ತೋರಿಸಿ ಎಂದರೆ ಪಲಾಯನ ಮಾಡುತ್ತಾರೆ. ಜನಲೋಕಪಾಲ ಮಸೂದೆಯನ್ನೇ ತೆಗೆದುಕೊಳ್ಳಿ. ಅದಕ್ಕೆ ಯಾರ ವಿರೋಧವೂ ಇರಲಿಲ್ಲ. ಸೂಕ್ತ ಶಿಷ್ಟಾಚಾರ, ಪ್ರಕ್ರಿಯೆ ನಂತರ ಸದನದಲ್ಲಿ ಮಂಡಿಸಿ ಎಂಬುದೇ ಕಾಂಗ್ರೆಸ್, ಬಿಜೆಪಿಗಳ ಒತ್ತಾಯವಾಗಿತ್ತು. ಈಗಾಗಲೇ ಕೇಜ್ರೀವಾಲರ ಜನಲೋಕಪಾಲವನ್ನು ಬಿಜೆಪಿಯ ಬಿ.ಸಿ. ಖಂಡೂರಿ ಸರ್ಕಾರ ವರ್ಷದ ಹಿಂದೆಯೇ ಉತ್ತರಾಂಚಲದಲ್ಲಿ ಜಾರಿ ಮಾಡಿದೆ. ಅದರಲ್ಲಿ ಯಾವ ಬಹಾದ್ದೂರಿಕೆಯೂ ಇಲ್ಲ. ಆದರೂ ಕೇಜ್ರೀವಾಲ್‌ಗೆ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಒಂದು ನೆಪ ಬೇಕಿತ್ತು. ಅದಕ್ಕೆ ಜನಲೋಕಪಾಲವನ್ನು ಬಳಸಿಕೊಂಡರು.
ಏಕೆ ಹಾಗೆ ನುಣುಚಿಕೊಂಡರು ಎಂದು ಭಾವಿಸಿದ್ದೀರಿ?
ನೀವು ನಂಬಿ, ಬಿಡಿ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ 30-40 ಸೀಟುಗಳನ್ನು ಬಿಜೆಪಿಗೆ ನಷ್ಟ ಮಾಡಿ, ಬಿಜೆಪಿ ಸಂಖ್ಯೆಯನ್ನು 200ರ ಒಳಗೆ ಇಟ್ಟು ಮೋದಿ ಪ್ರಧಾನಿಯಾಗುವುದನ್ನು ತಡೆಯುವುದು ಮೊದಲ ಉದ್ದೇಶ. ಬಿಜೆಪಿ ಟ್ಯಾಲಿಯನ್ನು ಇನ್ನೂ ಕಡಿಮೆ ಮಾಡಿ ತೃತೀಯ ರಂಗವನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿಯನ್ನು ಅಧಿಕಾರದಿಂದಲೇ ಹೊರಗಿಡುವುದು ಎರಡನೇ ತಂತ್ರ. ಆಪ್ ಘೋಷಣೆ ಮಾಡಿದ 20 ಲೋಕಸಭಾ ಅಭ್ಯರ್ಥಿಗಳ ಪಟ್ಟಿ ನೋಡಿ. ಅದರಲ್ಲಿ 13 ಅಭ್ಯರ್ಥಿಗಳನ್ನು ಕಾಂಗ್ರೆಸ್ ಸಂಸದರ ವಿರುದ್ಧ ಹಾಕಿದೆ. ಅಂದರೆ ಮೇಲ್ನೋಟಕ್ಕೆ ಆಪ್ ಕಾಂಗ್ರೆಸ್ ವಿರೋಧಿಯಂತೆ ಕಾಣುತ್ತಿದ್ದರೂ ಒಳ ಉದ್ದೇಶ ಬೇರೆಯೇ ಆಗಿದೆ. ಈ 13 ಕ್ಷೇತ್ರಗಳಲ್ಲಿ ಮೊಹಮದ್ ಅಜರುದ್ದೀನ್‌ರ ಮೊರಾದಾಬಾದ್ ಬಿಟ್ಟರೆ ಉಳಿದ 12 ಸೀಟುಗಳು ಬಿಜೆಪಿ ಪಾಲಾಗುವ ಲಕ್ಷಣಗಳಿವೆ. ಇಂಥ ಸೀಟುಗಳನ್ನೇ ಆಯ್ದು ಚುನಾವಣೆಯ ಅಧಿಸೂಚನೆ ಹೊರಡುವ ಮೊದಲೇ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವುದರ ಹಿಂದಿರುವುದರ ಉದ್ದೇಶ ಈ ಕ್ಷೇತ್ರಗಳಲ್ಲಿನ ಕಾಂಗ್ರೆಸ್ ವಿರೋಧಿ ಮತಗಳು ಬಿಜೆಪಿಗೆ ಹೋಗುವುದನ್ನು ತಪ್ಪಿಸುವುದು ಹಾಗೂ ಆ ಸೀಟುಗಳೂ ಮೋದಿ ಬಗಲಿಗೆ ಹೋಗುವುದನ್ನು ತಡೆಯುವುದೇ ಆಗಿದೆ. ಈ ಕಾಂಗ್ರೆಸ್ ಹಾಗೂ ಆಪ್ ನಡುವೆ ಎಂಥ ತಾಳಮೇಳವಿದೆ ಎನ್ನುವುದಕ್ಕೆ ಉದಾಹರಣೆ ಬೇಕಾ? 2013 ಡಿಸೆಂಬರ್ 5ರಂದು ದಿಲ್ಲಿಯಲ್ಲಿ ಮತದಾನ ನಡೆದಾಗ ಕೆಲವು ಕ್ಷೇತ್ರಗಳಲ್ಲಿ ಸಂಜೆ ನಂತರ ಭಾರೀ ಮತದಾನ ನಡೆದಿದ್ದು, ರಾತ್ರಿ 9 ಗಂಟೆವರೆಗೂ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದ್ದು ನೆನಪಿದೆಯಲ್ಲವೆ? ಮಧ್ಯಾಹ್ನದವರೆಗಿನ ಮತದಾನವನ್ನು ಗಮನಿಸಿದಾಗ ಕಾಂಗ್ರೆಸ್‌ಗೆ ತಾನು ಸೋಲುವುದು ಖಚಿತವಾಗ ತೊಡಗಿತು. ಆಗ ಬಿಜೆಪಿ ಗೆಲುವನ್ನು ತಡೆಯಬೇಕೆಂದು ಮಧ್ಯಾಹ್ನದ ನಂತರ ಪ್ರಯತ್ನಿಸಿ ಸಂಜೆ ವೇಳೆಗೆ ತನ್ನ ಮತದಾರರಿಗೆ ಸೂಚಿಸಿ ಆಪ್ ಪರ ಮತಹಾಕಿಸಿತು. ಹೀಗೆ ಸಂಜೆ ವೇಳೆಗೆ ಎಲ್ಲೆಲ್ಲಿ ಭಾರೀ ಮತದಾನವಾಯಿತೋ ಅಲ್ಲೆಲ್ಲ ಆಪ್ ಗೆದ್ದು 28 ಸೀಟುಗಳನ್ನು ಪಡೆಯಿತು, ಬಿಜೆಪಿ 32ಕ್ಕೆ ನಿಂತು ಬಹುಮತವನ್ನು 4 ಸ್ಥಾನಗಳಿಂದ ಕಳೆದುಕೊಂಡಿತು. ಬಿಜೆಪಿಯ 5 ಅಭ್ಯರ್ಥಿಗಳು 500 ಮತಕ್ಕಿಂತ ಕಡಿಮೆ ಮತ ಹಾಗೂ ಆಸುಪಾಸಿನಲ್ಲಿ ಸೋತರು. ಬಿಜೆಪಿ 9 ಅಭ್ಯರ್ಥಿಗಳು 2 ಸಾವಿರಕ್ಕೂ ಕಡಿಮೆ ಮತಗಳ ಅಂತರದಲ್ಲಿ ಸೋತರು. ಇದೆಲ್ಲ ಏನನ್ನು ಸೂಚಿಸುತ್ತದೆ? ಚುನಾವಣೆಗಿಂತ ಮೊದಲು ಆಪ್ ಅನ್ನು ಕಾಂಗ್ರೆಸ್‌ನ ಬಿ-ಟೀಮ್ ಎನ್ನುತ್ತಿದ್ದರು. ಆದರೆ ಮತದಾನ ದಿನ ಕಾಂಗ್ರೆಸ್ಸೇ ಆಪ್‌ಗೆ ಬಿ-ಟೀಮ್ ಆಗಿಬಿಟ್ಟಿತು! ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಇದೇ ತಾಳಮೇಳ ಖಂಡಿತ ಕೆಲಸ ಮಾಡಲಿದೆ. ಈ ಕೇಜ್ರೀವಾಲ್, ಸೋನಿಯಾ ಗಾಂಧಿಯವರ ವಿರುದ್ಧ ವಾಗ್ದಾಳಿ ಮಾಡಿದ, ಭ್ರಷ್ಟಾಚಾರದ ಆರೋಪ ಮಾಡಿದ ಒಂದು ಉದಾಹರಣೆ ಕೊಡಿ ನೋಡೋಣ?
ಹಾಗಂತ...
ಈ ಕಾಂಗ್ರೆಸ್, ಬಿಜೆಪಿ, ಕಮ್ಯುನಿಸ್ಟ್ ಹಾಗೂ ಇತರ ಪಕ್ಷಗಳು ಸಾಚಾಗಳೆಂದು ಹೇಳುತ್ತಿಲ್ಲ. ಕಾಂಗ್ರೆಸ್‌ನ ಕಥೆ ಚಿಂತಾಜನಕವಾಗಿದ್ದರೆ, ಒಂದೆರಡು ರಾಜ್ಯಗಳಲ್ಲಿ ಭ್ರಷ್ಟರ ಸಂತೆಯಾಗಿದ್ದ ಬಿಜೆಪಿ ಬಗ್ಗೆ ಜನರಿಗೆ ವಿಶ್ವಾಸ ಬಂದಿದ್ದೇ ನರೇಂದ್ರ ಮೋದಿಯೆಂಬ ಏಕೈಕ ಆಶಾಕಿರಣದ ಕಾರಣಕ್ಕೆ. ಇಂದಿರಾ ಗಾಂಧಿ ಕಾಲದಲ್ಲಿ ಆಕೆಯ ಹೆಸರಿನಲ್ಲಿ ಕತ್ತೆ, ಕುರಿಗಳೂ ಗೆದ್ದುಬರಬಹುದೆಂಬ ಭಾವನೆ ಕಾಂಗ್ರೆಸ್‌ನಲ್ಲಿ ಇದ್ದಂತೆ ಇವತ್ತು ನರೇಂದ್ರ ಮೋದಿ ಹೆಸರಲ್ಲಿ ಕಳ್ಳ, ಸುಳ್ಳ, ಭ್ರಷ್ಟರೂ, ಮೊನ್ನೆ ಅಸೆಂಬ್ಲಿ  ಚುನಾವಣೆಯಲ್ಲಿ ಸೋತವರು, ಮೂರನೇ ಸ್ಥಾನಕ್ಕಿಳಿದವರೂ  ಗೆದ್ದು ಬಿಡಬಹುದೆಂದು ಹೊರಟಿದ್ದಾರೆಂಬುದೂ ನಿಜ. ಇದೇನೇ ಇರಲಿ, ಈ ರಾಷ್ಟ್ರೀಯ ಪಕ್ಷಗಳು ಕಳೆದ ಐದಾರು ದಶಕಗಳಿಂದ ನಡೆದುಕೊಂಡು ಬಂದಿರುವ ರೀತಿಯನ್ನು ಕಂಡು ಜನರೂ ಬೇಸತ್ತಿದ್ದರು. ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವೇ ಇಲ್ಲ ಎಂದು ಕೈಚೆಲ್ಲಿ ಕುಳಿತಿದ್ದರು. ಅಂತಹ ಸಂದರ್ಭದಲ್ಲಿ ನಾವೆಲ್ಲ ಒಗ್ಗೂಡಿದರೆ ವ್ಯವಸ್ಥೆಯನ್ನು ಅಲುಗಾಡಿಸಬಹುದು ಎಂದು ತೋರಿಸಿದವರು ಅಣ್ಣಾ ಹಝಾರೆ. ಅದಕ್ಕೂ ಮೊದಲು ಈಜಿಪ್ತ್, ಟ್ಯುನಿಶಿಯಾ ಮುಂತಾದ ರಾಷ್ಟ್ರಗಳಲ್ಲಿ ಕಂಡುಬಂದ "ಅರಬ್ ಸ್ಪಿಂಗ್‌" ಭಾರತೀಯರಲ್ಲೂ ಒಂದು ಆಶಾಭಾವನೆಯನ್ನು ಹುಟ್ಟುಹಾಕಿತ್ತು. ಅದು ಮೊದಲು ಗೋಚರಿಸಿದ್ದು ಅಣ್ಣಾ ಹಝಾರೆ ಜಂತರ್ ಮಂತರ್‌ನಲ್ಲಿ ಉಪವಾಸಕ್ಕೆ ಕುಳಿತಾಗ. ಅದರೊಂದಿಗೆ ಆ ನಿರಶನದ ನಿರ್ದೇಶಕರಲ್ಲಿ ಒಬ್ಬರಾಗಿದ್ದ "ರಾಜಕೀಯ ಮಹತ್ವಾಕಾಂಕ್ಷಿ" ಅರವಿಂದ್ ಕೇಜ್ರೀವಾಲ್‌ಗೆ, ರಾಜಕಾರಣಿಯಾಗಿ ಬದಲಾಗುವ ಅವಕಾಶವೂ ಸೃಷ್ಟಿಯಾದಂತಾಯಿತು. ಅದಕ್ಕೆ ತಕ್ಕಂತೆ, "ಮಸೂದೆ ತರುವ ಹಕ್ಕು ಶಾಸನಸಭೆಗಳಿಗೆ, ಅಂದರೆ ಚುನಾಯಿತ ಪ್ರತಿನಿಧಿಗಳಿಗೆ ಮಾತ್ರ ಇದೆ. ತಾಕತ್ತಿದ್ದರೆ ನೀವೂ ಚುನಾವಣೆಗೆ ನಿಂತು ಗೆದ್ದು ತೋರಿಸಿ" ಎಂದು ಕಾಂಗ್ರೆಸ್‌ನ ದಿಗ್ವಿಜಯ್ ಸಿಂಗ್, ಕಪಿಲ್ ಸಿಬಲ್ ಸವಾಲು ಹಾಕಿದರು. ಇಂಥ ಮಾತು ಸರಿಯಲ್ಲ ಎಂದು ಖಂಡಿಸುವ ಕಾಮನ್‌ಸೆನ್ಸನ್ನು ಬಿಜೆಪಿ ತೋರಲಿಲ್ಲ. ಪರಿಣಾಮವಾಗಿ ಕೇಜ್ರೀವಾಲ್ ಪಕ್ಷ ಸ್ಥಾಪಿಸಿದರು. ಈ ರಾಷ್ಟ್ರೀಯ ಪಕ್ಷಗಳಲ್ಲಿರುವ ಮಾಫಿಯಾ ಏನಿದೆಯಲ್ಲಾ, ಅಂದರೆ ನಾನು, ನನ್ನ ಕುಟುಂಬ, ನನ್ನ ಸುತ್ತ ಇರುವವರು, ಚೇಲಾಗಳಿಗೆ ಮಾತ್ರ ಮಣೆ ಹಾಕುವ, ಟಿಕೆಟ್ ಕೊಡುವ ಹಾಗೂ ಪಕ್ಷವನ್ನು ತಮ್ಮ ಅಪ್ಪನ ಆಸ್ತಿಯಂತೆ ಕಾಣುವ ಮಾಫಿಯಾ ಸಂಸ್ಕೃತಿಯನ್ನು ಒಡೆದು ಒಬ್ಬ ಸಾಮಾನ್ಯನೂ ನಾಯಕನಾಗಬಹುದು, ದೇಶ ಆಳುವ ಹಕ್ಕು ಆತನಿಗೂ ಇದೆ ಎಂಬುದನ್ನು ತೋರಿಸಲು ಮುಂದಾದವರು ಕೇಜ್ರೀವಾಲ್. ಅದು ನಿಜಕ್ಕೂ ಸ್ವಾಗತಾರ್ಹ ವಿಷಯವೇ ಆಗಿತ್ತು. ಬಿಜೆಪಿ, ಕಾಂಗ್ರೆಸ್‌ಗಳಲ್ಲಿನ ಪಾಳೆಗಾರಿಕೆಗೆ ಚಾಟಿ ಏಟು ಕೊಡುವವರೊಬ್ಬರು ಬೇಕಿತ್ತು. ಆದರೆ 28 ಸೀಟು ಗೆದ್ದಿದ್ದೇ ತಡ ಕೇಜ್ರೀವಾಲರಲ್ಲೂ ಅದೇ ದರ್ಪ, ಸುತ್ತಲೂ ಭಟ್ಟಂಗಿಗಳ ಕೂಟ ಸೃಷ್ಟಿಯಾಯಿತು. ಯಶಸ್ಸು ಮದವಾಗಿ ತಿರುಗಿತು. ಬದಲಾವಣೆಯ ಕೂಗಿನಲ್ಲಿ, ಭ್ರಷ್ಟಾಚಾರ ವಿರುದ್ಧದ ಬೊಬ್ಬೆಯಲ್ಲಿ ಅವರ ಅಧಿಕಾರದ ದಾಹ ಮೊಳಗತೊಡಗಿತು. ಅದೇ ದುರಂತ!

-ಪ್ರತಾಪ್ ಸಿಂಹ
mepratap@gmail.com


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com