ಅಡ್ಮಿರಲ್ ಜೋಶಿ ತೋರಿದ ನೈತಿಕ ಹೊಣೆ, ಆಳುವ ಪ್ರಧಾನಿ, ಸೂಪರ್ ಪ್ರಧಾನಿ ಹಾಗೂ ರಕ್ಷಣಾ ಸಚಿವರಲ್ಲಿ ಏಕಿಲ್ಲ?!

ನಮ್ಮ ನೌಕಾ ಪಡೆಯ ರಷ್ಯಾ ನಿರ್ಮಿತ ಜಲಾಂತರ್ಗಾಮಿ "ಸಿಂಧೂರತ್ನ"ದಲ್ಲಿ...
ಅಡ್ಮಿರಲ್ ಜೋಶಿ ತೋರಿದ ನೈತಿಕ ಹೊಣೆ, ಆಳುವ ಪ್ರಧಾನಿ, ಸೂಪರ್ ಪ್ರಧಾನಿ ಹಾಗೂ ರಕ್ಷಣಾ ಸಚಿವರಲ್ಲಿ ಏಕಿಲ್ಲ?!

ಲೆಫ್ಟಿನೆಂಟ್ ಕಮಾಂಡರ್ ಕಪಿಶ್ ಮುವಾಲ್
ಲೆಫ್ಟಿನೆಂಟ್ ಮನೋರಂಜನ್ ಕುಮಾರ್
ನಮ್ಮ ನೌಕಾ ಪಡೆಯ ರಷ್ಯಾ ನಿರ್ಮಿತ ಜಲಾಂತರ್ಗಾಮಿ "ಸಿಂಧೂರತ್ನ"ದಲ್ಲಿ ಬುಧವಾರ ಸಂಭವಿಸಿದ ಅನಾವಶ್ಯಕ ಅವಘಡದಲ್ಲಿ ಈ ಇಬ್ಬರು ಯುವ ಅಧಿಕಾರಿಗಳು ಅನ್ಯಾಯವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಬ್ಯಾಟರಿ ದೋಷದಿಂದ ಸಂಭವಿಸಿದ ವಿಷಪೂರಿತ ಅನಿಲ ಇವರನ್ನು ಆಹುತಿ ತೆಗೆದುಕೊಂಡಿದೆ. ಕಳೆದ ಆಗಸ್ಟ್ 14ರಂದು ಭಾರತೀಯ ನೌಕಾ ಪಡೆಯ ಮತ್ತೊಂದು ರಷ್ಯಾ ನಿರ್ಮಿತ ಜಲಾಂತರ್ಗಾಮಿ "ಸಿಂಧೂರಕ್ಷಕ" ಮುಂಬೈ ಬಂದರಿನಲ್ಲಿ ನಿಂತಿರುವಾಗಲೇ ಸ್ಫೋಟಗೊಂಡು 18 ಅಧಿಕಾರಿಗಳು ಸುಟ್ಟು ಕರಕಲಾಗಿದ್ದರು. ಜನವರಿ 17ರಂದು "ಸಿಂಧೂಘೋಷ್‌" ದುರಂತಕ್ಕೀಡಾಗಿತ್ತು. ಇಂಥ ಸಬ್‌ಮರೀನ್‌ಗಳಲ್ಲದೆ ಐಎನ್‌ಎಸ್ ವಿರಾಟ್, ಐಎನ್‌ಎಸ್ ತಲ್ಚಾರ್‌ಗಳಂಥ ಯುದ್ಧನೌಕೆಗಳೂ(ಹಡಗು) ಅವಘಡಕ್ಕೀಡಾಗಿವೆ. ಕಳೆದ 7 ತಿಂಗಳಲ್ಲಿ ಸಬ್‌ಮರೀನ್ ಹಾಗೂ ಯುದ್ಧನೌಕೆಗಳನ್ನು ಒಳಗೊಂಡಂತೆ ಒಟ್ಟು 12 ನೌಕಾ ಅವಘಡಗಳು ಸಂಭವಿಸಿವೆ. ಇವುಗಳಿಗೆಲ್ಲ ನೈತಿಕ ಹೊಣೆ ಹೊತ್ತು ಸೇವಾವಧಿ ಇನ್ನೂ 17 ತಿಂಗಳು ಇರುವಾಗಲೇ ಅಡ್ಮಿರಲ್ ದೇವೇಂದ್ರ ಕುಮಾರ್ ಜೋಶಿ ರಾಜೀನಾಮೆ ಇತ್ತಿದ್ದಾರೆ!
ಆದರೆ...
ಈ ನೈತಿಕ ಹೊಣೆ ಎಂಬುದು ನೌಕಾ ಪಡೆಯ ಮುಖ್ಯಸ್ಥರಾದ ಅಡ್ಮಿರಲ್ ಜೋಶಿಯವರಿಗೆ ಮಾತ್ರ ಅನ್ವಯವಾಗುವ ವಿಚಾರವೇ? ಇಷ್ಟೆಲ್ಲಾ ಅವಘಡಗಳಿಗೆ ಜೋಶಿಯವರು ವೈಯಕ್ತಿಕವಾಗಿ ಕಾರಣರೇ? ಈ ಒಂದೊಂದು ಜಲಾಂತರ್ಗಾಮಿಗಳನ್ನು, ಯುದ್ಧನೌಕೆಗಳನ್ನು ಅವರು ಸ್ವತಃ ಚಾಲನೆ ಮಾಡುತ್ತಿದ್ದರೆ? ಅಥವಾ ಖುದ್ದು ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ? ಖಂಡಿತ ಇಲ್ಲ. ಇಷ್ಟಾಗಿಯೂ ಅವರೇಕೆ ಹಾಗೂ ಅವರಷ್ಟೇ ಏಕೆ ನೈತಿಕ ಜವಾಬ್ದಾರಿ ಹೊತ್ತುಕೊಳ್ಳಬೇಕು? ಕಳೆದ 7 ವರ್ಷಗಳಿಂದ ರಕ್ಷಣಾ ಸಚಿವರಾಗಿ ಎ.ಕೆ. ಆ್ಯಂಟನಿ ಮಹಾಶಯರು ಮಾಡಿದ್ದೇನು? ಪ್ರತಿವರ್ಷ ಮಂಡಿಸುವ ಬಜೆಟ್‌ನಲ್ಲಿ ನೌಕಾಪಡೆಯ ಆಧುನೀಕರಣಕ್ಕೆ ಪ್ರಧಾನಿ ಹಾಗೂ ಸೂಪರ್ ಪ್ರಧಾನಿ ಎಷ್ಟು ಹಣ ಕೊಟ್ಟಿದ್ದಾರೆ? ಆಧುನೀಕರಣದ ಬಗ್ಗೆ ಎಷ್ಟು ಕಾಳಜಿ ತೋರಿಸಿದ್ದಾರೆ? ಮುದಿ ಹಾಗೂ ದುರ್ಬಲಗೊಳ್ಳುತ್ತಿರುವ ಜಲಾಂತರ್ಗಾಮಿಗಳು ಹಾಗೂ ನೌಕೆಗಳ ಬಗ್ಗೆ ನೌಕಾ ಪಡೆ ಕಾಲಕಾಲಕ್ಕೆ ಎಚ್ಚರಿಕೆ ಕೊಡುತ್ತಾ ಬಂದಿದ್ದರೂ, ಮನವಿ ಸಲ್ಲಿಸಿದರೂ ಸರ್ಕಾರ ಮಾಡಿದ್ದೇನು? ಇವತ್ತು ಭಾರತೀಯ ನೌಕಾಪಡೆಯ ಬಳಿ ಇರುವ 13 ಸಾಂಪ್ರದಾಯಿಕ ಸಬ್‌ಮರೀನ್‌ಗಳ ಪೈಕಿ 12 ಜಲಾಂತರ್ಗಾಮಿಗಳು 20 ವರ್ಷಕ್ಕೂ ಹಳೆಯದಾಗಿವೆ. ಬುಧವಾರ ಅವಘಡಕ್ಕೀಡಾದ "ಸಿಂಧುರತ್ನ" ಏನಿದೆಯಲ್ಲಾ ಅದು 25 ವರ್ಷಕ್ಕೂ ಹಳೆಯದಾದ 8 ಸಬ್‌ಮರೀನ್‌ಗಳ ಪೈಕಿ ಒಂದು. ಸಬ್‌ಮರೀನ್ ಹಾಗೂ ಯುದ್ಧನೌಕೆಗಳಿಗೂ ಜೀವಿತಾವಧಿ (ಕಾರ್ಯಕಾಲ) ಎಂಬುದಿರುತ್ತದೆ. ಭಾರತದ ಬಳಿ ಇರುವ ಒಟ್ಟು ಸಬ್‌ಮರೀನ್‌ಗಳ ಪೈಕಿ ಅರ್ಧದಷ್ಟು ತಮ್ಮ ಮುಕ್ಕಾಲು ಜೀವಿತಾವಧಿಯನ್ನು ಮೀರಿವೆ. ಒಟ್ಟು 14 ಸಬ್‌ಮರೀನ್‌ಗಳಲ್ಲಿ ಕೇವಲ 7 ಮಾತ್ರ ಸದಾ ಸನ್ನದ್ಧವಾಗಿರುವ ಶಕ್ತಿ ಹೊಂದಿವೆ. ಶಾಂತಿ ಕಾಲದಲ್ಲೇ ಸಮುದ್ರವನ್ನು ಸಮರ್ಥವಾಗಿ ಕಾಯುವ ತಾಕತ್ತು ನಮ್ಮ ನೌಕಾಪಡೆಗೆ ಇಲ್ಲದಂತಾಗಿದೆ. ಇನ್ನು ಯುದ್ಧ ಎದುರಾದರೆ ಗತಿಯೇನು? ಒಂದು ಕಡೆ ಅರಬ್ಬೀ ಸಮುದ್ರವಿದೆ, ಇನ್ನೊಂದು ಕಡೆ ಬಂಗಾಳ ಕೊಲ್ಲಿಯಿದೆ. ಕೆಳಭಾಗದಲ್ಲಿ ಹಿಂದು ಮಹಾಸಾಗರವಿದೆ. ಹೀಗೆ ಮೂರು ಸಮುದ್ರಗಳಿಂದ ಸುತ್ತುವರಿದಿರುವ ದೇಶದ ನೌಕಾಪಡೆಯ ಬಗ್ಗೆ ಕಾಳಜಿ ಹೊಂದಿರಬೇಕಾಗಿದ್ದು, ಹೊಣೆಗಾರಿಕೆ ಇರಬೇಕಾಗಿದ್ದು ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿರುವ ಹಾಗೂ ಇನ್ನೈವತ್ತು ವರ್ಷ ದೇಶವಾಳಿರುವ ಕಾಂಗ್ರೆಸ್ ಸರ್ಕಾರಕ್ಕೋ, ಕೇವಲ ಒಂದೂವರೆ ವರ್ಷದಿಂದ(2012, ಆಗಸ್ಟ್ 31) ನೌಕಾಪಡೆಯ ಚುಕ್ಕಾಣಿ ಹಿಡಿದಿರುವ ಅಡ್ಮಿರಲ್ ಜೋಶಿಯವರಿಗೆ ಮಾತ್ರವೋ?
ಇಷ್ಟಕ್ಕೂ ಅಡ್ಮಿರಲ್ ಜೋಶಿ ತೋರುವ ನೈತಿಕ ಹೊಣೆ, ಆಳುವ ಪ್ರಧಾನಿ ಮನಮೋಹನ್ ಸಿಂಗ್, ಸೂಪರ್ ಪ್ರೈಮ್ ಮಿನಿಸ್ಟರ್ ಸೋನಿಯಾ ಗಾಂಧಿ ಹಾಗೂ ರಕ್ಷಣಾ ರಚಿವ ಆ್ಯಂಟನಿಯಲ್ಲಿ ಏಕಿಲ್ಲ?
ಈ ಮನುಷ್ಯ ಆ್ಯಂಟನಿ ಕಳೆದ 7 ವರ್ಷಗಳಿಂದ, ಅಂದರೆ ಹೆಚ್ಚು ಕಾಲ ದೇಶದ ರಕ್ಷಣಾ ಮಂತ್ರಿಯಾಗಿದ್ದಾರೆಂಬ ಸಾಧನೆ ಬಿಟ್ಟರೆ ಬೇರೇನು ಮಾಡಿದರು? ಇವರ ಪ್ರಾಮಾಣಿಕತೆಯಿಂದ ದೇಶಕ್ಕೇನು ಲಾಭವಾಯಿತು? ಫ್ರಾನ್ಸ್ ಸಹಾಯದಿಂದ "ಸ್ಕಾರ್ಪಿನ್‌" ಹೆಸರಿನ ಸಾಂಪ್ರದಾಯಿಕ ಜಲಾಂತರ್ಗಾಮಿಗಳನ್ನು ದೇಶೀಯವಾಗಿ ನಿರ್ಮಿಸುವ ಯೋಜನೆಯನ್ನು ಈ ಮನುಷ್ಯ ತಡೆಹಿಡಿದಿರುವುದೇಕೆ? ಚೀನಾವೆಂಬ ಪ್ರಬಲ ಶತ್ರುವನ್ನು ಎದುರಿಸಲು ಈ ಆ್ಯಂಟನಿ ಕಳೆದ 7 ವರ್ಷಗಳಲ್ಲಿ ಮಾಡಿದ ತಯಾರಿಯೇನು? ಇವರು ಸರಳ ಜೀವನ ನಡೆಸುತ್ತಾರೆ, ಇವರ ಹೆಂಡತಿ ಸರ್ಕಾರಿ ಬಸ್ಸಲ್ಲೇ ಓಡಾಡುತ್ತಾರೆ, ಇವರದ್ದು ಶುದ್ಧಹಸ್ತ. ಆದರೆ, ಸೇನಾ ಪಡೆಗಳ ಆಧುನೀಕರಣವನ್ನು 7 ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಿರುವ ಇವರ ಪ್ರಾಮಾಣಿಕತೆಯಿಂದ ದೇಶಕ್ಕೆ ಸಿಕ್ಕಿದ್ದು ಮಾತ್ರ ಮಣ್ಣಂಗಟ್ಟಿ. ಬುಧವಾರ ಅವಘಡ ಸಂಭವಿಸಿದ ಬೆನ್ನಲ್ಲಿ ಅಡ್ಮಿರಲ್ ಜೋಶಿ ರಾಜೀನಾಮೆ ಕೊಟ್ಟ ಅರ್ಧ ಗಂಟೆಯೊಳಗೆ ಸರ್ಕಾರ ಅದನ್ನು ಅಂಗೀಕಾರ ಮಾಡಿತು! ಇಷ್ಟು ಆತುರ ತೋರುವ ಆ್ಯಂಟನಿ ಹಾಗೂ ಸರ್ಕಾರ, ಸೇನಾ ಪಡೆಗಳ ಅಗತ್ಯ ಪೂರೈಸುವ ವಿಚಾರ ಬಂದ ಕೂಡಲೇ ಹೊದ್ದು ಮಲಗುವುದೇಕೆ? ಇನ್ನು ಪ್ರಾಮಾಣಿಕ ಆ್ಯಂಟನಿಯವರು 1500 ಕೋಟಿ ವಿಐಪಿ ಹೆಲಿಕಾಪ್ಟರ್ ಹಗರಣ ಬಯಲಾದಾಗ ಏಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿಲ್ಲ?
ಅಡ್ಮಿರಲ್ ಜೋಶಿ ನೈತಿಕ ಹೊಣೆ ಹೊತ್ತು ಕೊಡುವ ರಾಜೀನಾಮೆಯನ್ನು ಕೂಡಲೇ ಅಂಗೀಕರಿಸುವ ಈ ಆ್ಯಂಟನಿ, ಮನಮೋಹನ್ ಸಿಂಗ್, ಸೋನಿಯಾ ಗಾಂಧಿಯವರು ಯಾವ್ಯಾವಾಗ ನೈತಿಕ ಹೊಣೆ ಹೊತ್ತಿದ್ದರು  ಹೇಳಿ?
oil for food ಅಥವಾ ತೈಲಕ್ಕಾಗಿ ಆಹಾರ ಹಗರಣ
ಕಾಮನ್‌ವೆಲ್ತ್ ಹಗರಣ
2ಜಿ ಹಗರಣ
ಲವಾಸಾ ಹಗರಣ
ಕಲ್ಲಿದ್ದಲು ಹಗರಣ
ಅದರ ಬೆನ್ನಲ್ಲೇ ಕೇಳಿ ಬಂದ ಥೋರಿಯಂ ಹಗರಣ
ರೈಲ್ವೆ ರುಷುವತ್ತು ಹಗರಣ
ಕಳೆದ 10 ವರ್ಷಗಳಲ್ಲಿ ನಡೆದಿದ್ದೇನು ಕಡಿಮೆ ಹಗರಣಗಳೇ? ಇಂತಹ ಒಂದೊಂದು ಹಗರಣಗಳು ನಡೆದಾಗಲೂ ಅವುಗಳ ಹೊಣೆಗಾರಿಕೆ ಯಾರದ್ದಾಗಿರುತ್ತದೆ? ಹಗರಣಗಳು ಸಂಭವಿಸಿದಂತೆ ತಡೆಯುವ ಅಥವಾ ನಡೆದಾಗ ದೇಶವಾಸಿಗಳಿಗೆ ವಿವರಣೆ ನೀಡುವ, ಮುಂದೆ ಸಂಭವಿಸದಂತೆ ಮಂಜಾಗ್ರತೆ ವಹಿಸುವ ಜವಾಬ್ದಾರಿಯನ್ನು ಯಾರು ಹೊಂದಿರುತ್ತಾರೆ? ಅವುಗಳ ಬಗ್ಗೆ ದೇಶಕ್ಕೆ ಉತ್ತರಿಸಬೇಕಾದವರು, ನೈತಿಕ ಹೊಣೆ ಹೊರಬೇಕಾದವರು ಯಾರು? 1.76 ಲಕ್ಷ ಕೋಟಿ ಮೊತ್ತದ 2ಜಿ ಹಗರಣ ಹಾಗೂ 1.85 ಕೋಟಿ ರೂ. ಮೊತ್ತದ ಕಲ್ಲಿದ್ದಿಲಿನಂಥ ಇತಿಹಾಸವೇ ಕಂಡುಕೇಳರಿಯದ ಹಗರಣಗಳು ಸಂಭವಿಸಿದಾಗ ಆಳುವ ಪ್ರಧಾನಿಯಾಗಲಿ ಅಥವಾ ಅವರ ಕಡಿವಾಣ ಹಿಡಿದುಕೊಂಡಿರುವ ಸೂಪರ್ ಪ್ರೈಮ್ ಮಿನಿಸ್ಟರ್ ಸೋನಿಯಾ ಗಾಂಧಿಯವರಾಗಲಿ ಎಂದಾದರೂ ನೈತಿಕ ಹೊಣೆ ಹೊತ್ತಿದ್ದನ್ನು ನೋಡಿದ್ದೀರಾ? ಕನಿಷ್ಠ ಹೊಣೆ ನನ್ನದು ಎಂದು ರಾಜೀನಾಮೆಯ ಮಾತನಾಡಿದ್ದನ್ನಾದರೂ ಕೇಳಿದ್ದೀರಾ? ಇಂಥ ಮೌನ, ಹೊಣೆಗೇಡಿತನವನ್ನು ಪ್ರತಿಪಕ್ಷಗಳು ಸಂಸತ್ತಿನಲ್ಲಿ ಪ್ರಶ್ನಿಸಿದಾಗ, ಟೀಕಿಸಿದಾಗ, ತರಾಟೆಗೆ ತೆಗೆದುಕೊಂಡಾಗ...
ಹಜಾರೋ ಜವಾಬೋನ್ ಸೆ ಅಚ್ಛಿ ಹೈ ಖಾಮೋಶಿ ಮೇರಿ
ನ ಜಾನೆ ಕಿತ್ನೆ ಸವಾಲೋ ಕೀ ಆಬ್ರೂ ರಖೇ...      
ಅಂದರೆ, "ಸಾವಿರ ಉತ್ತರಗಳಿಗಿಂತ ನನ್ನ ಮೌನವೇ ಮೇಲು" ಎಂದು ಪ್ರಧಾನಿ ಕೊರಗಿದ್ದರು. ಹಾಗಾದರೆ ಅಡ್ಮಿರಲ್ ಜೋಶಿಯವರಿಂದ ಏಕೆ ಉತ್ತರದಾಯಿತ್ವ, ಹೊಣೆಗಾರಿಕೆ ಕೇಳಬೇಕು? ಇನ್ನು ಸೋನಿಯಾ ಗಾಂಧಿಯವರ ವಿಚಾರಕ್ಕೆ ಬನ್ನಿ. ಐಪಿಎಲ್ ಹಗರಣ ಬೆಳಕಿಗೆ ಬಂದಾಗ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್ ಮೇಲೆ ಆರೋಪ ಕೇಳಿಬಂತು. ಕೂಡಲೇ ಕಾರ್ಯಪ್ರವೃತ್ತವಾದ ಮಾಧ್ಯಮಗಳು, ಶ್ರೀನಿವಾಸನ್ ರಾಜೀನಾಮೆಗೆ ಒತ್ತಾಯಿಸಿದವು, ಬೆನ್ನುಬಿದ್ದವು.  ಅಳಿಯನ ಮೇಲೆ ಆರೋಪ ಬಂದಿದೆ ಎಂಬ ಕಾರಣಕ್ಕೆ ಮಾವ ಶ್ರೀನಿವಾಸನ್ ರಾಜೀನಾಮೆ ಕೊಡಬೇಕು ಎನ್ನುವುದಾದರೆ, ಅಳಿಯ ವಾದ್ರಾನ ಮೇಲೆ ಆರೋಪ ಬಂದಾಗ ಅತ್ತೆ ಸೋನಿಯಾ ಗಾಂಧಿಯವರು ರಾಜೀನಾಮೆ ನೀಡಿದ್ದರೇ? ಬಿಸಿಸಿಐ ಅಧ್ಯಕ್ಷರಾಗಿ ಶ್ರೀನಿವಾಸನ್ ಅವರೇ ಇದ್ದರೆ, ಅಳಿಯನ ವಿರುದ್ಧ ನ್ಯಾಯಸಮ್ಮತ ತನಿಖೆ ನಡೆಯಲು ಸಾಧ್ಯವಿಲ್ಲ ಅನ್ನುವುದಾದರೆ, ವಾದ್ರಾ ಕೂಡ ಸೋನಿಯಾ ಗಾಂಧಿಯವರ ಮನೆಯಲ್ಲೇ ಅಡ್ಡಾಡುತ್ತಿರುತ್ತಾರೆ, ಅಳಿಯನ ಮೇಲೆ ಆರೋಪ ಬಂದರೆ ಅತ್ತೆ ರಕ್ಷಿಸದೇ ಇರುತ್ತಾರೆಯೇ? ಹಾಗಾಗಿ ಯುಪಿಎ ಹಾಗೂ ಸರ್ಕಾರ ನೀತಿ ನಿರೂಪಣೆ ಮಾಡುತ್ತಿರುವ ಪ್ರಭಾವಿ ರಾಷ್ಟ್ರೀಯ ಸಲಹಾ ಮಂಡಳಿಯ(NAC)ಅಧ್ಯಕ್ಷ ಸ್ಥಾನಕ್ಕೆ ಆಕೆ ರಾಜೀನಾಮೆಯನ್ನೇಕೆ ಕೊಟ್ಟಿರಲಿಲ್ಲ? 2007ರಲ್ಲಿ 50 ಲಕ್ಷ ಮೂಲ ಬಂಡವಾಳದೊಂದಿಗೆ ದಂಧೆ ಆರಂಭಿಸಿದ ರಾಬರ್ಟ್ ವಾದ್ರಾ ಕೇವಲ ಮೂರ್ನಾಲ್ಕು ವರ್ಷಗಳಲ್ಲಿ 500 ಕೋಟಿ ರುಪಾಯಿ ಒಡೆಯನಾಗಿದ್ದು ಹೇಗೆ? ಮೂರು ವರ್ಷಗಳಲ್ಲಿ ರಾಜಧಾನಿ ದಿಲ್ಲಿ ಹಾಗೂ ಅದರ ಸುತ್ತಮುತ್ತ 31 ಸ್ವತ್ತುಗಳನ್ನು ಖರೀದಿಸುವಷ್ಟು "ತಾಕತ್ತು" ಎಲ್ಲಿಂದ ಬಂದಿತ್ತು? ಹರ್ಯಾಣದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಮಾಡಲು, ರಾಜಸ್ಥಾನದಲ್ಲಿ ವಿದ್ಯುತ್ ಸ್ಥಾವರವೊಂದು ಬರಲಿದೆ ಎಂಬುದನ್ನು ಮುಂಚೆಯೇ ತಿಳಿದುಕೊಂಡು ಅದರ ಸಮೀಪದಲ್ಲಿದ್ದ ರೈತರಿಂದ ನೂರಾರು ಎಕರೆ ಕೃಷಿ ಭೂಮಿ ಖರೀದಿಸಲು ಹೇಗೆ ಸಾಧ್ಯವಾಯಿತು? ಒಬ್ಬ ಸಣ್ಣ ಪ್ರಮಾಣದ ಚರ್ಮದ ವ್ಯಾಪಾರಿಯಾಗಿದ್ದ ರಾಬರ್ಟ್ ವಾದ್ರಾ ಏಕಾಏಕಿ ಬಿಲಿಯನೇರ್ ಆಗಿದ್ದು ಹೇಗೆ? ಇದರ ಬಗ್ಗೆಯೂ ನ್ಯಾಯಸಮ್ಮತ ತನಿಖೆ ಆಗಬೇಕಿತ್ತಲ್ಲವೆ? ಹಾಗೆ ಆಗಬೇಕಾದರೆ ಸೋನಿಯಾ ಗಾಂಧಿಯವರೂ ರಾಜಿನಾಮೆ ನೀಡಿ ಅಧಿಕಾರದಿಂದ ದೂರ ಉಳಿಯಬೇಕಿತ್ತಲ್ಲವೆ?
ಇಂಥ ಸಂದರ್ಭಗಳಲ್ಲಿ ಯಾರೂ ಏಕೆ ಆಕೆಯಿಂದ ಹೊಣೆಗಾರಿಕೆ ಕೇಳಿರಲಿಲ್ಲ?
ಇನ್ನು 2004ರಲ್ಲಿ ಪ್ರಧಾನಿ ಸ್ಥಾನವನ್ನು ನಿರಾಕರಿಸುವ ನಾಟಕವಾಡಿದ ಸೋನಿಯಾ ಗಾಂಧಿಯವರು "ರಾಷ್ಟ್ರೀಯ ಸಲಹಾ ಮಂಡಳಿ"(ಎನ್‌ಎಸಿ) ರಚನೆ ಮಾಡಿಕೊಂಡು ಅದರ ಅಧ್ಯಕ್ಷೆಯಾದಾಗಲೇ ಜವಾಬ್ದಾರಿಯಿಲ್ಲದ ಅಧಿಕಾರ ಚಲಾಯಿಸುವ ಅವರ ಉದ್ದೇಶ ಜನರಿಗೆ ಮನವರಿಕೆಯಾಗಿತ್ತು. ಹಾಗಂತ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವೇ?  2004ರಿಂದ 2011ರವರೆಗೂ ಅದೆಷ್ಟು ಹಗರಣಗಳು ಸಂಭವಿಸಿದವು? 2004ರಲ್ಲಿ ಯುಪಿಎ ಅಧಿಕಾರಕ್ಕೆ ಬಂದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಲೆತಗ್ಗಿಸುವಂತೆ ಮಾಡಿದ ಇರಾಕ್‌ಗೆ ಸಂಬಂಧಿಸಿದ "Oil-for-food'' ಹಗರಣ ಸಂಭವಿಸಿತು. ಆಗಿನ ವಿದೇಶಾಂಗ ಸಚಿವ ನಟವರ್ ಸಿಂಗ್ ಅವರನ್ನು ಮನೆಗೆ ಕಳುಹಿಸಿ ತಿಪ್ಪೆ ಸಾರಿಸಿದರು. 2009ರಲ್ಲಿ ಮರು ಆಯ್ಕೆಯಾದ ನಂತರವಂತೂ ಹಗರಣಗಳ ಸಾಲೇ ಸೃಷ್ಟಿಯಾಗಿದೆ. 2ಜಿ ಲೂಟಿ, ಕಾಮನ್ವೆವೆಲ್ತ್ ಹಗರಣ, ಆದರ್ಶ ಹೌಸಿಂಗ್ ಸೊಸೈಟಿ ಹಗರಣ, ಲವಾಸಾ ಹಗರಣ, ಕ್ಯಾಶ್ ಫಾರ್ ಓಟ್ ಇವುಗಳಿಗೆಲ್ಲ ಯಾರು ಹೊಣೆ? ಯಾವ ಹಗರಣದ ವಿಷಯವಾಗಿ ಸೋನಿಯಾ ಗಾಂಧಿಯವರು ಬಾಯ್ತೆರೆದಿದ್ದಾರೆ? ಯಾವ ಹಗರಣದ ಸಲುವಾಗಿ ವೈಯಕ್ತಿಕ ಜವಾಬ್ದಾರಿ ಹೊತ್ತಿದ್ದಾರೆ ಹೇಳಿ ?
ಅದಿರಲಿ, ಕಳೆದ ವರ್ಷ ಪಾಕಿಸ್ತಾನ ನಮ್ಮ ಸೈನಿಕರ ತಲೆ ಕಡಿದು ರುಂಡ ಕಳುಹಿಸಿದಾಗ ಯಾರು ಹೊಣೆ ಹೊತ್ತಿದ್ದರು? ಅದರ ಬೆನ್ನಲ್ಲೇ ಸರಬ್‌ಜಿತ್ ಸಿಂಗ್‌ರನ್ನು ಪಾಕಿಸ್ತಾನಿ ಜೈಲಿನಲ್ಲಿ ಕೊಂದಾಗ ಅದರ ನೈತಿಕ ಹೊಣೆ ಹೊರಬೇಕಾದ್ದು ಯಾರಾಗಿತ್ತು? 2008, ನವೆಂಬರ್ 26ರಂದು ಮುಂಬೈ ಮೇಲೆ ಭಯೋತ್ಪಾದಕ ದಾಳಿ ನಡೆದು 180 ಜನ ಹತ್ಯೆಯಾದಾಗ ಯಾರು ನೈತಿಕ ಹೊಣೆ ಹೊತ್ತಿದ್ದರು? ಆಳುವ ಪ್ರಧಾನಿ ಹೊತ್ತಿದ್ದರೋ, ಪ್ರಧಾನಿ ಲಂಗು ಲಗಾಮು ಹಿಡಿದುಕೊಂಡಿರುವ ಸೂಪರ್ ಪ್ರೈಮ್ ಮಿನಿಸ್ಟರ್ ಸೋನಿಯಾ ಗಾಂಧಿ ಹೊತ್ತಿದ್ದರೋ? ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಫೈಲು ಕಾಣೆಯಾದರೆ "ನಾನೇನು ಕಪಾಟು ಕಾಯುವವನಲ್ಲ" ಎನ್ನುತ್ತಾರೆ ನಮ್ಮ ಮಹಾನ್ ಪ್ರಧಾನಿ. ಈರುಳ್ಳಿ ಬೆಲೆಯೇಕೆ ಗಗನಕ್ಕೇರಿದೆ ಎಂದು ಪ್ರಶ್ನಿಸಿದರೆ, "ಸರ್ಕಾರವೇನು ಈರುಳ್ಳಿ ಮಾರುವುದಿಲ್ಲ, ವ್ಯಾಪಾರಿಗಳನ್ನು ಕೇಳಿ" ಎಂದು ಅಹಂಕಾರದಿಂದ ಉತ್ತರಿಸುತ್ತಾರೆ ಕೇಂದ್ರ ಸಚಿವ ಕಪಿಲ್ ಸಿಬಲ್. ನೀವೇ ಹೇಳಿ, ಈ ಸರ್ಕಾರವಾಗಲಿ ಅಥವಾ ಅದರಲ್ಲಿರುವ ಯಾವುದಾದರೂ ಮಂತ್ರಿವರ್ಯರಾಗಲಿ ಕಳೆದ 10 ವರ್ಷಗಳಲ್ಲಿ ಲೋಕಕ್ಕೆ ಅಂಜಿ ರಾಜೀನಾಮೆ ಕೊಡುವುದು ಹಾಗಿರಲಿ, ಒಮ್ಮೆಯಾದರೂ ನೈತಿಕ ಹೊಣೆ ಹೊತ್ತಿದ್ದನ್ನು ನೋಡಿದ್ದೀರಾ? ಒಂದಾದರೂ ಅಂತಹ ಉದಾಹರಣೆಗಳಿವೆಯೇ? ಇಂಥ ಹೊಣೆಗೇಡಿ ಸರ್ಕಾರಕ್ಕೆ ನೈತಿಕ ಹೊಣೆ ಹೊತ್ತು ಅಡ್ಮಿರಲ್ ಜೋಶಿ ಕೊಟ್ಟ ರಾಜೀನಾಮೆ ತನ್ನ ಹೊಣೆಯಿಂದ ನುಣುಚಿಕೊಳ್ಳಲು ಸಿಕ್ಕ ಅವಕಾಶವಾಯಿತಲ್ಲದೆ ಮತ್ತೇನು?
ಬುಧವಾರ ಅನ್ಯಾಯವಾಗಿ ಜೀವ ಕಳೆದುಕೊಂಡ ಲೆಫ್ಟಿನೆಂಟ್ ಕಮಾಂಡರ್ ಕಪಿಶ್ ಮುವಾಲ್ ಸಹೋದರ "ಟೈಮ್ಸ್ ನೌ" ಚಾನೆಲ್‌ನೊಂದಿಗೆ ಮಾತನಾಡುತ್ತಾ, "ನನ್ನ ಅಣ್ಣ ಪ್ರತಿ ಸಾರಿ ಮನೆಗೆ ಫೋನು ಮಾಡಿದಾಗಲೂ ಸಬ್‌ಮರೀನ್‌ಗಳು ಎಷ್ಟು ಕಳಪೆಯಾಗಿವೆ ಎಂದರೆ ಯಾವ ಕ್ಷಣಕ್ಕೆ ಏನೂ ಆಗಬಹುದು ಎನ್ನುತ್ತಿದ್ದ. ಅವುಗಳನ್ನು ಚಾಲನೆ ಮಾಡಲು ನೀನು ನಿರಾಕರಿಸು ಎಂದರೆ, ನಮ್ಮ ಸೇನೆಯಲ್ಲಿ ಒಂದು ನಿಯಮವಿದೆ, ಮೇಲಿನವರು ಹೇಳಿದ್ದನ್ನು ಯಾವತ್ತೂ ಧಿಕ್ಕರಿಸಬಾರದು. ಒಂದು ವೇಳೆ, ನಾನು ನಿರಾಕರಿಸಿದರೂ ಇನ್ನೊಬ್ಬ ಆ ಕೆಲಸಕ್ಕೆ ಹೋಗುತ್ತಾನೆ. ಅಂದರೆ ನಾನು ಸಾಯದಿದ್ದರೂ ಇನ್ನೊಬ್ಬ ಸಾಯುತ್ತಾನೆ ಎನ್ನುತ್ತಿದ್ದ. ನನ್ನ ಅಣ್ಣನನ್ನು ಕಳೆದುಕೊಂಡಿದ್ದಕ್ಕೆ ಬೇಸರವಿಲ್ಲ. ಆದರೆ, ಸೈನಿಕನಾದವನು ರಣರಂಗದಲ್ಲಿ ಮಡಿದರೆ ಬದುಕು ಸಾರ್ಥಕವಾಗುತ್ತದೆ. ಈ ರೀತಿ ತಾಂತ್ರಿಕ ಕಾರಣಕ್ಕಾಗಿ ಸತ್ತರೆ ವ್ಯವಸ್ಥೆಯ ಬಗ್ಗೆ ಜುಗುಪ್ಸೆಯುಂಟಾಗುತ್ತದೆ" ಎಂದರು. ಆ ನೋವು ಆ್ಯಂಟನಿಗೆ, ಮನಮೋಹನ್ ಸಿಂಗ್‌ರಿಗೆ, ಸೋನಿಯಾ ಗಾಂಧಿಯವರಿಗೆ ಖಂಡಿತ ಅರ್ಥವಾಗುವುದಿಲ್ಲ. ಏಕೆಂದರೆ ಸತ್ತವರು ಅವರ ಸಹೋದರರೋ ಅಥವಾ ಮಕ್ಕಳೋ ಅಲ್ಲವಲ್ಲಾ....!



-ಪ್ರತಾಪ್ ಸಿಂಹ
mepratap@gmail.com


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com