ಕ್ಷಾತ್ರ ತೇಜಸ್ಸಿಗೆ ಒಲಿದ ಬಡಗನಾಡು ಬ್ರಾಹ್ಮಣ ಸಮುದಾಯ

ಈ ಸಮುದಾಯದ ಜನರು ವಿದ್ಯಾವಂತರು, ಬುದ್ಧಿವಂತರು. ಜೊತೆಗೆ ಸರ್ವೇಜನೋ...
ಕ್ಷಾತ್ರ ತೇಜಸ್ಸಿಗೆ ಒಲಿದ ಬಡಗನಾಡು ಬ್ರಾಹ್ಮಣ ಸಮುದಾಯ

ಈ ಸಮುದಾಯದ ಜನರು ವಿದ್ಯಾವಂತರು, ಬುದ್ಧಿವಂತರು. ಜೊತೆಗೆ ಸರ್ವೇಜನೋ ಸುಖಿನೋಭವಂತು, ಜನ ಸೇವೆಯೇ ಜನಾರ್ದನ ಸೇವೆ ಎಂಬ ಮಾತಿನಂತೆ ನಡೆದುಕೊಳ್ಳುವವರು. ರಾಜರ ಆಳ್ವಿಕೆ ಕಾಲದಲ್ಲಿ ಅವರಿಗೆ ಆಪ್ತರಾಗಿದ್ದುಕೊಂಡು ಸಲಹೆ, ಸೂಚನೆಗಳನ್ನು ಕೊಡುತ್ತಿದ್ದವರು. ಇನ್ನೂ ಒಂದು ವಿಶೇಷವಿದೆ. ಈ ಸಮುದಾಯದ ಪುರುಷರು ಉತ್ತಮ ಬಾಣಸಿಗರಾಗಿದ್ದವರು. ಈಗಲೂ ಇದ್ದಾರೆ.
ಬಡಗನಾಡು ಬ್ರಾಹ್ಮಣರು ಎಂಬ ಸಮುದಾಯದ ವಿಶೇಷಗಳಿವು. ಬಡಗ ಎಂದರೆ ಉತ್ತರ ದಿಕ್ಕು ಎಂದರ್ಥ. ಆ ದಿಕ್ಕಿನಿಂದ ವಲಸೆ ಬಂದು ರಾಜ್ಯದ ನಾನಾ ಪ್ರದೇಶಗಳಲ್ಲಿ ನೆಲೆಯೂರಿದ ಕಾರಣಕ್ಕೆ ಅವರಿಗೆ ಬಡಗನಾಡು ಬ್ರಾಹ್ಮಣರು ಎಂಬ ಹೆಸರು ಬಂತು.
ಈ ಸಮುದಾಯದ ಇತಿಹಾಸದ ಬಗ್ಗೆ ಹೇಳುವುದಾದರೆ, ವಿಂಧ್ಯ ಪರ್ವತದ ಮೇಲೆ ಆರ್ಯರು ನೆಲೆಸಿದ್ದರು. ಜನಸಂಖ್ಯೆ ಹೆಚ್ಚಾದ ಪರಿಣಾಮ ವಸತಿ ಮತ್ತಿತರ ಸೌಕರ್ಯಗಳಿಗೆ ಒತ್ತಡವೂ ಅಧಿಕವಾಯಿತು. ಆಗ ಸಮಾಜದ ಜನ ಮುಂದೇನು? ಎಂದು ಅಗಸ್ತ್ಯ ಮಹರ್ಷಿಗಳನ್ನು ಕೇಳುತ್ತಾರೆ. ಅವರು ಭಾರಶಿವ ಬ್ರಾಹ್ಮಣರು. ದಂಡಕಾರಣ್ಯ ಪ್ರವೇಶ ಮಾಡಿ ಆ ಕಾಡನ್ನು ನಾಡಾಗಿ ಪರಿವರ್ತನೆ ಮಾಡಿ ಅಲ್ಲಿಯೇ ನೆಲೆಯೂರಬಹುದು ಎಂದು ಮಹರ್ಷಿಗಳು ಹೇಳುತ್ತಾರೆ.
ಆದರೆ, ಕೆಲವರಿಗೆ ಅವರ ಯೋಜನೆ ರುಚಿಸಲಿಲ್ಲ. ಹೀಗಾಗಿ ದಂಡಕಾರಣ್ಯಕ್ಕೆ ಅವರೊಂದಿಗೆ ಹೋಗಲೂ ಒಪ್ಪಲಿಲ್ಲ. ಆದರೂ ಕೆಲವರೊಂದಿಗೆ ಅಗಸ್ತ್ಯರು ದಂಡಕಾರಣ್ಯಕ್ಕೆ ವಲಸೆ ಬಂದರು. ಅವರೊಂದಿಗೆ ಬಂದವರು ಬಡಗನಾಡು ಬ್ರಾಹ್ಮಣರು. ವಿಂಧ್ಯ ಪರ್ವತದಲ್ಲೇ ಉಳಿದವರು ಭಾರಶಿವ ಬ್ರಾಹ್ಮಣರು ಎಂದು ದಿವಂಗತ ಟಿ.ಎಸ್.ನಾಗಭೂಷಣರಾವ್ ಅವರು ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ.
ಶಿವನ ಬಗ್ಗೆ ಬಲು ಪ್ರೀತಿ: ಬಡಗನಾಡು ಬ್ರಾಹ್ಮಣರಿಗೆ ಈಶ್ವರನ ಬಗ್ಗೆ ಬಲುಪ್ರೀತಿ. ಹೀಗಾಗಿಯೇ ಅವರು ನಿತ್ಯ ಶಿವಪೂಜೆ ನಡೆಸುತ್ತಾರೆ. ಜೊತೆಗೆ ಶೈವ ಸಂಪ್ರದಾಯಸ್ಥರಾಗಿದ್ದಾರೆ. ವೆಂಕಟೇಶ್ವರನಲ್ಲೂ ಇವರು ಈಶ್ವರನ್ನು ಕಾಣುತ್ತಾರೆ. ಈ ಸಮೂಜದ ಜನರ ಮೂಲ ಕಸುಬು ವ್ಯವಸಾಯ ಆಗಿತ್ತು. ಇವರಲ್ಲಿ ಕಾರಣಿಕರು, ಶಾನುಭೋಗರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ವಿಜಯನಗರದ ಅರಸರು, ಚಿತ್ರದುರ್ಗ, ಮಧುಗಿರಿ, ಮಾಗಡಿ ಪಾಳೆಯಗಾರರಿಗೆ ಸಲಹೆಗಾರರಾಗಿಯೂ ಕೆಲಸ ಮಾಡುತ್ತಿದ್ದರು. ಸ್ವಾಮಿ ನಿಷ್ಠೆಗೆ ಹೆಸರಾಗಿದ್ದ ಸಮುದಾಯ ಇದು. ಹೀಗಾಗಿ ರಾಜರು ಮತ್ತು ಪಾಳೆಯಗಾರರು ಇವರನ್ನು ತಮ್ಮ ಆಪ್ತ ಸಲಹೆಗಾರರನ್ನಾಗಿ ನೇಮಕ ಮಾಡಿಕೊಳ್ಳುತ್ತಿದ್ದರು.
ಇವರು ಉತ್ತಮ ಅಡುಗೆ ಭಟ್ಟರು ಹೇಗೆ ಆದರೂ ಎಂಬುದಕ್ಕೂ ಕಾರಣವಿದೆ. ರಾಜರು ಪ್ರಜೆಗಳ ಕುಂದುಕೊರತೆ ತಿಳಿದುಕೊಳ್ಳಲು ಮಾರುವೇಷದಲ್ಲಿ ಸಂಚರಿಸುತ್ತಿದ್ದರು. ಈ ಸಂದಂರ್ಭದಲ್ಲಿ ತಮಗೆ ಅಡುಗೆ ಮಾಡಿ ಬಡಿಸಲು ನಂಬಿಕಸ್ಥರನ್ನೇ ನೇಮಕ ಮಾಡಿಕೊಳ್ಳುತ್ತಿದ್ದರು. ಬಡಗನಾಡು ಬ್ರಾಹ್ಮಣರ ಬಗ್ಗೆ ಅವರಿಗೆ ಅಪಾರ ನಂಬಿಕೆ. ಹೀಗಾಗಿ ಅಡುಗೆ ಕಾಯಕಕ್ಕೂ ಅವರನ್ನೇ ಬಳಸಿಕೊಳ್ಳುತ್ತಿದ್ದರು. ಇದರಿಂದ ಈ ಸಮುದಾಯದ ಜನರಿಗೆ ಅಡುಗೆಯ ಮೇಲೆ ಪ್ರೀತಿ ಬಂತು.
ಬಡಗನಾಡು ಬ್ರಾಹ್ಮಣ ಸಮುದಾಯದ ಪೂರ್ವಜರು ದೇವಾಲಯಗಳ ಕಟ್ಟಡಗಳ ರೂಪುರೇಷೆ ಸಿದ್ಧ ಮಾಡುವುದರಲ್ಲಿಯೂ ನಿಪುಣರಾಗಿದ್ದರು. ದೇಗುಲಕ್ಕೆ ಎತ್ತರದ ಗೋಪುರ, ಪ್ರಾಕಾರದ ಅಂಗಳ, ಧ್ವಜಸ್ತಂಭ, ಗರ್ಭಗುಡಿಯ ದ್ವಾರ, ಗೋಡೆಗಳ ಮೇಲೆ ಆಕರ್ಷಕ ಕೆತ್ತನೆಗಳು, ಹೀಗೆ ಎಲ್ಲವೂ ಅವರ ನೈಪುಣ್ಯಕ್ಕೆ ತಕ್ಕಂತೆ ನಿರ್ಮಾಣ ಆಗುತ್ತಿತ್ತು. ಈ ಸಮುದಾಯದ ಜನರ ತಂತ್ರಜ್ಞಾನದಲ್ಲಿ ನಿರ್ಮಾಣವಾಗಿರುವ ಹಲವಾರು ಶಿವನ ದೇವಾಲಯಗಳು ರಾಜ್ಯದಲ್ಲಿವೆ. ಬೆಂಗಳೂರಿನ ಗವಿ ಗಂಗಾಧರೇಶ್ವರ, ಸಿದ್ಧಾಪುರದ ಸೋಮೇಶ್ವರ, ಕೋಟೆಯ ಜಲಕಂಠೇಶ್ವರ, ಹಲಸೂರಿನ ಸೋಮೇಶ್ವರ ದೇವಸ್ಥಾನಗಳು ಇದಕ್ಕೆ ಉದಾಹರಣೆ.
ಕ್ಷಾತ್ರತೇಜಸ್ಸನ್ನು ಹೊಂದಿದ್ದರು: ಬ್ರಾಹ್ಮಣರಾಗಿ ಹುಟ್ಟಿದರೂ ಕ್ಷಾತ್ರತೇಜಸ್ಸನ್ನು ಈ ಸಮುದಾಯದವರು ತಮ್ಮದಾಗಿಸಿಕೊಂಡಿದ್ದರು ಎನ್ನುತ್ತದೆ ಇತಿಹಾಸ. ಬ್ರಹ್ಮ ಕ್ಷತ್ರಿಯರಾಗಿ ಕರ್ನಾಟಕಕ್ಕೆ ಬಂದು ರಾಜ್ಯ ಕಟ್ಟಿ ಆಳ್ವಿಕೆ ಮಾಡಿದ ಭಾರಶಿವ, ನಾಗಶಿವ ಪಂಗಡದವರು ಗಂಗೆಯ ಅನುಗ್ರಹದಿಂದ ತಮ್ಮ ಏಳಿಗೆ ಆಯಿತು ಎಂದು ನಂಬಿದ್ದರು. ಹೀಗಾಗಿ ತಮ್ಮ ಸಂತತಿಗೆ ಗಂಗಾ ಎಂಬ ಹೆಸರಿಟ್ಟರು. ಅವರನ್ನು ಮುಂದೆ ಗಂಗರಸರು ಎಂದು ಕರೆಯಲಾಯಿತು. ಗಂಗರು ಕರ್ನಾಟಕದಲ್ಲಿ 2ನೇ ಶತಮಾನದಿಂದ 10ನೇ ಶತಮಾನದಿಂದ ಆಳ್ವಿಕೆ ನಡೆಸಿದ್ದರು. ನಂದಗಿರಿ ಮತ್ತು ತಲಕಾಡು ಇವರ ರಾಜಧಾನಿಯಾಗಿತ್ತು.
ಪೌರೋಹಿತ್ಯದ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದ ಬಡಗನಾಡು ಬ್ರಾಹ್ಮಣರು ಉತ್ತರ ಭಾಗದಲ್ಲೂ ಇದ್ದರು. ಶಿವಮೊಗ್ಗಕ್ಕೆ ಆ ಹೆಸರು ಬರಲು ಇದೇ ಸಮುದಾಯದವರು ಕಾರಣ ಇರಬಹುದುದ ಎನ್ನಲಾಗುತ್ತದೆ. ಅಲ್ಲಿದ್ದ ಚಂದ್ರಮೌಳಿ ಮುಕ್ಕಣ್ಣ ಕದಂಬ ಎಂಬ ಪಂಡಿತ ಗಂಡು ಮಗುವಿನ ಜನನವಾದಾಗ ಮಯೂರ ಶರ್ಮ ಕದಂಬ ಎಂದು ಹೆಸರಿಟ್ಟರಂತೆ. ವೇದಾಧ್ಯಯನಕ್ಕೆ ಕಂಚಿಯ ವೈದಿಕ ಪೀಠಕ್ಕೆ ಹೋದ ಮಯೂರ ಅಲ್ಲಿ ಸಮರ ಶಿಕ್ಷಣ ಪಡೆದುಕೊಂಡ. ಊರಿಗೆ ವಾಪಸ್ ಹೋದ ಬಳಿಕ ಆತ ತಾನು ಮಯೂರ ಶರ್ಮನಲ್ಲ. ಮಯೂರವರ್ಮ ಕದಂಬ ಎಂದು ಘರ್ಜಿಸಿದನಂತೆ. ಮುಂದೆ ಮಯೂರ ಬನವಾಸಿ ರಾಜ್ಯವನ್ನು ಕಟ್ಟಿ ಆಳ್ವಿಕೆ ಮಾಡಿದ. ಕ್ರಮೇಣ ಆತನ ವಂಶಾವಳಿಗೆ ಕದಂಬ ಅರಸರು ಎಂಬ ಹೆಸರು ಸಹ ಬಂತು.
ಮೈಸೂರು ಅರಸರಿಗೂ ಆಪ್ತರು: ವಿಜಯನಗರ ಸಾಮ್ರಾಜ್ಯದ ಉಗಮಕ್ಕೆ ಕಾರಣರಾದ ವಿದ್ಯಾರಣ್ಯರು ಮತ್ತು ಮೈಸೂರಿನ ಯದುವಂಶದ ಮಹಾರಾಜರ ಕಾಲದಲ್ಲೂ ಬಡಗನಾಡು ಬ್ರಾಹ್ಮಣರು ಪ್ರಮುಖ ವಾತ್ರ ವಹಿಸಿದ್ದರು. ಮೈಸೂರು ಅರಸರಿಗೆ ಬ್ರಿಟಿಷರಿಂದ ರಾಜ್ಯ ಕೊಡಿಸಿದ ತಿರುಮಲ ರಾಯರು ಇದೇ ಸಮುದಾಯಕ್ಕೆ ಸೇರಿದವರು. ಅವರ ಸ್ವಾಮಿ ನಿಷ್ಠೆ ಭಾರಿ ಮೆಚ್ಚುಗೆಗೂ ಪಾತ್ರವಾಗಿತ್ತು ಎಂಬುದು ಇತಿಹಾಸ ಅಧ್ಯಯನದಿಂದ ತಿಳಿದು ಬರುತ್ತದೆ ಎಂದು ಟಿ.ಎಸ್.ನಾಗಭೂಷಣರಾವ್ ಅವರು ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.
ಬಡಗನಾಡು ಬ್ರಾಹ್ಮಣ ಸಮುದಾಯದ ಜನಸಂಖ್ಯೆ ರಾಜ್ಯದಲ್ಲಿ 3-4 ಲಕ್ಷ ಇರಬಹುದು ಎನ್ನುತ್ತಾರೆ ಬಡಗನಾಡು ಸಂಘದ ಅಧ್ಯಕ್ಷ ಬಿ.ಎಸ್.ರವಿಶಂಕರ್ ಅವರು. ಈ ಸಮುದಾಯದ ಜನ ಮಾಗಡಿ, ತುಮಕೂರು, ದೇವನಹಳ್ಳಿ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ಚಾಮರಾಜನಗರ, ನಂಜನಗೂಡು, ಶಿವಮೊಗ್ಗ, ಚಿತ್ರದುರ್ಗ, ಮಧುಗಿರಿ, ದಾವಣಗೆರೆ, ಹೊಳಲ್ಕೆರೆ, ಸಾಗರ, ಸೊರಬ, ತೀರ್ಥಹಳ್ಳಿ, ಆಂಧ್ರದ ವಿ.ಕೋಟ, ತಮಿಳುನಾಡಿನ ಸೇಲಂ, ಕೃಷ್ಣಗಿರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಿಂದಿನಂತೆ ಪೌರೋಹಿತ್ಯದಲ್ಲಿ ಕೆಲಸದಲ್ಲಿ ತೊಡಗಿಕೊಂಡವರು ಕಡಿಮೆ. ಶೈಕ್ಷಣಿಕವಾಗಿ ಮುಂದುವರಿಯುತ್ತಿರುವುದೂ ಇದಕ್ಕೆ ಕಾರಣ. ಆದರೂ ಕೆಲವರು ಪೌರೋಹಿತ್ಯ ಮತ್ತು ಅಡುಗೆ ಕಾರ್ಯ ಮುಂದುವರಿಸಿದ್ದಾರೆ. ಅದರಲ್ಲಿ ಮೆಚ್ಚುಗೆಯನ್ನೂ ಪಡೆದುಕೊಂಡಿದ್ದಾರೆ.
ವಿದ್ಯಾವಂತರು ಹೆಚ್ಚು: ನಮ್ಮ ಸಮುದಾಯದಲ್ಲಿ ಅನಕ್ಷರತೆ ಎಂಬುದೇ ಇಲ್ಲ. ಶೇ.90-95 ಮಂದಿ ವಿದ್ಯಾವಂತರಾಗಿದ್ದಾರೆ. ಉತ್ತಮ ನೌಕರಿಯಲ್ಲಿದ್ದಾರೆ. ಬಹುತೇಕ ಯುವಕಕರು ವಿದೇಶಗಳಲ್ಲಿ ನೆಲೆಸಿದ್ದಾರೆ ಎಂದು ರವಿಶಂಕರ ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಮಹಾರಾಜರ ಆಳ್ವಿಕೆ ಕಾಲದಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ನರಹರಿರಾಯರು, ಆಯುರ್ವೇದ ಔಷಧ ತಜ್ಞ ಕರ್ಲಮಂಗಲ ಶ್ರೀಕಂಠಯ್ಯ, ಪಟಾಕಿ ಶ್ರೀನಿವಾಸರಾಯರು, ಸೆಂಟ್ರಲ್ ಕಾಲೇಜಿನ ಕಾನೂನು ಕಾಲೇಜಿಗೆ ಸ್ಥಾಪಕ ಪ್ರಾಂಶುಪಾಲರಾಗಿದ್ದ ನಾರಾಯಣರಾವ್, ಸುಪ್ರೀಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಎಂ.ಎನ್.ವೆಂಕಟಾಚಲಯ್ಯ, ವಿಧಾನ ಪರಿಷತ್ತಿನ ಹಾಲಿ ಕಾರ್ಯದರ್ಶಿ ಶ್ರೀಶ್, ಮಾಜಿ ಸಚಿವ, ಬಿಜೆಪಿ ನಾಯಕ ಸುರೇಶ್ ಕುಮಾರ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಕಟ್ಟೆ ಸತ್ಯನಾರಾಯಣ, ನಟ ಸಿಹಿಕಹಿ ಚಂದ್ರು ಅವರುಗಳು ಜನಾಂಗದ ಪ್ರಮುಖ ಗಣ್ಯರು.
ಬೆಂಗಳೂರಿನ ಪಶ್ಚಿಮ ಕುಮಾರಪಾರ್ಕ್ ರಸ್ತೆಯಲ್ಲಿ ಬಡಗನಾಡು ಸಂಘದ ಭವನವಿದೆ. ಅಲ್ಲಿಯೇ ವಿದ್ಯಾರ್ಥಿ ನಿಲಯವೂ ಅಚ್ಚುಕಟ್ಟಾಗಿ ನಡೆಯುತ್ತಿದೆ. ಜೊತೆ ಜೊತೆಗೆ ಸಮುದಾಯದ ಸಂಘಟನೆ ಕಾರ್ಯವೂ ಚುರುಕಾಗಿನಡೆದಿದೆ. ಜಿಲ್ಲಾ ಮಟ್ಟದಲ್ಲಿ ಸಮುದಾಯದ ಜನರನ್ನು ಒಗ್ಗೂಡಿಸುವ ಕೆಲಸವಾಗುತ್ತಿದೆ. ವಿವಿಧ ಚಟುವಟಿಕೆಗಳಿಗೆ ದಾನಿಗಲಿಂದ ರು. 1.3 ಕೋಟಿ ಸಂಗ್ರಹಿಸಿದ್ದೇವೆ. ನಮ್ಮ ಗುರಿ ರು. 2 ಕೋಟಿ ಎನ್ನುತ್ತಾರೆ ಸಂಘದ ಅಧ್ಯಕ್ಷ ಬಿ.ಎಸ್. ರವಿಶಂಕರ್ ಅವರು.



- ಕೆ.ವಿ.ಪ್ರಭಾಕರ 
  prabhukolar@yahoo.com


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com