ಸ್ವರ್ಗ, ನರಕ, ಮರುಜನ್ಮದಲ್ಲಿ ನಂಬಿಕೆ ಇಲ್ಲದ ಕೋಯ ಸಮುದಾಯ

ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎನ್ನುತ್ತೇವೆ. ಆದರೆ,...
ಸ್ವರ್ಗ, ನರಕ, ಮರುಜನ್ಮದಲ್ಲಿ ನಂಬಿಕೆ ಇಲ್ಲದ ಕೋಯ ಸಮುದಾಯ

ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎನ್ನುತ್ತೇವೆ. ಆದರೆ, ಗೇಣು ಬಟ್ಟೆಯಲ್ಲಿ ಯಾರು ತಾನೆ ಜೀವನ ನಡೆಸಲು ಸಾಧ್ಯ. ಅದೂ ಇಂದಿನ ಆಧುನಿಕ ಯುಗದಲ್ಲಿ. ಆದರೆ ಗೇಣು ಬಟ್ಟೆಯಲ್ಲೇ ಮಾನ ಮುಚ್ಚಿಕೊಂಡು ಬದುಕು ನಡೆಸುತ್ತಿದ್ದ ಜನರೂ ಇದ್ದರು.
ಈ ಹಿಂದೆ ಬುಡಕಟ್ಟು ಸಮುದಾಯಗಳಲ್ಲಿ ಬಟ್ಟೆಗಳಿಗೆ ಮಹತ್ವವೇ ಇರುತ್ತಿರಲಿಲ್ಲ. ಬೇಕೆನಿಸಿದ ಬಟ್ಟೆಗಳನ್ನು ಧರಿಸಲು ಅವರು ನಗರ ಅಥವಾ ಪಟ್ಟಣ ಪ್ರದೇಶಗಳಲ್ಲಿ ನೆಲೆಸಿರಲಿಲ್ಲ. ಕಾಡುಮೇಡುಗಳಲ್ಲಿದ್ದುಕೊಂಡು ಜೀವನ ನಡೆಸುತ್ತಿದ್ದ ಬುಡಕಟ್ಟು ಸಮುದಾಯಗಳ ಜನರ ಪಾಲಿಗೆ ಪ್ರಾಣಿಗಳ ಚರ್ಮದಲ್ಲಿ ಮಾಡಿದ ತುಂಡುಡುಗೆಯೇ ಬಟ್ಟೆಯಾಗುತ್ತಿತ್ತು. ಅದುವೇ ಪೀತಾಂಬರವಾಗುತ್ತಿತ್ತು. ಆ ರೀತಿ ಇದ್ದ ಸಮುದಾಯಗಳಲ್ಲಿ 'ಕೋಯ' ಎಂಬ ಅಪರೂಪದ ಜಾತಿಯೂ ಒಂದು.

ಭೀಮನ ಸಂತತಿಯವರು
ಕೋಯ ಎಂಬುದು ಒಂದು ವಿಶಿಷ್ಟವಾದ ಸಮುದಾಯ. ಅಂಧ್ರಪ್ರದೇಶ, ಮಧ್ಯಪ್ರದೇಶ, ಒರಿಸ್ಸಾ, ಮಹರಾಷ್ಟ್ರ ಹಾಗೂ ಕರ್ನಾಟಕದಲ್ಲಿ ನೆಲೆ ಕಂಡುಕೊಂಡಿರುವ ಜಾತಿ ಇದು. ಮಹಾಭಾರತದಲ್ಲಿ ಪಾಂಡವರು ಅಜ್ಞಾತವಾಸ ಹೋಗಿದ್ದು ಎಲ್ಲರಿಗೂ ಗೊತ್ತು. ಅಜ್ಞಾತವಾಸದ ಸಂದರ್ಭದಲ್ಲಿ ಭೀಮ ಕಾಡಿನಲ್ಲಿ ಕನ್ಯೆಯೊಬ್ಬಳಿಗೆ ಮನ ಸೋಲುತ್ತಾನೆ. ವಿವಾಹ ಆಗುವ ಬಯಕೆ ವ್ಯಕ್ತಪಡಿಸುತ್ತಾನೆ. ಅದಕ್ಕೆ ಯುವತಿಯೂ ಒಪ್ಪುತ್ತಾಳೆ. ಇವರಿಗೆ ಜನಿಸಿದ ಸಂತಾನವೇ ಕೋಯ ಬುಡಕಟ್ಟು ಸಮುದಾಯ ಎಂದು ಹೇಳಲಾಗುತ್ತದೆ.
ನೂರಾರು ವರ್ಷಗಳ ಹಿಂದೆ ಮಧ್ಯ ಭಾರತದಲ್ಲಿ ಬರ ಪರಿಸ್ಥಿತಿ ಉಂಟಾದಾಗ ಜನ ತತ್ತರಿಸಿದರು. ಜಾತಿ ಕಲಹಗಳಿಂದಲೂ ಆತಂಕಕ್ಕೆ ಒಳಗಾದರು. ಇಂಥ ಸಂದರ್ಭದಲ್ಲಿ ಹಲವು ಸಮುದಾಯಗಳು ಹೊಟ್ಟೆಪಾಡಿಗೆ ಅಲ್ಲಿಂದ ನಾನಾ ಕಡೆ ವಲಸೆ ಹೊರಟವು.
ಹಾಗೆ ವಲಸೆ ಹೋದವರಲ್ಲಿ ಕೋಯ ಸಮಾಜದ ಜನರೂ ಸೇರಿದ್ದರು. ಅಲ್ಲಿಂದ ಹೊರಟ ಕೋಯ ಜನ ಆಂಧ್ರದ ಗೋದಾವರಿ, ಅದಿಲಾಬಾದ್, ಕಮ್ಮಮ್, ಮಹಾರಾಷ್ಟ್ರದ ಘರಚಿರೋಲಿ, ಕರ್ನಾಟಕದ ಬೀದರ್, ಗುಲ್ಬರ್ಗ, ರಾಯಚೂರು ಕಡೆಗೆ ಬಂದು ನೆಲೆ ನಿಂತರು. ನದಿ, ನಾಲೆ, ಕೆರೆ, ಕುಂಟೆ, ಬಾವಿ ಸೇರಿದಂತೆ ನೀರಿನ ಸೌಕರ್ಯ ಇರುವ ಕಡೆಗಳಲ್ಲಿ ಬಿಡಾರ ಹೂಡಿದರು. ಆರಂಭದಲ್ಲಿ ಇವರು ಮರ ಮತ್ತು ಮಣ್ಣಿನಿಂದ ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದರು.
ಕಾಡಿನಲ್ಲಿ ಇದ್ದರೂ ಕೋಯ ಸಮುದಾಯದ ಯುವಕ, ಯುವತಿಯರು ಆಕರ್ಷಕವಾಗಿ ಕಾಣುತ್ತಿದ್ದರಂತೆ. ಯುವಕರ ದೇಹದಾರ್ಢ್ಯ ಉತ್ತಮವಾಗಿತ್ತು. ಎತ್ತರವಾಗಿದ್ದ ಅವರು ಅಗಲವಾದ ಎದೆ, ಕಟ್ಟುಮಸ್ತಾದ ಭುಜಗಳು, ಬಂಡೆಯಂಥ ಬೆನ್ನು ಹೊಂದಿದ್ದರಂತೆ. ಯುವತಿಯರೂ ಸೌಂದರ್ಯದಲ್ಲಿ ಕಡಿಮೆ ಏನೂ ಇರಲಿಲ್ಲ ಎಂದು ಇತಿಹಾಸಜ್ಞರು ಹೇಳುತ್ತಾರೆ.

ಕಡಿಮೆ ಪ್ರಮಾಣದ ಬಟ್ಟೆ
ಸಮುದಾಯದ ಪುರುಷರು ಮತ್ತು ಮಹಿಳೆಯರು ಆದಷ್ಟೂ ಕಡಿಮೆ ಪ್ರಮಾಣದಲ್ಲಿ ಬಟ್ಟೆ ಧರಿಸುತ್ತಿದ್ದರಂತೆ. ಕೇಶ ರಕ್ಷಣೆ ಮತ್ತು ವಿನ್ಯಾಸಕ್ಕೆ ಮಹಿಳೆಯರು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರು. ಕೇಶ ವಿನ್ಯಾಸದಲ್ಲಿ ಇಂದಿನ ನಾರಿಮಣಿಗಳು ಏನಾದರೂ ಮುಂದಿದ್ದರೆ ಅದಕ್ಕೆ ಕೋಯ ಮಹಿಳೆಯರೇ ಕಾರಣ ಎನ್ನಲಾಗುತ್ತದೆ. ಜೊತೆಗೆ ಮಹಿಳೆಯರಲ್ಲಿ ಅಚ್ಚೆಗೂ ಪ್ರಾಶಸ್ತ್ಯ ಇತ್ತು.
ಇನ್ನು ಪುರುಷರು ಉದ್ದವಾದ ಜಡೆ ಬಿಟ್ಟು ಹಿಂಭಾಗದಲ್ಲಿ ಗಂಟು ಕಟ್ಟುತ್ತಿದ್ದರು. ಆದರೆ, ತಲೆಯ ಮುಂಭಾಗವನ್ನು ಮಾತ್ರ ಬೋಳಿಸಿಕೊಳ್ಳುತ್ತಿದ್ದರು. ಹಬ್ಬ ಹರಿದಿನ ಮತ್ತಿತರ ವಿಶೇಷ ಸಂದರ್ಭಗಳಲ್ಲಿ ನೃತ್ಯವಾಗುತ್ತಿತ್ತು. ಆಗ ಮಾತ್ರ ಕೂದಲನ್ನು ಪುರುಷರು ಇಳಿಯ ಬಿಡುತ್ತಿದ್ದರು.
ಕೋಯಗಳಿಗೆ ಮಧ್ಯಪ್ರದೇಶದಲ್ಲಿ ದೊರ್ಲಾ, ಕೊಯ್ತೂರು, ಒರಿಸ್ಸಾದಲ್ಲಿ ಕಮರ, ಮರ್ಸಿ, ಮಹಾರಾಷ್ಟ್ರದಲ್ಲಿ ರಾಚ, ರಾಜಕೋಯ. ಆಂಧ್ರದಲ್ಲಿ ಗೌಡ, ರಾಜಾ, ರಾಚ ಕೋಯ, ಲಿಂಗಧಾರಿ ಕೋಯ, ಕೊಟ್ಟು ಕೋಯ, ಭಿನೆ ಕೋಯ ಎಂಬ ಹೆಸರಿದೆ. ಅಂಧ್ರದಲ್ಲಿ ಈ ಬುಡಕಟ್ಟು ಸಮುದಾಯ ಹೊರ ಬಾಂಧವ್ಯದ ಮನೆತನದ ಹೆಸರುಗಳನ್ನೂ ಹೊಂದಿದೆ. ಆಂಧ್ರದಲ್ಲಿ ಮೂಡೋ ಅಂದರೆ ಮೂರು, ನಾಲೋ ಅಥವಾ ಪರೆಡಿ ಎಂದರೆ ನಾಲ್ಕು, ಐದೋ ಎಂದರೆ ಐದು, ರಾಯಿಬಂಡ ಅಂದರೆ ಕಲ್ಲು ಚಪ್ಪಡಿ, ಆರೂನತ ಮುಪ್ಪಯ್ಯಿ ಅಂದರೆ ಆರನೂರ ಮೂವತ್ತು, ಪೆರಂಬೋಯಿ ಎಂಬ ಹೆಸರುಗಳಿವೆ ಎಂದು ಮೈತ್ರಿ ಅವರು ಅಧ್ಯಯನದಲ್ಲಿ ವಿವರಿಸಿದ್ದಾರೆ.

ಜನನ, ಮರಣ, ಮದುವೆ
ಜನನ, ಮರಣ ಈ ಮಧ್ಯೆ ಮದುವೆ ಎಂಬುದು ಕೋಯ ಸಮುದಾಯದಲ್ಲಿ ಪ್ರಮುಖ ಆಚರಣೆ. ಗಂಡು ಮಕ್ಕಳು ಪ್ರಾಯಕ್ಕೆ ಬರುತ್ತಿದ್ದಂತೆ ಪ್ರತ್ಯೇಕವಾಗಿ ವಾಸ ಮಾಡಬೇಕೆಂಬ ನಿಯಮ ಇವರಲ್ಲಿದೆ. ಆದರೆ, ಹೊಲ, ಗದ್ದೆಗಳಲ್ಲಿ ಅವರು ಪೋಷಕರು ಹಾಗೂ ಒಡ ಹುಟ್ಟಿದವರೊಂದಿಗೆ ದುಡಿಯಬೇಕು. ಮದುವೆಗಳು ಇವರಲ್ಲಿ ಹಿರಿಯರ ಸಮ್ಮತಿಯೊಂದಿಗೆ ಮತ್ತು ಕನ್ಯೆಯ ಒಪ್ಪಿಗೆಯೊಂದಿಗೆ ನಡೆಯುತ್ತದೆ. ವಿವಾಹ ಕಾರ್ಯಕ್ರಮ ಸಾಮಾನ್ಯವಾಗಿ ಬೇಸಿಗೆಯಲ್ಲಿ ಮಾತ್ರ ಜರುಗುತ್ತದೆ. ಈ ಸಮಾಜದಲ್ಲಿ ವಿವಾಹ ವಿಚ್ಛೇದನ ಮತ್ತು ಮರು ವಿವಾಹಕ್ಕೆ ಅವಕಾಶವಿದೆ. ಆದರೆ, ಮರು ವಿವಾಹವಾದ ಮಹಿಳೆ ತಾಳಿ ಧರಿಸುವಂತಿಲ್ಲ. ಆದರೂ ಆಕೆಗೆ ಎಲ್ಲ ರೀತಿಯ ಹಕ್ಕು ಪ್ರಾಪ್ತವಾಗುತ್ತದೆ.
ಕುಲ ಪಂಚಾಯಿತಿಯೂ ಇವರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜಾತಿ ಕಲಹ, ಕೌಟುಂಬಿಕ ಕಲಹ ಆಥವಾ ವಿವಾಹ, ವಿವಾಹ ವಿಚ್ಛೇದನ ಸಂದರ್ಭದಲ್ಲಿ ಪಂಚಾಯಿತಿಯ ಪ್ರಮುಖರೇ ತೀರ್ಪು ನೀಡುತ್ತಾರೆ. ಅದನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಲೇಬೇಕಾಗುತ್ತದೆ.
ಕೋಯಗಳು ಸ್ಥಳೀಯ ದೇವರುಗಳನ್ನು ಆರಾಧಿಸುವ ಜನ. ಭೀಮನ ವಂಶದವರಾದ ಕಾರಣ ಭೀಮನನ್ನು ಹೆಚ್ಚಾಗಿ ಪೂಜಿಸುತ್ತಾರೆ. ಹಿಂದೂಗಳ ಎಲ್ಲ ಹಬ್ಬ ಹರಿದಿನಗಳನ್ನು ಇವರು ಆಚರಿಸುತ್ತಾರೆ. ಮತ್ತೊಂದು ವಿಶೇಷ ಎಂದರೆ, ಸ್ವರ್ಗ, ನರಕ ಮತ್ತು ಮರು ಜನ್ಮದ ನಂಬಿಕೆ ಇವರಲ್ಲಿ ಇಲ್ಲ. ಯಾರಾದರೂ ಸತ್ತರೆ ಮಂಚದಲ್ಲಿ ಹೊತ್ತೊಯ್ಯುತ್ತಾರೆ. ಅಂತ್ಯಸಂಸ್ಕಾರಕ್ಕೆ ನಿಗದಿಯಾಗ ಜಾಗದಲ್ಲಿ ಮಂಚವನ್ನು ಪಶ್ಚಿಮ ದಿಕ್ಕಿಗೆ ಇಡುತ್ತಾರೆ. ಬಳಿಕ ಪಾರ್ಥೀವ ಶರೀರಕ್ಕೆ ಅಗ್ನಿಸ್ಪರ್ಶ ಮಾಡುತ್ತಾರೆ.
ಕೋಯಗಳ ಮಾತೃ ಭಾಷೆ ಕುಯಿ. ಆದರೆ, ಆಯಾ ಪ್ರದೇಶಗಳ ಭಾಷೆಯನ್ನೂ ಬಳಸುತ್ತಾರೆ ಎಂದು ಡಾ. ಕೆ.ಎಂ. ಮೈತ್ರಿ ಅವರು ತಮ್ಮ ಅಧ್ಯಯನದಲ್ಲಿ ತಿಳಿಸಿದ್ದಾರೆ. ಅವರಲ್ಲಿ ಸ್ವಬಳಿಗಳಲ್ಲಿ ವಿವಾಹ ನಿಷೇಧವಿದೆ. ಬೆಸ ಬಳಿಗಳಲ್ಲಿ ಮಾತ್ರ ಸಂಬಂಧ ಬೆಸೆಯುತ್ತಾರೆ.

ಮಾಘ ಮಾಸದಲ್ಲಿ ಜಾತ್ರೆ
ಎರಡು ವರ್ಷಕ್ಕೆ ಒಮ್ಮೆ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಮಾಘ ಮಾಸದ ಪೂರ್ಣ ಹುಣ್ಣಿಮೆ ದಿನ ಕೋಯಗಳ ಜಾತ್ರೆ ನಡೆಯುತ್ತದೆ. ಆಂಧ್ರದ ವಾರಂಗಲ್ ಜಿಲ್ಲೆಯ ಮೇದಾರಂ ಗ್ರಾಮದಲ್ಲಿ ನಡೆಯುವ ಈ ಜಾತ್ರೆಯಲ್ಲಿ ಲಕ್ಷಾಂತರ ಮಂದಿ ಭಾಗವಹಿಸುತ್ತಾರೆ. ಈ ಸಂದರ್ಭದಲ್ಲಿ ಅವರು ಪ್ರದರ್ಶಿಸುವ ನೃತ್ಯ, ಉಡುಗೆ, ತೊಡುಗೆ ಆಕರ್ಷಕವಾಗಿರುತ್ತದೆ. ಜೊತೆಗೆ ನೃತ್ಯಕ್ಕೆ ತಕ್ಕಂತೆ ವಾದನಗಳೂ ಇರುತ್ತವೆ. ಅದನ್ನೂ ಅವರೇ ತಯಾರು ಮಾಡಿಕೊಳ್ಳುತ್ತಾರೆ. ಮಹಿಳೆಯರು ವೃತ್ತಾಕಾರದಲ್ಲಿ ನಿಂತು ಒಬ್ಬರು ಮತ್ತೊಬ್ಬರ ಕೈ ಹಿಡಿದು ಮಾಡುವ ನೃತ್ಯವೂ ಗಮನ ಸೆಳೆಯುತ್ತದೆ.
ಕೋಯಗಳು ಮೂಲ ಕಸುಬು ಕೃಷಿ ಆಗಿತ್ತು. ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಿ ಅವರು ಬೇಸಾಯದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆದರೆ, ಸರ್ಕಾರ ಆದಕ್ಕೆ ನಿಯಂತ್ರಣ ಹೇರಿದೆ. ಕೋಯಗಳ ಕೃಷಿ ಚಟುವಟಿಕೆಗೆ ಜಾಗ ಗುರುತಿಸಿದೆ. ಇನ್ನು ಕೋಯಗಳು ಬೇಟೆಯಲ್ಲೂ ಹೆಸರುವಾಸಿಯಾಗಿದ್ದ ಜನ. ಕೆಲವರು ನಾಟಿ ವೈದ್ಯವನ್ನೂ ಕರಗತ ಮಾಡಿಕೊಂಡಿದ್ದರು. ಹಲವಾರು ಕಾಯಿಲೆಗಳಿಗೆ ಅವರೇ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧ ನೀಡುತ್ತಿದ್ದರು.
ಈಗ ಕೋಯಗಳಲ್ಲಿ ಕೃಷಿಕರ ಸಂಖ್ಯೆ ಕಡಿಮೆಯಾಗಿದೆ. ಕೆಲವರು ಪಶುಪಾಲಕರಾಗಿದ್ದರೆ, ಇನ್ನೂ ಕೆಲವರು ಆಧುನಿಕತೆಗೆ ತಕ್ಕಂತೆ ಇತರೆ ಕೆಲಸ, ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆರ್ಥಿಕ, ಸಾಮಾಜಿಕ, ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯವಿದು. ಈ ಹಿಂದೆ ಇವರಲ್ಲಿ ಸಾಕ್ಷರರ ಪ್ರಮಾಣ ತೀರಾ ಕಡಿಮೆ ಇತ್ತು. ಈಗ ಪರಿಸ್ಥಿತಿ ಸ್ವಲ್ಪ ಸ್ವಲ್ಪವಾಗಿ ಸುಧಾರಿಸುತ್ತಿದೆ. ಮಕ್ಕಳು ಶಾಲೆಗಳ ಮುಖ ನೋಡುತ್ತಿದ್ದಾರೆ. ಉಳಿದಂತೆ ಸಾಮಾಜಿಕ ಸ್ಥಿತಿಗತಿಯಲ್ಲಿ ಹೇಳಿಕೊಳ್ಳುವಂಥ ಬದಲಾವಣೆ ಆಗಿಲ್ಲ.

- ಕೆ.ವಿ. ಪ್ರಭಾಕರ್
prabhukolar@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com