ಅಧಿಕಾರವೆಂಬುದು ಎಂಥವರಿಗೂ ಅಹಂಕಾರ ತರುತ್ತದೆ ಎಂಬುದಕ್ಕೆ ಕೇಜ್ರೀವಾಲ್ಗಿಂತ ಉದಾಹರಣೆ ಬೇಕಾ?

ಅಧಿಕಾರವೆಂಬುದು ಎಂಥವರಿಗೂ ಅಹಂಕಾರ ತರುತ್ತದೆ ಎಂಬುದಕ್ಕೆ ಕೇಜ್ರೀವಾಲ್ಗಿಂತ ಉದಾಹರಣೆ ಬೇಕಾ?

'ಯಾರಿಗಾಗಿ ಗಣರಾಜ್ಯೋತ್ಸವ? ಇದು ಕೇವಲ ವಿಐಪಿಗಳ ಮನರಂಜನೆಗಾಗಿ...

'ಯಾರಿಗಾಗಿ ಗಣರಾಜ್ಯೋತ್ಸವ? ಇದು ಕೇವಲ ವಿಐಪಿಗಳ ಮನರಂಜನೆಗಾಗಿ ಮಾಡುತ್ತಿರುವ ಕಾರ್ಯಕ್ರಮ. ಇದರಿಂದ ಯಾರಿಗೂ ಉಪಯೋಗವಿಲ್ಲ. ನಾವು ಗಣರಾಜ್ಯೋತ್ಸವಕ್ಕೆ ಅಡ್ಡಿ ಮಾಡುತ್ತೇವೆ'!
- ಅರವಿಂದ ಕೇಜ್ರೀವಾಲ್

If you want to test a man's character, give him power.. ಅಂದರೆ ಒಬ್ಬ ವ್ಯಕ್ತಿಯ ನಿಜವಾದ ಗುಣವನ್ನು ಅರಿಯಬೇಕಾದರೆ ಆತನಿಗೆ ಅಧಿಕಾರ ಕೊಟ್ಟು ನೋಡಬೇಕು ಎಂದು ಅಮೆರಿಕದ ಖ್ಯಾತ ಅಧ್ಯಕ್ಷ ಅಬ್ರಹಾಂ ಲಿಂಕನ್ ಹೇಳಿದ್ದರು. ಆದರೆ ಅರವಿಂದ ಕೇಜ್ರೀವಾಲ್ ಇಷ್ಟು ಬೇಗ ತಮ್ಮ ಬಣ್ಣ ಬಿಡುತ್ತಾರೆ ಎಂದು ಖಂಡಿತ ಯಾರೂ ಊಹಿಸಿರಲಿಲ್ಲ ಅಲ್ಲವೆ? ಯಾರಿಗಾಗಿ ಗಣರಾಜ್ಯೋತ್ಸವ ಎನ್ನುತ್ತಾರಲ್ಲಾ, ಈ ಮನುಷ್ಯನಿಗೆ ಅವಿವೇಕ ಆವರಿಸಿದೆಯೋ ಅಥವಾ ಅಧಿಕಾರದ ಮದ ತಲೆಗೇರಿದೆಯೋ? ಅಥವಾ ತಾನು ಏನು ಮಾಡಿದರೂ, ಆಡಿದರೂ ಜನ ಬೆಂಬಲಿಸುತ್ತಾರೆ ಇಲ್ಲವೇ ತೆಪ್ಪಗಿರುತ್ತಾರೆ ಎಂಬ ಭ್ರಮೆಯೋ?   
ಇಷ್ಟಕ್ಕೂ ಗಣರಾಜ್ಯೋತ್ಸವ ಎಂದರೇನು? ಅದು ವಿಐಪಿಗಳ ಮನರಂಜನೆಗಾಗಿ ನಡೆಸುವ ಕಾರ್ಯಕ್ರಮವೋ? ಕೇಜ್ರೀವಾಲ್ ಹೇಳುವಂತೆ ಪ್ರೇಕ್ಷಕರನ್ನು ರಂಜಿಸುವುದಕ್ಕಾಗಿ ಸ್ತಬ್ಧ ಚಿತ್ರಗಳನ್ನು ಪರೇಡ್ ಮಾಡುತ್ತಾರಾ? ಕೇಜ್ರೀವಾಲರೇ, ನಿಮ್ಮ ಪ್ರಕಾರ ಗಣರಾಜ್ಯೋತ್ಸವವೆಂಬುದು ಅರ್ಥಹೀನ ಸೇನಾ ಪಥಸಂಚಲನ, ಶಸ್ತ್ರಾಸ್ತ್ರಗಳ ಪ್ರದರ್ಶನ, ನೃತ್ಯ ಹಾಗೂ ಅವುಗಳಿಂದ ದೇಶಕ್ಕೆ ಏನು ಲಾಭವಿಲ್ಲ ಎಂದೇ? ಅಥವಾ ಜನವರಿ 26ರೆಂದರೆ ಸರ್ಕಾರಿ ಉದ್ಯೋಗಿಗಳಿಗೆ ಒಂದು ಪುಕ್ಕಟೆ ರಜೆಯಷ್ಟೇ ಎಂಬುದು ನಿಮ್ಮ ಭಾವನೆಯೇ?
ಸ್ವಲ್ಪ ನಿಲ್ಲಿ...
1947, ಆಗಸ್ಟ್ 15ರಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿತಾದರೂ ನಮ್ಮದೇ ಸಂವಿಧಾನ ರೂಪುಗೊಂಡು ಜಾರಿಯಾಗಿದ್ದು 1950, ಜನವರಿ 26ರಂದು. ಇದು ಅತ್ಯಂತ ಮಹತ್ವದ ದಿನ. ಏಕೆಂದರೆ ಸ್ವಾತಂತ್ರ್ಯ ಬಂದ ಮೇಲೂ ನಮ್ಮದೇ ಆದ ಹಕ್ಕು, ಕರ್ತವ್ಯ, ಕಾನೂನು, ಕಟ್ಟಳೆಗಳಿರಲಿಲ್ಲ. 1950, ಜನವರಿ 26ರವರೆಗೂ ಬ್ರಿಟಿಷರು ರೂಪಿಸಿದ ಕಾನೂನಿನಡಿಯೇ ಆಡಳಿತ ನಡೆಯುತ್ತಿತ್ತು. ಆ ದಿನ ರಾಜೇಂದ್ರ ಪ್ರಸಾದ್ ಭಾರತದ ಮೊದಲ ರಾಷ್ಟ್ರಪತಿಯಾಗಿ ದಿಲ್ಲಿಯ ದರ್ಬಾರ್ ಹಾಲ್ನಲ್ಲಿ ಅಧಿಕಾರ ಸ್ವೀಕರಿಸಿದರು. ಅಲ್ಲಿಂದ ಇರ್ವಿನ್ ಸ್ಟೇಡಿಯಂಗೆ ತೆರಳಿ ಭಾರತ ಸ್ವಂತ ಸಂವಿಧಾನ ಹೊಂದಿದ ಪ್ರತೀಕವಾಗಿ ತ್ರಿವರ್ಣ ಧ್ವಜ ಹಾರಿಸಿದರು. ಅದರ ಬೆನ್ನಲ್ಲೇ 21 ಕುಶಾಲ ತೋಪುಗಳನ್ನು ಹಾರಿಸಲಾಯಿತು. ಹೀಗೆ ಸ್ವಾತಂತ್ರ್ಯ ದಿನ ಪ್ರಧಾನಿ ಹಾಗೂ ಗಣರಾಜ್ಯೋತ್ಸವದ ದಿನ ರಾಷ್ಟ್ರಪತಿ ರಾಷ್ಟ್ರದ್ವಜ ಹಾರಿಸುವ, ಸೇನಾ ಪರೇಡ್ ನಡೆಯುವ ಪರಂಪರೆ ಆರಂಭವಾಯಿತು. ಆ ದಿನ ಶಾಂತಿಕಾಲದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ, ಶೌರ್ಯ ಮೆರೆದ ವೀರ ಸೈನಿಕರಿಗೆ ಪ್ರತಿಷ್ಠಿತ ಕೀರ್ತಿಚಕ್ರ, ಅಶೋಕಚಕ್ರ ಮುಂತಾದ ಶೌರ್ಯ ಪದಕಗಳನ್ನು ನೀಡಲಾಗುತ್ತದೆ. 1962ರ ಚೀನಾ ಯುದ್ಧದ ವೇಳೆ ಗಾಯಗೊಂಡಿದ್ದ ಸೈನಿಕರ ಶುಶ್ರೂಶೆಗಾಗಿ ಪ್ರಾಣದ ಹಂಗು ತೊರೆದು ರಣರಂಗಕ್ಕಿಳಿದಿದ್ದ ಆರೆಸ್ಸೆಸ್ಸನ್ನು 1963ರ ಗಣರಾಜ್ಯೋತ್ಸವದ ಪರೇಡ್ಗೆ ಪ್ರಧಾನಿ ಪಂಡಿತ್ ನೆಹರು ಆಹ್ವಾನಿಸಿ ಸೇವೆಗೆ, ರಾಷ್ಟ್ರಪ್ರೇಮಕ್ಕೆ ಮನ್ನಣೆ, ಪ್ರೋತ್ಸಾಹಿಸಿದ ಹಿನ್ನೆಲೆಯೂ ರಿಪಬ್ಲಿಕ್ ಡೇಗಿದೆ. ಆ ದಿನ ನಮ್ಮ ಆಪ್ತ ರಾಷ್ಟ್ರಗಳಲ್ಲೊಂದರ ಪ್ರಧಾನಿ ಅಥವಾ ಅಧ್ಯಕ್ಷರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿ ಸಂಬಂಧವನ್ನು ಭದ್ರಗೊಳಿಸುವ ಕಾರ್ಯವೂ ನಡೆಯುತ್ತದೆ.
ಅರವಿಂದ ಕೇಜ್ರೀವಾಲರು ಗಣರಾಜ್ಯೋತ್ಸವವೆಂದರೆ ವಿಐಪಿಗಳ ಮನರಂಜನೆಗಾಗಿ ಮಾಡುವ ಕಾರ್ಯಕ್ರಮ ಎನ್ನಬಹುದು. ಆದರೆ ಶಾಲೆ, ಕಾಲೇಜುಗಳಲ್ಲಿ ಎನ್ಸಿಸಿ, ಎನ್ಎಸ್ಎಸ್ಗಳಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಗಣರಾಜ್ಯೋತ್ಸವದ ಪರೇಡ್ಗೆ ಆಯ್ಕೆಯಾಗುವುದೆಂದರೆ ಜೀವಮಾನದ ಅಮೂಲ್ಯ ಕ್ಷಣ, ಹೆಮ್ಮೆಯ ವಿಚಾರ. ಬದುಕಿನ ಕಡೇ ಘಳಿಗೆಯವರೆಗೂ ಖುಷಿ ಕೊಡುವ ಸಾಧನೆಯ ಪ್ರತೀಕವಾಗಿರುತ್ತದೆ ಪರೇಡ್ನಲ್ಲಿ ಪಾಲ್ಗೊಂಡಿರುವ ಛಾಯಾಚಿತ್ರ. ತಮ್ಮದೇ ಅತ್ಯುತ್ತಮ ಪಥಸಂಚಲನ ಎಂದು ತೋರಿಸಲು, ಸಾಬೀತು ಮಾಡಲು ವಿದ್ಯಾರ್ಥಿಗಳು ದಿಲ್ಲಿಯ ಕೊರೆವ ಚಳಿಯನ್ನು ಲೆಕ್ಕಿಸದೇ ಪೂರ್ವತಯಾರಿ ನಡೆಸುತ್ತಾರೆ. ಇನ್ನು ಸ್ತಬ್ಧ ಚಿತ್ರಗಳು ಕೇವಲ ಪ್ರೇಕ್ಷಕರನ್ನು ರಂಜಿಸುವ ವಿಷಯವಲ್ಲ. ಅವು ನಮ್ಮ ದೇಶದ ವೈವಿಧ್ಯತೆ, ಆಯಾ ರಾಜ್ಯಗಳ ಪರಂಪರೆಯನ್ನು ಸಾರುತ್ತವೆ. ಕೇಜ್ರೀವಾಲರೆ, ನೀವೊಬ್ಬ ಮಾಜಿ ಕಂದಾಯ ಅಧಿಕಾರಿ ಎಂಬುದು ಗೊತ್ತು. ಆದರೆ ಭಾವನೆಗಳನ್ನು, ರಾಷ್ಟ್ರಪ್ರೇಮವನ್ನು, ಪರಂಪರೆಯನ್ನೂ ಲಾಭ-ನಷ್ಟಗಳ ಲೆಕ್ಕದಲ್ಲಿ ನೋಡಬೇಡಿ ಸ್ವಾಮಿ. ಗಣರಾಜ್ಯೋತ್ಸವವೆಂದರೆ ನಮ್ಮ ಸೇನಾ ಸಾಮರ್ಥ್ಯದ ಪ್ರದರ್ಶನವೂ ಹೌದು. ನಾವು ಹೊಸದಾಗಿ ರೂಪಿಸಿರುವ ಕ್ಷಿಪಣಿಗಳು, ಟ್ಯಾಂಕರ್ಗಳು, ಯುದ್ಧ ನೌಕೆಗಳನ್ನು ಹೊರಜಗತ್ತಿಗೆ ಶೋಕೇಶ್ ಮಾಡುವುದೂ ಅದೊಂದೇ ದಿನ. ನಮ್ಮ ಸೇನಾ ಪಡೆಗಳಲ್ಲಿರುವ ವೈವಿಧ್ಯತೆಯೂ ಅಂದು ಪ್ರದರ್ಶನಗೊಳ್ಳುತ್ತವೆ. ಮರಾಠಾ, ಮದ್ರಾಸ್, ಪಂಜಾಬ್, ಗೂರ್ಖಾ ರೆಜಿಮೆಂಟ್ಗಳ ಪಥ ಸಂಚಲನ ನೋಡುವುದೆಂದರೆ cynosure ಅಂತಾರಲ್ಲಾ ಅದೊಂದು ಆಕರ್ಷಣೆ, ಕಣ್ಣಿಗೆ ಹಬ್ಬ.
ಇಂಥ...
ಒಂದು ವಿಶೇಷ ದಿನವನ್ನು ವಿಐಪಿಗಳ ಮನರಂಜನೆಗೆ ಮಾಡುವ ಕಾರ್ಯಕ್ರಮ, ಅದಕ್ಕೇ ಅಡ್ಡಿಪಡಿಸುತ್ತೇವೆ, ಈ ಭಾರಿ ಜನರನ್ನು ಬೀದಿಪಾಲು ಮಾಡುವುದೇ ನಿಜವಾದ ಆಚರಣೆ, ಹಾಗಾಗಿ ರೈಲು ಭವನದ ಮುಂದೆ ಧರಣಿ ಮಾಡುತ್ತಿದ್ದೇವೆ, 10 ದಿನಗಳವರೆಗೂ ಮುಂದುವರಿಸುತ್ತೇವೆ ಎಂದಿರಲ್ಲಾ ನಿಮಗೆ ದೇಶದ ಬಗ್ಗೆ ಭಾವನೆಗಳೇ ಇಲ್ಲವೆ? ನಿಮ್ಮ ಕ್ಷುಲ್ಲಕ ರಾಜಕೀಯಕ್ಕಾಗಿ ರಾಷ್ಟ್ರೀಯ ಆಚರಣೆಯನ್ನೇ ಹೀಗಳೆಯಲು, ಹಾಳುಗೆಡವಲು ಮುಂದಾಗುತ್ತೀರಲ್ಲಾ ನಿಮಗೆ ಆತ್ಮಸಾಕ್ಷಿ ಎಂಬುದೇ ಇಲ್ಲವಾಗಿದೆಯೇ? ಜನರಿಂದ ನೀರಸ ಪ್ರತಿಕ್ರಿಯೆ ಹಾಗೂ ಮಾಧ್ಯಮಗಳಿಂದ ಕಟು ಟೀಕೆ ವ್ಯಕ್ತವಾಗದಿದ್ದರೆ ನಿಮ್ಮ ಬೀದಿ ನಾಟಕ ಖಂಡಿತ ಮುಂದುವರಿಯುತ್ತಿತ್ತು. ಇಷ್ಟಾಗಿಯೂ ಕಾಂಗ್ರೆಸ್ ಹಾಗೂ ಬಿಜೆಪಿಯವರು ಕಾಸು ಕೊಟ್ಟು ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ಪ್ರಚಾರಾಂದೋಲನ ಮಾಡಿಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದೀರಲ್ಲಾ ಇಂಥ ಮಾತುಗಳನ್ನಾಡಲು ನಿಮಗೆ ಏನೂ ಅನ್ನಿಸುವುದಿಲ್ಲವೆ ಕೇಜ್ರೀವಾಲ್? ಒಂದು ವೇಳೆ, ಮಾಧ್ಯಮಗಳು ದುಡ್ಡು ತೆಗೆದುಕೊಂಡು ನಿಮ್ಮ ಧರಣಿಯನ್ನು ನಕಾರಾತ್ಮಕವಾಗಿ ಬಿಂಬಿಸುತ್ತಿವೆ ಎಂದಾದರೆ ಕೇವಲ ರನ್ನರ್ ಅಪ್ ಆಗಿದ್ದ ನಿಮ್ಮ ಆಮ್ ಆದ್ಮಿ ಪಕ್ಷ 28 ಸೀಟು ಗೆದ್ದಿದ್ದನ್ನು ಐತಿಹಾಸಿಕ ಜಯ ಎಂದು ಡಿಸೆಂಬರ್ 8ರಿಂದ ಜನವರಿ 20ನೇ ತಾರೀಖು ನೀವು ಧರಣಿಗೆ ಕುಳಿತುಕೊಳ್ಳುವವರೆಗೂ ಬೊಬ್ಬಿರಿದವಲ್ಲಾ, ಇನ್ನಿಲ್ಲದ ಪ್ರಚಾರ ಕೊಟ್ಟವಲ್ಲಾ ಆಗ ನೀವೂ ಮಾಧ್ಯಮಗಳಿಗೆ ಲಂಚ ಕೊಟ್ಟಿದ್ದಿರಾ? ಮೂರು ರಾಜ್ಯಗಳಲ್ಲಿ ಅಭೂತಪೂರ್ವ ಜಯ ಗಳಿಸಿದ್ದ, ದಿಲ್ಲಿಯಲ್ಲೂ ನಂಬರ್-1 ಪಕ್ಷವಾಗಿದ್ದ ಬಿಜೆಪಿಯ ಸಾಧನೆಯನ್ನು ಮರೆಮಾಚಿ ನಿಮ್ಮನ್ನು ಮಾಧ್ಯಮಗಳು ಉಬ್ಬಿಸಿದಾಗ ನೀವು ಎಷ್ಟು ಕೊಟ್ಟಿದ್ದಿರಿ?
ಅದಿರಲಿ, ಕರ್ತವ್ಯ ಚ್ಯುತಿ ಮಾಡಿದ್ದಾರೆಂದು ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಕೆಲಸದಿಂದ ಕಿತ್ತೊಗೆಯಬೇಕೆಂದು ರಸ್ತೆ ಮೇಲೆ ಮಲಗಿದಿರಲ್ಲಾ, ತಮ್ಮನ್ನು ರಸ್ತೆಯಲ್ಲಿ ಮೂತ್ರ ಮಾಡಿಸಿ, ಅವಮಾನಿಸಿದರು ಎಂದು ಆಫ್ರಿಕಾದ ಮಹಿಳೆಯರು ದೂರು ನೀಡಿದರೂ ಏಕೆ ನಿಮ್ಮ ಕಾನೂನು ಮಂತ್ರಿ ಸೋಮನಾಥ್ ಭಾರ್ತಿಯನ್ನು ಕಿತ್ತೊಗೆಯುತ್ತಿಲ್ಲಾ ಕೇಜ್ರೀವಾಲ್? ಅದಿರಲಿ, ನಿಮ್ಮ ಮಂತ್ರಿ ಮಾಡಿದ ಮೂರ್ಖ ಕೆಲಸದಿಂದ 21 ಆಫ್ರಿಕನ್ ರಾಷ್ಟ್ರಗಳು ನಮ್ಮ ರಾಯಭಾರಿಗಳಿಗೆ ಸಮನ್ಸ್ ನೀಡಿ ವಿವರಣೆ ಕೇಳಿವೆ. ನಮ್ಮ ದೇಶದ ಒಂದು ದೊಡ್ಡ ಸಂಖ್ಯೆ ಆಫ್ರಿಕಾದ ವಿವಿಧ ದೇಶಗಳಲ್ಲಿದ್ದಾರೆ. ಕೀನ್ಯಾದ ಒಂದು ಶಾಪಿಂಗ್ ಮಾಲ್ (ವೆಸ್ಟ್ಗೇಟ್) ಮೇಲೆ ಭಯೋತ್ಪಾದಕರು ದಾಳಿ ಮಾಡಿದರೆ ಸತ್ತವರಲ್ಲಿ ಗಣನೀಯ ಸಂಖ್ಯೆಯ ಭಾರತೀಯರು ಕಾಣುತ್ತಾರೆ. ಅಂದರೆ ನಮ್ಮ ದೊಡ್ಡ ಸಮುದಾಯವೇ ಅಲ್ಲಿದೆ. ಹಾಗಿರುವಾಗ ಉಗಾಂಡಾದ ಮಹಿಳೆಯರಿಗೆ ಇಲ್ಲಿ ಮಾಡುವ ಅವಮಾನದಿಂದ ಆಫ್ರಿಕಾದಲ್ಲಿರುವ ನಮ್ಮವರು ಕೋಪಕ್ಕೆ ತುತ್ತಾಗಬಹುದು ಎಂಬ ಕಾಮನ್ಸೆನ್ಸ್ ಕೂಡಾ ನಿಮ್ಮ ಮಂತ್ರಿ ಹಾಗೂ ಆತನ ಬೆಂಬಲಕ್ಕೆ ನಿಂತಿರುವ ನಿಮಗಿಲ್ಲವೆ? ನಮ್ಮಲ್ಲಿಗೆ ಬರುವ ಅಫ್ರಿಕನ್ನರು ಮಾದಕ ವಸ್ತು ವ್ಯಸನ ಹಾಗೂ ಕಾನೂನುಬಾಹಿರ ಮಾರಾಟ ಎರಡರಲ್ಲೂ ಇದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಹಾಗಂತ ಒಬ್ಬ ಸಚಿವ ಹಾಗೂ ಟೋಪಿಧಾರಿಗಳು ನೇರವಾಗಿ ಕಾನೂನನ್ನು ಕೈಗೆತ್ತಿಕೊಳ್ಳುವುದು ಎಷ್ಟು ಸರಿ? ದೇವಯಾನಿ ಖೋಬ್ರಾಗಡೆಯವರ ಕ್ಯಾವಿಟಿ ಟೆಸ್ಟ್ (ಗುಪ್ತಾಂಗ ತಡಕಾಟ) ಮಾಡಿದರೆಂದು ಇಡಿ ದೇಶವೇ ರೊಚ್ಚಿಗೆದ್ದಿತ್ತು. ಹಾಗಿರುವಾಗ ಆಫ್ರಿಕನ್ ಮಹಿಳೆಯರನ್ನು ಕೇವಲ ಅನುಮಾನದ ಆಧಾರದ ಮೇಲೆ ಸಾರ್ವಜನಿಕವಾಗಿ ಮೂತ್ರ ಮಾಡಿಸಿದ್ದು ಮಾನಗೇಡಿ ಹಾಗೂ ಮೂರ್ಖತನದ ಕೆಲಸವಲ್ಲವೆ? ಇವತ್ತು ನಮ್ಮ ಪಂಜಾಬ್ನ ಅತಿ ಹೆಚ್ಚು ಜನ ಮಾದಕ ವಸ್ತು ವ್ಯಸನಿಗಳಾಗಿರುವುದಕ್ಕೆ ಪಕ್ಕದ ಪಾಕಿಸ್ತಾನವೇ ಕಾರಣ ಎಂಬುದು ಜಗತ್ತಿಗೇ ಗೊತ್ತು. ನೀವು ದಿಲ್ಲಿಗೆ ಬರುವ ಪಾಕಿಸ್ತಾನಿಯರನ್ನೂ ಮಧ್ಯರಾತ್ರಿ ರಸ್ತೆಯಲ್ಲಿ ನಿಲ್ಲಿಸಿ ಮೂತ್ರಮಾಡಿಸುವ ಧೈರ್ಯ ತೋರುತ್ತೀರಾ? ""Politicians are servants of the people and not their masters'', ಅಂದರೆ ರಾಜಕಾರಣಿಗಳು ಪ್ರಜಾಸೇವಕರೇ ಹೊರತು, ಒಡೆಯರಲ್ಲ ಎಂದು ಚುನಾವಣೆಗಿಂತ ಮೊದಲು ಬೊಬ್ಬೆ ಹಾಕಿದಿರಲ್ಲಾ, ಈಗ ನಿಮ್ಮ ಮಂತ್ರಿ ನಡೆದುಕೊಂಡಿರುವ ರೀತಿ ಪ್ರಜಾಸೇವಕನಂತಿದೆಯೋ, ಒಡೆಯನಂತಿದೆಯೋ? ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ ಹಾಗೂ ಖ್ಯಾತ ವಕೀಲ ಹರೀಶ್ ಸಾಳ್ವೆ ಅವರ ಮುಖಕ್ಕೆ ಉಗಿಯುತ್ತೇನೆ ಎಂದಿರುವ ನಿಮ್ಮ ಮಂತ್ರಿ ಸೋಮನಾಥ ಭಾರ್ತಿಯದ್ದು ಅಹಂಕಾರ, ಅಲ್ಲಲ್ಲ ದುರಹಂಕಾರದ ಮಾತುಗಳಲ್ಲವೇ? ಅದನ್ನು ಖಂಡಿಸಬೇಕು ಹಾಗೂ ಅಂಥ ವ್ಯಕ್ತಿಯನ್ನು ಸಂಪುಟದಿಂದ ಕೈಬಿಡಬೇಕೆಂದು ನಿಮಗೆ ಅನಿಸುತ್ತಿಲ್ಲವೇ?
ಕೇಜ್ರೀವಾಲರೇ, ಕಾಂಗ್ರೆಸ್ ಹಾಗೂ ಬಿಜೆಪಿಯವರು ಸುಭಗರೆಂದು ಖಂಡಿತ ಹೇಳುತ್ತಿಲ್ಲ. ಆದರೆ ದರ್ಪದ ವಿಷಯದಲ್ಲಿ ನೀವೂ ಕೂಡ ಅವರಿಗಿಂತ ಭಿನ್ನ ಅಲ್ಲ ಎಂಬುದನ್ನು ಹಾಗೂ ನಿಮ್ಮ ಬಣ್ಣ ಮತ್ತು ಗಿಮ್ಮಿಕ್ಕುಗಳನ್ನು ಜನ ಅರ್ಥ ಮಾಡಿಕೊಳ್ಳುವ ಕಾಲ ಖಂಡಿತ ದೂರವಿಲ್ಲ!
ಪುಕ್ಕಟೆ ಕೊಟ್ರೆ ನಂಗೋದಿರ್ಲಿ, ನಮ್ಮಪ್ಪನಿಗೊಂದಿರ್ಲಿ ಅನ್ನೋ ಮಂದಿಗೆ ನೀರು, ಕರೆಂಟು ಕೊಡ್ತಿನಿ ಅಂತ ನೀವು ವೋಟು ಪಡೆದುಕೊಂಡಿರಬಹುದು. ಆದರೆ ಅದರಿಂದ ಜನರಿಗೆ ತಾತ್ಕಾಲಿಕ ಅನುಕೂಲವಾದರೂ ಅಂತಿಮವಾಗಿ ದೇಶಕ್ಕೇ ಮಾರಕ. ಅಂದಹಾಗೆ, ನೀವು ಹೇಗೆ ಪುಕ್ಕಟೆ ನೀರು, ಅರ್ಧ ಬೆಲೆಗೆ 3 ತಿಂಗಳ ಅವಧಿಗೆ ಕರೆಂಟು ಕೊಡಲು ಸಾಧ್ಯವಾಯಿತೆಂದರೆ, ಅದಕ್ಕೆ 2003ರಲ್ಲಿ ಶೀಲಾ ದೀಕ್ಷಿತ್ ವಿದ್ಯುತ್ ಕ್ಷೇತ್ರದಲ್ಲಿ ತಂದ ಸುಧಾರಣೆಗಳು ಕಾರಣ. ಇವತ್ತು ದೇಶದಲ್ಲೇ ಅತಿ ಕಡಿಮೆ ಸಾಲದ ಹೊರೆ (ಆದಾಯದ ಶೇ.7 ಮಾತ್ರ) ಹೊಂದಿರುವ ರಾಜ್ಯ ದಿಲ್ಲಿ ಹಾಗೂ ಅದರ ಹೆಗ್ಗಳಿಕೆ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ಗೆ ಸಲ್ಲಬೇಕು. ಬಿಜೆಪಿಯ ಅತಿಯಾದ ಆತ್ಮವಿಶ್ವಾಸ ಹಾಗೂ ಉದಾಸೀನದಿಂದ 2004ರಲ್ಲಿ ಸರ್ಕಾರ ಬಿದ್ದಾಗ ಅಟಲ್ ಬಿಹಾರಿ ವಾಜಪೇಯಿಯವರು ಬಿಟ್ಟು ಹೋದ ಇಡುಗಂಟನ್ನು ಮುಂದಿನ 5 ವರ್ಷಗಳವರೆಗೂ ಉದ್ಯೋಗ ಖಾತ್ರಿಯಂಥ ಚಾರಿಟಿಗೆ ಹಾಗೂ ಲೂಟಿಗೆ ಬಳಸಿದ ಕಾಂಗ್ರೆಸ್ ಈಗ ದೇಶವನ್ನು ಯಾವ ಸ್ಥಿತಿಗೆ ತಂದಿದೆಯೆಂಬುದು ಜನರ ಮುಂದಿದೆ. ಕೇಂದ್ರ ಸರ್ಕಾರದ ಭ್ರಷ್ಟಾಚಾರ ಹಾಗೂ ಕಾಮನ್ವೆಲ್ತ್ ಹಗರಣದಿಂದ ಅಧಿಕಾರ ಕಳೆದುಕೊಂಡ ಶೀಲಾ ದೀಕ್ಷಿತ್ ಬಿಟ್ಟು ಹೋಗಿರುವ ಗಂಟನ್ನು ಇನ್ನಾರು ತಿಂಗಳಲ್ಲಿ ನೀವು ಹಾಳು ಮಾಡುವುದಕ್ಕೆ ಸ್ಕೆಚ್ ಹಾಕಿದಂತೆ ವರ್ತಿಸುತ್ತಿದ್ದೀರಿ ಅಷ್ಟೇ. ಯಾರೋ ಕೂಡಿಟ್ಟಿದ್ದನ್ನು ಹಂಚುವುದರಲ್ಲಿ ಯಾವ ಪೌರುಷವಿದೆ ಹೇಳಿ? ತಾಕತ್ತಿದ್ದರೆ ಖಾಸಗಿ ಕಂಪನಿಗಳಾದ ರಿಲಯನ್ಸ್, ಟಾಟಾದವರಿಂದ ಕರೆಂಟು ಖರೀದಿಸುವುದಿಲ್ಲ, ಸ್ವಂತ ಉತ್ಪಾದನೆಗೆ ಒತ್ತು ನೀಡುತ್ತೇವೆ ಎನ್ನಿ. ಹರ್ಯಾಣದ ನೀರಿನ ಮೇಲೆ ಅವಲಂಬಿತವಾಗುವ ಬದಲು ಯಮುನೆಯನ್ನು ಸ್ವಚ್ಛಗೊಳಿಸುತ್ತೇನೆ ಎಂದನ್ನಿ, ಆಗ ನೋಡೋಣ? ಕೆಂಪು ಗೂಟ ಕಿತ್ತುಹಾಕುವುದರಲ್ಲಿ ಯಾವ ಘನಕಾರ್ಯವಿದೇರಿ? ಅದರಿಂದ ಜನಕ್ಕೇನಾದರೂ ಲಾಭವಿದೆಯೇ? ಕೆಂಪುಗೂಟ ಕಿತ್ತು ಹಾಕಿದ ಮಾತ್ರಕ್ಕೆ ನೀವು ಟ್ರಾಫಿಕ್ನಲ್ಲಿ ನಿತ್ಯವೂ ಕಾದು ನಿಲ್ಲುತ್ತೀರಾ? ನನಗೆ ಕಾರು ಬೇಡ, ಬಂಗಲೆ ಬೇಡ ಎಂದವರು 8 ಸಾವಿರ ಚದರ ಅಡಿ ಮನೆಯನ್ನು ನೋಡಿಕೊಂಡು ಬರಲು ನಿಮ್ಮ ಪೋಷಕರನ್ನೇಕೆ ಕಳುಹಿಸಿಕೊಟ್ಟಿದ್ದಿರಿ? ಅದನ್ನು ಮಾಧ್ಯಮಗಳು ಬಹಿರಂಗ ಮಾಡಿದವು, ಅದರೊಂದಿಗೆ ನಿಮ್ಮ ಬಣ್ಣವೂ ಬಯಲಾಗತೊಡಗಿತು ಎಂಬ ಕಾರಣಕ್ಕೆ ಈ ಪರಿ ಕೋಪ ಬಂದಿದೆಯೇ?
ಇನ್ನು ಸಾಕ್ಷ್ಯ ತಿರುಚಲು ಈ ವ್ಯಕ್ತಿ ಯತ್ನಿಸಿದ್ದ ಎಂದು ನಿಮ್ಮ ಕಾನೂನು ಸಚಿವ ಸೋಮನಾಥ್ ಭಾರ್ತಿ ಬಗ್ಗೆ ಕೋರ್ಟ್ ಹೇಳಿದರೆ, ನ್ಯಾಯಾಧೀಶರನ್ನೇ ಪ್ರಶ್ನಿಸುತ್ತೀರಿ. ಸಿಎಜಿ ವರದಿಯನ್ನು, ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನೇ ಟೀಕಿಸುವ ಕಾಂಗ್ರೆಸ್ಸಿಗೂ ನಿಮಗೂ ಏನು ವ್ಯತ್ಯಾಸವಿದೆ? ಅಲ್ಲಾ ಸ್ವಾಮಿ, ಗಣರಾಜ್ಯೋತ್ಸವದ ತಯಾರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ರೈಲು ಭವನದ ಮುಂದೆ ಧರಣಿ ಮಾಡಬಾರದು ಎಂದು ಕೇಂದ್ರ ಗೃಹ ಸಚಿವ ಹೇಳಿದರೆ, 'ನಾನು ಎಲ್ಲಿ ಧರಣಿ ಮಾಡಬೇಕೆಂದು ಹೇಳಲು ಶಿಂದೆ ಯಾರು? ನಾನು ದಿಲ್ಲಿ ಮುಖ್ಯಮಂತ್ರಿ. ಶಿಂದೆ ಎಲ್ಲಿರಬೇಕು ಎಂದು ನಿರ್ಧರಿಸುವ ಅಧಿಕಾರ ನನಗಿದೆ' ಎನ್ನುತ್ತೀರಲ್ಲಾ ನೀವು ಕುಳಿತಿರುವ ಕುರ್ಚಿಯೇ ಕಾಂಗ್ರೆಸ್ನ ದಯಾಭಿಕ್ಷೆ ಎಂಬುದು ಗೊತ್ತಿಲ್ಲವೆ? ಕಾಂಗ್ರೆಸ್ ಮನಸ್ಸು ಮಾಡಿದರೆ ನೀವು ಇನ್ನೊಂದು ಕ್ಷಣವೂ ಮುಖ್ಯಮಂತ್ರಿಯಾಗಿರಲು ಸಾಧ್ಯವಿಲ್ಲ. ಆದರೂ ಇಂಥ ದರ್ಪದ ಮಾತು?!
ಶಹಬ್ಬಾಸ್ ಕೇಜ್ರೀವಾಲ್!!
ಒಬ್ಬ ವ್ಯಕ್ತಿಯ ನಿಜವಾದ ಗುಣವನ್ನು ಅರಿಯಬೇಕಾದರೆ ಆತನಿಗೆ ಅಧಿಕಾರ ಕೊಟ್ಟು ನೋಡಬೇಕು ಎಂಬ ಲಿಂಕನ್ ಮಾತು ನಿಮಗೆ ಅಧಿಕಾರ ಕೊಟ್ಟು ತಿಂಗಳು ತುಂಬುವ ಮೊದಲೇ ಜನರಿಗೆ ಗೊತ್ತಾಯಿತು ಬಿಡಿ! ಇನ್ನು ಕುಣಿಯಲಾರದವಳು ನೆಲ ಡೊಂಕು ಅಂದಿದ್ದಳಂತೆ ಅನ್ನೋ ಹಾಗೆ ಮುಖ್ಯಮಂತ್ರಿ ಕೆಲಸವನ್ನೇ ನಿಭಾಯಿಸಲಾರದ ನೀವು 300-400 ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಯೋಚಿಸುತ್ತಿದ್ದೀರಿ. ಅಲ್ಪಮತದ ಸರ್ಕಾರದ ಮುಖ್ಯಮಂತ್ರಿಯಾಗೇ ಅಧಿಕಾರ ಅಹಂಕಾರ ತುಂಬಿಕೊಂಡಿರುವ ನೀವು, ಪ್ರಧಾನಿಯಾದರೆ ಗತಿಯೇನು? 2009ರಲ್ಲಿ ಬಿಎಸ್ಪಿ ಕೂಡಾ 500 ಸ್ಥಾನಗಳಿಗೆ ಸ್ಪರ್ಧಿಸಿತ್ತು. ಕೊನೆಗೆ ಗೆದ್ದಿದ್ದು 26 ಸೀಟು. ಮನೆ ಗೆದ್ದು ಮಾರು ಗೆಲ್ಲು ಎಂಬ ಮಾತನ್ನು ನೆನಪಿಸಿಕೊಳ್ಳಿ. ಸ್ವಲ್ಪ ಜೋಕೆ...!

- ಪ್ರತಾಪ್ ಸಿಂಹ
mepratap@gmail.com

Related Stories

No stories found.

Advertisement

X
Kannada Prabha
www.kannadaprabha.com