ಗಂಡಿಗೆ ವರದಕ್ಷಿಣೆಯಾಗಿ ಎಮ್ಮೆಗಳನ್ನು ಕೊಡುತ್ತಿದ್ದ ತೋಡರು

ಮದುವೆಗೆ ಮುನ್ನ ಗಂಡಿಗೆ ವರದಕ್ಷಿಣೆಯಾಗಿ ಹಣ, ಆಭರಣ, ಬೈಕು ಆಥವಾ ಕಾರನ್ನೋ...
ಗಂಡಿಗೆ ವರದಕ್ಷಿಣೆಯಾಗಿ ಎಮ್ಮೆಗಳನ್ನು ಕೊಡುತ್ತಿದ್ದ ತೋಡರು

ಮದುವೆಗೆ ಮುನ್ನ ಗಂಡಿಗೆ ವರದಕ್ಷಿಣೆಯಾಗಿ ಹಣ, ಆಭರಣ, ಬೈಕು ಆಥವಾ ಕಾರನ್ನೋ ವರದಕ್ಷಿಣೆಯಾಗಿ ನೀಡುವುದುಂಟು. ಆದರೆ, ವರದಕ್ಷಿಣೆ ರೂಪದಲ್ಲಿ ಎಮ್ಮೆಗಳನ್ನು ನೀಡುವ ಸಂಪ್ರದಾಯ ಎಲ್ಲಾದರೂ ಇತ್ತೇ ? ಖಂಡಿತಾ ಇತ್ತು.
ಹಣ, ಆಭರಣ ಅಥವಾ ಬೈಕು, ಕಾರು ಕೊಡುವ ಸಾಮರ್ಥ್ಯ ಇಲ್ಲದವರು ಇನ್ನೇನು ಮಾಡಿಯಾರು. ತಮ್ಮ ಬಳಿ ಇರುವುದನ್ನೇ ಗಂಡಿಗೆ ವರದಕ್ಷಿಣೆ ರೂಪದಲ್ಲಿ ಕೊಡುತ್ತಿದ್ದರು. ವರದಕ್ಷಿಣೆಯಾಗೆ ಎಮ್ಮೆಗಳನ್ನು ಕೊಡುತ್ತಿದ್ದವರು ತೋಡ ಸಮುದಾಯದವರು.
ಹೀಗಾಗಿ ವಿವಾಹವಾದ ಬಳಿಕ ವರಮಹಾಶಯ ವಧು ಮಾತ್ರವಲ್ಲ, ಎಮ್ಮೆಗಳನ್ನೂ ತನ್ನೊಂದಿಗೆ ಕರೆದೊಯ್ಯಬೇಕಿತ್ತು. ಮದುವೆಗೆ ಮುನ್ನ ವರ ಮತ್ತು ವಧುವಿನ ಕುಟುಂಬದವರು ಮಾತುಕತೆಗೆ ಕೂರುತ್ತಿದ್ದರು. ವರದಕ್ಷಿಣೆಯಾಗಿ ನಮಗೆ ಇಷ್ಟು ಎಮ್ಮೆಗಳನ್ನು ಕೊಡಬೇಕು ಎಂದು ವರನ ಕಡೆಯವರು ಬೇಡಿಕೆ ಇಡುತ್ತಿದ್ದರು. ವಧುವಿನ ಮನೆಯವರು ಒಪ್ಪಿದರೆ ಮದುವೆ ಬಳಿಕ ಎಮ್ಮೆಗಳು ವರನ ಮನೆಯಲ್ಲಿ ಇರುತ್ತಿದ್ದವು.

ಬಹುಪತಿತ್ವ ವ್ಯವಸ್ಥೆ: ಅಂದಹಾಗೆ ತೋಡರು ತಮಿಳುನಾಡಿನ ನೀಲಗಿರಿ ಜಿಲ್ಲೆಯ ಬೆಟ್ಟಗುಡ್ಡಗಳಲ್ಲಿ ವಾಸ ಮಾಡುತ್ತಿದ್ದವರು. ಇತರ ಬುಡಕಟ್ಟು ಸಮುದಾಯಗಳೊಂದಿಗೆ ಒಡನಾಟವಿರಿಸಿಕೊಂಡಿದ್ದವರು. ತೋಡರಲ್ಲಿ ಇನ್ನೊಂದು ವಿಶೇಷ ಇತ್ತು. ಆದೇನೆಂದರೆ, ಮಹಾಭಾರತದಲ್ಲಿ ದ್ರೌಪದಿ ಪಾಂಡವರನ್ನು ವಿವಾಹವಾದಂತೆ ಇವರಲ್ಲಿಯೂ ಮಹಿಳೆಯರಿಗೆ ಬಹು ಪತಿತ್ವ ವ್ಯವಸ್ಥೆ ಜಾರಿಯಲ್ಲಿತ್ತು. ಇದಕ್ಕೆ ಕಾರಣವೂ ಇಲ್ಲದಿಲ್ಲ. ಪ್ರಾಚೀನ ಕಾಲದ ತೋಡರು ನವಜಾತ ಹೆಣ್ಣು ಶಿಶುಗಳನ್ನು ಹತ್ಯೆ ಮಾಡುತ್ತಿದ್ದರಂತೆ. ಹೀಗಾಗಿ ಬಹುಪತಿತ್ವ ಪದ್ಧತಿ ಜಾರಿಗೆ ತರಲಾಯಿತು. ಈ ಸಮುದಾಯದಲ್ಲಿ ಗರ್ಭಿಣಿಗೆ ಬಿಲ್ಲು ಮತ್ತು ಬಾಣವನ್ನು ಕಾಣಿಕೆಯಾಗಿ ನೀಡಲಾಗುತ್ತಿತ್ತು. ಶಕ್ತಿವಂತನಾದ ಮಗ ಜನಿಸಲಿ ಎಂಬ ಹಾರೈಕೆ ಇದರ ಹಿಂದೆ ಇರುತ್ತಿತ್ತು.
ಬ್ರಿಟಿಷರ ಆಳ್ವಿಕೆಯಲ್ಲಿ ಈ ಎಲ್ಲವೂ ನಿಷೇಧಕ್ಕೆ ಒಳಗಾಯಿತು ಎಂದು ಹೇಳಲಾಗುತ್ತದೆ. ಡಾ.ಕೆ.ಎಂ. ಮೈತ್ರಿ ಅವರ ಅಧ್ಯಯನದಲ್ಲೂ ಈ ಎಲ್ಲ ವಿಚಾರಗಳು ಅಡಕವಾಗಿದೆ. 
ಸಣ್ಣ ಬುಡಕಟ್ಟು ಸಮುದಾಯಕ್ಕೆ ಸೇರಿದ ತೋಡರು ನೀಲಗಿರಿ ಜಿಲ್ಲೆಯ ಬೆಟ್ಟಗುಡ್ಡಗಳಲ್ಲಿ 18ನೇ ಶತಮಾನಕ್ಕೂ ಮೊದಲೇ ಕಂಡುಬಂದರು. ದಕ್ಷಿಣ ಕನ್ನಡ ಮತ್ತು ಚಾಮರಾಜನಗರದ ಕೊಳ್ಳೇಗಾಲ ಭಾಗದಲ್ಲಿ ಈ ಸಮುದಾಯದ ಜನರನ್ನು ಕಾಣಬಹುದು. ಪಶುಪಾಲನೆ ಅದರಲ್ಲೂ ಎಮ್ಮೆಗಳ ಸಾಕಣೆ ಅವರ ಮುಖ್ಯ ಕಸುಬು ಆಗಿತ್ತು. ಎಮ್ಮೆ ಹಾಲು ಮತ್ತು ಅದರ ಉತ್ಪನ್ನಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು.

ಮೂರ್ತಿ ಆರಾಧಕರಲ್ಲ:
ತೋಡರು ದೇವರ ವಿಗ್ರಹಗಳನ್ನು ಪೂಜಿಸುತ್ತಿರಲಿಲ್ಲ. ದೇವಾಲಯಗಳಲ್ಲಿ ದೀಪ ಹಚ್ಚುವುದು ಅವರ ಪ್ರಮುಖ ಸಂಪ್ರದಾಯ ಆಗಿತ್ತು. ಆದರೆ, ಮಹಿಳೆಯರು ದೇವಾಲಯ ಪ್ರವೇಶಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿತ್ತು. ವರ್ಷಕ್ಕೊಮ್ಮೆ ನಡೆಯುವ ಸಮುದಾಯದ ಉತ್ಸವದಲ್ಲಿ ದೇವರಿಗೆ ಹಾಲು, ಬೆಣ್ಣೆ ಮತ್ತು ಮೊಸರಿನ ಅಭಿಷೇಕ ಮಾಡುತ್ತಿದ್ದರು. 
ತೋಡ ಸಮುದಾಯದ ಜನ ಗುಂಪುಗಳಲ್ಲಿ ವಾಸ ಮಾಡುತ್ತಿದ್ದರು. ಅದಕ್ಕೆ ಮುಂಡ ಎಂಬ ಹೆಸರಿತ್ತು. ಒಂದೊಂದು ಗುಂಪಿನಲ್ಲಿ 5-6 ಕುಟುಂಬಗಳಿರುತ್ತಿದ್ದವು. ಇವರು ತಮ್ಮ ಮನೆಗಳನ್ನು ಅರ್ಧ ಮುಚ್ಚಿದ್ದ ಡ್ರಮ್ ಮಾದರಿಯಲ್ಲಿ ಕಟ್ಟಿಕೊಳ್ಳುತ್ತಿದ್ದುದು ವಿಶೇಷ. ಮನೆಯ ಎತ್ತರ 10 ಅಡಿ, ಆಗಲ 9 ಅಡಿ ಅಗಲ ಮತ್ತು 18 ಅಡಿ ಉದ್ದ ಇರುತ್ತಿತ್ತು. ಮನೆಯ ಮುಂಭಾಗವನ್ನು ತಮ್ಮ ಕಲಾಕೃತಿಗಳಿಂದ ತೋಡರು ಅಲಂಕರಿಸುತ್ತಿದ್ದರು. ಮನೆ ಬಾಗಿಲು ಸಹ ವಿಸ್ತೀರ್ಣದಲ್ಲಿ ತೀರಾ ಸಣ್ಣದು. ಮೂರು ಅಡಿ ಎತ್ತರ ಮತ್ತು ಮೂರು ಅಡಿ ಅಗಲ ಮಾತ್ರ. ಕಾಡು ಪ್ರಾಣಿಗಳಿಂದ ರಕ್ಷಣೆ ಪಡೆಯಲು ಈ ತಂತ್ರಜ್ಞಾನವನ್ನು ಅವರು ಅನುಸರಿಸುತ್ತಿದ್ದರು. ಇನ್ನು ಮನೆ ನಿರ್ಮಾಣಕ್ಕೆ ಬಿದಿರು, ಹುಲ್ಲು ಬಳಕೆ ಮಾಡುತ್ತಿದ್ದರು.

ಸಸ್ಯಹಾರಿಗಳಿವರು:
ಇವರ ಉಡುಗೆ, ತೊಡುಗೆ, ಆಚಾರ, ವಿಚಾರಗಳೆಲ್ಲವೂ ಭಿನ್ನ. ಕೋಟ ಮತ್ತು ಕುರುಬ ಸಮುದಾಯದೊಂದಿಗೆ ಒಡನಾಟವಿರಿಸಿಕೊಂಡಿದ್ದ ಇವರು ಹೊರಗೆ ಹೆಚ್ಚಾಗಿ ಗುರುತಿಸಿಕೊಳ್ಳುತ್ತಿರಲಿಲ್ಲ. ಹೀಗಾಗಿ ತೋಡ ಸಮುದಾಯದ ಕುರಿತು ಹೆಚ್ಚಿನವರಲ್ಲಿ ಮಾಹಿತಿ ಇಲ್ಲ. ತೋಡರು ಸಸ್ಯಹಾರಿಗಳು. ಮುಖ್ಯ ಆಹಾರ ಅಕ್ಕಿ. ಹೆಚ್ಚಾಗಿ ಬತ್ತ ಬೆಳೆಯುತ್ತಿದ್ದ ಕಾರಣ ಅಕ್ಕಿ ಪ್ರಮುಖ ಆಹಾರವಾಗಿರಬಹುದು. ಆದರೆ, ಮತಾಂತರಗೊಂಡ ಕೆಲವರು ಮಾಂಸ ಸೇವಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಅಧುನೀಕರಣಕ್ಕೆ ಒಗ್ಗಿಕೊಳ್ಳುತ್ತಿರುವುದರಿಂದ ಮನೆ ನಿರ್ಮಾಣ ಸೇರಿದಂತೆ ಎಲ್ಲದರಲ್ಲೂ ಬದಲಾವಣೆ ಎದ್ದು ಕಾಣುತ್ತಿದೆ. ಜೊತೆಗೆ ತೋಡರು ಕೃಷಿ ಚಟುವಟಿಕೆ ನಡೆಸುತ್ತಿದ್ದ ಜಾಗಗಳೂ ಸರ್ಕಾರಗಳ ಪಾಲಾಗಿವೆ. ಹೀಗಾಗಿ ಅವರಲ್ಲಿ ಕೆಲವರು ಜೀವನೋಪಾಯಕ್ಕೆ ಬೇರೆ ಬೇರೆ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ.
ದ್ರಾವಿಡ ತೋಡರ ಮಾತೃಭಾಷೆ. ಇದಲ್ಲಿ ಜರ್ಮನ್, ತಮಿಳು, ಮಲೆಯಾಳಿ ಮತ್ತು ಕನ್ನಡದ ಮಿಶ್ರಣವಿದೆ. ಇವರ ಭಾಷೆಗೆ ಲಿಪಿ ಎಂಬುದಿಲ್ಲ. ಹೀಗಾಗಿ ಬರವಣಿಗೆಗೆ ತಮಿಳು ಬಳಕೆ ಮಾಡುತ್ತಾರೆ. ಜರ್ಮನ್ ಭಾಷೆ ಬಳಕೆ ಹೇಗೆ ಬಂತು ? ಎಂಬುದು ಪ್ರಶ್ನೆಯಾಗಿ ಉಳಿದಿದೆ. ಈ ಸಮುದಾಯದ ಮೂಲ ಬೇರುಗಳು ವಿದೇಶದಲ್ಲಿ ಹುಟ್ಟಿಕೊಂಡಿರಬಹುದು ಎನ್ನುತ್ತಾರೆ ಕೆಲ ಅಧ್ಯಯನಕಾರರು. ಆದರೆ, ತೋಡರು ಬೆಳಕಿಗೆ ಬಂದಿದ್ದು ತಮಿಳುನಾಡಿನ ನೀಲಗಿರಿ ಜಿಲ್ಲೆಯಿಂದಲೇ.

ಧರ್ಮಗುರುವಿಗೆ ನಿಬಂಧನೆ: ತೋಡರಲ್ಲಿ ಒಬ್ಬ ಧರ್ಮಗುರು ಇರುತ್ತಿದ್ದರು. ಆತ ದೇವಾರ್ಪಿತವಾದ ಹಾಲಿನ ಡೈರಿಯಲ್ಲಿರಬೇಕಾಗಿತ್ತು. ತನ್ನ ಮನೆಗೆ ಹೋಗುವಂತಿರಲಿಲ್ಲ. ಜೊತೆಗೆ ಹಳ್ಳಿ ಪ್ರವೇಶ ಮಾಡುವಂತಿರಲಿಲ್ಲ. ಆವಿವಾಹಿತ ಆಗಿರಬೇಕಿತ್ತು. ಒಂದು ವೇಳೆ ಮದುವೆ ಆಗಿದ್ದರೆ ಪತ್ನಿಯನ್ನು ತ್ಯಜಿಸಬೇಕಿತ್ತು.
ಸಾಮಾನ್ಯರು ಧರ್ಮಗುರು ಅಥವಾ ದೇವಾರ್ಪಿತವಾದ ಡೈರಿಯನ್ನು ಮುಟ್ಟುವಂತಿರಲಿಲ್ಲ. ವಾರದಲ್ಲಿ ಎರಡು ದಿನ ಮಾತ್ರ ಧರ್ಮಗುರು ಭೇಟಿಯಾಗಲು ಅವಕಾಶ ಇತ್ತು. ಒಂದೊಮ್ಮೆ ತುರ್ತಾದ ಕೆಲಸ ಇದ್ದಲ್ಲಿ ಧರ್ಮಗುರುವಲ್ಲಿಗೆ ಹೋಗಬಹುದಿತ್ತು. ಆದರೆ, ದೂರದಲ್ಲೇ ನಿಂತ ಬಂದ ಕೆಲಸವನ್ನು ವಿವರಿಸುವಂಥ ಪದ್ಧತಿ ಇತ್ತು. ಪಾದದಿಂದ ಹಣೆಯನ್ನು ಮುಟ್ಟಿ ಆಶೀರ್ವಾದ ಮಾಡುವ ವಿಶೇಷ ಸಂಪ್ರದಾಯ ಇವರಲ್ಲಿ ಇತ್ತು.
ದೇವಾರ್ಪಿತವಾದ ಡೈರಿಯನ್ನು ನೋಡಿಕೊಳ್ಳುವ ಧರ್ಮಗುರು ತಲೆಕೂದಲು ಕತ್ತರಿಸುತ್ತಿರಲಿಲ್ಲ. ನದಿ ಅಥವಾ ನಾಲೆಯನ್ನು ಸೇತುವೆ ಮೂಲಕ ದಾಟುವಂತಿರಲಿಲ್ಲ. ಕುಟುಂಬದಲ್ಲಿ ಅಥವಾ ತನ್ನ ಗುಂಪಿನಲ್ಲಿ ಯಾರಾದರೂ ಸತ್ತರೂ ಅಂತ್ಯಕ್ರಿಯೆಯಲ್ಲಿ ಈತ ಪಾಲ್ಗೊಳ್ಳಲು ನಿಬಂರ್ಧ ಇತ್ತು. ಒಂದು ವೇಳೆ ಹೋಗಲೇಬೇಕು ಎಂದಾದರೆ ತನ್ನ ಹುದ್ದೆಯನ್ನು ಗುರು ತ್ಯಜಿಸಬೇಕಿತ್ತು. ಒಟ್ಟಾರೆ ಎಲ್ಲ ರೀತಿ ರಿವಾಜುಗಳನ್ನು ಈ ಧರ್ಮಗುರು ಪಾಲನೆ ಮಾಡಲೇಬೇಕಿತ್ತು.

ಅಧುನೀಕರಣದ ಪ್ರಭಾವ:
ಆದರೆ, ಪುರಾತನವಾದ ಶಾಸ್ತ್ರ, ಸಂಪ್ರದಾಯಗಳು ಈಗ ಆಷ್ಟಾಗಿ ಪಾಲನೆಯಾಗುತ್ತಿಲ್ಲ. ಕೆಲವೆಡೆ ಆ ಕುರಿತಾಗಿ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಎಲ್ಲವೂ ಅಧುನೀಕರಣದ ಪ್ರಭಾವವಲ್ಲದೆ ಮತ್ತೇನೂ ಅಲ್ಲ ಎನ್ನುತ್ತಾರೆ ಸಮುದಾಯದ ಹಿರಿಯರು. ತೋಡರು ಈಗ ಮಾರಿಯಮ್ಮ, ಅಯ್ಯಪ್ಪ, ಮುರುಗ ಮತ್ತು ನಂಜುಂಡೇಶ್ವರನನ್ನು ಪೂಜಿಸುತ್ತಾರೆ. ಜಾನಪದದಲ್ಲಿ ಇವರ ಶ್ರೀಮಂತಿಕೆ ಆದ್ಭುತ. ಜಾನಪದ ಕಥೆ, ಕಾವ್ಯಗಳನ್ನು ಹಾಡಿ ರಂಜಿಸುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಹಬ್ಬ ಹರಿದಿನ ಮತ್ತು ವಿಶೇಷ ಸಂದರ್ಭಗಳಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಹಾಡಿ ಕುಣಿಯುತ್ತಾರೆ.
ಎಂಬ್ರಾಯಿಡರಿ ತೋಡರ ವಿಶೇಷ ಕಲೆ. ಬಿಳಿಯ ಬಟ್ಟೆಯ ಮೇಲೆ ಆಕರ್ಷಕವಾದ ಚಿತ್ತಾರಗಳನ್ನು ಬಿಡಿಸುವುದರಲ್ಲಿ ಇವರದ್ದು ಎತ್ತಿದ ಕೈ. ತೋಡರ ಜನಸಂಖ್ಯೆ ಹೆಚ್ಚಾಗೇನೂ ಇಲ್ಲ. ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿಯೂ ಪ್ರಗತಿ ಸಾಧಿಸಿಲ್ಲ. ಸಮುದಾಯದ ಜನ ಬುಡಕಟ್ಟಿನವರಾದರೂ ನೋಡಲು ಆಕರ್ಷಕವಾಗಿದ್ದರು, ದೇಹದಾರ್ಢ್ಯ, ಬಣ್ಣ ಎಲ್ಲದರಲ್ಲೂ ಗಮನ ಸೆಳೆಯುವಂತಿದ್ದರು. ಉದ್ದನೆಯ ಕೂದಲು ಅವರ ಟ್ರೇಡ್ ಮಾರ್ಕ್ ಎಂಬಂತೆ ಇತ್ತು ಎಂದು ಅಧ್ಯಯನಕಾರರು ವಿವರಿಸುತ್ತಾರೆ.

- ಕೆ.ವಿ. ಪ್ರಭಾಕರ 
 prabhukolar@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com