ನಮ್ಮ ಕನ್ನಡ ಸಂಸ್ಕೃತಿಗೆ, ಭಾಷೆಗೆ, ಸಾಹಿತ್ಯಕ್ಕೆ, ನೆಲ-ಜಲಕ್ಕೆ ಅಥವಾ ಜಾತ್ಯತೀತತೆಗೆ ಟಿಪ್ಪುವಿನ ಕೊಡುಗೆಯೇನು ಮುಖ್ಯಮಂತ್ರಿಗಳೇ?

ನಮ್ಮ ಕನ್ನಡ ಸಂಸ್ಕೃತಿಗೆ, ಭಾಷೆಗೆ, ಸಾಹಿತ್ಯಕ್ಕೆ ಟಿಪ್ಪುವಿನ ಕೊಡುಗೆಯೇನು?
ನಮ್ಮ ಕನ್ನಡ ಸಂಸ್ಕೃತಿಗೆ, ಭಾಷೆಗೆ, ಸಾಹಿತ್ಯಕ್ಕೆ, ನೆಲ-ಜಲಕ್ಕೆ ಅಥವಾ ಜಾತ್ಯತೀತತೆಗೆ ಟಿಪ್ಪುವಿನ ಕೊಡುಗೆಯೇನು ಮುಖ್ಯಮಂತ್ರಿಗಳೇ?

ಏಕೆ ಇಂಥ ಪ್ರಶ್ನೆ ಕೇಳಬೇಕಾಗಿದೆಯೆಂದರೆ...
1. ಕೊಡಗು: ಕದನ ಕಲಿಗಳ ನಾಡು
2. 18ನೇ ಶತಮಾನದಲ್ಲಿ ಮೈಸೂರು ದಸರಾ ವೈಭವ
3. ಸಾವಿರ ಕಂಬದ ಬಸದಿ
ಇಂಥ ಮೂರು ವಿಷಯಗಳು ಕರ್ನಾಟಕ ಸರ್ಕಾರದ ಮುಂದಿದ್ದವು.  ಗಣರಾಜ್ಯೋತ್ಸವದ ಪರೇಡ್‌ಗೆ ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದಿತ್ತು.
ಆದರೆ...
ಕರ್ನಾಟಕದ ವೀರಪುತ್ರರಾದ ಕೊಡವರ ಸೇವೆಯನ್ನು ಸಾರುವ, ನಮ್ಮ ಪರಂಪರೆಯ ಭಾಗವಾಗಿರುವ ದಸರಾದ ವೈಭವವನ್ನು ಪರಿಚಯಿಸುವ, ಸೌಮ್ಯ ಸ್ವಭಾವದ ಜೈನರು ನಮ್ಮ ರಾಜ್ಯಕ್ಕೆ ಕೊಟ್ಟಿರುವ ಕೊಡುಗೆಗೆ ಮನ್ನಣೆ ಕೊಡುವ ಇಂಥ ಅಂಶಗಳನ್ನು ಬಿಟ್ಟು ನಮ್ಮ ಜನರ ಪ್ರಾಣ ಹಿಂಡಿದ, ಭಾಷೆಯನ್ನು ಕಗ್ಗೊಲೆಗೈಯ್ಯಲು ಪ್ರಯತ್ನಿಸಿದ, ಈ ದೇಶದ ಮೇಲೆ ಜಿಹಾದ್ ಸಾರೋಣ ಎಂದು ಖಲೀಫನಿಗೆ ಕರೆಕೊಟ್ಟ, ಬನ್ನಿ ಭಾರತವನ್ನು ಹಂಚಿಕೊಳ್ಳೋಣ ಎಂದು ಫ್ರೆಂಚರಿಗೆ ಪತ್ರ ಬರೆದ ಟಿಪ್ಪು ಸುಲ್ತಾನನ ಸ್ತಬ್ಧಚಿತ್ರವನ್ನು ಗಣರಾಜ್ಯೋತ್ಸವದ ದಿನ ಪರೇಡ್ ಮಾಡುವ ದರ್ದು, ಜರೂರತ್ತು ಏನಿತ್ತು ಹೇಳಿ? ಈ ಸರ್ಕಾರಕ್ಕೆ ಜನವರಿ 7ರಂದು ಕೊಡಗಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಟಿಪ್ಪು ಪ್ರಿಯ ಕೋಡಂಗಿಗಳ ವಿರುದ್ಧ ನಡೆದ ಪ್ರತಿಭಟನೆ ಗೊತ್ತಿದ್ದರೂ "ಕೊಡಗು: ಕದನ ಕಲಿಗಳ ನಾಡು" ಎಂಬ ವಿಷಯ ಬಿಟ್ಟು ಟಿಪ್ಪುವನ್ನೇ ಆಯ್ಕೆ ಮಾಡಿದ್ದು ಈ ದೇಶ ಕಾಯುವ ಕೆಲಸದಲ್ಲಿ ಕನ್ನಡಿಗರಲ್ಲೇ ಮುಂಚೂಣಿಯಲ್ಲಿರುವ ಕೊಡವರಿಗೆ ಸರ್ಕಾರ ಮಾಡಿದ ಅವಮಾನವಲ್ಲದೆ ಮತ್ತೇನಿದು?
ಈ ದೇಶಕ್ಕೆ ಸ್ವಂತ ಸಂವಿಧಾನ, ನೆಲ-ಜಲದ ಕಾನೂನು ವ್ಯವಸ್ಥೆ ಜಾರಿಗೆ ಬಂದ ಪ್ರತೀಕವಾದ ಗಣರಾಜ್ಯೋತ್ಸವ ದಿನದಂದು ಈ ಟಿಪ್ಪು ಸುಲ್ತಾನನ ಸ್ತಬ್ಧಚಿತ್ರವನ್ನು ರೂಪಿಸಿ, ಪ್ರದರ್ಶಿಸಲು ಆತ ಕರ್ನಾಟಕದ ಸುಪುತ್ರನೇನು? ಒಬ್ಬ ಸಾಮ್ರಾಜ್ಯಶಾಹಿಯಾಗಿ, ರಾಜನಾಗಿ ಎದುರಾಳಿ ಪ್ರಾಂತಗಳ ಸೈನಿಕರನ್ನು, ಜನರನ್ನು ಸಾಮ್ರಾಜ್ಯ ವಿಸ್ತಾರ ಹಾಗೂ ಯುದ್ಧದ ಸಲುವಾಗಿ ಕೊಂದಿದ್ದರೆ ಯಾರೂ ತಪ್ಪೆನ್ನಲು ಸಾಧ್ಯವಿರುತ್ತಿರಲಿಲ್ಲ. ಆದರೆ ತನ್ನ ಮತಾಂಧತೆಯಿಂದ ಹಿಂದುಗಳನ್ನು ಹೆಕ್ಕಿ ಕೊಂದವನ ಖಡ್ಗವನ್ನು ಸ್ತಬ್ಧಚಿತ್ರದಲ್ಲಿ ವೈಭವೀಕರಿಸಿದ ಉದ್ದೇಶವೇನು? ಜನವರಿ 26ರಂದು ಟಿಪ್ಪು ಸುಲ್ತಾನನ ಸ್ತಬ್ಧ ಚಿತ್ರ ಕಂಡು ಹೌಹಾರಿದ ಜನ, ಹಾಲಿ ಕರ್ನಾಟಕ ಸರ್ಕಾರದ ದರಿದ್ರ ಮನಸ್ಥಿತಿಯ ವಿರುದ್ಧ ಸತತ ಎರಡು ದಿನ ಟ್ವಿಟ್ಟರ್‌ನಲ್ಲಿ ಥೂ, ಛೀ, ಎಂದು ಉಗಿದರು. ಕರ್ನಾಟಕ ಕೆಟ್ಟ ಕಾರಣಕ್ಕಾಗಿ ಸುದ್ದಿಯಾಗುವಂತಾಯಿತು. "ಕರ್ನಾಟಕದ ಕಾಂಗ್ರೆಸ್ ಸರ್ಕಾರ ಟಿಪ್ಪು ಸುಲ್ತಾನನ ಸ್ತಬ್ಧಚಿತ್ರವನ್ನು ಗಣರಾಜ್ಯೋತ್ಸವದ ಪರೇಡ್‌ಗೆ ಕಳುಹಿಸಿತ್ತಲ್ಲಾ, ಒಂದು ವೇಳೆ ತಮಿಳುನಾಡು ಅಥವಾ ಪಶ್ಚಿಮ ಬಂಗಾಳ ಸರ್ಕಾರ ರಾಬರ್ಟ್ ಕ್ಲೈವ್‌ನ ಪ್ರತಿಕೃತಿ ಕಳುಹಿಸಿದ್ದರೆ ಕೇಂದ್ರ ಸರ್ಕಾರ ಒಪ್ಪಿಕೊಳ್ಳುತ್ತಿತ್ತೇ?" ಎಂದು ಎ.ಕೆ. ನರೇಂದ್ರನಾಥ್ ಎಂಬವರು ತಮ್ಮ ಹತಾಶೆ ವ್ಯಕ್ತಪಡಿಸಿದರೆ, "ಮುಂದಿನ ಗಣರಾಜ್ಯೋತ್ಸವಕ್ಕೆ ದಿಲ್ಲಿಯ ಆಪ್-ಕಾಂಗ್ರೆಸ್ ಸರ್ಕಾರ ಮತ್ತೊಬ್ಬ ಕ್ರೂರಿ ಔರಂಗಜೇಬನ ಸ್ತಬ್ಧಚಿತ್ರ ಕಳುಹಿಸಿಕೊಡಬಹುದು. ನಾಚಿಕೆಗೇಡು" ಎಂದು ಹರ್ಷವರ್ಧನ್ ಶರ್ಮಾ ಎನ್ನುವವರು ನೋವು ತೋಡಿಕೊಂಡರು. ಹಾಗಾದರೆ ಆಳುವ ಸರ್ಕಾರ ಜನರ ಭಾವನೆಗಳನ್ನೇ ಅರ್ಥಮಾಡಿಕೊಳ್ಳದಷ್ಟು ಸಂವೇದನಾರಹಿತವಾಗಿಬಿಟ್ಟಿದೆಯೇ?
ಇಷ್ಟಕ್ಕೂ ಟಿಪ್ಪು ಬಗ್ಗೆ ಕನ್ನಡಿಗರು ಹೆಮ್ಮೆಪಡುವಂಥದ್ದೇನಿದೆ ಹೇಳಿ? ನಮ್ಮ ಕನ್ನಡ ಸಂಸ್ಕೃತಿಗೆ, ಭಾಷೆಗೆ, ಸಾಹಿತ್ಯಕ್ಕೆ, ನೆಲ-ಜಲಕ್ಕೆ ಅಥವಾ ಜಾತ್ಯತೀತತೆಗೆ ಟಿಪ್ಪುವಿನ ಕೊಡುಗೆಯೇನು ಹೇಳಿ ಮುಖ್ಯಮಂತ್ರಿಗಳೇ?
ಹೈದರಾಲಿಯ ವ್ಯಕ್ತಿತ್ವಕ್ಕೂ ಟಿಪ್ಪುನ ವ್ಯಕ್ತಿತ್ವಕ್ಕೂ ಅಜಗಜಾಂತರವಿತ್ತು. ಹೈದರಾಲಿಗೆ ಹೆಂಗಸರ ಶೋಕಿಯಿತ್ತು. ಆದರೆ ಹನ್ನೆರಡು ಮಕ್ಕಳನ್ನು ಹೊಂದಿದ್ದರೂ ಟಿಪ್ಪುಗೆ ಹೆಂಗಸರ ಬಗ್ಗೆ ವಿಪರೀತ ವ್ಯಾಮೋಹವಿರಲಿಲ್ಲ. ಹೈದರಾಲಿ ಮೋಜು ಮಸ್ತಿಗಳಲ್ಲಿ ಪಾಲ್ಗೊಳ್ಳುತ್ತಿದ್ದ. ಆದರೆ ಟಿಪ್ಪು ವಿರಾಮದ ವೇಳೆಯಲ್ಲಿ ಕುರಾನ್ ಪಠಣ ಮುಂತಾದ ಧಾರ್ಮಿಕ ಕ್ರಿಯೆಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದ. ಇಸ್ಲಾಂ ಧರ್ಮದೆಡೆಗೆ ತೀವ್ರ ಒಲವು ಹೊಂದಿದ್ದ ಆತ ರಾಜ್ಯವನ್ನು "ಖುದಾದಾದ್ ಸರ್ಕಾರ್‌" (ದೇವರು ದಯಪಾಲಿಸಿದ ರಾಜ್ಯ) ಅಂತ ಕರೆದುಕೊಳ್ಳಲಾರಂಭಿಸಿದ. ತನ್ನ ಸೈನ್ಯವನ್ನು 'ಪವಿತ್ರ ಶಿಬಿರ' ಅಂತನ್ನುತ್ತಿದ್ದ. 'ದೇವರ ಸರ್ಕಾರದ ಹುಲಿ' , 'ಹೈದರೀ ಆಡಳಿತ' ಎಂದೆಲ್ಲಾ ತನ್ನ ಆಡಳಿತಕ್ಕೆ ತಾನೇ ಬಾದಶಾಹ ಎಂಬ ಬಿರುದು ಕೊಟ್ಟುಕೊಂಡ ನಂತರ ಟಿಪ್ಪು ಅತಿಯಾದ ಹೊಗಳಿಕೆಯನ್ನು ಇಷ್ಟಪಡಲಾರಂಭಿಸಿದ. ಅವನಿಗೆ ವಿಪರೀತ ಎನ್ನುವಂಥ ಆತ್ಮರತಿಯಿತ್ತು. ಆ ಕಾಲದಲ್ಲಿ ದಕ್ಷಿಣ ಭಾರತದ ಎಲ್ಲಾ ನವಾಬರು, ನಿಜಾಮ ಮತ್ತು ಇವರೆಲ್ಲರ ಕೈಗೆಳಗಿನ ಇತರ ಸಣ್ಣ ಪುಟ್ಟ ಪಾಳೇಗಾರರು ಮೊಘಲರ ಆಡಳಿತಕ್ಕೊಳಪಟ್ಟವರೇ ಆಗಿದ್ದರು. ಭಾರತದ ಬಹುತೇಕ ಎಲ್ಲಾ ಮಸೀದಿಗಳಲ್ಲೂ ನಿತ್ಯದ ಪ್ರಾರ್ಥನೆ 'ಕುತ್‌ಬಾ' ಮೊಘಲ್ ಸಾಮ್ರಾಟನ ಹೆಸರಿನಲ್ಲಾಗುತ್ತಿತ್ತು. ಆದರೆ ಟಿಪ್ಪು ತನ್ನ ವಶವಿದ್ದ ಪ್ರದೇಶಗಳ ಮಸೀದಿಗಳಲ್ಲೆಲ್ಲಾ ತನ್ನ ಹೆಸರಿನಲ್ಲೇ 'ಕುತ್‌ಬಾ' ಮಾಡಬೇಕೆಂದು ಆಜ್ಞೆ ಹೊರಡಿಸಿದ. ಇಸ್ಲಾಂ ಧರ್ಮದ ಅನುಸಾರವಾಗಿಯೇ ತನ್ನ ರಾಜ್ಯದ ಆಡಳಿತ ನಡೆಯಬೇಕೆಂಬ ಉತ್ಕಟ ಇಚ್ಛೆಯಿತ್ತು. ಅದಕ್ಕನುಸಾರವಾಗಿಯೇ ಆತ ತನ್ನ ವಶವಿದ್ದ ಪ್ರದೇಶಗಳ ಹೆಸರನ್ನು ಬದಲಿಸುವ ಕೆಲಸಕ್ಕೆ ಕೈ ಹಾಕಿದ. ಕರಾವಳಿ ಪ್ರದೇಶಕ್ಕೆ ಆತ 'ಯಾಮ್‌ಸುಬಾ' ಅಂತ ಹೆಸರಿಟ್ಟ. ದಟ್ಟಕಾಡುಗಳಿಂದ ಕೂಡಿದ ಮಲೆನಾಡು ಪ್ರದೇಶಕ್ಕೆ'ತರನ್‌ಸುಬಾ' ಅಂತ ಕರೆದ. ಬಯಲು ಸೀಮೆ 'ಘಬ್ರಾ ಸುಬಾ' ಆಯಿತು. ಸರ್ಕಾರಿ ದಾಖಲೆ, ಕಡತಗಳಲ್ಲಿ ಆಡಳಿತದ ವ್ಯವಹಾರಗಳಲ್ಲಿ ಇವೇ ಹೆಸರನ್ನು ಬಳಕೆಗೆ ತಂದ. ದೂರವನ್ನು ಅಳತೆ ಮಾಡುವ ವಿಧಾನದಲ್ಲಿಯೂ ಟಿಪ್ಪು ಧರ್ಮವನ್ನು ತಂದ. ಆ ಕಾಲದಲ್ಲಿ ಭಾರತದಲ್ಲಿ ಚಾಲ್ತಿಯಲ್ಲಿದ್ದ 'ಕೋಸ್‌' (ಓ್ಟಡ)   ಎಂಬ ಅಳತೆ ಸಾಮಾನ್ಯ ಇಂಗ್ಲಿಷ್ ಕ್ರಮದಲ್ಲಿ ಎರಡು ಮೈಲಿಯಷ್ಟು ದೂರವಾಗುತ್ತಿತ್ತು. ಟಿಪ್ಪು ಈ ಕೋಸ್‌ಗಳ ಅಳತೆಯನ್ನು ಬದಲಿಸಿದ. ಕೈಯ ಒಂದು ಹೆಬ್ಬೆರಳು ಎಷ್ಟು ಅಗಲವಾಗಿರುತ್ತದೋ ಅದಕ್ಕೆ ಸರಿಯಾಗಿ ಹೊಸ ಅಳತೆ ನಿಗದಿಯಾಯಿತು. 24 ಹೆಬ್ಬೆರಳುಗಳ ಅಗಲ ಎಷ್ಟಿರುತ್ತದೋ ಅದರ ಎರಡರಷ್ಟು ಉದ್ದ ಒಂದು ಘಟಕವಾಯಿತು. ಇಸ್ಲಾಂ ಧಾರ್ಮಿಕ 'ಕಲ್ಹಾಹ್‌' ದಲ್ಲಿ ಇಪ್ಪತ್ನಾಲ್ಕು ಅಕ್ಷರಗಳಿವೆ ಎಂಬುದೇ ಇದಕ್ಕೆ ಆಧಾರ. ಈ ಹೊಸ ಅಳತೆಯ ಪ್ರಕಾರ ಒಂದು ಕೋಸ್ ಅಂದರೆ ಎರಡು ಮುಕ್ಕಾಲು ಮೈಲಿಯಷ್ಟಾಯಿತು. ತೂಕ ಮತ್ತು ಅಳತೆಗಳ ಹೆಸರನ್ನೂ ಬದಲಿಸಲಾಯಿತು.
ಇದು ಏನನ್ನು ಸೂಚಿಸುತ್ತದೆ ನೀವೇ ಹೇಳಿ? ಕಟ್ಟಾ ಧರ್ಮಾಂಧ ಮನಸ್ಥಿತಿಯನ್ನೇ ಅಲ್ಲವೇ?
ಇಂಥ 'ಅಂಧಾ ದರ್ಬಾರ್‌'ಗೆ ಇರುವ ಸಾಕ್ಷ್ಯ, ಪುರಾವೆಗಳು ಅಸಂಖ್ಯ. ದಿನಗಳಿಗೆ, ತಿಂಗಳುಗಳಿಗೆ, ವರ್ಷಗಳಿಗೆ ಅರೇಬಿಕ್ ಹೆಸರು ನೀಡಿದ ಟಿಪ್ಪು, ವರ್ಷಗಳ ಸಂಖ್ಯೆಯನ್ನು ಬಲಗಡೆಯಿಂದ ಎಡಗಡೆಗೆ ಓದುವ ಪದ್ಧತಿಯನ್ನು ಚಾಲ್ತಿಗೆ ತಂದ. ಇನ್ನು ಆತ ತನ್ನದೇ ಆದ ನಾಣ್ಯಗಳನ್ನು ಚಲಾವಣೆಗೆ ತಂದ. ಇವುಗಳ ಪೈಕಿ ಚಿನ್ನದ ಮತ್ತು ಬೆಳ್ಳಿಯ ನಾಣ್ಯಗಳಿಗೆಲ್ಲಾ ಮುಸ್ಲಿಂ ಸಂತರ ಹೆಸರನ್ನಿಟ್ಟ. ತಾಮ್ರದ ನಾಣ್ಯಗಳಿಗೆ ಅರೇಬಿಕ್ ಮತ್ತು ಪರ್ಷಿಯನ್ ಭಾಷೆಯಲ್ಲಿ ನಕ್ಷತ್ರಗಳ ಹೆಸರನ್ನಿಟ್ಟ. ಆಗಿನ ಕಾಲದಲ್ಲಿ ಚಲಾವಣೆಯಲ್ಲಿದ್ದ 'ಪಗೋಡ' ಎಂಬ ಹೆಸರಿನ ನಾಣ್ಯಗಳಿಗೆ 'ಅಹ್ಮದಿ' ಅಂತ ಹೆಸರಿಟ್ಟ. ಇದು ಪ್ರವಾದಿಯವರ ಅನೇಕ ಹೆಸರುಗಳಲ್ಲೊಂದು.
ಎರಡು ಪಗೋಡ ಬೆಲೆ ಇರುವ ನಾಣ್ಯಕ್ಕೆ 'ಝೆಹ್ರಾ', ಎರಡು ಪೈಸೆ ನಾಣ್ಯಕ್ಕೆ 'ಔತ್ಮನೀ'... ಇತ್ಯಾದಿ ಹೊಸ ಹೆಸರುಗಳನ್ನಿಡುತ್ತಾ ಹೋದ. ಕೆಲವೊಮ್ಮೆ ತಾನೇ ಇಟ್ಟ ಹೆಸರುಗಳನ್ನು ಮತ್ತೆ ಬದಲಾಯಿಸಿ ಹೊಸ ಹೆಸರನ್ನಿಟ್ಟ. 'ಫಾರೂಕಿ', 'ಜಾಫರ್‌' ಇತ್ಯಾದಿ ಇಟ್ಟ ಹೆಸರುಗಳನ್ನು ಮತ್ತೆ ಬದಲಾಯಿಸಿ ಹೊಸ ಹೆಸರಿಟ್ಟ. 'ಹೈದರಿ' ಎಂಬ ಹೆಸರಿನ ರೂಪಾಯಿ ಇತ್ತು.'ಇಮಾಮಿ'ಎಂಬ ನಾಣ್ಯವೂ ಇತ್ತು.
ಅಬ್ಚುದ್, ಹೌಂಝ್, ಹಟ್ಟಿ ಮುಂತಾದ ಅಳತೆಯ ಪದ್ಧತಿಗಳು ಟಿಪ್ಪುಗಿಂತ ಬಹಳ ಹಿಂದೆ ಜಾರಿಯಲ್ಲಿದ್ದವು. ಟಿಪ್ಪು ಅಧಿಕಾರಕ್ಕೆ ಬಂದ ನಂತರ ಈ ಅಳತೆ ಪದ್ಧತಿಗಳನ್ನು ಬದಲಿಸಿ, ಹಳೇ ಹೆಸರುಗಳ ಜಾಗಕ್ಕೆ ಹೊಸ ಹೆಸರುಗಳನ್ನಿಟ್ಟ. ಈ ಹೆಸರುಗಳೆಲ್ಲವೂ ಇಸ್ಲಾಮೀ ಹೆಸರುಗಳಾಗಿದ್ದವು. ಅಹ್ಮದೀ, ಬಿಹಾರೀ, ಜುಲ್ವಾ, ದರೈ, ಹಾಷಿಮಿ ಇತ್ಯಾದಿ ಹೊಸ ಹೆಸರುಗಳಿಂದಲೇ ಅಳತೆಗಳನ್ನು ಪ್ರಾರಂಭಿಸಲಾಯಿತು. ಒಂದೊಂದು ವರ್ಷಕ್ಕೂ ಒಂದೊಂದು ಹೆಸರಿಟ್ಟಿದ್ದ ಟಿಪ್ಪು. 'ಅಹಂದ್‌', 'ಅಬ್‌', 'ಜಾ' 'ಬಾಬ್‌' ಮುಂತಾಗಿ ಹೆಸರುಗಳನ್ನಿಡಲಾಯಿತು. ಹೊಸ ಪ್ರದೇಶಗಳು ಕೈವಶವಾದ ಬಳಿಕ ಹಳೇ ಹೆಸರುಗಳನ್ನು ಕಿತ್ತು ಹಾಕಿ ಹೊಸ ಹೆಸರುಗಳನ್ನಿಡಲಾರಂಭಿಸಿದ.
ಮೈಸೂರು-ನಝರಾಬಾದ್, ಮೈಸೂರು ಅಷ್ಟಗ್ರಾಮ-ಇಸಾರ್ (ದಕ್ಷಿಣ ಭಾಗ), ಪಟ್ಟಣ ಅಷ್ಟಗ್ರಾಮ-ಐಮುನ್ (ಉತ್ತರ ಭಾಗ), ಮಂಗಳೂರು-ಜಮಾಲಾಬಾದ್, ಧಾರವಾಡ-ಖುರ್ಷಿದ್-ಸವಾದ್, ಹಾಸನ- ಖಯೀಮಾಬಾದ್, ಹೊನ್ನಾವರ-ಸದ್ದೈಹಾಸ್‌ಗಢ, ಕುಂದಾಪುರ-ನಸ್ರುಲ್ಲಾಬಾದ್, ಬಳ್ಳಾಪುರ-ಅಝ್ಮತ್‌ಶುಕೋ, ಗುರ್ರಂಕೊಂಡ-ಜಾಫರಾಬಾದ್, (ಗುತ್ತಿ) ಗೂಟಿ-ಫೈಝ್-ಹಿಸ್ಸಾರ್, ಮೊಳಕಾಲ್ಮೂರು-ಮುಹಮ್ಮದಾಬಾದ್, ಕೋಳಿಕ್ಕೋಡ್ (ಕ್ಯಾಲಿಕಟ್)-ಇಸ್ಲಾಮಾಬಾದ್, ದಿಂಡಿಗಲ್- ಕಾಲಿಕಾಬಾದ್, ಮಡಿಕೇರಿ-ಜಫಾರಾಬಾದ್, ಬಿದನೂರು-ನಗರ್(ಹೈದರ್ ನಗರ್), ಸದಾಶಿವಗಢ-ಮಝೀರಾಬಾದ್, ಸತ್ಯಮಂಗಲ- ಸಲಾಮಾಬಾದ್, ಪವನ್‌ಗಢ-ಹಫೀಝಾಬಾದ್, ದೇವನಹಳ್ಳಿ-ಯುಸೂಫಾಬಾದ್, ಕೃಷ್ಣಗಿರಿ-ಫುಲ್ಕ್-ಉಲ್-ಅಝಮ್, ರತ್ನಗಿರಿ-ಮುಸ್ತಾಫಾಬಾದ್, ಚಕ್ರಗಿರಿ-ಅಸೀಫಾಬಾದ್, ನಂದಿದುರ್ಗ-ಗುರ್ದೂಮ್ ಶುಖೋ, ಚಿತ್ರದುರ್ಗ-ಫರೋಕ್‌ಯಾಬ್ ಹಿಸಾರ್, ಮಹರಾಯದುರ್ಗ-ಅಸಬರಾಬಾದ್, ಕವಲೇದುರ್ಗ-ಇಸ್ಕೀಝ್ ಘರ್, ಕಬ್ಬಲೇದುರ್ಗ-ಜಾಫೋರಾಬಾದ್, ದೇವರಾಯನದುರ್ಗ-ಬಲ್ಲಾಶುಖೋ, ಬೀರನದುರ್ಗ-ಅಝೀಮಾಬಾದ್, ಮೇಕೇರಿದುರ್ಗ-ಫುಲ್ಲೋಕ್ ಶುಕೋ, ಹೊಳೆಯೂರುದುರ್ಗ-ಯೀಫರಾಬಾದ್, ಶಿರಾ-ರುಸ್ತುಮಾಬಾದ್, ಬಸ್ರೂರು-ವಝೀರಾಬಾದ್, ಧನನಾಯಕನಕೋಟೆ-ಹುಸೇನ್‌ಬಾದ್, ಅಂಡಿಯೂರು-ಅಹಮದಾಬಾದ್, ಬೇಕಲ್-ಝಮುಟಾಬಾದ್, ಸಕಲೇಶಪುರ-ಮಂಜ್ರಾಬಾದ್, ಚಂದ್ರಗುತ್ತಿ-ಶೂಕುರಾಬಾದ್.
ಹೀಗೆ ಉದ್ದಕ್ಕೂ ಮುಸ್ಲಿಂ ಹೆಸರುಗಳನ್ನಿಡುತ್ತಾ ಹೋದ ಟಿಪ್ಪು, ಕೆಲವೊಂದು ಪ್ರದೇಶಗಳಿಗೆ ಒಂದೇ ಹೆಸರಿಟ್ಟು ಗೊಂದಲ ಹುಟ್ಟು ಹಾಕಿದ. 1799ರಲ್ಲಿ ಟಿಪ್ಪು ಪತನದ ಬಳಿಕ ಆತ ಆಳುತ್ತಿದ್ದ ಪ್ರದೇಶಗಳ ಕಂದಾಯ ಇಲಾಖೆಯನ್ನು ಸರಿಪಡಿಸಬೇಕಾದರೆ ಆಂಗ್ಲ ಅಧಿಕಾರಿಗಳಿಗೆ ಸಾಕುಸಾಕಾಯಿತು. ಆ ಮಟ್ಟದ ಅಧ್ವಾನ ಮಾಡಿಬಿಟ್ಟಿದ್ದ ಟಿಪ್ಪು. ಟಿಪ್ಪು ಸತ್ತು ಮೈಸೂರು ಸಂಸ್ಥಾನ ಸ್ಥಾಪನೆಯಾದ ಮೇಲೆ ಕಂದಾಯ ಇಲಾಖೆಯ ಸೂಪರಿಂಟೆಂಡೆಂಟರಾಗಿ ಅಧಿಕಾರ ವಹಿಸಿಕೊಂಡ ಬ್ರಿಟಿಷ್ ಅಧಿಕಾರಿ ವಿಲಿಯಂ ಮೆಕ್ ಲಿಯೋಡ್, ಟಿಪ್ಪುವಿನ ಈ ಇಸ್ಲಾಮಿ ಅಂಧಾ ದರ್ಬಾರಿನ ಹಲವು ಮುಖಗಳನ್ನು ತೆರೆದಿಟ್ಟರು. ಕಂದಾಯ ಇಲಾಖೆಗಳಲ್ಲಿ ಟಿಪ್ಪು ತನ್ನ ಇಸ್ಲಾಂ ಪ್ರೇಮದಿಂದ ಮಾಡಿದ ಯಡವಟ್ಟುಗಳನ್ನು ಮೆಕ್‌ಲಿಯೋಡ್ ವಿವರವಾಗಿ ದಾಖಲಿಸಿದ್ದಾರೆ.
ಪ್ರತಿಯೊಂದು ಪ್ರಾಂತ್ಯದ, ಜಿಲ್ಲೆಯ ಕಂದಾಯ ಅಧಿಕಾರಿಗಳ ಹೆಸರು ಶೇರ್‌ಖಾನ್, ಶೇಖ್‌ಅಲಿ, ಮುಹಮ್ಮದ್ ಸೈಯದ್, ಮೀರ್ ಹುಸೈನ್, ಸಯ್ಯದ್ ಪೀರ್, ಅಬ್ದುಲ್ ಕರೀಮ್ ಇದೇ ರೀತಿ ಇತ್ತು. ಇಷ್ಟೂ ಕಂದಾಯ ಅಧಿಕಾರಿಗಳ ಲಿಸ್ಟಿನಲ್ಲಿ ಒಂದೇ ಒಂದು ಹಿಂದು ಹೆಸರಾಗಲಿ, ಮುಸ್ಲಿಮೇತರ ಹೆಸರಾಗಲಿ ಇರಲೇ ಇಲ್ಲ. ಒಟ್ಟು ಇಪ್ಪತ್ತು ಜಿಲ್ಲೆಗಳನ್ನು ಸಾವಿರದ ಎಪ್ಪತೈದು ಅಮಲ್ದಾರಿಗಳನ್ನಾಗಿ ವಿಂಗಡಿಸಿದ್ದ ಟಿಪ್ಪು. ಇಷ್ಟೂ ಅಮಲ್ದಾರಿಗಳೂ ಮುಸ್ಲಿಮರೇ ಆಗಿದ್ದರು. ಹೀಗೆ ಟಿಪ್ಪುವಿನ ಧರ್ಮಾಂಧತೆಗೆ ರಾಜ್ಯದ ಆಡಳಿತ ವ್ಯವಸ್ಥೆಯೂ ಬಲಿಯಾಯಿತು.
ಇದೆಲ್ಲಾ ಏನನ್ನು ತೋರಿಸುತ್ತದೆ ಮುಖ್ಯಮಂತ್ರಿಯವರೇ?
ಕನ್ನಡದ ಹೆಸರುಗಳನ್ನು ಬದಲಾಯಿಸಿದ, ಆಡಳಿತದಲ್ಲಿ ಕನ್ನಡದ ನಾಶಕ್ಕೆ ನಿಂತ ವ್ಯಕ್ತಿ ನಿಮ್ಮ ಕಾಂಗ್ರೆಸ್ಸಿಗರ ಕಣ್ಣಿಗೆ ಅದ್ಹೇಗೆ ಕರ್ನಾಟಕದ ಹೆಮ್ಮೆಯ ಪುತ್ರನಂತೆ ಕಾಣುತ್ತಿದ್ದಾನೆ? ಊರುಗಳ ಹೆಸರನ್ನೇ ಸಹಿಸದ ವ್ಯಕ್ತಿ ಅನ್ಯ ಧರ್ಮೀಯರನ್ನು ಸಹಿಸಿಯಾನೇ? ಇಂಥ ವ್ಯಕ್ತಿಯ ಸ್ತಬ್ಧಚಿತ್ರವನ್ನು ಗಣರಾಜ್ಯೋತ್ಸವದ ಪರೇಡ್‌ಗೆ ಆಯ್ಕೆ ಮಾಡಬೇಕಾದ ಅನಿವಾರ್ಯತೆ ನಿಮಗೇನಿತ್ತು? ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುವೆ ಎಂದಿದ್ದ ನಿಮ್ಮ ಮಾಜಿ ಗುರು ದೇವೇಗೌಡರಂತೆ ಓಟಿಗಾಗಿ ಏನನ್ನೂ ಮಾಡಲು ನೀವೂ ಸಿದ್ಧರಾಗಿಬಿಟ್ಟಿರಾ ಸಿದ್ದರಾಮಯ್ಯನವರೇ?! ಇಲ್ಲ ಎನ್ನುವುದಾದರೆ,  ನಮ್ಮ ಕನ್ನಡ ಸಂಸ್ಕೃತಿಗೆ, ಭಾಷೆಗೆ, ಸಾಹಿತ್ಯಕ್ಕೆ, ನೆಲ-ಜಲಕ್ಕೆ ಟಿಪ್ಪುವಿನ ಕೊಡುಗೆಯೇನು, ದಯವಿಟ್ಟು ವಿವರಿಸಿ?

- ಪ್ರತಾಪ್ ಸಿಂಹ
mepratap@gmail.com


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com