ಮನೆಯಿಂದಲೇ ವಿಂಗಡಿಸಿ ಕಳಿಸಿ, ನೀಗಲು 'ಕಸ'ವಿಸಿ

ಆಳುವವರಿಗೆ ದೂರದೃಷ್ಟಿ ಇಲ್ಲದಿದ್ದರೆ, ದೂರದೃಷ್ಟಿ ಇದ್ದರೂ ಇಚ್ಛಾಶಕ್ತಿ ಇಲ್ಲದಿದ್ದರೆ ಏನಾಗುತ್ತದೆ ...
ಮನೆಯಿಂದಲೇ ವಿಂಗಡಿಸಿ ಕಳಿಸಿ, ನೀಗಲು 'ಕಸ'ವಿಸಿ

ಆಳುವವರಿಗೆ ದೂರದೃಷ್ಟಿ ಇಲ್ಲದಿದ್ದರೆ, ದೂರದೃಷ್ಟಿ ಇದ್ದರೂ ಇಚ್ಛಾಶಕ್ತಿ ಇಲ್ಲದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ 'ಕಸಾತಳ'ದ ಮೇಲಿನ ಸ್ವರ್ಗವಾಗಿರುವ ಬೆಂಗಳೂರೇ ಸಾಕ್ಷಿ. ದಶಕಗಳ ಹಿಂದೆ ತುಸು ಎಚ್ಚರಿಕೆ ವಹಿಸಿದ್ದರೂ ಪರಿಸ್ಥಿತಿ ಇಷ್ಟು ಗಂಭೀರಕ್ಕೆ ತಿರುಗುತ್ತಲೇ ಇರಲಿಲ್ಲ. ಬಿಬಿಎಂಪಿಗೆ ಕಸ ನಿರ್ವಹಣೆಗೆಂದೇ ಐಎಎಸ್ ಅಧಿಕಾರಿಯೊಬ್ಬರನ್ನು ನೇಮಕ ಮಾಡಬೇಕಾದ ಸನ್ನಿವೇಶವೂ ಎದುರಾಗುತ್ತಿರಲಿಲ್ಲ. ಬೆಂಗಳೂರನ್ನು ಸಿಂಗಾಪುರ  ಮಾಡುವ ಕನಸು ಹೊತ್ತಿದ್ದ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ 1999ರಲ್ಲಿ ತಜ್ಞರನ್ನು ಒಳಗೊಂಡ ಬೆಂಗಳೂರು ಅಭಿವೃದ್ಧಿ ಕಾರ್ಯಪಡೆ (ಬಿಎಟಿಎಫ್) ರಚಿಸಿದ್ದರು. ನಂದನ್ ನಿಲೇಕಣಿ ಅದರ ಅಧ್ಯಕ್ಷರಾಗಿದ್ದರು. ಭವಿಷ್ಯದಲ್ಲಿ ಕಸ ಬಹುದೊಡ್ಡ ಸಮಸ್ಯೆಯಾಗಿ ಕಾಡಬಹುದು ಎನ್ನುವುದನ್ನು ಕಾರ್ಯಪಡೆ ಅಂದೇ ಗುರುತಿಸಿತ್ತು. ಅದಕ್ಕಾಗಿ ಪ್ರತಿ ಮನೆಯಿಂದ ನೇರವಾಗಿ ಕಸ ಸಂಗ್ರಹಿಸುವ ವ್ಯವಸ್ಥೆ ಮಾಡಬೇಕು ಎಂದು ಶಿಫಾರಸು ಮಾಡಿತ್ತು. ಅಲ್ಲಿಯವರೆಗೆ ರಸ್ತೆ ತುದಿಯಲ್ಲಿನ ಕಸದ ತೊಟ್ಟಿಯಲ್ಲಿ ಜನ ತಮ್ಮ ಮನೆಯ ತ್ಯಾಜ್ಯಗಳನ್ನು ಬಿಸಾಡಬೇಕಿತ್ತು. ಪಾಲಿಕೆ ಲಾರಿ ಬಂದು ತುಂಬಿಕೊಂಡು ಹೋಗುವವರೆಗೂ ತೊಟ್ಟಿ ಸುತ್ತಮುತ್ತ ಗಬ್ಬುನಾತ. ಕೃಷ್ಣ ಸರ್ಕಾರ ತೋರಿಸಿದ ಆಸಕ್ತಿ ಫಲವಾಗಿ ಮನೆಮನೆ ಕಸ ಸಂಗ್ರಹಿಸುವ ವ್ಯವಸ್ಥೆ ಜಾರಿಗೆ ಬಂದಿತು (ಮುಂದೆ ಎಲ್ಲ ನಗರ, ಪಟ್ಟಣಗಳಿಗೂ ಇದು ವಿಸ್ತರಣೆಯಾಯಿತು). ಆಗಿನ ಬೆಂಗಳೂರು ಮಹಾನಗರ ಪಾಲಿಕೆ ಇನ್ನೂ ಮುತುವರ್ಜಿ ವಹಿಸಿ ಹಸಿ ಕಸ, ಒಣ ಕಸಗಳನ್ನು ಪ್ರತ್ಯೇಕಿಸಿಯೇ ವಾಹನಕ್ಕೆ ನೀಡಬೇಕು ಎನ್ನುವ ನಿಯಮ ಜಾರಿಗೆ ತಂದಿತು. ಆ ಬಗ್ಗೆ ಜಾಗೃತಿ ಮೂಡಿಸಲು ಬಹುದೊಡ್ಡ ಅಭಿಯಾನವನ್ನೇ ನಡೆಸಿತು ಕೂಡ. ಆರಂಭದಲ್ಲಿ ಜನರೂ ಅತ್ಯುತ್ಸಾಹದಿಂದ ಸ್ಪಂದಿಸಿದರು; ಕಸ ಸ್ವೀಕರಿಸುವ ಪೌರಕಾರ್ಮಿಕರೂ ವಿಂಗಡಿಸಿ ನೀಡದಿದ್ದರೆ ಮುಲಾಜಿಲ್ಲದೆ ತಿರಸ್ಕರಿಸುತ್ತಿದ್ದರು. ಹೀಗಾಗಿ ಈ ವ್ಯವಸ್ಥೆ ಶುರುವಿನಲ್ಲಿ ಭಾರಿ ಯಶಸ್ಸನ್ನೇ ಕಂಡಿತು. ದುರಂತ ಎಂದರೆ ಈ ಸಕ್ಸಸ್ ಸುಸ್ಥಿರವಾಗಿರುವಂತೆ ನೋಡಿಕೊಳ್ಳುವ ಆಸಕ್ತಿಯನ್ನು ಬೆಂಗಳೂರಿಗರೂ ತೋರಿಸಲಿಲ್ಲ, ಪಾಲಿಕೆಯೂ ಎಚ್ಚರವಹಿಸಲಿಲ್ಲ. ಕೆಲವೇ ವರ್ಷಗಳಲ್ಲಿ ಮೂಲದಲ್ಲಿಯೇ ಬೇರ್ಪಡಿಸಿ ಕೊಡುವುದು ನಿಂತಿತು. ಕಸದ ಡಬ್ಬಿಗಳನ್ನು ನೀಡುವ ಪರಿಪಾಠ ಹೋಗಿ ಕ್ಯಾರಿಬ್ಯಾಗ್ಗಳಲ್ಲಿ ತುಂಬಿ ವಾಹನದೊಳಕ್ಕೆ 'ಎಸೆಯುವ' ಪರಿಪಾಠ ಬಂತು. ಭಾರಿ ಪ್ರಮಾಣದಲ್ಲಿ ಸಂಗ್ರಹವಾಗುವ ಕಸವನ್ನು ಬೇರ್ಪಡಿಸಿ ಸಂಗ್ರಹಿಸಲು ಕಷ್ಟವಾಗತೊಡಗಿತು. ಬಿಎಂಪಿ ಸಿಲಿಕಾನ್ ಸಿಟಿ ಅಭಿಧಾನವನ್ನೂ ಅಂಟಿಸಿಕೊಂಡು 'ಬೃಹತ್' ಆದ ಬಿಬಿಎಂಪಿ ಆಯಿತು. ಇಲ್ಲಿಗೆ ವಲಸೆ ಬರುವವರ ಜತೆಯಲ್ಲಿಯೇ ತ್ಯಾಜ್ಯ ಪ್ರಮಾಣವೂ ಹೆಚ್ಚಿತು. ಇ-ವೇಸ್ಟ್ನಂತಹ ತ್ಯಾಜ್ಯಗಳೂ ಸೇರಿಕೊಂಡವು. ನೀರಿನ ಹರಿವಿನಲ್ಲಿ, ಚರಂಡಿಗಳಲ್ಲಿ ಕಸ ಕಟ್ಟಿಕೊಂಡವು. ನದಿ ಮೂಲಗಳು ಬತ್ತತೊಡಗಿದವು. ಒಟ್ಟಾರೆ ಕಸ ಬಗೆಹರಿಸಲಾಗದ ತಲೆನೋವಾಗಿ ಪರಿಣಮಿಸಿತು.
ರಾಜಧಾನಿಯ ಒಂದು ಕೋಟಿ ಜನ ನಿತ್ಯ ಉತ್ಪಾದಿಸುವ ಕಸದ ಪ್ರಮಾಣ ಅಂದಾಜು 5,000 ಟನ್. ಅದರ ನಿರ್ವಹಣೆ ಎಷ್ಟು ಕಷ್ಟವಾಗಿದೆ ಎಂದರೆ 800 ಚದರ ಕಿ.ಮೀ ವಿಸ್ತಾರದ ಬೆಂಗಳೂರಿನಲ್ಲಿ ಸಂಗ್ರಹವಾದ ಕಸ ಸಂಸ್ಕರಿಸುವುದಿರಲಿ, ಅದನ್ನು ಒಂದೆಡೆ ಸುರಿಯಲಾದರೂ ಜಾಗ ಸಿಗುತ್ತಿಲ್ಲ. ನಮ್ಮೂರಲ್ಲಿ ಕಸ ಸುರಿದದ್ದು ಸಾಕು ಎಂದು ಮಂಡೂರಿನ ಜನ ತಿರುಗಿಬಿದ್ದಿದ್ದಾರೆ. ಬೆಂಗಳೂರು ಸುತ್ತಮುತ್ತಲಿನ ಹಳ್ಳಿ, ಪಟ್ಟಣಗಳು ಮುಂದೆ ತಮಗೆ ಎದುರಾಗಬಹುದಾದ ಅಪಾಯವನ್ನು ಈಗಲೇ ಗ್ರಹಿಸಿವೆ. ಈಗ ಮತ್ತೆ ತೊಟ್ಟಿಲಿನಿಂದ ತೊಟ್ಟಿವರೆಗೆ ಎಂಬ ಸಿದ್ಧಾಂತದಲ್ಲಿ 'ಶೂನ್ಯ ಕಸ'ದ ಪ್ರಸ್ತಾಪ ಆಗುತ್ತಿದೆ. ಸುಮಾರು 15 ವರ್ಷದ ಹಿಂದೆಯೇ ಜಾರಿಯಲ್ಲಿದ್ದ ಮೂಲದಲ್ಲಿಯೇ ಬೇರ್ಪಡಿಸಿ ಕೊಡುವ ವ್ಯವಸ್ಥೆ ಆಶಯವೂ ಇದೇ ಆಗಿತ್ತಲ್ಲವೆ?
ಶೂನ್ಯ ಕಸದ ಕಲ್ಪನೆ ಜಾಗತಿಕವಾಗಿ ಮೊಳಕೆಯೊಡೆದ ಕೆಲವೇ ವರ್ಷಗಳಲ್ಲಿ ಸರಿಯಾಗಿ ಜಾರಿಗೆ ತಂದಿದ್ದ ಹೆಮ್ಮೆ ನಮ್ಮ ಬೆಂಗಳೂರಿನದಾಗಿತ್ತು. ಕೇರಳದ ಕೋವಲಂ ಸಹ ಇಂಥದ್ದೊಂದು ನೀತಿ ಜಾರಿಯಲ್ಲಿ ಮುಂದಿದೆ. 1996ರಲ್ಲಿಯೇ ಇಂಥದ್ದೊಂದು ವ್ಯವಸ್ಥೆ ರೂಢಿಸಿಕೊಂಡಿದ್ದ ಕ್ಯಾನ್ಬೆರ್ರಾ, ಝೀರೊ ವೇಸ್ಟ್ ಸಿದ್ಧಾಂತ ಪಾಲಿಸಿದ ವಿಶ್ವದ ಮೊದಲ ನಗರ. ಐರೋಪ್ಯ ಒಕ್ಕೂಟ ಸೇರಿದಂತೆ ಹಲವು ರಾಷ್ಟ್ರಗಳು ಈಗ ಇದೇ ತತ್ವಪಾಲನೆಗೆ ಹೊರಟಿವೆ. ಗ್ರೀನ್ಪೀಸ್, ಜಿಎಐಎ (ದಹಿಸುವಿಕೆಯ ಪರ್ಯಾಯ ಕುರಿತ ಜಾಗತಿಕ ಒಕ್ಕೂಟ)  ಮುಂತಾದ ಸಂಸ್ಥೆಗಳೂ ಈಗ ಇದನ್ನೇ ಬಲವಾಗಿ ಪ್ರತಿಪಾದಿಸುತ್ತಿವೆ.

ಹಸಿ ಕಸ ಇರಲಿ, ಒಣ ಕಸವೇ ಇರಲಿ. ಘನತ್ಯಾಜ್ಯ ವಿಲೇವಾರಿಗೆ ಹಲವಾರು ಕ್ರಮಗಳಿವೆ. ಅತ್ಯಂತ ಸುಲಭದ ದಾರಿ ಎಂದರೆ ತಗ್ಗುಪ್ರದೇಶದಲ್ಲಿ ಅಥವಾ ಸಮತಟ್ಟು ಪ್ರದೇಶದಲ್ಲಿ ಸುರಿದುಬಿಡುವುದು. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ನಗರಗಳು ಅಳವಡಿಸಿಕೊಂಡಿರುವುದು ಇದೇ ವ್ಯವಸ್ಥೆ. ಈ ರೀತಿ ಸಂಗ್ರಹಿಸುವ ಕಸ ಮಿಥೇನ್ ಮತ್ತು ಇಂಗಾಲದ ಡೈ ಆಕ್ಸೈಡ್ ಅನ್ನು ಭಾರಿ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತದೆ. ತಗ್ಗು ಪ್ರದೇಶದಲ್ಲಿ, ಭೂಮಿಯ ಆಳದಲ್ಲಿ ತ್ಯಾಜ್ಯವನ್ನೆಲ್ಲ ಸುರಿದುಬಿಟ್ಟರೆ, ಕಾಲಾನಂತರದಲ್ಲಿ ಅದರ ಮೇಲೆಯೇ ಕಟ್ಟಡಗಳನ್ನು ನಿರ್ಮಿಸಿದರೆ, ಒಳಗಿನಿಂದ ಅನಿಲಗಳು ಸ್ಫೋಟಗೊಂಡು ಲವ್ ಕೆನಾಲ್ ಬಡಾವಣೆ ಇತಿಹಾಸ ನಮ್ಮಲ್ಲಿ ಪುನರಾವರ್ತನೆಯಾಗುತ್ತದೆ ಅಷ್ಟೆ.
ಕಸ ವಿಂಗಡಿಸಿ ಕೊಟ್ಟರೆ ಆಗುವ ಇನ್ನೊಂದು ಪ್ರಯೋಜನ ಎಂದರೆ ಸಾವಯವ ಗೊಬ್ಬರ ತಯಾರಿಸುವುದು. ಬ್ಯಾಕ್ಟೀರಿಯಾಗಳ ಮೂಲಕ ಬೆಚ್ಚನೆಯ, ತೇವಾಂಶದ, ಆಮ್ಲಜನಕ ಸಹಿತ ಮತ್ತು ರಹಿತ ವಾತಾವರಣದಲ್ಲಿ ಗೊಬ್ಬರ ತಯಾರಿಸುವ ವಿಧಾನಗಳಿವೆ. ಇದು ಸರಳ ಮತ್ತು ಕಡಿಮೆ ವೆಚ್ಚದ ವಿಧಾನ. ಮಣ್ಣಿನಲ್ಲಿನ ತೇವಾಂಶದ ಗುಣ ಹೆಚ್ಚಿಸುವಲ್ಲಿ, ಆ ಮೂಲಕ ಅಂತರ್ಜಲ ಹಿಡಿದಿಟ್ಟುಕೊಳ್ಳುವಲ್ಲಿ ಸಹಕಾರಿ. ಸಣ್ಣ ನಗರಗಳಿಗಂತೂ ಹೇಳಿ ಮಾಡಿಸಿದ್ದು. ಬೆಂಗಳೂರಿನಂಥ ಮಹಾನಗರಗಳಲ್ಲಿ ಅಲ್ಲಲ್ಲಿ ಇಂಥ ಗೊಬ್ಬರ ಉತ್ಪಾದನಾ ಕೇಂದ್ರಗಳನ್ನು ಆರಂಭಿಸಲು ವಿಫುಲ ಅವಕಾಶಗಳಿವೆ. ಸಾವಯವ ಗೊಬ್ಬರಗಳಿಗೆ ಭಾರಿ ಬೇಡಿಕೆ ಇರುವುದರಿಂದ ಸ್ಥಳೀಯ ಆಡಳಿತಗಳಿಗೆ ಆದಾಯವೂ ಆಗುತ್ತದೆ, ಪರಿಸರಸ್ನೇಹಿ ಕಸ ನಿರ್ವಹಣೆಯೂ ಆಗುತ್ತದೆ. ಇನ್ನು ಒಣಕಸವನ್ನು 980ರಿಂದ 2000 ಡಿಗ್ರಿ ತಾಪಮಾನದಲ್ಲಿ ನೇರವಾಗಿ ದಹಿಸಬಹುದಾದ, ವಿದ್ಯುತ್ ಉತ್ಪಾದಿಸಬಹುದಾದ, ಕೈಗಾರಿಕೆಗಳಿಗೆ ಅಗತ್ಯವಿರುವ ಅನಿಲಗಳನ್ನು ಉತ್ಪಾದಿಸಬಹುದಾದ ತಂತ್ರಜ್ಞಾನಗಳೂ ಲಭ್ಯವಿವೆ.

ಕಸದ ಸಮಸ್ಯೆ ತಗ್ಗಬೇಕು ಅಂತಾದರೆ ಮೂಲದಲ್ಲಿಯೇ ಬೇರ್ಪಡಿಸಿ ನೀಡುವುದು ಅತ್ಯುತ್ತಮ ವಿಧಾನ. ಮುಖ್ಯವಾಗಿ ಕಸವನ್ನು ಏಳು ವಿಭಾಗಗಳಾಗಿ ವಿಭಜಿಸಬಹುದು. ಸ್ಥಳೀಯ ಆಡಳಿತಗಳ ಕಸ (ಅಡುಗೆ ಮನೆ ಕಸ, ಕಾಗದ, ಮರದ ಚೂರುಗಳು, ಎಲೆಗಳು ಇತ್ಯಾದಿ), ಕೈಗಾರಿಕೆಗಳ ಕಸ (ಕಲ್ಲಿದ್ದಲು ಉರಿಯುವಿಕೆ ನಂತರ ಉಳಿಯುವ ಘನಪದಾರ್ಥ, ಕಾಗದ ಕಾರ್ಖಾನೆಗಳಲ್ಲಿನ ತಿರುಳು ಇತ್ಯಾದಿ), ಅಪಾಯಕಾರಿ ಕಸ (ಸಾಲ್ವೆಂಟ್ ಮತ್ತು ಬಣ್ಣ ಉತ್ಪಾದನಾ ಅವಶೇಷಗಳು, ಪೆಟ್ರೋಲಿಯಂ ರಿಫೈನರಿಗಳ ತ್ಯಾಜ್ಯ), ಜೈವಿಕ ವೈದ್ಯಕೀಯ ಕಸ(ಸಿರಿಂಜ್, ಶರೀರದಲ್ಲಿನ ದ್ರವಗಳು, ಪ್ರಯೋಗಶಾಲೆಗಳ ತ್ಯಾಜ್ಯ...), ಕಟ್ಟಡ ನಿರ್ಮಾಣ, ಕಟ್ಟಡ ಅವಶೇಷಗಳು (ಕಾಂಕ್ರೀಟ್, ಜಲ್ಲಿ, ಖನಿಜ ಮತ್ತು ಕಲ್ಲು ಇತ್ಯಾದಿ), ಕೃಷಿ ಕಸ (ಪ್ರಾಣಿಗಳ ಗೊಬ್ಬರ, ಬೆಳೆಗಳ ಉಳಿಕೆ ಇತ್ಯಾದಿ), ಇ-ಕಸ (ಬ್ಯಾಟರಿ, ಕಂಪ್ಯೂಟರ್, ಮೊಬೈಲ್, ಟೆಲಿಫೋನ್ ಇತ್ಯಾದಿ...). ಯಾವುದೇ ನಗರದ ಘನ ತ್ಯಾಜ್ಯ ಸಾಮಾನ್ಯವಾಗಿ ಆ ಪ್ರದೇಶದ ಆಹಾರ ಪದ್ಧತಿ, ಜನರ ಸಾಂಸ್ಕೃತಿಕ ಪರಂಪರೆ ಮತ್ತು ಜೀವನವಿಧಾನ, ಹವಾಗುಣ ಇತ್ಯಾದಿಯನ್ನು ಆಧರಿಸಿರುತ್ತದೆ. ದೇಶದಲ್ಲಿ ಪ್ರತಿನಿತ್ಯ 115 ಲಕ್ಷ ಟನ್ ಸ್ಥಳೀಯ ಆಡಳಿತಗಳ ಕಸ ಉತ್ಪಾದನೆಯಾಗುತ್ತಿದೆ ಮತ್ತು ಇದರ ವೃದ್ಧಿದರ ಶೇ 5ರಷ್ಟಿದೆ ಎನ್ನುವುದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿ.
1986ರ ಪರಿಸರ (ರಕ್ಷಣೆ) ಕಾಯಿದೆಯ ಪ್ರಕಾರ ಘನ ತ್ಯಾಜ್ಯ (ನಿರ್ವಹಣೆ ಮತ್ತು ಉಸ್ತುವಾರಿ) ನಿಯಮ 2000ದ ಪ್ರಕಾರ ಕಸ ನಿರ್ವಹಣೆಯ ಪೂರ್ಣ ಜವಾಬ್ದಾರಿ ಪುರಪಾಲಕ ಸಂಸ್ಥೆಗಳದ್ದೇ ಆಗಿರುತ್ತದೆ. ಪ್ರತಿ ಮನೆಯ ಕಸ ಸಂಗ್ರಹಣೆಗೆ ವ್ಯವಸ್ಥೆ ಮಾಡುವುದು, ಸಾರ್ವಜನಿಕರಿಗೆ ಮಾಹಿತಿ ತಲುಪಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಸೂಕ್ತ ಪ್ರಮಾಣದಲ್ಲಿ ಸಮುದಾಯ ಕಸ ಸಂಗ್ರಹ ವ್ಯವಸ್ಥೆ ಮಾಡುವುದು, ಕಸ ವಿಂಗಡಣೆಗೆ ಪ್ರೋತ್ಸಾಹ ನೀಡಲು ವರ್ಣ ಸಂಕೇತಗಳ ಕಸದ ತೊಟ್ಟಿಗಳನ್ನು ಪೂರೈಸುವುದು, ಹೊದಿಕೆ ಹೊದಿಸಿದ ವಾಹನದಲ್ಲಿ ಕಸ ಸಾಗಣೆ, ಕಾಂಪೋಸ್ಟ್, ಸೂಕ್ಷ್ಮಜೀವಿಗಳಿಂದ ಜೀರ್ಣಿಸಿಕೊಳ್ಳುವ ಮತ್ತು ಉಂಡೆಗಳ ಮಾದರಿಯ ಸಂಯೋಜನೆಯ ನೆರವಿನಿಂದ ಕಸದ ಸಮರ್ಪಕ ಸಂಸ್ಕರಣ ವ್ಯವಸ್ಥೆ,  ಸದ್ಯ ಕಸ ಸುರಿಯಲು ಬಳಸುತ್ತಿರುವ ಸ್ಥಳಗಳ ಉನ್ನತೀಕರಣ ಮತ್ತು ಜಡ ತ್ಯಾಜ್ಯಗಳನ್ನು ಚೊಕ್ಕಟವಾದ ಡಂಪ್ಯಾರ್ಡ್ಗಳಲ್ಲಿ ಸುರಿಯುವ ವ್ಯವಸ್ಥೆ ಮಾಡುವುದು ಇವೆಲ್ಲವೂ ಕಾಯ್ದೆ ವ್ಯಾಪ್ತಿಯಲ್ಲಿ ಬರುತ್ತವೆ.
ಕಸ ನಿರ್ವಹಣೆಗೆ ಕೇಂದ್ರ ಸರ್ಕಾರ ಕಾಯಿದೆ ರೂಪಿಸಿದೆ ನಿಜ. ಹಾಗಂತ ತ್ಯಾಜ್ಯ ನಿರ್ವಹಣೆಯ ಹೊಣೆಯನ್ನು ಸ್ಥಳೀಯ ಆಡಳಿತಗಳಿಗೆ ವಹಿಸಿ ಸುಮ್ಮನಾಗುವುದು ಸರ್ವಥಾ ಸಲ್ಲದು. ಬಿಬಿಎಂಪಿಯೇ ಆಗಿರಲಿ, ಮತ್ಯಾವುದೇ ಸಂಸ್ಥೆ ಇರಲಿ. ಸಾರ್ವಜನಿಕರೂ ಕೈ ಜೋಡಿಸಿದರೆ ನಿರ್ವಹಣೆ ಸುಲಭವಾಗುತ್ತದೆ. ಬೆಂಗಳೂರಿನಂಥ ಕಸಾತಳಗಳು, ಮಂಡೂರಿನಂಥ ಕಸಪರ್ವತಗಳು ನಿರ್ಮಾಣವಾಗುವುದು ನಿಲ್ಲುತ್ತದೆ.


- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com